Wednesday, 30th October 2024

ಬಿಸಿ ಬಂಡಿಯಲ್ಲಿ ತಮ್ಮದೂ ರೊಟ್ಟಿ ಸುಟ್ಟರೆ !?

ವಿದೇಶವಾಸಿ

‘ಡಿ- ಕಂಪನಿ’ಯ ಮುಖ್ಯಸ್ಥ, ಭೂಗತ ಜಗತ್ತಿನ ದಾವೂದ್ ಇಬ್ರಾಹಿಂ ಬದುಕಿದ್ದಾನಾ? ಇಲ್ಲವಾ? ಇತೀಚೆಗೆ ಬಂದ ಕೆಲವು ಸುದ್ದಿ ಈ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳುವಂತೆ ಮಾಡಿದೆ. ಭಾರತಕ್ಕೆ ಬಹಳ ವರ್ಷಗಳಿಂದ ಬೇಕಾಗಿರುವ ಮನುಷ್ಯರ ಪಟ್ಟಿಯಲ್ಲಿ ಈ ಹೆಸರು ಮುಂಚೂಣಿಯಲ್ಲಿದೆ. ಸರಿಸುಮಾರು ೪ ದಶಕದಿಂದ ಭಾರತ ಇಬ್ರಾಹಿಂನ ಬೇಟೆಗೆ ತೊಡಗಿದೆಯಾದರೂ ಇದುವರೆಗೆ ಅವನನ್ನು ದೇಶಕ್ಕೆ ಕರೆತರುವಲ್ಲಿ ಯಶಸ್ವಿಯಾಗಲಿಲ್ಲ. ಆತ ಎಲ್ಲಿದ್ದಾನೆಂಬ ಅಧಿಕೃತ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ, ಏಕೆಂದರೆ ಪಾಕಿಸ್ತಾನ ಹೇಳಲಿಲ್ಲ.

ಇತ್ತೀಚೆಗೆ ಆತನ ಕುರಿತಾದ ಸುದ್ದಿ ಮತ್ತು ಇತರ ಆತಂಕವಾದಿಗಳ, ಅದರಲ್ಲೂ ಪಾಕಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆ ಮಾತ್ರ ಎಲ್ಲ ಕಡೆ ಸಂಚಲನ
ಮೂಡಿಸುತ್ತಿದೆ. ಕಳೆದ ಡಿ.೧೮ರಂದು ಭಾರತದ ಬಹುತೇಕ ಸುದ್ದಿ ವಾಹಿನಿಗಳಲ್ಲಿ ‘ದಾವೂದ್ ಇಬ್ರಾಹಿಂ ಸತ್ತಿದ್ದಾನೆ, ಅವನ ಮನೆಯಲ್ಲಿಯೇ ಯಾರೋ ಅವನಿಗೆ ವಿಷ ಉಣಿಸಿದ್ದಾರೆ’ ಎಂಬ ಸುದ್ದಿ ಪ್ರಸಾರವಾಯಿತು. ಭಾರತದಲ್ಲಿ ಪ್ರಳಯ, ಮೋದಿ, ಯೋಗಿ, ಪಾಕಿಸ್ತಾನ, ಭೂಗತಲೋಕ ಇತ್ಯಾದಿಗಳು ಸುದ್ದಿ ವಾಹಿನಿ ಗಳಿಗೆ ಹೆಚ್ಚಿನ ಟಿಆರ್‌ಪಿ ತಂದುಕೊಡುವುದರಿಂದ, ಅವು ಆಗಾಗ ಅರ್ಧ ಅಥವಾ ಒಂದು ತಾಸಿನ ಕಾರ್ಯಕ್ರಮ ಮಾಡುವುದಿದೆ. ಆದರೆ, ಈ ಬಾರಿ ಅದು ಕಾರ್ಯಕ್ರಮವಾಗಿರದೆ ಸುದ್ದಿಯಾಗಿತ್ತು. ಆದ್ದರಿಂದ ಈ ವಿಷಯವನ್ನು ತೀರಾ ನಂಬದಿದ್ದರೂ, ನಂಬದಿರಲೂ ಸಾಧ್ಯವಿರಲಿಲ್ಲ.

ಅದಕ್ಕೆ ಕಾರಣ ಕಳೆದ ೮-೧೦ ತಿಂಗಳಿನಿಂದ ನಡೆಯುತ್ತಿರುವ ಘಟನೆಗಳು. ಕಳೆದ ಕೆಲ ತಿಂಗಳಿನಿಂದ ಒಂದಷ್ಟು ಆತಂಕವಾದಿಗಳು, ಪ್ರತ್ಯೇಕತಾವಾದಿಗಳ ನಿಗೂಢ ಸಾವಾಗುತ್ತಿದೆ. ಯಾರೋ ಅಜ್ಞಾತ ಬಂದೂಕುಧಾರಿ ಇವರಿಗೆ ಗುಂಡಿಕ್ಕಿ ಕೊಂದು ಹೋಗುತ್ತಿದ್ದಾನೆ ಎನ್ನುವ ವಿಷಯ ಆಗಾಗ ಕೇಳಿಬರುತ್ತಿದೆ. ಇದು ಒಬ್ಬನದೇ ಕೆಲಸವೇ ಅಥವಾ ಅಂಥವರು ಇನ್ನೂ ಇದ್ದಾರೆಯೇ ಗೊತ್ತಿಲ್ಲ. ಇಂಥವರು ಬೈಕ್‌ನಲ್ಲಿ ಬಂದು ೧೦-೧೫ ಸೆಕೆಂಡಿನಲ್ಲಿ ತಮ್ಮ ಕೆಲಸ ಮುಗಿಸಿ ಹೋಗುತ್ತಾರೆ. ಕೆಲವು ವೇಳೆ ಟ್ರಕ್ ಹಾಯಿಸಿ, ವಿಷ ಕೊಟ್ಟು ಕೊಂದ ಉದಾಹರಣೆಯೂ ಇದೆ.

ಆಶ್ಚರ್ಯವೆಂದರೆ ಹೀಗೆ ಇಷ್ಟೊಂದು ಜನ ಸತ್ತರೂ ಅಥವಾ ಕೊಲ್ಲಲ್ಪಟ್ಟರೂ, ಅಲ್ಲಿಯ ಸರಕಾರ ಈ ವಿಷಯದ ಕುರಿತು ಹೆಚ್ಚು ಚರ್ಚಿಸುವುದಿಲ್ಲ, ತನಿಖೆ ಮಾಡುತ್ತಿರುವಂತೆ ಕಾಣುವುದಿಲ್ಲ, ಒಂದು ವೇಳೆ ಮಾಡುತ್ತಿದ್ದರೂ ಜನಸಾಮಾನ್ಯರಿಗಂತೂ ತಿಳಿಯುತ್ತಿಲ್ಲ. ಇಂಥ ವಿಷಯಗಳು ಹೆಚ್ಚು ಪ್ರಚಾರವಾಗುವುದು ಯಾವ ಸರಕಾರಕ್ಕೂ ಬೇಡ. ಏಕೆಂದರೆ ಏನೇ ತನಿಖೆ ಮಾಡಿ, ಎಷ್ಟೇ ವಿಚಾರಣೆ ನಡೆಸಿದರೂ ಅದರಿಂದ ಲಾಭಕ್ಕಿಂತ ನಷ್ಟವೇ
ಹೆಚ್ಚು. ಆದರೆ ಅಂಥವರು ಸಾಯುವುದರಿಂದ ಆ ದೇಶಕ್ಕೆ ನಷ್ಟಕ್ಕಿಂತ ಲಾಭವೇ ಹೆಚ್ಚು.

ಇರಲಿ, ದಾವೂದ್ ಇಬ್ರಾಹಿಂ ವಿಷಯಕ್ಕೆ ಬರುವುದಾದರೆ, ಆತ ಮೊದಲು ಭೂಗತ ಲೋಕದ ದೊರೆಯಾಗಿದ್ದು ನಂತರ ಆತಂಕವಾದಿಯಾಗಿ ಬದಲಾ
ದವ. ಭಾರತದಲ್ಲಿ, ರೌಡಿಗಳು, ಭೂಗತ ಲೋಕದಲ್ಲಿರುವವರು, ಆತಂಕವಾದಿಗಳು ಇದೇ ಮೊದಲಲ್ಲ, ಆದರೆ ಭೂಗತ ಲೋಕದಿಂದ ಆತಂಕವಾದಿ ಯಾಗಿ ಬದಲಾದವರಲ್ಲಿ ದಾವೂದ್ ಮೊದಲಿಗ. ಹಫ್ತಾ ವಸೂಲಿ, ಬಾಲಿವುಡ್ ಮಾಫಿಯಾ, ರಿಯಲ್ ಎಸ್ಟೇಟ್ ಧಮಕಿ, ಡ್ರಗ್ಸ್ ಪೆಡ್ಲಿಂಗ್, ಗೋಲ್ಡ್
ಸ್ಮಗ್ಲಿಂಗ್ ಇತ್ಯಾದಿ ದಂಧೆ ಮಾಡಿಕೊಂಡು ಇದ್ದವ ಆತ.

೧೯೯೩ರಲ್ಲಿ ಮುಂಬೈನ ೧೩ ಕಡೆ ನಡೆದ ಬಾಂಬ್ ಬ್ಲಾಸ್ಟ್‌ನಲ್ಲಿ ಆತನ ಕೈವಾಡವಿದೆ ಎಂದು ತಿಳಿದಾಗಿಂದ ಆತಂಕವಾದಿಗಳ ಪಟ್ಟಿಗೆ ಸೇರಿದ. ದಾವೂದ್‌ನಷ್ಟು ಶ್ರೀಮಂತ ಆತಂಕವಾದಿ ಯಾರೂ ಇರಲಿಕ್ಕಿಲ್ಲ. ೧೯೯೦ರಲ್ಲೇ ಆತ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಯ ಪಾಸ್‌ಪೋರ್ಟ್ ಪಡೆದಿದ್ದ. ಕರಾಚಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಈ ನಡುವೆ ಕೆಲವು ವರ್ಷ ದುಬೈನಲ್ಲೂ ವಾಸವಾಗಿದ್ದ. ಭಾರತ ಏನೇ ದಾಖಲೆ ಕೊಟ್ಟರೂ, ಎಷ್ಟೇ ಬಾರಿ ಕೇಳಿಕೊಂಡರೂ, ಪಾಕಿಸ್ತಾನ ಆತನನ್ನು ಭಾರತಕ್ಕೆ ಒಪ್ಪಿಸಲಿಲ್ಲ. ಬದಲಾಗಿ ಆತನಿಗೆ ಐಎಸ್‌ಐ ಮತ್ತು ಸೇನೆಯ ರಕ್ಷಣೆ ಒದಗಿಸಿತು.

೨೦೦೮, ನವೆಂಬರ್ ೨೬ರಂದು (೨೬/೧೧) ಮುಂಬೈ ಮೇಲೆ ದಾಳಿ ಮಾಡಿದ ಆತಂಕವಾದಿಗಳಿಗೆ ಮುಂಬೈ ತಲುಪಲು ಸಹಾಯ ಮಾಡಿದ ಆರೋಪವೂ ಆತನ ಮೇಲಿತ್ತು. ವಿಶ್ವದ ಪ್ರಮುಖ ಆತಂಕವಾದಿ ಸಂಘಟನೆಗಳಾದ ಅಲ್-ಖೈದಾ, ಲಷ್ಕರ್-ಎ-ತೈಬಾ ಮುಂತಾದ ಸಂಘಟನೆಗಳ ಜತೆಯೂ ಆತನಿಗೆ ಸಂಬಂಧವಿತ್ತು ಎಂಬ ಕಾರಣಕ್ಕೆ ೨೦೧೨ರಲ್ಲಿ ಇಂಟರ್‌ಪೋಲ್ ಮತ್ತು ಅಮೆರಿಕದ ಎಫ್ ಬಿಐ ದಾವೂದ್ ಹೆಸರನ್ನು ಮೊದಲ ೧೦ ಆತಂಕವಾದಿಗಳ ಪಟ್ಟಿಗೆ ಸೇರಿಸಿದ್ದವು. ದಾವೂದ್‌ನ ಸುಳಿವು ನೀಡಿದವರಿಗೆ ಭಾರತದ ಎನ್‌ಐಎ ೨೫ ಲಕ್ಷ ರು. ಬಹುಮಾನ ಘೋಷಿಸಿದರೆ, ಅಮೆರಿಕದ ಎಫ್ ಬಿಐ ೨೫ ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.

ಅಂಥವನ ಅಂತರ್ವ್ಯಾಪ್ತಿಗೆ ತಲುಪಿ ಯಾರಾದರೂ ವಿಷ ಹಾಕುತ್ತಾರೆ ಎಂದರೆ ಹೇಗೆ? ಹಾಗಾದರೆ ದಾವೂದ್ ಸಾವಿನ ಸುದ್ದಿ ಎಷ್ಟು ನಿಜ? ಕೆಲವರ ಪ್ರಕಾರ ಸತ್ತಿದ್ದಾನೆ, ಇನ್ನು ಕೆಲವರ ಪ್ರಕಾರ ಬದುಕಿದ್ದಾನೆ. ಏನೇ ಆದರೂ ಆತನಿಗೆ ಯಾರೋ ವಿಷ ಕೊಟ್ಟಿದ್ದಂತೂ ಹೌದು. ದಾವೂದ್‌ಗೆ ವಿಷ ಕೊಟ್ಟಿದ್ದಾರೆ (ಅಥವಾ ಹಾಕಿದ್ದಾರೆ) ಅಂದರೆ ಅದೇ ದೊಡ್ಡ ಸುದ್ದಿ. ‘ಡಾನ್‌ನನ್ನು ಹಿಡಿಯುವುದು ಕಷ್ಟವಷ್ಟೇ ಅಲ್ಲ, ಅಸಾಧ್ಯವೂ ಹೌದು’ ಎನ್ನುವಂತಿರುವಾಗ, ಯಾರೋ ಬಂದು ವಿಷ ಕೊಟ್ಟು ಹೋಗು ತ್ತಾರೆ ಎಂದರೆ ಹೇಗಾಗಬೇಡ? ಬೇರೆಯವರಿಗಾದರೆ ಹೌದು, ದಾವೂದ್‌ನಂಥವರಿಗೆ? ದಾವೂದ್‌ಗೆ ಏನಿಲ್ಲವೆಂದರೂ ೫-೬ ಸ್ತರದ ರಕ್ಷಣಾ ಕವಚವಿದೆ.

ಪಾಕಿಸ್ತಾನದ ಸೇನೆ, ಐಎಸ್‌ಐ, ಅಲ್ಲಿಯ ಪೊಲೀಸ್, ಅದರ ನಂತರ ಅವನದ್ದೇ ಸೆಕ್ಯುರಿಟಿಗಳು, ಆಪ್ತವಲಯ/ಪರಿವಾರ ಇವನ್ನೆಲ್ಲ ಭೇದಿಸಿ
ಅವನಲ್ಲಿಗೆ ತಲುಪುವುದೇ ದುಸ್ತರ ಎಂದಿರುವಾಗ, ಅವನಿಗೆ ವಿಷ ಹಾಕಿದರಂತೆ ಎಂದರೆ ನಂಬ ಬಹುದೇ? ಕಷ್ಟವಾದರೂ ನಂಬಬೇಕು. ಅದಕ್ಕೆ ಕಾರಣವೂ ಇದೆ. ದಾವೂದ್‌ಗೆ ವಿಷ ಹಾಕಿದರಂತೆ ಎಂಬ ವಿಷಯ ಹೊರಬರುತ್ತಿದ್ದಂತೆ ಕರಾಚಿಯಲ್ಲಿ ಕೆಲವು ಗಂಟೆ ವರೆಗೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾ ಗಿತ್ತು. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್‌ನನ್ನು ಗೃಹಬಂಧನದಲ್ಲಿ ಇರಿಸಲಾ ಗಿತ್ತು. ನಿಮಗೆ ತಿಳಿದಿರಬಹುದು, ಮಿಯಾಂದಾದ್ ಮತ್ತು ದಾವೂದ್ ಸಂಬಂಽಗಳು. ಮಿಯಾಂದಾದ್ ಗೆ ಕೆಲವು ಪತ್ರಕರ್ತರು ಕರೆ ಮಾಡಿ ದಾವೂದ್ ವಿಷಯ ಕೇಳಿದಾಗ, ‘ದಾವೂದ್ ಕುರಿತಂತೆ ನನ್ನಲ್ಲಿ  ಏನನ್ನೂ ಕೇಳಬೇಡಿ, ನನಗೇನೂ ಗೊತ್ತಿಲ್ಲ’ ಎಂದ.

ಪಾಕಿಸ್ತಾನವೂ ಈ ಕುರಿತು ಏನೂ ಹೇಳುತ್ತಿಲ್ಲ. ಅದು ಹೇಳುವ ಪರಿಸ್ಥಿತಿಯಲ್ಲೂ ಇಲ್ಲ. ಏಕೆಂದರೆ ಈ ವಿಷಯ ಸತ್ಯ ಎಂದೇ ಹೇಳಲಿ, ಸುಳ್ಳು ಎಂದೇ ಹೇಳಲಿ, ಇಷ್ಟು ದಿನ ದಾವೂದ್ ತನ್ನಲ್ಲಿಲ್ಲ ಎಂದೇ ಪ್ರತಿಪಾದಿಸಿಕೊಂಡು ಬಂದಿರುವ ಪಾಕಿಸ್ತಾನ ಜಗತ್ತಿನ ಮುಂದೆ ಬೆತ್ತಲಾಗುತ್ತದೆ. ಏನೇ ಆದರೂ,
ಕಟ್ಟ ಕಡೆಯ ಪ್ರಶ್ನೆ, ‘ದಾವೂದ್‌ಗೆ ವಿಷ ಹಾಕಿದವರು ಯಾರು?’ ಇಲ್ಲಿ ಕೆಲವು ತರ್ಕಗಳಿವೆ. ಪಾಕಿಸ್ತಾನವೇ ಈ ಕೃತ್ಯ ಮಾಡಿದೆ ಎನ್ನುವುದು ಮೊದಲ ತರ್ಕ. ಅದಕ್ಕೆ ಕಾರಣ ಪಾಕಿಸ್ತಾನದ ಇಂದಿನ ಆರ್ಥಿಕ ಪರಿಸ್ಥಿತಿ. ಪಾಕಿಸ್ತಾನ ಪೂರ್ತಿ ಸಾಲದಲ್ಲಿ ಮುಳುಗಿ ಕಂಗಾಲಾಗಿದೆ. ಮುಂಬರುವ ೬ ತಿಂಗಳಿನಲ್ಲಿ ೧೪ ಬಿಲಿಯನ್ ಡಾಲರ್ ಸಾಲ ತೀರಿಸಬೇಕಿದೆ. ಮುಂದಿನ ೩ ವರ್ಷದಲ್ಲಿ ಒಟ್ಟೂ ೭೭ ಬಿಲಿಯನ್ ಡಾಲರ್ ಸಾಲ ತೀರಿಸಬೇಕಿದೆ ಪಾಕಿಸ್ತಾನ.

ಸದ್ಯಕ್ಕೆ, ಒಂದು ಕಾಲದ ಮಿತ್ರದೇಶಗಳಾದ ಸೌದಿ ಅರೇಬಿಯಾ, ಯುಎಇ ಆದಿಯಾಗಿ ಯಾವ ದೇಶವೂ ಪಾಕಿಸ್ತಾನಕ್ಕೆ ಸಾಲ ನೀಡುತ್ತಿಲ್ಲ. ಇಂಥ
ವೇಳೆ ಪಾಕ್‌ಗಿರುವ ಏಕೈಕ ಮಾರ್ಗ ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು. ಅದರಲ್ಲೂ, ಇಂಟರ್‌ನ್ಯಾಷನಲ್ ಮಾನಿಟರಿ
-ಂಡ್, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಇತ್ಯಾದಿಗಳು ಮಾತ್ರ ಪಾಕಿಸ್ತಾನಕ್ಕೆ ನೆರವಾಗ ಬಹುದು. ಆದರೆ, ಅದಕ್ಕೆ ಊಅSಊ (ಫೈನ್ಯಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ನಿಯಮ ಗಳನ್ನು ಪೂರೈಸಬೇಕು. ಸದ್ಯ ಪಾಕಿಸ್ತಾನ ‘ಗ್ರೇ ಲಿಸ್ಟ್’ ನಲ್ಲಿದ್ದು, ಬ್ಲ್ಯಾಕ್ ಲಿಸ್ಟ್ ತಲುಪುವ ಹಂತದಲ್ಲಿದೆ. ಗ್ರೇ ಲಿಸ್ಟ್‌ನಿಂದ ಪಾಕಿಸ್ತಾನ ಹೊರಬರಬೇಕಾದರೆ ಆತಂಕವಾದಿಗಳ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕು, ಅವರ ವಿರುದ್ಧ ಕ್ರಮವನ್ನೂ ಕೈಗೊಳ್ಳ
ಬೇಕು.

ಮುಂಬರುವ ದಿನಗಳಲ್ಲಿ ಧನಸಹಾಯ ಪಡೆಯುವುದಕ್ಕಾಗಿ ಅದು, ಇಷ್ಟು ದಿನ ತಾನೇ ಸಾಕಿ ಬೆಳೆಸಿದ ಆತಂಕವಾದಿಗಳ ವಧೆ ಮಾಡಬೇಕಾಗಿದೆ,
ಮಾಡುತ್ತಿದೆ. ಇಲ್ಲವಾದರೆ ಕಳೆದ ೩-೪ ತಿಂಗಳಿನಲ್ಲಿ ೨೦ಕ್ಕೂ ಹೆಚ್ಚು ಆತಂಕವಾದಿಗಳು ನಿಗೂಢವಾಗಿ ಸಾಯುವುದು ಹೇಗೆ? ಅದೂ ಒಂದೆರಡು ಕಡೆ
ಯಲ್ಲ, ಕರಾಚಿ, ಖೈಬರ್ ಪಕ್ತೂನ್‌ಖ್ವಾ, ನೀಲಮ್ ಘಾಟ್, ಮುಜಫರಾಬಾದ್, ಲಾಹೋರ್, ಸಿಯಾಲ್‌ಕೋಟ್, ರಾವಲ್ಪಿಂಡಿ ಹೀಗೆ ದೇಶದ ಎಲ್ಲ
ಕಡೆಗಳಲ್ಲೂ ಸಾಯುತ್ತಾರೆ ಎಂದರೆ? ಹೊರಗಿನಿಂದ ಬಂದು ಯಾರಾದರೂ ಹೀಗೆ ಕೊಂದು ಹೋಗುತ್ತಾರೆ ಎಂದರೆ, ದೇಶ ಎಷ್ಟು ಭದ್ರವಾಗಿದೆ
ಎಂಬ ಪ್ರಶ್ನೆ ಮೂಡುತ್ತದೆ.

ಆದ್ದರಿಂದ ಪಾಕಿಸ್ತಾನವೇ ಈ ಕೃತ್ಯ ಮಾಡುತ್ತಿದೆ ಎನ್ನುವುದು ಮೊದಲ ತರ್ಕ. ಭಾರತದ ‘ರಾ’ (ಅU) ಅದನ್ನೆಲ್ಲ ಮಾಡಿಸುತ್ತಿದೆ ಎನ್ನುವುದು ಇನ್ನೊಂದು ವಾದ. ಅಜ್ಞಾತ ವ್ಯಕ್ತಿಗಳು ಇದುವರೆಗೆ ಕೊಂದವರ ಪಟ್ಟಿ ನೋಡಿದರೆ ಅದೂ ಹೌದು ಎನಿಸುತ್ತದೆ. ಕಾರಣ, ಸತ್ತವರೆಲ್ಲ ಭಾರತದ ಹಿಟ್‌ಲಿಸ್ಟ್‌ ನಲ್ಲಿದ್ದವರು. ಕಾಶ್ಮೀರದಲ್ಲಿ ಆತಂಕವಾದ ಹಬ್ಬಿಸಿದವರು, ಖಲಿಸ್ತಾನ ಪ್ರತ್ಯೇಕತೆ ಯನ್ನು ಪ್ರತಿಪಾದಿಸಿದವರೇ ಅಜ್ಞಾತರಿಂದ ಸಾಯುವುದೇಕೆ? ಭಾರತದ ಪ್ರಧಾನಿ ಇಂದಿರಾ ಗಾಂಧಿಯನ್ನು ಹತ್ಯೆಗೈದ ಭಿಂದ್ರನ್ ವಾಲೆಯ ಅಳಿಯ, ಭಾರತಕ್ಕೆ ಪಾಕ್‌ನಿಂದ ಡ್ರಗ್ಸ್ ಪೂರೈಸುತ್ತಿದ್ದ, ಖಲಿಸ್ತಾನ್ ಪರವಾಗಿದ್ದ ಲಕ್ಬೀರ್ ಸಿಂಗ್, ಉಧಮ್ ಪುರದಲ್ಲಿ ಭಾರತದ ಸೇನೆಯ ಮೇಲೆ ದಾಳಿ ಮಾಡಿದ ಅದ್ನಾನ್ ಅಹ್ಮದ್, ೨೬/೧೧ರ ಮಾಸ್ಟರ್ ಮೈಂಡ್ ಎಂದೇ ಖ್ಯಾತನಾಗಿದ್ದ ಸಾಜಿದ್ ಮೀರ್ ಸೇರಿದಂತೆ ಎಲ್ಲರೂ ಭಾರತದ ಹಿಟ್‌ಲಿಸ್ಟ್‌ನಲ್ಲಿದ್ದವರು.

ಪಾಕಿಸ್ತಾನದಲ್ಲಷ್ಟೇ ಅಲ್ಲದೆ, ಕೆನಡಾ ಮತ್ತು ಬ್ರಿಟನ್ ನಲ್ಲೂ ಇಂಥ ಘಟನೆಗಳು ನಡೆದಿವೆ. ಇವರೂ ಭಾರತದ ವಿರುದ್ಧ ಕೆಲಸ ಮಾಡಿದವರೇ. ಅದಕ್ಕೆ
ತಕ್ಕಂತೆ ಕೆನಡಾ ಕೂಡ ಇದು ಭಾರತದ ಕೃತ್ಯ ಎನ್ನುತ್ತಿದೆ, ಅದಕ್ಕೆ ಅಮೆರಿಕವೂ ದನಿಗೂಡಿಸಿದೆ. ಇದಕ್ಕೂ ಮೊದಲು ಭಾರತ ಇಂಥ ಕಾರ್ಯ ಮಾಡಿದ್ದರಿಂದ ಈ ವಾದಕ್ಕೆ ಇನ್ನಷ್ಟು ಬಲ ಸಿಗುತ್ತಿದೆ. ಇಂದಿಗೆ ೪೦ ವರ್ಷ ಹಿಂದೆಯೂ ಇಂಥ ಘಟನೆ ಸಂಭವಿಸಿತ್ತು. ಭಾರತದ ಹಿಟ್‌ಲಿಸ್ಟ್‌ನಲ್ಲಿರುವ
ಕೆಲವರು ಪಾಕಿಸ್ತಾನದಲ್ಲಿದ್ದರು. ಪಾಕಿಸ್ತಾನ ಕೇವಲ ಕಾಶ್ಮೀರದಲ್ಲಷ್ಟೇ ಅಲ್ಲ, ತ್ರಿಪುರಾದಲ್ಲೂ ಕೀಟಲೆ ಮಾಡುತ್ತಿತ್ತು. ಪಂಜಾಬ್‌ನಲ್ಲಿರುವ ಖಲಿಸ್ತಾನಿ
ಗಳಿಗೂ ಕುಮ್ಮಕ್ಕು ನೀಡುತ್ತಿತ್ತು. ಆಗ ‘ರಾ’ ಸಂಸ್ಥೆ ಎರಡು ತಂಡ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿತ್ತು.

ಒಂದು ತಂಡ ಪಾಕಿಸ್ತಾನದಲ್ಲಿರುವ ಆತಂಕವಾದಿ ಗಳನ್ನು ಮುಗಿಸುವ ಕೆಲಸ ಮಾಡಿದರೆ, ಇನ್ನೊಂದು ತಂಡ ಖಲಿಸ್ತಾನಿ ಆತಂಕಿಗಳನ್ನು ಮಟ್ಟಹಾಕುತ್ತಿತ್ತು. ಪಾಕ್‌ಗೆ ಇದನ್ನು ನಿಯಂತ್ರಿಸಲಾಗಲಿಲ್ಲ. ಹತ್ಯೆ ನಿಲ್ಲಿಸುವಂತೆ ಪಾಕಿಸ್ತಾನ ಎಷ್ಟೇ ಕೇಳಿಕೊಂಡರೂ ಸಾವು ಮಾತ್ರ ನಿಲ್ಲುತ್ತಿರಲಿಲ್ಲ. ಆಗ ಪಾಕಿಸ್ತಾನ ತನ್ನ ಮಿತ್ರದೇಶ ಜಾರ್ಡನ್‌ನ ಅಂದಿನ ಯುವರಾಜ (ಇಂದಿನ ರಾಜ ಅಬ್ದುಲ್ಲನ ತಂದೆ) ಹಸನ್ ಬಿನ್ ತಲಾಲ್‌ನನ್ನು ಮಧ್ಯಸ್ಥಿಕೆಗೆ ಕೇಳಿಕೊಂಡಿತ್ತು. ನಂತರ ಅದು ನಿಂತಿತು. ಆದ್ದರಿಂದ, ಇದರ ಹಿಂದೆ ಭಾರತದ ಕೈವಾಡವಿದೆ ಎನ್ನುವುದು ಇನ್ನೊಂದು ವಾದ.

ಮತ್ತೊಂದು, ಅಮೆರಿಕವೇ ಈ ಕೃತ್ಯ ಮಾಡಿರ ಬಹುದು/ಮಾಡಿಸುತ್ತಿರಬಹುದು ಎನ್ನುವುದು. ಅಮೆರಿಕ ಈ ಮೊದಲು ಪಾಕಿಸ್ತಾನದ ಅಬಟಾಬಾದ್
ನಲ್ಲಿ ಅಡಗಿದ್ದ ಅಲ್-ಖೈದಾ ಪ್ರಮುಖ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದ ರೀತಿ ಯಾರಿಗೆ ಗೊತ್ತಿಲ್ಲ ಹೇಳಿ? ಆದರೆ ಈಗಲೂ ಹಾಗೆ ಮಾಡಿದರೆ ಒಳ್ಳೆಯ ದಲ್ಲ, ಸಾಕಷ್ಟು ಟೀಕೆಗೆ ಒಳಗಾಗಬೇಕಾಗುತ್ತದೆ, ಅದರಲ್ಲೂ ಮಾನವ ಹಕ್ಕು ಸಂಸ್ಥೆಯವರು ಅರಚಲು ಆರಂಭಿಸುತ್ತಾರೆ, ಅವರಿಗೆಲ್ಲ ಉತ್ತರ ಕೊಡುತ್ತ ಕುಳಿತುಕೊಳ್ಳುವ ಬದಲು, ಸುಮ್ಮನೆ ಬಂದು ವಿಷ ಹಾಕಿ ಹೋದರೆ ಒಳ್ಳೆಯದು ಎನ್ನುವ ಲೆಕ್ಕಾಚಾರದಲ್ಲಿ ಹೀಗೆ ಮಾಡಿರಬಹುದೇ? ಪಾಕಿಸ್ತಾನದ ಹಂಗಾಮಿ ಪ್ರಧಾನಿ ಮತ್ತು ಗುಪ್ತಚರ ಇಲಾಖೆಯ ಮುಖ್ಯಸ್ಥ  ಇತ್ತೀಚೆಗೆ ಸೇರಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಯನ್ನು ಭೇಟಿಯಾಗಿ ಬಂದದ್ದರಿಂದ ಇದನ್ನು ತಳ್ಳಿ ಹಾಕುವಂತಿಲ್ಲ. ಇಲ್ಲವಾದರೆ, ಪ್ರಧಾನಿ ಹೋಗುವುದು ಓಕೆ, ಗುಪ್ತಚರ ಇಲಾಖೆಯ ಮುಖ್ಯಸ್ಥ ಹೋಗುವುದೇಕೆ? ಎಂಬ ಪ್ರಶ್ನೆ ಬಾರದಿರದು.

ಇನ್ನೊಂದು ವಿಚಾರ ಗೊತ್ತಾ? ಅಪ್ಘಾನಿಸ್ತಾನದ (ತಾಲಿಬಾನಿಗಳೂ ಸೇರಿ) ಸುಮಾರು ಒಂದು ಕೋಟಿ ಜನ ಪಾಕಿಸ್ತಾನದಲ್ಲಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ
ಅವರನ್ನೆಲ್ಲ ತಮ್ಮ ದೇಶಕ್ಕೆ ಮರಳುವಂತೆ ಕೇಳಿಕೊಂಡಿತ್ತು. ಅವರನ್ನು ಒತ್ತಾಯಪೂರ್ವಕವಾಗಿ ಹೊರಗೆ ಕಳಿಸಲೂ ಆರಂಭಿಸಿತ್ತು. ಪಾಕಿಸ್ತಾನದ
ಆರ್ಥಿಕತೆಗೆ ಡ್ರಗ್ ದಂಧೆಯಲ್ಲಿರುವವರ ಕೊಡುಗೆ ಕಮ್ಮಿಯೇನಲ್ಲ. ಪಾಕಿಸ್ತಾನಕ್ಕೆ ಒಂದು ಪಾಠ ಕಲಿಸಲು ಸಮಯ ಕಾಯುತ್ತಿರುವ ಅ-ನಿಸ್ತಾನವೂ
ದಾವೂದ್‌ನ ಕೊಲೆಗೆ ಯಾಕೆ ಯತ್ನಿಸಿರಬಾರದು? ಇನ್ನು ಕೊನೆಯದಾಗಿ, ಇಸ್ರೇಲ್‌ನ ಮೊಸಾದ್.

ಸದ್ಯ ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್ ಸೇನೆಯ ನಡುವೆ ಯುದ್ಧ ನಡೆಯುತ್ತಿದೆ. ಲೋಕದ ಮುಖಕ್ಕೆ ಕಾಣದಂತೆ ಪಾಕಿಸ್ತಾನದಿಂದ ಹಮಾಸ್‌ಗೆ
ಸಹಾಯ ದೊರಕುತ್ತಿದೆ. ಸದ್ಯದ ಸ್ಥಿತಿಯಲ್ಲಿ ಪಾಕಿಸ್ತಾನ ಯಾವ ರೀತಿಯ ಧನಸಹಾಯವನ್ನೂ ಮಾಡುವಂತಿಲ್ಲ. ಮಾಡಿದರೆ ದಾವೂದ್‌ನಂಥ ಭೂಗತ ಲೋಕದ ಶ್ರೀಮಂತರು ಮಾಡಬೇಕು. ಅಂಥವರನ್ನು ಮುಗಿಸಲು ಇದು ಒಳ್ಳೆಯ ಸಮಯ. ಹೇಗಿದ್ದರೂ ಬೇರೆಯವರ ಹತ್ಯೆಯಾಗುತ್ತಿದೆ, ಅಪವಾದವೂ ಬೇರೆಯವರ ಮೇಲೇ ಇದೆ.

ಈ ನಡುವೆ ತಾವೂ ಒಂದೆರಡು ಇಂಥ ಕೃತ್ಯ ಮಾಡಿದರೆ ಸಂಶಯ ಬೇರೆಯವರ ಮೇಲೇ ಹೋಗುತ್ತದೆಯೇ ವಿನಾ ತಮ್ಮ ಮೇಲೆ ಬರುವು ದಿಲ್ಲವಲ್ಲ! ತಮ್ಮ ಕೆಲಸವೂ ಆಯಿತು, ಅನುಮಾನವೂ ಬೇರೆಯವರ ಮೇಲೆ ಹೋಯಿತು! ‘ಯಾರೋ ರೊಟ್ಟಿ ಸುಡಲು ಹೊತ್ತಿಸಿದ ಬಂಡಿಯಲ್ಲಿ ತಮ್ಮದೂ ಒಂದೆರಡು ರೊಟ್ಟಿ ಸುಟ್ಟರೆ ತಪ್ಪೇನು?’ ಎಂಬ ಮಾತಿದೆ. ಹಾಗೆಯೇ ಅಮೆರಿಕ, ತಾಲಿಬಾನ್ ಅಥವಾ ಮೊಸಾದ್‌ನವರೂ ಮಧ್ಯದಲ್ಲಿ ಒಂದೆರಡು ರೊಟ್ಟಿ ಸುಟ್ಟರೇ? ಗೊತ್ತಿಲ್ಲ!