ಪ್ರಚಲಿತ
ಕೆ.ಎಂ.ಶಿವಪ್ರಸಾದ್
shivaprasad.km05@gmail.com
ಭ್ರಷ್ಟರ ಹಣದ ಆಮಿಷಕ್ಕೆ ಬಲಿಯಾಗದೇ ಒಕ್ಕಲಿಗರ ಸಂಘದ ಭವಿಷ್ಯವನ್ನು ಜ್ವಲಗೊಳಿಸುವ ಸೂಕ್ತ, ಪ್ರಾಮಾಣಿಕ, ಹೊಸ ಅಭ್ಯರ್ಥಿಗಳಿಗೆ ಮತ ಹಾಕಿದರೆ ಮಾತ್ರ ಸಂಘ ಏಳಿಗೆ ಹೊಂದಲಿದೆ. ಇಲ್ಲವಾದರೆ ಮತ್ತಷ್ಟು ಭ್ರಷ್ಟರ ಗುಢಾಣಗಳಿಗೆ ಸಂಪತ್ತನ್ನು ತುಂಬಬಲ್ಲ ಸಂಘವಾಗಿ ರಾಜ್ಯ ಒಕ್ಕಲಿಗರ ಸಂಘ ಮಾರ್ಪಾಡಾ ಗುವುದರಲ್ಲಿ ಯಾವುದೇ ಸಂಶಯವಿಲ್ಲ.
ದೇಶಕ್ಕೆ ಪ್ರಧಾನಿಯನ್ನೇ ಕೊಡುಗೆ ಕೊಟ್ಟ ರಾಜ್ಯದ ಏಕೈಕ ಸಮುದಾಯ, ಹೋರಾಟದ ಕಿಚ್ಚು, ಗತ್ತಿನ ನಡೆ-ನುಡಿಗೆ ಹೆಸರಾದುದು ಸಮುದಾಯ ಒಕ್ಕಲಿಗ ಸಮುದಾಯ. ಇತರ ಪ್ರಬಲ ಜಾತಿಗಳಂತೆ ರಾಜ್ಯದೆಡೆ ಚದುರದೇ ಹಳೇ ಮೈಸೂರು ಭಾಗದ ಕೇಂದ್ರಿಕೃತ ವಾಗಿರುವ ಸಮುದಾಯವಿದು. ರಾಜಕೀಯ, ಆಡಳಿತ, ಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಕೊಡುಗೆಯ ಉಲ್ಲೇಖವಿಲ್ಲದೇ ಇತಿಹಾಸ ಕಟ್ಟಿಕೊಡುವುದು ಕಷ್ಟ ಸಾಧ್ಯ.
ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ತನ್ನದೇ ಆದ ಪ್ರಾಬಲ್ಯ ಹೊಂದಿದೆ.
ಯಾರನ್ನೇ ಆದರೂ ಸರಾಸಗಾಟಾಗಿ ತಿರಸ್ಕರಿಸಿ ಮೂಲೆಗೆ ಬೀಸಾಡುವ, ಮೆಚ್ಚಿದರೆ ಎತ್ತಿ ಹೆಗಲ ಮೇಲಿಟ್ಟು ಹೊತ್ತು ಮೆರೆಸುವ ಏಕೈಕ ಸಮುದಾಯ ವೇನಾದರೂ ಇದ್ದರೆ ಅದು ಒಕ್ಕಲಿಗರು ಮಾತ್ರ. ದೇವೇಗೌಡರಿರಲಿ, ಎಸ್.ಎಂ.ಕೃಷ್ಣರೇ ಇರಲಿ, ಎಚ್‌ಡಿಕೆ, ಡಿಕೆಶಿ ಹೀಗೆ ಯಾರೇ ಆಗಲಿ ಮಾತಿಗೆ ತಪ್ಪಿದರೆ, ರಾಜಕೀಯವಾಗಿ ತಪ್ಪುಹೆಜ್ಜೆ ಇಟ್ಟರೆ ಸೂಕ್ತ ಉತ್ತರ ನೀಡಲೂ ಹಿಂದೆ ಮುಂದೆ ನೋಡಿಲ್ಲ ಒಕ್ಕಲಿಗರು. ಯಾವ ನಾಯಕನಿಗೂ, ಯಾವ ಮಠಕ್ಕೂ ಅಡ್ಡಡ್ಡ ಮಲಗದೇ ಸ್ವಾಭಿಮಾನಿಗಳಾಗಿ ಬದುಕಿದವರು. ಇಂತಹ ಪ್ರಬಲ ಸಮುದಾಯದ ಪ್ರಾತಿನಿಧಿಕ ಸಂಘವಾಗಿ ರಾಜ್ಯ ಒಕ್ಕಲಿಗರ ಸಂಘವನ್ನು 1906ರ ಸಮುದಾಯದ ಮಹನೀಯರು ಸೇರಿ ಸ್ಥಾಪಿಸಿದ್ದಾರೆ.
ಸಮುದಾಯದ ಒಳಿತಿಗಾಗಿ, ಶಿಕ್ಷಣ, ಸಾಮಾಜಿಕ ಏಳಿಗೆಗೆ ಸ್ಥಾಪಿಸಿದ ಸಂಘ ಇಷ್ಟೊತ್ತಿಗೆ ಬೆಳೆದು ಹೆಮ್ಮೆರ ವಾಗಬೇಕಿತ್ತು. ಸಮುದಾಯದ ನಾಯಕರು ಅಲಂಕರಿಸಿದ್ದ ಅಧಿಕಾರದ ಗದ್ದುಗೆಯ ಲಾಭ ಪಡೆದು ಇಡೀ ದೇಶಕ್ಕೆ, ವಿಶ್ವಕ್ಕೆ ಮಾದರಿಯಾಗುವಂತಹ ಸಂಘವಾಗಿ ರೂಪುಗೊಳ್ಳಬೇಕಿತ್ತು. ಆದರೆ ಇದ್ಯಾವುದು ಆಗದೇ ಅದರ ಬದಲು ಭ್ರಷ್ಟರ, ಹಣವಂತರ, ಸಮುದಾಯದ ಹಿತ ಮರೆತವರ ಕೈಗೊಂಬೆಯಾಗಿದ್ದರ ಪರಿಣಾಮ ವಾಗಿ ಒಕ್ಕಲಿಗರ ಸಂಘದ ಚುನಾವಣೆಗೆ ಕೋಟಿಗಳ ಲೆಕ್ಕದಲ್ಲಿ ಅಕ್ರಮ ಹಣ ಚೆಲ್ಲಾಡಿ ಸಮುದಾಯದ ಗೌರವ ಹರಾಜು ಹಾಕುತ್ತಿದೆ. ಕೈ ಎತ್ತಿ ಕೊಡುವ ಸಮು ದಾಯವೇ ಹಣವಂತರ ಥೈಲಿಗೆ ಮಾರು ಹೋಗುತ್ತಿರುವ ಪರಿಣಾಮ ಸಂಘದ ಆಸ್ತಿ, ಮಹನೀಯರುಗಳು ಕಂಡ ಕನಸುಗಳೆಲ್ಲ ‘ಹೆಗ್ಗಣ’ಗಳ ಪಾಲಾಗುತ್ತಿದೆ.
ಹೌದು, ಒಕ್ಕಲಿಗರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭ ಆಗಿದೆ. ಎಂದಿನಂತೆ ತಿಂದು ತೇಗಿದ ತಿಮಿಂಗಿಲಗಳು ಪುನಃ ಹೇಗಾದರೂ ಸರಿಯೇ ಅಧಿಕಾರಕ್ಕೇರಲು ಕಾರ್ಯ ಪ್ರವೃತ್ತರಾಗಿದ್ದಾರೆ. ನಾನೂ ಒಕ್ಕಲಿಗ, ನಾನೂ ಗೌಡ ಎಂಬ ಗತ್ತಿನಲ್ಲಿ ‘ಎಷ್ಟು ಬೇಕಾದರೂ ದುಡ್ಡು ಕೊಡ್ತೀವಿ ನಮಗೆ ವೋಟ್ ಹಾಕಿ’ ಎಂಬ ಗಮ್ಮತ್ತನ್ನು ಅಭ್ಯರ್ಥಿಗಳು ಪ್ರದರ್ಶಿಸುತ್ತಿದ್ದಾರೆ. ಮತದಾರರು ಸಹ ‘ನೋಡೋಣ, ಯಾರ‍್ಯಾರು ಎಷ್ಟೆಷ್ಟು ಕೊಡ್ತಾರೆ ಅಂತ’ ಎಂಬ ನಿಲುವಲ್ಲೇ ಇರುವುದು ದುರಂತ. ಇತ್ತೀಚಿನ ದಿನಗಳಲ್ಲಿ ಸಂಘದ ಚುಕ್ಕಾಣಿ ಹಿಡಿದವರು ಸತ್ಯ ಮುಚ್ಚಿಟ್ಟು ತೋರಿರುವ ಸುಳ್ಳಿನ ಪ್ರಪಂಚದ ಮಹಿಮೆಯ ಪ್ರಭಾವ ಇದು.
ಆಸ್ಪತ್ರೆ, ವೈದ್ಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು, ಕೋಟಿಗಟ್ಟಲೆ ಬೆಲೆ ಬಾಳುವ ಸಂಘದ ಆಸ್ತಿಗಳು, ಸಾವಿರಾರು ಉದ್ಯೋಗಿ ಗಳನ್ನು ತಮ್ಮ ಭ್ರಷ್ಟಚಾರಕ್ಕೆ ಬಳಸಿಕೊಂಡು ಹಣದ ರುಚಿ ಕಂಡಿರುವ ಮಹಾತ್ಮರೆಲ್ಲ ಮತ್ತೆ ಚುನಾವಣೆಯಲ್ಲಿ ತೋಳೇರಿಸುತ್ತಿದ್ದಾರೆ. ಒಂದು ಕಡೇ ಸಂಘದ ಹಿರಿಮೆ, ಹುಟ್ಟು ಅದರ ಅಧಃಪತನಕ್ಕೆ ಕಾರಣರಾದವರ ಬಗ್ಗೆ ಅರಿಯದ ಮುಗ್ಧ ಜನರು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪೂರ್ವಾಪರ ತಿಳಿಯದೇ ಎಡವುತ್ತಿದ್ದಾರೆ. ಇನ್ನೊಂದೆಡೆ ಸಮುದಾಯದ ವಿದ್ಯಾವಂತರು ಸ್ವಪ್ರತಿಷ್ಠೆ, ಹಣದ ಮದಕ್ಕೆ ಮಾರು ಹೋಗುವ ಮೂಲಕ ಶಿಕ್ಷಣದ ಉದ್ಧೇಶವನ್ನೇ ಮರೆತವರಂತೆ
ವರ್ತಿಸುತ್ತಿzರೆ. ಎಲ್ಲೂ ಕುರುಡು ಕಾಂಚಾಣದ್ದೇ ಸದ್ದು, ಅಬ್ಬರ. ಇನ್ನು ಸಂಘದೊಳಗೆ ಮೇವಿನ ರುಚಿ ಕಂಡಿರುವ ಗುಡಾಡಿ ದನಗಳ ಹಿಂಡು ಒಂದು ಕಡೆಯಾದರೆ ಕಳೆದ ಬಾರಿ ಕೋಟಿ ಕೋಟಿ ಹಣ ಸುರಿದು ಅಲ್ಪ ಅಂತರದ ಸೋಲುಂಡವರು ಹಾಕುತ್ತಿರುವ ಹೊಂಚು ಇನ್ನೊಂದೆಡೆ.
ಇವರ ನಡುವೆ ಪ್ರಾಮಾಣಿಕರು, ಸತ್ಯವಂತರು, ಹೊಸಬರ ಪಾಡು ಮಾತ್ರ ಹೇಳ ತೀರದಾಗಿದೆ. ಹಣವಂತರ ಥೈಲಿಯ ಮುಂದೆ ಹೊಸಬರ, ಪ್ರಾಮಾಣಿಕರ ಸ್ಪರ್ಧೆ ಅಷ್ಟೊಂದು ಮೆರುಗು ಪಡೆಯುತ್ತಿಲ್ಲ. ಸಂಘದ ಉಳಿವಿಗಾಗಿ, ಸಂಘವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ, ಸ್ಥಾಪಿತ ಉದ್ದೇಶವನ್ನು ಸಾಕಾರ ಗೊಳಿಸುವ ಅಭ್ಯರ್ಥಿಗಳಿಗೆ ಹಣದ ಬೆಂಬಲವಿಲ್ಲದ ಕಾರಣವಾಗಿ ಇವರೊಳಗಿನ ಸಮುದಾಯದೆಡೆಗಿನ ತುಡಿದ ಅರಣ್ಯ ರೋದನವಾಗಿರುವುದಂತೂ ಸುಳ್ಳಲ್ಲ. ಏಕೆಂದರೆ ಒಕ್ಕಲಿಗರ ಸಂಘ ಸಮುದಾಯದ ಹಿತ ಕಾಯುವ ಸಂಘವಾಗಬೇಕಿತ್ತು. ಸಮುದಾಯದ ಧ್ವನಿಯಾಗಿ, ಆಕ್ರೋಶದ ಕಿಚ್ಚಾಗಿ ಬದಲಾಗಬೇಕಿತ್ತು. ಅಂದಿನ ಅವಶ್ಯಕತೆಗಳಿಗೆ ಸೃಷ್ಟಿಯಾದ ಸಂಘ ಇಂದಿನ ಸಂದರ್ಭಕ್ಕೆ ತನ್ನ ಮಾರ್ಪಾಡುಗಳನ್ನು ಹೊಂದಬೇಕಿತ್ತು. ಆದರೆ ಎಂದೂ ತನ್ನ ಕಾಯಕವೇನೆಂಬುದನ್ನೇ ಸಂಘದ ಚುಕ್ಕಾಣಿ ಹಿಡಿದವರು ಮರೆತುಬಿಟ್ಟರು.
ಹಣ ಹಂಚಿ ಮತ ಪಡೆದವರು ಮತ್ತೇ ಹಣ ದೋಚುವ ಕಾಯಕ ಶುರುವಿಟ್ಟುಕೊಂಡಿರುವುದು ಸಹಜ. ಆದರೆ ಹೀಗೆ ಅಧಿಕಾರಕ್ಕೇರಿದವರು ಎಂದೂ ಒಕ್ಕಲಿಗ ಮಕ್ಕಳ ಸಂಘಟನೆಗೆ, ಹಕ್ಕುಗಳ ರಕ್ಷಣೆಗೆ ಬೀದಿಗಿಳಿಯಲ್ಲಿಲ್ಲ. ಸರ್ಕಾರ ಗಳನ್ನು ಎಚ್ಚರಿಸಲ್ಲಿಲ್ಲ. ಯಡಿಯೂರಪ್ಪನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಭಾಜಪ ಹೈಕಮಾಂಡ್ ಸಿದ್ಧವಾಗುತ್ತಿದ್ದಂತೆ ಅತ್ತ ರಾಜ್ಯದ ಇತರ ಲಿಂಗಾಯತ ನಾಯಕರು, ಮುಖಂಡರು, ಮಠಾಧಿಪತಿಗಳು, ಸಮುದಾಯದ ಸಂಘ-ಸಂಸ್ಥೆಗಳು ಬೀದಿ ಗಿಳಿದವು. ಬಿಎಸ್‌ವೈ ಕೆಳಗಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂಬ ಭಯ ಸೃಷ್ಟಿಸಿದರು. ಆದರೆ ಅದೇ ಸಮಯದಲ್ಲಿ ಒಕ್ಕಲಿಗ ನಾಯಕ ರಾದ ಸದಾನಂದಗೌಡ, ಕುಮಾರಸ್ವಾಮಿಯವರನ್ನು ಅವಮಾನಕಾರಿಯಾಗಿ ಕೆಳಗಿಳಿಸಲು ಹೊರಟಾಗಲೂ ಒಕ್ಕಲಿಗರ ಸಂಘದ ಆಡಳಿತಗಾರರು
ಒಕ್ಕಲಿಗರ ಶಕ್ತಿ ಪ್ರದರ್ಶಿಸುವ, ಸಮುದಾಯದ ನಾಯಕರ ಬೆನ್ನಿಗೆ ನಿಲ್ಲುವ, ಹೋರಾಟ ಸಂಘಟಿಸುವ ಕೆಲಸ ಮಾಡಲ್ಲಿಲ್ಲ.
ಕೇವಲ ಸಂಘದೊಳಗೆ ಬೆಚ್ಚಗೆ ಮಲಗಿ ತಮ್ಮ ವೈಯಕ್ತಿಕ ಹಿತ ಸಾಧನೆಗಾಗಿ ಮುಗುಮ್ಮಾಗಿಬಿಟ್ಟರು. ಹೋಗಲಿ ಸಂಘದ ಸ್ಥಾಪನೆಯ ಉದ್ಧೇಶವನ್ನಾದರೂ
ಸಾಧಿಸಿದ್ದಾರೆಯೇ ಎಂದರೆ ಅದು ಇಲ್ಲ. ದೂರದ ಬೆಂಗಳೂರಿನಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ನಡೆಸುವುದೇ ದೊಡ್ಡ ಘನಂಧಾರಿ ಕೆಲಸವೆಂದು ಬಿಂಬಿಸಿ ಕೊಳ್ಳುತ್ತಿದ್ದಾರೆಯೇ ಹೊರತು, ಸಮುದಾಯದ ನಾಯಕರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಸರ್ಕಾರಗಳ ಗಮನ ಸೆಳೆದು ತಳಮಟ್ಟದ ಸದಸ್ಯರ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ತಲುಪಿಸುವ ಕೆಲಸ ಮಾಡಲ್ಲಿಲ್ಲ. ಅದರ ಪ್ರತಿಫಲವಾಗಿ ಒಕ್ಕಲುತನವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಒಕ್ಕಲು ಮಕ್ಕಳು ಇಂದು ಅಪಾಯದಲ್ಲಿzರೆ. ನಂಬಿದ್ದ ಕೃಷಿ ಲಾಭದಾಯಕವಾಗಿಲ್ಲ. ದುಬಾರಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಣದಾಹಕ್ಕೆ ಬದುಕು ಮೂರಾಬಟ್ಟೆಯಾಗಿದೆ. ಸರ್ಕಾರಿ ಉದ್ಯೋಗ ಕೈಗೆಟುಕದ ದ್ರಾಕ್ಷಿಯಾಗಿದೆ. ಖಾಸಗಿ ಆಸ್ಪತ್ರೆಗಳ ದುಬಾರಿ ದರವೂ ಆರೋಗ್ಯ ಸವಲತ್ತುಗಳಿಂದ ವಂಚಿತರಾಗುವಂತೆ ಮಾಡಿದೆ.
ಸಂಘದ ಹುಟ್ಟು ಮತ್ತು ಬೆಳವಣಿಗೆ: ಊರೂರು ಸುತ್ತಿದರು, ಭಿತ್ತಿಪತ್ರ ಹಂಚಿದರು. ತಮ್ಮ ಬೆವರು ಸುರಿಸಿ ಸಂಪಾದಿಸಿದ ಹಣವನ್ನೇ ಸಮುದಾಯದ ಏಳಿಗೆಗಾಗಿ ಮುಡುಪಾಗಿಟ್ಟರು. ಆಳರಸರ ಮನವೊಲಿಸಿದರು, ನಿಷ್ಠೆ, ಪ್ರಾಮಾಣಿಕತೆ, ದೂರ ದೃಷ್ಟಿಯಿಂದಾಗಿ 1906ರ ಒಕ್ಕಲಿಗರ ಅಭ್ಯುದಯಕ್ಕಾಗಿ, ಶಿಕ್ಷಣ ದೊರಕಿಸಿ ಕೊಡುವ, ಸಮಾಜದಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಡುವ ಮೂಲ ಉದ್ಧೇಶದಿಂದಾಗಿ ಒಕ್ಕಲಿಗ ಸಮುದಾಯದ ಹಿರಿಯ ಜೀವಗಳೆಲ್ಲ ಸೇರಿ ಸಂಘವೊಂದನ್ನು
ಸ್ಥಾಪಿಸಿದರು.
ಹೌದು, ಟಿ.ಬೈಯಣ್ಣ, ಬಿ.ನಾಗಪ್ಪ, ಕೆ.ಎಚ್.ರಾಮಯ್ಯ, ಬಿ.ಎಸ್. ಮಾರಪ್ಪ., ಬಿ.ಎಸ್.ಮುನಿಸ್ವಾಮಪ್ಪ, ಬಿ.ಕೆಂಪಣ್ಣರಂತಹ ಹಿರಿಯರು, ಮಹನೀಯರ ಕನಸಿನ
ಕೂಸಾಗಿ ಜನ್ಮ ತಳೆದದ್ದೇ ಒಕ್ಕಲಿಗರ ಸಂಘ. ಸಮುದಾಯದ ಉದ್ಧಾರಕರಾಗಿ ಸ್ಥಾಪನೆಯಾದ ಈ ಸಂಘಕ್ಕೆ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರು, ಶ್ರೀಕಂಠೀರವ ನರಸರಾಜ ಒಡೆಯರ್ ಹಾಗೂ ದಿವಾನರಾದ ಪಿ.ವಿ. ಮಾಧವರಾಯರ ಕೃಪಾಕಟಾಕ್ಷದಿಂದಾಗಿ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಪೂರಕ ಬೆಂಬಲವೂ ದೊರಕಿತ್ತು.
ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಕೆ.ಎಚ್.ರಾಮಯ್ಯ ಸಮಾನ ಮನಸ್ಕರರೊಡಗೂಡಿ ಸಂಘದ ಪರಿಕಲ್ಪನೆಗೆ ಜೀವ ತುಂಬಿದರು.
ಆ ಕಾಲದ ಸಮುದಾಯದ ಒಂದಷ್ಟು ಶ್ರೀಮಂತರು ತನು, ಮನ, ಧನ ಸಹಾಯ, ಸಹಕಾರಗಳನ್ನೆಲ್ಲ ಅರ್ಪಿಸಿದ ಕಾರಣವಾಗಿ ಹಂತ-ಹಂತವಾಗಿ ಬೆಳವಣಿಗೆ ಕಂಡಿತ್ತು. ಒಕ್ಕಲಿಗರ ಸಂಘದಿಂದ ಆರಂಭವಾದ ವಸತಿ ನಿಲಯದಲ್ಲಿ ಒಕ್ಕಲಿಗ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ಇತರ ಸಮುದಾಯದ ಬಡವಿದ್ಯಾರ್ಥಿಗಳು ಆಶ್ರಯ
ಪಡೆದು ಬದುಕು ಕಟ್ಟಿಕೊಂಡ ಇತಿಹಾಸವೂ ಇದೆ. ಅದಕ್ಕೆ ಕಾರಣ ಸಮುದಾಯದೊಳಗಿನ ಸಹಿಷ್ಣು ಗುಣ ಅದರ ಜತೆಗೆ ಸಂಘ ಸ್ಥಾಪಿಸಿದ ಹಿರಿಜೀವಗಳಲ್ಲಿನ ನಾಡಿನ ಬಗೆಗಿನ ಕಾಳಜಿಯೂ ಹೌದು.
ಅರಸರ ಸಂಸ್ಥಾನದೊಂದಿನ ಮಧುರ ಬಾಂಧವ್ಯದಿಂದಾಗಿ ಸಂಘಕ್ಕೆ ಬೇಕಾದ ಭೂಮಿಯೂ ದೊರಕಿತ್ತು. ಸಂಘವೂ ಉದ್ದೇಶಿತ ಕಾರ್ಯ ದಲ್ಲಿ ಒಂದಷ್ಟರಮಟ್ಟಿಗೆ
ಯಶಸ್ವಿಯೂ ಆಯಿತು. ಹೀಗೆ ಒಕ್ಕಲು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸುವ ಉದ್ಧೇಶದೊಂದಿಗೆ ಸ್ಥಾಪನೆಯಾದ ಸಂಘ ಇಂದು ಬೆಳೆದು ಬೃಹತ್ ಹೆಮ್ಮೆರವಾಗಿದೆ. ಆದರೆ ಫಲ ಮಾತ್ರ ದಕ್ಕಬೇಕಾದವರಿಗೆ ದಕ್ಕುತ್ತಿಲ್ಲವೆಂಬುದೇ ವಿಪರ್ಯಾಸ. ಅಂದಿನ ಅಧ್ಯಕ್ಷರಾಗಿದ್ದ ಟಿ.ಬೈಯಣ್ಣನವರು ಸಂಘದ ವಿದ್ಯಾರ್ಥಿ ನಿಲಯಕ್ಕೆ ತಮ್ಮ ವಿಶಾಲವಾದ ಮನೆಯನ್ನೇ ಬಿಟ್ಟುಕೊಟ್ಟಿದ್ದರು. ಆದರೆ ಇಂದಿನ ಆಡಳಿತ ಮಂಡಳಿಯ ಸದಸ್ಯರು ಹಿರಿಯರ ಕನಸಿಗೆ ಕೊಳ್ಳಿಯಿಟ್ಟು ಅನ್ನವಿಟ್ಟ ಮನೆಗೆ ವಿಷವುಣಿಸುತ್ತಿದ್ದಾರೆ. ಸ್ವಜನ ಪಕ್ಷಪಾತ, ಭ್ರಷ್ಟಚಾರ, ಸಂಘದ ಆದಾಯವನ್ನೇ ಲೂಟಿ ಮಾಡುವ ಮೂಲಕ ಅರಸರು, ಸಮುದಾಯದ ಹಿರಿಯ ಚೇತನಗಳಿಗೆ ಅಪಚಾರವೆಸಗುತ್ತಿದ್ದಾರೆ.
ಹೋರಾಟಗಾರರಿಗೆ ಮಣೆ ಹಾಕಿ: ಸಮುದಾಯಕ್ಕಾಗಿ, ಸಮುದಾಯದ ಹಿತಕ್ಕಾಗಿ ಹೋರಾಡಿರುವ, ಜನರೊಂದಿಗೆ ಆತ್ಮೀಯ ಸಂಬಂಧಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕಾದ ಸೂಕ್ತ ಸಂದರ್ಭ ಒದಗಿ ಬಂದಿದೆ. ಕಳೆದ ಬಾರಿ ಹಣದ ಥೈಲಿ ನಡೆಸಿದವರಿಗೆ ಮತ ಹಾಕಿದ ತಪ್ಪಿಗೆ ಕಳೆದ 5 ವರ್ಷ ಗಳಲ್ಲಿ ಒಕ್ಕಲಿಗರ ಸಂಘ ಮುಜುಗರಕ್ಕೆ ಒಳಗಾಗುವಂತಹ ಅನೇಕ ಪ್ರಸಂಗಗಳು ಎದುರಾಗಿವೆ. ಹೀಗಾಗಿ ಅಭ್ಯರ್ಥಿಗಳು ಹೊಸಬರಾಗಲಿ, ಹಳಬರಾಗಲಿ.
ಪ್ರಶ್ನೆ ಅದಲ್ಲ, ಸಮುದಾಯದ ಹಿತ ಕಾಪಾಡುವಂತಹ, ಸಂಘದ ಒಳಿತಿಗೆ, ಬೆಳವಣಿಗೆಗೆ ಕಟೀಬದ್ಧರಾಗಿರು ವಂತಹವರಿಗೆ ಮತ ನೀಡಿ.
ಆಗಬೇಕಿರುವುದು ಏನು?: ಸಂಘವೂ ಕೇವಲ ಎಲ್ಲಾ ದೂರದ ಬೆಂಗಳೂರಿನಲ್ಲಿ ಕೇಂದ್ರಿಕೃತವಾಗುವ ಬದಲು ಪ್ರತಿ ತಾಲೂಕಿಗೂ ತನ್ನ ಕಾರ್ಯಸ್ಥಾನ ವಿಸ್ತರಿಸಬೇಕಾಗಿದೆ. ಸಮುದಾಯದ ಮಠಗಳೊಂದಿಗೆ ಸಮನ್ವಯ ಸಾಧಿಸಿ, ಜನ ನಾಯಕರನ್ನು ಒಳಗೊಂಡು ತಾಲೂಕು, ಜಿಲ್ಲಾ ಕೇಂದ್ರಗಳಲ್ಲೂ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮಾಡುವುದನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಸ್ಥಳೀಯವಾಗಿ ಸಮುದಾಯದ ಜನರಿಗಾಗುತ್ತಿರುವ ಸಮಸ್ಯೆಗಳನ್ನು ಆಳುವ ವರ್ಗಕ್ಕೆ ತಲುಪಿಸುವ ಜೊತೆಗೆ ಅಗಾಗ್ಗೆ ಆಳುವ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು.
ಒಕ್ಕಲು ಮಕ್ಕಳು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳಲು ಅಗತ್ಯವಾದ ಯೋಜನೆಗಳನ್ನು ರೂಪಿಸುವ ಕೆಲಸವೂ ಕೂಡ ರಾಜ್ಯ ಒಕ್ಕಲಿಗರ ಸಂಘದ ಹಾಗೂ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದವರಿಂದ ಆಗಬೇಕಾಗಿದೆ. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ
ಉದ್ಯೋಗದಲ್ಲಿ ಉತ್ತೀರ್ಣರಾಗಲು ಬೇಕಾದ ಉದ್ಯೋಗ ತರಬೇತಿ ಕಾರ್ಯಾಗಾರಗಳನ್ನು, ಸಂಸ್ಥೆಗಳನ್ನು ಸ್ಥಾಪಿಸುವ ಕೆಲಸವೂ ಕೂಡ ಅತೀ ಶೀಘ್ರವಾಗಿಯೇ ಜರುಗಬೇಕಿದೆ.
ಸಮುದಾಯದ ಜನರ ಒಳಿತಿಗೆ, ಬೆಳವಣಿಗೆಗೆ ಇಚ್ಛಿಸಿದ್ದಷ್ಟು ಕೈಎತ್ತಿ ಕೊಡುವ ಮನಸ್ಸು ಸಮುದಾಯದ ಅನೇಕ ಸಿರಿವಂತರಿಗಿದೆ. ಆದರೆ ಕೊಡುವ ಮನಸ್ಸುಗಳ ಸಹಾಯಗಳ ಲಾಭ ಪಡೆದು ಸಮುದಾಯದ ಏಳಿಗೆಗಾಗಿ ದುಡಿಯುವ ಮನಸ್ಸುಗಳಿಗಷ್ಟೇ ಪ್ರಸಕ್ತ ದಿನಗಳಲ್ಲಿ ಕೊರತೆಯಿದೆ. ಈ ಕೊರತೆಯನ್ನು ನೀಗಿಸುವ ಕೆಲಸ ರಾಜ್ಯ ಒಕ್ಕಲಿಗರ ಸಂಘದಿಂದ ಆಗಬೇಕಿದೆ. ಆಗಾಗಿ ಸಂಘಕ್ಕೆ ಆಯ್ಕೆಯಾಗುವ ನಿರ್ದೇಶಕರಲ್ಲಿ ಸಮುದಾಯಕ್ಕಾಗಿ ತುಡಿಯುವ, ದುಡಿಯುವ ಸದ್ಗುಣವುಳ್ಳ ವ್ಯಕ್ತಿಗಳಿಗೆ ಮತಹಾಕಿ ಸಮುದಾಯದ ಸಂಘದ ಉಳಿವಿಗೆ ನಿಮ್ಮ ಕೊಡುಗೆ ನೀಡಿ.