Sunday, 19th May 2024

ಚಿಂತನೆ ಇಲ್ಲದ ದಸರಾ ಆಚರಣೆ ನಾಳೆ ಇದಕ್ಕೆ ಯಾರು ಹೊಣೆ !

ಪ್ರಚಲಿತ 

ಪ್ರದ್ಯುಮ್ನ ಎನ್.ಎಂ

ಅರಸರ ಆಳ್ವಿಕೆಯ ಕಾಲದಲ್ಲಿ ಯುದ್ಧದ ವಿಜಯೋತ್ಸವ ಆಚರಣೆ ಮಾಡುವ ಸಲುವಾಗಿ ರಾಜ ಮನೆತನದ ಅರಸ ರನ್ನು ಜಂಬೂ ಸವಾರಿಯ ಚಿನ್ನದ ಅಂಬಾರಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತಿತ್ತು. ಹೀಗೆ ವಿಜಯೋತ್ಸವ ಆಚರಣೆಗಾಗಿ ದಸರಾ ಎಂಬ ಹೆಸರಿನಲ್ಲಿ ಈ ಪದ್ಧತಿ ನಡೆದು ಬಂತು. ಅಂಬಾರಿಯಲ್ಲಿ ಕುಳಿತು ಸಾರ್ವಜನಿಕವಾಗಿ ದರ್ಬಾರು ನಡೆಸಿದ ಕೊನೆಯ ರಾಜರೆಂದರೆ ಶ್ರೀಮಾನ್ ಜಯಚಾಮರಾಜೇಂದ್ರ ಒಡೆಯರ್.

ನಾಡಹಬ್ಬ ದಸರಾ ಪ್ರತಿಯೊಬ್ಬರ ಭಾವನೆಗಳಲ್ಲಿ ಬೆರೆತುಹೋಗಿ ಮನೆ ಮನೆಯ ಸಂಭ್ರಮದ ವಾರ್ಷಿಕ ಹಬ್ಬವಾಗಿದೆ. ಅಕ್ಟೋಬರ್- ನವೆಂಬರ್ ತಿಂಗಳು ಬಂತೆಂದರೆ ಎಲ್ಲೆಡೆ ನವರಾತ್ರಿಯ ಆಚರಣೆಗೆ ಸಡಗರದ ಸಿದ್ಧತೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರು ಭೂಲೋಕದ ಸ್ವರ್ಗದಂತೆ ಸಂಭ್ರಮಿಸುತ್ತದೆ. ದೀಪಾಲಂಕಾರಗಳಿಂದ ನಗರಕ್ಕೆ ನಗರವೇ ನವ ವಧುವಿನಂತೆ ಸಿಂಗರಿಸಲಾಗುತ್ತದೆ.

ದಸರೆ ಹೊಯ್ಸಳರ ಕಾಲದಲ್ಲಿ ಪ್ರಾರಂಭಗೊಂಡು ನಂತರ ಜಯನಗರದ ಶ್ರೀಕೃಷ್ಣದೇವರಾಯರ ಆಡಳಿತದ ಕಾಲದಲ್ಲಿ ನಾಡ ಹಬ್ಬವಾಗಿ ಪ್ರಸಿದ್ಧಿ ಪಡೆಯಿತು. 1610ರಲ್ಲಿ ರಾಜಒಡೆಯರ್ ಅವರ ಆಳ್ವಿಕೆಯ ಸಂದರ್ಭದಲ್ಲಿ ರಾಜಧಾನಿ ಶ್ರೀರಂಗಪಟ್ಟಣ ದಲ್ಲಿ ವಿದ್ಯುಕ್ತವಾಗಿ ಮೈಸೂರು ದಸರಾ ಪ್ರಾರಂಭಗೊಳ್ಳುತ್ತದೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. ಅಂದಿನ ಅರಸರ ಆಳ್ವಿಕೆಯ ಕಾಲದಲ್ಲಿ ಯುದ್ಧದ ವಿಜಯೋತ್ಸವ ಆಚರಣೆ ಮಾಡುವ ಸಲುವಾಗಿ ರಾಜ ಮನೆತನದ ಅರಸರನ್ನು ಜಂಬೂ ಸವಾರಿಯ ಚಿನ್ನದ ಅಂಬಾರಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತಿತ್ತು. ಹೀಗೆ ವಿಜಯೋತ್ಸವ ಆಚರಣೆಗಾಗಿ ದಸರಾ ಎಂಬ ಹೆಸರಿನಲ್ಲಿ ಈ ಪದ್ಧತಿ ನಡೆದು ಬಂತು.

ಅಂಬಾರಿಯಲ್ಲಿ ಕುಳಿತು ಸಾರ್ವಜನಿಕವಾಗಿ ದರ್ಬಾರು ನಡೆಸಿದ ಕೊನೆಯ ರಾಜರೆಂದರೆ ಶ್ರೀಮಾನ್ ಜಯಚಾಮರಾಜೇಂದ್ರ ಒಡೆಯರ್ ಅವರು. ನಂತರದ ದಿನಗಳಲ್ಲಿ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಕೂರಿಸಿ ಮೆರವಣಿಗೆ ಮಾಡುವ ಪದ್ಧತಿ ಆಚರಣೆಗೆ ಬಂತು. ದರ್ಬಾರು ರಾಜಮನೆತನದ ಖಾಸಗಿ ಸಮಾರಂಭವಾಗಿ ರೂಪಾಂತರಗೊಂಡಿತು. ಆದರೆ
ಪ್ರಸ್ತುತ ಸನ್ನಿವೇಶದಲ್ಲಿ ಯಾರಿಗಾಗಿ ದಸರಾ? ಯಾತಕ್ಕಾಗಿ ದಸರಾ? ಎಂಬ ಪ್ರಶ್ನೆ ಮುಂದೆ ನಿಂತಿದೆ.

ಹೆಚ್ಚು ಕಮ್ಮಿ ಕಳೆದ 6 ತಿಂಗಳಿನಿಂದ ವಿಶ್ವಾದ್ಯಂತ ತನ್ನ ಸಾಹಸ ಮೆರೆಯುತ್ತಿರುವ ಕೋವಿಡ್-19ನ ವಿಜಯೋತ್ಸವದ ಆಚರಣೆಯೇ ಈ ಬಾರಿಯ ದಸರಾ ಎಂಬ ಲೇವಡಿಗೆ ನಾಡಹಬ್ಬ ತುತ್ತಾಗಿದೆ. ಕೋವಿಡ್-19 ಪ್ರತಿಯೊಬ್ಬರ ಜೀವನ್ಮರಣದ ಮಧ್ಯೆ ಪಗಡೆಯಾಡುತ್ತಿದೆ. ಹಲವರು ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಮತ್ತೆ ಕೆಲವರು ಜೀವನ ಕಟ್ಟಿಕೊಳ್ಳುವಲ್ಲಿ ಹಪ ಹಪಿಸುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸೋಂಕಿತರ ಪಟ್ಟಿಯಲ್ಲಿ ಬೆಂಗಳೂರು ಮೊದಲಿದ್ದರೆ ಎರಡನೇ ಸ್ಥಾನವನ್ನು ಮೈಸೂರು ಆಕ್ರಮಿಸಿಕೊಂಡಿದೆ. ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕಾಸಿಲ್ಲದೆ, ಹಾಸಿಗೆ ಸಿಗದೆ ನರಳಾಡಿ ಪ್ರಾಣ ಬಿಡು ತ್ತಿದ್ದಾರೆ. ಕೆಲವು ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭ ಪಡೆದು ಮನುಷ್ಯತ್ವವನ್ನೇ ಗಾಳಿಗೆ ತೂರಿ ಹಣ ಬಾಚುವಲ್ಲಿ ನಿರತರಾಗಿದ್ದಾರೆ. ಸರಕಾರ ಅಸಹಾಯಕವಾಗಿದೆ. ಸರಕಾರ ನೀಡುವ ಅಂಕಿ-ಅಂಶಗಳು ಮತ್ತು, ಮಾಧ್ಯಮಗಳ ವರದಿಗಳಿಗೆ ತಾಳೆಯಾಗುತ್ತಿಲ್ಲ. ಈ ಬಾರಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಜನರ ಮಾರಣ ಹೋಮದ ಬಗ್ಗೆ ಚರ್ಚೆ ನಡೆಯುವ ಬದಲು ಎಂದಿನಂತೆ ಪರಸ್ಪರ ಕೆಸರೆರೆಚಾಡುವುದರಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಸಾಧನೆ ಮೆರೆದಿದೆ.

ಪರಿಸ್ಥಿತಿ ಹೀಗೆಲ್ಲಾ ಇರುವಾಗ ಮಧ್ಯೆ ರಾಜ್ಯ ಸರಕಾರ ಮತ್ತು ಸಂಬಂಧಪಟ್ಟವರು ಜಿಲ್ಲಾಡಳಿತ ಯೋಚಿಸಿ ಮುನ್ನೆಚ್ಚರಿಕೆ ಯೊಂದಿಗೆ ಅತ್ಯಂತ ಸರಳವಾಗಿ ಆಚರಿಸುವ ನಿರ್ಧಾರ ಕೈಗೊಂಡರೆ ನಾಳೆ ಎದುರಾಗುವ ತೊಂದರೆಯಿಂದ ಪಾರಾಗಬಹುದು.
ಈಗಾಗಲೆ ಮೈಸೂರು ಜಿಲ್ಲಾಡಳಿತ ದಸರಾ ಆಚರಣೆ ಸಲುವಾಗಿ ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ದಸರಾ ಆಚರಣೆಗೆ 15ಕೋಟಿ ವೆಚ್ಚ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತಿದೆ.

ಉದ್ಘಾಟನೆಗೆ 200 ಮಂದಿ, ಜಂಬೂಸವಾರಿಗೆ 300 ಮಂದಿ ಮತ್ತು ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ 25 ಮಂದಿ, ಮಾಧ್ಯಮ ಪ್ರತಿನಿಧಿಗಳಿಂದ 25 ಮಂದಿ, ಜನಪ್ರತಿನಿಧಿಗಳು 50, ಪೊಲೀಸ್ 25 ಮಂದಿಗೆ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಈಗಾಗಲೆ ಪರ-ವಿರೋಧ ವ್ಯಕ್ತವಾಗುತ್ತಿದೆ.

ದೂರದರ್ಶನದ ಮೂಲಕ ಮನೆ ಮನೆ ದಸರಾ ಮಾಡಿ ಐಪಿಎಲ್ ಕ್ರಿಕೆಟ್ (ಇಂಡಿಯನ್ ಪ್ರೀಮಿಯರ್ ಲೀಗ್) ಪ್ರಪಂಚದಾದ್ಯಂತ ಅತಿ ಹೆಚ್ಚು ಅಭಿಮಾನಿಗಳು ಮತ್ತು ವೀಕ್ಷಕರನ್ನು ಹೊಂದಿರುವ ಮನರಂಜನಾ ಕ್ರಿಕೆಟ್ ಆಟ. ಪ್ರತಿ ವರ್ಷ ಸ್ಟೇಡಿಯಂ ಅಭಿಮಾನಿಗಳಿಂದ ತುಂಬಿ ತುಳುಕುತಿತ್ತು. ಆದರೆ ಈ ಪ್ರಸ್ತುತ 2020ರ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಅಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ನಿರ್ಬಂಧ ಹೇರಲಾಗಿದೆ.

ಪಂದ್ಯವನ್ನೇ ನಿಲ್ಲಿಸಬಹುದಾಗಿತ್ತು. ಆದರೆ ಒಂದೆಡೆ ಸೋಂಕು ಹರಡದಂತೆ, ಇನೊಂದೆಡೆ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಯಾಗದಂತೆ ಕ್ರಿಕೆಟ್ ಆಡಳಿತ ಮಂಡಳಿ ಉತ್ತಮ ನಿರ್ಧಾರ ಕೈಕೊಂಡಿದೆ. ಅಭಿಮಾನಿಗಳು ಮನೆಯಲ್ಲೇ ಕೂತು ಟಿ.ವಿ,
ಮೊಬೈಲ್‌ಗಳಲ್ಲಿ ನೇರ ಪ್ರಸಾರದ ಮೂಲಕ ತಮ್ಮ ನೆಚ್ಚಿನ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಈ ಬಾರಿಯ ದಸರಾ ಕಾರ್ಯಕ್ರಮ ಕೂಡ ಏಕೆ ಇದೇ ಹಾದಿಯಲ್ಲಿ ಸಾಗಬಾರದು. ಪ್ರತಿವರ್ಷ ದೂರದರ್ಶನದಲ್ಲೂ ದಸರಾ ಆಚರಣೆಯ ನೇರಪ್ರಸಾರ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿತ್ತು. ಈ ಬಾರಿ ದೂರದರ್ಶನಕ್ಕೆ ಹೆಚ್ಚು ಪ್ರಚಾರ ನೀಡಿ ಪ್ರತಿಯೊಬ್ಬರೂ ಮನೆಯಲ್ಲೇ ಕೂತು ನಾಡ ಹಬ್ಬವನ್ನು ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟರೆ ಹೆಚ್ಚು ಜನ ವೀಕ್ಷಣೆ ಮಾಡುವುದರಿಂದ ಗಂಭೀರ ಪರಿಸ್ಥಿತಿಯನ್ನು ನಿಯಂತ್ರಿಸಬಹುದು.

ಹಿರಿಯರು ಹೀಗೆನ್ನುತಾರೆ. ಹಿರಿಯ ಸಾಹಿತಿಗಳಾದ ಎಸ್.ಎಲ್. ಭೈರಪ್ಪ, ಜಿಲ್ಲಾಡಳಿತದ ಈ ನಿರ್ಧಾರದ ಕುರಿತು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಜನ ಸೇರಿಸದೆ ದಸರಾ ಆಚರಣೆ ಮಾಡಲಾಗುವುದಿಲ್ಲವೇ? ಈ ನಿರ್ಧಾರದಿಂದ ನಾಳೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾದರೆ ಅದರ ಹೊಣೆ ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇತಿಹಾಸ ತಜ್ಞರಾದ ಪ್ರೊ. ನಂಜರಾಜ ಅರಸು, ಸರಳ ದಸರಾ ಆಚರಣೆ ನೆಪದಲ್ಲಿ ಹಣ ಲೂಟಿ ಮಾಡಲು ಜನಪ್ರತಿನಿಧಿಗಳ ಹುನ್ನಾರ ಎಂದು ಲಘುವಾಗಿ ಟೀಕಿಸಿದ್ದಾರೆ.

ಆಡಳಿತ ಪಕ್ಷದವರೇ ಆದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವವಾಥ್ ಸಹ ರಂಗುರಂಗಿನ ದಸರಾ ಆಚರಣೆಯನ್ನು ವಿರೋಧಿಸಿ ದ್ದಾರೆ. ನಗರವನ್ನು ದೀಪಾಲಂಕಾರ ಗಳಿಂದ ಸಿಂಗಾರಗೊಳಿಸುವ ಯೋಚನೆಯನ್ನು ಸಹ ಕೈ ಬಿಡುವಂತೆ ಅವರು ಒತ್ತಾಯಿಸಿ ದ್ದಾರೆ.

Leave a Reply

Your email address will not be published. Required fields are marked *

error: Content is protected !!