Sunday, 15th December 2024

ಧನಂಜಯನ ಜತೆಗೊಂದು ಡಾಲಿ ರೈಡ್

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ

ಪುಷ್ಪರಾಜ್ ಸಿನಿಮಾ ಬಿಡಿ, ನಮ್ಮ ಗಿರಿರಾಜ್ ಸಿನಿಮಾ ನೋಡಿ. ಇದು ಗಾಂಧಿನಗರದ ಸದ್ಯದ ಮಾತು. ಪುಷ್ಪ ಸಿನಿಮಾದ ಕನ್ನಡ ಅವತರಣಿಕೆ ನಮ್ಮಲ್ಲಿ
ಕಾಟಾಚಾರಕ್ಕೆ ಬಿಡುಗಡೆ ಆಗಿದೆ ಅಂತ ಒಂದೇ ಕಣ್ಣಲ್ಲಿ ಅಳ್ತಾ ಇರೋ ಡಬ್ಬಿಂಗ್ ಪ್ರಿಯರನ್ನು ನೋಡಿದ, ನಮ್ಮಸೂಪರ್ ಸ್ಟಾರ್ ರಾಜೇಶ್ ಖನ್ನಾ ಅಲ್ಲಿಂದಲೇ, ತಮ್ಮ ಎಂದಿನ ಶೈಲಿಯಲ್ಲಿ ಪುಷ್ಪಾ, ಐ ಹೇಟ್ ಟಿಯರ್ಸ’ ಅಂದ್ರಂತೆ.

ಅದಕ್ಕೇ ಈ ಪುಷ್ಪರಾಜ್ ಸಹವಾಸವೇ ಬೇಡ ಅಂತ ಜನ ನಮ್ಮ ಗಿರಿರಾಜ್ ಅವರ ನಿರ್ದೇಶನದ ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಸಿನಿಮಾ ನೋಡ್ತಿದ್ದಾರೆ. ಕನ್ನಡಿಗ ಸಿನಿಮಾ ಆರಂಭದ ಒಂದಷ್ಟು ದೃಶ್ಯಗಳಲ್ಲಿ ಒಂಥರಾ ಡಾಕ್ಯುಮೆಂಟರಿ ಮಾಡಿದ್ದಾರೇನೋ ಅನಿಸಿದರೂ ಅದರಲ್ಲಿ ಸಾಕಷ್ಟು ಮೆಚ್ಯೂರ್ಡ್ ಕಂಟೆಂಟ್ ಇದೆ. ಕನ್ನಡ ನಿಘಂಟು ಬರೆದ ಕಿಟೆಲ್ ಅವರ ಪಾತ್ರ ಸೇರಿದಂತೆ ಎಲ್ಲವೂ ಕನ್ನಡಮಯ. ಆದರೆ ಇದರಲ್ಲಿ ಕೇವಲ ಕನ್ನಡ ಪ್ರೀತಿ ಅಷ್ಟೇ ಅಲ್ಲ, ಜೀವನ ಪ್ರೀತಿ, ರೀತಿ, ನೀತಿ, ಜಾತಿ, ಧರ್ಮ ಎಲ್ಲವೂ ಇದೆ. ಗಿರಿರಾಜ್ ‘ನಂಬಬಲ್ ನಿರ್ದೇಶಕ’ ಅನ್ನೋದು ಮತ್ತೊಮ್ಮೆ ನಿಜ ಆಗಿದೆ.

ಸಾಮಾನ್ಯವಾಗಿ ೧೫ ದಿನದಲ್ಲಿ ಒನ್ ಲೈನ್ ಕಥೆ, ಚಿತ್ರಕಥೆ, ಸಂಭಾಷಣೆ ಅಂತ ಬರೆದುಕೊಂಡು, ಆಮೇಲೆ ‘ಶೂಟಿಂಗ್ ಮಾಡೋದು ಎಷ್ಟು ಕಷ್ಟ ಗೊತ್ತೇನ್ರೀ’ ಎಂದುಕೊಂಡೇ ಸಿನಿಮಾ ಮಾಡೋರು ಜಾಸ್ತಿ. ಆದರೆ ಕನ್ನಡಿಗ ಸಿನಿಮಾ ನೋಡಿದ್ರೆ, ಶೂಟಿಂಗ್ ಮಾಡೋಕೆ ಮುಂಚೆಯೂ, ಬರವಣಿಗೆಗೆ ಅಂತನೇ ಎಷ್ಟು ಮಾಹಿತಿ ಕಲೆ ಹಾಕಿದ್ದಾರೆ ಗಿರಿರಾಜ್ ಅಂತ ಆಶ್ಚರ್ಯ, ಹೆಮ್ಮೆ ಎರಡೂ ಆಗುತ್ತೆ. ಅದೇನೋ, ದೃಶ್ಯ ಚಿತ್ರದಲ್ಲಿ ಅಭಿ ನಯಿಸಿದ ನಂತರ ಇತ್ತೀಚೆಗೆ, ರವಿಚಂದ್ರನ್ ಮೊದಲಿಗಿಂತ ತುಂಬಾ ಅದ್ಭುತ ನಟ ಅನ್ನಿಸುತ್ತಿದ್ದಾರೆ. ಈ ಚಿತ್ರದಲ್ಲಂತೂ ಅವರ ಅಭಿನಯವಷ್ಟೇ ಅಲ್ಲ, ಕನ್ನಡದ ಕ್ಲಿಷ್ಟ ಪದಗಳ ಉಚ್ಚಾರಣೆಯೂ ಅದ್ಭುತ. ಇನ್ನು, ಅಚ್ಚ ಕನ್ನಡದ ಪ್ರತಿಭಾವಂತ ನಟಿ ಪಾವನಾ, ಪ್ರತಿ ಬಾರಿಯಂತೆ ಈ ಚಿತ್ರದಲ್ಲೂ ಸರ್ಪ್ರೈಸ್ ಕೊಡುತ್ತಾರೆ.

ಕೊನೆಗೊಂದು ಮಾತು, ಇವತ್ತು ನಮಗೆ ಕನ್ನಡ ಭಾಷೆ ಗೊತ್ತು ಅಂದ್ರೆ, ಅದಕ್ಕೆ ಪಠ್ಯ ಪುಸ್ತಕಗಳು ಸೇರಿದಂತೆ ನಾವು ಓದಿರೋ ಹಲವು ಪುಸ್ತಕಗಳು ಕಾರಣ. ಪಠ್ಯ ಪುಸ್ತಕ, ಕಾದಂಬರಿಗಳನ್ನು ಬರೆದ ಲೇಖಕರು ನಮಗೆ ಗೊತ್ತು. ಆದರೆ ಇವತ್ತು ನಮಗೆ ಕನ್ನಡ ಓದಲು, ಬರೆಯಲು ಬರುತ್ತೆ ಅಂದ್ರೆ, ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲ ಕಡೆ ಕನ್ನಡ ಓದುತ್ತೀವಿ, ಬರೀತೀವಿ ಅಂದ್ರೆ, ಅದಕ್ಕೆ ಕಾರಣ ಈ ಮೂಲ ಲಿಪಿಕಾರರು. ಹಾಗಾಗಿ, ನಾವಿವತ್ತು ಕನ್ನಡ ಬವು ಅಂದ್ರೆ, ಆ ಲಿಪಿ ಕಾರರ ದೊಡ್ಡ ಋಣ ನಮ್ಮ ಮೇಲಿದೆ. ಕನಿಷ್ಟ ಪಕ್ಷ, ಅದಕ್ಕೋಸ್ಕರನಾದ್ರೂ ಪ್ರತಿಯೊಬ್ಬ ಕನ್ನಡಿಗನೂ ಈ ಸಿನಿಮಾ ನೋಡಬೇಕು.

ಲೂಸ್ ಟಾಕ್
ಡಾಲಿ ಧನಂಜಯ(ಕಾಲ್ಪನಿಕ ಸಂದರ್ಶನ)
? ಜನ ಎಲ್ಲಿಗ್ ಕರೆದ್ರೂ ಆಟೋದವ್ರು ಬರಲ್ಲ ಅಂತಾರೆ, ನೀವ್ ನೋಡಿದ್ರೆ ಆಟೋ ಹತ್ತಿ ಪ್ರಚಾರ ಮಾಡ್ತಾ ಜನರನ್ನ ನಿಮ್ಮ ‘ಬಡವ ರಾಸ್ಕಲ್’ ಸಿನಿಮಾಗೆ ಕರೀತಾ ಇದ್ದೀರಾ, ಜನ ಬರ್ತಾರೆ ಅಂತೀರಾ?

-ಪಬ್ಲಿಕ್ ಜತೆ ಬೆರೆತ ಮೇಲೆ ಅವರ ಆಟೋ ರೆಸ್ಪಾನ್ಸ್ ನೋಡಿ, ಆಟೋಮ್ಯಾಟಿಕ್ ಆಗಿ ಬರ್ತಾರೆ ಅನ್ನಿಸ್ತಿದೆ.

? ಈಗಾಗಲೇ ಮೀಟರ್ ಇರೋ ನಟ ಅಂತ ಬಹಳ ಸಲ ಪ್ರೂವ್ ಮಾಡಿದ್ದೀರ, ಈಗ ನೋಡಿದ್ರೆ ಆಟೋ ಹತ್ತಿದ್ದೀರಾ?

– ಹೌದು, ಡಬಲ್ ಮೀಟರ್ ಇದೆ ಅಂತ ತೋರಿಸಿಕೊಳ್ಳೋಕೆ. ಹಾಗಂತ ಟಿಕೇಟ್ ರೇಟ್ ಏನೂ ಡಬಲ್ ಮಾಡಲ್ಲ ಬಿಡಿ.

? ಅಣ್ಣಾವ್ರ ಡೈಲಾಗ್‌ನ ಟೈಟಲ್ ಮಾಡ್ಕೊಂಡು ಸಿನಿಮಾ ಮಾಡಿದ್ದೀರ, ಈ ಆಟೋ ಡ್ರೈವರ್ ಸಿನಿಮಾನ ಯಾವ ರೀತಿಯ ಆಡಿಯನ್ಸ್ ಗಳಿಗಾಗಿ ಮಾಡಿದ್ದೀರಾ?
-ಎ ಥರದವರಿಗೂ. ಅಭಿಮಾನಿ ದೇವರುಗಳಿಗಾಗಿ ಮತ್ತು ಅಭಿಮಾನಿ ಡ್ರೈವರುಗಳಿಗಾಗಿ.

? ವಾವ್ ಸರಿ, ಈ ಸಿನಿಮಾದಿಂದ ಜನ ಏನ್ ಎಕ್ಸ್‌ಪೆಕ್ಟ್ ಮಾಡಬಹುದು?
-ಹೆಚ್ಚೇನಿಲ್ಲ. ಆಟೋದಲ್ಲಿ ಧನಂಜಯನ ಜತೆ ಒಂದ್ ಡಾಲಿ ರೈಡ್ ಹೋಗಬಹುದು, ಅಷ್ಟೇ.

? ಆಯ್ತು, ಒಟ್ಟಾರೆ, ಈ ಸಿನಿಮಾದ ಮೂಲಕ ಏನ್ ಹೇಳೋಕೆ ಹೊರಟಿದ್ದೀರಾ, ಈ ಚಿತ್ರದಲ್ಲಿ ನಿಮ್ಮ ಆಟೋ ಡ್ರೈವರ್ ಫಿಲಾಸಫಿ ಏನು?

-ಜೀವನ ಅಂದ್ರೆ ಏನು ಅಂತಒಬ್ಬ ಆಟೋ ಡ್ರೈವರ್‌ಗಿಂತ ಹೆಚ್ಚಾಗಿ ಯಾರು ಅರ್ಥ ಮಾಡಿಕೊಳ್ಳೋಕೆ ಸಾಧ್ಯ. ಮನುಷ್ಯನಾಗಿ ಹುಟ್ಟಿದ್ಮೇಲೆ ಆ ಕಡೆಯಿಂದ ಬರ್ತಾ
ಖಾಲಿ ಬರ್ಬೇಕು, ಈ ಕಡೆಯಿಂದ ಹೋಗ್ತಾ ಖಾಲಿ ಹೋಗ್ಬೇಕು’.

ನೆಟ್ ಪಿಕ್ಸ್

 ಬಲ್ವಿಂದರ್ ಸಿಂಗ್ ಖೇಮು ಯಾವತ್ತೂ ಫೈವ್ ಸ್ಟಾರ್ ಹೊಟೇಲ್‌ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾ ನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಠಿತ ಫೈವ್
ಸ್ಟಾರ್ ಹೊಟೇಲ್‌ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು.

ಫುಲ್ ಖುಷಿಯಾದ ಬಲ್ವಿಂದರ್ ಸಿಂಗ್ ಖೇಮು, ತನ್ನ ಹೆಂಡತಿ ಊರಿಗೆ ಹೋದ ದಿನ ಆ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ಉಳಿದುಕೊಳ್ಳೋದು ಅಂತ ತೀರ್ಮಾನ ಮಾಡಿದ. ಅವತ್ತು ಬೆಳಗ್ಗೆ ಹೊಟೇಲಿಗೆ ಹೋಗಿ ಚೆಕ್ ಇನ್ ಆಗಿ, ರೂಮ್‌ನಲ್ಲಿ ಸ್ನಾನ, ಊಟ ಮಾಡಿ ಕಿಟಕಿಯಿಂದ ಹೊರಗೆ ನೋಡಿದವನಿಗೆ ಸ್ವಿಮ್ಮಿಂಗ್ ಪೂಲ್ ಕಾಣಿಸಿತು. ಸರಿ ಅಂತ ಅಲ್ಲಿಂದ ಸೀದಾ ಪೂಲ್ ಬಳಿಗೆ ಬಂದು ಅಲ್ಲಿ ಪೂಲ್ ಪಕ್ಕದಲ್ಲಿ ಹಾಕಿದ್ದ ಉದ್ದ ನೆಯ ಬೆಂಚ್ ಮೇಲೆ ಮೇಲೆ ಮಲಗಿಕೊಂಡ. ಆಗ ಅಲ್ಲಿಗೆ ಬಂದ ಒಬ್ಬ ಫಾರಿನರ್ ಇವನನ್ನು ನೋಡಿ, ‘ಹಾಯ, ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ.

ಇಂಗ್ಲಿಷ್ ಸರಿಯಾಗಿ ಬರದ ಬಲ್ವಿಂದರ್ ಸಿಂಗ್ ಖೇಮು, ‘ನೋ ಐ ಆಮ್ ಬಲ್ವಿಂದರ್ ಸಿಂಗ್’ ಅಂದ. ಅದಕ್ಕೆ ಆ ವಿದೇಶಿಗ ಫನ್ನಿ ಗೈ ಅಂತ ನಕ್ಕು ಹೊರಟ. ಆದ್ರೆ ಬಲ್ವಿಂದರ್ ಸಿಂಗ್ ಖೇಮುಗೆ ಅವನು ಯಾಕೆ ನಕ್ಕ ಅನ್ನೋದು ಅರ್ಥ ಆಗಲಿಲ್ಲ. ಅದೇ ಗೊಂದಲದಲ್ಲಿ ಅಲ್ಲಿಂದ ಎದ್ದು ಹೊರಟ, ಅಲ್ಲಿ ಸ್ವಲ್ಪ ಮುಂದೆ ಇನ್ನೊಬ್ಬ ಫಾರಿನರ್ ಅವನಂತೆಯೇ ಪೂಲ್ ಪಕ್ಕದ ಬೆಂಚ್‌ನಲ್ಲಿ ಮಲಗಿದ್ದ. ಅವನನ್ನು ನೋಡಿದ ಖೇಮು ‘ಆರ್ ಯೂ ರಿಲ್ಯಾಕ್ಸಿಂಗ್ ?’ ಅಂತ ಕೇಳಿದ.

ಅದಕ್ಕೆ ಆತ ‘ಎಸ್’ ಅಂದ. ಇದ್ದಕ್ಕಿದ್ದಂತೆ ರಾಂಗ್ ಆದ ಖೇಮು ಹೇಳಿದ ‘ಅಯ್ಯೋ ಮಂಗ್ ನನ್ಮಗನೇ, ನೀನ್ ಇಲ್ ಮಲ್ಕೊಂಡಿದ್ದೀಯಾ, ಅಲ್ಲಿ ನಿನ್ ಹುಡುಕ್ಕೊಂಡ್ ಯಾರೋ ಬಂದಿದ್ರು’.

ಲೈನ್ ಮ್ಯಾನ್
? ಮೊಟ್ಟೆ ತಿನ್ನೋರಿಗೆ ಮತ್ತು ತಿನ್ನದೇ ಇರೋರಿಗೆ ಬೇರೆ ಬೇರೆ ಶಾಲೆ ತೆರೆಯಲು ಆಗ್ರಹ ಇನ್ಮೇಲೆ ಸ್ಕೂಲ್ ಹೆಸರುಗಳು ಹೆಂಗಿರ್ತವೆ ಅಂದ್ರೆ,
-೧ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಪ್ಯೂರ್ ವೆಜ)
೨ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಇಲ್ಲಿ ಕೋಳಿ ಮೊಟ್ಟೆ ದೊರೆಯುತ್ತದೆ)
? ಹೆಚ್ಚು ಗೋಬಿ ಮಂಚೂರಿ ಮಾರಾಟ ಆಗೋ ಜಾಗ
– ಗೋಬಿ ಘಾಟ್
? ಹೆಂಗಸರು ವಟ ವಟ ಅಂತ ಮಾತಾಡೋ ಜಾಗ
– ವಠಾರ

? ಫಂಕ್ಷನ್ ಒಂದರಲ್ಲಿ ಕುರ್ಚಿ ತೆಗೆದು ನೆಲದ ಮೇಲೆ ಕುಳಿತ ನರೇಂದ್ರ ಮೋದಿ ಅವರನ್ನು ನೋಡಿದ ಯೋಗಿ ಆದಿತ್ಯನಾಥ್ ಹೇಳಿದ್ದು
– ಆಜ್ ಸೇ ತುಮ್ಹಾರಾ ನಾಮ್ ನೆಲ‘ನರೇಂದ್ರ’ ಬಾಬು
? ಒಬ್ಬ ಶಿಲ್ಪಿಗೆ ಚಾಲೆಂಜ್ ಮಾಡೋದ್ ಹೆಂಗೆ?
– ನಿನ್ ಕೈಲಿ ಏನ್ ಕೆತ್ಕೊಳ್ಳೋಕಾಗುತ್ತೋ.. ಕೆತ್ಕೋ..!
? ಮರಗಳ ಮೇಲೆ ತಮ್ಮ ಹೆಸರು ಕೆತ್ತುವ ಹುಡುಗ, ಹುಡುಗಿಯರು
– ಅ‘ಮರ’ ಪ್ರೇಮಿಗಳು
? ಗವರ್ನಮೆಂಟ್ ಆಫೀಸ್ ಟಮ್ಸ ಪ್ರಾಮಾಣಿಕ ಸರಕಾರಿ ಅಽಕಾರಿ
-ಅಚ್ಝಿಛಿ uಜ್ಚಿಛ್ಟಿ
? ಲಂಚ ತೆಗೆದುಕೊಳ್ಳುವ ಅಧಿಕಾರಿ-Table officer
? ಹಾಕಿಕೊಳ್ಳಲು ಕಷ್ಟ ಆಗುವ ಟೈಟ್ ಫಿಟ್ಟಿಂಗ್ ಇರೋ ಬಟ್ಟೆ
– ಹಾರ್ಡ್ ವೇರ್
? ಬಿಬಿಎಂಪಿಯಲ್ಲಿ ಕೆಲಸ ಮಾಡೋ ದಪ್ಪನೆಯ ಹುಡುಗಿ
– ಬೃಹತ್ ಬೆಂಗಳೂರು ಮಹಾನಗರ ಬಾಲಿಕೆ