Thursday, 12th December 2024

ಬ್ರಿಟಿಷ್ ನಾವಿಕರ ದಂಗೆ ಮತ್ತು ದೀಗುಜ್ಜೆ: ಒಂದು ರೋಚಕ ಕಥೆ

ತಿಳಿರು ತೋರಣ

srivathsajoshi@yahoo.com

ಅರ್ಥ ಆಗದವರಿಗಾಗಿ- ದೀಗುಜ್ಜೆ ಅಂದರೆ ದಿವಿಹಲಸು ಅಥವಾ ಬೇರುಹಲಸು. ತುಳು ಭಾಷೆಯ ಪದ. ‘ಜೀಗುಜ್ಜೆ’ ಎಂದು ಕೂಡ ತುಳುವಿನಲ್ಲೇ, ಬಹುಶಃ
ದೀಗುಜ್ಜೆಗಿಂತಲೂ ಹೆಚ್ಚು ವ್ಯಾಪಕವಾಗಿ ಬಳಕೆಯಲ್ಲಿರುವ ಪದರೂಪ. ಆದರೆ ನಾನು ಈ ಲೇಖನದುದ್ದಕ್ಕೂ ದೀಗುಜ್ಜೆಯನ್ನೇ ಬಳಸಲಿದ್ದೇನೆ.

ಅಂದಹಾಗೆ ನಾವಿಕರ ದಂಗೆ ನಡೆದದ್ದು ತುಳುನಾಡಿನಲ್ಲೇನೂ ಅಲ್ಲ. ತುಳುನಾಡು ಬಿಡಿ, ಭಾರತ ದೇಶದಲ್ಲೂ ಅಲ್ಲ. ಮತ್ತೆಲ್ಲಿ? ಸಾವಿರಾರು ಮೈಲಿ ದೂರದ ಪೆಸಿಫಿಕ್ ಸಾಗರ ಮಧ್ಯದಲ್ಲಿ. ದಂಗೆಗೆ ಮೂಕಸಾಕ್ಷಿಯಾಗಿ ನಿಂತದ್ದು, ಒಂದು ರೀತಿಯಲ್ಲಿ ದಂಗೆಗೆ ಪರೋಕ್ಷ ಕಾರಣವೂ ಆದದ್ದು ಮಾತ್ರ ದೀಗುಜ್ಜೆ. ಅದೇ ಒಂದು ರೋಚಕ ಕಥೆ! ಡಿಸೆಂಬರ್ ೧೭೮೭. ‘ಎಚ್‌ಎಮ್‌ಎಸ್ ಬೌಂಟಿ’ ಎಂಬ ಹಡಗು ಇಂಗ್ಲೆಂಡ್‌ನಿಂದ ಹೊರಟಿತು. ಎಚ್‌ಎಮ್‌ಎಸ್ ಅಂದರೆ ಹರ್ /ಹಿಸ್ ಮೆಜೆಸ್ಟಿಸ್ ಶಿಪ್ ಎಂದು ರಾಯಲ್ ಬ್ರಿಟಿಷ್ ನೇವಿಯ ನೌಕೆಗಳ ಹೆಸರಿನ ಜೊತೆಗಿರುವ ಲೇಬಲ್.

ಹಡಗಿನಲ್ಲಿ ಒಟ್ಟು ೪೪ ಮಂದಿ ನಾವಿಕರಿದ್ದರು. ವಿಲಿಯಂ ಬ್ಲಿಗ್ ಎಂಬಾತ ಅವರ ಕ್ಯಾಪ್ಟನ್. ಆತನಿಗೊಬ್ಬ ಮುಖ್ಯಸಹಾಯಕ, ಫ್ಲೆಚರ್ ಕ್ರಿಸ್ಟೈನ್
ಎಂಬುವವನು. ಹಡಗಿನ ಗಮ್ಯಸ್ಥಾನ ದಕ್ಷಿಣ ಶಾಂತಸಾಗರದಲ್ಲಿರುವ ತಾಹಿತಿ ದ್ವೀಪ. ತಾಹಿತಿಯಲ್ಲಿ ಹುಲುಸಾಗಿ ಬೆಳೆದಿದ್ದ ದೀಗುಜ್ಜೆ ಗಿಡಗಳನ್ನು ಕಿತ್ತು ವೆಸ್ಟ್‌ಇಂಡೀಸ್ ದ್ವೀಪಗಳಿಗೆ ತೆಗೆದುಕೊಂಡು ಹೋಗುವುದು, ಅಲ್ಲಿ ಅವುಗಳನ್ನು ನೆಡುವುದು ಆ ನಾವಿಕರಿಗೆ ವಹಿಸಲಾಗಿದ್ದ ಕೆಲಸ. ಹತ್ತು ತಿಂಗಳ
ಸುದೀರ್ಘ ಪ್ರಯಾಣದ ಬಳಿಕ ಎಚ್‌ಎಮ್‌ಎಸ್ ಬೌಂಟಿ ಹಡಗು ಅಕ್ಟೋಬರ್ ೧೭೮೮ರ ಒಂದುದಿನ ತಾಹಿತಿ ದ್ವೀಪವನ್ನು ತಲುಪಿತು.

ಅಷ್ಟುಹೊತ್ತಿಗೆ ದೀಗುಜ್ಜೆಗಳ ಸೀಸನ್ ಮುಗಿದಿದ್ದರಿಂದ ಕೆಲಕಾಲ ಆ ನಾವಿಕರು ತಾಹಿತಿ ದ್ವೀಪದಲ್ಲೇ ಉಳಿದುಕೊಳ್ಳಲು ನಿರ್ಧರಿಸಿದರು. ದ್ವೀಪದ ಮೂಲನಿವಾಸಿಗಳು ಅವರನ್ನು ಚೆನ್ನಾಗಿ ಉಪಚರಿಸಿದರು. ಸ್ನೇಹ ಬೆಳೆಸಿದರು. ಪಾಲಿನೇಷ್ಯನ್ ಟಾಟ್ಟೂ (ಹಚ್ಚೆ)ಗಳಿಂದ ಅತಿಥಿಗಳನ್ನು ಅಲಂಕರಿಸಿ ದರು. ಅಲ್ಲಿಯ ಸುಂದರ ರಮಣೀಯ ನಿಸರ್ಗ, ಬೆಚ್ಚಗಿನ ಹವಾಮಾನ, ಹೆಣ್ಮಕ್ಕಳ ಮುಗ್ಧ ಸೌಂದರ್ಯವು ಬ್ರಿಟಿಷ್ ನಾವಿಕರನ್ನು ವಿಶೇಷವಾಗಿ ಆಕರ್ಷಿಸಿದುವು.

ಫ್ಲೆಚರ್ ಕ್ರಿಸ್ಟೈನ್ ನಂತೂ ಅಲ್ಲಿ ಮೌಟುಆ ಎಂಬಾಕೆಯನ್ನು ಮೋಹಿಸಿ ಮದುವೆಯನ್ನೂ ಮಾಡಿಕೊಂಡನು. ಅಲ್ಪಕಾಲದ ಮಧುಚಂದ್ರ ಮುಗಿದ ಮೇಲೆ ನಾವಿಕರು ೪ ಏಪ್ರಿಲ್ ೧೭೮೯ರಂದು ತಾಹಿತಿಯಿಂದ ಹೊರಟರು. ಹಡಗಿನಲ್ಲಿ ಪೇರಿಸಿಕೊಳ್ಳಲು ಸಾಕಷ್ಟು ದೀಗುಜ್ಜೆಗಳೂ, ಗಿಡಗಳೂ ಸಂಗ್ರಹ ವಾಗಿದ್ದುವು. ದ್ವೀಪವಾಸದ ವೇಳೆ ಮೈಮರೆತಿದ್ದರಿಂದ ನಾವಿಕರಿಗಿರಬೇಕಾದ ಶಿಸ್ತು ಸಂಯಮ ಅವರಲ್ಲಿರಲಿಲ್ಲ. ಕ್ಯಾಪ್ಟನ್ ಬ್ಲಿಗ್ ಮತ್ತು ಸಹಾಯಕ ಕ್ರಿಸ್ಟೈನ್ ನಡುವೆ ಮೊದಲಿಂದಲೂ ಭಿನ್ನಾಭಿಪ್ರಾಯವಿದ್ದದ್ದು ಈಗ ಮತ್ತಷ್ಟು ಉಲ್ಬಣಿಸಿತ್ತು.

ಅದಕ್ಕೆ ತಕ್ಕಂತೆ ಬ್ಲಿಗ್ ನಿರಂಕುಶಮತಿತ್ವ ಮತ್ತು ಸರ್ವಾಧಿಕಾರಿ ಧೋರಣೆಯವನಾಗಿದ್ದದ್ದೂ ಹೌದು. ಎಲ್ಲಿಯವರೆಗೆಂದರೆ, ಬೌಂಟಿಯಲ್ಲಿದ್ದ ಸಿಹಿನೀರಿನ ಸೀಮಿತ ದಾಸ್ತಾನನ್ನು ನಾವಿಕರ ತಿಂಡಿ-ತೀರ್ಥಗಳ ಅಗತ್ಯಕ್ಕಿಂತ ದೀಗುಜ್ಜೆಯ ಗಿಡಗಳು ಬದುಕುಳಿಯುವುದಕ್ಕೇ ಬಳಸಬೇಕು ಎಂದು ಕಟ್ಟಪ್ಪಣೆ ಹೊರಡಿ ಸಿದ್ದನಂತೆ. ಅವನ ಅಡಿಯಾಳಾಗಿ ಇರುವುದಕ್ಕಿಂತ ತಾಹಿತಿಯಲ್ಲಿ ಬಿಂದಾಸ್ ಜೀವನವೇ ಒಳ್ಳೆಯದಿತ್ತೆಂದು ನಾವಿಕರಿಗೆ ಅನಿಸಿದ್ದೂ ಇರಬಹುದು.

ತಾಹಿತಿಯಿಂದ ಅವರೆಲ್ಲ ಹೊರಟು ಮೂರು ವಾರಗಳಾಗಿದ್ದವು. ಸುಮಾರು ೧೩೦೦ ಮೈಲು ದೂರ ಕ್ರಮಿಸಿ ಟೊಂಗಾ ದ್ವೀಪದ ಬಳಿಗೆ ಬಂದಿದ್ದರು. ಏಪ್ರಿಲ್ ೨೮ರ ಮಧ್ಯರಾತ್ರಿ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಕ್ರಿಸ್ಟೈನ್ ಮತ್ತೊಂದಿಷ್ಟು ಜೊತೆಗಾರರು ಕ್ಯಾಪ್ಟನ್ ಬ್ಲಿಗ್‌ನನ್ನು ಇದ್ದಕ್ಕಿದ್ದಂತೆ
ನಿದ್ದೆಯಿಂದೆಬ್ಬಿಸಿದರು. ಮಚ್ಚು ತೋರಿಸಿ ನೆಲಕ್ಕೆ ಕೆಡವಿದರು. ಹಡಗಿನಲ್ಲೇ ಇದ್ದ ಚಿಕ್ಕದೊಂದು ದೋಣಿಯನ್ನು ಅವನಿಗೆ ಕೊಟ್ಟು ಈಗಿಂದೀಗಲೇ ಇಲ್ಲಿಂದ ತೊಲಗು ಎಂದು ಆದೇಶಿಸಿದರು. ಒಂದು ಹನಿ ರಕ್ತಪಾತವಿಲ್ಲ ಏನಿಲ್ಲ. ಬ್ಲಿಗ್ ಮತ್ತು ಆತನ ಪಕ್ಷವಹಿಸಿದ ೧೮ ನಾವಿಕರು ಮರುಮಾತಿಲ್ಲದೆ ಅಲ್ಲಿಂದ ಪಲಾಯನ ಮಾಡಬೇಕಾಯಿತು. ಕೇವಲ ೨೩ ಅಡಿಗಳಷ್ಟೇ ಉದ್ದದ ಚಿಕ್ಕ ದೋಣಿಯಲ್ಲಿ, ಚೂರುಪಾರು ಆಹಾರಸಾಮಗ್ರಿಯೊಂದಿಗೆ ಅವರ ಪ್ರಯಾಣ ಅತಿ ದುರ್ಗಮವಾಗಿತ್ತು.

ಬ್ಲಿಗ್ ಒಬ್ಬ ನಿಪುಣ ನಾವಿಕನಾಗಿದ್ದರಿಂದ, ಒಂದೆರಡು ಕಂಪಾಸ್ ಮತ್ತಿತರ ಪರಿಕರಗಳನ್ನೂ ಗಣಿತಕೋಷ್ಟಕಗಳ ಪುಸ್ತಕಗಳನ್ನೂ ಇಟ್ಟುಕೊಂಡಿದ್ದ ನಾದ್ದರಿಂದ, ಅದುಹೇಗೋ ನಿಭಾಯಿಸಿದರು. ಸುಮಾರು ೩೬೦೦ ಮೈಲುಗಳಷ್ಟು ಕ್ರಮಿಸಿ ಜೂನ್ ೧೪ರಂದು ಈಸ್ಟ್‌ಇಂಡೀಸ್‌ನ ಟಿಮರ್ ದ್ವೀಪ ತಲುಪಿ ಉಸ್ಸಪ್ಪಾ ಎಂದರು. ಆಮೇಲೆ ಅವರೆಲ್ಲ ಇಂಗ್ಲೆಂಡ್ ತಲುಪಿದರು, ಅಷ್ಟೇಅಲ್ಲ ಬ್ಲಿಗ್‌ನ ನೇತೃತ್ವದಲ್ಲೇ ಬೇರೊಂದು ನೌಕೆಯಲ್ಲಿ ತಾಹಿತಿಗೆ ಹೋಗಿ ‘ಪ್ರಾಜೆಕ್ಟ್ ದೀಗುಜ್ಜೆ’ಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಆದರೂ ಬ್ಲಿಗ್ ವಿರುದ್ಧ ಕ್ರಿಸ್ಟೈನ್ ಮಾಡಿದ್ದು ಬ್ರಿಟಿಷ್ ನೌಕಾದಳದಲ್ಲೇ ಅತಿ ಕುಪ್ರಸಿದ್ಧ ಬಂಡಾಯ ಎಂದು ದಾಖಲಾಯಿತು. ಈ ಸತ್ಯಕಥೆಯನ್ನಾಧರಿಸಿ ಮುಂದೆ ೨೦ನೆಯ ಶತಮಾನದಲ್ಲಿ ಮೂರು ಬೇರೆಬೇರೆ ಚಲನಚಿತ್ರಗಳೂ ನಿರ್ಮಾಣ ವಾದುವು!

ಸರಿ, ಕ್ರಿಸಟೈನ್ ಮತ್ತು ಆತನ ಒಡನಾಡಿ ಬಂಡುಕೋರರು ಏನಾದರು? ಅವರು ತುಬುವಾಯ್ ಎಂಬ ದ್ವೀಪದಲ್ಲಿ ತಮ್ಮ ಆಧಿಪತ್ಯ ಸ್ಥಾಪಿಸಲಿಕ್ಕೆ ಯತ್ನಿಸಿದರು. ಅದು ಯಶಸ್ವಿಯಾಗದೆ ಮತ್ತೆ ತಾಹಿತಿ ದ್ವೀಪಕ್ಕೇ ಮರಳಿದರು. ಒಂದಿಷ್ಟು ಮಂದಿ ನಾವಿಕರು ಅಲ್ಲೇ ಉಳಿದುಕೊಂಡರು- ಬ್ರಿಟಿಷ್ ಅಧಿಕಾರಿಗಳು ಬಂದು ತಮ್ಮನ್ನು ಬಂಧಿಸಬಹುದೆಂಬ ಹೆದರಿಕೆಯಿದ್ದರೂ. ಕ್ರಿಸ್ಟೈನ್ ಮತ್ತು ಎಂಟು ಜನ ನಾವಿಕರು, ತಾಹಿತಿಯ ದ್ವೀಪನಿವಾಸಿ ಕೆಲ ಗಂಡಸರು ಮತ್ತು ಹೆಂಗಸರು, ಒಂದು ಚಿಕ್ಕ ಮಗು- ಎಲ್ಲರನ್ನೂ ಸೇರಿಸಿಕೊಂಡು ಬೌಂಟಿ ಹಡಗಿನಲ್ಲೇ ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಯಾವುದಾದರೂ ಸುರಕ್ಷಿತ ದ್ವೀಪ ಸಿಗಬಹುದೆಂಬ ಆಸೆಯಿಂದ ಹೊರಟರು. ಹಾಗೆ ೧೭೯೦ರಲ್ಲಿ ಅವರೆಲ್ಲ ತಲುಪಿದ್ದು ತಾಹಿತಿಯಿಂದ ೧೦೦೦ ಮೈಲು ಪೂರ್ವಕ್ಕಿದ್ದ
ಪಿಟ್‌ಕೈರ್ನ್ ದ್ವೀಪವನ್ನು.

ತಾಹಿತಿಯಲ್ಲೇ ಉಳಿದಿದ್ದವರನ್ನು ನಿಜವಾಗಿಯೂ ಬ್ರಿಟಿಷ್ ಅಧಿಕಾರಿಗಳು ಪತ್ತೆಹಚ್ಚಿ ಬಂಧಿಸಿ ಇಂಗ್ಲೆಂಡ್‌ಗೆ ಒಯ್ದರು. ಮಾತ್ರವಲ್ಲ ಅಲ್ಲಿ ಅವರನ್ನೆಲ್ಲ
ನೇಣುಗಂಬಕ್ಕೆ ಏರಿಸಲಾಯಿತು. ಪಿಟ್‌ಕೈರ್ನ್ ದ್ವೀಪದಲ್ಲಿ ತಳವೂರಿದ್ದ ಕ್ರಿಸ್ಟೈನ್ ಮತ್ತವನ ಜೊತೆಗಾರರನ್ನು ಪತ್ತೆಹಚ್ಚುವುದು ಬ್ರಿಟಿಷ್ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ೧೮೦೮ರಲ್ಲಿ ಅಮೆರಿಕದ ನೌಕೆಯೊಂದು, ತಿಮಿಂಗಿಲಗಳ ಬೇಟೆಗೆಂದು ಹೋಗಿದ್ದು, ಅಡುಗೆ ಮಾಡುವಾಗಿನ ಅಚಾತುರ್ಯದಿಂದ ಹೊಗೆ ತುಂಬಿಕೊಂಡು ರಕ್ಷಣೆಗಾಗಿ ಪಿಟ್ ಕೈರ್ನ್ ದ್ವೀಪಕ್ಕೆ ಹೋಯಿತು. ನೌಕೆಯಲ್ಲಿದ್ದ ನಾವಿಕರಿಗೆ ಪಿಟ್ ಕೈರ್ನ್ ದ್ವೀಪದಲ್ಲಿ ಜಾನ್ ಆಡಮ್ಸ್ ಎಂಬಾತ, ಹೆಂಡತಿ ಮಕ್ಕಳು ಮತ್ತೊಂದಿಷ್ಟು ಜನರ ಚಿಕ್ಕದೊಂದು ಸಮುದಾಯದ ಮುಖಂಡನಾಗಿ ಬದುಕುತ್ತಿದ್ದವನು ಭೇಟಿಯಾದನು.

ಅವನಿಂದ ತಿಳಿದುಬಂದ ಮಾಹಿತಿಯಂತೆ, ಪಿಟ್‌ಕೈರ್ನ್ ದ್ವೀಪ ತಲುಪಿದ ಮೇಲೆ ಕ್ರಿಸ್ಟೈನ್ ಆ ಬೌಂಟಿ ಹಡಗನ್ನು ಛಿದ್ರವಿಚ್ಛಿದ್ರಗೊಳಿಸಿ ಸುಟ್ಟು ಹಾಕಿದ್ದನಂತೆ. ಬಹುಶಃ ಬ್ರಿಟಿಷ್ ಅಽಕಾರಿಗಳು ಅದನ್ನು ಗುರುತಿಸಬಹುದು ಎಂಬ ಹೆದರಿಕೆಯಿಂದಲೇ ಇರಬಹುದು. ಪರಸ್ಪರ ಭಿನ್ನಾಭಿಪ್ರಾಯ, ಜಗಳ, ಸಾಲದೆಂಬಂತೆ ಗುಣಪಡಿಸಲಾಗದ ಕಾಯಿಲೆಗಳು ಕ್ರಿಸ್ಟೈನ್‌ನನ್ನೂ, ಮೂಲ ಬಂಡಾಯಗಾರರ ಪೈಕಿ ಏಳು ಮಂದಿಯನ್ನೂ ಆಪೋಶನ ತೆಗೆದುಕೊಂಡಿ ದ್ದವು. ಜಾನ್ ಆಡಮ್ಸ್ ಒಬ್ಬನೇ ಬದುಕುಳಿದವನು. ೧೮೨೫ರಲ್ಲಿ ಒಂದು ಬ್ರಿಟಿಷ್ ಹಡಗು ಪಿಟ್ ಕೈರ್ನ್ ದ್ವೀಪಕ್ಕೆ ಬಂತು. ಜಾನ್ ಆಡಮ್ಸ್‌ನಿಗೆ ಅಧಿಕೃತ ವಾಗಿ ಕ್ಷಮಾಪಣೆ ಸಿಕ್ಕಿತು. ೧೮೨೯ರಲ್ಲಿ ಆತ ನಿಧನನಾಗುವವರೆಗೂ ಪಿಟ್ ಕೈರ್ನ್ ದ್ವೀಪದ ಜನಸಮುದಾಯಕ್ಕೆ ಮುಂದಾಳುವಾಗಿಯೇ ಇರುವ ಅಧಿಕಾರವೂ ಪ್ರಾಪ್ತವಾಯಿತು.

೧೮೩೧ರಲ್ಲಿ ಪಿಟ್‌ಕೈರ್ನ್ ದ್ವೀಪವಾಸಿಗಳನ್ನೆಲ್ಲ ತಾಹಿತಿಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಅವರಿಗೆ ಸರಿಹೋಗದೆ ಪಿಟ್‌ಕೈರ್ನ್ ದ್ವೀಪಕ್ಕೇ ಮರಳಿ ದರು. ೧೮೩೮ರಲ್ಲಿ ಪಿಟ್‌ಕೈರ್ನ್ ಸೇರಿದಂತೆ ಆಸುಪಾಸಿನ ಮೂರುನಾಲ್ಕು ದ್ವೀಪಗಳನ್ನೆಲ್ಲ ಬ್ರಿಟಿಷ್ ಸಾಮ್ರಾಜ್ಯದ ಭಾಗವೆಂದು ಘೋಷಿಸ ಲಾಯಿತು. ೧೮೫೫ರಲ್ಲಿ ಪಿಟ್‌ಕೈರ್ನ್‌ನ ಜನಸಂಖ್ಯೆ ಸುಮಾರು ೨೦೦. ಕೇವಲ ಎರಡು ಚದರ ಮೈಲುಗಳಷ್ಟು ಮಾತ್ರ ವಿಸ್ತೀರ್ಣದ ದ್ವೀಪ ಅಷ್ಟು ಮಂದಿಗೆ ಸಾಲದಾಯ್ತು. ಮರುವರ್ಷವೇ ಅವರನ್ನೆಲ್ಲ ಅಲ್ಲಿಂದ ಎತ್ತಂಗಡಿ ಮಾಡಲಾಯ್ತು. ೪೦೦೦ ಮೈಲುಗಳಷ್ಟು ಪಶ್ಚಿಮದಲ್ಲಿದ್ದ ನಾರ್ಫಾಕ್ ದ್ವೀಪಕ್ಕೆ ಒಯ್ಯಲಾಯ್ತು. ಆದರೂ ೧೭ ಮಂದಿ ಮತ್ತೆ ಪಿಟ್‌ಕೈರ್ನ್‌ಗೇ ಹಿಂದಿರುಗಿದರು.

ಮುಂದಿನ ವರ್ಷಗಳಲ್ಲಿ ಮತ್ತೂ ಒಂದಿಷ್ಟು ಮಂದಿ ವಾಪಸಾದರು. ಇಂದು ಪಿಟ್‌ಕೈರ್ನ್ ದ್ವೀಪದಲ್ಲಿರುವ ನೂರಿನ್ನೂರು ಜನಸಂಖ್ಯೆಯಲ್ಲಿ, ಹಾಗೆಯೇ
ನಾರ್ಫಾಕ್ ದ್ವೀಪದಲ್ಲಿರುವ ಒಂದೆರಡು ಸಾವಿರ ಜನಸಂಖ್ಯೆ ಯಲ್ಲಿ, ಹೆಚ್ಚಿನವರ ವಂಶಾವಳಿಯನ್ನು ಜಾಲಾಡಿಸಿದರೆ ಅವರೆಲ್ಲ ಎಚ್‌ಎಮ್‌ಎಸ್ ಬೌಂಟಿ ಹಡಗಿನಲ್ಲಿ ಯಾನಗೈದ, ದೀಗುಜ್ಜೆ ಗಿಡಗಳನ್ನು ತಾಹಿತಿಯಿಂದ ವೆಸ್ಟ್‌ಇಂಡೀಸ್‌ಗೆ ಒಯ್ಯಬೇಕಿದ್ದ, ಆದರೆ ನಡುವೆಯೇ ಬಂಡಾಯವೆದ್ದ ಫ್ಲೆಚರ್ ಕ್ರಿಸ್ಟೈನ್ ಮತ್ತು ಎಂಟು ಜನ ಸಹನಾವಿಕರ ವಂಶಸ್ಥರೇ. ಪಿಟ್‌ಕೈರ್ನ್ ದ್ವೀಪದಲ್ಲಂತೂ ಅಲ್ಲಿಯ ಕೇಂದ್ರಭಾಗಕ್ಕೆ ಜಾನ್ ಆಡಮ್ಸ್ ಸ್ಮರಣಾರ್ಥ ಆಡಮ್ಸ್‌ಟೌನ್ ಎಂದು ನಾಮಕರಣವೂ ಆಗಿದೆಯಂತೆ.

ಅದೆಲ್ಲ ಇರಲಿ, ಬ್ರಿಟಿಷರು ೧೭೦೦ರ ಕಾಲಘಟ್ಟದಲ್ಲಿ ದೀಗುಜ್ಜೆಯ ಮೇಲೆ ಆಸಕ್ತರಾಗಿದ್ದೇಕೆ? ಅದಕ್ಕೆ ಬಲವಾದ ಕಾರಣಗಳಿವೆ. ಬ್ರಿಟಿಷ್ ಸಾಮ್ರಾಜ್ಯವು ಉತ್ತರ ಅಮೆರಿಕದ ೧೩ ಕಾಲನಿಗಳನ್ನು ಆಗಷ್ಟೇ ಕಳೆದುಕೊಂಡಿತ್ತು. ಪಶ್ಚಿಮ ಗೋಲಾರ್ಧದಲ್ಲಿ ಬ್ರಿಟಿಷ್ ಪ್ರಾಬಲ್ಯ ಮತ್ತು ಪ್ರತಿಷ್ಠೆಯನ್ನು ಉಳಿಸಿ ಕೊಳ್ಳುವ ಜರೂರು ಇತ್ತು. ಸಸ್ಯಶಾಸ್ತ್ರಜ್ಞರ ಅಧ್ಯಯನ ಫಲವಾಗಿ, ಯಾವ್ಯಾವ ಸಸ್ಯಗಳನ್ನು ಒಂದು ಪ್ರದೇಶದಿಂದ ಬೇರುಸಹಿತ ಕಿತ್ತು ಇನ್ನೊಂದು ಕಡೆ ನೆಟ್ಟು ಬೆಳೆಸಬಹುದೆಂಬ ಪ್ರಯೋಗಗಳಿಗೆ ಆಗ ಬೇಡಿಕೆ ಇತ್ತು.

ಜೋಸೆಫ್ ಬ್ಯಾಂಕ್ಸ್ ಎಂಬೊಬ್ಬ ಶ್ರೀಮಂತ ಬ್ರಿಟಿಷ್ ಜಮೀನ್ದಾರ, ಸಸ್ಯಶಾಸ್ತ್ರಜ್ಞನೂ ಆಗಿದ್ದವನು, ೧೭೬೯ರ ಸುಮಾರಿಗೇ ಕ್ಯಾಪ್ಟನ್ ಜೇಮ್ಸ್ ಕುಕ್
ಎಂಬ ನಾವಿಕನೊಂದಿಗೆ ಎಚ್‌ಎಮ್‌ಎಸ್ ಎಂಡೇವರ್ ಎಂಬ ನೌಕೆಯಲ್ಲಿ ಪೆಸಿಫಿಕ್ ಸಾಗರಯಾತ್ರೆ ಮಾಡಿದ್ದನು. ತಾಹಿತಿ ಮತ್ತಿತರ ಪಾಲಿನೇಷ್ಯನ್ ದ್ವೀಪಗಳಲ್ಲಿ ದೀಗುಜ್ಜೆ ಯಥೇಚ್ಛವಾಗಿ ಬೆಳೆಯುವುದನ್ನು ಗಮನಿಸಿದ್ದನು. ಅದನ್ನು ಪರೀಕ್ಷಿಸಲಾಗಿ ಜನಸಾಮಾನ್ಯರಿಗೆ, ಮುಖ್ಯವಾಗಿ ಬ್ರಿಟಿಷ್ ಆಧಿಪತ್ಯದ ಪ್ರದೇಶಗಳಲ್ಲಿನ ಗುಲಾಮರಿಗೆ ಅದು ಒಳ್ಳೆಯ ಆಹಾರಸಾಮಗ್ರಿ ಆಗಬಹುದೆಂದು ಕಂಡುಕೊಂಡಿದ್ದನು.

ಇಂಗ್ಲಿಷ್‌ನಲ್ಲಿ ದೀಗುಜ್ಜೆಗೆ ‘ಬ್ರೆಡ್-ಟ್’ ಎಂಬ ಹೆಸರು ಬಂದದ್ದೂ ಬಹುಶಃ ಆ ಕಾರಣದಿಂದಲೇ. ಅಷ್ಟಾಗಿ, ಗುಲಾಮರಿಗೆ ಆಹಾರಸಾಮಗ್ರಿ ಒದಗಿಸುವ ಯೋಚನೆ ಬ್ರಿಟಿಷರಿಗೆ ಇದ್ದದ್ದು ಕೂಡ ಅವರ ಸ್ವಾರ್ಥದಿಂದಲೇ ಹೊರತು ಉದಾರಗುಣದಿಂದೇನಲ್ಲ! ಕೆರೀಬಿಯನ್ ಪ್ರದೇಶದಲ್ಲಿ, ಮುಖ್ಯವಾಗಿ ಜಮೈಕಾದಲ್ಲಿ ಕಬ್ಬು ಕೃಷಿ ಮತ್ತು ಸಕ್ಕರೆ ಉತ್ಪಾದನೆಯನ್ನು ಬ್ರಿಟಿಷರು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಂಡಿದ್ದರು. ಆಫ್ರಿಕಾದಿಂದ ಕರೆದುತಂದ
ಸಾವಿರಾರು ಗುಲಾಮರನ್ನು ಕಬ್ಬಿನ ತೋಟಗಳಲ್ಲಿ ಜೀತದಾಳುಗಳಾಗಿ ನೇಮಿಸಲಾಗಿತ್ತು. ಅಷ್ಟು ಮಂದಿಗೆ ಆಹಾರ ಬೇಕಲ್ಲ? ಅವರಿಗೆ ಚೆನ್ನಾಗಿ ತಿನ್ನಿಸಿ, ಹೆಚ್ಚು ದುಡಿಯುವಂತೆ ಮಾಡಿ, ಹೆಚ್ಚು ಸಕ್ಕರೆ ಉತ್ಪಾದಿಸಿದರೆ ಆ ದುಡ್ಡನ್ನು ಚೈನಾದಿಂದ ಚಹ ಮತ್ತು ಭಾರತದಿಂದ ಸಾಂಬಾರ ಪದಾರ್ಥಗಳ ಆಮದಿಗೆ
ಬಳಸಿಕೊಳ್ಳಬಹುದೆಂದು ಬ್ರಿಟಿಷರ ದೂರಾಲೋಚನೆ.

ಹಾಗೆ ಜೋಸೆಫ್ ಬ್ಯಾಂಕ್‌ನ ಸಲಹೆಯಂತೆ ತಾಹಿತಿ ದ್ವೀಪದಿಂದ ದೀಗುಜ್ಜೆ ಗಿಡಗಳನ್ನು ಎತ್ತಿಕೊಂಡು ಹೋಗಿ ಕೆರೀಬಿಯನ್ ಪ್ರದೇಶಗಳಲ್ಲಿ ನೆಡುವು ದೆಂದಾಯಿತು. ಕ್ಯಾಪ್ಟನ್ ವಿಲಿಯಂ ಬ್ಲಿಗ್ ಒಬ್ಬ ನಿಪುಣ ನಾವಿಕನೆಂದು ಆಗಲೇ ಪ್ರಖ್ಯಾತನಾಗಿದ್ದರಿಂದ ಆ ಜವಾಬ್ದಾರಿ ಅವನ ಹೆಗಲಿಗೆ ಬಂತು. ಫ್ಲೆಚರ್ ಕ್ರಿಸ್ಟೈನ್ ನಡೆಸಿದ ದಂಗೆಯಿಂದ ಬ್ಲಿಗ್ ತಾತ್ಕಾಲಿಕ ಸೋಲನ್ನನುಭವಿಸಿದರೂ ಎರಡನೆಯ ಯಾತ್ರೆಯಲ್ಲಿ ತಾಹಿತಿಯಿಂದ ದೀಗುಜ್ಜೆಯ ಸುಮಾರು ೭೦೦ ಗಿಡಗಳನ್ನು ವೆಸ್ಟ್‌ಇಂಡೀಸ್‌ಗೆ ಒಯ್ಯುವುದರಲ್ಲಿ ಯಶಸ್ವಿಯಾದನು. ಅಲ್ಲಿ ಗುಲಾಮರು ಶುರುವಿಗೆ ದೀಗುಜ್ಜೆಯನ್ನು ಅಷ್ಟೇನೂ ಇಷ್ಟಪಡುತ್ತಿರಲಿಲ್ಲ. ಹಂದಿಗಳಿಗೆ ತಿನ್ನಿಸುತ್ತಿದ್ದರಂತೆ. ಆದರೆ ಕ್ರಮೇಣ ಅದರ ಬೇರೆಬೇರೆ ಪಾಕವಿಧಾನಗಳನ್ನು ಕಂಡುಕೊಂಡ ಮೇಲೆ ಒಳ್ಳೆಯ ಪದಾರ್ಥವೆಂದು ಸ್ವೀಕೃತ ವಾಯಿತು.

ದೀಗುಜ್ಜೆಯ ಪರಿಪರಿಯ ಹೊಸರುಚಿಗಳನ್ನು ಕೆರೀಬಿಯನ್ನರು ಕರ್ನಾಟಕದ ಕರಾವಳಿಗರಿಂದ ಕೇಳಿ ತಿಳಿದುಕೊಳ್ಳಬಹುದಿತ್ತು. ಏಕೆಂದರೆ ನಮಗೆಲ್ಲ ದೀಗುಜ್ಜೆಯೆಂದರೆ ಅಚ್ಚುಮೆಚ್ಚು. ಹೊರಗೆ ಧೋ ಎಂದು ಮಳೆ ಸುರಿಯುವಾಗ ಮನೆಯಲ್ಲಿ ದೀಗುಜ್ಜೆಯ ಬಿಸಿಬಿಸಿ ಪೋಡಿ(ಬಜ್ಜಿ) ಕರಿದು ತಿನ್ನುವು ದೆಂದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಪೋಡಿ ಅಷ್ಟೇಅಲ್ಲ, ದೀಗುಜ್ಜೆಯ ಹುಳಿ, ಮಜ್ಜಿಗೆಹುಳಿ, ಪಲ್ಯ, ಚಟ್ನಿ, ತವಾ-ಫ್ರೈ, ರವಾ-ಫ್ರೈ, ಸೋಂಟೆ (ಚಿಪ್ಸ್) ಮುಂತಾದುವೂ ಆಗುತ್ತವೆ. ಮಾಂಸಕ್ಕೆ ಬದಲಿಯಾಗಿ ಉಪಯೋಗಿಸಿ ದೀಗುಜ್ಜೆಯ ಸುಕ್ಕ, ಕಬಾಬ್, ಮಂಚೂರಿಯಾಗಳನ್ನೂ ಮಾಡುವವರಿ ದ್ದಾರೆ.

ಹಲಸಿನ ಹಪ್ಪಳದಷ್ಟು ದೊಡ್ಡ ಪ್ರಮಾಣದಲ್ಲಿ ಅಲ್ಲವಾದರೂ ದೀಗುಜ್ಜೆಯ ಹಪ್ಪಳ ಸಹ ಒಂದು ಸಾಧ್ಯತೆಯೇ. ಪಾಕಶಾಸ್ತ್ರ ಪ್ರಯೋಗಮತಿಗಳು ತುಂಬ ಕ್ರಿಯೇಟಿವ್ ಆಗಿರುವವರು ದೀಗುಜ್ಜೆಯನ್ನು ಹಣ್ಣಾಗಿಸಿ ಅದರಿಂದ ಹಲ್ವಾ ಸಹ ತಯಾರಿಸಿಯಾರು. ಆದರೆ ಬಹುಮಟ್ಟಿಗೆ ದೀಗುಜ್ಜೆ ಹಣ್ಣಾಗಿ ಉಪಯೋ ಗವಿಲ್ಲ, ಏನಿದ್ದರೂ ಕಾಯಿಯಾಗಿದ್ದಾಗ ತರಕಾರಿ ರೂಪದಲ್ಲಿ ಮಾತ್ರ. ಅದರಲ್ಲಿ ವಿಧವಿಧ ಪೋಷಕಾಂಶಗಳೂ ಇವೆಯೆನ್ನುತ್ತಾರೆ. ವಾಯುಪದಾರ್ಥ ವಾದ್ದರಿಂದ ಶಮನಕ್ಕಾಗಿ ದೀಗುಜ್ಜೆಯ ಯಾವುದೇ ಖಾದ್ಯಕ್ಕಾದರೂ ಚಿಟಿಕೆಯಷ್ಟು ಹಿಂಗು ಬಳಸಲೇಬೇಕೆಂದು ನೆನಪಿರಬೇಕು.

ಕರ್ನಾಟಕದಲ್ಲಿ ಕರಾವಳಿಯನ್ನು ಬಿಟ್ಟರೆ ಬೇರೆಲ್ಲೂ ಕಾಣಸಿಗದ, ಎಷ್ಟೋ ಮಂದಿ ಕನ್ನಡಿಗರಿಗೆ ಗೊತ್ತೇ ಇಲ್ಲದ ದೀಗುಜ್ಜೆ(ದಿವಿಹಲಸು) ಇಲ್ಲಿ ಅಮೆರಿಕದಲ್ಲಿ ಕೊರಿಯನ್ ಗ್ರೋಸರಿ ಅಂಗಡಿಗಳಲ್ಲಿ ಕಂಡುಬಂದಾಗ ನನಗೆ ಮೊದಲೊಮ್ಮೆ ತುಂಬ ಆಶ್ಚರ್ಯವಾಗಿತ್ತು. ಬಾಡಿಹೋಗಿ ಕಂದುಬಣ್ಣಕ್ಕೆ ತಿರುಗಿ ಕೊಳೆತುಹೋಗಿದೆಯೇನೊ ಎಂಬಂತೆ ಇರುತ್ತಿದ್ದುದರಿಂದ ನಾನದನ್ನು ಕೊಳ್ಳುವ ಉಸಾಬರಿಗೆ ಹೋಗುತ್ತಿರಲಿಲ್ಲ. ಆದರೆ ಅಪರೂಪಕ್ಕೊಮ್ಮೆ ತಾಜಾ ಹಸುರುಬಣ್ಣದಿಂದ ನಳನಳಿಸುತ್ತಿರುವುದು ಸಿಕ್ಕಿದರೆ ಕೊಂಡು ತಂದು ಬಳಸಿದ್ದಿದೆ.

ಒಮ್ಮೆ ಯಾವುದೋ ಸ್ನೇಹಕೂಟದಲ್ಲಿ ಪಾಟ್‌ಲಕ್ ಡಿನ್ನರ್‌ಗೆ ನಮ್ಮನೆಯ ಐಟಂ ದೀಗುಜ್ಜೆ ಪೋಡಿ ಆಗಿದ್ದದ್ದು ಅಲ್ಲಿ ಅದು ಸಕ್ಕತ್ ಮಿಂಚಿದ್ದೂ ಇದೆ. ಆಮೇಲೊಮ್ಮೆ ಅಂತರಜಾಲದಲ್ಲಿ ತಡಕಾಡುತ್ತಿದ್ದಾಗ ದೀಗುಜ್ಜೆಯ ವಿಶ್ವರೂಪದರ್ಶನ ಆಯ್ತು. ನಮ್ಮ ಕರ್ನಾಟಕ ಕರಾವಳಿಯಲ್ಲಷ್ಟೇ ಅಲ್ಲ, ಪೆಸಿಫಿಕ್ ಸಾಗರದ ದ್ವೀಪಗಳು, ಆಗ್ನೇಯ ಏಷ್ಯಾ, ಕೆರೀಬಿಯನ್, ಮತ್ತು ಮಧ್ಯ ಅಮೆರಿಕ ಪ್ರದೇಶಗಳ ೯೦ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಅದು ಬೆಳೆಯುತ್ತದೆಂದು ತಿಳಿಯಿತು. ಅಮೆರಿಕ ಸಂಯುಕ್ತ ಸಂಸ್ಥಾನದ ಭಾಗವಾದ ಹವಾಯಿ ದ್ವೀಪದಲ್ಲಿರುವ ನ್ಯಾಶನಲ್ ಟ್ರಾಪಿಕಲ್ ಬೊಟಾನಿಕಲ್ ಗಾರ್ಡನ್‌ನಲ್ಲಿ ದ ‘ಬ್ರೆಡ್-ಟ್ ಇನ್ಸ್‌ಟಿ ಟ್ಯೂಟ್’ ಅಂತೊಂದು ಸಂಶೋಧನಾಘಟಕವೂ ಇದೆಯಂತೆ!

ಹವಾಯಿ ದ್ವೀಪವಾಸಿಗಳ ಒಂದು ಜನಪದಕಥೆ ಈ ದೀಗುಜ್ಜೆ ಪುರಾಣಕ್ಕೆ ಒಳ್ಳೆಯ ಉಪಸಂಹಾರ ಆದೀತು. ಅದು ಹೀಗಿದೆ: ಕೂ ಎಂಬ ದೈವವು ದೈವವಾ ಗುವುದಕ್ಕೆ ಮೊದಲು ಉಲು ಎಂಬ ಹೆಸರಿನ ಮನುಷ್ಯನಾಗಿತ್ತು. ಹಾಗೆ ಮನುಷ್ಯನಾಗಿದ್ದಾಗ ಒಬ್ಬಳು ಹೆಣ್ಣನ್ನು ಪ್ರೀತಿಸಿ ಆಕೆಯ ಹಳ್ಳಿಯಲ್ಲೇ ಒಂದು ತೋಟದಲ್ಲಿ ಕೆಲಸಗಾರನಾಗಿದ್ದನು. ಅವಳನ್ನು ಮದುವೆಯಾಗಿ ಮಕ್ಕಳೂ ಆದುವು. ಒಮ್ಮೆ ರಾಜ್ಯದಲ್ಲಿ ತೀವ್ರವಾದ ಬರಗಾಲ ಕಾಣಿಸಿತು. ಸಸ್ಯಗಳಿಗೆ, ಪ್ರಾಣಿಗಳಿಗೆ ಬಿಡಿ, ಮನುಷ್ಯರಿಗೂ ಕುಡಿಯಲಿಕ್ಕೆ ನೀರಿಲ್ಲ ತಿನ್ನಲಿಕ್ಕೆ ಆಹಾರವಿಲ್ಲ ಎಂಬಂಥ ಪರಿಸ್ಥಿತಿ. ತನ್ನ ಹೆಂಡತಿ ಮತ್ತು ಮಕ್ಕಳು ಬದುಕಬೇಕು, ಸಂಗ್ರಹಿಸಿಟ್ಟ ಅಷ್ಟಿಷ್ಟು ಆಹಾರ ಅವರಿಗೇ ಇರಲಿ, ತಾನು ಸತ್ತರೂ ಅಡ್ಡಿಯಿಲ್ಲ ಎಂದು ನಿರ್ಧರಿಸಿದ ಉಲು ಒಂದುದಿನ ಹಾಗೇ ಭೂಮಿಯೊಳಕ್ಕೆ ಅಂತರ್ಧಾನನಾದನು. ಅವನ ಹೆಂಡತಿ ಆ ಜಾಗದಲ್ಲಿ ನಿಂತು ದುಃ ಖದಿಂದ ಕಣ್ಣೀರು ಹರಿಸಿದಾಗ ಅಲ್ಲಿ ಮಣ್ಣು ಒದ್ದೆಯಾಯಿತು.

ಮಾರನೆ ದಿನ ಬೆಳಗ್ಗೆ ನೋಡುತ್ತೇನಾದರೆ ಒಂದು ಚಿಕ್ಕ ಸಸಿ ಅಲ್ಲಿ ಚಿಗುರಿತ್ತು! ಕೆಲವೇ ದಿನಗಳಲ್ಲಿ ಅದೊಂದು ದೊಡ್ಡ ಮರವಾಗಿ ಬೆಳೆದು ಕಾಯಿ ಗಳನ್ನು ಬಿಟ್ಟಿತು. ಹಳ್ಳಿಗರು ಅದನ್ನು ಉಲು ಮರ ಮತ್ತು ಉಲು ಕಾಯಿಗಳೆಂದು ಕರೆದರು. ಉಲುನ ಹೆಂಡತಿಯ ಕನಸಿನಲ್ಲಿ ಉಲು ಕೂ ದೈವವಾಗಿ ಕಾಣಿಸಿಕೊಂಡು ಕಾಯಿಗಳಿಂದ ಹೇಗೆ ಅಡುಗೆ ಮಾಡುವುದೆಂದು ಹೇಳಿಕೊಟ್ಟಿತು. ಮರದ ಬೇರುಗಳಿಂದ ಸಸಿಗಳನ್ನು ಬೆಳೆಸಿ ನೆರೆಕೆರೆಯವರಿಗೂ ಹಂಚಬೇಕೆಂದು ಹೇಳಿತು. ಇಡೀ ಊರಿಗೆ ಉಲು ಕಾಯಿಗಳ ರೂಪದಲ್ಲಿ ಹೇರಳವಾದ ಆಹಾರ ಸಿಕ್ಕಿದಂತಾಯಿತು. ಕ್ಷಾಮಪರಿಸ್ಥಿತಿಯನ್ನು ಅವರೆಲ್ಲ ಸುಲಭವಾಗಿ ಎದುರಿಸಲಿಕ್ಕಾಯಿತು.

ಈಗ ನನಗೊಂದು ಚಿಕ್ಕ ಜಿಜ್ಞಾಸೆ. ಕನ್ನಡದಲ್ಲಿ ದಿವಿಹಲಸು ಎಂಬ ಪದದಲ್ಲಿರುವ ‘ದಿವಿ’ ವಿಶೇಷಣ ಸಹ ಹವಾಯಿಯನ್ ದೈವದಂತೆಯೇ ಯಾವುದೋ ಅಗೋಚರ ದೈವದಿಂದಲೇ ಬಂದದ್ದಿರಬಹುದೇ!?