Wednesday, 24th April 2024

ಬೆಳಕು ಚೆಲ್ಲುವ ಹಣತೆ ಮತ್ತು ಜ್ಞಾನ ದೀಪದ ಘನತೆ

ತಿಳಿರು ತೋರಣ

srivathsajoshi@yahoo.com

ದೀಪಾವಳಿಯೆಂದರೆ ತೈಲಾಭ್ಯಂಗ, ಹೊಸಬಟ್ಟೆ, ಸಿಹಿತಿಂಡಿ, ಸುಡುಮದ್ದು, ಗೂಡುದೀಪ (ಆಕಾಶಬುಟ್ಟಿ), ವಿಶೇಷಾಂಕಗಳ ಓದು, ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದಿಷ್ಟು ಪ್ರದರ್ಶನ…ಎಂದು ಸಂಭ್ರಮಿಸುವ ನಮಗೆ, ದೀಪಾವಳಿಯ ಪಾರಮಾರ್ಥಿಕ ಮಹತ್ತ್ವವನ್ನೂ ಅರಿತಿರುವ ಮತ್ತು ಅದನ್ನು ಗೌರವದಿಂದ ಕಾಣುವ ಈ ವಿದೇಶೀ ಶಿಕ್ಷಕಿಯ ಬಗ್ಗೆ ಹೆಮ್ಮೆಯೆ ನಿಸಬೇಕು.

ಅಮೆರಿಕದ ಒಬ್ಬ ಖ್ಯಾತ ಕವಯಿತ್ರಿ ಮತ್ತು ಹೋರಾಟಗಾರ್ತಿಯೂ ಆಗಿದ್ದ ಔಡ್ರೆ ಲಾರ್ಡ್ (1934-92) ಎಂಬಾಕೆಯದೆನ್ನ ಲಾದ ಒಂದು ಸೂಕ್ತಿ ಹೀಗಿದೆ: It is not our differences that divide us. It is our inability to recognize, accept, and celebrate those differences. ಇದರ ಭಾವಾರ್ಥವನ್ನು ಸಿರಿಗನ್ನಡದಲ್ಲಿ ಹೇಳುವುದಾದರೆ- ‘ನಮ್ಮ ನಂಬಿಕೆ ಗಳಲ್ಲಿ, ಸಂಪ್ರದಾಯಗಳಲ್ಲಿ ಇರಬಹುದಾದ ವ್ಯತ್ಯಾಸಗಳು ನಮ್ಮೊಳಗೆ ಭೇದಭಾವದ ವಿಷಬೀಜ ಬಿತ್ತುವುದಿಲ್ಲ; ಆದರೆ ಆ ವ್ಯತ್ಯಾಸಗಳನ್ನು ಅರಿತು ಆದರಿಸಿ ಆನಂದಿಸುವುದರಲ್ಲಿ, ತನ್ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿ ಕೊಳ್ಳುವುದರಲ್ಲಿ ನಾವು ವಿಫಲರಾಗುತ್ತೇವಲ್ಲ ಅದರಿಂದಲೇ ಸಮಾಜದಲ್ಲಿ ಕಂದಕಗಳು ಉಂಟಾಗುತ್ತವೆ, ಸೇತುವೆಗಳ ಬದಲಿಗೆ ಗೋಡೆಗಳು ಹುಟ್ಟಿ ಕೊಳ್ಳುತ್ತವೆ.’

ಔಡ್ರೆ ಲಾರ್ಡ್ ಇದೇ ಅರ್ಥದಲ್ಲಿ ಹೇಳಿದ್ದ ಇಲ್ಲವೋ ತಿಳಿಯದು. ಏಕೆಂದರೆ ಆಫ್ರಿಕನ್ ಅಮೆರಿಕನ್ ಮೂಲದ ಆಕೆ ಸ್ವಲ್ಪ ಉಗ್ರಗಾಮಿ ಧೋರಣೆಯವಳು, ಮಹಿಳಾವಾದಿ, ಮಾನವ ಹಕ್ಕುಗಳ ಪ್ರತಿಪಾದಕಿ ಇತ್ಯಾದಿ. ತೀಕ್ಷ್ಣವಾದ ಕವಿತೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದವಳು. ಕಪ್ಪುಜನಾಂಗವನ್ನು ಪ್ರತಿನಿಧಿಸುತ್ತಿದ್ದವಳಾದ್ದರಿಂದ ವರ್ಣಭೇದದ ಕಹಿಯನ್ನು ಅನುಭವಿಸಿ ದವಳೇ ಇರಬೇಕು.

ಅದೇನೇ ಇರಲಿ ಅವಳ ಸೂಕ್ತಿಯಲ್ಲಿ ಸತ್ತ್ವ ಇರುವುದು ಹೌದೆಂದು ನಮಗೇ ಗೊತ್ತಾಗುತ್ತದೆ. ಪ್ರಪಂಚದಲ್ಲಿ ನಮ್ಮ ಸುತ್ತ ಮುತ್ತಲಿನ ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿದರೆ ಆಕೆಯ ಮಾತು ತುಂಬ ಅರ್ಥಪೂರ್ಣವಾಗಿ ತೋರುತ್ತದೆ. ಭಾಷೆ, ಜಾತಿ, ಮತ, ಧರ್ಮಗಳ ಹೆಸರಿನಲ್ಲಿ, ಒಬ್ಬರಿಗಿಂತ ಇನ್ನೊಬ್ಬರು ಮೆಟೀರಿಯಲಿಸ್ಟಿಕ್ ಆಗಿರುವ ಕಾಲಘಟ್ಟದಲ್ಲಿ, ಈಗ ಮಾನವ ಜನಾಂಗದೊಳಗೆ ಕುದಿಯುತ್ತಿರುವ ದ್ವೇಷದಳ್ಳುರಿಗಳನ್ನು ನೋಡಿದ್ದಿದ್ದರೆ ಔಡ್ರೆ ಇನ್ನೂ ರೋಷದಿಂದ ಹೇಳುತ್ತಿದ್ದಳೇನೋ.

ಅಂದಮಾತ್ರಕ್ಕೇ ಎಲ್ಲವೂ ಕೆಟ್ಟುಹೋಗಿದೆಯೆನ್ನುವುದೂ ಸರಿಯಲ್ಲ. ಬೇರೊಂದು ಸಂಸ್ಕೃತಿಯನ್ನು ಅರಿಯುವ, ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಗುರುತಿಸಿ ಗೌರವಿಸುವ, ಸಾಧ್ಯವಾದರೆ ಅಳವಡಿಸಿಕೊಳ್ಳುವ ಜನರು ಇಲ್ಲವೇಇಲ್ಲ ಎಂದೇನಿಲ್ಲ. ಅಂಥವರೂ ಸಿಗುತ್ತಾರೆ, ಅವರ ಸಂಖ್ಯೆ ಕಡಿಮೆ ಅಷ್ಟೇ. ಪಾಶ್ಚಾತ್ಯ ಜಗತ್ತಿನ ಓರ್ವ ಅನಾಮಧೇಯ ಶಿಕ್ಷಕಿ ಆ ಪೈಕಿಯವಳು. ಅನಾಮಧೇಯಳಾಗಿ ಉಳಿಯಬಯಸಿದ್ದು ಏಕೆಂದು ನನಗೆ ಗೊತ್ತಿಲ್ಲ.

ಕೆಲ ವರ್ಷಗಳ ಹಿಂದೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಈ ಶಿಕ್ಷಕಿಯು ಬರೆದಿದ್ದ, ಆಗಾಗ ಓದುವುದಕ್ಕೆ ನಾನು ಎತ್ತಿಟ್ಟು ಕೊಂಡಿರುವ, ಒಂದು ಪುಟ್ಟ ಲೇಖನವು ತುಂಬ ವಿಚಾರಪೂರ್ಣವಾಗಿದೆ. ಅಂತಹದನ್ನೂ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದೆ ಯಲ್ಲ ಎಂದು ಚಿವುಟಿ ನೋಡುವಂತಿದೆ. ಏಕೆಂದರೆ ಅನಾಮಧೇಯ ಶಿಕ್ಷಕಿ ಬರೆದದ್ದು ಭಾರತೀಯ ಸಂಸ್ಕೃತಿಯನ್ನು ಬಾಯ್ತುಂಬ ಹೊಗಳುತ್ತ ಮತ್ತು ಹೃದಯದಾಳದಿಂದ ಗೌರವಿಸುತ್ತ. ಲೇಖನದ ವಿಷಯ ಭಾರತೀಯ ಸಂಸ್ಕೃತಿಯನ್ನು ಸಮರ್ಥವಾಗಿ ಪ್ರತಿನಿಧಿಸುವ ದೀಪಾವಳಿ ಹಬ್ಬ.

ಅದರಲ್ಲೂ ಮುಖ್ಯವಾಗಿ ದೀಪ ಹಚ್ಚುವ ಪ್ರಕ್ರಿಯೆ, ಮತ್ತು ಅದನ್ನು ಆಕೆ ಅರ್ಥೈಸಿಕೊಂಡಿರುವ ರೀತಿ. ಬೆಳಕು ಚೆಲ್ಲುವ ಹಣತೆಗೂ eನ ದೀಪದ ಘನತೆಗೂ ಬೆಸೆದಿರುವ ಸಂಬಂಧ – ಇದೊಂದೇ ಸಾಕು ಆಕೆಯ ಉದಾತ್ತ ಚಿಂತನೆಯನ್ನು ತಿಳಿದುಕೊಳ್ಳಲಿಕ್ಕೆ ಮತ್ತು ಆಕೆಯ ವ್ಯಕ್ತಿತ್ವದ ಬಗ್ಗೆ ಗೌರವ ಮೂಡಲಿಕ್ಕೆ. ದೀಪಾವಳಿ ಹಬ್ಬದ ಹೊಸ್ತಿಲಲ್ಲಿ ಇಂದು ಆ
ಶಿಕ್ಷಕಿಯ ಅಭಿಪ್ರಾಯಗಳನ್ನು ಅವಳ ಮಾತುಗಳಲ್ಲೇ ತಿಳಿದುಕೊಳ್ಳೋಣ.

‘ದೀಪಾವಳಿಯಂದು ಹಿಂದೂಗಳು ಸಾಲುಸಾಲು ದೀಪಗಳನ್ನುರಿಸಿ ಸಂಭ್ರಮಿಸುತ್ತಾರೆ. ಮಣ್ಣಿನ ಹಣತೆಯಲ್ಲಿ ಎಣ್ಣೆಹಾಕಿ
ಬತ್ತಿ ಜೋಡಿಸಿ ಉರಿಸುವ ದೀಪವೆಂದರೆ ಬರೀ ಬೆಳಕು ಬೀರುವ ಜ್ವಾಲೆಯಲ್ಲ, ಅದಕ್ಕೆ ಅತ್ಯುನ್ನತವಾದ ಅರ್ಥವಿದೆ, ಮಹತ್ತ್ವದ ಪರಿಕಲ್ಪನೆಯಿದೆ. ದೀಪ ಹಚ್ಚುವುದೆಂದರೆ ದೇವರಿಗೆ ಕೃತಜ್ಞತೆ ಸಲ್ಲಿಸುವ ಒಂದು ವಿಧಾನ. ಆಯುರಾರೋಗ್ಯ ಐಶ್ವರ್ಯ ಸುಖ-ಶಾಂತಿ-ಕೀರ್ತಿಗಳನ್ನು ದಯಪಾಲಿಸಿದ್ದಕ್ಕೆ ಭಗವಂತನಿಗೆ ನಮ್ಮಿಂದ ಧನ್ಯವಾದ ಸಮರ್ಪಣೆ. ಅದು ಜ್ಯೋತಿಯಷ್ಟೇ ಅಲ್ಲ, ಅದ್ಭುತವಾದೊಂದು ಶಕ್ತಿ ಸಹ.

ಏಕಕಾಲಕ್ಕೆ ಅದು ದೇವರಿಗೆ ಸಲ್ಲುವ ಕಾಣಿಕೆಯೂ ಹೌದು, ದೇವರು ಕೊಡುವ ಉಡುಗೊರೆಯೂ ಹೌದು. ಅದಕ್ಕೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿಯಿದೆ, ಸಾಂತ್ವನಗೊಳಿಸುವ ತಾಕತ್ತಿದೆ, ಸಮೃದ್ಧಗೊಳಿಸುವ ಧನಾತ್ಮಕ ಗುಣವೂ ಇದೆ!

ನನ್ನ ಶಿಕ್ಷಕವೃತ್ತಿಯೂ ಒಂದು ದೀಪದಂತೆಯೇ ಎಂದು ನಾನಂದುಕೊಳ್ಳುತ್ತೇನೆ. ಪ್ರತಿಯೊಬ್ಬ ಶಿಕ್ಷಕನೊಳಗೂ ದೀಪ
ಬೆಳಗಿಸಬಲ್ಲ ಒಂದು ವಿಶೇಷ ಶಕ್ತಿಯಿರುತ್ತದೆ. ನಾನು ದೃಢವಾಗಿ ನಂಬಿರುವುದೇನೆಂದರೆ ಶಿಕ್ಷಣವೆನ್ನುವುದು ಅರಿವಿನ
ಪ್ರಸರಣ. ದೀಪವಿಲ್ಲದಿದ್ದರೆ ಹೇಗೆ ಕತ್ತಲೆ ಇರುತ್ತದೆಯೋ ಹಾಗೆಯೇ ಶಿಕ್ಷಣವಿಲ್ಲದಿದ್ದರೆ ಅಜ್ಞಾನದ ಅಂಧಕಾರ ಕವಿದಿರುತ್ತದೆ. ಹಿಂದೂಗಳು ದೀಪಾವಳಿಯಂದು ದೀಪ ಬೆಳಗುವುದು ಬರೀ ಕತ್ತಲೆಯನ್ನೋಡಿಸುವುದಕ್ಕಲ್ಲ.

ಕಾಮ, ಕ್ರೋಧ, ಲೋಭ, ಮೋಹವೇ ಮೊದಲಾದ ನೇತ್ಯಾತ್ಮಕ ಅಂಶಗಳನ್ನೆಲ್ಲ ದೂರವಿರಿಸಲಿಕ್ಕೆ. ನಾನು ಸಂಸ್ಕೃತ ಭಾಷೆಯನ್ನು ಕಲಿತವಳಲ್ಲ ಆದರೂ ನನ್ನ ಅಲ್ಪಮತಿಗೆ ತಿಳಿದಿರುವಂತೆ ಹಿಂದೂಗಳ ಪುರಾತನ ಸಂಸ್ಕೃತ ಭಾಷೆಯಲ್ಲಿ ‘ಗುರು’ ಶಬ್ದದ ಅರ್ಥವೂ ಅದೇ- ಅಜ್ಞಾನವನ್ನು ತೊಲಗಿಸುವವನು. ಅಂದಮೇಲೆ ದೀಪಕ್ಕೂ ಗುರುವಿಗೂ ಎಷ್ಟೊಂದು ಸಾಮ್ಯವಿದೆ ಅಂತಾಯ್ತು!

ಓರ್ವ ಶಿಕ್ಷಕಿಯಾಗಿ ನಾನು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ, ಕಷ್ಟಕರ ವಿಷಯಗಳನ್ನು ಕಲಿಸುತ್ತೇನೆ, ಅದಕ್ಕಾಗಿ ಸಾಕಷ್ಟು ತಯಾರಿಗಳನ್ನೂ ಮಾಡಿಡುತ್ತೇನೆ, ಶ್ರಮ ವಹಿಸುತ್ತೇನೆ. ಆದರೆ ನನಗೆ ತೃಪ್ತಿಯ ಅನುಭವವಾಗುವುದು, ಪಟ್ಟ ಶ್ರಮ ಸಾರ್ಥಕ ವಾಯಿತು ಎನಿಸುವುದು ಪಾಠ ಮಾಡಿ ಮುಗಿಸಿದಾಗ ಅಲ್ಲ, ನನ್ನ ವಿದ್ಯಾರ್ಥಿಗೆ ಅದು ಪೂರ್ತಿ ಅರ್ಥವಾಯಿತು ಎಂದು
ಅವನಿಗೂ ನನಗೂ ಮನವರಿಕೆಯಾದಾಗ ಮಾತ್ರ. ಆ ಅರಿವನ್ನೇ, ಅಂಥದೊಂದು ದಿವ್ಯಾನುಭವವನ್ನೇ ನಾನು ದೀಪಕ್ಕೆ
ಹೋಲಿಸುವುದು!

ಅಂತಹ ಅರಿವಿನಲ್ಲಿ ನನ್ನ ಪಾತ್ರವೆಷ್ಟು? ವಿದ್ಯಾರ್ಥಿಯ ಪಾತ್ರವೆಷ್ಟು? ನಾನು ಹೇಳುವುದಾದರೆ ಶಿಕ್ಷಣವೆಂಬುದು ಬಹುಮಟ್ಟಿಗೆ ವಿದ್ಯಾರ್ಥಿಯ ಆತ್ಮಶೋಧನೆ. ಅಂತರ್ಧ್ಯಾನದ ಮೂಲಕ ಆತ್ಮಸಾಕ್ಷಾತ್ಕಾರ. ನೀವು ಯಾವುದಾದರೂ ತತ್ತ್ವ ಜ್ಞಾನಿಗಳ, ದಾರ್ಶನಿಕರ ಪುಸ್ತಕಗಳನ್ನು ಓದಿದ್ದೀರಾ? ಭಾಷಣಗಳನ್ನು ಕೇಳಿದ್ದೀರಾ? ಅವರು ತಮ್ಮ ಉಪದೇಶಗಳಲ್ಲಿ, ಅನುಭವಾ ಮೃತಗಳಲ್ಲಿ ಹೇಳುವುದಾದರೂ ಏನನ್ನು? ನೀನು ಯಾವುದನ್ನು ಹುಡುಕುತ್ತಿರುವೆಯೋ ಅದು ನಿನ್ನಲ್ಲೇ ಇದೆ. ಗುಣಶ್ರೇಷ್ಠತೆ, ದೈವಿಕ ಪ್ರಜ್ಞೆ, ಸ್ವಾಭಾವಿಕವಾದ ಜ್ಞಾನ – ಎಲ್ಲವೂ ನಿನ್ನೊಳಗೇ ಇದೆ ಎಂದೇ ತಾನೆ? ಲ್ಯಾಟಿನ್ ಮೂಲದ educar ಪದದ ಅರ್ಥ ‘ಒಳಗಿರುವುದನ್ನು ಹೊರೆತೆಗೆ’ ಎಂದು. ಆ ಪದದಿಂದಲೇ ವ್ಯುತ್ಪತ್ತಿಗೊಂಡ education ಮಾಡಬೇಕಾದ್ದೂ ಅದನ್ನೇ!

ಆದರೆ ಇಂದಿನ ಶಿಕ್ಷಣ ಪದ್ಧತಿ ಹೇಗಿದೆಯೆಂದರೆ ವಿಷಯಗಳನ್ನು ವಿದ್ಯಾರ್ಥಿಯ ತಲೆಯೊಳಗೆ ತುರುಕುವ ಪ್ರಯತ್ನ ನಡೆಯು ತ್ತದೆ. ವಿದ್ಯಾರ್ಥಿಯನ್ನು ಪರೀಕ್ಷೆಗೆ ತಯಾರು ಮಾಡಲಾಗುತ್ತದೆಯೇ ಹೊರತು ನಿಜ ಅರ್ಥದಲ್ಲಿ ಶಿಕ್ಷಣ ನೀಡಲಾಗುತ್ತಿಲ್ಲ. ಮಕ್ಕಳ ಬುದ್ಧಿಶಕ್ತಿಯನ್ನು ಹರಿತಗೊಳಿಸುವ, ವಿಶ್ಲೇಷಣಾ ಸಾಮರ್ಥ್ಯವನ್ನು ವಿಸ್ತರಿಸುವ, ವಿವೇಚನೆಯನ್ನು ಚುರುಕು ಗೊಳಿಸುವ ಕ್ರಿಯೆ ನಡೆಯುತ್ತಿಲ್ಲ. ಶಿಕ್ಷಕರಾಗಲೀ ಹೆತ್ತವರಾಗಲೀ ಮಕ್ಕಳಿಂದ ಪರೀಕ್ಷೆಗಳನ್ನು ಪಾಸುಮಾಡಿಸುವುದೊಂದೇ ಪರಮಗುರಿ ಎಂದು ತಿಳಿದುಕೊಂಡಿದ್ದಾರೆ. ಇಲ್ಲಿ ದೀಪ ಬೆಳಗಿಸುವ/ ಬೆಳಗುವ ಪ್ರಕ್ರಿಯೆ ಇಲ್ಲವಾಗಿದೆ. ಇದು ಇಂದಿನ ಶಿಕ್ಷಣ ಕ್ರಮದ ದೊಡ್ಡ ದುರಂತ.

ಪುರಾತನ ಹಿಂದೂಗಳಿಗೆ ಗೊತ್ತಿತ್ತು, ಶಿಕ್ಷಣವೆಂದರೆ ವಿದ್ಯಾರ್ಥಿಯ ತಲೆಯೊಳಗೆ ಮಾಹಿತಿ ತುರುಕುವುದಲ್ಲ. ಬದಲಿಗೆ ಆತ್ಮೋನ್ನತಿಯ ಸೋಪಾನ ಕಟ್ಟುವುದು. ದೀಪ ಹಚ್ಚುವಾಗಿನ ಪ್ರಕ್ರಿಯೆಯೇ ಅಲ್ಲಿಯೂ ಜರುಗಬೇಕು. ಆ ಜ್ಞಾನದೀಪಕ್ಕೆ ಬರೀ ಬೆಳಕಷ್ಟೇ ಇದ್ದರೆ ಸಾಲದು, ಶಕ್ತಿ ಬೇಕು, ಸೌಂದರ್ಯ ಬೇಕು; ಆಕರ್ಷಣೆ ಬೇಕು, ಆತ್ಮಸ್ಥೈರ್ಯ ಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಆತ್ಮದಲ್ಲೂ ಅಗಾಧವಾದ ಪ್ರಚ್ಛನ್ನ ಶಕ್ತಿಯಿರುತ್ತದೆ. ನಿಜವಾದ ಶಿಕ್ಷಣವು ಆ ಪ್ರಚ್ಛನ್ನಶಕ್ತಿ ಪ್ರಕಟಗೊಳ್ಳುವುದಕ್ಕೆ ನೆರವಾಗಬೇಕು, ಆ ಒಂದು ಕೆಲಸಕ್ಕೇ ಮುಡಿಪಾಗಬೇಕು. ಆ ಮೂಲಕ ಅಂತಃಸೌಂದರ್ಯದ ಅನಾವರಣವಾಗಬೇಕು. ಹಿಂದೂಗಳ ದೀಪದ ಸಂಕೇತವನ್ನು ಅರ್ಥ ಮಾಡಿಕೊಂಡರಷ್ಟೇ ಶಿಕ್ಷಣದ ಉದ್ದೇಶ ನಮಗೆ ಸುಲಭದಲ್ಲಿ ಅರ್ಥವಾಗಬಹುದು.

ಇನ್ನೊಂದು ಸ್ವಾರಸ್ಯಕರವಾದ ಅಂಶವನ್ನೂ ನಿಮಗೆ ತಿಳಿಸುತ್ತೇನೆ. School ಎನ್ನುವ ಆಂಗ್ಲ ಪದಕ್ಕೆ ಮೂಲ ಗ್ರೀಕ್ ಅರ್ಥ ಮನೋವಿಕಾಸದ ಅಥವಾ ಮನೋರಂಜನೆಯ ಸ್ಥಳ ಎಂದು! ಆ ಅರ್ಥದಲ್ಲಿ ನಮ್ಮ ಶಾಲೆಗಳು ನಿಜಕ್ಕೂ ಸೃಜನಶೀಲತೆಯ, ಸಂತೋಷದ, ಉತ್ಸಾಹ- ಲವಲವಿಕೆಯ, ಮೋಜು-ನಗುವಿನ ಉಲ್ಲಾಸಮಯ ವಾತಾವರಣದಿಂದ ತುಂಬಿರಬೇಕು. ಇವೆಲ್ಲ ಇದ್ದರೇನೇ ಶಾಲೆ ಪ್ರಕಾಶಮಾನವಾಗಿರುವುದು. ಶಾಲೆಯಲ್ಲಿ ಅಂತಹ ಪ್ರಕಾಶವಿದ್ದರೇನೇ ನಿಜವಾದ ಶಿಕ್ಷಣ ಜರುಗುವುದು. ಮತ್ತೆ ಆ ಪ್ರಕಾಶ ಕೇವಲ ಬಲ್ಬ್ ಟ್ಯೂಬ್‌ಲೈಟ್‌ಗಳಿಂದ ಬರುವುದಲ್ಲ, ವಿದ್ಯಾರ್ಥಿಗಳ ಆಪೋಜ್ಯೋತಿಯಿಂದ ಬರುವಂಥದ್ದು, ಬರಬೇಕಾದ್ದು!

ದೀಪಾವಳಿ ಹಬ್ಬದಲ್ಲಿ ದೀಪಗಳನ್ನು ಹಚ್ಚಿದಂತೆಯೇ, ಜ್ಞಾನದೀಪವನ್ನು ಬೆಳಗುವುದು ಪ್ರತಿಯೊಂದು ಶಿಕ್ಷಣಕ್ರಮದ ಗುರಿ ಯಾಗಲಿ. ಶಿಕ್ಷಣವೆಂದರೆ ವಿದ್ಯಾರ್ಥಿಯ ಅಂತಃಸತ್ವವನ್ನು ಗುರುತಿಸಿ ಒಳ-ಹೊರ ಕತ್ತಲೆಯನ್ನು ಓಡಿಸುವಂತಾಗಲಿ. ವಿಶ್ವದಲ್ಲೆಲ್ಲ ಸುಶಿಕ್ಷಿತ ಸಮುದಾಯ ಬೆಳಗಲಿ, ಬೆಳೆಯಲಿ. ದೀಪಾವಳಿಯ ಮಹೋನ್ನತ ಕಲ್ಪನೆಯನ್ನು ಜಗತ್ತಿಗೆ ಕೊಟ್ಟ ನನ್ನ ಹಿಂದೂ ಬಾಂಧವರಿಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು.’
* * *

ಸಾಮಾನ್ಯ ಶಿಕ್ಷಕಿಯೊಬ್ಬಳ ಆತ್ಮನಿವೇದನೆಯ ಈ ಲೇಖನ ಮತ್ತೆಮತ್ತೆ ಓದಬೇಕಾದ್ದು. ಅದಕ್ಕೋಸ್ಕರವೇ ಇಂದಿನ
ಅಂಕಣದಲ್ಲಿ ಸಾಂದರ್ಭಿಕವಾಗಿ ಇದನ್ನು ಪ್ರಸ್ತುತಪಡಿಸಿದ್ದೇನೆ. ದೀಪಾವಳಿಯೆಂದರೆ ತೈಲಾಭ್ಯಂಗ, ಹೊಸಬಟ್ಟೆ, ಸಿಹಿತಿಂಡಿ,
ಸುಡುಮದ್ದು, ಗೂಡುದೀಪ (ಆಕಾಶಬುಟ್ಟಿ), ವಿಶೇಷಾಂಕಗಳ ಓದು, ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದಿಷ್ಟು
ಪ್ರದರ್ಶನ… ಎಂದು ಸಂಭ್ರಮಿಸುವ ನಮಗೆ, ದೀಪಾವಳಿಯ ಪಾರಮಾರ್ಥಿಕ ಮಹತ್ತ್ವವನ್ನೂ ಅರಿತಿರುವ ಮತ್ತು ಅದನ್ನು
ಗೌರವದಿಂದ ಕಾಣುವ ಈ ವಿದೇಶೀ ಮಹಿಳೆಯ ಬಗ್ಗೆ ಹೆಮ್ಮೆಯೆನಿಸಬೇಕು.

ಈಕೆಯಂತಹ ವಿಶ್ವಮಾನವರ ಸಂತತಿ ಈ ವಿಶ್ವದಲ್ಲಿ ಪಸರಿಸಲಿ ಎಂದು ನಾವೆಲ್ಲ ಹಾರೈಸಬೇಕು. ಇಲ್ಲಿ ನನ್ನದೊಂದು ವೈಯಕ್ತಿಕ ಅನುಭವವನ್ನೂ ಹಂಚಿಕೊಳ್ಳುತ್ತೇನೆ. ಇದು ಅನುಭವ ಎನ್ನುವುದಕ್ಕಿಂತಲೂ ನನ್ನದೊಂದು ಗಮನಿಕೆ ಎಂದರೆ ಹೆಚ್ಚು ಸರಿ. ಹತ್ತಾರು ವರ್ಷಗಳ ಹಿಂದೆ, ಅಮೆರಿಕಕ್ಕೆ ಬಂದ ಹೊಸದರಲ್ಲಿ ಇಲ್ಲಿ ನಾನಿದ್ದದ್ದು ಮೇರಿಲ್ಯಾಂಡ್ ಸಂಸ್ಥಾನದಲ್ಲಿ. ಈಗಿರುವ ವರ್ಜೀನಿಯಾದಂತೆಯೇ ಅದೂ ರಾಜಧಾನಿ ವಾಷಿಂಗ್ಟನ್ ಡಿಸಿ.ಗೆ ತಾಗಿಕೊಂಡಿರುವ ರಾಜ್ಯ.

ಅಲ್ಲಿ ನಮ್ಮ ಮನೆಯಿದ್ದದ್ದು ಮಾಂಟ್ಗೊಮೆರಿ ಕೌಂಟಿಯಲ್ಲಿ. ಕೌಂಟಿ ಅಂದರೆ ಜಿಲ್ಲೆ ಇದ್ದ ಹಾಗೆ ಅಂತಿಟ್ಕೊಳ್ಳಿ. ಸಾರ್ವಜನಿಕ ಶಿಕ್ಷಣ ಇಲಾಖೆ- ಅಂದರೆ ಪಬ್ಲಿಕ್ ಸ್ಕೂಲ್‌ಗಳೆಲ್ಲ ಸಾಮಾನ್ಯವಾಗಿ ಕೌಂಟಿಯ ಆಡಳಿತದಲ್ಲಿ ಬರುತ್ತವೆ. ನಮ್ಮ ಮಗನನ್ನೂ ಕಿಂಡರ್‌ಗಾರ್ಟನ್‌ಗೆ ನಾವು ಸೇರಿಸಿದ್ದು ಮಾಂಟ್ಗೊಮೆರಿ ಕೌಂಟಿಯ ಪಬ್ಲಿಕ್ ಸ್ಕೂಲ್ ವ್ಯವಸ್ಥೆಯಲ್ಲೇ. ಅವರ ಶಾಲೆಗಳಲ್ಲಿ, ಕಾಗದಪತ್ರಗಳಲ್ಲಿ, ಸರ್ಟಿಫಿಕೇಟ್ ಗಳಲ್ಲಿ ಮಾಂಟ್ಗೊಮೆರಿ ಕೌಂಟಿ ಪಬ್ಲಿಕ್ ಸ್ಕೂಲ್ಸ್ ಎಂದು ಬರೆದಿರುತ್ತಿದ್ದ ಲೋಗೊ (ಲಾಂಛನ)ವನ್ನು ನಾನು ಗಮನಿಸಿದ್ದೆ.

ಮೊದಲ ಸಲ ಅದನ್ನು ನೋಡಿದಾಗ ಅದು ನಮ್ಮ ಕನ್ನಡ ವರ್ಣಮಾಲೆಯ ಎರಡನೆಯ ಸ್ವರಾಕ್ಷರ ‘ಆ’ ಬರೆದಂತೆ
ಇದೆಯಲ್ಲ ಎಂದು ನನಗನಿಸಿತ್ತು! ಅಂತೆಯೇ ಅದೊಂದು ಹಣತೆಯ ರೂಪವಾಗಿಯೂ ನನಗೆ ಕಂಡಿತ್ತು. ಒಂದು
ತುದಿಯಲ್ಲಿ ದೀಪದ ಜ್ವಾಲೆ, ಇನ್ನೊಂದು ತುದಿಯಲ್ಲಿ ಹಿಡಿಕೆ, ನಡುವೆ ಎಣ್ಣೆ ತುಂಬಲಿಕ್ಕೆ ಆಳವಾದ ಜಾಗ. ಪರವಾಇಲ್ವೇ
ಅಮೆರಿಕದಲ್ಲಿಯೂ ಶಾಲಾಶಿಕ್ಷಣವನ್ನು, ಜ್ಞಾನಪ್ರಸರಣವನ್ನು ದೀಪಪ್ರಜ್ವಲನಕ್ಕೆ ಸಮಾನವಾಗಿ ತೋರಿಸಿದ್ದಾರೆ, ಅದೂ
ಕ್ಯಾಂಡಲ್‌ನಂತೆ ತೋರುತ್ತಿರುವುದಲ್ಲ, ಪಕ್ಕಾ ನಮ್ಮ ಭಾರತೀಯ ಮಣ್ಣಿನ ಸೊಡರಿನಂತೆ ಸುಂದರವಾಗಿ ಕಂಗೊಳಿಸಿರು ವುದು ಎಂದು ನಾನು ಹೆಮ್ಮೆಪಟ್ಟಿದ್ದೆ. ಈಗಲೂ ಆ ಲಾಂಛನ ನನಗೆ ಅಚ್ಚುಮೆಚ್ಚು.

ಮೇಲೆ ಪ್ರಸ್ತಾವಿಸಿದ ಅನಾಮಧೇಯ ಶಿಕ್ಷಕಿ ಯಾರು ಎಲ್ಲಿಯವಳು ಎಂದು ನಾನೇನೂ ಪತ್ತೇದಾರಿಕೆ ಮಾಡಿಲ್ಲ. ಆದರೆ ಒಂದುವೇಳೆ ಆಕೆ ಮಾಂಟ್ಗೊಮೆರಿ ಕೌಂಟಿ ಪಬ್ಲಿಕ್ ಸ್ಕೂಲ್ ಸಿಸ್ಟಮ್‌ನವಳೇ ಆಗಿದ್ದರೆ ಖಂಡಿತ ಆ ಲೇಖನವನ್ನು ಬರೆಯುವಾಗ ಅವಳಿಗೂ ತನ್ನ ಶಿಕ್ಷಣಸಂಸ್ಥೆಯ ಲಾಂಛನ ಕಣ್ಮುಂದೆ ಬಂದಿರುತ್ತದೆಯೆಂದು ನನ್ನ ಊಹೆ. ಲೇಖನದ ಅಂಶಗಳನ್ನು
ಇನ್ನೊಂಚೂರು ಮೆಲುಕುಹಾಕುವುದಾದರೆ- ನಮ್ಮ ಭಾರತೀಯ ಸನಾತನ ಸಂಸ್ಕೃತಿಯ ಉನ್ನತ ಚಿಂತನೆಗಳಲ್ಲೊಂದಾದ
‘ಅಸತೋ ಮಾ ಸದ್ಗಮಯ, ತಮಸೋ ಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂ ಗಮಯ’ ಎಂಬ ಆಶಯವೂ ಅದನ್ನೇ ಪ್ರತಿಪಾದಿಸಿರುವುದು.

ಮನದೊಳಗೆ ತುಂಬಿರುವ ಅಸತ್ಯದಿಂದ ಸತ್ಯದೆಡೆಗೆ, ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನೆಡೆಗೆ, ಮೃತ್ಯುವಿ ನಿಂದ ಅಮೃತತ್ವದೆಡೆಗೆ ದೀಪವು ನಮ್ಮನ್ನು ಒಯ್ಯುತ್ತದೆ ಎಂಬ ಆಶಯ ಅದು. ಆ ದೀಪ ಗುರುಸಮಾನವಾಗುತ್ತದೆ, ಅಥವಾ, ಗುರುವನ್ನೇ ನಾವು ದೀಪಕ್ಕೆ ಸಮೀಕರಿಸುತ್ತೇವೆ. ‘ಗುಕಾರೋಧಿನ್ಧಕಾರತ್ವಾತ್ ರುಕಾರೋ ತನ್ನಿವಾರಕಃ’ – ಗು ಅಂದರೆ ಅಂಧಕಾರ, ರು ಅದರ ನಿವಾರಕ ಅಂತೆಲ್ಲ ವ್ಯಾಖ್ಯಾನಗಳೂ ಇವೆ.

‘ಯಃ ಪಠತಿ ಲಿಖತಿ ಪಷ್ಯತಿ ಪರಿಪೃಚ್ಛತಿ ಪಂಡಿತಾನು ಪಾಶ್ರಯತಿ| ತಸ್ಯ ದಿವಾಕರಕಿರಣೈಃ ನಲಿನೀದಲಮಿವ ವಿಕಾಸ್ಯತೇ ಬುದ್ಧಿಃ’ ಎಂಬೊಂದು ಸಂಸ್ಕೃತ ಸುಭಾಷಿತವನ್ನೂ ನಾವಿಲ್ಲಿ ನೆನಪಿಸಿಕೊಳ್ಳಬಹುದು. ಯಾವನು ಓದಿ, ಬರೆದು, ನೋಡಿ, ಬಗೆಬಗೆಯಾಗಿ ಪ್ರಶ್ನೆಮಾಡಿ, ಪಂಡಿತರನ್ನು ಆಶ್ರಯಿಸುವನೋ ಅವನ ಬುದ್ಧಿಯು ಸೂರ್ಯಕಿರಣಗಳಿಂದ ತಾವರೆಯ ದಳ ಅರಳುವಂತೆ ವಿಕಾಸಗೊಳ್ಳುವುದು ಅಂತರ್ಥ.

ಅಂದರೆ ಎಲ್ಲವನ್ನೂ ‘ರೆಡಿ ಟು ಈಟ್’ ರೀತಿಯಲ್ಲಿ ಗುರುವೇ ಕೈತುತ್ತು ಕೊಡುತ್ತಾನೆಂದಲ್ಲ. ಸ್ವಂತದ ಓದು ಬೇಕು, ಓದಿದ್ದನ್ನು
ಬರೆದು ಕಲಿತುಕೊಳ್ಳಬೇಕು, ಬರೆದಿದ್ದನ್ನು ಓದಿ ಮನನ ಮಾಡಿಕೊಳ್ಳಬೇಕು. ಮನದಲ್ಲಿ ಪ್ರಶ್ನೆಗಳು ಮೂಡಬೇಕು. ಪ್ರಶ್ನೆಗಳಿಗೆ ಉತ್ತರವನ್ನು ಅರಸಬೇಕು. ಉತ್ತರ ಸಿಗುತ್ತ ಹೋದಂತೆಲ್ಲ ಮತ್ತಷ್ಟು ಜ್ಞಾನ ಪಿಪಾಸುವಾಗಬೇಕು. ಮಾರ್ಗದರ್ಶನಕ್ಕಾಗಿ ಗುರು ಅಂತ ಒಬ್ಬನಿರಬೇಕು ನಿಜ ಆದರೆ ಎಲ್ಲವನ್ನೂ ಆತನೇ ಮಾಡಿಕೊಡುತ್ತಾನೆ ಎಂದುಕೊಂಡರೆ ಅದು ಸೋಮಾರಿತನದ ಲಕ್ಷಣ.

‘ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ… ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ…ಕೈಹಿಡಿದು ನಡೆಸೆನ್ನನು’ ಎನ್ನುವ ಬೇಡಿಕೆ ಇಟ್ಟರೆ ತಪ್ಪಿಲ್ಲ, ಆದರೆ ಕೈಹಿಡಿದು ನಡೆಸುವ ಬೆಳಕು ಬಂದಾಗ ಎದ್ದು ನಿಂತು ನಡೆಯುವ ಶಕ್ತಿ ಒಳಗಿಂದಲೇ ಬರಬೇಕಾದ್ದಲ್ಲವೇ? ಹಾಗೆ ಆದರೆ ಮಾತ್ರ ‘ಅರಿವೇ ಗುರು’ ಆಗುವುದು.

‘ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ…’ ಎನ್ನುತ್ತ ಮುಂದೆ ‘ಕೆಲವಂ ಸುಜ್ಞಾನದಿಂ ನೋಡುತಂ…’ ಎಂದಿದ್ದಾನಲ್ಲವೇ ಸೋಮೇಶ್ವರ ಶತಕದ ಕವಿ? ಅಂತರ್ವೀಕ್ಷಣೆಯನ್ನು ಸಾಧ್ಯವಾಗಿಸುವ ಆ ಸುಜ್ಞಾನ ಯಾವುದು? ಅದೇ,
ಆಪೋಜ್ಯೋತಿ!

ಗುರುವೆನಿಸಿದವನು ಮಾಡಬೇಕಾದ್ದು ಆ ಸುಜ್ಞಾನ ಜ್ಯೋತಿಯನ್ನು, ಒಳಗಿನ ಬೆಳಕನ್ನು, ಬೆಳಗಿಸುವುದು. ಆಮೇಲಿನದನ್ನು ಆ ಜ್ಯೋತಿಯೇ ನೋಡಿಕೊಳ್ಳುತ್ತದೆ. ‘ಶಿಕ್ಷಣವೆಂದರೆ ವಿದ್ಯಾರ್ಥಿಯ ತಲೆಯೊಳಗೆ ಮಾಹಿತಿ ತುರುಕುವುದಲ್ಲ. ಬದಲಿಗೆ ಆತ್ಮೋನ್ನತಿಯ ಸೋಪಾನ ಕಟ್ಟುವುದು. ಅಂತಃಸೌಂದರ್ಯವನ್ನು ಅನಾವರಣಗೊಳಿಸುವುದು’ ಎಂದು ಆ ಅನಾಮಧೇಯ ಶಿಕ್ಷಕಿ ವ್ಯಕ್ತಪಡಿಸಿದ ಅಭಿಪ್ರಾಯ ಬಹಳವೇ ತೂಕವುಳ್ಳದ್ದು ಅಂತನಿಸುವುದು ಇದಕ್ಕೇನೇ.

ಅಂಥದೊಂದು ಚಿಂತನೆಯು ನಮ್ಮೆಲ್ಲರಲ್ಲೂ ಒಂದು ಹೊಸ ಸುಜ್ಞಾನ ಜ್ಯೋತಿಯನ್ನು ಬೆಳಗಿಸಲಿ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

error: Content is protected !!