Friday, 22nd November 2024

ಬದುಕಿನ ಕತ್ತಲೆಯನ್ನು ಕಳೆಯುವ ಪ್ರಕ್ರಿಯೆ

ದಾಸ್‌ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಪ್ರಜ್ವಾಲಿತೋ ಜ್ಞಾನಮಯ ಪ್ರದೀಪಃ- ದೀಪ ಅಗ್ನಿಯ ಮತ್ತೊಂದು ರೂಪ. ಪ್ರಾಚೀನ ಕಾಲದಿಂದಲೂ ಅಗ್ನಿಯನ್ನು ಆರಾಧಿಸುವ ಸತ್ ಸಂಪ್ರದಾಯ ಭಾರತ ಪರಂಪರೆಯಲ್ಲಿದೆ.

ಋಗ್ವೇದವು ಆರಂಭವಾಗುವುದೇ ಅಗ್ನಿಸೂಕ್ತದಿಂದ. ನಮ್ಮ ಹಿರಿಯರಿಗೆ ಅಗ್ನಿ ಪುರೋಹಿತನೂ ಯಜ್ಞದೇವನೂ ಹೋತಾರನೂ
ಮಾರ್ಗದಾಯಿಯೂ ಆಗಿದ್ದನು. ಅಗ್ನಿಯನ್ನು ದೈವಸ್ವರೂ ಪದಲ್ಲಿ ಕಂಡ ಪ್ರಾಚೀನತೆ ನಮ್ಮದು. ಪ್ರಜ್ವಾಲಿತೋ ಜ್ಞಾನಮಯ ಪ್ರದೀಪಃ ಎನ್ನುತ್ತಾರೆ ವೇದವ್ಯಾಸರು. ದೀಪ ಪ್ರಾಣದ ಸಂಕೇತ. ಜ್ಞಾನದ ಸಂಕೇತ. ಶುಭದ ಸಂಕೇತ. ಅಭಿವೃದ್ಧಿಯ ಸಂಕೇತ.

ಭಾರತೀಯ ಪರಂಪರೆಯಲ್ಲಿ ಹೀಗೊಂದು ಉದಾತ್ತ ಕಲ್ಪನೆ: ಶುಭಂ ಕರೋತಿ ಕಲ್ಯಾಾಣಂ ಆರೋಗ್ಯಂ ಧನಸಂದಮ್ ಶತ್ರು ಬುದ್ಧಿ ವಿನಾಶಾಯ ಸಂಧ್ಯಾಜ್ಯೋತಿ ನಮೋಸ್ತುತೇ॥- ಈ ದೀಪ ನಮ್ಮ ಮನೆಯಲ್ಲಿ ಶುಭವನ್ನು ವೃದ್ಧಿಸಲಿ; ಆರೋಗ್ಯ ಭಾಗ್ಯ ವನ್ನು ಹೆಚ್ಚಿಸಲಿ; ಯಾರ ಮೇಲೂ ಶತ್ರುಬುದ್ಧಿ ಮೂಡದಿರಲಿ. ಯಾವುದೇ ಶುಭ ಕಾರ್ಯಕ್ರಮವನ್ನು ಆರಂಭಿಸುವ ಮುನ್ನ ದೀಪಹಚ್ಚಿ ಪ್ರಾರ್ಥಿಸುವುದು ನಮ್ಮಲ್ಲಿರುವ ಆದಿಯಿಂದ ರೂಢಿ: ಭೋ ದೀಪ ದೇವೀೂಪಸ್ತ್ವಂ ಕರ್ಮಸಾಕ್ಷೀ ಅವಿಘ್ನಕೃತ್‌ ಯಾವತ್ಕರ್ಮ ಸಮಾಪ್ತಿ ಸ್ಯಾತ್, ತಾವತ್ ತ್ವಂ ಸುಸ್ಥಿರೋ ಭವ॥ ದೀಪ ಅಂದರೆ ಬೆಳಕು. ದೀಪದ ಸ್ವಭಾವವೇ ಬಹು
ವಿಭಿನ್ನ, ವಿಶಿಷ್ಟ.

ಉರಿಯುವುದು, ತನ್ನನ್ನು ತಾನು ಬೆಳಗುವುದು, ಬೆಳಗುತ್ತಲೇ ಅರಗಿಸಿಕೊಳ್ಳುವುದು, ಕರಗಿಸಿಕೊಳ್ಳುವುದು ತನ್ಮೂಲಕ ಕತ್ತಲೆ ಯನ್ನು ದಕ್ಕಿಸಿಕೊಳ್ಳುವ ತಾಕತ್ತನ್ನು ಹೊಂದಿ ತಾನೇ ಪಥಿಕನಾಗಿ ಪಥವನ್ನು ತೋರುತ್ತಾ ಬೆಳಕನ್ನೀ ಯುವುದು. ಗಾಢ ಕತ್ತಲೆಯನ್ನೂ ಸಣ್ಣ ದೀಪ ಅರಿಗಿಸಿಕೊಳ್ಳುತ್ತದೆ. ಅದನ್ನೇ ನುಂಗಿ ದಕ್ಕಿಸಿಕೊಳ್ಳುತ್ತದೆ. ದೀಪಕ್ಕೆ ಕತ್ತಲೆಯನ್ನು ನುಂಗುವ, ಸುಡುವ, ಕರಗಿಸುವ ನಿರಂತರವಾದ ಕೊನೆಯಿಲ್ಲದ ದಾಹ! ಈ ದಾಹ ಬೆಳಕಿಗಷ್ಟೇ ಅಲ್ಲ, ಕತ್ತಲೆಗೂ ಇದೆ. ಬೆಳಕು ಮತ್ತಷ್ಟು ಬೆಳಕಾಗುವುದು ಕತ್ತಲೆಯಿದ್ದಾಗಲೇ. ಕತ್ತಲೆಯು ನೀಡುವ ಅವಕಾಶದಲ್ಲಿ ಬೆಳಕು ಬೆಳಗುತ್ತದೆ. ಪ್ರಜ್ವಲಿಸುತ್ತದೆ.

ಕತ್ತಲೆಯಿಲ್ಲದೆ ಬೆಳಕಿಲ್ಲ. ಬೆಳಕಿಲ್ಲದೆ ಕತ್ತಲೆಯಿಲ್ಲ. ಬೆಳಕಿಗೆ ಸಾರ್ಥಕತೆ ಬರುವುದು ಕತ್ತಲೆಯಿದ್ದಾಗ. ಆದ್ದರಿಂದ ಇವರೆಡೂ ಅದ್ಭುತವಾದ ಸೃಷ್ಟಿಗಳು. ಬೆಳಕು ಜ್ಞಾನದ ಪ್ರತಿನಿಧಿಯಾದರೆ, ಕತ್ತಲು ಅಜ್ಞಾನದ ಸಂಕೇತ. ಅಜ್ಞಾನವಿದ್ದಾಗಲೇ ಜ್ಞಾನದ ಮಹತ್ವದ ಅರಿವಾಗುವುದು. ಜ್ಞಾನಗಳಿಕೆಗೆ ಮೂಲ ಅಜ್ಞಾನವೇ. ಅಜ್ಞಾನವನ್ನು ಗುರುತಿಸುವುದು ಕೂಡ ಜ್ಞಾನವೇ. ಕತ್ತಲೆಯಂತೆ ಅಜ್ಞಾನಿಗಳಾದ ನಾವು ಜ್ಞಾನವನ್ನು ಪಡೆಯಬೇಕೆಂಬ ತತ್ವ ದೀಪೋತ್ಸವದಲ್ಲಿದೆ.

ಇದು ಒಮ್ಮೆ ಮಾತ್ರ ನೀಗಿಸಿಕೊಳ್ಳುವ ಕ್ರಿಯೆ. ಮತ್ತೆ ಮತ್ತೆ ಕತ್ತಲು ಆವರಿಸಿದಂತೆ ಅಜ್ಞಾನವೂ ಅಡರುತ್ತಲೇ ಇರುತ್ತದೆ. ಹಾಗೆ ಅಡರಿದಾಗೆಲ್ಲಾ ಬೆಳಕೆಂಬ ಜ್ಞಾನದೀಪವನ್ನು ಹಚ್ಚುತ್ತಲೇ ಇರಬೇಕು. ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಅದಕ್ಕಾಗಿ ಪ್ರತಿವರ್ಷವೂ ದೀಪೋತ್ಸವ.

ದೀಪವನ್ನು ಬೆಳಗಿ ಬೆಳಕನ್ನು ಪಡೆಯುತ್ತಾ ಕತ್ತಲೆಯನ್ನು ಹೋಗಲಾಡಿಸುವ ಪ್ರಯತ್ನ ನಿರಂತರವಾದುದು. ಹೀಗೆ ಬೆಳಗುವುದರಲ್ಲೇ ಮನುಷ್ಯ ಬದುಕಿನ ಪಾಪಗಳ ಲೆಕ್ಕವೂ ಚುಕ್ತವಾಗುತ್ತಾ ಹೋಗುತ್ತದೆ. ಹೌದು ನಮ್ಮ ಪಾಪವನ್ನು ತೀರಿಸಿ ಕೊಳ್ಳಲು ದೀಪವನ್ನು ಉರಿಸಬೇಕು. ಆ ಮುಖೇನ ಅಂಧತ್ವವನ್ನು ಕಳೆದುಕೊಳ್ಳಬೇಕು. ನಮ್ಮ ಸುಖ-ದುಃಖ, ನೋವು-ನಲಿವು, ಹುಟ್ಟು-ಸಾವು ಎಲ್ಲ ಸಂದರ್ಭಗಳಲ್ಲೂ ಅಗ್ನಿಯ ಅಗತ್ಯವು ಅನಿವಾರ್ಯವಾಗಿದೆ.

ವಿದ್ಯುತ್ ರೂಪದಲ್ಲೂ ಅದು ಗೋಚರವಾಗುತ್ತದೆ. ಉದರದಲ್ಲೂ ಅಗ್ನಿಯಿದೆ. ಸೇವಿಸಿದ ಆಹಾರ ಪಚನವಾಗಲೂ ಉದರಾಗ್ನಿ
ಬೇಕು. ತನೂನಪಾತ್ ಎಂಬುದು ಅಗ್ನಿಗೆ ಪರ್ಯಾಯ ಪದ. ತನು ಅಂದರೆ ಶರೀರ. ನಪಾತ್ ಅಂದರೆ ಪಾತವಾಗದಿರುವುದು. ಶರೀರವನ್ನು ಬೀಳದಂತೆ ನೋಡಿಕೊಳ್ಳುವುದೂ ಅಗ್ನಿಯೇ. ಆದ್ದರಿಂದ ಅಗ್ನಿ ಜೀವಸ್ವರೂಪಿ. ಈ ಶರೀರದ ನಿರಂತರವಾದ ಚಾಲನೆಗೆ ಅಗ್ನಿ ಆವಶ್ಯಕತೆಯಿದೆ.

ಅಗ್ನಿಬಲವೆಂದರೆ ಬೌದ್ಧಿಕ ಬಲ. ಇದರಿಂದ ಜ್ಞಾನದ ವೃದ್ಧಿಯಾಗುತ್ತದೆ. ಅಗ್ನಿಯ ಬೆಳಕಿನಲ್ಲಿ ಏಳು ಬಣ್ಣಗಳಿವೆ. ಏಳು
ಜಿಹ್ವೆಗಳಿವೆ. ಅವು ನಮ್ಮ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ, ಮನಸ್ಸು, ಅಹಂಕಾರಗಳ ಗ್ರಹಣ ಶಕ್ತಿಯನ್ನು ಅಭಿವ್ಯಕ್ತಿಸು ತ್ತದೆ. ದೀಪದಿಂದಲೇ ದೀಪವನ್ನು ಬೆಳಗುವುದು. ಆದ್ದರಿಂದ ದೀಪ ಅನಂತವಾದದುದು. ಪೂರ್ಣವಾದುದು. ಎಷ್ಟು ದೀಪವನ್ನೂ ಬೆಳಗಿದರೂ ಬೆಳಕು ಖಾಲಿಯಾಗುವುದಿಲ್ಲ. ಬೆಳಗಿದಷ್ಟೂ ಬೆಳಕಾಗುವ ಬೆಳಕು ಕತ್ತಲೆಯನ್ನು ಓಡಿಸುತ್ತದೆ. ಹಾಗೆಯೇ ಓದಿದಷ್ಟೂ ಜ್ಞಾನ ಹಿಗ್ಗುತ್ತದೆ.

ಜ್ಞಾನದ ದೀಪವನ್ನು ಹಚ್ಚಿ ಬೆಳಕನ್ನು ಕಾಣುತ್ತಾ ಎಲ್ಲರಲ್ಲೂ ಇರುವ ಅಜ್ಞಾನವನ್ನು ದಮನಿಸಿ ಪರಸ್ಪರ ಜ್ಞಾನವೆಂಬ ಬೆಳಕಿನೊಂದಿಗೆ ಬೆಳಗುವ ಈ ದೀಪೋತ್ಸವ ಮನುಷ್ಯನ ಜ್ಞಾನವಿಕಾಸದ ಪಥವೂ ಆಗಿದೆ. ಜ್ಞಾನಮಾರ್ಗದ ಏರುದಾರಿಯ ಕಥನವೂ ಅಹುದು. ಮನುಷ್ಯ ಸಂಕುಲದ ವಿಕಾಸವೂ ಇದರಲ್ಲಡಗಿದೆ. ದೀಪಾವಳಿಯು ಕಾರ್ತೀಕ ಮಾಸದ ಪಾಡ್ಯದಿಂದ
ಆರಂಭವಾಗಿ ಆರಾಧಿಸಲ್ಪಡುವ ಈ ಉತ್ಸವದ ಮುಖ್ಯ ಮೂಲಧ್ಯೇಯವೇ ಜಗತ್ತನ್ನಾವರಿಸಿದ ಕತ್ತಲೆಯನ್ನು ದೂರಮಾಡಲು ಪ್ರಯತ್ನಿಸುವುದು. ತನ್ಮೂಲಕ ಬದುಕಿನ ಕತ್ತಲೆಯನ್ನು ನೀಗಿಸಿಕೊಳ್ಳೋದು. ಈ ಸತ್ಪ್ರಯತ್ನ ಒಂದು ದಿನಕ್ಕೆ ಮಾತ್ರ ಸೀಮಿತ ವಲ್ಲ, ಪ್ರತಿದಿನವೂ ಪ್ರತಿಗಳಿಗೆಯೂ.

ಪ್ರತಿ ಮನೆಯಲ್ಲೂ. ಆದರೆ ಉತ್ಸವ ಮಾತ್ರ ವರ್ಷದಲ್ಲಿ ಒಂದು ತಿಂಗಳು ಮಾತ್ರ. ಅದೂ ಕಾರ್ತಿಕ ಮಾಸದಲ್ಲಿ. ಯಾಕೆಂದರೆ ಅಗ್ನಿದೇವರ ಅವತಾರವಾದ ಕಾಲವಿದು. ಈ ಮಾಸದಲ್ಲೇ ದೀಪೋತ್ಸವ, ಪ್ರಬೋಧೋತ್ಸವ, ಲಕ್ಷ್ಮೀ ಪೂಜೆ, ಗೋಪೂಜೆ, ತುಳಸೀ ಮದುವೆ, ತ್ರಿಪುರೋತ್ಸವ ಧಾತ್ರಿಪೂಜೆ, ಹೊಸ ವಸ್ತ್ರಧಾರಣೆಯೇ ಮುಂತಾದ ಸತ್ಕರ್ಮಗಳು ಅನಾವರಣಗೊಂಡು  ಆಚರಿಸ ಲ್ಪಡುತ್ತವೆ. ಭಾರತದೆಲ್ಲೆಡೆ ಪ್ರತಿ ದೇವಸ್ಥಾನಗಳಲ್ಲಿ ಈ ಉತ್ಸವ ಬಹು ಸಂಭ್ರಮದಲ್ಲಿ ನಡೆಯುತ್ತದೆ. ಧರ್ಮಸ್ಥಳ, ಉಡುಪಿ, ಮುಂತಾದ ಕಡೆಗಳಲ್ಲಿ ಲಕ್ಷದೀಪೋತ್ಸವ ಅದ್ಧೂರಿಯಾಗಿ ನಡೆಯುತ್ತದೆ.

ಒಂದರಿಂದ ಲಕ್ಷದವರೆಗೆ ದೀಪ ಬೆಳಗಿ ಆಚರಿಸಲಾಗುತ್ತದೆ. ಮನೆಮನೆಗಳಲ್ಲಿ ದೀಪದ ಆರಾಧನೆ ನಡೆಯುತ್ತದೆ. ಪಾಪ
ಉರಿಯುವುದು ದೀಪ ಉರಿಯುವುದರಿಂದ. ಎಂಟು ದಿಕ್ಕಿಗೂ ಬೆಳಕನ್ನು ನೀಡಲೆಂದು ಎಂಟು ಭುಜಗಳುಳ್ಳ ಆಕಾಶ ದೀಪವನ್ನು ಬೆಳಗುವುದು ಶಾಸ್ತ್ರೀಯವಾದುದು. ಆಕಾಶದೀ ಪಂ ಯೋ ದದ್ಯಾಾತ್ ಮಾಸಮೇಕಂ ಹರಿಂ ಪ್ರತಿ ಮಹತೀಂ ಶ್ರೀಯಮಾಪ್ರೋತಿ ರೂಪ ಸೌಭಾಗ್ಯ ಸಂಪದಾಮ್॥

ಇದರಿಂದ ಅಷ್ಟಲಕ್ಷ್ಮೀಯರು ಮನೆಯಲ್ಲಿ ವಾಸಮಾಡುತ್ತರೆಂಬ ನಂಬಿಕೆ ನಮ್ಮದು. ಹಸುವಿನ ತುಪ್ಪದಲ್ಲಿ ದೀಪವನ್ನು
ಹಚ್ಚಿದರೆ ಜ್ಞಾನಪ್ರಾಪ್ತಿ, ಎಳ್ಳೆಣ್ಣೆಯದ್ದಾದರೆ ಸಂಪತ್ತು ಪ್ರಾಪ್ತಿ ಎನ್ನುತ್ತದೆ ಧರ್ಮಶಾಸ್ತ್ರ. ಇದು ಹಿಂದೂಗಳಿಗೆ ಮಾತ್ರವಲ್ಲ, ಎಲ್ಲಾ ಧರ್ಮೀಯರಿಗೂ ಪವಿತ್ರವಾದ ಹಬ್ಬ. ಚರ್ಚಿನಲ್ಲಿ ಮಾಡುವ ಪ್ರಾರ್ಥನೆಯ ಸಮಯದಲ್ಲಿ ಮೇಣದ ಬತ್ತಿಯನ್ನು ಬೆಳಗುತ್ತಾರೆ.

Every one that doeth evil hatest light ಕೆಟ್ಟದ್ದನ್ನು ಮಾಡುವವರು ಬೆಳಕನ್ನು ದ್ವೇಷಿಸುತ್ತಾರೆಂದು ಬೈಬಲ್ ಹೇಳುತ್ತದೆ. ಕ್ರೈಸ್ತರ ದೇವರು I am the Light of World ಎನ್ನುತ್ತದೆ. ನಾನು ಜಗದ ಬೆಳಕು; ನನ್ನನ್ನು ಅನುಸರಿಸುವವನು ಬದುಕಿನಲ್ಲಿ ಬೆಳಕನ್ನು ಕಾಣುತ್ತಾನೆ ಎನ್ನುತ್ತದೆ. ವೇದದಲ್ಲಿ ಹೇಳಿದಂತೆ ಸಪ್ತಜಿಹ್ವೆಯ ಸಂಕೇತದ ಪ್ರತೀಕವಾಗಿ ಏಳು ಮೇಣದ ಬತ್ತಿಗಳನ್ನು ಚರ್ಚಿನಲ್ಲಿ ಹಚ್ಚಲಾಗುತ್ತದೆ.

ಅಸತ್ ರೂಪಿಯಾದ ಶರೀರದಲ್ಲಿ ಜ್ಞಾನರೂಪಿಯಾದ ಸತ್ ರೂಪಿಯಾದ ಬೆಳಕನ್ನು ಕಾಣುವ ಹಂಬಲ, ವಾಂಛೆಗೆ ಕೊನೆಯಿಲ್ಲ. ಜಗತ್ತನ್ನು ಆವರಿಸಿದ ದುಷ್ಟಶಕ್ತಿಗಳನ್ನು ನಿಗ್ರಹಿಸುವಂತೆ ದೀಪವನ್ನು ಬೆಳಗೋಣ. ನಮ್ಮನ್ನು ಕಾಡುವ ಭಯವನ್ನು ಓಡಿಸಲು ಈ ಉತ್ಸವ ಪರ್ವದಲ್ಲಿ ಎಲ್ಲರೂ ಒಂದಾಗೋಣ. ಪ್ರತಿಕ್ಷಣವೂ ದೀಪವನ್ನು ಬೆಳಗಿ ಎಲ್ಲರನ್ನೂ ಎಲ್ಲವನ್ನೂ ಕಾಣುವ ಈ ಉತ್ಸವ ಬಹಿರಂಗವಾಗಿ ಒಂದು ತಿಂಗಳು ನಡೆದರೂ ಅಂತರಂಗದಲ್ಲಿ ನಿತ್ಯವೂ ನಡೆಯಲಿ.

ಅದಲ್ಲಿ ಜಾತಿಮತಧರ್ಮಗಳ ಬೇಧವಿಲ್ಲದೆ ಎಲ್ಲರೂ ಭಾಗಿಯಾಗಲಿ. ಕವಿ ಜಿಎಸ್ಸೆಸ್ ಅಂದಂತೆ, ಈ ಕತ್ತಲೆಗೆ ಕೊನೆಯಿರದ ಬಾಯಾರಿಕೆ/ ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ/ ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು/ ಇನ್ನೂ ಬೇಕು ಎನ್ನುವ ಬಯಕೆ. ಹೌದು, ಬೆಳಕಿಗೆ ಕತ್ತಲು, ಕತ್ತಲಿಗೆ ಬೆಳಕು- ಪರಸ್ಪರ ಒಂದನ್ನೊಂದು ಅಗಲಿರದ ಪ್ರೀತಿ. ಒಳಗೊಳಗೇ ಮತ್ಸರ. ನುಂಗಿಬಿಡುವ ದ್ವೇಷ. ಒಳಗೊಳಗೇ ಒಂದು ಇನ್ನೊಂದನ್ನು ದಮನಿಸುವ ಹಠ, ಛಲ. ಆದರೆ, ಕತ್ತಲೆಗೆ ಅರ್ಥ ಬರುವುದು ಬೆಳಕಿದ್ದಾಗ.

ಬೆಳಕಿಗೆ ಅರ್ಥ ಸ್ಫುರಿಸುವುದು ಕತ್ತಲೆಯಲ್ಲಿ. ಇವೆರಡೂ ಬದುಕಿಗೆ ಬೇಕು. ಬೆಳಕನ್ನು ಆರಾಧಿಸುವುದೆಂದರೆ ಕತ್ತಲನ್ನೂ
ಆರಾಧಿಸುವುದೆಂದೇ ಅರ್ಥ. ಆದರೆ, ತಮಸೋ ಮಾ ಜ್ಯೋತಿರ್ಗಮಯ- ಬದುಕಿನ ಕತ್ತಲೆಯನ್ನು ದಾಟಿ ಬೆಳಕನ್ನು ಎಲ್ಲರೂ ಕಾಣುವಂತಾಗಲಿ.

ಕೊನೆಯ ಮಾತು: ನೆನಪಿಸಿಕೊಳ್ಳಿ: ಕೊರೊನಾ ಪೀಡೆಯ ಆರಂಭದ ಮಾರ್ಚ ತಿಂಗಳಲ್ಲಿ ಮೋದಿಯವರು ಮನೆಯ ಮುಂದೆ ದೀಪವನ್ನು ಉರಿಸಿ ಎಂದು ಹೇಳಿದಾಗ ಇಡಿಯ ಭಾರತ ಎಲ್ಲ ವೈಮನಸ್ಸನ್ನು ಮರೆತು ದೀಪವನ್ನು ಬೆಳಗಿತ್ತು. ದೀಪ ಯಾರಿಗೆ ಬೇಡ ಹೇಳಿ? ಬೆಳಕೇ ಬೇಡವೆನ್ನುವವನು ಈ ಜಗತ್ತಿನಲ್ಲಿ ಸಿಗುವನೇ? ಅಂಥವ ಕತ್ತಲೆಯನ್ನು ಆರಾಧಿಸುತ್ತಾನೆಯೇ? ಹಾಗೂ ಕತ್ತಲೆಯನ್ನು ಆರಾಧಿಸುವವರು ರಕ್ಕಸರೇ ಸರಿ. ಯಾವ ಜಾತಿ ಮತ ಧರ್ಮಗಳಿಗೆ ದೀಪ ಬೇಡವೆನ್ನಲು ಸಾಧ್ಯವಿದೆ? ಬೆಳಕು ಬೇಡವೆನ್ನುವ ಧೈರ್ಯ ಯಾರಲ್ಲೂ ಹುಟ್ಟುವುದು ಸಾಧ್ಯವೇ ಇಲ್ಲ! ಆದ್ದರಿಂದ ಈ ದೀಪೋತ್ಸವ ಯಾವ ಮತ ಧರ್ಮಗಳ ಹಂಗಿಲ್ಲದೆ ಆಚರಣೆಗೊಳಪಡಬೇಕಾಗಿದೆ. ಎಲ್ಲರೂ ಆರಾಧಿಸಬೇಕಾಗಿದೆ. ಈ ಹಿನ್ನೆೆಲೆಯಲ್ಲಿ ದೀಪೋತ್ಸವವೆಂಬುದು ವಿಶ್ವ ಯೋಗ ದಿನ’ದಂತೆ ವಿಶ್ವದೆಲ್ಲೆಡೆ ಯಾವ ಬಂಧನವಿಲ್ಲದೆ ಎಲ್ಲರೂ ಒಂದು ದಿನ ಆಚರಿಸುವ ಸಂಭ್ರಮವಾಗಬೇಕಿದೆ; ಎಲ್ಲ
ಬಂಧನಗಳನ್ನೂ ಕಳಚಿಟ್ಟು!