Monday, 13th May 2024

ಡಾರ್ಜಿಲಿಂಗ್ ಹಿಮಕಣಿವೆಯ ರಸ್ತೆ ಮತ್ತು ಪುಟಗಳನ್ನು ತಿರುವುತ್ತಾ…

ಇದೇ ಅಂತರಂಗ ಸುದ್ದಿ

vbhaat@me.com

ಈ ಸಲದ ಲೋಕಸಭಾ ಚುನಾವಣೆಯ ಸಮೀಕ್ಷೆ ನಿಮಿತ್ತ ರಾಜ್ಯದ ಹೊರಗೆ ಪ್ರವಾಸ ಮಾಡುವುದಾದರೆ, ಮೊದಲು ಪಶ್ಚಿಮ ಬಂಗಾಳದಲ್ಲಿರುವ ಡಾರ್ಜಿಲಿಂಗ್‌ಗೆ ಹೋಗಬೇಕು ಎಂದು ನಿರ್ಧರಿಸಿದ್ದೆ. ಬೆಂಗಳೂರು ಬಿಸಿಲಿನ ತಾಪದಿಂದ ತತ್ತರಿಸಿರುವಾಗ, ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಅಲ್ಲಿಗೆ ಹೋಗುವುದು ನನ್ನ ಉದ್ದೇಶ ಆಗಿರಲಿಲ್ಲ.

ಅದಕ್ಕೆ ಬಲವಾದ ಕಾರಣವಿತ್ತು. ನಾನು ವಿಶ್ವವಿದ್ಯಾಲಯದಲ್ಲಿ ಓದುವ ದಿನಗಳಲ್ಲಿ (೧೯೮೬ ರಿಂದ ೧೯೮೮) ಡಾರ್ಜಿಲಿಂಗ್ ಹೊತ್ತಿ ಉರಿಯುತ್ತಿತ್ತು. ಸುಭಾಷ್ ಸಿಂಗ್ ನೇತೃತ್ವದಲ್ಲಿ ಗೋರ್ಖಾ ರಾಷ್ಟ್ರೀಯ ವಿಮೋಚನಾ ರಂಗ (ಜಿಎನ್‌ಎಲ್‌ಎಫ್) ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆಯಿಟ್ಟು ಹೋರಾಟ ನಡೆಸಿತ್ತು. ಆ ಹೋರಾಟದ ಕಾವು ಇಡೀ ಡಾರ್ಜಿಲಿಂಗ್ ಜಿಲ್ಲೆಯಾದ್ಯಂತ ಹರಡಿ, ಹಿಂಸೆಯ ರೂಪ ತಾಳಿತ್ತು.

ಪ್ರತಿದಿನ ಹಿಮಪರ್ವತದಿಂದ ಆತಂಕದ ಸುದ್ದಿ ಕರಗಿ ಬರುತ್ತಿತ್ತು. ಆ ಸಮಯದಲ್ಲಿ ಕರ್ನಾಟಕ ಮೂಲದವರೊಬ್ಬರು ಡಾರ್ಜಿ ಲಿಂಗ್ ನ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅವರು ಆ ಹಿಂಸಾಚಾರದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಅಪಾಯ ದಿಂದ ಪಾರಾಗಿದ್ದರು. ಗೋರ್ಖಾ ಹೋರಾಟದಲ್ಲಿ ೧೨೦೦ಕ್ಕೂ ಹೆಚ್ಚು ಮಂದಿ ಸತ್ತಿದ್ದರು. ಆರಂಭದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಅಂದು ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಸರಕಾರ ಸಣ್ಣ ಬೆಂಬಲ ನೀಡಿತ್ತು. ಆದರೆ ಕ್ರಮೇಣ ಹೋರಾಟ ಉಗ್ರರೂಪ ತಾಳಿ, ಪರಿಸ್ಥಿತಿ ಕೈಮೀರಿ ಹೋಗುವ ಸಂದರ್ಭ ಬಂದಾಗ ಮತ್ತು ಅದೊಂದು ಪ್ರಮುಖ ರಾಷ್ಟ್ರೀಯ ಸಮಸ್ಯೆಯಾಗಿ ಮುನ್ನೆಲೆಗೆ
ಬಂದಾಗ, ಪ್ರತ್ಯೇಕ ರಾಜ್ಯ ರಚನೆ ಸಾಧ್ಯವೇ ಇಲ್ಲ ಎಂದು ಸಿಂಗ್‌ಗೆ ಮನವರಿಕೆ ಮಾಡಿಕೊಟ್ಟರೂ ಹೋರಾಟದ ತೀವ್ರತೆ ಸ್ವಲ್ಪವೂ ಕಮ್ಮಿಯಾಗಿರಲಿಲ್ಲ.

ಹೋರಾಟದ ಕಾವು ಅದೆಂಥ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತೆಂದರೆ, ಇಡೀ ಕಣಿವೆ ಜಿಲ್ಲೆ ತಿಂಗಳುಗಟ್ಟಲೆ ಯಾವ ಚಟುವಟಿಕೆಗಳಿಲ್ಲದೇ ಮುಚ್ಚಿತ್ತು. ಇದು ಡಾರ್ಜಿಲಿಂಗ್‌ನ ಎರಡು ಪ್ರಮುಖ ಉದ್ಯಮಗಳ (ಪ್ರವಾಸೋದ್ಯಮ ಮತ್ತು ಟೀ
ಉದ್ಯಮ) ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿತ್ತು. ಪ್ರತ್ಯೇಕ ರಾಜ್ಯ ಬೇಡಿಕೆಯ ಅಪಾಯವನ್ನು ಅರಿತ ಜ್ಯೋತಿ ಬಸು ನೇತೃತ್ವದ ಕಮ್ಯುನಿಸ್ಟ್ ಸರಕಾರ, ಹೋರಾಟವನ್ನು ಹತ್ತಿಕ್ಕಲು ಮುಂದಾಯಿತು. ಅಷ್ಟರೊಳಗೆ ಪರಿಸ್ಥಿತಿಯ ನಿಯಂತ್ರಣ ತಪ್ಪಿಹೋಗಿತ್ತು.

ಗೋರ್ಖಾ ಬೇಡಿಕೆ ರಾಷ್ಟ್ರ ವಿರೋಧಿ ಎಂದು ಕಮ್ಯುನಿಸ್ಟರು ಜರೆದರು. ‘ಡಾರ್ಜಿಲಿಂಗ್ ಅನ್ನು ನಾವು ಕಡೆಗಣಿಸಿಲ್ಲ. ಅದು ಪಶ್ಚಿಮ ಬಂಗಾಳದ ಇತರ ಜಿಲ್ಲೆಗಳಿಗಂತೆ ಇದೆ ಮತ್ತು ಕೆಲವು ಜಿಲ್ಲೆಗಳಿಗಿಂತ ಶ್ರೀಮಂತವಾಗಿದೆ’ ಎಂದು ಬಸು ವಿಧಾನಸಭೆಯಲ್ಲಿ ಹೇಳಿದ್ದು ವಿವಾದಕ್ಕೆ ಕಾರಣವಾಯಿತು. ಇದು ಗೋರ್ಖಾ ನಾಯಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು.

ಇದಕ್ಕೆ ಸಿಂಗ್, ‘ಡಾರ್ಜಿಲಿಂಗ್ ಕೋಲ್ಕೊತಾದಿಂದ ಬಹಳ ದೂರ ಇದೆ. ಅಲ್ಲಿ ಕುಳಿತು ಆಡಳಿತ ನಡೆಸುವವರಿಗೆ ಡಾರ್ಜಿಲಿಂಗ್ ನೆನಪಾಗುವುದಿಲ್ಲ. ಕೋಲ್ಕೊತಾದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾದಾಗ ಮಾತ್ರ ನೀವು ಡಾರ್ಜಿಲಿಂಗ್‌ಗೆ ವಿಶ್ರಾಂತಿಗೆ ಬರುತ್ತೀರಿ.
ಬೆಳಗ್ಗೆ ಚಹ ಕುಡಿಯುವಾಗ ಮಾತ್ರ ನಿಮಗೆ ಡಾರ್ಜಿಲಿಂಗ್ ನೆನಪಾಗುತ್ತದೆ. ಡಾರ್ಜಿಲಿಂಗ್ ಹೀಗೆ ಇರುವುದು ಅವರಿಗೆ ಇಷ್ಟ.
ರಾಜ್ಯ ಸರಕಾರದ ಯಾವ ಅಭಿವೃದ್ಧಿ ಯೋಜನೆಗಳೂ ಡಾರ್ಜಿಲಿಂಗ್ ಅನ್ನು ತಲುಪಿಲ್ಲ. ನಮಗೆ ನಿಮ್ಮ ಆಡಳಿತ ಬೇಕಿಲ್ಲ. ನಮ್ಮ
ಆಡಳಿತವನ್ನು ನಾವೇ ಮಾಡಿಕೊಳ್ಳುತ್ತೇವೆ. ನಮಗೆ ನಿಮ್ಮಿಂದ ಬೇರ್ಪಡಲು ಅವಕಾಶ ಮಾಡಿಕೊಡಿ’ ಎಂದು ಆರ್ಭಟಿಸಿದ್ದರು.

ಎರಡು ವರ್ಷಗಳ ಹಿಂಸಾತ್ಮಕ ಹೋರಾಟದ ಬಳಿಕ, ಪಶ್ಚಿಮ ಬಂಗಾಳ ಸರಕಾರ ಮತ್ತು ಕೇಂದ್ರ ಸರಕಾರ ಬಸವಳಿದಿದ್ದವು.
ಗೋರ್ಖಾ ರಾಷ್ಟ್ರೀಯ ವಿಮೋಚನಾ ರಂಗ ಆ ಎರಡೂ ಸರಕಾರಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಅಷ್ಟೇ ಅಲ್ಲ,
ಹಿಂಸಾತ್ಮಕ ಹೋರಾಟದಲ್ಲಿ ಹಲವು ಗೋರ್ಖಾ ನಾಯಕರು ಪ್ರಾಣ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದರು.
ಪಶ್ಚಿಮ ಬಂಗಾಳ ಸರಕಾರ, ಕೇಂದ್ರ ಸರಕಾರ ಮತ್ತು ಗೋರ್ಖಾ ರಾಷ್ಟ್ರೀಯ ವಿಮೋಚನಾ ರಂಗ ಒಂದು ಒಪ್ಪಂದಕ್ಕೆ ಬರಲು
ನಿರ್ಧರಿಸಿದವು.

ಡಾರ್ಜಿಲಿಂಗ್ ಜಿಲ್ಲೆಗೆ ಅರೆ ಸ್ವಾಯತ್ತ ಸ್ಥಾನಮಾನ ನೀಡಲು ನಿರ್ಧರಿಸಿಲಾಯಿತು. ಆ ಪ್ರಕಾರ, ೧೯೮೮ರ ಜುಲೈನಲ್ಲಿ ಗೋರ್ಖಾ
ರಾಷ್ಟ್ರೀಯ ವಿಮೋಚನಾ ರಂಗ ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಕೈಬಿಟ್ಟಿತು. ಅದಾಗಿ ಒಂದು ತಿಂಗಳಲ್ಲಿ, ಡಾರ್ಜಿಲಿಂಗ್ ಗೋರ್ಖಾ ಹಿಲ್ ಕೌನ್ಸಿಲ್ ಅಸ್ತಿತ್ವಕ್ಕೆ ಬಂದಿತು. ಆ ಕೌನ್ಸಿಲ್‌ಗೆ ನಡೆದ ಚುನಾವಣೆಯಲ್ಲಿ ಸುಭಾಷ್ ಸಿಂಗ್ ಭಾರಿ ಬಹುಮತದಿಂದ
ಆರಿಸಿ ಬಂದು, ಅದರ ಅಧ್ಯಕ್ಷರಾದರು.

೨೦೦೪ರಲ್ಲಿ ಕೌನ್ಸಿಲ್ ಚುನಾವಣೆ ನಡೆಯಬೇಕಿತ್ತು. ಆದರೆ ಆ ಹಿಮಕಣಿವೆ ಜಿಲ್ಲೆಯಲ್ಲಿ ಸಿಂಗ್ ಜತೆ ಸೇರಿಕೊಂಡು ಚುನಾವಣೆ ನಡೆಸದಿರಲು ಸರಕಾರ ನಿರ್ಧರಿಸಿತು. ಟ್ರೈಬಲ್ ಕೌನ್ಸಿಲ್‌ನ ಆರನೇ ಶೆಡ್ಯುಲ್ ರಚನೆಯಾಗುವ ತನಕ, ಸಿಂಗ್ ಅವರೇ ಡಾರ್ಜಿ ಲಿಂಗ್ ಗೋರ್ಖಾ ಹಿಲ್ ಕೌನ್ಸಿಲ್‌ನ ಮುಖ್ಯಸ್ಥರಾಗಿರುತ್ತಾರೆ ಎಂದು ಸರಕಾರ ಘೋಷಿಸಿತು. ಸರಕಾರದ ಈ ನಡೆಯನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ವಿರೋಧಿಸಿದವು.

ಕಾರಣ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಗೂರ್ಖಾಗಳನ್ನು ಬಿಟ್ಟರೆ, ಬೇರೆ ಬುಡಕಟ್ಟು ಜನಾಂಗದವರು ಹೆಚ್ಚಿರಲಿಲ್ಲ. ಸಿಂಗ್ ಇತರ ರಾಜಕಾರಣಿಗಳಿಗಿಂತ ಭಿನ್ನರಾಗಿಲ್ಲ ಎಂಬುದು ಸ್ವತಃ ಗೋರ್ಖಾ ರಾಷ್ಟ್ರೀಯ ವಿಮೋಚನಾ ರಂಗದ ನಾಯಕರಿಗೇ ಅನಿಸಲಾ ರಂಭಿಸಿತು. ಭ್ರಷ್ಟಾಚಾರ, ಅಽಕಾರ ದುರುಪಯೋಗದ ಆರೋಪಗಳು ಕೇಳಿ ಬರಲಾರಂಭಿಸಿದವು. ಸಿಂಗ್ ಅವರ ಬಲಗೈ ಬಂಟ ಎಂದು ಕರೆಯಿಸಿಕೊಂಡಿದ್ದ ಬಿಮಲ್ ಗುರುಂಗ್ ತಿರುಗಿ ಬಿದ್ದ. ಆತ ಸಿಂಗ್ ಅವರನ್ನು ಪದಚ್ಯುತಗೊಳಿಸುವ ತನಕ ವಿರಮಿಸ ಲಿಲ್ಲ. ೨೦೦೮ರಲ್ಲಿ ಕೌನ್ಸಿಲ್ ಅಧ್ಯಕ್ಷ ಸ್ಥಾನಕ್ಕೆ ಸಿಂಗ್ ರಾಜೀನಾಮೆ ನೀಡಿದರು. ಅಷ್ಟೇ ಅಲ್ಲ, ಅವರು ಡಾರ್ಜಿಲಿಂಗ್ ಬಿಟ್ಟು ಜಲಪೈಗುರಿಗೆ ತಮ್ಮ ನಿವಾಸವನ್ನು ಸ್ಥಳಾಂತರಿಸಿದರು.

ಈ ಎಲ್ಲ ವಿದ್ಯಮಾನಗಳಿಂದ ಸಿಂಗ್ ಹೈರಾಣಾಗಿದ್ದರು. ಅವರ ವಿಶ್ವಾಸಾರ್ಹತೆ ಮತ್ತು ಜನಪ್ರಿಯತೆ ರಸಾತಳ ತಲುಪಿತ್ತು.
ಯಾರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರೆಸಿದ್ದರೋ, ಅವರೇ ಈಗ ಟೀಕಾಕಾರರಾಗಿ, ವಿರೋಧಿಗಳಾಗಿ ಪರಿವರ್ತಿತ ರಾಗಿದ್ದರು. ಈ ಮಧ್ಯೆ ತಮಗೆ ದೊರೆತ ಅಪಾರ ಜನಬೆಂಬಲದಿಂದ ಪ್ರೇರಿತರಾದ ಬಿಮಲ್ ಗುರುಂಗ್, ಗೋರ್ಖಾ ಜನ ಮುಕ್ತಿ
ಮೋರ್ಚಾ ಎಂಬ ತಮ್ಮದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಮೂರು ವರ್ಷಗಳವರೆಗೆ ಡಾರ್ಜಿಲಿಂಗ್‌ಗೆ ಕಾಲಿಡದ ಸಿಂಗ್, ೨೦೧೧ರಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಆಗಮಿಸಿದರು. ಅವರ ಪಕ್ಷ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪಽಸಿತು. ದುರ್ದೈವ, ಮೂರೂ ಕ್ಷೇತ್ರಗಳಲ್ಲಿ ಸೋತುಹೋಯಿತು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಸಿಂಗ್ ಅವರ ಪಕ್ಷ ಆ ಮೂರೂ ಕ್ಷೇತ್ರಗಳಲ್ಲಿ ಗೆದ್ದಿತ್ತು.

ಇದರಿಂದ ತೀವ್ರ ಮುಖಭಂಗಕ್ಕೊಳಗಾದ ಸಿಂಗ್, ತಮ್ಮ ಕರ್ಮಭೂಮಿಯಾದ ಡಾರ್ಜಿಲಿಂಗ್ ಅನ್ನು ಬಿಟ್ಟು, ರಾಜಕೀಯ ಸುಪ್ತವಲಯ ಸೇರಿಬಿಟ್ಟರು. ಆ ಹೊತ್ತಿಗೆ ಅವರ ಆರೋಗ್ಯವೂ ಹದಗೆಟ್ಟಿತ್ತು. ಮೂರು ವರ್ಷ ಅವರು ಎಲ್ಲಿದ್ದಾರೆ ಎಂಬುದು ಗೊತ್ತಿರಲಿಲ್ಲ. ೨೦೧೪ರಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಡಾರ್ಜಿಲಿಂಗ್‌ಗೆ ಆಗಮಿಸಿದರು. ಆದರೆ ಚುನಾವಣೆಗೆ ನಿಲ್ಲಲು ಒಬ್ಬ ವ್ಯಕ್ತಿ ಮುಂದೆ ಬರಲಿಲ್ಲ. ಮುಖ ಕಳೆದುಕೊಂಡ ಸಿಂಗ್ ತಾವೇ ಸ್ಪರ್ಧಿಸುವುದಾಗಿ ಹೇಳಿದರು. ಆದರೆ ಅವರ ಆರೋಗ್ಯ ಸಹಕರಿಸಲಿಲ್ಲ. ಕರುಳ ಕ್ಯಾನ್ಸರ್ ಅವರನ್ನು ಹೈರಾಣಾಗಿಸಿತ್ತು.

ಕೊನೆಗೆ ಆ ಚುನಾವಣೆಯಲ್ಲಿ ಜಿಎನ್‌ಎಲ್‌ಎಫ್ ಸ್ಪರ್ಧಿಸಲೇ ಇಲ್ಲ. ಮುಂದಿನ ವರ್ಷ (೨೦೧೫) ಸಿಂಗ್ ಅಸುನೀಗಿದರು. ಅವರ ಮಗ ಮೋಹನ್ ಸಿಂಗ್ ಜಿಎನ್‌ಎಲ್‌ಎಫ್ ಮುಖ್ಯಸ್ಥರಾದರು. ಒಂದು ಕಾಲಕ್ಕೆ ಡಾರ್ಜಿಲಿಂಗ್ ಮತ್ತು ಸಿಂಗ್ ಒಂದೇ ನಾಣ್ಯದ ಎರಡು ಮುಖಗಳಾಗಿದ್ದವು. ಸಿಂಗ್ ಬೆಂಬಲದಿಂದ ಯಾರೇ ನಿಂತರೂ ಚುನಾವಣೆಯಲ್ಲಿ ಆರಿಸಿ ಬರುತ್ತಿದ್ದರು. ಗೋರ್ಖಾ ವಿದ್ಯಮಾನಗಳನ್ನು ವರದಿ ಮಾಡುತ್ತಿದ್ದ ಇಂದರಜಿತ್ ಖುಲ್ಲರ್ ಎಂಬ ಪತ್ರಕರ್ತ ಜಿಎನ್‌ಎಲ್‌ಎಫ್ ಅಭ್ಯರ್ಥಿಯಾಗಿ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ.

ಮುಂದಿನ ಚುನಾವಣೆಯಲ್ಲಿ ಖುಲ್ಲರ್ ಸಿಂಗ್ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಗೆದ್ದಿದ್ದ. ೧೯೯೬, ೧೯೯೮ ಮತ್ತು ೧೯೯೯ರ ಚುನಾವಣೆಯನ್ನು ಜಿಎನ್‌ಎಲ್‌ಎಫ್ ಬಹಿಷ್ಕರಿಸಿತು. ಆದರೆ ಸಿಂಗ್ ಸಿಪಿಎಂ ಜತೆ ಒಳಒಪ್ಪಂದ ಮಾಡಿಕೊಂಡು ಆ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ್ದರು. ಆ ಮೂಲಕ ತಮ್ಮ ಪಕ್ಷ ದುರ್ಬಲಗೊಳ್ಳಲು ಕಾರಣರಾಗಿದ್ದರು. ಗೋರ್ಖಾ ಕೌನ್ಸಿಲ್‌ ನ ಅಧ್ಯಕ್ಷರಾಗಿ ಮುಂದುವರಿಯಲು ಕಾಂಗ್ರೆಸ್ ಸಹಕರಿಸಿದ್ದರಿಂದ, ೨೦೦೪ರಲ್ಲಿ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿ, ಗೆಲುವಿಗೆ ಕಾರಣರಾಗಿದ್ದರು.

ಒಂದು ಕಾಲಕ್ಕೆ ಡಾರ್ಜಿಲಿಂಗ್ ಕಣಿವೆ ಜಿಲ್ಲೆಯ ಆಶಾಕಿರಣ, ಭರವಸೆಯ ತಾರೆ ಎಂದು ಕರೆಯಿಸಿಕೊಂಡಿದ್ದ ಸಿಂಗ್, ತಮ್ಮ ಹೋರಾಟದ ಫಲವಾಗಿ ಹುಟ್ಟಿಕೊಂಡ ಸಂಘಟನೆ ಕಾಲು ಶತಮಾನ ತಲುಪುವ ಹೊತ್ತಿಗೆ, ಒಬ್ಬ ಕೆಟ್ಟ, ಕಳೆಗುಂದಿದ, ಕಳಂಕಿತ,
ಭ್ರಷ್ಟ ನಾಯಕರಾಗಿ ಪರಿವರ್ತಿತರಾಗಿದ್ದರು. ಅವರೇ ತಮ್ಮ ದಾರಿದೀಪ ಎಂದು ಆರಾಽಸಿದ ಗೋರ್ಖಾ ಜನ, ಕೊನೆಕೊನೆಗೆ
ಸಿಂಗ್ ಅವರನ್ನು ಕಂಡರೆ ಅಸಹ್ಯಪಡುವಂತಾದರು. ತಮ್ಮ ನಂಬಿಕೆಯನ್ನು ನುಚ್ಚುನೂರು ಮಾಡಿದ ಅಯೋಗ್ಯ ಎಂದು
ನಿಂದಿಸಲಾರಂಭಿಸಿದರು.

ಮನಸ್ಸು ಮಾಡಿದ್ದರೆ, ಮೊದಲಿನ ಆದರ್ಶಗಳನ್ನೇ ಕಾಪಾಡಿಕೊಂಡಿದ್ದರೆ, ಸಿಂಗ್ ಡಾರ್ಜಿಲಿಂಗ್‌ನಲ್ಲಿ ಅಭಿವೃದ್ಧಿ ಪರ್ವದ ನವ ಅಧ್ಯಾಯವನ್ನೇ ಬರೆಯಬಹುದಿತ್ತು. ಆದರೆ ಅವರು ಅಧಿಕಾರದ ಲಾಲಸೆಗೆ ಬಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿ, ಯಕಃಶ್ಚಿತ್ ರಾಜಕಾರಣಿಯಂತೆ, ಲಂಪಟನಂತೆ ವರ್ತಿಸಿಬಿಟ್ಟರು. ಇವರನ್ನು ನಂಬಿಕೊಂಡರೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ ಎಂಬುದು ಗೋರ್ಖಾ ಮಂದಿಗೆ ಗೊತ್ತಾಗುವ ಹೊತ್ತಿಗೆ ಕಾಲು ಶತಮಾನವೇ ಸಂದುಹೋಗಿತ್ತು.

ಬೆಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ ಮೂರು ಗಂಟೆ ಪ್ರಯಾಣ ಮಾಡಿ, ಬಾಗದೋಗ್ರಾ ವಿಮಾನ ನಿಲ್ದಾಣ ತಲುಪುವ
ಹೊತ್ತಿಗೆ, ಡಾರ್ಜಿಲಿಂಗ್‌ನ ಸುಮಾರು ನಲವತ್ತು ವರ್ಷಗಳ ಇತಿಹಾಸದ ಪುಟಗಳು ನನ್ನ ಮುಂದೆ ಸರಿದುಹೋದವು. ಡಾರ್ಜಿ ಲಿಂಗ್ ಮೇಲ್ನೋಟಕ್ಕೆ ಈಗಲೂ ಸುಂದರವಾಗಿ ಕಾಣುತ್ತದೆ. ಆದರೆ ಅಲ್ಲಿನ ಜನರ ಒಡಲೊಳಗೆ ಸಂಕಟ ತುಂಬಿರುವುದು ಕಾಣಿಸುವುದಿಲ್ಲ. ಹಾಗೆಯೇ ಸಾಕಾರಗೊಳ್ಳದ ಕನಸು, ಭಗ್ನಗೊಂಡ ಆಶಾಗೋಪುರ, ತೀರದ ಶತಮಾನಗಳ ಭರವಸೆಯೂ ಕಾಣುವುದಿಲ್ಲ.

ಒಂದೆಡೆ ಎಲ್ಲ ಇದ್ದೂ ಏನೂ ಇಲ್ಲದ ಭಾವ ಮತ್ತು ತಮ್ಮ ನಂಬಿಕೆಯನ್ನು ಹುಸಿಗೊಳಿಸಿದ ನಾಯಕರ ವರ್ತನೆ ಅವರಲ್ಲಿ
ತೀವ್ರ ಹತಾಶೆ ಮತ್ತು ಜುಗುಪ್ಸೆಯನ್ನು ಮೂಡಿಸಿರುವುದು ಸುಳ್ಳಲ್ಲ. ಡಾರ್ಜಿಲಿಂಗ್ ಎಂಬ ಭಾರತದ ಅತ್ಯಂತ ಸುಂದರ ಕಣಿವೆ-ಪರ್ವತಗಳ ಊರಿನಲ್ಲಿ ಎಷ್ಟೇ ಸುತ್ತಾಡಿ, ಈ ಸಂಗತಿಗಳನ್ನು ಮೆಲುಕು ಹಾಕದಿದ್ದರೆ, ಅಲ್ಲಿನ ಜನರ ತಳಮಳ, ಅಂತರಂಗ, ಆರ್ತನಾದ ಕೇಳುವುದೂ ಇಲ್ಲ, ಅರ್ಥವಾಗುವುದೂ ಇಲ್ಲ. ಡಾರ್ಜಿಲಿಂಗ್ ಇನ್ನೂ ಯಾಕೆ, ಹೀಗೆ ಇದೆ ಎಂಬ ಪ್ರಶ್ನೆಗೆ ಉತ್ತರವೂ ಇತಿಹಾಸದ ಈ ಪುಟಗಳಲ್ಲಿವೆ.

ಅಭಿವೃದ್ಧಿ ಕಾಣದ ಕಣಿವೆ
ಕೋಲ್ಕೊತಾದಿಂದ ಡಾರ್ಜಿಲಿಂಗ್‌ಗೆ ರಸ್ತೆ ಮಾರ್ಗವಾಗಿ ೬೫೬ ಕಿ.ಮೀ. ಕ್ರಮಿಸಬೇಕು. ಆದರೆ ಅಷ್ಟು ದೂರ ಕ್ರಮಿಸಲು ಕನಿಷ್ಠ
ಹದಿಮೂರು ಗಂಟೆಗಳಾದರೂ ಬೇಕು. ಬೆಂಗಳೂರಿನಿಂದ ಬಾಗದೊಗ್ರಾಕ್ಕೆ ವಿಮಾನದಲ್ಲಿ ಮೂರು ಗಂಟೆ ಪ್ರಯಾಣಿಸಿ, ನಂತರ ರಸ್ತೆ ಮಾರ್ಗವಾಗಿ ಸುಮಾರು ಅರವತ್ತೆಂಟು ಕಿ.ಮೀ. ಕ್ರಮಿಸಿದರೆ ಡಾರ್ಜಿಲಿಂಗ್ ಸಿಗುತ್ತದೆ. ಆದರೆ ಆ ಅರವತ್ತೆಂಟು ಕಿ.ಮೀ. ಪ್ರಯಾಣಿಸಲು ಕನಿಷ್ಠ ಎರಡೂವರೆ-ಮೂರು ಗಂಟೆಗಳಾದರೂ ಬೇಕು. ಅದು ಅಲ್ಲಿನ ಹವಾಮಾನ ಮತ್ತು ಟ್ರಾಫಿಕ್ ಅನ್ನು ಅವಲಂಬಿಸಿರುತ್ತದೆ.

ಒಂದು ವಾಹನವಷ್ಟೇ ಹೋಗುವ ಕಿರಿದಾದ ರಸ್ತೆಯಲ್ಲಿ ಎದುರಿನಿಂದ ವಾಹನ ಬಂದರೆ, ಅದಕ್ಕೆ ಜಾಗ ಮಾಡಿಕೊಡಬೇಕು.
ಅಂದರೆ ನಮ್ಮ ವಾಹನವನ್ನು ಪೂರ್ತಿ ನಿಲ್ಲಿಸಿ, ಮೈ ಮೈ ತಾಕುವಷ್ಟು ಅಂತರದಲ್ಲಿ ಪಾಸ್ ಆಗಬೇಕು. ಆ ರಸ್ತೆಯಲ್ಲಿ ಬಸ್ಸು, ಲಾರಿ, ಟೆಂಪೋ ಚಲಿಸಲಾರವು. ಇನ್ನೋವಾ ಕಾರು ಕೂಡ ದೊಡ್ಡದೇ. ಮಾರುತಿ ಆಲ್ಟೋ ಕಾರು ಇದ್ದರೆ ವಾಸಿ, ನಿರಾತಂಕವಾಗಿ
ಹೋಗಬಹುದು. ಅಷ್ಟು ಸಣಕಲು ರಸ್ತೆ. ಒಂದೆಡೆ ಪರ್ವತ, ಮತ್ತೊಂದೆಡೆ ಪ್ರಪಾತ. ಮಾರುಮಾರಿಗೆ ತಿರುವು ಮತ್ತು ಏಕದಂ
ಏರಿ. ಮುಂದಿನಿಂದ ಬರುವವರಿಗೆ ಇಳುಕಲು. ತಿರುವಿನಲ್ಲಿದ್ದಾಗ ಮುಂದಿನಿಂದ ವಾಹನ ಬಂದರೆ, ಡ್ರೈವರ್ ಹೊಸಬನಾದರೆ
ಪಡಚಾ! ಅಂಥ ದುರ್ಗಮ ಮಾರ್ಗ. ಇದು ಒಂದೆಡೆಯಲ್ಲ.

ಇಡೀ ಮಾರ್ಗದುದ್ದಕ್ಕೂ ಹೀಗೆ ಸಂಚರಿಸಬೇಕು. ಈ ಮಾರ್ಗದಲ್ಲಿ ಸಂಚರಿಸುವಾಗ ಮಕೈಬಾರಿ, -ಲ್ಬಾರಿ, ಘೋಮ್, ಕುರ್ಸಿಯಂಗ್ ಎಂಬ ಊರುಗಳು ಸಿಗುತ್ತವೆ. ಅಲ್ಲಿ ಆ ಕಿರಿದಾದ ರಸ್ತೆಗುಂಟ ರೈಲ್ವೆ ಹಳಿಯೂ ಹಾದುಹೋಗುತ್ತದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಮಾರ್ಗವನ್ನು ಅಗಲ ಮಾಡುವುದಾಗಿ ಅಽಕಾರಕ್ಕೆ ಬಂದವರೆಲ್ಲ ಹೇಳುತ್ತಲೇ ಇದ್ದಾರೆ. ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಕೇಂದ್ರ ಮಂತ್ರಿ ಜಸ್ವಂತ್ ಸಿಂಗ್ ಕೂಡ ರಸ್ತೆ ಅಗಲೀಕರಣದ ಭರವಸೆ ನೀಡಿದ್ದರು.

ಆದರೆ ಅವರಿಂದ ಬಾಗದೊಗ್ರಾದಿಂದ ಡಾರ್ಜಿಲಿಂಗ್‌ವರೆಗಿನ ಅರವತ್ತೆಂಟು ಕಿ.ಮೀ. ರಸ್ತೆಯಲ್ಲಿ ಒಂದು ಕಿ.ಮೀ. ದೂರದ
ರಸ್ತೆಯನ್ನೂ ಅಗಲ ಮಾಡಲು ಆಗಲಿಲ್ಲ. ಬಿಜೆಪಿಯಿಂದ ಎಸ್. ಎಸ್.ಅಹ್ಲುವಾಲಿಯಾ ಕೂಡ ಡಾರ್ಜಿಲಿಂಗ್‌ನಿಂದ ಸ್ಪರ್ಧಿಸಿ
ಗೆದ್ದಿದ್ದರು. ಅವರೂ ಅದೇ ರೀಲು ಸುತ್ತಿದ್ದರು. ಸುತ್ತಿದ್ದಷ್ಟೇ ಬಂತು. ಅವರಿಂದಲೂ ಏನೂ ಆಗಲಿಲ್ಲ. ಈಗಿನ ಲೋಕಸಭಾ ಸದಸ್ಯ
ಬಿಜೆಪಿಯ ರಾಜು ಬಿಸ್ತಾ ಅವರಿಂದ ಕೂಡ ಅದೇ ಭರವಸೆ ಬಂತೇ ಶಿವಾಯ್ ಹೆಚ್ಚಿನ ಪ್ರಗತಿಯೇನೂ ಆಗಲಿಲ್ಲ.

ಕಣಿವೆ, ಗುಡ್ಡಗಾಡು ಪ್ರದೇಶ ಮತ್ತು ಪ್ರಪಾತದ ಭೂಭಾಗವನ್ನು ಡಾರ್ಜಿಲಿಂಗ್ ಹೊಂದಿರುವುದು ರಸ್ತೆ ಅಗಲೀಕರಣಕ್ಕೆ ತೊಡಕಾಗಿರುವುದು ನಿಜ. ಆದರೆ ಇದಕ್ಕಿಂತ ಕಿರಿದಾದ ಪ್ರದೇಶಗಳಲ್ಲಿ ಉತ್ತಮ ರಸ್ತೆಯನ್ನು ಮಾಡಿರುವ ಸಾಕಷ್ಟು ನಿದರ್ಶನ ಗಳಿವೆ. ಸಿಂಗ್ ಅವರು ಗೋರ್ಖಾ ಕೌನ್ಸಿಲ್ ಅಧ್ಯಕ್ಷರಾಗಿದ್ದ ಅವಽಯಿಂದ ಡಾರ್ಜಿಲಿಂಗ್‌ಗೆ ಆಧುನಿಕ ಆಸ್ಪತ್ರೆಯನ್ನು ಕಲ್ಪಿಸುವ ಭರವಸೆಯನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ತುರ್ತುಸ್ಥಿತಿಯಲ್ಲಿ ಮಿಲಿಟರಿ ಆಸ್ಪತ್ರೆಯೇ ಗತಿ. ಇಂದಿಗೂ ಆಧುನಿಕ ವೈದ್ಯಕೀಯ ಸೌಕರ್ಯಗಳಿರುವ ಉತ್ತಮವಾದ ಆಸ್ಪತ್ರೆಯನ್ನು ಹೊಂದುವ ಗೋರ್ಖಾ ಜನರ ಆಸೆ ಮರೀಚಿಕೆಯಾಗಿಯೇ ಉಳಿದಿದೆ. ಸಾಮಾನ್ಯ ಸೌಕರ್ಯಗಳಿರುವ ಜಿಲ್ಲಾ ಆಸ್ಪತ್ರೆಯನ್ನು ಬಿಟ್ಟರೆ ಖಾಸಗಿ ಆಸ್ಪತ್ರೆಗಳೇ ಗತಿ.

ಡಾರ್ಜಿಲಿಂಗ್ ಮತ್ತು ಚಹ
ಚಹ ಉದ್ಯಮ ಡಾರ್ಜಿಲಿಂಗ್‌ನ ಜೀವಾಳ. ಡಾರ್ಜಿಲಿಂಗ್ ಮತ್ತು ಚಹ ತಾಯಿ-ಮಗಳು ಇದ್ದ ಹಾಗೆ. ಅಲ್ಲಿನ ಸ್ಥಳೀಯರು ತಾಯಿ-ತಾಯಿ ಇದ್ದ ಹಾಗೆ ಎಂದು ತಮಾಷೆಯಿಂದ ಹೇಳುವುದುಂಟು. ಕಾರಣ ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂದು ಕೇಳಿದರೆ ಏನು ಹೇಳುವುದು ಎಂದು ಗೊತ್ತಾಗದಂತೆ, ಡಾರ್ಜಿಲಿಂಗ್ ಮೊದಲೋ, ಚಹ ಮೊದಲೋ ಎಂದು ಕೇಳಿದರೆ ಅದೇ ಗೊಂದಲ. ಅಷ್ಟರಮಟ್ಟಿಗೆ ಡಾರ್ಜಿಲಿಂಗ್ ಮತ್ತು ಚಹ ಒಂದರಲ್ಲೊಂದು ಮಿಳಿತವಾಗಿವೆ.

ಡಾರ್ಜಿಲಿಂಗ್ ಚಹದ ವಿಶೇಷವೇನೆಂದರೆ ಅದನ್ನು ಬೇರೆಲ್ಲೂ ಬೆಳೆಯಲು ಸಾಧ್ಯವಿಲ್ಲ. ಅಂದರೆ ಡಾರ್ಜಿಲಿಂಗ್‌ನಲ್ಲಿ ಸಿಗುವ ಚಹ
ಜಗತ್ತಿನ ಬೇರೆಲ್ಲೂ ಬೆಳೆಯುವುದಿಲ್ಲ. ಅಲ್ಲಿನ ಚಹದ ಎಲೆಗಳು ಹರಿತ್ತಿನಲ್ಲಿ ಸದಾಕಾಲ ಹಿಮವನ್ನು ಹೀರಿ ಬೆಳೆಯುವುದರಿಂದ,
ವಿಶಿಷ್ಟವಾದ ಸುವಾಸನೆ ಮತ್ತು ಗುಣವನ್ನು ಮೈಗೂಡಿಸಿಕೊಳ್ಳುತ್ತವೆ. ಅಲ್ಲಿನ ಹವಾಮಾನ, ಮಣ್ಣು ಚಹ ಕೃಷಿಗೆ ಹೇಳಿ ಮಾಡಿಸಿದಂತಿದೆ. ಬೇಸಿಗೆಯಲ್ಲೂ ವಾತಾವರಣದಲ್ಲಿ ತೇವಾಂಶವಿರುವುದು ಚಹ ತೋಟಗಳಿಗೆ ಲಾಯಕ್ಕಾಗಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಡಾರ್ಜಿಲಿಂಗ್‌ನ ಚಹ ತೋಟಗಳಂತೆ ಬೇರೆ ಯಾವ ತೋಟಗಳು ಇಲ್ಲದಿರುವುದರಿಂದ
ಅಲ್ಲಿನ ಚಹಕ್ಕೆ ವಿಶೇಷ ಮೆರುಗು. ಅತಿ ಎತ್ತರದಲ್ಲಿರುವ ಚಹ ತೋಟ ಎಂಬ ಅಗ್ಗಳಿಕೆ ಬೇರೆ. ಅಲ್ಲಿನ ಚಹದ ಮೂಲಕವೇ ಡಾರ್ಜಿಲಿಂಗ್‌ನ ಹೆಸರನ್ನು ಕೇಳಿದವರಿದ್ದಾರೆ. ಡಾರ್ಜಿಲಿಂಗ್ ಅನ್ನು ನೋಡದವರು, ಭೇಟಿ ನೀಡದವರು, ಅಲ್ಲಿನ ಚಹದ ಮೂಲಕ ಆ ಊರಿನ ಜತೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಅಸಂಖ್ಯ ಜನರ ಪಾಲಿಗೆ ಬೆಳಗಿನ ಚಹ, ಡಾರ್ಜಿಲಿಂಗ್ ಹೆಸರನ್ನು ಸುಪ್ರಭಾತದಂತೆ ನೆನಪಿಸುತ್ತದೆ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರು ಡಾರ್ಜಿಲಿಂಗ್ ಅನ್ನು ತಮ್ಮ ವಾಸಸ್ಥಾನವನ್ನಾಗಿ ಆರಿಸಿಕೊಂಡರು.

ಭಾರತವನ್ನಾಳಿದ ವೈಸ್‌ರಾಯ್‌ಗಳೆಲ್ಲ ಡಾರ್ಜಿಲಿಂಗ್ ಆತಿಥ್ಯವನ್ನು ಸ್ವೀಕರಿಸಿದವರೇ. ಉತ್ತಮ ಆಡಳಿತಗಾರ ಎಂದು ಕರೆಯಿಸಿ ಕೊಂಡವರನ್ನು ಬ್ರಿಟಿಷರು ಭಡ್ತಿ ನೀಡಿ ಡಾರ್ಜಿಲಿಂಗ್‌ಗೆ ಕಳಿಸಿಕೊಡುತ್ತಿದ್ದರು. ಡಾ.ಆರ್ಚಿಬಾಲ್ಡ್ ಕ್ಯಾಂಪಬೆಲ್ ಎಂಬಾತ ಡಾರ್ಜಿಲಿಂಗ್ ಚಹ ಕೃಷಿಗೆ ಅತ್ಯಂತ ಪ್ರಶಸ್ತ ಸ್ಥಳ ಎಂದು ಹೇಳಿದ. ಅಲ್ಲಿ ತನಕ ಆಸ್ಸಾಂ ಮಾತ್ರ ಚಹ ಕೃಷಿಗೆ ಲಾಯಕ್ಕು ಎಂಬ ನಂಬಿಕೆಯಿತ್ತು. ಆದರೆ ಡಾ.ಕ್ಯಾಂಪಬೆಲ್‌ನ ಸಂಶೋಧನೆ ಡಾರ್ಜಿಲಿಂಗ್ ಚಹದ ಭವಿಷ್ಯ ಮತ್ತು ಖದರನ್ನೇ ಬದಲಿಸಿಬಿಟ್ಟಿತು.

ಇಂದಿಗೂ ಚಹ ಉದ್ಯಮವನ್ನು ಬಿಟ್ಟು ಡಾರ್ಜಿಲಿಂಗ್ ಅನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದಕ್ಕೊಂದು ಗಾಢವಾಗಿ ತಳಕು
ಹಾಕಿಕೊಂಡಿದೆ. ಚಹ ಕಪ್‌ನಲ್ಲಿ ಬಿರುಗಾಳಿ ಎದ್ದರೆ, ಅದರ ಪರಿಣಾಮ ಕಣಿವೆ ಜಿಲ್ಲೆಯಾದ್ಯಂತ ಅನುಭವಕ್ಕೆ ಬರುತ್ತದೆ. ಚಹಾತೋಟದ ಮಾಲೀಕರ ಮತ್ತು ಕೆಲಸಗಾರರನ್ನು ಹೊರಗಿಟ್ಟು ಯಾವ ಚುನಾವಣೆಯೂ ನಡೆಯುವುದಿಲ್ಲ. ರಾಜಕಾರಣದ ಮೇಲೆ ಚಹ ಲಾಬಿ ಅಷ್ಟು ಪ್ರಭಾವಶಾಲಿ. ಒಂದು ಚಹ ಎಸ್ಟೇಟ್ ಮಾಲೀಕ ಕನಿಷ್ಠ ಹತ್ತು ಸಾವಿರ ಮತಗಳ ಮೇಲೆ ನಿಯಂತ್ರಣ ಹೊಂದಿರಬಲ್ಲ. ಹೀಗಾಗಿ ಚಹ ಎಸ್ಟೇಟ್ ಮಾಲೀಕರ ಸಹಾಯ ಇಲ್ಲದೇ ಚುನಾವಣೆ ಸೆಣಸುವುದು ಮತ್ತು ಗೆಲ್ಲುವುದು ಸಾಧ್ಯ ವಿಲ್ಲ. ಯಾರು ಗೆಲ್ಲಬೇಕು ಎಂಬುದನ್ನು ಚಹ ಲಾಬಿ ನಿರ್ಧರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!