ಗುಣಗಾನ
ಡಿ.ಕೆ.ಶಿವಕುಮಾರ್
ದೇಶ ಕಂಡ ಧೀಮಂತ ನಾಯಕಿ ಇಂದಿರಾ ಗಾಂಧಿ ಅವರು ಕಾಲವಾಗಿ ದಶಕಗಳೇ ಕಳೆದರೂ ಈಗಲೂ ಅವರ ಹೆಸರು ಪ್ರಸ್ತಾಪ ಆಗುತ್ತಲೇ
ಇರುತ್ತದೆ. ಅದೇ ಅವರ ಸಾಧನೆಗೆ, ವ್ಯಕ್ತಿತ್ವಕ್ಕೆ ಸಾಕ್ಷಿ. ಜನಪರ ರಾಜಕಾರಣದಿಂದ ಹಾಗೂ ರಾಷ್ಟ್ರ ಕೇಂದ್ರಿತ ನೀತಿಗಳಿಂದ ದೇಶದ
ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯಾಗಿ ಭಾರತದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿರುವ ಇಂದಿರಾ ಗಾಂಧಿಯವರ ಜಯಂತಿ ಇಂದು.
‘ಇಂದಿರಾ ಪ್ರಿಯದರ್ಶಿನಿ ಗಾಂಧಿ’ ಭಾರತ ಕಂಡ ದಿಟ್ಟನಾಯಕಿ. ಹೆಣ್ಣೊಬ್ಬಳು ದೇಶದ ಉನ್ನತ ಸ್ಥಾನಕ್ಕೇರಿದ್ದು ನಮ್ಮ ಪ್ರಜಾಪ್ರಭುತ್ವದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಇಂದಿರಾಗೆ ರಾಜಕೀಯ ಹಿನ್ನೆಲೆ ಮತ್ತು ಪ್ರಭಾವಗಳೆರಡೂ ಇದ್ದವು. ತಂದೆ ಜವಾಹರಲಾಲ್ ನೆಹರು ಭಾರತದ ಮೊದಲ ಪ್ರಧಾನಿ ಎಂಬುದರ ಹೊರತಾಗಿಯೂ, ಅವರು ತಮ್ಮದೇ ಆದ ರಾಜಕೀಯ ವರ್ಚಸ್ಸು ಬೆಳೆಸಿಕೊಂಡರು. ಜನಕಲ್ಯಾಣ, ದಿಟ್ಟ
ನೀತಿ-ನಿರ್ಧಾರಗಳಿಂದಾಗಿ ‘ಇಂದಿರಾ ಅಂದರೆ ಇಂಡಿಯಾ’ ಅನ್ನುವಷ್ಟು ಜನಪ್ರಿಯರಾದರು. ಇಂದಿಗೂ ದೇಶವು ಅವರನ್ನು ‘ಭಾರತದ ಉಕ್ಕಿನ ಮಹಿಳೆ’ ಎಂದೇ ಗುರುತಿಸುತ್ತದೆ.
1917ರ ನವೆಂಬರ್ 19ರಂದು ಅಲಹಾಬಾದ್‌ನಲ್ಲಿ ಜನಿಸಿದ ಇಂದಿರಾ, ಜವಾಹರಲಾಲ್ ನೆಹರು ಮತ್ತು ಕಮಲಾ ಅವರ ಏಕೈಕ ಪುತ್ರಿ. ಸ್ವಾತಂತ್ರ್ಯ ಹೋರಾಟದ ವೇಳೆ ನೆಹರು ಅನೇಕ ಬಾರಿ ಜೈಲುವಾಸ ಅನುಭವಿಸಬೇಕಾಯಿತು. ಇಂಥ ಸಂದರ್ಭದಲ್ಲಿ, ತಂದೆ ಇಲ್ಲದೆ ಇಂದಿರಾ ಒಂಟಿತನ ಅನುಭವಿಸಬೇಕಾಯಿತು. ಕೆಲವು ವರ್ಷಗಳ ಕಾಲ ಸ್ವಿಸ್ ಬೋರ್ಡಿಂಗ್ ಸ್ಕೂಲ್‌ನಲ್ಲಿದ್ದ ಇಂದಿರಾ ಆಕ್ಸ್ ಫರ್ಡ್‌ನ ಸೊಮರ್ವಿ ಕಾಲೇಜ್‌ನಲ್ಲಿ ಇತಿಹಾಸ ಅಧ್ಯಯನ ಮಾಡಿದರು.
೧೯೪೭ರಲ್ಲಿ ಸ್ವಾತಂತ್ರ್ಯ ಬಂದ ಕೂಡಲೇ ನೆಹರು ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ದೇಶ ಕಟ್ಟುವ ಮಹತ್ತರ ಜವಾಬ್ದಾರಿ ವಹಿಸಿಕೊಂಡರು. ಈ ವೇಳೆ ಇಂದಿರಾ ಅವರು ತಂದೆಗೆ ಒತ್ತಾಸೆಯಾಗಿ ಕೆಲಸ ಮಾಡಿದರು. ಅವರ ಗರಡಿಯಲ್ಲಿ ಪಕ್ಷ ಸಂಘಟನೆಯ ಪಟ್ಟುಗಳನ್ನು, ಆಡಳಿತದ ಕಲೆಯನ್ನು ಸಣ್ಣ ವಯಸ್ಸಿನ ಕಲಿತರು. 1955ರಲ್ಲಿ ಇಂದಿರಾ ಕೂಡ ಕಾಂಗ್ರೆಸ್‌ನ 21 ಸದಸ್ಯರಿರುವ ಪ್ರಭಾವಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. 4 ವರ್ಷದ ಬಳಿಕ ಕಾಂಗ್ರೆಸ್‌ನ ಅಧ್ಯಕ್ಷರಾದರು. 1964ರಲ್ಲಿ ನೆಹರು ನಿಧನದ ಬಳಿಕ
ಲಾಲ್ ಬಹಾದುರ್ ಶಾಸ್ತ್ರೀ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅವರ ಸಂಪುಟದಲ್ಲಿ ಇಂದಿರಾ, ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವೆಯಾಗಿ ಕಾರ್ಯನಿರ್ವಹಿಸಿದರು. 2 ವರ್ಷಗಳ ಬಳಿಕ, ಶಾಸ್ತ್ರೀ ಅವರ ಅಕಾಲಿಕ ನಿಧನದಿಂದಾಗಿ ತೆರವಾದ ಪ್ರಧಾನಿ ಹುzಗೆ ಕಾಂಗ್ರೆಸ್ ನಾಯಕರು ಇಂದಿರಾರನ್ನೇ ಆಯ್ಕೆ ಮಾಡಿದರು. ಪ್ರಧಾನಿಯಾಗಿ ಕೆಲವೇ ವರ್ಷಗಳಲ್ಲಿ ಇಂದಿರಾ ಅವರು ಭಾರಿ ಜನಪ್ರಿಯತೆಯನ್ನು ಪಡೆದುಬಿಟ್ಟರು.
ದೇಶ ರಕ್ಷಣೆಯಲ್ಲಿ ದುರ್ಗೆ: ಇಂದಿರಾ ಅವರು 1971ರಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳ ನಡುವಿನ ಸಂಘರ್ಷಕ್ಕೆ ಅಂತ್ಯಹಾಡುವ ಮೂಲಕ ವಿಪಕ್ಷಗಳಿಂದಲೂ ಭೇಷ್ ಎನಿಸಿಕೊಂಡರು. ಇಂದಿರಾರ ನೆರವಿನಿಂದಾಗಿ ಪೂರ್ವ ಪಾಕಿಸ್ತಾನ ಅಂದರೆ ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಪಾಕಿಸ್ತಾನದ ಮೇಲೆ ಯುದ್ಧ ಮಾಡಿ 1 ಲಕ್ಷ ಪಾಕ್ ಸೈನಿಕರನ್ನು ಸೆರೆಹಿಡಿದು, ಬಾಂಗ್ಲಾದೇಶವನ್ನು ಸ್ವತಂತ್ರಗೊ ಳಿಸಿದರು. ಆ ಸಂದರ್ಭದಲ್ಲಿ ಬಿಜೆಪಿಯ ಅಗ್ರಗಣ್ಯ ನಾಯಕ ಅಟಲ್ ಬಿಹಾರಿ ವಾಜಪೇಯಿಯವರು ಇಂದಿರಾರನ್ನು ‘ದುರ್ಗೆ’ ಎಂದು ಹೊಗಳಿದ್ದರು. ಆದರೆ ನಮ್ಮ ಯೋಧರ ಈ ಪರಾಕ್ರಮವನ್ನು ಇಂದಿರಾ ಅವರು ಎಂದಿಗೂ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಿಲ್ಲ.
ಬ್ಯಾಂಕುಗಳ ರಾಷ್ಟ್ರೀಕರಣ: ಇಂದಿರಾ ಅವರ ಒಟ್ಟು ಆಡಳಿತಾವಧಿಯಲ್ಲಿ ಎದ್ದು ಕಾಣುವ ಪ್ರಮುಖ ಆರ್ಥಿಕ ಸುಧಾರಣೆ ಎಂದರೆ ಬ್ಯಾಂಕುಗಳ
ರಾಷ್ಟ್ರೀಕರಣ. 1969ರಲ್ಲಿ ಅವರು ಒಟ್ಟು 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ, ದೇಶದ ಆರ್ಥಿಕಾಭಿವೃದ್ಧಿಗೆ ಮುನ್ನುಡಿ ಬರೆದರು. ಇದರ ಒಟ್ಟು ಪ್ರತಿಫಲ 80ರ ದಶಕದಲ್ಲಿ ನಿಚ್ಚಳವಾಗಿ ಕಾಣಲಾರಂಭಿಸಿದರೆ ಈಗ ‘ಡಿಬಿಟಿ’ ಮೂಲಕ ಅದರ ಪೂರ್ಣ ಪ್ರಮಾಣದ ಪ್ರತಿಫಲ ಕಾಣುತ್ತಿದೆ. ಅಂದು ಇಂದಿರಾ ಅವರು ಕೈಗೊಂಡ ಈ ನಿರ್ಧಾರಕ್ಕೆ ಕಾಂಗ್ರೆಸ್ ಒಳಗೂ ಸೇರಿದಂತೆ ಭಾರಿ ವಿರೋಧವಿತ್ತು. ಆದರೆ, ಇಂದಿರಾ ಗಟ್ಟಿಗಿತ್ತಿ. ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಕಲೆ ಅವರಿಗೆ ಕರಗತವಾಗಿತ್ತು.
ಬ್ಯಾಂಕುಗಳ ರಾಷ್ಟ್ರೀಕರಣದಿಂದಾಗಿ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಜತೆಗೆ ಆರ್ಥಿಕ ಪ್ರಗತಿಗೂ ಅದು ದಾರಿಯಾಯಿತು. 1969ರಲ್ಲಿ ಬ್ಯಾಂಕುಗಳ ಶಾಖೆಗಳು 8000 ಇದ್ದದ್ದು 1980ರ ಹೊತ್ತಿಗೆ 32000 ಶಾಖೆಗಳಿಗೆ ಹೆಚ್ಚಾದವು. 1990ರ ಹೊತ್ತಿಗೆ ಇವುಗಳ ಪ್ರಮಾಣ 60000ಗಿಂತಲೂ ಹೆಚ್ಚಾದವು. ಉಳಿತಾಯ ಪ್ರಮಾಣ ಕೂಡ ಹೆಚ್ಚಾಯಿತು. ಅಂದರೆ, ಮಾರುಕಟ್ಟೆಯಲ್ಲಿ ಹಣದ ವಹಿವಾಟು ಕೂಡ ಹೆಚ್ಚಾಯಿತು. ಶಾಖೆಗಳ ಹೆಚ್ಚಳ ಮತ್ತು ಮಾರುಕಟ್ಟೆಯಲ್ಲಿ ಹಣದ ವಹಿವಾಟಿನಿಂದಾಗಿ ಠೇವಣಿ ದರ 1969ರಲ್ಲಿ ಶೇ.12 ರಷ್ಟಿದ್ದದ್ದು 1980ರ ಹೊತ್ತಿಗೆ ಶೇ.20ಕ್ಕೆ ಜಿಗಿಯಿತು. ಇದರ ಪರಿಣಾಮ ಬೆಳವಣಿಗೆ ದರ ಶೇ.5.5ರಿಂದ 6ರವರೆಗೆ ಹೆಚ್ಚಲು ಸಾಧ್ಯವಾಯಿತು. ಅಂದರೆ, ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ದೇಶದ ಆರ್ಥಿಕಾಭಿವೃದ್ಧಿ ಮಧ್ಯೆ ಕೊಂಡಿಯೊಂದು ನಿಖರವಾಗಿ ಕೆಲಸ ಮಾಡಿತ್ತು ಎಂಬುದು ಇದರಿಂದ ವೇದ್ಯವಾಗುತ್ತದೆ.
ರಾಷ್ಟ್ರೀಕರಣದ ಮುಂದಿನ 2 ದಶಕಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಅಗಾಧವಾಗಿ ಬೆಳವಣಿಗೆ ಕಂಡಿತು. ಸಾರ್ವಜನಿಕ ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ ಅನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದವು. ಈ ವಿಷಯದಲ್ಲಿ ಅವುಗಳ ಕೆಲಸ ಶ್ಲಾಘನೀಯ. ಮುಂದೆ 90ರ ದಶಕದಲ್ಲಿ ಬ್ಯಾಂಕುಗಳು ಲಾಭವನ್ನು ಕೂಡ ಕಾಣಲಾರಂಭಿಸಿದವು. ಈ ಎಲ್ಲದರ ಪರಿಣಾಮ ನಾವಿಂದು ಜಗತ್ತಿನ ಅತಿ ಹೆಚ್ಚು ಲಾಭದಾಯಕ ಬ್ಯಾಂಕಿಂಗ್ ಕ್ಷೇತ್ರವನ್ನು
ಹೊಂದಲು ಸಾಧ್ಯವಾಗಿದೆ. ಇದಕ್ಕೆಲ್ಲ ಕಾರಣ ರಾಷ್ಟ್ರೀಕರಣದ ವೇಳೆ ಬ್ಯಾಂಕುಗಳು ವಿಸ್ತರಿಸಿಕೊಂಡ ಜಾಲ ಹಾಗೂ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬಂದ ರಾಷ್ಟ್ರೀಯ ನೀತಿಗಳು.
ಹಣದುಬ್ಬರ ನಿಯಂತ್ರಣ: ಲಾಲ್ ಬಹಾದುರ್ ಶಾಸ್ತ್ರೀ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಯುದ್ಧ ಮುಂತಾದ ಕಾರಣಗಳಿಂದ ದೇಶದ
ಹಣದುಬ್ಬರ ಶೇ.7.7ರಷ್ಟಿತ್ತು. ಮುಂದೆ ಇಂದಿರಾ ಪ್ರಧಾನಿಯಾದ ಬಳಿಕ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಂಡರು. ಇದರಿಂದಾಗಿ 1977ರ ಹೊತ್ತಿಗೆ ಹಣದುಬ್ಬರ ಪ್ರಮಾಣ ಶೇ.5.3ಕ್ಕೆ ನೆಲೆ ನಿಂತಿತ್ತು. ಅಂದಿನ ಹಣದುಬ್ಬರಕ್ಕೆ ಕಾರಣವಾಗಿದ್ದು ತೈಲ ಬೆಲೆಗಳ ಏರಿಕೆ. ಹಣದುಬ್ಬರ ಸಮಸ್ಯೆ ಅತ್ಯಂತ ಮಾರಕ ಎಂದು ಗುರುತಿಸಿದ ಇಂದಿರಾ, ಅದನ್ನು ಹತ್ತಿಕ್ಕಲು ಅನೇಕ ಕ್ರಮಗಳನ್ನು ಕೈಗೊಂಡರು. ತುರ್ತು ಪರಿಸ್ಥಿತಿಯಲ್ಲಂತೂ ಹಣದುಬ್ಬರ ಋಣಾತ್ಮಕ ಗತಿಯಲ್ಲಿತ್ತು!
ಮುಂದೆ, 1980ರಲ್ಲಿ ಹಣದುಬ್ಬರವಂತೂ ಆಕಾಶಕ್ಕೆ ತಲುಪಿತ್ತು. ಮತ್ತೆ ಇಂದಿರಾ ಅಧಿಕಾರಕ್ಕೆ ಬರುತ್ತಿದ್ದಂತೆ ಹಣದುಬ್ಬರ ಶೇ.6.5ಕ್ಕೆ
ಇಳಿಯಿತು. ಇದು ಅವರ ದಕ್ಷ ಆಡಳಿತಕ್ಕೆ ಸಾಕ್ಷಿ.
ಅಣ್ವಸ್ತ್ರ ಪರೀಕ್ಷೆ: ಅಣು ಯೋಜನೆಯಲ್ಲಿ ಭಾರತ ಸಶಕ್ತವಾಗಬೇಕು ಎಂಬ ನೆಹರು ಅವರ ಆಲೋಚನೆಯನ್ನು ನಿಜಾರ್ಥದಲ್ಲಿ ಸಾಕಾರಗೊಳಿಸಿದ್ದು ಇಂದಿರಾ. ಚೀನಾ ಆಗ ಯಶಸ್ವಿ ಅಣ್ವಸ್ತ್ರ ಪ್ರಯೋಗ ನಡೆಸಿ ಅಟ್ಟಹಾಸ ಬೀರಿತ್ತು. ಅದಕ್ಕೆ ಪ್ರತಿಯಾಗಿ ಇಂದಿರಾ ಅವರು 197ರಲ್ಲಿ ಅಣ್ವಸ್ತ್ರ ಯೋಜನೆಗೆ ಹೆಚ್ಚಿನ ಆಸ್ಥೆ ವಹಿಸಿದರು. ಪರಿಣಾಮವಾಗಿ 1974ರ ಮೇ 18ರಂದು ಭಾರತ ತನ್ನ ಮೊದಲ ಅಣ್ವಸ್ತ್ರ ಪರೀಕ್ಷೆಯನ್ನು ಪೊಖ್ರಾನ್‌ನಲ್ಲಿ ಯಶಸ್ವಿಯಾಗಿ ನಡೆಸಿತು. ಇದಕ್ಕೆ ಇಂದಿರಾರ ಇಚ್ಛಾಶಕ್ತಿ ಮುಖ್ಯ ಕಾರಣ ಎಂದರೆ ತಪ್ಪಲ್ಲ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ 5 ರಾಷ್ಟ್ರಗಳನ್ನು ಹೊರತುಪಡಿಸಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.
ಹಸಿರು ಕ್ರಾಂತಿ: ಇಂದಿರಾ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ದೇಶದ ಆರ್ಥಿಕತೆ ದುರ್ಬಲವಾಗಿತ್ತು. 1965 ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧ ದೇಶವನ್ನು ಮತ್ತಷ್ಟು ಹೈರಾಣಾಗಿಸಿತ್ತು. ಎಡೆ ಬರಗಾಲದ ಛಾಯೆಯಿತ್ತು. ಸ್ವಾತಂತ್ರ್ಯದ ಬಳಿಕ ಭಾರತದ ಆರ್ಥಿಕತೆ ಅತ್ಯಂತ ಕೆಳಮಟ್ಟಕ್ಕೆ ಇಳಿದಿತ್ತು. ಈ ಹಂತದಲ್ಲಿ ಆರ್ಥಿಕತೆಯನ್ನು ಉದಾರೀಕರಣದ ವ್ಯಾಪ್ತಿಗೆ ತರಲು ನಿರ್ಧರಿಸಲಾಯಿತು. ಇದೇ ವೇಳೆ, ದೇಶದಲ್ಲಿ ಆಹಾರ ಕೊರತೆ ಹೆಚ್ಚಾಗಿತ್ತು. ಹೊರದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿಯಿತ್ತು. ಈ
ಸಮಸ್ಯೆಯನ್ನು ನೀಗಿಸಲು ದೇಸಿ ಕೃಷಿ ಉತ್ಪಾದನೆ ಹೆಚ್ಚಿಸಲು ಇಂದಿರಾ ಅವರು ಮುಂದಾದರು, ಯಶಸ್ವಿಯೂ ಆದರು. 1970ರ ದಶಕದಲ್ಲಿ ಭಾರತ ಹಸಿರುಕ್ರಾಂತಿಗೆ ಸಾಕ್ಷಿಯಾಗಿ, ನಿಧಾನವಾಗಿ ಆಹಾರ ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಿತು. ದೇಶಕ್ಕೆ ಬೇಕಾಗುವಷ್ಟು ಆಹಾರ ಧಾನ್ಯವನ್ನು ಬೆಳೆಯುವುದಕ್ಕೆ ಹಸಿರುಕ್ರಾಂತಿ ಅನುವುಮಾಡಿಕೊಟ್ಟಿತು. ಇವತ್ತು ಭಾರತ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಽಸಿದ್ದರೆ ಅದಕ್ಕೆ ಇಂದಿರಾರ ದೂರದೃಷ್ಟಿಯೇ ಕಾರಣ.
ವನ್ಯಸಂಪತ್ತು ರಕ್ಷಣೆಗೆ ಭದ್ರಬುನಾದಿ: ವನ್ಯಜೀವಿ ಸಂರಕ್ಷಣೆ ಹೆಸರಲ್ಲಿ ಕಾಡುಪ್ರಾಣಿಗಳನ್ನಅವೈಜ್ಞಾನಿಕವಾಗಿ ಸಲಹಿ ಫೋಟೋಶೂಟ್
ಮಾಡುವ ಟ್ರೆಂಡ್ ಹೆಚ್ಚಿದೆ. ಆದರೆ ಇಂದಿರಾ ಅವರು 60-70ರ ದಶಕದ ಇಂಟರ್‌ನ್ಯಾಷನಲ್ ಕನ್ಸರ್ವೇಶನ್ ಯೂನಿಯನ್ ಆಯೋಜನೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ರಚನೆಗೆ ಕ್ರಮ, ಪ್ರಾಜೆಕ್ಟ್ ಟೈಗರ್ ಜಾರಿ, ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿ ಮೊದಲಾದ ಕ್ರಮಗಳನ್ನು ವಹಿಸಿದ್ದರು. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಸಂರಕ್ಷಣೆ ಸೇರಿದಂತೆ ವನ್ಯಜೀವಿ ಸಂರಕ್ಷಣೆ ಬಗ್ಗೆ ಹೆಚ್ಚು ಅರಿವು ಮೂಡುತ್ತಿದೆ. ಆದರೆ ಇಂದಿರಾರು ಬಹಳ ಹಿಂದೆಯೇ ಈ ಚಿಂತನೆಯನ್ನು ಹರಿಬಿಟ್ಟಿದ್ದರು.
ಬಡತನ ನಿರ್ಮೂಲನೆ: ಇಂದಿರಾ ಅವರು ‘ಬಡತನ ನಿರ್ಮೂಲನೆ’ ಕಾರ್ಯಕ್ರಮದ ಮೂಲಕ ಜನರನ್ನು ಆರ್ಥಿಕವಾಗಿ ಮೇಲಕ್ಕೆತ್ತುವ ಕೆಲಸ
ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಕಾಂಗ್ರೆಸ್ ಸರಕಾರವು, ಹಿಂದಿನ ಅವಧಿಯಲ್ಲಿ ‘ಇಂದಿರಾ ಕ್ಯಾಂಟೀನ್’ ಯೋಜನೆ ಜಾರಿ ಮಾಡಿ ಅದು ಯಶಸ್ವಿಯಾಗಿ ನಡೆಯುತ್ತಿದೆ. ಈ ಅವಽಯಲ್ಲಿ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿಯಂಥ ಗ್ಯಾರಂಟಿ ಕಾರ್ಯಕ್ರಮ ಗಳು ಜನಪ್ರಿಯತೆಯಲ್ಲಿ ದೇಶದ ಮುಂಚೂಣಿಯಲ್ಲಿವೆ. ಇಂಥ ನವಚಿಂತನೆಯ ಕಾರ್ಯಕ್ರಮಗಳಿಗೆ ಇಂದಿರಾ ಅವರ ಬಡತನ
ನಿರ್ಮೂಲನೆಯ ಕಾರ್ಯಕ್ರಮವೇ ಪ್ರೇರಣೆಯಾಗಿದೆ.
ಕಠಿಣ-ನೇರ-ನಿಷ್ಠುರ: ದೇಶದ ಸಮಗ್ರತೆಗೆ ಧಕ್ಕೆ ಬಂದಾಗ ಇಂದಿರಾ ಅಮೃತಸರದ ಸ್ವರ್ಣಮಂದಿರಕ್ಕೆ ಅನಿವಾರ್ಯವಾಗಿ ಸೇನೆ ನುಗ್ಗಿಸಿ
ಭಯೋತ್ಪಾದಕರನ್ನು ಸದೆಬಡಿದರು. ಬಾಹ್ಯಶಕ್ತಿಗಳಿಂದ ತೊಂದರೆಯಾದಾಗ ತೀವ್ರವಾದಿ ನಿಲುವು ತಳೆಯುವಲ್ಲಿ ಇಂದಿರಾರನ್ನು ಸರಿಗಟ್ಟುವ ನಾಯಕರು ದೇಶಕ್ಕೆ ಈವರೆಗೂ ದೊರೆತಿಲ್ಲ. ಅಂಥ ಉಕ್ಕಿನ ಮನಸ್ಥಿತಿಯಿಂದಲೇ ಅವರು ‘ಸರ್ವಾಧಿಕಾರಿ’ ಎಂಬ ಸುಳ್ಳು ಆರೋಪ ಹೊರ ಬೇಕಾಗಿ ಬಂದಿದ್ದು ದುರದೃಷ್ಟ! ಅಷ್ಟೆಲ್ಲ ದಿಟ್ಟತನ ತೋರಿದ್ದ ಇಂದಿರಾ ತಮ್ಮ ಪ್ರಾಣದ ಬಗ್ಗೆ ಅಸಡ್ಡೆ ತೋರಿದ್ದು ದುರಂತ. ಪ್ರಾಣಾಪಾಯ ಇರುವುದರಿಂದ ಅಂಗರಕ್ಷಕರನ್ನು ಬದಲಿಸಬೇಕು ಎನ್ನುವ ಸಲಹೆಯನ್ನು ಅವರಿಗೆ ನೀಡಿದಾಗ, ಅಂಥ ಹೇಡಿಕೆಲಸ ಮಾಡಲಾರೆ ಎಂದು ತ್ತರಿಸಿದ್ದರಂತೆ! ಭುವನೇಶ್ವರದ ಕಾರ್ಯಕ್ರಮವೊಂದರಲ್ಲಿ ಇಂದಿರಾರು ಮಾಡಿದ ಕೊನೆಯ ಭಾಷಣದ ಒಂದು ಸಾಲು ಹೀಗಿದೆ: “ನಾನು ಇಂದು ಇಲ್ಲಿದ್ದೇನೆ, ನಾಳೆ ಇರದೇ ಹೋಗಬಹುದು. ಆದರೆ ರಾಷ್ಟ್ರದ ಹಿತಾಸಕ್ತಿಯನ್ನು ಕಾಯುವ ಜವಾಬ್ದಾರಿ ಪ್ರತಿ ಭಾರತೀಯರ ಹೆಗಲ ಮೇಲಿದೆ”.
ದೇಶದ ಘನತೆ ಹಾಗೂ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದು ಬದುಕಿದ ಉಕ್ಕಿನ ಮಹಿಳೆ ಇಂದಿರಾ ಅವರ ಜನ್ಮದಿನದ ಸಂದರ್ಭದಲ್ಲಿ ನಾವೆಲ್ಲರೂ ಈ ಮಾತನ್ನು ಸ್ಮರಿಸಿಕೊಳ್ಳಬೇಕು. ಅವರ ದಾರಿಯಲ್ಲಿ ಸಾಗಿ ಆಡಳಿತ ನಡೆಸುವುದೇ ಅವರ ಜನ್ಮದಿನಕ್ಕೆ ನಾವು ಕೊಡಬಹುದಾದ ಉಡುಗೊರೆ.
ಲೇಖಕರು ರಾಜ್ಯದ ಉಪಮುಖ್ಯಮಂತ್ರಿಗಳು)
ಇದನ್ನೂ ಓದಿ: @DKShivakumar