ಭೀಮಪರ್ವ
ಹರೀಶ್ ಎಸ್.ವಾಂಖೆಡೆ
ಅಂಬೇಡ್ಕರ್ ನಮ್ಮ ಮನರಂಜನಾ ಮಾಧ್ಯಮಗಳಲ್ಲಿ ಅಷ್ಟೇನೂ ಬಿಂಬಿತವಾಗಲೇ ಇಲ್ಲ. ಸ್ವಾತಂತ್ರ್ಯ ಬಂದಾಗಿ ನಿಂದಲೂ ನಮ್ಮ ಜನಪ್ರಿಯ ಸಂಸ್ಕೃತಿ ಅಂಬೇಡ್ಕರ್‌ರನ್ನು ನಿರ್ಲಕ್ಷಿಸಿದೆ. ತನ್ನ ಪ್ರಗತಿಪರ ಹಾಗೂ ರಾಷ್ಟ್ರೀಯವಾದಿ ಮೌಲ್ಯಗಳಿಗೆ ಹೆಸರಾ ಗಿರುವ ಹಿಂದಿ ಚಿತ್ರರಂಗವೂ ಇಂಥದೇ ಧೋರಣೆ ತಳೆಯಿತು. ಉ.ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ಹುಟ್ಟಿಕೊಂಡ ನಂತರ ‘ಅಂಬೇಡ್ಕರ್‌ವಾದಿ’ ರಾಜಕೀಯ ಶಕ್ತಿ ಮುನ್ನೆಲೆಗೆ ಬಂದರೂ ಹಿಂದಿ ಚಿತ್ರರಂಗ ಅದನ್ನು ಗುರುತಿಸಲಿಲ್ಲ.
ಸಂವಿಧಾನ ಕರ್ತೃ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಮೊನ್ನೆಯಷ್ಟೇ (ಏ.೧೪) ಆಚರಿಸಿದ್ದೇವೆ. ಆದರೆ, ಅಂಬೇಡ್ಕರ್ ಅವರು ರಾಷ್ಟ್ರೀಯ ರಾಜಕೀಯ ರಂಗದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗ, ಭಾರತದ ಜನಸಮುದಾಯದ ಒಂದು ದೊಡ್ಡ ಭಾಗಕ್ಕೆ ‘ಅಸ್ಪೃಶ್ಯರು’ ಎಂಬ ಹಣೆಪಟ್ಟಿ ಕಟ್ಟಿ, ತೀರಾ ಅಪಾಯಕಾರಿಯಾದ ಹಾಗೂ ಘನತೆಗೆ ತಕ್ಕುದಲ್ಲದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರನ್ನು ಒತ್ತಾಯಿಸಲಾಯಿತು.
ಮಾತ್ರವಲ್ಲ, ಮೂಲಭೂತ ಮಾನವ ಹಕ್ಕು/ಅರ್ಹತೆಗಳನ್ನೂ ಅವರಿಗೆ ನಿರಾಕರಿಸಲಾಯಿತು. ಇಂಥ ಸಾಮಾಜಿಕ ಪಿಡುಗು ಗಳನ್ನು ನಿರ್ಲಕ್ಷಿಸಿದ್ದಕ್ಕೆ ಅಂಬೇಡ್ಕರ್ ಅವರು ರಾಷ್ಟ್ರೀಯವಾದಿ ನಾಯಕತ್ವವನ್ನು ಹೊಣೆಗಾರರನ್ನಾಗಿಸಿದರು. ಜಾತಿ ಆಧರಿತ ಶ್ರೇಣಿ ವ್ಯವಸ್ಥೆಗಳು ಹಾಗೂ ಅಸಮಾನತೆಗಳು ಬಗೆಹರಿಯದೆ ಹಾಗೇ ಉಳಿದುಬಿಟ್ಟರೆ, ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಪಡೆದ ಸ್ವಾತಂತ್ರ್ಯಕ್ಕೆ ಏನೂ ಮೌಲ್ಯವಿರುವುದಿಲ್ಲ ಎಂದು ಅಂಬೇಡ್ಕರ್ ವಾದಿಸಿದರು.
‘ಅಸ್ಪೃಶ್ಯರು’ ಎನಿಸಿಕೊಂಡ ಜಾತಿಗಳನ್ನು ಅಂಥದೊಂದು ಪರಿಕಲ್ಪನೆಯ ಕೂಪದಿಂದ ಹೊರಗೆ ಸೆಳೆಯುವ ನಿಟ್ಟಿನಲ್ಲಿ ಅವರಲ್ಲಿ ಕೆನೆಗಟ್ಟಿದ್ದ ರಾಜಿಮಾಡಿಕೊಳ್ಳಲಾಗದ ಧೋರಣೆ, ಸಾಮಾಜಿಕವಾಗಿ ಮೂಲೆಗುಂಪಾಗಿದ್ದ ಜನಸಮೂಹದ ಕಲ್ಯಾಣ ಕ್ಕಾಗಿನ ಒಂದು ಪ್ರಣಾಳಿಕೆಯಾಗಿ ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ಅವರು ನೀಡಿದ ಕೊಡುಗೆ ಮತ್ತು ಈ ಜನಸಮು ದಾಯಗಳನ್ನು ಒಂದು ಮಹತ್ವಾಕಾಂಕ್ಷಿ ರಾಜಕೀಯ ವರ್ಗದ ಸ್ತರಕ್ಕೆ ಏರಿಸುವಲ್ಲಿ ಅವರಿಗಿದ್ದ ದೃಷ್ಟಿಕೋನ ಇವೆಲ್ಲವೂ ಅಂಬೇಡ್ಕರ್ ಅವರಿಗೆ ಆಧುನಿಕ ಭಾರತದ ಓರ್ವ ಕ್ರಾಂತಿಕಾರಿ ಆದರ್ಶ ಪುರುಷನ ಸ್ಥಾನಮಾನವನ್ನು ಕಲ್ಪಿಸಿ ಕೊಟ್ಟಿವೆ.
ಇಷ್ಟಾಗಿಯೂ ಅಂಬೇಡ್ಕರ್ ಅವರು ಭಾರತೀಯ ಮನರಂಜನಾ ಮಾಧ್ಯಮಗಳಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಬಿಂಬಿತ ವಾಗಲೇ ಇಲ್ಲ ಎನ್ನಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಜನಪ್ರಿಯ ಸಂಸ್ಕೃತಿಯು ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಿದೆ. ತನ್ನ ಪ್ರಗತಿಪರ ಹಾಗೂ ರಾಷ್ಟ್ರೀಯವಾದಿ ಮೌಲ್ಯಗಳಿಗೆ ಹೆಸರಾಗಿರುವ ಜನಪ್ರಿಯ ಹಿಂದಿ ಚಿತ್ರರಂಗವೂ ಇಂಥದೇ ಧೋರಣೆ ತಳೆಯಿತು; ಅಂದರೆ, ಜಾತಿ- ವಿರೋಽ ಆಂದೋಲನ, ಅಸ್ಪೃಶ್ಯತೆ ಮತ್ತು ಜಾತಿ ವಿಭಜನೆಗಳಂಥ ಚರ್ಚಾವಿಷಯಗಳನ್ನು ಬಿಂಬಿಸುವಿಕೆ ಅಥವಾ ಅಂಬೇಡ್ಕರ್ ಅವರನ್ನು ಒಂದು ಸ್ಪೂರ್ತಿದಾಯಕ ವ್ಯಕ್ತಿತ್ವವಾಗಿ ಪರಿಗಣಿಸು ವಿಕೆ ಇತ್ಯಾದಿಗಳಿಂದ ಹಿಂದಿ ಚಿತ್ರರಂಗ ಅಂತರ ಕಾಯ್ದುಕೊಂಡಿತು ಎನ್ನಬೇಕು.
೧೯೮೦ರ ದಶಕದಿಂದೀಚೆಗೆ ಹಾಗೂ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ಹುಟ್ಟಿಕೊಂಡ ನಂತರ ‘ಅಂಬೇಡ್ಕರ್‌ವಾದಿ’ ಪ್ರಭಾವಿ ರಾಜಕೀಯ ಶಕ್ತಿಯು ಮುನ್ನೆಲೆಗೆ ಬಂದ ಹೊರತಾಗಿಯೂ ಹಿಂದಿ ಚಿತ್ರರಂಗವು ಇಂಥ ರಾಜಕೀಯ ಬದಲಾವಣೆಯ
ಮಹತ್ವವನ್ನು ಹೇಳಿಕೊಳ್ಳುವಷ್ಟರ ಮಟ್ಟಿಗೆ ಗುರುತಿಸಲಿಲ್ಲ. ಆದರೆ ಕಳೆದೊಂದು ದಶಕದಲ್ಲಿ, ವಿಶೇಷವಾಗಿ ದಲಿತ ಮತ್ತು ಬಹುಜನ ಸಮುದಾಯದ ಹಿನ್ನೆಲೆಯ ಕಲಾವಿದರು, ಚಿತ್ರನಿರ್ಮಾತೃಗಳು ಹಾಗೂ ತಂತ್ರಜ್ಞರ ಆಗಮನವಾದ ನಂತರವಷ್ಟೇ ತೆರೆಯ ಮೇಲೆ ಅಂಬೇಡ್ಕರ್ ಅವರನ್ನು ಬಿಂಬಿಸುವ ಪರಿಪಾಠದಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ.
ಉದಯೋನ್ಮುಖವೂ ಗಮನಾರ್ಹವೂ ಆದ ‘ದಲಿತ ಸಿನಿಮಾ’ದ ಪ್ರಕಾರವೊಂದು ವಿಕಸನಗೊಳ್ಳುತ್ತಿದೆ. ಹಾಗೆ ನೋಡಿದರೆ, ಪ್ರಾದೇಶಿಕ ಭಾಷಾ ಚಿತ್ರರಂಗದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ತಮಿಳು ಮತ್ತು ಮರಾಠಿ ಚಿತ್ರಗಳಲ್ಲಿ ಅಂಬೇಡ್ಕರ್ ಅವರ ಮಹತ್ವಾಕಾಂಕ್ಷಿ ವ್ಯಕ್ತಿತ್ವದ ಛಾಯೆಗಳು ಆಯಾ ಚಿತ್ರನಾಯಕರ ಮುಖೇನ ಕಾಣಿಸಿಕೊಂಡಿವೆ. ‘ಕಬಾಲಿ’ (೨೦೧೬) ಮತ್ತು
‘ಕಾಲಾ’ (೨೦೧೮) ರೀತಿಯ ಚಿತ್ರಗಳಲ್ಲಿ ನಿರ್ದೇಶಕ ಪಾ ರಂಜಿತ್ ಅವರು, ಮಾಫಿಯಾ/ಅಪರಾಧ ಜಗತ್ತು ಹಾಗೂ ಭ್ರಷ್ಟ ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಡುವ ಓರ್ವ ಸದೃಢ, ಹುರುಪಿನ ಮತ್ತು ಆತ್ಮವಿಶ್ವಾಸದ ದಲಿತ ನಾಯಕನನ್ನು ಜಾಹೀರುಗೊಳಿಸಲು ಅಂಬೇಡ್ಕರ್ ಅವರ ವ್ಯಕ್ತಿತ್ವದ ಛಾಯೆಗಳನ್ನು ಬಳಸಿಕೊಂಡಿದ್ದಾರೆ.
ಮಾರಿ ಸೆಲ್ವರಾಜನ್ ಅವರ ‘ಮಾಮನ್ನನ್’ (೨೦೨೩) ಇಂಥ ಮತ್ತೊಂದು ಚಲನಚಿತ್ರ. ಇದರಲ್ಲಿ, ದಲಿತ ನಾಯಕನನ್ನು ಓರ್ವ ಕೋಪೋ ದ್ರಿಕ್ತ ಯುವಕನನ್ನಾಗಿ ಬಿಂಬಿಸಲಾಗಿದ್ದು, ಈತ ಸಮಾಜದ ಗಣ್ಯವರ್ಗದವರ ಹಿಡಿತದಲ್ಲಿದ್ದ ಅಧಿಕಾರವನ್ನು ಕೋಪಾವಿಷ್ಠನಾಗಿ ಪ್ರತಿರೋಽಸುತ್ತಾನೆ ಹಾಗೂ ತನ್ನ ಜನರನ್ನು ಸೆಣಸಾಟಕ್ಕೆ ಸಜ್ಜುಗೊಳಿಸುವ ಮೂಲಕ ರಾಜಕೀಯ ಸಮರವನ್ನು ಗೆಲ್ಲುತ್ತಾನೆ. ಇದೇ ರೀತಿಯಲ್ಲಿ, ಶೈಲೇಶ್ ನರ್ವಾಡೆ ಅವರ ‘ಜಯಂತಿ’ (೨೦೨೧) ಎಂಬ ಮರಾಠಿ ಚಲನಚಿತ್ರದಲ್ಲಿ,
ಅಂಬೇಡ್ಕರ್ ಅವರನ್ನು ನ್ಯಾಯದ ಒಂದು ಗಾಢದನಿಯಾಗಿ ಸಾದರಪಡಿಸಲಾಗಿದ್ದು, ಕಥಾನಾಯಕನು ತನ್ನ ಬದುಕಿಗೆ ಅರ್ಥವನ್ನು ಕಂಡುಕೊಳ್ಳಲು ಈ ದನಿಯು ಪ್ರೇರೇಪಿಸುತ್ತದೆ.
ಇನ್ನು ನಾಗರಾಜ್ ಮಂಜುಳೆ ಅವರ ‘ಝುಂಡ್’ (೨೦೨೧) ಎಂಬ ಹಿಂದಿ ಚಲನಚಿತ್ರದಲ್ಲಿ, ಪ್ರೇಕ್ಷಕರು ಅಂಬೇಡ್ಕರ್ ಜಯಂತಿಯ ಸಂಭ್ರಮಾಚರಣೆಯನ್ನು ಬೆಳ್ಳಿತೆರೆಯ ಮೇಲೆ ಕಾಣಲು ಸಾಧ್ಯವಾಯಿತು. ಇಲ್ಲಿ ಜನರು ಸಂತೋಷದಿಂದ ನರ್ತಿಸುವುದನ್ನು ಕಂಡಾಗ, ಅದು ಅಂಬೇಡ್ಕರ್ ಅವರ ಒಂದು ಉನ್ನತೀಕರಿಸಿದ ಛಾಯೆಯಾಗಿ ಬಿಂಬಿತವಾಗುತ್ತದೆ; ಇದು ಒಂದು ಜಾತಿ-ವಿರೋಧಿ ಐಕಾನ್ ಮಾತ್ರವಾಗಿರದೆ, ಯುವಪೀಳಿಗೆಯ ಪಾಲಿಗೆ ಸೂರ್ತಿ ಮತ್ತು ಸಂಭ್ರಮಾಚರಣೆಯ ರೂಪಕವೂ ಆಗಿದೆ ಎಂಬುದು
ಗಮನಾರ್ಹ.
ಇನ್ನು, ವೆಬ್-ಸರಣಿಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲೂ ಅಂಬೇಡ್ಕರ್ ತೆರೆಯ ಮೇಲೆ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಅಮೆಜಾನ್ ಪ್ರೈಮ್‌ನಲ್ಲಿ ಇತ್ತೀಚೆಗೆ ಬಿತ್ತರಗೊಂಡ ಸುಭಾಷ್ ಕಪೂರ್ ಅವರ ‘ಮಹಾರಾಣಿ ೩’ ವೆಬ್-ಸರಣಿಯ ಪರಾಕಾಷ್ಠೆಯ
ದೃಶ್ಯದಲ್ಲಿ ನಾಯಕಿ ರಾಣಿ ಭಾರತಿ (ಹುಮಾ ಖುರೇಷಿ) ‘ಜೈ ಭೀಮ್’ ಎಂಬ ಘೋಷಣೆ ಕೂಗುವುದನ್ನು ಕಾಣಬಹುದು. ಈ ಸರಣಿಯಲ್ಲಿ ತನ್ನ ‘ಕೆಳಜಾತಿ’ಯ ಅಸ್ಮಿತೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಬಿಂಬಿಸುವ ಭಾರತಿ, ಕುಟಿಲ ರಾಜಕಾರಣದ ತಂತ್ರಗಳನ್ನು ಬಳಸುತ್ತಿದ್ದ ತನ್ನ ರಾಜಕೀಯ ಎದುರಾಳಿಗಳೊಂದಿಗೆ ಹೋರಾಡುತ್ತಾಳೆ.
ಇದೇ ರೀತಿಯಲ್ಲಿ, ನೆಟ್‌ಫ್ಲಿಕ್ಸ್‌ನಲ್ಲಿ ಮೂಡಿಬಂದ ಸುಽರ್ ಮಿಶ್ರಾ ಅವರ ‘ಸೀರಿಯಸ್ ಮೆನ್’ ಸರಣಿಯಲ್ಲಿ, ವ್ಯವಸ್ಥೆಯನ್ನು ವಿರೋಧಿಸಲು ತನ್ನ ಸಾಮಾಜಿಕ ನೆಲೆ ಹಾಗೂ ವೈಚಾರಿಕತೆಯನ್ನು ಬಳಸಿಕೊಳ್ಳುವ ಓರ್ವ ದಲಿತ ನಾಯಕನ ಪಾತ್ರವನ್ನು
ನವಾಜುದ್ದೀನ್ ಸಿದ್ದಿಕಿ ನಿರ್ವಹಿಸಿದ್ದಾರೆ. ‘ಪಾತಾಳ್‌ಲೋಕ್’, ‘ದಹಾಡ್’ (ಅಮೆಜಾನ್ ಪ್ರೈಮ್), ‘ಆಶ್ರಮ್’ (ಎಂಎಕ್ಸ್ ಪ್ಲೇಯರ್) ರೀತಿಯ ಸರಣಿಗಳು ಹಾಗೂ ‘ಕಟ್‌ಹಾಲ್’ (ನೆಟ್‌ಫ್ಲಿಕ್ಸ್), ‘ಪರೀಕ್ಷಾ’ (ಝೀ ೫) ರೀತಿಯ ಚಲನಚಿತ್ರಗಳು ದಲಿತ ಪಾತ್ರಗಳಿಗೆ ಒಂದು ಹೊಸ ಇಮೇಜನ್ನೇ ಕಟ್ಟಿಕೊಟ್ಟಿವೆ ಎಂದು ಹೇಳಬೇಕು. ಪಾತ್ರಗಳು ತಮ್ಮ ಸಾಮಾಜಿಕ ಅಸ್ಮಿತೆಯ ಬಗ್ಗೆ ಜಾಗೃತವಾಗಿವೆ ಮತ್ತು ಅದನ್ನು ಬಹಿರಂಗವಾಗಿ ಸರಾಗವಾಗಿ ಪ್ರತಿಪಾದಿಸಿ ಸಾಮಾಜಿಕ ನ್ಯಾಯ ಮತ್ತು ಸಮಾನ ಗೌರವವನ್ನು ಆಗ್ರಹಿಸುತ್ತವೆ ಎಂಬುದನ್ನು ತೋರಿಸಲು ಅಂಬೇಡ್ಕರ್ ಅವರ ಛಾಯಾಚಿತ್ರಗಳು ಅಥವಾ ಪ್ರತಿಮೆಗಳನ್ನು ಇವುಗಳಲ್ಲಿ ಹಲವು ಸಲ ಬಳಸಲಾಗಿದೆ.
ಈ ಯಾದಿಗೆ ಮತ್ತೊಂದು ಪ್ರಭಾವಶಾಲಿ ಸೇರ್ಪಡೆ ಎಂದರೆ, ‘ಮೇಡ್ ಇನ್ ಹೆವನ್’ ಎಂಬ ವೆಬ್ -ಸರಣಿಯಲ್ಲಿನ ನೀರಜ್ ಘಯ್ವಾನ್ ಅವರ ‘ದಿ ಹೀಟ್ ಸ್ಕಿಪ್ಡ್ ಎ ಬೀಟ್’ ಎಂಬ ಕಥೆ. ಇದರಲ್ಲಿ, ಪಲ್ಲವಿ ಮಾಂಕೆ (ರಾಧಿಕಾ ಆಪ್ಟೆ) ಐವಿ ಲೀಗ್ ವಿಶ್ವ ವಿದ್ಯಾಲಯವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ‘ಮಾಜಿ-ಅಸ್ಪೃಶ್ಯೆ’ ಎಂಬ ತಮ್ಮ ಅಸ್ಮಿತೆಯನ್ನು ಬಿಂಬಿಸಿಕೊಳ್ಳು ವಲ್ಲಿ ಯಾವುದೇ ಹಿಂಜರಿಕೆಯಿಲ್ಲದ ಓರ್ವ ಹೆಮ್ಮೆಯ ದಲಿತ ಪ್ರಾಧ್ಯಾಪಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಂವೇದನಾ ಶೀಲನೂ ಪ್ರಗತಿಪರನೂ ಆಗಿರುವ ಭಾರತೀಯ ಮೂಲದ ವಕೀಲನನ್ನು ಆಕೆ ಮದುವೆಯಾಗುತ್ತಿದ್ದರೂ, ತನ್ನ ಮದುವೆಯ ಸ್ಮರಣಾರ್ಥವಾಗಿ ಬೌದ್ಧಮತೀಯ ಆಚರಣೆಯೊಂದನ್ನು ಸೇರಿಸಲು ಕೇಳಿದಾಗ ಆಕೆ ಸಾಮಾಜಿಕ ಹೊರೆಗಳು ಮತ್ತು ತಲ್ಲಣ ಗಳನ್ನು ಎದುರಿಸಬೇಕಾಗಿ ಬರುತ್ತದೆ.
ಅಂಬೇಡ್ಕರ್‌ರ ಭಾವಚಿತ್ರವನ್ನು ಕೇಂದ್ರಭಾಗದಲ್ಲಿ ಇರಿಸುವುದರೊಂದಿಗೆ ಈ ಆಚರಣೆಯನ್ನು ಸುಂದರವಾಗಿ ಪ್ರದರ್ಶಿಸ ಲಾಗಿದೆ. ಅಂಬೇಡ್ಕರ್ ಅವರು ಭಾರತ ದಲ್ಲಿ ಆಳವಾಗಿ ಬೇರೂರಿಸಲು ಬಯಸಿದ್ದ ಸಾಮಾಜಿಕ ತತ್ವಗಳನ್ನು ಈ ದೃಶ್ಯ ಬಿಂಬಿಸು ತ್ತದೆ ಎನ್ನಬೇಕು. ಇನ್ನು, ಸಾಕ್ಷ್ಯಚಿತ್ರಗಳ ವಿಷಯಕ್ಕೆ ಬಂದರೆ ಹೊಸ ಮತ್ತು ಯುವ ನಿರ್ಮಾತೃಗಳು ಈ ನಿಟ್ಟಿನಲ್ಲಿ ವಿನೂತನ ಆಸಕ್ತಿಯನ್ನು ತೋರಿಸಿದ್ದಾರೆ. ಉದಾಹರಣೆಗೆ, ಜ್ಯೋತಿ ನಿಶಾ ಅವರ ‘ಬಿ.ಆರ್.ಅಂಬೇಡ್ಕರ್: ನೌ ಆಂಡ್ ದೆನ್’ (೨೦೨೩), ವಾಡಿಕೆಯ ಚಲನಚಿತ್ರದಷ್ಟು ಉದ್ದವಿರುವ ಒಂದು ಸಾಕ್ಷ್ಯಚಿತ್ರವಾಗಿದ್ದು, ಇದು ಪ್ರಸ್ತುತ ಭಾರತದಲ್ಲಿ ದಲಿತರು ಎದುರಿಸು ತ್ತಿರುವ ದುಸ್ಥಿತಿಯನ್ನು ಒಳಹೊಕ್ಕು ವಿಚಾರಮಾಡಿ ಅನಾವರಣಗೊಳಿಸುತ್ತದೆ.
ತಮ್ಮನ್ನು ಓರ್ವ ಬಹುಜನ-ಸ್ತ್ರೀವಾದಿ ಚಿತ್ರ ನಿರ್ಮಾತೃ ಎಂದು ಕರೆದುಕೊಳ್ಳುವ ನಿಶಾ, ಸಾಮಾಜಿಕ ನ್ಯಾಯ, ಘನತೆಗಾಗಿ ಪ್ರಸ್ತುತ ನಡೆಯುತ್ತಿರುವ ಅಂಬೇಡ್ಕರ್‌ವಾದಿ ಹೆಣಗಾಟಗಳನ್ನು ಹಾಗೂ ಪುರುಷ ನಿಯಂತ್ರಿತ ವ್ಯವಸ್ಥೆಯ ಅಥವಾ ಪುರುಷ ಪ್ರಾಬಲ್ಯದ ವಿರುದ್ಧದ ಹೋರಾಟಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಒಂದು ಹೊಸ ದೃಷ್ಟಿಕೋನವನ್ನೇ ನೀಡಿದ್ದಾರೆ.
ಈ ಸಾಲಿಗೆ ಸೇರುವ ಮತ್ತೊಂದು ಅದ್ಭುತ ಸಾಕ್ಷ್ಯಚಿತ್ರ ಸೋಮನಾಥ್ ವಾಘ್‌ಮಾರೆ ಅವರ ‘ಚೈತ್ಯಭೂಮಿ’ (೨೦೨೩).
ಅಂಬೇಡ್ಕರ್ ಅವರ ಶವದಹನವನ್ನು ಕೈಗೊಳ್ಳಲಾದ ಮುಂಬೈಯಲ್ಲಿನ ತಾಣವು ಈಗ ಹೇಗೆ ಒಂದು ಐತಿಹಾಸಿಕ ಸ್ಮಾರಕವಾಗಿ ಮೈದಳೆದು ಲಕ್ಷಾಂತರ ಅನುಯಾಯಿಗಳನ್ನು ಪ್ರೇರೇಪಿಸುತ್ತಿದೆ ಮತ್ತು ಅಂಬೇಡ್ಕರ್ ಆಂದೋಲನದಲ್ಲಿ ತೊಡಗುವಂತೆ ಮಾಡಿದೆ ಎಂಬುದನ್ನು ಈ ಸಾಕ್ಷ್ಯಚಿತ್ರ ಅನಾವರಣ ಗೊಳಿಸುತ್ತದೆ. ಹೀಗೆ ಜನಪ್ರಿಯ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ವೆಬ್-ಸರಣಿಗಳಲ್ಲಿ ಹೆಚ್ಚುತ್ತಿರುವ ಅಂಬೇಡ್ಕರ್ ಅವರ ಉಪಸ್ಥಿತಿಯು, ದಲಿತ-ಬಹುಜನ ಸಮುದಾಯದ ಸಾಂಸ್ಕೃತಿಕ ಮೌಲ್ಯಗಳು ನಿಧಾನವಾಗಿ ಜನಪ್ರಿಯ ಮಾಧ್ಯಮಗಳೊಳಗೆ ಅಂತರ್ಗತವಾಗುತ್ತಿರುವುದನ್ನು ತೋರಿಸುತ್ತದೆ.
ಇದೊಂದು ಸಣ್ಣ ಆರಂಭವಾದರೂ, ಮನರಂಜನಾ ಉದ್ಯಮದ ಪ್ರಜಾ ಪ್ರಭುತ್ವೀಕರಣಕ್ಕೆ ಸಂಬಂಧಿಸಿದ ಸಂವಾದವೊಂದನ್ನು
ಶುರುಮಾಡುವ ಸಾಮರ್ಥ್ಯವನ್ನು ಅದು ಹೊಂದಿದೆ. ಮಾತ್ರವಲ್ಲ, ಸಾಮಾಜಿಕವಾಗಿ ಮೂಲೆಗುಂಪಾಗಿರುವ ಸಮುದಾಯಗಳ ಬಗ್ಗೆ ಮಾತಾಡುವ ಸಾಂಸ್ಕೃತಿಕ ನಿರೂಪಣೆಗಳನ್ನು ಅಳವಡಿಸಿಕೊಳ್ಳುವ ತಾಕತ್ತನ್ನೂ ಹೊಂದಿದೆ. ಹಾಲಿವುಡ್ ನಿರ್ದೇಶಕ ಅವಾ ಡುವೆರ್ನೇ ಅವರ ‘ಆರಿಜಿನ್ ೨೦೨೩’ ಎಂಬ ಹೊಸ ಚಲನಚಿತ್ರದಲ್ಲಿ (ಇಸಬೆಲ್ಲೆ ವಿಲ್ಕರ್ಸನ್ ಅವರ ‘ಕ್ಯಾಸ್ಟ್’ ಎಂಬ
ಕೃತಿಯನ್ನು ಆಧರಿಸಿದ್ದು) ಇಂಥದೊಂದು ಸ್ವೀಕೃತಿ ಅಥವಾ ಪರಿಗಣನೆಯು ಗೋಚರಿಸುತ್ತದೆ; ಯೆಹೂ ದಿಗಳ ಜನಾಂಗೀಯ ತಾರತಮ್ಯ ಮತ್ತು ದ್ವೇಷವನ್ನು ಜಾಗತಿಕ ನೆಲೆಗಟ್ಟಿನಲ್ಲಿ ಅರ್ಥಮಾಡಿಕೊಳ್ಳಲು ಅಂಬೇಡ್ಕರ್ ಅವರನ್ನು ಓರ್ವ ನಿರ್ಣಾಯಕ
ವ್ಯಕ್ತಿಯಾಗಿ ಬಿಂಬಿಸಿರುವ ಚಲನಚಿತ್ರವಿದು.
ನಮ್ಮ ಸಂಸ್ಕೃತಿಯಲ್ಲಿ, ಅದರಲ್ಲೂ ವಿಶೇಷವಾಗಿ ನಮ್ಮ ಚಲನಚಿತ್ರರಂಗದಲ್ಲಿ ಇದುವರೆಗೂ ಸಾಂಪ್ರದಾಯಿಕ ಸಾಮಾಜಿಕ ಗಣ್ಯರ ಪ್ರಾಬಲ್ಯವನ್ನೇ ಕಾಣುತ್ತಿದ್ದೇವೆ ಹಾಗೂ ಅವರ ಸಾಮಾಜಿಕ ಮತ್ತು ರಾಜಕೀಯ ಹಿತಾಸಕ್ತಿಗಳು ಹೆಚ್ಚಿನ ಪ್ರತಿರೋಧವಿಲ್ಲ
ದೆಯೇ ನೆರವೇರಿಸಲ್ಪಡುತ್ತಿವೆ. ಇಂಥ ಮನರಂಜನಾ ಸಂಸ್ಕೃತಿಯನ್ನು, ಸಮಾಜದಲ್ಲಿ ಮೂಲೆಗುಂಪಾಗಿರುವ ಜನಸಮುದಾಯ ಗಳು ಸಹಿಸಿಕೊಂಡು ಯಾವುದೇ ಪ್ರತಿರೋಧವಿಲ್ಲದೆಯೇ ಸ್ವೀಕರಿಸುವಂತಾಗಿದೆ.
ಆದ್ದರಿಂದ, ಈ ವ್ಯವಸ್ಥೆಗೆ ಪ್ರಜಾಸತ್ತಾತ್ಮಕ ಸುಧಾರಣೆಯ ಅಗತ್ಯವಿದೆ. ಬೆಳ್ಳಿತೆರೆಯ ಮೇಲೆ ಅಂಬೇಡ್ಕರ್ ಅವರು ಬಿಂಬಿಸಲ್ಪಡು ವಿಕೆ ಹಾಗೂ ವಿನೂತನ ‘ದಲಿತ ಸಿನಿಮಾ’ ಪ್ರಕಾರದ ಆಗಮನ ಇವು ಹೊಸತೊಂದು ಸಿನಿಮೀಯ ಸಂಸ್ಕೃತಿಯನ್ನು ಕಟ್ಟಿ ಕೊಡಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಈ ವೈಶಿಷ್ಟ್ಯವು ಸಾಮಾಜಿಕ ಹೊಣೆಗಾರಿಕೆಯುಳ್ಳ ಸಿನಿಮಾರಂಗವು ಅಸ್ತಿತ್ವಕ್ಕೆ ಬರುವ
ಸಾಧ್ಯತೆಯನ್ನು ಪ್ರಚೋದಿಸಬಲ್ಲದು.
(ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್)
(ಲೇಖಕರು ಜೆಎನ್‌ಯುನ ರಾಜಕೀಯ ಅಧ್ಯಯನ
ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರು)