Saturday, 23rd November 2024

ಹಸಿರಿನ ದಾಹ ತೀರಿಸುತ್ತಿದ್ದ ಬಿಳಿ ದಾಸವಾಳ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಪುಟಾಣಿ ತೋಟದ ನಡುವೆ ಒಂದು ಪುಟ್ಟ ತೊರೆ. ಆ ತೊರೆಗೆ ಅಂಟಿಕೊಂಡು ಎರಡು ಬಿಳಿ ದಾಸವಾಳದ ಗಿಡಗಳು ಬೆಳೆದಿದ್ದವು. ಹಲವು ವರ್ಷಗಳಿಂದ ಬೆಳೆದಿದ್ದರಿಂದಲೋ ಏನೊ, ಅವು ಪುಟ್ಟ ಮರಗಳ ರೂಪ ಪಡೆದಿದ್ದವು. ಅದರ ಎಲೆಗಳನ್ನು ಸಂಗ್ರಹಿಸಲು ಊರಿನವರ ಪೈಪೋಟಿ. ಏಕೆ?

ನಮ್ಮ ಹಳ್ಳಿಯ ಮನೆ ಎದುರು, ಗಂಟಿ ಕಟ್ಟುವ ಹಟ್ಟಿಯ ಹಿಂಭಾಗದಲ್ಲಿ ಎರಡು ಬಿಳಿ ದಾಸವಾಳ ಗಿಡಗಳಿದ್ದವು. ಅವನ್ನು ಜತನದಿಂದ ನೋಡಿಕೊಂಡಿದ್ದರಿಂದಲೇ ಇರಬೇಕು, ಗಿಡ ಎಂದು ಕರೆಯುವುದಕ್ಕಿಂತ, ಅವುಗಳನ್ನು ಪುಟ್ಟ ಮರಗಳು ಎಂದೇ ಕರೆಬಹುದಿತ್ತು. ಬಹಳ ವರ್ಷಗಳಿಂದ ತಮ್ಮ ಪಾಡಿಗೆ ಅವು ಬೆಳೆಯುತ್ತಿದ್ದು, ಯಾವುದೇ ಕಾರಣಕ್ಕೂ ಅವಕ್ಕೆ ಕತ್ತಿ ತಾಗಿಸದೇ ಇದ್ದುರಿಂದ, ತಮ್ಮ ಕಾಂಡಗಳನ್ನು ತಿರುವಿಕೊಂಡು ಬೆಳೆದಿದ್ದು, ಆರೆಂಟು ಅಡಿ ಎತ್ತರದ ಕುಬ್ಜ ಮರದ ಸ್ವರೂಪವನ್ನೇ ಪಡೆದುಕೊಂಡಿದ್ದವು.

ನಮ್ಮ ಮನೆಯವರೂ ಅಷ್ಟೆ, ಪ್ರತಿ ವರ್ಷ ಆ ಭಾಗದ ನೆಲ ಸವರುವಾಗ, ಆ ಸುತ್ತಲಿನಲ್ಲಿ ಬೆಳೆದಿದ್ದ ಅಡಕೆ ಮರಗಳಿಗೆ ಸೊಪ್ಪು ಹಾಕು ವಾಗ, ಈ ಬಿಳಿ ದಾಸವಾಳಕ್ಕೆ ಯಾವುದೇ ತೊಂದರೆಯನ್ನು ಮಾಡುತ್ತಿರಲಿಲ್ಲ, ಅದರ ಟೊಂಗೆಗಳನ್ನು ಕತ್ತರಿಸುತ್ತಲೂ ಇರಲಿಲ್ಲ. ಅವೆರಡೂ ಗಿಡಗಳು ತುಂಬಾ ಹಳೆಯವು ಎಂಬುದನ್ನು ನೋಡಿದ ಕೂಡಲೇ ತಿಳಿಯು ತ್ತಿತ್ತು. ಅವುಗಳ ಬುಡವೇ ಮುಕ್ಕಾಲರಿಂದ ಒಂದು ಅಡಿ ಅಗಲವಿತ್ತು. ಕೊಂಬೆಗಳು ಬಲವಾಗಿ ಬೆಳೆದುಕೊಂಡಿದ್ದವು.

ಇಂತಹ ದಾಸವಾಳ ಗಿಡಗಳು, ಕೆಲವು ವರ್ಷಗಳ ಹಿಂದೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದು ತುಸು ವಿಸ್ಮಯಕಾರಿ. ಮೊದಲಿ ನಿಂದಲೂ ನಮ್ಮ ಅಮ್ಮಮ್ಮ ಹೇಳುತ್ತಿದ್ದರು – ಬಿಳಿ ದಾಸವಾಳದ ಗಿಡಗಳನ್ನು ಬೆಳೆಸುವುದು ಸ್ವಲ್ಪ ಕಷ್ಟ, ಅವು ಬೇಗಬೇಗ ಚಿಗುರಿ
ಬೆಳೆಯುವುದಿಲ್ಲ. ಕೆಂಪು ದಾಸವಾಳ ಅಥವಾ ಕತ್ತರಿ ದಾಸವಾಳದ ರೀತಿ ವೇಗವಾಗಿ ಬೆಳೆಯುವುದಿಲ್ಲ. ಆದ್ದರಿಂದ ಆ ಎರಡು ಬಿಳಿ ದಾಸವಾಳದ ಗಿಡಗಳನ್ನು ಜತನದಿಂದ ನೋಡಕೊಳ್ಳಬೇಕು ಎಂದು.

ಅವರು ಹೇಳಿದ್ದಕ್ಕೆ ಸರಿಯಾಗಿ, ನಮ್ಮ ಮನೆಯ ಸುತ್ತ ಮುತ್ತ ಹಲವು ಕೆಂಪು ದಾಸವಾಳ ಗಿಡಗಳು ಪೊದೆಯ ರೀತಿ ಬೆಳೆದಿದ್ದವು, ಆ ಪುಟ್ಟ ತೋಟದ ಅಂಚಿನಲ್ಲಿ ದಟ್ಟವಾಗಿಯೂ ಬೆಳೆದಿದ್ದವು, ಕತ್ತರಿ ದಾಸವಾಳಗಳೂ ಎತ್ತರಕ್ಕೆ ಬೆಳೆದು, ಕತ್ತರಿಯಾಕಾರದ ಎಸಳುಗಳ ಹೂವು ಗಳನ್ನು ನೇತಾಡಿಸಿಕೊಂಡು, ದಾರಿಗಡ್ಡಲಾಗಿ ಹರಡಿರುತ್ತಿದ್ದವು. ದಾಸವಾಳದ ಇನ್ನೂ ಕೆಲವು ಪ್ರಭೇದಗಳಾದ ಮಿಟ್ಟೆ ದಾಸವಾಳ, ಬೇರೆ ಬೇರೆ ಬಣ್ಣದ ದಾಸವಾಳಗಳು ಚೆನ್ನಾಗಿಯೇ ಬೆಳೆಯುತ್ತಿದ್ದವು. ಆದರೆ, ಬಿಳಿ ದಾಸವಾಳದ ಆ ಒಂದು ಪ್ರಭೇದದ ಗಿಡಗಳು ನಮ್ಮೂರಿನಲ್ಲಿ ತುಸು ಕಡಿಮೆಯೇ.

ಬಿಳಿ ದಾಸವಾಳಗಳಲ್ಲೂ ಕೆಲವು ಪ್ರಭೇದಗಳಿದ್ದು, ನಮ್ಮ ಮನೆಯಲ್ಲಿದ್ದ ಆ ನಿರ್ದಿಷ್ಟ ಬಿಳಿ ದಾಸವಾಳಗಳು ತುಸು ಅಪರೂಪದವು. ಅದರ ಹೂವು ಅಚ್ಚ ಬಿಳಿ ಅಲ್ಲ, ಬದಲಿಗೆ ಹೌದೋ ಅಲ್ಲವೋ ಎಂಬಂತಹ ನಸು ಹಳದಿ ಛಾಯೆ ಹೊಂದಿದ್ದವು. ಎಲೆಗಳು ಇತರ ದಾಸವಾಳಗಳಿ ಗಿಂತ ತುಸು ಚಿಕ್ಕವು ಮತ್ತು ತೆಳು. ನಮ್ಮ ಮನೆ ಎದುರಿನ ಆ ಬಿಳಿ ದಾಸವಾಳವು ಬಹಳ ಅಪರೂಪದ್ದು ಎಂದು ನಾನು ಸುಮ್ಮಸುಮ್ಮನೇ ಬುರುಡೆ ಬಿಡುತ್ತಿದ್ದೇನೆಂದು ನೀವು ತಿಳಿದರೂ ತಿಳಿಯಬಹುದು! ಆದರೆ, ಇಲ್ಲಿ ಉತ್ಪ್ರೇಕ್ಷೆ ಇಲ್ಲ, ಅದೊಂದು ವಾಸ್ತವ. ಅದಕ್ಕೆ ಪುರಾವೆ ಯಿದೆ!

ನಮ್ಮ ಮನೆಯ ಆ ಎರಡು ದಾಸವಾಳದ ‘ಮರ’ ಗಳು ನಮ್ಮ ಬೈಲಿನುದ್ದಕ್ಕೂ ಪ್ರಸಿದ್ಧ! ಎಷ್ಟೋ ಮನೆಯವರಿಗೆ ಆ ದಾಸವಾಳ ಎಂದರೆ ಇಷ್ಟ. ಅದೇಕೆ ಎಂದು ಹೇಳುವ ಮೊದಲು, ನಮ್ಮ ‘ಬೈಲಿ’ನ ಕಿರು ಪರಿಚಯ ಮಾಡಿಕೊಡಲೇಬೇಕು. ಹಾಲಾಡಿ ಬಸ್‌ಸ್ಟ್ಯಾಂಡ್‌ನಿಂದ ಎರಡು ಕಿ.ಮೀ. ಗುಡ್ಡೆ, ಹಕ್ಕಲಿನ ದಾರಿಯಲ್ಲಿ ನಡೆದು ಬತ್ತದ ಗದ್ದೆಗಳಿರುವ ಬೈಲಿಗೆ ಇಳಿದು ಸುಮಾರು ಮುಕ್ಕಾಲು ಕಿ.ಮೀ. ದಕ್ಷಿಣ ದಿಕ್ಕಿಗೆ ನಡೆದರೆ ನಮ್ಮ ಮನೆ. ಆ ಬೈಲು ದಾರಿಯುದ್ದಕ್ಕೂ ನಡೆದು ಬರುವವರಿಗೆ ನಮ್ಮ ಮನೆ ದೂರದಿಂದಲೇ ಕಾಣಿಸುತ್ತಿತ್ತು.

ಜತೆಗೇ, ನಮ್ಮ ಮನೆಯಂಗಳದಲ್ಲಿ ನಿಂತರೆ, ಬೈಲಿನ ತುದಿಯಿಂದ ನಡೆದು ಬರುವವರನ್ನು ದೂರದಿಂದಲೇ ನೋಡಿ, ಗುರುತಿಸಬಹು
ದಿತ್ತು. ಹತ್ತು ನಿಮಿಷದ ಆ ದಾರಿಯನ್ನು ಕ್ರಮಿಸುವವರೆಲ್ಲರನ್ನೂ ‘ಇವರು ಇಂಥವರ ಮನೆಗೆ ಹೋಗುವವರು’ ಎಂದು ಗುರುತಿಸುವ ಹವ್ಯಾಸ ಮಕ್ಕಳಿಗೆ. ಆ ಬೈಲಿನುದ್ದಕ್ಕೂ ಅಲ್ಲಲ್ಲಿ ಇಕ್ಕೆಲಗಳಲ್ಲಿ ಮನೆಗಳು. ದಾರಿಯಲ್ಲಿ ನಡೆಯುವವರಿಗೆ ಮನೆಯವರ ದಿನಚರಿಯನ್ನು ಗಮನಿಸುವ ಅವಕಾಶ.

ಕಟ್ಟಿನಗುಂಡಿ ಮನೆಯ ಬಳಿ ಸಾಗುವಾಗ, ಆ ಮನೆಯ ಹೆಂಗೆಳೆಯರು ಇಡೀ ಬೈಲಿಗೆ ಕೇಳಿಸುವಷ್ಟು ದೊಡ್ಡ ದನಿಯಲ್ಲಿ ಬತ್ತ ಕುಟ್ಟುವ ಹಾಡನ್ನು ಹಾಡುವುದನ್ನು ಕೇಳಿಸಿಕೊಳ್ಳಬಹುದು, ಮೊಗವೀರರ ಮನೆಯ ಕೊಟ್ಟಿಗೆಯಲ್ಲಿ ವರ್ಷಕ್ಕೊಮ್ಮೆ ಹಲವು ದಿನ ಠಿಕಾಣಿ ಹೂಡುವ ‘ಕಲಾಯಿ ಸಾಹೇಬ’ರ ಪಾತ್ರೆ ಸದ್ದು ಕೇಳಿಸಲೂಬಹುದು, ಗಂಟಿ ಮೇಯಿಸುವ ಮಕ್ಕಳು ಚೀರ್ ಆಡುವುದನ್ನೋ, ಲಗೋರಿ ಆಡುವು ದನ್ನೋ ನೋಡಬಹುದು, ಭಟ್ಟರ ಮನೆ ಹತ್ತಿರ ಬಂದರೆ, ಗದ್ದೆ ಉಳುವ ಭಟ್ಟರ ಕ್ರಾಂತಿಕಾರಿ ನಿಲುವನ್ನು ಕಂಡು ವಿಸ್ಮಯ ಪಡುವ ಅವಕಾಶವೂ ದೊರಕಬಹುದು.

ಈ ದಾರಿಯು ನಮ್ಮ ಮನೆಯ ಬಳಿ ಬಂದಾಗ, ಪೂರ್ವಕ್ಕೆ ತಿರುಗಿ, ಪುನಃ ಅರ್ಧ ಕಿ.ಮೀ. ಸಾಗಿ, ಚೇರ್ಕಿ ಮೆಟ್ಟಿಲಿನ ಬಳಿ, ಹರನಗುಡ್ಡೆಗೆ ಸಾಗುವ ದಾರಿಯಲ್ಲಿ ಕೊನೆಗೊಳ್ಳುತ್ತಿತ್ತು. ಚೇರ್ಕಿ ಬೈಲಿನುದ್ದಕ್ಕೂ ಅಲ್ಲಲ್ಲಿ ಹಲವು ಮನೆಗಳು – ಉಪಾದ್ಯರ ಮನೆ, ಉಪ್ಪೂರರ ಮನೆ, ಹೋರರ ಮನೆ, ಕೊಮೆ ಪೂಜಾರರ ಮನೆ, ನಮ್ಮ ಮೇಸ್ಟ್ರು ಭಟ್ಟರ ಮನೆ – ಹೀಗೆ. ನಮ್ಮ ಮುದೂರಿ ಬೈಲಿನ ವಿವರ ಇಷ್ಟು ಏಕೆ
ಬರೆದೆನೆಂದರೆ, ಮುದೂರಿ ಬೈಲಿನ ಇಕ್ಕೆಲಗಳಲ್ಲೂ ವಾಸಿಸಿಸಿದ್ದ ಹಲವು ಮನೆಗಳವರು ಆಗಾಗ, ಅಂದರೆ ವಾರಕ್ಕೋ, ಹದಿನೈದು ದಿನಕ್ಕೋ ಒಮ್ಮೊಮ್ಮೆ ಸಂಜೆಯ ಹೊತ್ತಿಗೆ ನಮ್ಮ ಮನೆಯ ಬಳಿ ಬಂದು, ನಮ್ಮ ಅಮ್ಮಮ್ಮನ ಬಳಿ ಕೇಳುತ್ತಿದ್ದರು ‘ಅಮ್ಮ, ದಾಸಾನು ಸೊಪ್ಪು ಕೊಯ್ಕಂತೀವೆ’.

ಇವೆರಲ್ಲರಿಗೂ ನಮ್ಮ ಮನೆಯ ಆ ಎರಡು ದಾಸವಾಳ ಗಿಡಗಳ ಎಲೆಗಳೆಂದರೆ ಬಹಳ ಇಷ್ಟ, ಪ್ರೀತಿ. ನಮ್ಮ ಮನೆಯ ಸುತ್ತ ಮುತ್ತ ಹಲವು ಕೆಂಪು ದಾಸವಾಳದ ಗಿಡಗಳಿದ್ದವು. ಆದರೆ ಎಲ್ಲರಿಗೂ ಬೇಕಿದ್ದುದು, ಹಟ್ಟಿಯ ಹಿಂದೆ ಬೆಳೆದಿದ್ದ ಆ ಎರಡು ಬಿಳಿ ದಾಸವಾಳ ಗಿಡದ ಎಲೆಗಳು. ಆ ರೀತಿ ಕೇಳುಕೊಂಡು ಬಂದವರು, ಸುಮಾರು ನಾಲ್ಕರಿಂದ ಆರು ಮುಷ್ಟಿ ಬಿಳಿ ದಾಸವಾಳದ ಎಲೆಗಳನ್ನು ಕೊಯ್ದು, ಕೊಂಡೊಯ್ಯುತ್ತಿದ್ದರು. ‘ಚಿಗುರು ಕೊಯ್ಬೇಡಿ ಮಕ್ಕಳೆ’ ಎಂದು ಒಮ್ಮೊಮ್ಮೆ ಅಮ್ಮಮ್ಮ ಎಚ್ಚರಿಸುವುದಿತ್ತು. ಎಲೆ ಕೊಯ್ಯಲು ಬರುತ್ತಿದ್ದುದು ಸಾಮಾನ್ಯವಾಗಿ ಮಕ್ಕಳು.

ಕುಡಿ ಎಲೆಯನ್ನು ಕೊಯ್ಯಬೇಡಿ, ಆಗ ಗಿಡವು ಚಿಗುರಿ ಬೆಳೆಯಲು ತೊಂದರೆಯಾದೀತೆಂಬ ಕಳಕಳಿ ಅಮ್ಮಮ್ಮನ ಆ ಮಾತಿನಲ್ಲಿತ್ತು.
ನಮ್ಮ ಹಳ್ಳಿಯವರು ಮಾತ್ರವಲ್ಲ, ಆ ಎರಡು ಬಿಳಿ ದಾಸವಾಳದ ‘ಮರ’ಗಳಿಂದ ನಾವೂ ಒಮ್ಮೊಮ್ಮೆ ಎಲೆಗಳನ್ನು ಕೀಳುತ್ತಿದ್ದೆವು. ಬೇರೆ
ಪ್ರಭೇದದ ದಾಸವಾಳಕ್ಕಿಂತ ತುಸು ಚಿಕ್ಕದಾದ, ಹಚ್ಚ ಹಸಿರಿನ ಎಲೆಗಳು. ನಾಲ್ಕಾರು ಮುಷ್ಟಿ ಎಲೆ ಕೊಯ್ದು, ಚಿಕ್ಕದಾಗಿ ಕತ್ತರಿಸಿ, ಅಕ್ಕಿಯ ಜತೆ ಮಿಶ್ರಣ ಮಾಡಿ ಅರೆಯುವ ಕಲ್ಲಿನಲ್ಲಿ ಹಾಕಿ ಹಿಟ್ಟು ಮಾಡುತ್ತಿದ್ದರು. ಸರಳವಾಗಿ ಹೇಳಬೇಕೆಂದರೆ, ಉದ್ದು, ಅಕ್ಕಿಯಿಂದ ಸೆಕೆಹಿಟ್ಟು (ಇಡ್ಲಿಯ ಇನ್ನೊಂದು ರೂಪ) ಗೆ ಬಿಳಿ ದಾಸವಾಳದ ಎಲೆಗಳನ್ನು ಕತ್ತರಿಸಿ, ತಿರುವಿ ಮಿಶ್ರಣ ಮಾಡಿ ಬೇಯಿಸುತ್ತಿದ್ದರು, ಅಷ್ಟೆ. ಆಗ ಅದು ‘ದಾಸಾನು ಸೊಪ್ಪಿನ ಸೆಕೆಹಿಟ್ಟು’.

ರುಚಿಯಲ್ಲಿ ಅಕ್ಕಿಯ ಇಡ್ಲಿಗಿಂತ ಹೆಚ್ಚು ಬೇರೆ ಎನಿಸದು. ತಿನ್ನುವಾಗ ಅಲ್ಲಲ್ಲಿ ದಾಸವಾಳದ ಎಲೆಗಳ ಚೂರುಗಳು ಸಿಗುತ್ತಿದ್ದವು, ಅಷ್ಟೆ. ಬಿಳಿ ದಾಸವಾಳದ ಎಲೆಗಳನ್ನು ಹೀಗೆ ಬೇಯಿಸಿ, ಇಡ್ಲಿಯ ರೂಪದಲ್ಲಿ ತಿನ್ನುವುದು, ಅಂದಿನ ‘ಆಹಾರದಲ್ಲಿ ಔಷಧ’. ದಾಸವಾಳದ ಹಸಿರು ಎಲೆ ಗಳನ್ನು ತಿನ್ನುವುದರಿಂದ ಮಹಿಳೆಯರ ಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆಂಬ ನಂಬಿಕೆ ಇದ್ದಿರಬೇಕು ಎಂದು ನಾವೆಲ್ಲಾ ಊಹಿಸಿ ದ್ದೆವು. ಆದರೆ, ಬಿಳಿ ದಾಸವಾಳದಲ್ಲಿರುವ ಈ ಔಷಧಿಯ ಗುಣ ಕೆಂಪು ದಾಸವಾಳದಲ್ಲೇಕೆ ಇಲ್ಲ ಎಂಬುದಕ್ಕೆ ನಮ್ಮ ಅಮ್ಮಮ್ಮನ ಬಳಿ ಯಾಗಲೀ, ಹಳ್ಳಿಯ ಇತರರ ಬಳಿಯಾಗಲೀ ಸ್ಪಷ್ಟ ಉತ್ತರವಿರಲಿಲ್ಲ.

ತಿಂಗಳಿಗೊಮ್ಮೆಯಾದರೂ, ಈ ರೀತಿ ಬಿಳಿ ದಾಸವಾಳದ ಎಲೆ ಕತ್ತರಿಸಿ ಮಿಶ್ರಣ ಮಾಡಿದ ‘ದಾಸಾನು ಸೊಪ್ಪಿನ ಸೆಕೆಹಿಟ್ಟು’ನ್ನು ನಮ್ಮ
ಮನೆಯಲ್ಲಿ ಮಾಡುತ್ತಿದ್ದುದುಂಟು. ನಮ್ಮೂರಿನ ಬೈಲಿನುದ್ದಕ್ಕೂ ಇರುವ ಹಲವು ಮನೆಯವರು ಸಹ ಮಾಡುತ್ತಿದ್ದರು. ಆದರೆ, ಅದರಲ್ಲಿ ನಿರ್ದಿಷ್ಟವಾಗಿ ಇಂಥದೇ ಔಷಽಯ ಶಕ್ತಿ ಇದೆ ಎಂದು ನಮಗೆ, ಆ ಹಳ್ಳಿಯಲ್ಲಿದ್ದವಗೆ ಗೊತ್ತಿರಲಿಲ್ಲ.

ಇಂದು ಅಂತರ್ಜಾಲದಲ್ಲಿ ಹುಡುಕಿದರೆ, ದಾಸವಾಳವು ಹಲವು ಔಷಧಿಯ ಗುಣ ಹೊಂದಿದೆ ಎಂದೂ, ಮುಖ್ಯವಾಗಿ ಲಿವರ್ ಸಮಸ್ಯೆ, ಕೊಲೆಸ್ಟ್ರಾಲ್, ಬಿಪಿಯಂತಹ ಸಮಸ್ಯೆಗಳಿಗೆ ಸಹಕಾರಿ ಎಂಬ ಬಿಡುಬೀಸಾದ ಮಾಹಿತಿ ಸಿಗುತ್ತದೆ. ನಮ್ಮ ಬೈಲಿನ ಹಲವು ಮನೆಗಳವರು ನಮ್ಮ ಮನೆಯ ಆ ಎರಡು ದಾಸವಾಳ ಗಿಡಗಳಿಂದ ಎಲೆಗಳನ್ನು ಕೊಯ್ದು ಕೊಂಡೊಯ್ಯುತ್ತಿದ್ದು ಬಹು ಸಾಮಾನ್ಯ ಸಂಗತಿ. ಹಳ್ಳಿಗಳಲ್ಲಿ ಈ ರೀತಿ ಒಂದು ಮನೆಯವರ ಸ್ವತ್ತು, ಸಮೂಹದ ಒಡೆತನಕ್ಕೆ ಸೇರಿರುವುದು ಸಹಜ. ಆದರೆ, ಒಂದು ಸಂಗತಿ ಮಾತ್ರ ಸತ್ಯ. ನಮ್ಮ ಹಳ್ಳಿಯ ಆ ಎಲ್ಲಾ ಮನೆಗಳಲ್ಲಿ ‘ಬಿಳಿ ದಾಸವಾಳ’ದ ಗಿಡಗಳು ಇರಲಿಲ್ಲ.

ಆದ್ದರಿಂದಲೇ, ಅಷ್ಟೊಂದು ಜನ ನಮ್ಮ ಮನೆಯ ಆ ದಾಸವಾಳ ಗಿಡಗಳಿಂದ ಎಲೆ ಸಂಗ್ರಹಿಸುತ್ತಿದ್ದರು. ನಮಗಂತೂ ಅಂದು ಅದೊಂದು ಹೆಮ್ಮೆ – ನಮ್ಮ ಬಿಳಿ ದಾಸವಾಳದ ಎಲೆಗಳು ಹಲವು ಮನೆಗಳ ಅಗತ್ಯ ಪೂರೈಸುತ್ತಿದೆಯಲ್ಲಾ ಎಂದು. ಆ ಎರಡು ಗಿಡಗಳು ಮತ್ತೆ ಮತ್ತೆ ಚಿಗುರಿ, ಹಲವು ಮನೆಗಳ ‘ಹಸಿರು ದಾಹ’ವನ್ನು ತಣಿಸುತ್ತಿದ್ದವು. ಆದರೆ ಇಂತಹ ಜನಪ್ರಿಯ ಬಿಳಿ ದಾಸವಾಳದ ‘ಮರ’ಗಳು ಕೆಲವು ವರ್ಷಗಳ ಹಿಂದೆ ಒಣಗಿ ಹೋದವು. ಬಿಳಿ ದಾಸವಾಳದ ಆ ಎರಡು ಗಿಡಗಳು ನಮ್ಮ ಮನೆಯ ಹಟ್ಟಿಯ ಹಿಂದೆ ಈಗ ಇಲ್ಲ ಎಂದು
ನಂಬಲು ಕಷ್ಟವಾಗುತ್ತಿದೆ.

ಆ ಎರಡು ಗಿಡಗಳು ಒಣಗಿ ಹೋದ ಎರಡು ವರ್ಷಗಳ ನಂತರವೂ, ನಮ್ಮೂರಿನ ಕೆಲವರು ಬಂದು ‘ಅಮ್ಮಾ, ದಾಸಾನು ಎಲೆ ಕೊಯ್ಕಂತೆ’ ಎನ್ನುವುದಿತ್ತು. ‘ಇಲ್ಲ ಮಗಾ,ಆ ಗಿಡಗಳು ಒಣಗಿ ಹೋದವು’ ಎಂದು ನಮ್ಮ ಅಮ್ಮಮ್ಮ ವಿಷಾದದಿಂದ ಹೇಳಿದಾಗ, ಎಲೆ ಕೊಯ್ಯಲು ಬಂದವರೂ ಮುಖ ಪೆಚ್ಚು ಮಾಡಿಕೊಂಡು, ಆ ದಾಸವಾಳದ ಗಿಡದ ಕುರಿತು ಒಂದೆರಡು ಮಾತಿನಲ್ಲಿ ತಮ್ಮ ಕನಿಕರ ವ್ಯಕ್ತಪಡಿಸುತ್ತಿದ್ದರು.

ಹಲವು ವರ್ಷಗಳಿಂದ ನಮ್ಮ ಆ ಪುಟ್ಟ ತೋಟದಲ್ಲಿ ಬೆಳೆದುಕೊಂಡಿದ್ದ ಆ ಎರಡು ಗಿಡಗಳು ಏಕೆ ಒಣಗಿಹೋದವು? ಆ ಗಿಡಗಳು ಬಹಳ ಹಳೆಯವು ಎಂಬುದು ಸ್ಪಷ್ಟ ಉತ್ತರವಲ್ಲ. ಅವು ಬೆಳೆದಿದ್ದ ಜಾಗವು ತುಸು ವಿಶಿಷ್ಟ. ಮನೆ ಎದುರಿದ್ದ ಕಾಲು ಎಕರೆಯಷ್ಟು ವಿಸ್ತೀರ್ಣದ ಪುಟ್ಟ ಅಡಕೆ ತೋಟದ ಮಧ್ಯೆ ಅವು ಬೆಳೆದಿದ್ದವು. ಮುಖ್ಯವಾಗಿ, ಅವುಗಳ ಬುಡದಲ್ಲಿ ಒಂದು ಪುಟ್ಟ ತೋಡು ಇತ್ತು. ಸುಮಾರು ಒಂದು ಅಡಿ ಅಗಲ, ಎರಡು ಅಡಿ ಆಳವಿದ್ದ ಆ ಪುಟಾಣಿ ತೋಡಿನಲ್ಲಿ, ವರ್ಷದ ಹತ್ತು ತಿಂಗಳುಗಳ ಕಾಲ ನೀರು ಹರಿಯುತ್ತಿತ್ತು.

ಮಳೆಗಾಲದಲ್ಲಂತೂ ರಭಸವಾಗಿ ನೀರು ಹರಿಯುತ್ತಿತ್ತು. ತೋಟದಾಚೆ ಇದ್ದ ಗದ್ದೆಯಲ್ಲಿ ಬೆಳೆಯುತ್ತಿದ್ದ ಎರಡನೆಯ ಬೆಳೆಗೆ ನೀರು ಹಾಯಿ ಸಲೆಂದು, ಗುಡ್ಡದ ಬಳಿಯಿದ್ದ ದೊಡ್ಡ ತೋಡಿನಿಂದ ನೀರನ್ನು ತಿರುವಿಸಿಕೊಂಡು ಬಂದು, ಆ ಪುಟ್ಟ ತೋಡಿನಲ್ಲಿ ಹರಿಸಿದ್ದರು. ಆದರೆ, ಕ್ರಮೇಣ, ಮೇಲಿನಿಂದ ನೀರು ಹಾಯಿಸಿಕೊಂಡು ಬರುವುದು ಕಷ್ಟವಾಗತೊಡಗಿತು, ಗುಡ್ಡದಲ್ಲಿರುವ ದೊಡ್ಡ ಮರಗಳನ್ನು ಕಡಿದು ಸಾಗಿಸಿ ದ ನಂತರ, ಮೇಲಿನ ತೋಡಿನಲ್ಲಿ ಡಿಸೆಂಬರ್ ಹೊತ್ತಿಗೆ ಒರತೆ ಬತ್ತಿ ಹೋಗುತ್ತಿತ್ತು.

ಆದ್ದರಿಂದ ಪುಟ್ಟ ತೋಡಿನಲ್ಲಿ ನೀರಿನ ಹರಿವು ತೀರಾ ಕಡಿಮೆಯಾಯಿತು. ಹಿಂದೆ ಆ ಪುಟ್ಟ ತೋಡಿನ ನೀರು ಆ ಎರಡು ದಾಸವಾಳ ಗಿಡಗಳಿಗೆ ಬಹುಮಟ್ಟಿಗೆ ವರ್ಷದುದ್ದಕ್ಕೂ ಉಣಿಸುತ್ತಿತ್ತು. ಆದ್ದರಿಂದಲೇ ಇರಬೇಕು, ಊರಿನವರು ಎಷ್ಟೇ ಎಲೆ ಕೊಯ್ದರೂ, ಆ ಎರಡು ಗಿಡಗಳು ಚೆನ್ನಾಗಿ ಬೆಳೆದುಕೊಂಡಿದ್ದವು. ತೋಡಿನ ನೀರು ಒಣಗಿದ ನಂತರ, ಬೇಸಗೆಯಲ್ಲಿ ಅವಕ್ಕೆ ನೀರಿನಾಶ್ರಯ ಕಡಿಮೆಯಾ ಯಿತು. ನಮ್ಮ ಮನೆಯ ಸುತ್ತಲೂ ಮರಗಳಿದ್ದರೂ, ಎಪ್ರಿಲ್, ಮೇ ತಿಂಗಳುಗಳಲ್ಲಿ ಬಿರುಬೇಸಗೆಯೇ ಧರೆಗಿಳಿಯುತ್ತದೆ, ಬಾವಿ ನೀರು ತಳ ಕಾಣುತ್ತದೆ. ಅಂತಹ ಬೇಸಗೆಯ ಝಳವನ್ನು ತಡೆಯಲಾರದೇ, ಆ ಎರಡು ದಷ್ಟಪುಟ್ಟ ದಾಸವಾಳ ಗಿಡಗಳು ಒಣಗಿ ಹೋಗಿರಬೇಕು. ಹಳ್ಳಿಯವರು ಎಲೆ ಕೀಳುವ ವೇಗಕ್ಕೆ ಸರಿಯಾಗಿ ಹೊಸ ಎಲೆಗಳನ್ನು ಚಿಗುರಿಸಲು ಸಾಧ್ಯವಾಗದೇ, ಗಿಡಗಳು ಬಸವಳಿದವು.

ಅದೇ ಬಿಳಿದಾಸವಾಳದ ಕೆಲವು ಟೊಂಗೆಗಳನ್ನು ನೆಟ್ಟು, ಹೊಸ ಗಿಡಗಳನ್ನು ಬೆಳೆಸಲು ನಾವು ಪ್ರಯತ್ನಿಸಿದ್ದುಂಟು. ಕೆಲವು ಸಣ್ಣಗೆ ಬೆಳೆದೂ ಇವೆ. ಆದರೆ ಇಂದು ಅದರ ಎಲೆಗಳನ್ನು ಯಾರೂ ಕೊಯ್ಯುವುದಿಲ್ಲ. ಅದೇಕೋ ನಮ್ಮ ಮನೆಯವರನ್ನೂ ಸೇರಿಸಿಕೊಂಡು, ನಮ್ಮ ಬೈಲಿನ ಹೆಚ್ಚಿನವರಿಗೆ, ಹಳೆ ಕಾಲದ ಇಂತಹ ಆಹಾರಪದ್ಧತಿಗಳ ಮೇಲಿನ ಪ್ರೀತಿ ಕಡಿಮೆಯಾಗಿದೆ. ಜತೆಗೆ, ಅಂಗಡಿಯಲ್ಲಿ ಸಿಗುವ ಔಷಧ, ಮಾತ್ರೆಗಳ ಜಾದೂವಿನ ಪ್ರಭಾವದಿಂದಲೂ ಇರಬಹುದು, ಇಂತಹ ಪುರಾತನ ತಿನಿಸುಗಳು ಮರೆಗೆ ಸರಿದಿವೆ. ಬಿಳಿ
ದಾಸವಾಳದ ಎಲೆ ಕತ್ತರಿಸಿ ಮಿಶ್ರಣ ಮಾಡಿ ತಯಾರಿಸುವ ‘ಸೆಕೆಹಿಟ್ಟು’ಗೆ ಇಂದು ನಮ್ಮ ಮೆನುವಿನಲ್ಲಿ ಸ್ಥಾನವಿಲ್ಲ!