Saturday, 14th December 2024

ಅಮೃತವೋ ಕಾರ್ಕೋಟಕ ವಿಷವೋ ಡಿಡಿಟಿ

ಹಿಂದಿರುಗಿ ನೋಡಿದಾಗ

ಮಲೇರಿಯ ಕದನದಲ್ಲಿ ಪ್ಲಾಸ್ಮೋಡಿಯಂ ಹಾಗೂ ಅನಾಫಿಲಸ್ ಸೊಳ್ಳೆಯನ್ನು ಬಗ್ಗು ಬಡಿಯುವ ಪ್ರಯತ್ನದಲ್ಲಿ ಮನುಷ್ಯನು ರೂಪಿಸಿದ ತಂತ್ರಗಳಿಗೆ ನಾಲ್ಕು ಬಾರಿ ನೊಬೆಲ್ ಪಾರಿತೋಷಕವು ಲಭಿಸಿದೆ ಎಂದರೆ, ಮಲೇರಿಯ ಕದನದ ಗಾಂಭೀರ್ಯತೆಯು ಅರಿವಾದೀತು.

ಮಾನವನ ಇತಿಹಾಸದಲ್ಲಿ ಮರೆಯಲಾಗದಂತಹ ಕದನಗಳಲ್ಲಿ ಮಲೇರಿಯ ಕದನವು ಮುಖ್ಯವಾದದ್ದು. ಅನಾದಿ ಕಾಲ ದಿಂದಲೂ ಅಜೇಯವಾಗಿದ್ದ ಮಲೇರಿಯ ಕಾರಕ ಪ್ಲಾಸ್ಮೋಡಿಯಂ ಜೀವಿಯನ್ನು ಹಾಗೂ ಅದನ್ನು ಹರಡುವುದರಲ್ಲಿ ನೆರವಾಗುತ್ತಿದ್ದ ಸೊಳ್ಳೆಗಳ ವಿರುದ್ಧ ಮನುಷ್ಯನು ನಡೆಸುತ್ತಿರುವ ಯುದ್ಧವು ಐತಿಹಾಸಿಕ ವಾದದ್ದು.

ಕೆಲವು ಸಲ ಮಲೇರಿಯದ ಕೈ ಮೇಲಾದರೆ, ಕೆಲವು ಸಲ ಮನುಷ್ಯನ ಕೈ ಮೇಲಾಗುತ್ತಿದ್ದರೂ ಸಹ ಅಂತಿಮ ವಿಜಯ ಇದುವರೆಗೂ ದೊರೆತಿಲ್ಲ. ಇಂದಿಗೂ ಸಹ ಮಲೇರಿಯ ಕದನವು ಜಾರಿಯಲ್ಲಿದೆ. ಮಲೇರಿಯ ಕದನದಲ್ಲಿ ಪ್ಲಾಸ್ಮೋಡಿಯಂ ಹಾಗೂ ಅನಾಫಿಲಸ್ ಸೊಳ್ಳೆಯನ್ನು ಬಗ್ಗು ಬಡಿಯುವ ಪ್ರಯತ್ನದಲ್ಲಿ ಮನುಷ್ಯನು ರೂಪಿಸಿದ ತಂತ್ರಗಳಿಗೆ ನಾಲ್ಕು ಬಾರಿ ನೊಬೆಲ್ ಪಾರಿತೋಷಕವು ಲಭಿಸಿದೆ ಎಂದರೆ, ಮಲೇರಿಯ ಕದನದ ಗಾಂಭೀರ್ಯತೆಯು ಅರಿವಾದೀತು.

೧೯೦೨ ರಲ್ಲಿ ರೊನಾಲ್ಡ್ ರಾಸ್ ಮಲೇರಿಯ ಕಾರಕ ಪ್ಲಾಸ್ಮೋಡಿಯಂನನ್ನು ರೋಗಿಗಳಿಂದ ಆರೋಗ್ಯವಂತರಿಗೆ ಹರಡುವ ಅನಾಫಿಲಸ್ ಸೊಳ್ಳೆಗಳನ್ನು ಕಂಡು ಹಿಡಿದುದಕ್ಕಾಗಿ ಮೊದಲ ನೊಬೆಲ್ ಪಾರಿತೋಷಕವು ಲಭಿಸಿತು. ಆಲೋನ್ಸ್ ಲ್ಯಾವೆರನ್ ೧೮೮೪ರಲ್ಲಿ ಮಲೇರಿಯ ಕಾರಕ ಪ್ಲಾಸ್ಮೋಡಿಯಂ ನನ್ನು ಕಂಡುಹಿಡಿದ. ಅವನಿಗೆ ೧೯೦೭ರಲ್ಲಿ ಎರಡನೆಯ ನೊಬೆಲ್ ಪಾರಿತೋಷಕವು ದೊರೆಯಿತು.

ಮೂರನೆಯ ನೊಬೆಲ್ ಪಾರಿತೋಷಕವು ೧೯೪೮ರಲ್ಲಿ ಪಾಲ್ ಮುಲ್ಲರನಿಗೆ ದೊರೆಯಿತು. ಅವನು ರೂಪಿಸಿದ ಡಿಡಿಟಿಯ ಮೂಲಕ, ಸೊಳ್ಳೆಗಳ ವರ್ಧನೆಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿ, ಇನ್ನೇನು ನಮ್ಮ ಜಗತ್ತು ಮಲೇರಿಯ ಮುಕ್ತವಾಯಿತು ಎಂದು ಘೋಷಿಸುವ ಹಂತದ ಸಂಶೋಧನೆಯನ್ನು ನಡೆಸಿದ. ಸೋಲಿಲ್ಲದ ಸರದಾರನ ಹಾಗೆ ಮೆರೆಯುತ್ತಿದ್ದ ಮಲೇರಿಯವನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ನೆರವಾದ ಆರ್ಟಿಮಿಸಿನೀನ್ ಕಂಡು ಹಿಡಿದುದಕ್ಕಾಗಿ ಚೀನಾ ದೇಶದ ಯುಯು ತು ಅವರಿಗೆ
ನಾಲ್ಕನೆಯ ನೊಬೆಲ್ ಪಾರಿತೋಷಕವು ಲಭಿಸಿತು. ಈ ನಾಲ್ಕು ನೊಬೆಲ್ ಪಾರಿತೋಷಕಗಳಲ್ಲಿ ಹೆಚ್ಚು ಚರ್ಚೆಗೆ ಹಾಗೂ
ವಾಗ್ವಾದಕ್ಕೆ ಡಿಡಿಟಿ ಗುರಿಯಾಗಿದೆ.

ಡಿಡಿಟಿ ಎನ್ನುವುದು ಅಮೃತವೋ ಇಲ್ಲ ಕಾರ್ಕೋಟಕ ವಿಷವೋ ಎನ್ನುವ ಚರ್ಚೆ ಇಂದಿಗೂ ನಡೆಯುತ್ತಿದೆ. ಬಹುಶಃ ಮಾನವನ ಇತಿಹಾಸದಲ್ಲಿ ಡಿಡಿಟಿಯಷ್ಟು ತೀವ್ರ ಚರ್ಚೆಗೆ ಒಳಗಾದ ಮತ್ತೊಂದು ಕೀಟನಾಶಕವು ಇಲ್ಲ ಎನ್ನಬಹುದು. ಡೈಕ್ಲೋರೋ ಡೈಫೀನೈಲ್ ಟ್ರೈಕ್ಲೋರೋ ಈಥೇನ್ ಎಂಬ ಉದ್ದ ಹೆಸರಿನ ರಾಸಾಯನಿಕದ ಸಂಕ್ಷಿಪ್ತ ನಾಮ ಡಿಡಿಟಿ. ಡಿಡಿಟಿಯನ್ನು ಆತ್ಮರ್ ಜ಼ೀಡ್ಲರ್ (೧೮೫೦-೧೯೧೧) ಎಂಬ ಆಸ್ಟ್ರಿಯನ್ ರಸಾಯನಶಾಸ್ತ್ರಜ್ಞನು ಅಡಾಲ್ ವಾನ್ ಬೇಯರ್ ಅವರ ನೇತೃತ್ವದಲ್ಲಿ ಕಂಡು ಹಿಡಿದ. ಜರ್ಮನಿಯ ಸ್ಟ್ರಾಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವಾಗ, ೧೮೭೪ ರಲ್ಲಿ ಸುಮ್ಮನೆ ಡಿಡಿಟಿಯನ್ನು ರೂಪಿಸಿದ.

ಅದರ ಉಪಯೋಗದ ಬಗ್ಗೆ ಅವನಿಗೆ ಲವಲೇಶ ಪರಿಜ್ಞಾನವೂ ಇರಲಿಲ್ಲ. ೧೯೨೯ ರಲ್ಲಿ, ೧೯೩೦ ರಲ್ಲಿ ಹಾಗೂ ೧೯೩೪ ರಲ್ಲಿ ಇತರ
ವಿಜ್ಞಾನಿಗಳೂ ಸಹ ಡಿಡಿಟಿಯ ಬಗ್ಗೆ ಗಮನಿಸಿದರು. ಆದರೆ ಅದರ ಉಪಯುಕ್ತತೆಯ ಬಗ್ಗೆ ಅವರು ಯೋಚಿಸಲಿಲ್ಲ. ಕೊನೆಗೆ ೧೯೩೯ರಲ್ಲಿ ಸ್ವಿಸ್ ವಿಜ್ಞಾನಿ ಪಾಲ್ ಹರ್ಮನ್ ಮುಲ್ಲರ್ (೧೮೯೯-೧೯೬೫) ಡಿಡಿಟಿಯ ಉಪಯುಕ್ತತೆಯನ್ನು ಪ್ರಾಯೋಗಿಕವಾಗಿ ತೋರಿಸಿದ. ಅವನ ಈ ಸಂಶೋಧನೆಗಾಗಿ, ೧೯೪೮ರ ಅಂಗಕ್ರಿಯಾ ವಿಜ್ಞಾನ ಅಥವಾ ವೈದ್ಯಕೀಯ ನೊಬೆಲ್ ಪಾರಿತೋಷಕವು ಅವನಿಗೆ ಲಭಿಸಿತು.

ಮುಲ್ಲರ್ ಸ್ವಿಜ಼ರ್ಲ್ಯಾಂಡಿನಲ್ಲಿದ್ದ ಬಾಸೆಲ್ ನಗರದಲ್ಲಿದ್ದ ಗೈಗಿ ಎಜಿ (ನೋವಾರ್ಟಿಸ್ ಎಜಿ) ಎಂಬ ಸಂಸ್ಥೆಯಲ್ಲಿ ಸಂಶೋಧನಾ ರಸಾಯನಿಕ ವಿಜ್ಞಾನಿಯಾಗಿ ಕೆಲಸವನ್ನು ಆರಂಭಿಸಿದ. ಗೈಗಿ ಬಣ್ಣಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿತ್ತು. ಮುಲ್ಲರನಿಗೆ ಬೆಳೆಯನ್ನು ನಾಶ ಮಾಡುತ್ತಿದ್ದ ಕೀಟಗಳನ್ನು ನಿಗ್ರಹಿಸಬಲ್ಲ ಪರಿಣಾಮಕಾರಿ ರಾಸಾಯನಿಕವನ್ನು ಕಂಡು ಹಿಡಿಯುವ ಬಗ್ಗೆ
ಕುತೂಹಲವಿತ್ತು. ಈ ಅವಧಿಯಲ್ಲಿ ಎರಡು ಘಟನೆಗಳು ಸಂಭವಿಸಿದವು. ಮೊದಲನೆಯದು ಸ್ವಿಜ಼ರ್ಲ್ಯಾಂಡಿನಲ್ಲಿ ತಲೆದೋರಿದ ಆಹಾರ ಪದಾರ್ಥಗಳ ಕೊರತೆ. ರೈತರು ಬೆಳೆದದ್ದನ್ನೆಲ್ಲ ಕೀಟಗಳೇ ತಿಂದು ಬಿಟ್ಟಿದ್ದವು.

ಅದೇ ವೇಳೆಗೆ ರಷ್ಯಾದಲ್ಲಿ ಟೈಫಸ್ ಕಾಯಿಲೆಯು ಪಿಡುಗು ಸ್ವರೂಪವನ್ನು ತಳೆದಿತ್ತು. ಮಾನವನ ಇತಿಹಾಸದಲ್ಲಿ ಟೈಫಸ್ ಕಾಯಿಲೆಯು ಹಿಂದೆಂದೂ ಇಷ್ಟು ಸಾವು-ನೋವುಗಳನ್ನು ಉಂಟು ಮಾಡಿರಲಿಲ್ಲ. ಹಾಗಾಗಿ ಈ ದಿಶೆಯಲ್ಲಿ ಮುಲ್ಲರ್ ೧೯೩೫ ರಲ್ಲಿ ಸಂಶೋಧನೆಯನ್ನು ಆರಂಭಿಸಿದ. ನಾಲ್ಕು ವರ್ಷಗಳ ಅವಧಿಯಲ್ಲಿ ೩೪೯ ರಾಸಾಯನಿಕಗಳನ್ನು ಪರೀಕ್ಷಿಸಿದ.

ಯಾವುದಕ್ಕೂ ಕೀಟನಾಶಕ ಗುಣವಿರಲಿಲ್ಲ. ಸೆಪ್ಟೆಂಬರ್ ೧೯೩೯. ಮುಲ್ಲರ್ ಒಂದು ರಾಸಾಯನಿಕವನ್ನು ಪಂಜರಕ್ಕೆ ಲೇಪಿಸಿದ.
ಆ ಪಂಜರದೊಳಗೆ ನೊಣವನ್ನು ಬಿಟ್ಟ. ಸ್ವಲ್ಪ ಹೊತ್ತಿನಲ್ಲಿ ಆ ನೊಣವು ಸತ್ತು ಬಿದ್ದಿತು! ಆ ರಾಸಾಯನಿಕವೇ ಡಿಡಿಟಿ. ಆತ್ಮರ್ ಜ಼ೀಡ್ಲರ್ ೧೮೭೪ರಲ್ಲಿಯೇ ಅದನ್ನು ತಯಾರಿಸುವ ವಿಧಾನವನ್ನು ಕುರಿತು ಯಶಸ್ವೀ ಸಂಶೋಧನೆಯನ್ನು ನಡೆಸಿದ್ದ. ಆದರೆ ಆದರ ಗುಣಲಕ್ಷಣಗಳನ್ನು ಹಾಗೂ ಉಪಯುಕ್ತತೆಯನ್ನು ಕುರಿತು ನಿರ್ಲಕ್ಷ್ಯವನ್ನು ತಳೆದಿದ್ದ. ಯಾವುದೇ ರೀತಿಯ ಅಧ್ಯಯನ ವನ್ನು ನಡೆಸಿರಲಿಲ್ಲ.

ಈಗ ಮುಲ್ಲರ್ ಡಿಡಿಟಿಯ ತೀಕ್ಷ್ಣ ಕೀಟನಾಶಕ ಗುಣವನ್ನು ಗಮನಿಸಿದ್ದ. ಸ್ವಿಸ್ ಸರ್ಕಾರ ಮತ್ತು ಅಮೆರಿಕ ಸರ್ಕಾರಗಳು ಡಿಡಿಟಿಯನ್ನು ಕೃಷಿ ಕೀಟ ಪಿಡುಗನ್ನು ನಿಗ್ರಹಿಸಲು ಪ್ರಯೋಗಿಸಿದರು. ಫಲಿತಾಂಶವು ಅತ್ಯದ್ಭುತವಾಗಿತ್ತು. ಕೊಲೋರಾಡೊ ಪೊಟಾಟೊ ಬೀಟಲ್ ಎಂಬ ಕೀಟವು ಹೇಳಹೆಸರಿಲ್ಲದಂತೆ ನಾಶವಾಯಿತು. ಗೈಗಿ ಸ್ವಿಸ್ ಏಕಸ್ವಾಮ್ಯವನ್ನು (ಪೇಟೆಂಟ್) ೧೯೪೦ರಲ್ಲಿ, ಬ್ರಿಟನ್ ಏಕಸ್ವಾಮ್ಯವನ್ನು ೧೯೪೨ರಲ್ಲಿ ಹಾಗೂ ಅಮೆರಿಕ ಮತ್ತು ಆಸ್ಟ್ರೇಲಿಯ ಏಕಸ್ವಾಮ್ಯವನ್ನು ೧೯೪೩ರಲ್ಲಿ ಪಡೆಯಿತು. ೫% ಸಾಮರ್ಥ್ಯದ ಗೆಸರಾಲ್ ಸ್ಪ್ರೇ ಮತ್ತು ೩% ಸಾಮರ್ಥ್ಯದ ನಿಯೋಸಿಡ್ ಪುಡಿಯನ್ನು ಮಾರುಕಟ್ಟೆಗೆ ಬಿಟ್ಟಿತು.

೧೯೪೩ರಲ್ಲಿ ಅನಾಫಿಲಸ್ ಸೊಳ್ಳೆಗಳ ವರ್ಧನಾ ತಾಣಗಳ ಮೇಲೆ ಡಿಡಿಟಿಯನ್ನು ಪ್ರಯೋಗಿಸಿದರು. ಮರಿಸೊಳ್ಳೆಗಳು ಹಾಗೂ ವಯಸ್ಕ ಸೊಳ್ಳೆಗಳು ನೂರಕ್ಕೆ ನೂರರಷ್ಟು ಸತ್ತು ಹೋದವು. ನಂತರ ಪ್ರಯೋಗಗಳು ಮುಂದುವರಿದವು. ಡಿಡಿಟಿ ಹಳದಿಜ್ವರ, ಟೈಫಸ್, ಪ್ಲೇಗ್ ಮುಂತಾದ ಮಾರಕ ರೋಗಗಳನ್ನು ಹರಡುವ ಹೇನು, ಚಿಗಟ, ಸೊಳ್ಳೆ, ಮರಳುನೊಣ ಮುಂತಾದ ರೋಗ ಜನಕಗಳೆಲ್ಲ ನಾಶವಾದವು.

೧೯೪೦ ರಿಂದ ೧೯೪೫ರವರೆಗೆ ವಿಶ್ವದ ಎರಡನೆಯ ಮಹಾಯುದ್ಧವು ನಡೆಯಿತು. ಈ ಅವಧಿಯಲ್ಲಿ ಮಿತ್ರದೇಶಗಳು ಡಿಡಿಟಿ ಯನ್ನು ಅವ್ಯಾಹತವಾಗಿ ಬಳಸಿದವು. ೧೯೪೪ರಲ್ಲಿ ಬ್ರಿಟಿಷ್ ಸರ್ಕಾರವು ಒರಿಸ್ಸಾ ಮತ್ತು ಕರ್ನಾಟಕದಲ್ಲಿ ಏಕಕಾಲಕ್ಕೆ ಡಿಡಿಟಿ ಯನ್ನು ಪ್ರಯೋಗಿಸಿತು. ೧೯೪೭ರ ಹೊತ್ತಿಗೆ ಭಾರತದ ೧೩ ರಾಜ್ಯಗಳ ೪,೬೫,೦೦೦ ಮನೆಗಳ ಒಳಗೆ ಡಿಡಿಟಿಯನ್ನು ಸಿಂಪಡಿಸಿ ದ್ದರು. ೧೯೪೯ರಲ್ಲಿ ಇಟಲಿ ದೇಶವು ಮಲೇರಿಯ ಮುಕ್ತವಾಯಿತು. ೧೯೫೧ರಲ್ಲಿ ಅಮೆರಿಕವು ಮಲೇರಿಯ ಮುಕ್ತ ವಾಯಿತು. ೧೯೫೩ರಲ್ಲಿ ಭಾರತವು ರಾಷ್ಟ್ರೀಯ ಮಲೇರಿಯ ನಿರ್ಮೂಲನಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ
ತಂದಿತು. ೧೯೫೫ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕವಾಗಿ ಮಲೇರಿಯವನ್ನು ನಿರ್ಮೂಲನ ಮಾಡಲು ಎಲ್ಲ ದೇಶಗಳಿಗೆ ಕರೆಯನ್ನು ನೀಡಿತು. ೧೯೬೧ರಲ್ಲಿ ಡಿಡಿಟಿ ಜಾಗತಿಕ ಬಳಕೆಯು ಗರಿಷ್ಠ ಮಿತಿಯನ್ನು ಮುಟ್ಟಿತು. ಡಿಡಿಟಿಯನ್ನು ಅಧಿಕೃತ ಕೀಟನಾಶಕವನ್ನಾಗಿ ೩೩೪ ಸಸ್ಯೋತ್ಪನ್ನಗಳ ಮೇಲೆ ಅಧಿಕೃತವಾಗಿ ಸಿಂಪಡಿಸುತ್ತಿದ್ದರು.

೧೯೬೨: ಅಮೆರಿಕ ಸಾಗರ ಜೀವ ವಿಜ್ಞಾನಿ ರಚೇಲ್ ಕಾರ್ಸನ್ (೧೯೦೭- ೧೯೬೪). ಆಕೆ ಸೈಲೆಂಟ್ ಸ್ಪ್ರಿಂಗ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದಳು. ಈ ಪುಸ್ತಕದಲ್ಲಿ ಕಾರ್ಸನ್ ಡಿಡಿಟಿಯ ಮಾರಕ ಗುಣಲಕ್ಷಣಗಳನ್ನು ಪುರಾವೆ ಸಹಿತ ನಿರೂಪಿಸಿದ್ದಳು.
ಡಿಡಿಟಿಯು ಕೇವಲ ಕೀಟಗಳ ಮೇಲೆ ಮಾತ್ರವಲ್ಲ, ಮನುಷ್ಯನನ್ನೂ ಒಳಗೊಂಡಂತೆ ಸಮಸ್ತ ಜೀವರಾಶಿಯ ಮೇಲೆ ದುಷ್ಪರಿಣಾ ಮವನ್ನು ಉಂಟು ಮಾಡುತ್ತದೆ ಎಂದಳು.

ಜೊತೆಗೆ ಡಿಡಿಯು ಪ್ರಕೃತಿಯನ್ನು ಸುದೀರ್ಘ ಕಾಲ ಉಳಿಯುವ ಕಾರಣ, ಮಣ್ಣು-ನೀರು-ಗಾಳಿಯೆಲ್ಲ ವಿಷಮಯವಾಗುತ್ತಿದೆ; ಈ ಘಾತದಿಂದ ಚೇತರಿಸಿಕೊಳ್ಳಲು ನಮ್ಮ ಭೂಮಿಗೆ ದಶಕಗಳೇ ಬೇಕಾಗುತ್ತವೆ ಎಂದಳು. ಈಕೆಯ ಪುಸ್ತಕವು ಇಡೀ ವಿಶ್ವದಲ್ಲಿ, ಮುಖ್ಯವಾಗಿ ಅಮೆರಿಕದಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿತು. ಒಮ್ಮೆಲೆ ಡಿಡಿಟಿಯ ವಿನಾಶಕ ದೈತ್ಯ ರೂಪವು
ಜನಸಾಮಾನ್ಯರ ಗಮನಕ್ಕೆ ಬಂದಿತು. ೧೯೬೯ರಲ್ಲಿ, ಡಿಡಿಟಿಯಿಂದ ರೂಪುಗೊಂಡ ರಾಸಾಯನಿಕಗಳ ಶೇಷವು ಜಗತ್ತಿನಾದ್ಯಂತ ಗಾಳಿ, ನೀರು, ಮಣ್ಣು, ಜೀವಿ ಹಾಗೂ ಮನುಷ್ಯರ ಒಡಲಿನಲ್ಲಿರುವುದು ಪತ್ತೆಯಾಯಿತು.

೧೯೭೦ : ವಿಶ್ವಸಂಸ್ಥೆಯು ಜಗತ್ತಿನ ೩೭ ದೇಶಗಳು ಮಲೇರಿಯ ಮುಕ್ತವಾಗಿವೆ ಎಂದು ಘೋಷಿಸಿತು. ರಚೆಲ್ ಕಾರ್ಸನ್ ಆರಂಭಿಸಿದ ಸಾರ್ವಜನಿಕ ಆಂದೋಲನದ ಒತ್ತಡಕ್ಕೆ ಸಿಲುಕಿ ಅಮೆರಿಕವು ಪರಿಸರ ಸಂರಕ್ಷಣಾ ಸಂಸ್ಥೆಯನ್ನು (ಎನ್ವೈರಾನಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ) ಸ್ಥಾಪಿಸಿತು. ಆ ಸಂಸ್ಥೆಯು ಅಮೆರಿಕದಲ್ಲಿ ಡಿಡಿಟಿಯನ್ನು ೧೯೭೨ರಲ್ಲಿ ನಿರ್ಬಂಧಿಸಿತು. ೧೯೭೬ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಮಲೇರಿಯ ನಿರ್ಮೂಲನಕ್ಕಾಗಿ ನೀಡಿದ್ದ ಕರೆಯನ್ನು ಹಿಂದೆಗೆದುಕೊಂಡಿತು.

೧೯೮೯ರಲ್ಲಿ ಭಾರತ ಸರ್ಕಾರವು ಕೃಷಿಯಲ್ಲಿ ಡಿಡಿಟಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತು. ೧೯೯೮ರಲ್ಲಿ ನಿರಂತರ ಶೇಷ ಸಾವಯವ ರಾಸಾಯನಿಕಗಳನ್ನು (ಪರ್ಸಿಸ್ಟಂಟ್ ಆರ್ಗ್ಯಾನಿಕ್ ಪಲ್ಯೂಟಂಟ್ಸ್) ಅಂದರೆ ಪರಿಸರದಲ್ಲಿ ಸುದೀರ್ಘಕಾಲ
ಉಳಿಯುವ ರಾಸಾಯನಿಕಗಳನ್ನು ನಿರ್ಬಂಧಿಸಬೇಕೆಂಬ ಜಾಗತಿಕ ಬೇಡಿಕೆಯು ಹೆಚ್ಚಾಯಿತು. ೨೦೦೧ರಲ್ಲಿ ನಡೆದ ಜಾಗತಿಕ ಸಮಾವೇಶಗಳಲ್ಲಿ ಕೃಷಿಯಲ್ಲಿ ಡಿಡಿಟಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಬೇಡಿಕೆಗೆ ಒಪ್ಪಿಗೆ ದೊರೆತರೂ ಸಹ, ಮಲೇರಿಯ ಮುಂತಾದ ರೋಗಗಳ ನಿಯಂತ್ರಣದಲ್ಲಿ ಡಿಡಿಟಿ ಬಳಕೆಗೆ ಸೀಮಿತ ಅನುಮತಿಯನ್ನು ನೀಡಲಾಯಿತು.

ವಿಶ್ವಸಂಸ್ಥೆಯ ಸ್ಟಾಕ್ ಹೋಮ್ ಸಮಾವೇಶದ ಶಿ-ರಸುಗಳು ೨೦೦೪ರಲ್ಲಿ ಅಸ್ತಿತ್ವಕ್ಕೆ ಬಂದವು. ೨೦೦೬ರಲ್ಲಿ ವಿಶ್ವಸಂಸ್ಥೆಯು ರೋಗವಾಹಕಗಳನ್ನು ನಿರ್ಮೂಲ ಮಾಡುವ ಸುರಕ್ಷಿತ ಮಾರ್ಗಗಳು ದೊರೆಯುವವರಿಗೂ  ಡಿಟಿಯನ್ನು ಮುಂದುವರಿಸಬಹುದೆ
ಂದು ಅನುಮತಿಯನ್ನು ನೀಡಿತು. ಡಿಡಿಟಿಯು ಆರ್ಗನೋಕ್ಲೋರಿನ್ ಎಂಬ ರಾಸಾಯನಿಕ ವರ್ಗಕ್ಕೆ ಸೇರಿದ ಕೀಟನಾಶಕ ವಾಗಿದೆ. ಡಿಡಿಟಿ ಮನುಷ್ಯರ ಮೇಲೆ ಮಧ್ಯಮ ಪ್ರಮಾಣದ ವಿಷಲಕ್ಷಣಗಳನ್ನು ಬೀರುತ್ತದೆ. ಬಾಯಿಯಲ್ಲಿ ಸೂಜಿ ಚುಚ್ಚಿದ ಅನುಭವ, ವಾಕರಿಕೆ, ವಾಂತಿ, ತಲೆನೋವು, ತಲೆಸುತ್ತು, ಗೊಂದಲ, ಸೋಮಾರಿತನ, ಸುಸ್ತು, ಶರೀರ ಹೊಂದಾಣಿಕೆಯಲ್ಲಿ ಏರುಪೇರು ಮತ್ತು ಶರೀರ ಕಂಪಿಸಲಾರಂಭಿಸುತ್ತದೆ.

ಕ್ಯಾನ್ಸರನ್ನು ಉಂಟು ಮಾಡಬಹುದು. ಬೆಳೆಗಳ ಮೇಲೆ ಸಿಂಪಡಿಸಿದ ಡಿಡಿಟಿಯು ಕೀಟಗಳನ್ನು ಕೊಲ್ಲುತ್ತದೆ. ಆ ಕೀಟಗಳನ್ನು ಕಪ್ಪೆಯು ತಿನ್ನುತ್ತದೆ. ಕಪ್ಪೆಯ ಒಡಲಿನಲ್ಲಿ ಡಿಡಿಟಿ ಪ್ರವೇಶಿಸಿತು. ಕಪ್ಪೆಯನ್ನು ಹಾವು ತಿನ್ನುತ್ತದೆ. ಹಾವಿನ ಒಡಲಿನಲ್ಲಿ ಡಿಡಿಟಿ ಪ್ರವೇಶಿಸಿತು. ಹಾವನ್ನು ಹದ್ದು ತಿನ್ನುತ್ತದೆ. ಹದ್ದಿನ ಒಡಲಿನೊಳಗೆ ಡಿಡಿಟಿ ಪ್ರವೇಶಿಸಿತು – ಹೀಗೆ ಡಿಡಿಟಿ ಮನುಷ್ಯನನ್ನೂ ಒಳಗೊಂಡಂತೆ ಆಹಾರ ಜಾಲದಲ್ಲಿರುವ ಎಲ್ಲ ಜೀವರಾಶಿಗಳ ಒಡಲನ್ನು ಪ್ರವೇಶಿಸಿ ದಶಕಗಟ್ಟಲೇ ಉಳಿದು ಅನಾರೋಗ್ಯವನ್ನು ಉಂಟು ಮಾಡುತ್ತದೆ. ಡಿಡಿಟಿಯು ನೀರಿನಲ್ಲಿ ೧೫೦ ವರ್ಷಗಳ ಕಾಲ ಉಳಿಯಬಹುದು.

ಹಾಗಾಗಿ ಎಲ್ಲ ಜಲಚರಗಳಲ್ಲಿ ಡಿಡಿಟಿ ತನ್ನ ದುಷ್ಟಭಾವವನ್ನು ಬೀರುವುದು ಖಚಿತ. ಅಮೆರಿಕದಲ್ಲಿ ಪ್ರತಿವರ್ಷ ೪,೦೦,೦೦೦ ಮಲೇರಿಯದಿಂದ ಸಾಯುತ್ತಿದ್ದರು. ಡಿಡಿಟಿಯನ್ನು ಬಳಸಿದ ಮೇಲೆ ಸಾವಿನ ಪ್ರಮಾಣ ಶೂನ್ಯಕ್ಕಿಳಿಯಿತು. ಭಾರತದಲ್ಲಿ  ತಿವರ್ಷ ೭೫ ದಶಲಕ್ಷ ಜನರು ಮಲೇರಿಯಕ್ಕೆ ತುತ್ತಾಗುತ್ತಿದ್ದು, ೮,೦೦,೦೦೦ ಜನರು ಸಾಯುತ್ತಿದ್ದರು. ಡಿಡಿಟಿ ಬಳಕೆಯ ನಂತರ ಮರಣ
ಪ್ರಮಾಣವು ಗಣನೀಯವಾಗಿ ಕಡಿಮೆಯಾಯಿತು.

ಮಲೇರಿಯ ಕದನದಲ್ಲಿ ಈ ವಿಜಯವು ಅಲ್ಪ ಕಾಲದ್ದಾಯಿತು. ಅನಾಫಿಲಸ್ ಸೊಳ್ಳೆಯು ಡಿಡಿಟಿಗೆ ನಿರೋಧಕತೆಯನ್ನು
ಬೆಳೆಸಿಕೊಂಡಿತು. ಕೂಡಲೇ ಮಲೇರಿಯ ಪ್ರಮಾಣವು ಹೆಚ್ಚಾಯಿತು! ಮಲೇರಿಯ ಕದನದಲ್ಲಿ ಡಿಡಿಟಿಯು ದಯನೀಯವಾಗಿ ಸೋಲನ್ನಪ್ಪಿದೆ. ಹಾಗಾಗಿ ಅದನ್ನು ಮಲೇರಿಯ ಕದನದಿಂದ ದೂರವಿಡಲಾಗಿದೆ. ಜಗತ್ತು ಸುರಕ್ಷಿತ ಮಲೇರಿಯ ಕೀಟನಾಶಕದ ಹುಡುಕಾಟದಲ್ಲಿದೆ.