Saturday, 14th December 2024

ಕೈ ದಲಿತಾಸ್ತ್ರಕ್ಕೆ ಬಿಜೆಪಿ ಪ್ರತ್ಯಸ್ತ್ರವೇನು ?

ಅಶ್ವತ್ಥಕಟ್ಟೆ

ranjith.hoskere@gmail.com

ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವುದು ಬಿಜೆಪಿಗೆ ಉತ್ತಮ ತೀರ್ಮಾನವಲ್ಲ. ಈ ಹಂತದಲ್ಲಿ ಲಿಂಗಾಯತ ಸಮುದಾಯದ ನಾಯಕನನ್ನು ಬದಲಾಯಿಸಲು ಹೊರಟರೆ, ಲಿಂಗಾಯತ ಸಮುದಾಯವನ್ನೇ ಎದುರು ಹಾಕಿಕೊಳ್ಳುವ ಆತಂಕವಿದೆ.

ಹಲವು ತಿಂಗಳುಗಳ ಪ್ರಶ್ನೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಉತ್ತರ ಸಿಕ್ಕಿದೆ. ಇದೀಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ‘ಅಸ್ವಿತ್ಥದ ಹುಡುಕಾಟ’ದಲ್ಲಿರುವ ಕಾಂಗ್ರೆಸ್‌ಗೆ ಅಸ್ವಿತ್ಥವನ್ನು ಕೊಡಿಸುವ ಬೃಹತ್ ಹೊಣೆಗಾರಿಕೆಯಿದೆ.

ಆದ್ದರಿಂದ ರಾಷ್ಟ್ರ ವಿಷಯದಲ್ಲಿ ಖರ್ಗೆ ಅವರ ನಾಯಕತ್ವದಿಂದ ಬದಲಾವಣೆ ಏನಾಗಲಿದೆ ಎನ್ನುವುದು ಬೇರೆಯ ವಿಷಯ. ಆದರೆ ಕರ್ನಾಟಕದ ವಿಷಯಕ್ಕೆ ಬಂದರೆ, ಇದು ಖರ್ಗೆ ಆಯ್ಕೆ ಬಿಜೆಪಿ ನಾಯಕರಿಗೆ ಭಾರಿ ಇಕ್ಕಟ್ಟಿಗೆ ಸಿಲುಕಿಸು ವಂತಾಗಿದೆ.

ಹೌದು, ಕರ್ನಾಟಕ ಮೂಲದ ಅದರಲ್ಲಿಯೂ ಕಲ್ಯಾಣ ಕರ್ನಾಟಕದಲ್ಲಿ ಭರ್ಜರಿ ನಾಯಕತ್ವವನ್ನು ಹೊಂದಿರುವ ಮಲ್ಲಿಕಾರ್ಜುನ ಖರ್ಗೆಅವರ ಆಯ್ಕೆಯಿಂದ ಕಾಂಗ್ರೆಸ್ ಆಗುವ ಲಾಭಕ್ಕಿಂತ ಬಿಜೆಪಿಗೆ ಆಗುವ ನಷ್ಟವೆಚ್ಚು ಎನ್ನುವ ಲೆಕ್ಕಾಚಾರಗಳು ಶುರು ವಾಗುತ್ತಿದೆ.

ಅದರಲ್ಲಿಯೂ ‘ದಲಿತ ನಾಯಕನಿಗೆ’ ಪಕ್ಷದ ಅತ್ಯುನತ್ತ ಹುದ್ದೆ ನೀಡಿರುವುದರಿಂದ, ಸಹಜವಾಗಿಯೇ ಕರ್ನಾಟಕದಲ್ಲಿ ‘ವೋಟ್ ಪೊಲರೈಸ್’ ಆಗಲಿವೆ ಎನ್ನುವ ವಿಶ್ಲೇಷಣೆಗಳು ಶುರುವಾಗಿದೆ. ಆದರೆ ಇದಕ್ಕೆ ಠಕ್ಕರ್ ನೀಡಲು ಬಿಜೆಪಿಯಿಂದ ಯಾವ ರೀತಿಯ ಪ್ರತ್ಯಾಸ್ತ್ರ ಪ್ರಯೋಗವಾಗಲಿದೆ ಎನ್ನುವುದೇ ಅನೇಕರಲ್ಲಿರುವ ಕುತೂಹಲವಾಗಿದೆ. ಏಕೆಂದರೆ ಇನ್ನು ಐದಾರು ತಿಂಗಳಲ್ಲಿ ಕರ್ನಾಟಕದಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಮಹತ್ವ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಬಿಜೆಪಿಗೆ ಆಡಳಿತರೂಢ ರಾಜ್ಯವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಾದರೆ, ಕಾಂಗ್ರೆಸ್‌ಗೆ ‘ಪಕ್ಷ ಸಂಘಟನೆಯಲ್ಲಿ ಬಲಿಷ್ಠ ‘
ಎಂದುಕೊಳ್ಳಲು ಇರುವ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ‘ಟಾನಿಕ್’ ನೀಡುವ ಲೆಕ್ಕಾಚಾರವಿದೆ. ಈ ಲೆಕ್ಕಾಚಾರದಿಂದಲೇ, ಚುನಾವಣೆಗೆ ಐದಾರು ತಿಂಗಳು ಇರುವಾಗಲೇ ಕರ್ನಾಟಕದಲ್ಲಿ ಪಕ್ಷ ಬಲಪಡಿಸಿಕೊಳ್ಳಲು ಎರಡೂಪಕ್ಷಗಳೂ ತಂತ್ರಕ್ಕೆ ರಣತಂತ್ರ ಹೂಡಲು ಆರಂಭಿಸಿವೆ.

ಈ ತಂತ್ರ-ರಣತಂತ್ರದ ಭಾಗವಾಗಿಯೇ, ಬಿಜೆಪಿ ಪರಿಶಿಷ್ಟ ಮೀಸಲು ಹೆಚ್ಚಿಸಿದೆ. ಆದರೆ ಕಾಂಗ್ರೆಸ್‌ಗೆ ‘ಅನಿರೀಕ್ಷಿತ’ವಾಗಿ ಕರ್ನಾಟಕದ ದಲಿತ ಮುಖಂಡರೊಬ್ಬರನ್ನು ಎಐಸಿಸಿ ಗಾದಿ ಮೇಲೆ ಕೂರಿಸುವ ತೀರ್ಮಾನ ತೆಗೆದುಕೊಳ್ಳುವಂತಾಗಿದೆ. ಖರ್ಗೆ ಅವರ ಆಯ್ಕೆ ಅನಿರೀಕ್ಷಿತ ಎನ್ನಲು ಕಾರಣವೂ ಇದೆ. ಅದೇನೆಂದರೆ, ಅಶೋಕ್ ಗೆಹಲೋಥ್ ಅವರು ಸ್ಥಾನ ಬೇಡ ಎಂದ ಕಾರಣಕ್ಕೆ ಕೊನೆಕ್ಷಣದಲ್ಲಿ ಖರ್ಗೆ ಅವರಿಗೆ ಈ ಸ್ಥಾನ ನೀಡಲು ಗಾಂಧಿ ಕುಟುಂಬ ಒಪ್ಪಿದೆ.

ಆದರೆ ಅನಿರೀಕ್ಷಿತವಾದರೂ, ‘ಅರ್ಹ’ ಆಯ್ಕೆ ಎನ್ನುವುದು ಅನೇಕರ ಮಾತಾಗಿದೆ. ಅದರಲ್ಲಿಯೂ ಕರ್ನಾಟಕದ ಮಟ್ಟಿಗಂತೂ ಉತ್ತಮ ತೀರ್ಮಾನವಾಗಿದೆ. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಬಿಜೆಪಿಗೇನು ಸಮಸ್ಯೆ ಎನ್ನುವ ಪ್ರಶ್ನೆ ಬರುವುದು ಸಹಜ. ಸಮಸ್ಯೆ ಏನೆಂದರೆ, ಖರ್ಗೆಅವರನ್ನು ಅಧ್ಯಕ್ಷರನ್ನಾಗಿ ಮಾಡುತ್ತಿದ್ದಂತೆ, ಕಾಂಗ್ರೆಸ್‌ನಿಂದ ದೂರಾ ಗುತ್ತಿದ್ದ ಪರಿಶಿಷ್ಟ ಪಂಗಡ ಹಾಗೂ ಜಾತಿಯ ಮತಗಳು ಪುನಃ ಪಕ್ಷದತ್ತ ವಾಲುವಂತಾಗಿದೆ.

ಕೇವಲ ದಲಿತ ಮತಗಳು ಮಾತ್ರವಲ್ಲದೇ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಮತಗಳೂ ಕಾಂಗ್ರೆಸ್ ಬರುವ ಸಾಧ್ಯತೆ ಗಳಿವೆ. ಇದರೊಂದಿಗೆ ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನೊಂದಿಗೆ ಇರುವ ಮತಗಳನ್ನು ಸೇರಿಸಿದರೆ, ಚುನಾವಣೆಯಲ್ಲಿ ತಾನು ಎಣಿಸಿದಂತೆ ‘ದಾಳ’ ಉರುಳಿಸಬಹುದು ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರವಾಗಿದೆ.

ಆದರೆ ಬಿಜೆಪಿ ಹಿಂದುತ್ವ ಹಾಗೂ ಲಿಂಗಾಯತ ಮತಗಳನ್ನು ನೆಚ್ಚಿಕೊಂಡಿವೆ.ಸಹಜವಾಗಿಯೇ ಅಲ್ಪ ಸಂಖ್ಯಾತ ಮತಗಳು ಬಿಜೆಪಿಗೆ ಹೆಚ್ಚಾಗಿ ಬರುವುದಿಲ್ಲ. ಇನ್ನು ದಲಿತ ಮತಗಳು ಬಿಜೆಪಿ ಸರಕಾರ ಮೀಸಲು ಹೆಚ್ಚಿಸಿವೆ ಎಂದು ಬಿಜೆಪಿಗೆ ಒಂದಿಷ್ಟು, ಖರ್ಗೆ ಅವರ ನಾಯಕತ್ವವೆಂದು ಕಾಂಗ್ರೆಸ್ ಕೆಲವಷ್ಟು ಹೋಗುವುದರಿಂದ ಮತಗಳು ‘ವಿಭಜನೆ’ಯಾಗುವುದರಲ್ಲಿ ಅನುಮಾನವಿಲ್ಲ.

ಇನ್ನುಳಿದಿರುವ ಹಿಂದುಳಿದ ಸಮುದಾಯ ಮತಗಳಲ್ಲಿ ಶೇ.೯೦ರಷ್ಟು ಮತಗಳು ಈಗಾಗಲೇ ಒಂದೊಂದು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಇನ್ನಿರುವ ಶೇ.೧೦ರಷ್ಟು ಮತಗಳು ಮಾತ್ರ ‘ಆಚೀಚೆ’ಯಾಗುತ್ತದೆ. ಆದ್ದರಿಂದ ಅವುಗಳನ್ನು ನೆಚ್ಚಿಕೊಳ್ಳುವ ಪರಿಸ್ಥಿತಿಯಲ್ಲಿ ಬಿಜೆಪಿಯಿಲ್ಲ. ಇನ್ನು ರಾಜ್ಯದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ‘ಡಿಸೈಡಿಂಗ್ ಫ್ಯಾಕ್ಟರ್’ ಆಗಿರುವ ಒಕ್ಕಲಿಗ ಮತಗಳು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಹಂಚಿಕೊಳ್ಳುವ ಉತ್ಸಾಹದಲ್ಲಿದ್ದರೂ, ದೇವೇ ಗೌಡರ ನಾಯಕತ್ವ ಇರುವ ತನಕ ಒಕ್ಕಲಿಗರು ಜೆಡಿಎಸ್ ಬಿಟ್ಟು ಬರುವುದಿಲ್ಲ.

ಇದರಿಂದ ಹಳೇ ಮೈಸೂರು ಭಾಗದ 40 ರಿಂದ 50 ಸೀಟುಗಳು ಜೆಡಿಎಸ್‌ನೊಂದಿಗೆ ಸೇರಿ ಹೋಗುವುದು ನಿಶ್ಚಿತವಾಗಿದೆ.
ಆದರೆ ಬಿಜೆಪಿಗೆ ಬಹುದೊಡ್ಡ ಮತದ ಸೆಲೆಯಾಗಿದ್ದ ಲಿಂಗಾಯತ ಮತಗಳು, ಯಡಿಯೂರಪ್ಪ ಅವರ ನಾಯಕತ್ವದ ಬದಲಾವಣೆಯಿಂದ ಯಾವ ಕಡೆ ಸಾಗಿದೆ ಎನ್ನುವ ಸ್ಪಷ್ಟತೆ ಯಾರಿಗೂ ಸಿಗುತ್ತಿಲ್ಲ. ಒಂದು ವೇಳೆ ಲಿಂಗಾಯತ ಮತಗಳು ಬಿಜೆಪಿಯಿಂದ ಅಲ್ಪಪ್ರಮಾಣದಲ್ಲಿ ದೂರ ಸರಿದರೂ, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಲಾಸ್ ಆಗುವ ಆತಂಕದಲ್ಲಿ ಬಿಜೆಪಿ ನಾಯಕರಿದ್ದಾರೆ.

ಈ ಎಲ್ಲ ಹೊಡೆತಗಳ ನಡುವೆ ಇದೀಗ ಬಿಜೆಪಿ ಸವಾಲಾಗಿರುವ ಬಹುದೊಡ್ಡ ಅಂಶವೆಂದರೆ ಕಾಂಗ್ರೆಸ್ ನಾಯಕತ್ವವನ್ನು ಖರ್ಗೆ ಅವರ ಹೆಗಲಿಗೆ ಹೋರಿಸಿರುವುದು. ಕಾಂಗ್ರೆಸ್‌ನ ಈ ತೀರ್ಮಾನದಿಂದ, ಕಲ್ಯಾಣ ಕರ್ನಾಟಕದ 52 ರಿಂದ 54 ಸೀಟುಗಳಲ್ಲಿ ಕಾಂಗ್ರೆಸ್ ಬಲಗೊಂಡಿದೆ. ಆದರೆ ಇದಕ್ಕೆ ಪ್ರತಿಯಾಗಿ ಬಿಜೆಪಿಯ ಬಳಿ ಪ್ರತ್ಯಾಸ್ತ್ರದ ಕೊರತೆ ಎನ್ನುವ ವಿಶ್ಲೇಷಣೆಗಳು ಶುರುವಾಗಿದೆ.

ಏಕೆಂದರೆ, ಖರ್ಗೆ ಅವರಿಗೆ ರಾಷ್ಟ್ರಾಧ್ಯಕ್ಷ ಸ್ಥಾನವನ್ನು ನೀಡಿದ್ದರಿಂದ ಕರ್ನಾಟಕ ಬಿಜೆಪಿಯಲ್ಲಿಯೂ ದಲಿತ ಅಥವಾ ಹಿಂದುಳಿದ ವರ್ಗದ ನಾಯಕರಿಗೆ ಮಹತ್ವದ ಹುದ್ದೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯನ್ನು ಬದಲಾಯಿಸುವುದು ಬಿಜೆಪಿಗೆ ಉತ್ತಮ ತೀರ್ಮಾನವಲ್ಲ. ಈ ಹಂತದಲ್ಲಿ ಲಿಂಗಾಯತ ಸಮುದಾಯದ ನಾಯಕನನ್ನು ಬದಲಾಯಿಸಲು ಹೊರಟರೆ, ಲಿಂಗಾಯತ ಸಮುದಾಯವನ್ನೇ ಎದುರು ಹಾಕಿಕೊಳ್ಳುವ ಆತಂಕವಿದೆ. ಆದರೆ ಬಿಜೆಪಿ
ರಾಜ್ಯಾಧ್ಯಕ್ಷ ಸ್ಥಾನವನ್ನು ಬದಲಾಯಿಸಬಹುದು. ಯಾರಿಗೆ ನೀಡಬೇಕು ಎನ್ನುವುದೇ ಬಿಜೆಪಿ ವರಿಷ್ಠರ ಮುಂದಿರುವ
ಬಹು ದೊಡ್ಡ ಸವಾಲಾಗಿದೆ.

ದಲಿತ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಅಥವಾ ಹಿಂದುಳಿದ ವರ್ಗದವರಿಗೆ ಈ ಸ್ಥಾನವನ್ನು ನೀಡಲು ‘ಅರ್ಹರು’ ಸಿಗುತ್ತಿಲ್ಲ ಎನ್ನುವುದು ಬಿಜೆಪಿ ನಾಯಕರ ಒಳಾಭಿಪ್ರಾಯ. ಒಕ್ಕಲಿಗ ಕೋಟಾದಲ್ಲಿ ಸಿ.ಟಿ.ರವಿ, ಶೋಭಾ
ಕರಂದ್ಲಾಜೆ ಅವರಿದ್ದರೂ, ಚುನಾವಣಾ ಹೊಸ್ತಿಲಲ್ಲಿ ಎಲ್ಲ ನಾಯಕರನ್ನು ‘ಒಟ್ಟಿಗೆ ಕರೆದುಕೊಂಡು’ ಹೋಗುವರೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಈ ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಬಿಜೆಪಿ ಆರಂಭವಾದ ದಿನದಿಂದ ‘ಮಾಸ್ ಲೀಡರ್’ ಆಗಿರುವ ಯಡಿಯೂರಪ್ಪ ಅವರನ್ನು ಈ ಬಾರಿ ‘ನಾಮ್‌ಕೆವಸ್ತೆ’ ನಾಯಕರನ್ನಾಗಿ ಮಾಡಿದ್ದಾರೆ ಹೊರತು, ಪೂರ್ಣ ಪ್ರಮಾಣದ
ನಾಯಕತ್ವದ ಅಧಿಕಾರವನ್ನು ನೀಡುತ್ತಿಲ್ಲ.

ಬಿಲ್ಲವ ಸಮುದಾಯದ ಸುನೀಲ್ ಕುಮಾರ್ ಅವರಿಗೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸಾಮರ್ಥ್ಯವಿದ್ದರೂ, ಚುನಾವಣೆಗೆ ಐದಾರು ತಿಂಗಳಿರುವಾಗ ಇದು ಸಾಧ್ಯವೇ ಎನ್ನುವುದು ಸ್ವತಃ ಸುನೀಲ್‌ಕುಮಾರ್ ಅವರ ಮುಂದಿರುವ ಪ್ರಶ್ನೆಯಾಗಿದೆ. ಆದ್ದರಿಂದ ವಿಧಾನಸಭಾ ಚುನಾವಣೆ ಐದಾರು ತಿಂಗಳಿರುವಾಗಲೇ, ಕಾಂಗ್ರೆಸ್‌ನಲ್ಲಿನ ರಾಷ್ಟ್ರಾಧ್ಯಕ್ಷರ
ಬದಲಾವಣೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ಸಹಾಯವಾಗಲಿದೆ ಎನ್ನುವುದು ಈಗಲೂ ಪ್ರಶ್ನಾರ್ಹ. ಆದರೆ ಕರ್ನಾಟಕದಲ್ಲಿ ಮಾತ್ರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಕ್ಕಿರುವ ಈ ಸ್ಥಾನವಂತೂ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.