ಅಭಿಮತ
ತುರುವೇಕೆರೆ ಪ್ರಸಾದ್
ನಟ ದರ್ಶನ್ ಮತ್ತು ಅವರ ಗ್ಯಾಂಗ್ ವ್ಯಕ್ತಿಯೊಬ್ಬರನ್ನು ಅತ್ಯಂತ ಅಮಾನುಷವಾಗಿ, ಬರ್ಬರವಾಗಿ ಹತ್ಯೆ ಮಾಡಿದೆ ಎಂಬ ಆರೋಪ ಹೊತ್ತು ನಿಂತಿದೆ. ಇದರ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಜೀವಪರರೆಲ್ಲರೂ ಮನುಷ್ಯತ್ವದ ಉಳಿವಿನ ದೃಷ್ಟಿಯಿಂದ ಇಂತಹ ಕೃತ್ಯಗಳನ್ನು ಖಂಡಿಸಲೇ ಬೇಕು, ಜೊತೆಗೆ ಸಮಾಜ ಇಂತಹ ಘಟನೆಗಳಿಂದ ಪಾಠ ಕಲಿಯಬೇಕು, ಸಮಾಜದ ದುಷ್ಟ ಶಕ್ತಿಗಳು ತಮ್ಮ ನೀಚ ಪ್ರವೃತ್ತಿಯನ್ನು ಬದಲಿಸಿಕೊಳ್ಳಬೇಕು, ಅಲ್ಲದೆ ಇಂತಹ ಪ್ರವೃತ್ತಿ ಮೊಳಕೆಯೊಡೆದು ಹೆಮ್ಮರವಾಗಿ ತಮ್ಮ ಪರಮನೀಚತನದ ದರ್ಶನ ಮಾಡಿಸುವ ಮುಂಚೆ ಅವನ್ನು ಸಾಮಾಜಿಕ ಸುಧಾರಣೆಗಳ ಮೂಲಕ ಪರಿವರ್ತಿಸಬೇಕು.
ನಮ್ಮ ಸಮಾಜ ಹಾಗೂ ನಮ್ಮ ಯುವಜನತೆ ಹೇಗೆ ಹೀಗಾಯಿತು? ಇಷ್ಟು ರಸಾತಳಕ್ಕೆ ಇಳಿದಿದ್ದಾದರೂ ಹೇಗೆ? ಮನುಷ್ಯನೊಬ್ಬನ ಹಸಿ ಹಸಿ ಮಾಂಸ, ಬಿಸಿ ಬಿಸಿ ರಕ್ತವನ್ನು ನೋಡಿ ಸಂಭ್ರಮಿಸುವ ವಿಕೃತಿಗೆ, ಅಸಹ್ಯಕರ ಮನಸ್ಥಿತಿಗೆ ಮನುಷ್ಯನ ಮನಸ್ಸು ತಲುಪಿದ್ದಾದರೂ ಹೇಗೆ?ಎಂದು ಯೋಚಿಸಿದರೆ ಆಶ್ಚರ್ಯ, ಆಘಾತ ಎರಡೂ ಆಗುತ್ತದೆ. ಮನುಷ್ಯನ ಮೆದುಳಿನಲ್ಲಿ ಅವನ ಜೀವನಕ್ರಮ ಮತ್ತು ನಡೆವಳಿಕೆಯ ಒಂದು ನಕ್ಷೆ ರೂಪುಗೊಂಡಿರುತ್ತದೆ.
ಅವನು ಹುಟ್ಟಿದಾಗಿನಿಂದ ಅವನು ಬೆಳೆದ ಪರಿಸರ, ಆಚಾರ, ವಿಚಾರ, ನಂಬಿಕೆಗಳು, ರೀತಿ, ರಿವಾಜುಗಳು ಇವುಗಳಿಗೆ ತಕ್ಕಂತೆ ಈ ಮ್ಯಾಪಿಂಗ್ ಆಗಿರುತ್ತದೆ. ಇದರ ಆಧಾರದ ಮೇಲೆಯೇ ಮನುಷ್ಯ ತನ್ನ ಕ್ರಿಯೆಗಳನ್ನು ನಡೆಸುತ್ತಾನೆ ಮತ್ತು ಘಟನೆಗಳಿಗೆ ಪ್ರತಿಕ್ರಿಯಿಸುತ್ತಾನೆ. ಇದು ಅತ್ಯಂತ ಪ್ರಭಾವಶಾಲಿ ಯಾಗಿದ್ದು ತಕ್ಷಣಕ್ಕೆ ಬದಲಾಗುವಂತಹುದಲ್ಲ. ಈ ವಿಶ್ಲೇಷಣೆಯನ್ನು ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಂ ಮಿಂಗ್ ಪರಿಭಾಷೆಯಲ್ಲಿ ಟ್ರಾನ್ಸಾಕ್ಷನಲ್ ಅನಾಲಿಸಿಸ್ ಎನ್ನುತ್ತಾರೆ.
ನಮ್ಮ ಸಮಾಜ ಮತ್ತು ಇಲ್ಲಿನ ಸಾರಸ್ವತ, ಜನಪದೀಯ ಸಾಂಸ್ಕೃತಿಕ ಬದುಕು ಹತ್ತಾರು ಪೀಳಿಗೆ ಯುದ್ದಕ್ಕೂ ಭಕ್ತಿ, ಶ್ರದ್ದೆ, ಕರುಣೆ, ಉದಾರತೆ ಮೊದಲಾದ ಉತ್ತಾತ್ತ ಗುಣಗಳ ಹಾಗೂ ಒಳ್ಳೆಯ ಭಾವನೆಗಳ, ಆದರ್ಶ ನಡವಳಿಕೆಗಳ ಮಾದಿರಗಳನ್ನು ಪೋಷಿಸುತ್ತಾ ಬಂದಿದೆ. ಹಾಗಾಗಿ ಇಂತಹದೊಂದು ಸಂಸ್ಕೃತಿ ಪರ, ನೆಲಮೂಲ, ಮಾನವೀಯ ಮ್ಯಾಪಿಂಗ್ ನಮ್ಮ ಮೆದುಳಿನಲ್ಲಿ ಇರಬೇಕಾಗಿತ್ತು. ಆದರೆ ಇದು ಎಲ್ಲೋ ಒಂದು ಕಡೆ ಮುಕ್ಕಾಗುತ್ತಿದೆ ಯೇನೋ ಎನಿಸುತ್ತಿದೆ.
ಆಧುನಿಕತೆಯ ವಿಕಾರಗಳು ಮತ್ತು ಮಾಧ್ಯಮದ ಅತಿರಂಜಕತೆ, ಅಗತ್ಯಕ್ಕೆ ಮೀರಿದ ತೆರೆದು ಕೊಳ್ಳುವಿಕೆಯ -ಲವಾಗಿ ಈ ಹಿಂದಿನ ವಿಚಾರಾತ್ಮಕ, ವಿವೇಕಯುಕ್ತ ನಕ್ಷೆ ಅಳಿಸಿಹೋಗಿದೆ. ಅದರ ಬದಲಿಗೆ ಕೋಪ-ತಾಪ, ದ್ವೇಷ, ಹಿಂಸೆ, ವಿಕೃತ ನಡವಳಿಕೆಗಳು ನಮ್ಮ ಬಹುತೇಕ ಯುವಜನರ ಮೆದುಳಿ ನಲ್ಲಿ ಹೊಸ ಮ್ಯಾಪಿಂಗ್ ಆಗಿ ಅಚ್ಚಾಗಿ ಹಿಂಸೆಯನ್ನು ಆನಂದಿಸುವ, ವಿಕೃತ ಕೃತ್ಯಗಳನ್ನು ಬೆಂಬಲಿಸುವ ಒಂದು ತರ್ಕಬದ್ಧ ಸರಣಿಯನ್ನು ಪ್ರಜ್ಞಾ ಪೂರ್ವಕವಾಗಿಯೇ ಬೆಳೆಸುತ್ತಾ ಬಂದಿದೆ. ಇದು ನಮಗೆ ಮಾತ್ರವಲ್ಲ, ಮನುಕುಲಕ್ಕೇ ಒಂದು ಅಪಾಯಕಾರಿಯಾದ ಬೆಳವಣಿಗೆ ಆಧುನಿಕತೆ, ತಂತ್ರಜ್ಞಾನ ಬೆಳೆದಂತೆಲ್ಲ ಸಿನಿಮಾ ಗಳಲ್ಲಿನ ಹಿಂಸಾದೃಶ್ಯಗಳು, ವಿಕೃತಿಗಳೂ ನಿಯಂತ್ರಣಕ್ಕೆ ಸಿಕ್ಕದಾಗಿವೆ.
ಹಿಂದಿನಂತೆ ಸಂಸಾರಕ್ಕೆ, ಸಮಾಜಕ್ಕೆ ಸಂದೇಶ ಹೇಳುವ ಚಿತ್ರಗಳು ಯಾರಿಗೂ ಬೇಡವಾಗಿದೆ. ಇದಕ್ಕೆ ಕಾರಣ ನಿರಂತರವಾದ ಹಿಂಸೆ ಮತ್ತು ವಿಕೃತಿಗಳ ಪ್ರಭಾವದಿಂದ ಯುಕ್ತಾಯುಕ್ತತೆಯ ಪರಿಜ್ಞಾನವನ್ನು ಕಳೆದುಕೊಂಡಿ ರುವುದು. ಹಿಂದೆ ನಟರು ಪಾತ್ರಗಳಲ್ಲಿ ಪರಕಾಯಪ್ರವೇಶ ಮಾಡಿ ಅಭಿನಯಿ ಸುತ್ತಿದ್ದರು. ಅಂತಹ ನೈಜ, ಮನಮುಟ್ಟುವ, ಅನುಕರಣೀಯ ಅಭಿನಯ ಅದು. ಅದು ನಮ್ಮ ಈ ಹಿಂದಿನ ದೇಶೀಯ ಸಾಂಸ್ಕೃತಿಕ ಮನಸ್ಥಿತಿಗೆ( ಮ್ಯಾಪಿಂಗ್ಗೆ) ಒಗ್ಗುವಂತಾದ್ದಾಗಿತ್ತು. ಹಾಗಾಗಿ ಅದೊಂದು ಆರೋಗ್ಯಪೂರ್ಣ ಮನರಂಜನೆಯಾಗಿತ್ತು. ನಟರು ಸಿನಿಮಾದಲ್ಲಿನ ತಮ್ಮ ಆದರ್ಶ ನಾಯಕನ ಪಾತ್ರಕ್ಕೆ ತಕ್ಕಂತೆ ನಿಜಜೀವನದಲ್ಲೂ ನಡೆದುಕೊಳ್ಳುತ್ತಿದ್ದರು. ಈಗಿನ ದುರಂತವೆಂದರೆ ಅದರ್ಶದ ಪರಿಕಲ್ಪನೆಯೇ ಬದಲಾಗಿರುವುದು.
ಹಿಂಸೆ, ದ್ವೇಷ, ಇನ್ನೊಬ್ಬರನ್ನು ಅವಹೇಳನ ಮಾಡುವುದು, ಶ್ರೇಷ್ಠತೆಯ ವ್ಯಸನದಿಂದ ಮೆರೆಯುವುದು, ಶ್ರೀಮಂತಿಕೆಯ ಅಹಂಕಾರ, ಧೀಮಾಕಿನಿಂದ ಮನುಷ್ಯ ಜೀವಿಗಳನ್ನು ಯಕಶ್ಚಿತ್ ಹುಳಗಳಂತೆ ಕಾಣುವುದು ಇವೇ ಅದರ್ಶ ಎನಿಸುತ್ತಿದೆ. ನಟರು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಕೈ ಕಾಲು ಮುರಿದು, ತಲೆ ಒಡೆದು, ಮಾಂಸ ಬೆಗೆದು, ರಕ್ತ ಚೆಲ್ಲಾಡಿದ ನಂತರವೂ ಪಾತ್ರಗಳಿಂದ ಹೊರ ಬರುವುದೇ ಇಲ್ಲ. ಜೀವನವನ್ನೂ ಒಂದು ಭ್ರಾಮುಕ ಸಿನಿಮಾ ಎಂದೇ ಭಾವಿಸಿಬಿಡುತ್ತಾರೆ. ಅಲ್ಲೂ ಇದೇ ವಿಕೃತಿಯ ಪ್ರದರ್ಶನಕ್ಕೆ ಇಳಿಯುತ್ತಾರೆ. ತಾವೂ ವಾಸ್ತವ ಜೀವನದ ದರ್ಶನ ಮಾಡುವುದಿಲ್ಲ, ತಮ್ಮ ಅಭಿಮಾನಿಗಳನ್ನೂ ಅಂತಹ ವಾಸ್ತವಗಳಿಂದ ಭ್ರಮಾಲೋಕಕ್ಕೆ ಎಳೆದೊಯ್ಯುತ್ತಾರೆ.
ಪದೇ ಪದೇ ಇಂತಹದೇ ದೃಶ್ಯಗಳನ್ನು ವೀಕ್ಷಿಸಿ ಇಂತಹದೇ ಪರಿಸರದಲ್ಲಿ ಬೆಳೆಯುವವರೂ ಈ ನಾಯಕರ ಹಿಂದೆ ಕತ್ತಿ, ಮಚ್ಚು ಹಿಡಿದು ಹೊರಟು ಬಿಡುತ್ತಾರೆ. ನಾವು ಶ್ರೇಷ್ಠರೆನಿಸಿ ಒಂದು ಅತ್ಯಂತ ನಾಗರಿಕ ವೆನಿಸಿದ ಸಾಮ್ರಾಜ್ಯ ನಿರ್ಮಾಣ ಮಾಡಿದ್ದಾಗ್ಯೂ ಸಹ ನಮ್ಮೊಳಗೆ ಎಲ್ಲೋ ಒಂದೆಡೆ ಹಿಂಸೆಯ ಮತ್ತು ಕ್ಷೋಭೆಯ ಭೂತಕಾಲದ ಪ್ರವೃತ್ತಿ ಜೀವಂತವಾಗಿರುತ್ತದೆ ಎಂದು ಖ್ಯಾತ ಮನಶಾಸಜ್ಞ ಡೇವಿಡ್ ಚೆಸ್ಟರ್ ಹೇಳುವುದು ನಿಜ ಎನಿಸುತ್ತದೆ. ಹಿಂಸೆ ಸಾಮಾನ್ಯವಾಗಿ ಋಣಾತ್ಮಕ ಗುಣ ಗಳಾದ ಕೋಪ ಮತ್ತು ಭಯದಿಂದ ಉಂಟಾಗುತ್ತದೆ. ಆದರೆ ಅದನ್ನೂ ಮೀರಿ ಇದು ಮನುಷ್ಯನ ಗೀಳು, ಉನ್ಮಾದ, ಚಟದ ಪ್ರವೃತ್ತಿಯಾಗಿ ವಿಕೃತ ಆನಂದದ ಸ್ವರೂಪ ಹೊಂದಿರುವುದು ತೀರಾ ಆತಂಕಕಾರಿ ಬೆಳವಣಿಗೆ. ಸಿನಿಮಾ ಮತ್ತು ಮಾಧ್ಯಮಗಳಲ್ಲಿ ಕ್ರೂರ, ಅಮಾನವೀಯ ಹಿಂಸೆಯನ್ನು ನಿಯಂತ್ರಿಸಬೇಕು.
ಆಧುನಿಕತೆ ಮತ್ತು ತಾಂತ್ರಿಕ ಔನ್ನತ್ಯ ನಾಗರಿಕ ವೈಭವವನ್ನು ಮೆರೆಸಬೇಕೇ ಹೊರತು ಅನಾಗರಿಕ ಕ್ರೌರ್ಯವನ್ನಲ್ಲ. ಹಿಂದಿನಂತೆ ಸಾಮಾಜಿಕ ಸಂದೇಶ ಸಾರುವ ನಾಗಾಭರಣ, ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ, ಟಿ.ಎನ್.ಸೀತಾರಾಮ್ ಇಂತಹವರ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕು. ದುಡ್ಡು ಹಾಕಿ ದುಡ್ಡು ತೆಗೆಯುವುದೇ ಪರಮ ಉದ್ದೇಶವಾದರೆ ಮನುಷ್ಯ ತನ್ನ ಸಂತತಿಯನ್ನು ತಾನೇ ತಿನ್ನುವ ಕ್ಯಾನಿಬಾಲ್ ಆಗುವ ಕಾಲ ದೂರವಿಲ್ಲ.