Thursday, 12th December 2024

ಏಳು ಅಡ್ಡಿಗಳ ಒಡ್ಡಿ, ದಬ್ಬೆಸಾಲ…!

ಅಲೆಮಾರಿಯ ಡೈರಿ

mehandale100@gmail.com

ಕಳೆದ ವಾರ ನಾನು ಕರ್ನಾಟಕದ ಬಗ್ಗೆ ಬರೆಯುತ್ತಿಲ್ಲ ಎಂದು ಬರೆದುಕೊಂಡ ಕ್ಷಣದಿಂದ ಇಂಥ ಸ್ಥಳಗಳಿಗೆ ಭೇಟಿ ಕೊಡುವ ಆಸ್ಥೆಯ ಪ್ರವಾಸಿಗರ ಮತ್ತು ಓದುಗರ ಬಗ್ಗೆಯೂ ಬೆಳಕು ಚೆಲ್ಲುವಂತೆ ಒತ್ತಾಯ ಬರತೊಡಗಿದಂತೆ ಮೊದಲಿಗೆ ಗೋಚರಿಸಿದ್ದೆ ಈ
ದಬ್ಬೆಸಾಲು.

ಎಲ್ಲಿದೆ ಏನಿದೆ ಎನ್ನುವುದಕ್ಕಿಂತ ಸಾತೊಡ್ಡಿ ಎಂಬ ಭರಾಟೆಯ ಜಲಪಾತದ, ಉ.ಕ. ಜಿಲ್ಲೆಯ ಯಲ್ಲಾಪುರ ಪ್ರವೇಶಿಸುತ್ತಿದ್ದಂತೆ ಮೊದಲ ಸೆಲಿ ಇಲ್ಲೇ ಎಂದು ಸಾತೊಡ್ಡಿಯ ಮಹಾವೈಭವ ಮೆರೆಸುವವರಿಗೊಂದು ಕಿವಿಮಾತು ಏನೆಂದರೆ, ಅಪರೂಪದ ಅಹಾ.. ಒಹೋ.. ಎಂದೆಲ್ಲ ಅಂತೂ ಇಂತೂ ಕಿತ್ತೋದ ರಸ್ತೆಯ ಮೂಲಕ ಸಾತೊಡ್ಡಿಯ ಬುಡಕ್ಕೆ ತಲುಪಿ ಪೋಟೊ ಸೆಲ್ಫಿ ಸುರಿಮಳೆ
ಮಾಡಿಕೊಂಡು ಅದ್ಭುತ ಜಲಪಾತ ಹಿಡಿದುಬಿಟ್ಟೇವು ಎಂದೆಲ್ಲ ಸಂಭ್ರಮಿಸುವವರಿಗೆ ಒಂದು ಗೊತ್ತಿರಲಿ.

ಸಾತೊಡ್ಡಿ ಸುಖಾಸುಮ್ಮನೆ ೪ ಕವಲಾಗಿ ಮೇಲಿಂದ ಧುಮುಕಿ ಬಿದ್ದುಹೋಗುತ್ತದಲ್ಲ, ಅದರ ದೊಡ್ಡತನ ಏನೂ ಇಲ್ಲ. ಕಾರಣ ಇಳಿಜಾರು, ಆಳಕಮರಿಯ ಭಾಗ ದೊರಕಿದರೆ, ಎಂಥ ನೀರೂ ಇಳಿಜಾರಿಗೆ ಹರಿಯುವಾಗ, ಧುಮುಕುವಾಗ ಒಂದು ಜಲಪಾತ ವನ್ನು ಕ್ರಿಯೇಟ್ ಮಾಡಿಯೇ ಮಾಡುತ್ತದೆ. ಆದರೆ ಅದೊಂದು ನಯನ ಮನೋಹರ ತಾಣವಾಗಿ ದಕ್ಕುವುದು ಸಹಜವೇ… ಆದರೆ ಅದರ ಹಿನ್ನೆಲೆಯಲ್ಲಿ ಅದರ ನೆತ್ತಿಗೇ ಹತ್ತಿನಿಂತಾಗಿನ ಅನುಭವವಿದೆಯಲ್ಲ, ದಕ್ಕುವ ಕೆಳಗಿನ ನೋಟವಿದೆಯಲ್ಲ, ಅದು ಈ ಜಲಪಾತದ ಎದುರಿಗೆ ಏನೂ ಅಲ್ಲ.

ಹಾಗೆ ರೋಚಕ ದೃಶ್ಯವೈಭವ ಸವಿಯುವ ಸಾಧ್ಯತೆ ಇದ್ದೆಡೆಯೆಲ್ಲ ಹೋಗುವ ಪ್ರಯತ್ನ-ಪ್ರಯೋಗಗಳನ್ನು ಮಾಡಿದ್ದೇನೆ. ಹೆಚ್ಚಿನ ಜಲಪಾತದ ನೆತ್ತಿಗೆ ಕಾಲಿಡಲುಯತ್ನಿಸಿ ಯಶಸ್ವಿಯಾಗಿದ್ದೇನೆ (ಹೀಗೆಯೇ ಸಾಹಸಕ್ಕೆ ಇಳಿದಾಗಲೇ ೨ ದಶಕಗಳ ಹಿಂದೆ ಹಾವೊಂದು ಕಚ್ಚಿ, ಎಡಗೈ ತೆಗೆದುಹಾಕುವ ಅಪಾಯದಿಂದ ಪಾರಾಗಿದ್ದೇನೆ. ಕಾಳಿಂಗವಾಗಿದ್ದರೆ ಬದುಕುವ ಚಾನ್ಸು ಇರುತ್ತಿರ ಲ್ಲಿಲ್ಲ. ಆದರೆ ಇದು ವೈಪರ್ ಆಗಿದ್ದಕ್ಕೆ ಬದುಕಲು ೩-೪ ಗಂಟೆಗಳ ಅವಕಾಶ ಇದ್ದೇ ಇತ್ತು. ಆದರೆ ಘೋರವಾದ ವೈಪರ್
ಬೈಟ್ ಕೈಯನ್ನು ಸಂಪೂರ್ಣ ಹಾಳುಗೆಡವಿತ್ತು.

ಸಕಾಲಿಕ-ಪ್ರಾಯೋಗಿಕ ಉಪಚಾರ ನೀಡಿದ್ದ ಡಾ. ಕಪಾಲಿಯ ಕಾರಣಕ್ಕೆ ಕೈ ಸುಸ್ಥಿತಿಗೆ ಮರಳಲು ತೆಗೆದುಕೊಂಡ ಕಾಲಾವಧಿ ೯ ತಿಂಗಳು. ಮೊನ್ನೆ ದಬ್ಬೆಸಾಲದ ದಟ್ಟಕಾಡಿನಲ್ಲಿ ಇದೆಲ್ಲ ನೆನಪಾಯಿತು). ಜಲಪಾತಗಳ ನೇರದರ್ಶನ ಮತ್ತು ಹಿನ್ನೆಲೆ ವಿಭಿನ್ನ.
ಜತೆಗೆ ಅದರ ಹರಿವಿನ ಮೂಲಕ್ಕೆ ಬ್ಯಾಕ್ ಎಂಟ್ರಿ ಇದೆಯಲ್ಲ ಅದು ಇನ್ನೂ ರೋಮಾಂಚಕ. ಉ.ಕ. ಜಿಲ್ಲೆಯ ಯಲ್ಲಾಪುರ ತಾಲೂಕು ಒಂದರಲ್ಲೇ ಇರುವ ಜಲಪಾತಗಳ ಸಂಖ್ಯೆ ೩೦೦ಕ್ಕೂ ಹೆಚ್ಚಿತ್ತಂತೆ ಎಂದು ೧೯೮೯ರ ದಾಖಲೆಯೊಂದು ನಮೂ ದಿಸಿದ್ದು, ನಾವು ಎಲ್ಲೆಲ್ಲಿ ಹುಡುಕುವುದೋ ಗೊತ್ತಿಲ್ಲ.

ಆದರೆ ಬಹುಶಃ ಮಳೆಗಾಲದಲ್ಲಿ ಹುಟ್ಟಿ ಅದರೊಂದಿಗೆ ಸಾಯುವ ಜಲಪಾತಗಳೂ ಆದರಲ್ಲಿ ಲೆಕ್ಕಿಸಿರಬೇಕು. ಕಾರಣ ಅದೆಲ್ಲ
ಲೆಕ್ಕಕ್ಕೆ ತೆಗೆದುಕೊಂಡರೆ ಮಳೆಗಾಲದಲ್ಲಿ ಯಲ್ಲಾಪುರ ಒಂದೇ ಅಲ್ಲ ಪೂರ್ತಿ ಉ.ಕ. ಜಿಲ್ಲೆಯಲ್ಲಿ ನಿಂತಲ್ಲಿ ಕೂತಲ್ಲಿ ನೀರು ಹರಿದು ಅಕಸ್ಮಾತ್ ಮರೆತರೆ ಬುಡವನ್ನೇ ಒದ್ದೆಮಾಡಿ -ಜೀತಿಗೀಡು ಮಾಡುವ ಜಲಪಾತಗಳ ಸಂಖ್ಯೆ ಲೆಕ್ಕ ತಪ್ಪುವಷ್ಟಿದೆ.

ದಬ್ಬೆಸಾಲ ಮೊದಲಿನಿಂದಲೂ ಹೊರ ಮತ್ತು ನೇರ ಪ್ರವಾಸಿಗರಿಗೆ ಲಭ್ಯ ಇರುವ ನೆಲವಲ್ಲ. ಕಾರಣ ಯಲ್ಲಾಪುರ ಅಥವಾ ಚಿನ್ನಾಪುರದ ಮೂಲಕ, ತೆಲಂಗಾರ ಕೆಳಮುಖ ರಸ್ತೆಯನ್ನು ಸಂಪರ್ಕಿಸುವ ಒಳದಾರಿಯಲ್ಲಿ ಕ್ರಮಿಸಲು ಸಾಧಾರಣ ಗಾಡಿ ಗಳಿಗೂ ಕಷ್ಟವೇ. ಈ ಊರಿನ ಜನ ಹೇಗಾದರೂ ಇಲ್ಲೆಲ್ಲ ಬದುಕಿದ್ದಾರಪ್ಪಾ ಎಂದೆನಿಸದೆ ಇರದು. ತೀರಾ ೧೨ ಕಿ.ಮೀ. ಮೊದಲೇ ಮುಗಿದುಹೋಗುವ ಸರಕಾರಿ ರಸ್ತೆಯ ಮತ್ತು ಸರಕಾರಿ ವಾಹನ ಸೌಲಭ್ಯ, ಟಾರೆನ್ನುವ ರಸ್ತೆಯ ಮಾತೇ ಇಲ್ಲದ ದಾರಿ, ವಿಪರೀತ ಏರಿಳಿತ ಜತೆಗೆ ಮಳೆಗಾಲದಲ್ಲಿ ಕೊರೆದು ಧೂಳುಮಣ್ಣು ಎಲ್ಲೆಲ್ಲೋ ಜರಿದು ಯಾವ ಕಡೆ ಇಳಿಸಿದರೂ
ಕಾರಿನ ಬಾಟಮ್ ಉಜ್ಜಿಕೊಳ್ಳುವ ಲೆಕ್ಕಕ್ಕೆ ಜೀಪೇ ತಗೋಬೇಕಿತ್ತು ಮಾರಾಯ ಎನ್ನಿಸದಿರಲಾರದು.

ಜತೆಗೆ ಪ್ರತಿ ತಿರುವಿನಲ್ಲಿ ಬದಲಾಗುವ ತೀವ್ರ ಏರಿಳಿತ, ಗೇರ್ ನಿಯಂತ್ರಣದ ದಕ್ಷತೆ ಪ್ರಶ್ನಿಸುವಂತೆ ಮಾಡುತ್ತದೆ. ಹತ್ತಾರು ಕಿ.ಮೀ.ಗಳ ಇಂಥ ಇನ್ನಷ್ಟೇ ಉದ್ಧಾರ ಆಗಬೇಕಿರುವ ರಸ್ತೆಯ ಮೂಲಕ ದಬ್ಬೆಸಾಲ ತಲುಪಿದರೆ ಶಾಲೆ ಹೆಸರಿನ ಕಿತ್ತುಹೋದ ಕೊಠಡಿಗಳ ಬಿರುಕು ಕಟ್ಟಡ ದೊರೆಯುತ್ತದೆ. ಅದರಲ್ಲೆ ಸಿಕ್ಕ ಕಾಲ್ದಾರಿ ಕ್ರಮಿಸಿದರೆ ಸೀದಾ ಒಯ್ದು ಅನಾಮತ್ತಾಗಿ ಐವತ್ತಡಿ ಅಗಲದ ಸಂಕದ ಬಾಗಿಲಿಗೆ ನಿಲ್ಲಿಸಿಬಿಡುತ್ತದೆ. ಸಾಮಾನ್ಯವಾಗಿ ಸಂಕ ಹತ್ತಡಿಗೂ ಹೆಚ್ಚಿರುವುದಿಲ್ಲ. ಅದರೆ ಇಲ್ಲಿ ಎರಡೂ ಕಡೆ ಮರದ ಅಟ್ಟಣಿಗೆ ಮಾಡಿ ಅದಕ್ಕೆ ಹಗ್ಗ ಬಿಗಿದು, ಕೆಳಗೆ ೨-೩ ಜೋಡಿ ಅಡಿಕೆ ಮರಗಳ ಕಾಂಡ ಜೋಡಿಸಿ ದಾರಿಗಾಗಿ ಸಂಕ
ನಿರ್ಮಿಸಲಾಗಿದೆ.

ಇದು ಸುಲಭದ-ಸುರಕ್ಷಿತ ದಾರಿಯಲ್ಲವೇ ಅಲ್ಲ. ತೀರಾ ೧೨-೧೫ ಇಂಚು ಅಗಲ ದಕ್ಕುವ, ಮೇಲೂ ಕೆಳಗೂ ಹೊಯ್ದಾಡುವ, ಎಲ್ಲಕ್ಕಿಂತ ಮಿಗಿಲಾಗಿ ಏನಿಲ್ಲವೆಂದರೂ ನೀರಿನಿಂದ ಐವತ್ತಡಿಗೂ ಎತ್ತರದಲ್ಲಿ ನಿರ್ಮಿಸಲಾದ ಸಂಕ. ಅದನ್ನು ದಾಟಿ ಅತ್ಲಾಗೆ ತಲುಪಿದರೆ ಮೂರೇ ಮೂರು ಮನೆಗಳಿರುವ ಊರು ದಬ್ಬೆಸಾಲ. ಇತ್ಲಾಗೆ ೨-೩ ಮನೆಗಳಿದ್ದಾವು. ಆದರೆ ದಬ್ಬೆಸಾಲದ ನೀರಿನಾ ಶ್ರಯದಲ್ಲಿ ಬೆಳೆದ ಬೆಳೆಯುತ್ತಿರುವ ತೋಟದ ತುದಿಗೆ ಮನೆ, ಮಠ, ಅಡಿಕೆ ಅಂಗಳ, ಒಲೆ ಹೀಗೆ ಅಪ್ಪಟ ಮಲೆನಾಡ ಭಟ್ಟರ ಮನೆಗಳಿವೆ. ಒಂದಿಬ್ಬರು ಗೈಡ್ ಗಳಾಗುತ್ತಾರೆ ಮೊದಲೇ ಕರೆಮಾಡಿ ಹೋದರೆ. ಉಳಿದದ್ದು ತುಂಬ ಸಲೀಸು.

ಇದು ಸಾತೊಡ್ಡಿ ಎಂದು ಕೆಳಗೆ ಸೆಲಿಗೆ ಎದೆಯೊಡ್ಡಿ ನಿಲ್ಲುವ ಜಲಪಾತದ ಹಿಂಭಾಗ. ಅದರ ನೆತ್ತಿಗೆ ಪಾದ ಒಡ್ಡಬಹುದಾದ ಸಾಧ್ಯತೆ ಇದಕ್ಕಿದ್ದೇ ಇದೆ. ನೀರಿನ ಹರಿವಿನ ದಾರಿಯಲ್ಲಿ ಸಾತೊಡ್ಡಿ ಜಲಪಾತವಾಗುವ ಮೊದಲು ಇಲ್ಲಿ ೭ ಅಡ್ಡಿಗಳನ್ನು ದಾಟು ತ್ತದೆ. ಅದಕ್ಕೆ ‘ಸಾತ್ ಅಡ್ಡೆ’ ಮುಂದೊಮ್ಮೆ ‘ಸಾತೊಡ್ಡಿ’ಯಾಯಿತು ಎನ್ನುವುದಾದರೂ ಅದಕ್ಕಿಂತಲೂ ಚೆಂದ ಮತ್ತು ಸ್ವಲ್ಪ ನೀರಿನ ಏರಿಳಿತದ ಜತೆ ಎದೆಮಟ್ಟದ ಆಳನೀರಿನ ಹರಿವನ್ನು ಇಳಿದು ಹತ್ತಿ ಮಾಡುವ ಧೈರ್ಯ ನಿಮಗಿದ್ದರೆ ಇಲ್ಲಿ ಜೀವನ ಅದ್ಭುತ ನಿಮ್ಮ ಕಾಲ್ಕೆಳಗೆ, ನೀವು ಜಲಪಾತದ ನೆತ್ತಿಯ ಮೇಲೆ.

ಅಕ್ಷರಶಃ ‘ಬಾಹುಬಲಿ’ ಚಿತ್ರದಲ್ಲಿ ನಿರ್ಮಿಸಲಾದ ನೀರಿನ ಜಲಪಾದ ಹರಿವಿನ ಹಿನ್ನೆಲೆಗೆ ಇದು ಟಕ್ಕರ್ ಕೊಡುವ ಮಟ್ಟಿಗೆ ನೈಜ
ಚಿತ್ರಾವರಣ ಹೊಂದಿರುವ ದಬ್ಬೆಸಾಲ, ಎರಡೂ ಕಡೆಯಲ್ಲಿ ಇಳಿಜಾರು ಪರ್ವತದ ಶಿಲಾಸಮೂಹದ ಮಧ್ಯೆ ಹರಿಯುವ
ಕಣಿವೆ ನದಿ ಎಂದರೆ ತಪ್ಪಾಗಲಿಕ್ಕಿಲ್ಲ. ಮೊದಲೊಂದು ಗುಡ್ಡ ಏರಿಳಿದು ನೀರ ತುದಿಗೆ ಬಂದು ಶೂಸು ಇತ್ಯಾದಿ ತೆಗೆದಿಟ್ಟು ಕಾಲ್ಕೊರೆವ ತಣ್ಣಗಿನ ನದಿಗಿಳಿಯಲೇಬೇಕು. ಒಮ್ಮೆ ಎಡಕ್ಕೂ ಒಮ್ಮೆ ಬಲಕ್ಕೂ ಹೀಗೆ ನದಿಯ ಹರಿವು ಮತ್ತು ಅಪಾಯದ ಪ್ರದೇಶಗಳನ್ನು ತಪ್ಪಿಸಿಕೊಳ್ಳುತ್ತ ಕೆಲವು ಕಡೆಯಲ್ಲಂತೂ ತೀರಾ ನೀರಿನ ಸೆರಗಿಗೆ ಜೀವಕೊಟ್ಟು ಹತ್ತಿಳಿಯುವ ನಡಿಗೆ ಒಮ್ಮೆ
ಹಿಂದಿರುಗಿ ಬಿಡೋಣ ಎನ್ನಿಸದಿರುವುದಿಲ್ಲ.

ಕಡಿದಾದ ಬಂಡೆಗಳ ಶಿಲಾರೋಹಣ ಮಾಡುತ್ತ, ಇಳಿಜಾರಿಗೆ ದೇಹ ಜಾರದಂತೆ ಬ್ಯಾಲೆನ್ಸ್ ಮಾಡುತ್ತ ಅದರಲ್ಲೂ ನೀರಿನ
ಹಾರುವಿಕೆಗೆ ಸಿಕ್ಕು ಅದು ಜಾರು ಜಾರಾಗಿರುತ್ತಾದ್ದರಿಂದ ಅದೆಲ್ಲ ಒಣಗುವವರೆಗೆ ಕಾಯ್ದು, ಸೂಕ್ತ ಆಧಾರಕ್ಕೆ ಕೂತು ಬುಡ ಹೊಸೆಯುತ್ತ ದಾಟುವುದಿದೆಯಲ್ಲಾ, ನಿಮ್ಮನ್ನು ವಿಭಿನ್ನ ಅನುಭವಕ್ಕೂ ನೀರ ಭರ್ರನೆ ಶಬ್ದದಲ್ಲಿ ಆಪ್ತತೆಗೂ ದೂಡುತ್ತದೆ.

ಮೂಲವ್ಯವಸ್ಥೆ ಅದೂ ಇದೂ ಎಂದೆಲ್ಲ ಯಾವುದನ್ನೂ ನಿರೀಕ್ಷೆ ಮಾಡದೆ ಉಳಿದೆದ್ದು ಬರುವವರಿಗೆ ಸುತ್ತಮುತ್ತಲಿನ ಭಟ್ಟರ ಮನೆಗಳು ಅನ್ನದಾತರು. ಅಧಿಕೃತವಾಗಿ ತೀರಾ ಖರ್ಚುವೆಚ್ಚದ ಬಾಬತ್ತಿಲ್ಲದೆ, ಚೆಂದನೆಯ ಅನ್ನ-ಸಾರು, ತಂಬಳಿಯ ಊಟ, ಬೆಳಗೆದ್ದು ಆಸ್ರಿಗೆ ದ್ವಾಸೆ, ಬೆಲ್ಲ ಎನ್ನುವ ಆಪ್ತತೆ ಮತ್ತು ಸಾಹಸಗಳ ಕಾಂಬಿನೇಷನ್ ಇದು. ಮುಖ್ಯ ಹರಿವ ನದಿಯ ನೀರಿನ ಹಿನ್ನೆಲೆಯಲ್ಲಿ ದಾಟಲು ನದಿಯಲ್ಲೆ ಜೀಪು ನುಗ್ಗಿಸುವ ಒಂದು ದಾರಿಯೂ ಇದೆ. ಒಂಥರ ‘ವಾಟರ್ ಟ್ರೈಲ್’ ಎನ್ನುವ ಮುದ ನೀಡುವ ಇದರಲ್ಲಿ ಕಾಲಾಡಿಸಿಕೊಂಡೇ ಅರ್ಧದಿನ ತೆಗೆದುಬಿಡಬಹುದು.

೭ ಹಂತದಲ್ಲಿ ಸಾತೊಡ್ಡಿಯಾಗಿ ಧುಮುಕುವ ಮುನ್ನ ಅಲ್ಲಲ್ಲಿ ಹುಟ್ಟಿರುವ ಜಲಪಾತ, ತಿರುಗಣಿ ಮಡುಗಳು ಹೀಗೆ ಪ್ರತಿ ಹಂತ ದಲ್ಲೂ ಇತ್ತ ಸೌಂದರ್ಯ ಅತ್ತ ಅಪಾಯ ಎರಡನ್ನು ಮಡಿಲಲ್ಲಿ ಕಟ್ಟಿಕೊಂಡೇ ಧುಮುಕುವ ನದಿಯ ಪಾತ್ರದಲ್ಲಿ ಹೋಗುವ ರಸ್ತೆ ಏನು ಮಹಾ ೨ ಕಿ.ಮೀ. ಕೂಡ ಇಲ್ಲ ಅನ್ನಿಸುತ್ತದೆ, ಆದರೆ ನೋಡುತ್ತ ನಿಲ್ಲುತ್ತ ಅಪಾಯದ ತಿರುವಿಗೆ ಬೆದರುತ್ತಲೆ ಹೊಸೆದು ಕೊಳ್ಳುತ್ತ ದಾಟುವ ಕಾರಣ ಏನಿಲ್ಲವೆಂದರೂ ೨ ತಾಸಿನ ದಾರಿಯಾಗುತ್ತದೆ ೭ ಅಡ್ಡಿಗಳ ಪ್ರದೇಶ. ಆದಾಗ್ಯೂ ಇದ್ದ ಮಾಮೂಲಿನ ರಸ್ತೆ ಹೊರತುಪಡಿಸಿ, ಹಲವು ತಿರುವುಗಳಲ್ಲಿ ಉಂಟಾಗುವ ಗೊಂದಲಕ್ಕಾಗಿ ಸ್ಥಳೀಯ ಸಹಾಯ ಪಡೆಯುತ್ತ, ಆಫ್ ಬೀಟ್ ಡ್ರೈವ್ ಮಾಡುತ್ತ ಮುಖ್ಯಪಟ್ಟಣ ಯಲ್ಲಾಪುರದಿಂದ ೧-೨ ತಾಸಿನಲ್ಲಿ ತಲುಪಬಹುದಾದ ಒಳಭಾಗದ ಊರು ದಬ್ಬೆಸಾಲ.

ಸಂದರ್ಶಿಸಿದ ಎಷ್ಟೂ ದಿನದವರೆಗೂ ದಬದಬ ಎಂದು ಕಿವಿಯಲ್ಲಿ ಶಬ್ದಿಸುತ್ತಲೇ ಇರುತ್ತದೆ. ಕನಿಷ್ಠ ಸೌಲಭ್ಯಗಳಲ್ಲಿ ಮಾತ್ರ ಇರಬಹುದಾದ ಆಸ್ಥೆಯವರು ಮಾತ್ರ ಪ್ರಯತ್ನಿಸಿ. ಆತಿಥ್ಯ ನೀಡುವವರೂ ವೃತ್ತಿನಿರತರೇನಲ್ಲ. ಹಾಗಾಗಿ ಹೆಚ್ಚಿನ ಸೌಲಭ್ಯ, ಐಷಾರಾಮ ನಿಮ್ಮ ಮನಸ್ಥಿತಿ ಇದ್ದರೆ ದಯವಿಟ್ಟು ದಬ್ಬೆಸಾಲಕ್ಕೆ ಬರಬೇಡಿ. ಇದು ಕೇವಲ ಪ್ರಕೃತಿಪ್ರಿಯರಿಗೆ ಮಾತ್ರ.