ಸಂಗತ
ವಿಜಯ್ ದರ್ಡ
ದಾರ್ಶನಿಕರ ಮತ್ತು ಧಾರ್ಮಿಕ ವ್ಯಕ್ತಿಗಳ ಜನ್ಮದಿನಾಚರಣೆಗಳು ಕೇವಲ ಸಾಂಕೇತಿಕವಾಗಿ ಉಳಿದಿವೆ, ಅವರ ತತ್ತ್ವಗಳ ಪರಿಪಾಲನೆ
ಕಿಂಚಿತ್ತೂ ಆಗುತ್ತಿಲ್ಲ. ಮಹಾನ್ ವ್ಯಕ್ತಿಗಳ ಜೀವನಾದರ್ಶ ಸಮಾಜಕ್ಕೆ ಯಾಕೆ ಒಳಿತನ್ನು ಮಾಡುವಲ್ಲಿ ವಿಫಲವಾಗಿದೆ?
ಕಳೆದ ವಾರ ನಾನು ಮರ್ಯಾದಾ ಪುರುಷೋತ್ತಮ ಶ್ರಿರಾಮನ ಜನ್ಮದಿನದಂದು ರಾಮನವಿಯನ್ನೂ ಮಹಾವೀರ ಜಯಂತಿಯನ್ನೂ ಆಚರಿಸುತ್ತಿದ್ದೆ. ಜತೆಗೆ ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನೂ ಆಚರಿಸಿದೆ. ಒಂದು ಪ್ರಶ್ನೆ ನಿರಂತರ ನನ್ನ ಮನದಲ್ಲಿ ಕಾಡುತ್ತಿತ್ತು. ಅಂತಹ ದಾರ್ಶನಿಕ ವ್ಯಕ್ತಿಗಳು ತೋರಿದ ಮಾರ್ಗವನ್ನು ಅನುಸರಿಸಲು ಜನ ಯಾಕೆ ಹಿಂಜರಿಯತ್ತಾರೆ? ಇದು ನನ್ನ ಮನ ದಲ್ಲಿದ್ದ ಪ್ರಶ್ನೆ.
ಇಂದು ಜನ್ಮ ದಿನಾಚರಣೆ, ಪೂಜೆ, ಶೋಭಾಯಾತ್ರೆ ಎಲ್ಲವೂ ಸಾಂಕೇತಿಕವಾಗಿಬಿಟ್ಟಿದೆ. ದಾರ್ಶನಿಕರ ಸಂದೇಶಗಳನ್ನು ಅನುಸರಿಸು ವುದು ನಮ್ಮಿಂದ ಆಗುತ್ತಿಲ್ಲ. ಸ್ವಾಮಿ ವಿವೇಕಾ ನಂದರಿಂದ ಮೊದಲ್ಗೊಂಡು ಮಹಾತ್ಮ ಗಾಂಧೀಜಿಯವರ ತನಕ ಯಾರ ಬದುಕು ಮತ್ತು ಆದರ್ಶಗಳನ್ನೂ ನಾವು ಅಳವಡಿಸಿಕೊಳ್ಳುತ್ತಿಲ್ಲ, ತೋರಿಕೆಯನ್ನು ಮಾತ್ರ ಮಾಡುತ್ತಿದ್ದೇವೆ. ಆಗಿ ಹೋದ ಮಹನೀಯರ ಜನ್ಮದಿನಗಳನ್ನು ಆಚರಿಸುವ ಹಿಂದಿರುವ ಉದ್ದೇಶ, ಅವರ ತತ್ತ್ವಗಳು ಇಂದಿನ ಮತ್ತು ಮುಂದಿನ ಪೀಳಿಗೆಗೆ ಅರ್ಥವಾಗಬೇಕು ಎಂಬುದೇ ಆಗಿದೆ. ಆದರೆ ಅದಾವುದೂ ಆಗು ತ್ತಿಲ್ಲ, ಎಲ್ಲವೂ ಬೂಟಾಟಿಕೆಯ ಕುರುಹಾಗಿ ಉಳಿದಿದೆಯೇ ವಿನಃ ಬೇರಿನ್ನೇನೂ ಆಗುತ್ತಿಲ್ಲ. ಜನ ಯಾವ ಮಾರ್ಗವನ್ನು ಅನುಸರಿಸಬೇಕೋ ಅದನ್ನು ಅನು ಸರಿಸುತ್ತಿಲ್ಲ.
ಈಗ ಶ್ರೀರಾಮನ ಬಗ್ಗೆ ಬರೋಣ. ಆತ ತನ್ನ ಜೀವಿತವನ್ನು ಅನ್ಯಾಯದ ವಿರುದ್ಧದ ಹೋರಾಟ ಮತ್ತು ಸಾಮಾಜಿಕ ಕಳಕಳಿಯ ವಿಚಾರ ವಾಗಿಯೇ ಕಳೆದ. ಅರಣ್ಯವಾಸಿಗಳ ಬಗ್ಗೆ ಆತನಿಗೆ ಇನ್ನಿಲ್ಲದ ಮಮಕಾರವಿತ್ತು. ಸತ್ಯ ಮತ್ತು ನ್ಯಾಯಮಾರ್ಗಗಳ ಬಗ್ಗೆ ಆತನಿಗಿದ್ದ ಕಾಳಜಿ ಪ್ರಶ್ನಾತೀತ. ಯಕಃಶ್ಚಿತ್ ನಾಗರಿಕನೊಬ್ಬ ಹೇಳಿದ ಮಾತಿನಿಂದಾಗಿ ಸೀತಾಮಾತೆ ಅಗ್ನಿಪರೀಕ್ಷೆಗೆ ಒಳಗಾಗಬೇಕಾಯಿತು. ಅರಣ್ಯವಾಸಿ ಬುಡಕಟ್ಟು ಮಹಿಳೆಯೊಬ್ಬಳು ಕೊಟ್ಟ ಹಣ್ಣನ್ನು ಪ್ರೀತಿಯಿಂದ ಸೇವಿಸುವ ಮೂಲಕ ಶ್ರೀರಾಮ ತನಗೆ ಜಾತಿಪದ್ಧತಿಯಲ್ಲಿ ನಂಬಿಕೆ ಇಲ್ಲ ವೆಂಬುದನ್ನು ದೃಢಪಡಿಸಿದ. ನಾವು ಶ್ರೀರಾಮನ ಈ ಗುಣಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆಯೇ? ಶ್ರೀರಾಮನ ಆಡಳಿತದಲ್ಲಿ ಎಲ್ಲರೂ ಸುಖಿಗಳಾಗಿದ್ದರೆಂಬ ಮಾತಿದೆ.
ಆತನ ಆಡಳಿತದಲ್ಲಿ ಸುವ್ಯವಸ್ಥೆ ಇತ್ತು. ಇಂದಿಗೂ ನಮ್ಮ ರಾಜಕಾರಣಿಗಳು ರಾಮರಾಜ್ಯದ ಬಗ್ಗೆ ಮಾತನಾಡುತ್ತಾರೆ, ಆದರೆ ಆತನ ಆದರ್ಶಗಳು ಆಡಳಿತ ವ್ಯವಸ್ಥೆಯಲ್ಲಿ ಅಳವಡಿಕೆ ಯಾಗಿವೆಯೇ? ಮಹಾವೀರ ಅಹಿಂಸೆ, ಕರುಣೆ ಮತ್ತು ಕ್ಷಮೆಯ ಪ್ರತಿಪಾದನೆ ಮಾಡಿದರು. ಅಪರಿಗ್ರಹದ ಉಪದೇಶವನ್ನವರು ಜಗತ್ತಿಗೆ ಕೊಟ್ಟರು. ಮಾನವೀಯತೆಯ ಪಾಠವೂ ಅವರ ಸಂದೇಶದಲ್ಲಿತ್ತು. ವೈಜ್ಞಾನಿಕತೆಯ
ಅಂಶವೂ ಅವರ ಬೋಧನೆಯಲ್ಲಿತ್ತು. ಆದರೆ ಅದೆಲ್ಲವನ್ನೂ ನಾವು ಅನುಸರಿಸುತ್ತಿದ್ದೇವೆಯೇ? ನಾನಿಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸು ತ್ತೇನೆ. ದಾರ್ಶನಿಕರು ಅಥವಾ ಅವತಾರ ಪುರುಷರು ಯಾವುದೇ ನಂಬಿಕೆಯ ತಳಹದಿಯಲ್ಲಿ ಮುನ್ನೆಲೆಗೆ ಬಂದಿರಬಹುದು.
ಆದರೆ ಅವರ ಉಪದೇಶಗಳು ಇಡೀ ಜಗತ್ತಿಗೇ ಅನ್ವಯವಾಗುವಂತಿದ್ದವು. ಅವುಗಳನ್ನು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತಗೊಳಿಸುವಂತಿಲ್ಲ. ಮಹಾವೀರರು ಅಹಿಂಸೆಯ ಬಗ್ಗೆ ಮಾತನಾಡಿದರೆ, ಅವರ ಲಕ್ಷ್ಯ ಇಡೀ ವಿಶ್ವದತ್ತ ಇತ್ತು. ನಾವೆಲ್ಲರೂ ಇಂದು ಅವರ ಸಂದೇಶವನ್ನು ಶ್ಲಾಸುತ್ತೇವೆ. ಮಹಾತ್ಮ ಗಾಂಧಿಯವರು ಕೂಡ ಸತ್ಯ ಮತ್ತು ಅಹಿಂಸೆಯ ಬಗ್ಗೆ ಮಾತನಾಡಿದರು. ಆದರೆ ನಮ್ಮ ವಾಸ್ತವ ಬದುಕಿನಲ್ಲಿ ಹಿಂಸೆ ಪರಾಕಾಷ್ಠೆಯನ್ನು ತಲುಪಿದೆ.
ಕಳ್ಳತನ, ಡಕಾಯಿತಿ, ಕೊಲೆ, ಸುಲಿಗೆ, ವಂಚನೆಗಳು ಇಂದು ನಮ್ಮ ಸಮಾಜವನ್ನು ನರಕಸದೃಶವಾಗಿಸಿವೆ. ಸತ್ಯ ಕಣ್ಮರೆಯಾಗಿದೆ ಮತ್ತು ಅಹಿಂಸೆ ಎಲ್ಲಿದೆಯೋ ಕಾಣದಾಗಿದೆ. ಬಾಪೂ ಬ್ರಿಟಿಷರನ್ನು ಭಾರತದಿಂದ ಓಡಿಸಲು ಬಳಸಿದ ಅಹಿಂಸಾ ಮಾರ್ಗ ಇಂದು ಭಾರತ ದಲ್ಲಿ ಇದ್ದಂತಿಲ್ಲ. ಇಲ್ಲಿ ಜನರ ಅಸಹಿಷ್ಣುತೆ ಮೇರೆ ಮೀರಿದೆ. ಇಂದು ಜನ ಎಲ್ಲವನ್ನೂ ಜಾತಿ-ಧರ್ಮಗಳ ತಕ್ಕಡಿಯಲ್ಲಿ ಅಳೆದು ತೂಗಿ ನೋಡುತ್ತಿದ್ದಾರೆ. ಇದೀಗ ರಂಜಾನ್ ಉಪವಾಸದ ತಿಂಗಳು ನಡೆಯುತ್ತಿದೆ. ಪರಸ್ಪರ ಒಬ್ಬರನ್ನೊಬ್ಬರು ಅಪ್ಪಿಕೊಂಡು ಪ್ರೀತಿಯ ಸಂದೇಶವನ್ನು ಮತ್ತೆ ಜಗಕ್ಕೆ ಸಾರುವುದಕ್ಕೆ ಇದು ಸಕಾಲ. ಇದಕ್ಕಿಂತ ಒಳ್ಳೆಯ ಸಮಯ ಇನ್ನೊಂದು ಸಿಗಲಾರದು. ಅಲ್ಲವೇ? ನಮ್ಮ ಸಂವಿಧಾನ ರಚಿಸಲು ಬಾಬಾಸಾಹೇಬ್ ಅಂಬೇಡ್ಕರರು ಶ್ರಮಿಸಿದರು, ಜತೆಜತೆಗೇ ಸಮತಾವಾದದ ಸಮಾಜ ನಿರ್ಮಾಣಕ್ಕೂ ಅವರು ನಾಂದಿ ಹಾಡಿದರು. ನಾವು ಅವರ ಪ್ರತಿಮೆಗಳನ್ನು ಊರ ತುಂಬಾ ಸ್ಥಾಪಿಸಿದ್ದೇವೆ, ಅವರನ್ನು ಮಹಾನಾಯಕನೆಂದು ಬಿಂಬಿಸಿ ದ್ದೇವೆ, ಆದರೆ ಅವರ ಆದರ್ಶಗಳ ಪಾಲನೆ ನಮಗೆ ಬೇಕಿಲ್ಲವಾಗಿದೆ. ಅವರ ಅನುಯಾಯಿಗಳ ಸಂಖ್ಯೆ ವೃದ್ಧಿಸುತ್ತಲೇ ಇದೆ. ಅವರ ಕೊಡುಗೆ ಯನ್ನು ಎಲ್ಲರೂ ಹೊಗಳುತ್ತಾರೆ. ಆದರೆ ಅವರ ತತ್ತ್ವಗಳ ಪಾಲನೆ ನಮಗೆ ಬೇಕಿಲ್ಲ. ಅಂಬೇಡ್ಕರರ ಚಿಂತನೆಗಳು ಭಾರತಕ್ಕೆ ಮಾತ್ರ ಸೀಮಿತವಲ್ಲ; ಅವು ವಿಶ್ವವ್ಯಾಪಿ.
ಅವರು ಸಮಾನತೆಯ ಬಗ್ಗೆ ಮಾತನಾಡಿದರು ಮತ್ತು ಇಡೀ ವಿಶ್ವವನ್ನೇ ಗಮನದಲ್ಲಿಟ್ಟು ಅದೆಲ್ಲವನ್ನೂ ಪ್ರತಿಪಾದಿಸಿದರು. ಇಂದು ಆಫ್ರಿಕಾ ಅಸಮಾನತೆಯ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿದೆ. ಇನ್ನು ಮುಂದುವರಿದ ರಾಷ್ಟವೆಂದು ಹೇಳಿಕೊಳ್ಳುತ್ತಿರುವ ಅಮೆರಿಕ ಕೂಡ ಜಾತಿ ಪದ್ಧತಿಯನ್ನು ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಇಡೀ ವಿಶ್ವ ಅಂಬೇಡ್ಕರರ ಸಂದೇಶವನ್ನು ಜಾರಿಗೆ ತರುವಲ್ಲಿ ಮುಂದಾಗಿದ್ದರೆ ಇಂದು ಪರಿಸ್ಥಿತಿ ಈ ರೀತಿ ಇರುತ್ತಿರಲಿಲ್ಲ.
ಮಾನವೀಯತೆಯೇ ಈ ಯುಗದ ಧರ್ಮ ಎಂದು ಬಾಬಾಸಾಹೇಬರು ಹೇಳಿದ್ದರು. ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ಏನು ಮಾಡಬೇಕು ಎಂಬುದನ್ನೂ ಅವರು ಸ್ಪಷ್ಟವಾಗಿ ಹೇಳಿದ್ದರು. ಆದರೆ ನಾವದನ್ನು ಜಾರಿಗೆ ತಂದಿಲ್ಲ. ಕೇವಲ ಸರಕಾರವನ್ನು ದೂಷಣೆ ಮಾಡುತ್ತ ಕುಳಿತರೆ ಆಗದು. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಇದೀಗ ಬಿಜೆಪಿ ಆ ಸ್ಥಾನದಲ್ಲಿದೆ. ಎಡಪಂಥೀಯರು, ಆಮ್ ಆದ್ಮಿ
ಪಾರ್ಟಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳಿವೆ. ಪಕ್ಷಗಳು ಬರಬಹುದು ಇಲ್ಲವೇ ಹೋಗಬಹುದು, ಆದರೆ ಉತ್ತಮ ಆಡಳಿತವೆಂಬುದು ನಮ್ಮ ಮುಂದಿರುವ ಪ್ರಶ್ನೆ.
ಮಾಜಿ ರಾಷ್ಟಪತಿ ಅಬ್ದುಲ್ ಕಲಾಂ ಮತ್ತು ಜೈನ್ ಆಚಾರ್ಯ ಮಹಾಪ್ರಜ್ಞಾಜೀಯವರು ಜಂಟಿಯಾಗಿ ನಮಗೆ ಜೀವನ ವಿಜ್ಞಾನದ ಪಾಠವನ್ನು ಹೇಳಿದರು. ಆದರೆ ಜನ ಅದನ್ನು ಅನುಸರಿಸಲೇ ಇಲ್ಲ; ಮಾನವೀಯ ಜೀವನ ಮೌಲ್ಯದ ಪಾಠಗಳನ್ನು ಅಳವಡಿಸುವಲ್ಲಿ ನಮ್ಮ ಶಿಕ್ಷಣ ಪದ್ಧತಿಯೂ ಸೋತಿದೆ. ಎಲ್ಲ ಧರ್ಮಗಳು ಮತ್ತು ಧಾರ್ಮಿಕ ನಾಯಕರೂ ನಮಗೆ ಪ್ರೀತಿಯ ಸಂದೇಶವನ್ನು ಸಾರಿ
ಹೋಗಿದ್ದಾರೆ. ನಮ್ಮ ಸಹಜೀವಿಗಳೊಂದಿಗೆ ಹೇಗೆ ಬಾಳಿ ಬದುಕಬೇಕೆಂಬುದನ್ನೂ ಅವರು ಹೇಳಿ ಹೋಗಿದ್ದಾರೆ.
ಅವರು ಬಿಟ್ಟುಹೋಗಿರುವ ಸಂದೇಶಗಳ ಪಾಲನೆಯನ್ನು ನಾವು ಮಾಡುತ್ತಿಲ್ಲ, ಅವರ ಪುಸ್ತಕಗಳನ್ನು ಕೇವಲ ಸ್ತುತಿಗಾಗಿ ಮತ್ತು ಪೂಜೆ ಗಾಗಿ ಬಳಸುತ್ತೇವೆಯೇ ವಿನಃ ಇನ್ನೇನನ್ನೂ ಮಾಡುತ್ತಿಲ್ಲ. ಫಲಿತಾಂಶ ನಿಮ್ಮೆಲ್ಲರ ಕಣ್ಣ ಮುಂದಿದೆ. ಮನುಷ್ಯ ಮನುಷ್ಯನನ್ನೇ ಸುಟ್ಟು ಹಾಕುವಷ್ಟು ಕ್ರೌರ್ಯ ನಮ್ಮಲ್ಲಿ ಬೆಳೆದುನಿಂತಿದೆ. ಸಾಮೂಹಿಕ ಹತ್ಯಾಕಾಂಡಗಳಾಗುತ್ತಿವೆ. ಶಕ್ತಿ ಇದ್ದವನು ಗೆಲ್ಲುತ್ತಾನೆ ಎಂಬ ಮಾತಿದೆ ಯಲ್ಲ ಅದು ನಿಜವಾಗುತ್ತಿದೆ. ಮನುಷ್ಯ ಹೆಚ್ಚು ಅಧಿಕಾರ ಹೊಂದಿದ್ದಷ್ಟೂ ಆತ ಹೆಚ್ಚು ಪ್ರಭಾವಶಾಲಿಯಾಗುತ್ತಿದ್ದಾನೆ.
ಸಹಾನುಭೂತಿ ಮನುಷ್ಯನ ಪ್ರಮುಖ ಗುಣವಾಗಿರಬೇಕು. ಕ್ಷಮಾಗುಣ ಮತ್ತು ಅಹಿಂಸೆಯೂ ಅಷ್ಟೇ ಮುಖ್ಯ. ಆದರೆ ನಾವಿಂದು ಹಿಂಸಾ ಪ್ರವೃತ್ತಿಯನ್ನೇ ಮೈಗೂಡಿಸಿಕೊಂಡಿದ್ದೇವೆ. ಮುಂದಿನ ಪೀಳಿಗೆಗೆ ಯಾವ ಬಗೆಯ ಸಮಾಜವನ್ನು ನಾವು ಬಿಟ್ಟು ಹೋಗುತ್ತಿದ್ದೇವೆ? ಈ ವಿಚಾರದ ಬಗ್ಗೆ ನಾವು ಸಾಕಷ್ಟು ಚರ್ಚೆ ಈಗಾಗಲೇ ಮಾಡಿದ್ದೇವೆ. ಈ ದಿಸೆಯಲ್ಲಿ ನಾವು ಕೈಗೊಳ್ಳುವ ಒಂದು ಸಣ್ಣ ಹೆಜ್ಜೆ ಕೂಡ ದೊಡ್ಡ ಪರಿವರ್ತನೆಯನ್ನು ತರಬಲ್ಲದು.
ದಾರ್ಶನಿಕರ ಮತ್ತು ಧಾರ್ಮಿಕ ವ್ಯಕ್ತಿಗಳ ಜನ್ಮದಿನಾಚರಣೆಗಳು ಕೇವಲ ಸಾಂಕೇತಿಕವಾಗಿ ಉಳಿದಿವೆ, ಅವರ ತತ್ತ್ವಗಳ ಪರಿಪಾಲನೆ ಕಿಂಚಿತ್ತೂ ಆಗುತ್ತಿಲ್ಲ. ಈ ಎಲ್ಲ ವಿಚಾರಗಳನ್ನು ರಾಜಕೀಯವೆಂಬ ಕಲುಷಿತ ಪ್ರಜ್ಞೆ ಆಪೋಷನ ತೆಗೆದುಕೊಂಡಿದೆ. ಇಂತಹ ಮಹಾನ್ ವ್ಯಕ್ತಿಗಳ ಜೀವನಾದರ್ಶ ಸಮಾಜಕ್ಕೆ ಯಾಕೆ ಒಳಿತನ್ನು ಮಾಡುವಲ್ಲಿ ವಿಫಲವಾಗಿದೆ? ನಾವೆಲ್ಲರೂ ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ.