Thursday, 12th December 2024

ಜ್ಯೋತಿ ನೀನಾಗಿ ಬಾ, ಬಾಳ ಇರುಳಿಗೆ…

ಯಶೋ ಬೆಳಗು

yashomathy@gmail.com

ಅವತ್ತು ಮನಸ್ಸಿಗೆ ಒಂದು ರೀತಿಯ ಸಮಾಧಾನ! ಸಾಕಷ್ಟು ಹೊತ್ತು ಹಿಮನೊಂದಿಗೆ, ನನ್ನೊಂದಿಗೆ ಲವಲವಿಕೆಯಿಂದ ಮಾತನಾಡಿದ್ದರು. ಮಾತಿನ ನಡುವೆ ‘ನೀವು ಬರ್ತೀರ ಅಂತ ಹೊಸ ಟಿ-ಶರ್ಟ್ ಹಾಕ್ಕೊಂಡು, ತಲೆ ಬಾಚಿಕೊಂಡು, ಬಾಗಿಲ ಕಡೆಗೇ ನೋಡುತ್ತ, ಕಾಯುತ್ತ ಕುಳಿತಿದ್ದರು ಅಪ್ಪ…’ ಅಂದಳು ಭಾವನ.

‘ಅವರು ಗೆಲುವಿನಿಂದ ಖುಷಿಖುಷಿಯಾಗಿದ್ದರಷ್ಟೇ ಸಾಕು’ ಎಂದು ಹೇಳಿ ಬೀಳ್ಕೊಡುವ ಮೊದಲು ಅವರೇ ಕೇಳಿ ನನ್ನ ಕೈಯಿಂದ ಮೊಸರನ್ನ ತಿಂದಿ ದ್ದರು. ‘Edition ಕೆಲಸ ಒಂಚೂರು ಬಾಕಿ ಇದೆ. ಮುಗಿಸಿ ಮನೆಗೆ ಬಂದುಬಿಡ್ತೀನಿ’ ಅಂದಾಗ ‘ಆಯ್ತು’ ಎಂದು ಹೇಳುತ್ತ ಬಹಳ ಸಮಾಧಾನದ ಮನಸ್ಸಿನಿಂದ ಹಿಮನೊಂದಿಗೆ ಮನೆಗೆ ಹಿಂದಿರುಗಿದ್ದೆ.

ಮಾರನೆಯ ದಿನ ಅವರ ಬರುವಿಗಾಗಿ ಕಾಯುತ್ತಾ ಕುಳಿತವರು, ಸಮಯ ರಾತ್ರಿ ಹನ್ನೆರಡಾದರೂ ಇನ್ನೂ ಮನೆಗೆ ಬಾರದಿ ದ್ದುದನ್ನು ಕಂಡು ‘ಯಾವ ಸಮಯದಲ್ಲಿ ಮನೆಗೆ ಬರ್ತಿದೀನಿ ಅಂತ ಫೋನು ಬರುತ್ತೋ? ಆಗ ನಿದ್ರೆ ಬಂದು ಬಿಟ್ಟಿದ್ದರೆ….’ ಅಂದುಕೊಂಡು ನಿದ್ರೆಯನ್ನು ಮುಂದೂಡುವುದಕ್ಕಾಗಿ ಟಿವಿಯಲ್ಲಿ ಬರುತ್ತಿದ್ದ ಸಿನಿಮಾ ನೋಡುತ್ತ ಕುಳಿತೆವು. ಅದರ ನಡುವೆ ನನ್ನ ಮೊಬೈಲ್ ಸೈಲೆಂಟ್ ಮೋಡ್‌ಗೆ ಹೋಗಿರುವುದು ನನ್ನ ಗಮನಕ್ಕೇ ಬಂದಿಲ್ಲ. ಡ್ರೈವರ್ ವಾದಿರಾಜ್ ಹಾಗೂ ಚೇತನಾ ಸಾಕಷ್ಟು ಬಾರಿ ಕಾಲ್ ಮಾಡಿದ್ದಾರೆ.

ಕೊನೆಗೆ ಅಮ್ಮನ ಮೊಬೈಲಿಗೆ ಫೋನು ಮಾಡಿದ್ದಾರೆ. ಅಮ್ಮ, ‘ಚೇತನಾ ಫೋನ್ ಮಾಡಿದ್ದಾಳೆ ಮಾತಾಡು’ ಅನ್ನುತ್ತ ಫೋನು
ಕೊಟ್ಟರು. ‘ಅಯ್ಯೋ ಎಷ್ಟು ಕಾಲ್ ಮಾಡಿದ್ದಾರೆ. ನಾನು ನೋಡಿಕೊಂಡೇ ಇಲ್ಲ. ಸಿಟ್ಟಾಗಿರ್ತಾರೇನೋ?’ ಎಂಬ ಆತಂಕ ದಿಂದಲೇ ಫೋನು ತೆಗೆದುಕೊಂಡ ಕೂಡಲೇ, ‘ಯಶೂ ನಾವೀಗ ಅಪ್ಪನ್ನ ಆಸ್ಪತ್ರೆಯಿಂದ ಕರೆದುಕೊಂಡು ಬರುತ್ತಿದ್ದೇವೆ.

He is no more… ನೀನು, ಹಿಮ, ಕರಿಷ್ಮಾ ಹಿಲ್ಸಗೇ ಬಂದುಬಿಡಿ’ ಅಂದಾಗ, ಏನು ಹೇಳಬೇಕೋ ತೋಚದೆ ಟಿವಿ ನೋಡುತ್ತಿದ್ದ ಹಿಮನೆಡೆಗೆ ನೋಡಿದೆ.

‘ಏನಾಯ್ತಮ್ಮಾ?’ ಅಂದ. ‘ಅಪ್ಪ ಹೋಗ್ಬಿಟ್ರಂತೆ ಕಣೋ…’ ಅಂದಕೂಡಲೇ ಅವನು ‘ಇಲ್ಲ ಇಲ್ಲ…’ ಎನ್ನುತ್ತ ಜೋರಾಗಿ ಅಳೋಕೆ ಶುರುಮಾಡಿದ. ಅಮ್ಮ ನಿಂತ ಕುಸಿದು ಹೋದರು. ನಾನು ದಿಕ್ಕೇ ತೋಚದೆ ಸುಮ್ಮನೆ ಕುಳಿತೆ. ‘ಅದನ್ನು ಒಪ್ಪಿ ಕೊಳ್ಳಲು ಮನಸಿನ್ನೂ ಸಿದ್ಧವಿಲ್ಲ. ನಂಗೆ ಮನೆ ಗೊತ್ತಿಲ್ಲ’ ಅಂದಾಗ ಅವಳೇ ಕಾರಿನೊಂದಿಗೆ ಡ್ರೈವರ್ ಲಕ್ಷ್ಮಣನನ್ನು ಕಳಿಸಿದ್ದಳು. ಕಾರು ಕರಿಷ್ಮಾ ಹಿಲ್ಸ್ ಕಡೆಗೆ ಹೊರಟಿತ್ತು. ಆಸ್ಪತ್ರೆಯ ಆಂಬುಲೆನ್ಸ್ ಆಗತಾನೆ ಬಂದು ಮನೆಯ ಆವರಣದಲ್ಲಿ ನಿಂತಿತ್ತು. ಆಫೀಸಿನ ಉಷಾ, ವೀಣಾ ಅಳುತ್ತ ನಿಂತಿದ್ದರು. ಆಂಬುಲೆನ್ಸ್‌ನಲ್ಲಿ ತಣ್ಣಗೆ ಮಲಗಿದ್ದ ರವಿಯ ಮುಖವನ್ನೇ ಒಮ್ಮೆ ನೋಡಿದೆ. ‘ಅವರು ಸುಮ್ಮನೆ ನಿದ್ರೆ ಮಾಡ್ತಿದ್ದಾರೆ ಅಷ್ಟೆ.

ಇನ್ನೊಂದು ಸ್ವಲ್ಪ ಹೊತ್ತಿಗೆ ಎದ್ದುಬಿಡ್ತಾರೆ. ಬಾರೋ ಹಿಮ ಡಿಸ್ಟರ್ಬ್ ಮಾಡೋದು ಬೇಡ. ನಾವು ಇಲ್ಲೇ ಕಾಯ್ತಾ ಕೂರೋಣ. ಎದ್ದ ಕೂಡ್ಲೆ ಮನೆಗೆ ಕರೆದುಕೊಂಡು ಹೋಗೋಣ’ ಅಂದೆ. ಹಿಮ, ‘ಅಪ್ಪಾ, ನಾನು ಹಿಮ ಬಂದಿದೀನಿ ಎದ್ದೇಳಿ ಅಪ್ಪಾ, ಎದ್ದೇಳಿ ಅಪ್ಪಾ’ ಎನ್ನುತ್ತ ಕೆನ್ನೆ ತುಂಬ ಇದ್ದ ದಾಡಿ ಸವರುತ್ತಿದ್ದ. ‘ಅಮ್ಮಾ, ನಾನೂ ಇಲ್ಲೇ ಅಪ್ಪನ ಪಕ್ಕ ಮಲಗಲಾ? ಆಗ ಅವರು ಎದ್ದೇಳ್ತಾರೆ’ ಎಂದು ಅಮಾಯಕವಾಗಿ ಕೇಳುತ್ತಿದ್ದ.

‘ಪುಟ್ಟೂ, ಈಗ ಬಂದ್ಯಾ ಮಗೂ…?’ ಎನ್ನುತ್ತ ಇನ್ನೇನು ಎದ್ದೇಬಿಡ್ತಾರೇನೋ? ಅನ್ನುವಂತೆ ಮುಖದಲ್ಲಿ ಅದೇ ದಿವ್ಯ ಮಂದಹಾಸ. ಅವರನ್ನ ನೋಡ್ತಲೇ ಇರ್ಬೇಕು ಅನ್ನಿಸ್ತಿದೆ. ಆದ್ರೆ ವಿಷಯ ಗೊತ್ತಾಗ್ತಿದ್ದಂತೆ ಒಬ್ಬೊಬ್ಬರೇ ಬರೋಕೆ ಆರಂಭ ವಾದರು. ಆಂಬುಲೆನ್ಸ್‌ನಿಂದ ಮನೆಯ ಒಳಗೆ ತೆಗೆದುಕೊಂಡು ಹೋದರು. ಮನೆಯೊಳಗೆ ಹೇಗೆ ಹೋಗುವುದು ಎಂದು
ನಾನು, ಹಿಮ ಹೊರಗೆ ಮೆಟ್ಟಿಲ ಮೇಲೇ ಕುಳಿತಿದ್ದೆವು.

ಅಷ್ಟರಲ್ಲಿ ‘ಇಲ್ಯಾಕೆ ಕುಳಿತಿದ್ದೀರಾ? ಒಳಗೆ ಬನ್ನಿ’ ಎಂದ ಕರ್ಣ. ಅಣ್ಣಾ ಎಂದು ಅಳುತ್ತ ಪಳನಿಯಮ್ಮ ಬಂದರು. ‘ಲೇನ್ನಾ, ನೇನುನ್ನಾನು ಲೇನ್ನಾ, ನುವ್ವು ಏಮ್ಚಪ್ತಾವೋ ಚೇಸೇಕಿ ನೇನುನ್ನಾನನ್ನಾ ಲೇನ್ನಾ….’ ಅನ್ನುತ್ತ ಸೀನ ದೊಡ್ಡ ದನಿಯಲ್ಲಿ ಅವರನ್ನೇಳಿಸುವ ಪ್ರಯತ್ನ ಮಾಡುತ್ತಲೇ ಇದ್ದ.

‘ನಮಗಿನ್ಯಾರು ದಿಕ್ಕಣ್ಣಾ…’ ಎನ್ನುತ್ತಾ ಪ್ರೇಮ ರೋದಿಸುತ್ತಿದ್ದಳು. ಬಂದವರು ಹೂವಿನ ಹಾರಗಳನ್ನು ಹಾಕುತ್ತ ಪ್ರದಕ್ಷಿಣೆ ಬರುತ್ತ, ಕೈಮುಗಿದು ಹೋಗುತ್ತಿದ್ದರು. ಹಾಗೇ ಬಿಟ್ಟರೆ ದೇಹ decompose ಆಗಲಾರಂಭಿಸುತ್ತದೆ ಎನ್ನುತ್ತ ಶವಪೆಟ್ಟಿಗೆ ಯೊಳಗೆ ಮಲಗಿಸಿದರು. ಅದರ ಮೇಲೆ ಬರೆದಿದ್ದ ಹೆಸರು ಯಶಸ್ವಿನಿ. ‘ಅದರ ಮೇಲೂ ನಿಮ್ಮ ಹೆಸರೇ ಇದೆ ನೋಡಿ’ ಅಂದಳು
ಭಾವನಾ. ‘ನೀನು ಅವರ ತಲೆಯ ಹತ್ತಿರವೇ ಕೂತಿರು.

ಎಲ್ಲೂ ಎದ್ದು ಹೋಗಬೇಡ. ಅವರನ್ನ ಒಬ್ಬರನ್ನೇ ಬಿಟ್ಟಿರಬಾರದು’ ಅಂದರು ಯಾರೋ. ಅವರ ಮಾತಿನಂತೆ ಅವರ ಪಕ್ಕದ ಕುಳಿತೆ. ಬೆಳಗಾಗುವ ಹೊತ್ತಿಗೆ ಕ್ಯಾಮರಾಗಳು, ಮಾಧ್ಯಮದವರು, ಅಂತಿಮ ಸಂಸ್ಕಾರಕರ್ತರು, ಸಂಬಂಧಿಕರು, ಸೆಲೆಬ್ರಿಟಿ ಗಳು, ಗೆಳೆಯರು, ಪರಿಚಯ ದವರು, ಅಭಿಮಾನಿಗಳು, ಸಿಬ್ಬಂದಿಗಳು ಎಲ್ಲರೂ ಧಾವಿಸಿ ಬಂದರು. ಬಂದವರಲ್ಲಿ ಒಂದಿಬ್ಬರು ‘ಮೇಡಮ್ ನೀವೂ ಕ್ಯಾಮರಾಗೆ ಒಂದೆರಡು ಮಾತಾಡಿ’ ಅಂದರು. ಮತ್ಯಾರೋ ‘ದಯವಿಟ್ಟು ಅವಳಿಗೆ ತೊಂದರೆ ಮಾಡಬೇಡಿ’ ಅಂದರು.

ಇನ್ನೆಷ್ಟು ಹೊತ್ತು ಇದೆ? ಅನಿಸುವಷ್ಟರ, ೧೧ ಗಂಟೆಯ ಹೊತ್ತಿಗೆ ಪ್ರಾರ್ಥನಾ ಶಾಲೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ, ಅಷ್ಟರೊಳಗೆ ಇಲ್ಲಿನ ಕ್ರಿಯೆಗಳನ್ನೆಲ್ಲ ಮುಗಿಸಬೇಕು ಎನ್ನುವ ಅವಸರ ಆರಂಭವಾಯಿತು. ಡ್ರೈವರ್ ರಾಜು ಕುಂಡಕ್ಕೆ ಬೆಂಕಿಯ ಕೆಂಡಗಳನ್ನು ಮಾಡಲಾರಂಭಿಸಿದರು. ‘ಕರ್ಣನ ಜತೆಗೆ ಹಿಮವಂತನಿಗೂ ಶಿರೋಮುಂಡನ
ಮಾಡಿಸುತ್ತೀರಾ?’ ಎಂದು ಮತ್ಯಾರೋ ಕೇಳಿದರು.

‘ಅವನೂ ಅವರಪ್ಪನ ಮುದ್ದಿನ ಮಗನೇ ಅಲ್ಲವೇ? ತಾಯಿ ಬೇರೆ ಬೇರೆ ಆದರೇನು? ತಂದೆ ಒಬ್ಬನೇ ಅಲ್ಲವೇ? ಮಾಡಿಸಿ’ ಅಂದರು. ಅಂತಿಮ ಸಂಸ್ಕಾರದ ಶಾಸಗಳನ್ನು ವೈದಿಕ ಧರ್ಮದ ಪ್ರಕಾರ ಮಾಡಲಾರಂಭಿಸಿದರು. ಧರ್ಮ, ಗೋತ್ರಗಳನ್ನು ಕೇಳುತ್ತ ತರ್ಪಣ ಬಿಡಲಾಯಿತು. ಅಲ್ಲಿಂದ ಪ್ರಾರ್ಥನಾದ ಅಂಗಳಕ್ಕೆ, ಅಲ್ಲಿಂದ ಬನಶಂಕರಿಯ ರುದ್ರಭೂಮಿಗೆ.

‘ಹೆಣ್ಣುಮಕ್ಕಳು ರುದ್ರಭೂಮಿಗೆ ಹೋಗಬಾರದು. ನೀನಿ ಉಳಿದುಬಿಡು’ ಅಂದರು. ‘ಇಲ್ಲ. ಅವರೊಬ್ಬರನ್ನೇ ಹೇಗೆ ಕಳಿಸೋದು? ನಾನೂ ಹೋಗ್ತೀನಿ’ ಅಂದೆ. ಹೋಗುತ್ತಿದ್ದಂತೆಯೇ ಆಪೋಷನ ತೆಗೆದುಕೊಳ್ಳಲು ಸಿದ್ಧವಾಗಿ ನಿಂತ ಚಿತೆಯನ್ನು ಕಂಡ ಕೂಡಲೇ ಕಣ್ಣು ಕತ್ತಲು ಬರುವಂತಾಯ್ತು. ಅಗ್ನಿಜ್ವಾಲೆಗಳ ನಡುವೆ ಬೆಂದುಹೋಗುವ ಅವರನ್ನು ನನ್ನ ಕಣ್ಣಿಂದ ನೋಡಲಾರೆ ಅನ್ನುತ್ತ ಮಾರುದೂರದ ಕುಳಿತೆ. ಹಿಮನಿಗಿನ್ನೂ ಆಡುವ ವಯಸ್ಸು.

ಸಾವೆಂದರೇನು? ಎನ್ನುವ ಕಲ್ಪನೆಯೇ ಇಲ್ಲದ ಮುಗ್ಧತೆ. ‘ಯಾರೂ ಅಳ್ಬೇಡಿ. ಅಪ್ಪನ್ನ ಖುಷಿಯಾಗಿ ಕಳಿಸಿಕೊಡೋಣ’ ಅನ್ನುತ್ತ ಬಹಳ ಧೈರ್ಯವಾಗೇ ಅಣ್ಣನೊಂದಿಗೆ ನಿಂತು ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಿಬಂದು ಪಕ್ಕದಲ್ಲಿ ಕುಳಿತ. ನಾನು ಆಸರೆಗೆ ಅವನ ಕೈ ಹಿಡಿದು ಕುಳಿತೆ. ಕಣ್ತುಂಬಿಕೊಂಡು ಬಂದ ಕರ್ಣನೆಡೆಗೆ ನೋಡಿದೆ. ಮಾತುಗಳಾಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.

ಅಷ್ಟರ ಧೋ ಎಂದು ಅಬ್ಬರಿಸಿ ಬಂದ ಮಳೆ. ‘ಅವರು ನೇರ ಸ್ವರ್ಗಕ್ಕೇ ಹೋಗಿzರೆ ಬಿಡು. ಅದಕ್ಕೇ ನೋಡು ಎಷ್ಟು ಜೋರು ಮಳೆ’ ಅಂದರು. ಸೇರಿದ್ದ ಜನಜಾತ್ರೆಯೆಲ್ಲ ಚೆದುರಲು ಆರಂಭವಾಯ್ತು. ‘ಈಗವರು ಜ್ಯೋತಿಯ ಬೆಳಕಾಗಿ ಮನೆಯಲ್ಲಿರು ತ್ತಾರೆ. ಮನೆಗೆ ಹೋಗುವ ಮೊದಲು ಆ ಜ್ಯೋತಿಯನ್ನು ನೋಡಿ ಹೋಗು’ ಅಂದರು. ಅವರ ದೇಹವಿದ್ದ ಜಾಗದಲ್ಲಿ ಈಗ -ಮಿನೊಳಗಿನ ಚಿತ್ರವಾಗಿ ನಗುತ್ತಿದ್ದರು. ಎದುರಿಗೇ ಹಣತೆಯಲ್ಲಿ ಬೆಳಗುತ್ತಿದ್ದ ದಿವ್ಯಜ್ಯೋತಿ. ಎರಡು ನಿಮಿಷ ಕೈಜೋಡಿಸಿ ಅದನ್ನೇ ಕಣ್ತುಂಬಿಕೊಂಡೆ.

ಬೆಳಕು ನನ್ನೊಳಗಿಳಿದಂತಾಯ್ತು. ಹಿಮನಿಗೂ ನಮಸ್ಕರಿಸಲು ಹೇಳಿದೆ. ‘ಅಪ್ಪ ಇನ್ನು ಮುಂದೆ ಈ ಬೆಳಕಿನಲ್ಲಿರುತ್ತಾರೆ. Wherever you see the lights, feel the presence of appa. ಅಪ್ಪ ಅಂದ್ರೆ ದುಃಖವಲ್ಲ, ನೋವಲ್ಲ, ಕತ್ತಲೆಯಲ್ಲ. ಸದಾ ನಗುವಿನ ಚಿಲುಮೆ, ಭರವಸೆಯ ಬೆಳಕು, ಆಶಾಕಿರಣ, ನಂದಾದೀಪ’ ಅಂದೆ. ‘ಆಯ್ತಮ್ಮಾ’ ಅಂದ. ಮನೆಗೆ ಕಾಲಿಡು ತ್ತಿದ್ದಂತೆಯೇ ಬಿಕೋ ಎನ್ನುತ್ತಿದ್ದ ಮನೆ ದೇವರಿಲ್ಲದ ಗರ್ಭಗುಡಿಯಂತೆನಿಸಿತು.

ಎಷ್ಟು ಕಣ್ಮುಚ್ಚಿದರೂ ನಿದ್ರೆ ಹತ್ತಿರವೇ ಸುಳಿಯುತ್ತಿಲ್ಲ. ರಾತ್ರಿಯಿಡೀ ಮನೆಪೂರ್ತಿ ನಡೆದಾಡಿದೆ. ಅವರ ದನಿಗಾಗಿ ಹಂಬಲಿ ಸಿದೆ. ಅವರ ‘ಮನಸೇ’, ‘ಕನಸೇ’, ‘ಒಲವೇ’ ಸಿಡಿಗಳನ್ನು ಹಾಕಿ ಮನೆತುಂಬ ಅವರ ದನಿ ಮಾರ್ದನಿಸುವಂತೆ ಮಾಡಿದೆ. ಬಿಸಿಬಿಸಿಯಾದ ಕಾಫಿ ಮಾಡಿ ಫ್ಲಾಸ್ಕಿಗೆ ಹಾಕಿಟ್ಟೆ. ತುಂಬಿ ಹೋಗಿದ್ದ Ash pot ಸ್ವಚ್ಛ ಮಾಡಿಟ್ಟೆ. ಮನೆಯ ತಿರುವಿಗೆ ಬರುತ್ತಿದ್ದಂತೆಯೇ ಇನ್ನೇನು ದೊಡ್ಡ ಹಾರ್ನ್ ಮಾಡುತ್ತ ಬಂದುಬಿಡುತ್ತಾರೆ ಎಂದುಕೊಂಡು ಕಾಯುತ್ತ ಕುಳಿತೆ. ದಿನ ಕಳೆದರೆ ದೀಪಾವಳಿ ಹಬ್ಬ.

ಎಲ್ಲರ ಮನೆಯ ಮುಂದೆಯೂ ದೀಪಗಳು ಝಗಮಗಿಸುತ್ತಿದೆ. ನಮಗೆ ಸೂತಕ! ದೀಪ ಹಚ್ಚುವಂತಿಲ್ಲ. ‘ಅಮ್ಮಾ ಪಟಾಕಿ’ ಅಂದ ಮಗ. ‘ಈಗ ಪಟಾಕಿ ಹೊಡೆಯುವಂತಿಲ್ಲ ಪುಟ್ಟಾ, ಬಾ ಎದರೂ ಸುತ್ತಾಡಿಕೊಂಡು ಬರೋಣ’ ಎನ್ನುತ್ತ ನಡೆಯಲು ಹೋದರೆ ತಲೆ ಽಮ್ಮನೆ ಸುತ್ತುತ್ತಿದೆ. ಕಣ್ಣೆಲ್ಲ ಮಂಜುಮಂಜು. ಆದರೂ ತೋರಗೊಡದೆ, ‘ನೋಡೋ ಅಪ್ಪ ಎಲ್ಲೂ ಹೋಗಿಲ್ಲ He is with us only’ ಎನ್ನುತ್ತ ದೇವಲೋಕವೇ ಧರೆಗಿಳಿದು ಬಂದಿದೆಯೇನೋ ಎಂಬಂತೆ ಎಡೆಯೂ ಹೊಳೆಯುತ್ತಿದ್ದ ದೀಪಗಳೆಡೆಗೆ ತೋರಿದೆ.

‘ಹೌದಮ್ಮಾ’ ಅನ್ನುತ್ತ ಮಗನೂ ಖುಷಿಯಾದ. ಅದೇ ಖುಷಿಯಲ್ಲಿ ಒಂದು ಸೆಲ್ಪೀ ತೆಗೆದೆ. ಅದನ್ನೇ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡೆ. ನೋಡಿದ ಜನ ಮಾತಾಡಿದರು. ‘ಅಷ್ಟಲ್ಲದೇ ಅಂತಾರೇನ್ರೀ? ಕಟ್ಕೊಂಡವಳು ಕೊನೇ ತನಕ…. ಅಂತ.
ಇನ್ನೂ ಎರಡು ದಿನ ಆಗಿಲ್ಲ. ಆಗಲೇ ಹೆಂಗೆ ಮಜಾ ಮಾಡ್ತಿದ್ದಾರೆ ನೋಡಿ?’ ಅಂತ. ಎಲುಬಿಲ್ಲದ ನಾಲಿಗೆ. ಎತ್ತ ಬೇಕಾದರೂ ಹೊರಳುತ್ತದೆ. ಜನರನ್ನು ಮೆಚ್ಚಿಸಲು ಹೊರಟರೆ ಅಂದೇ ನಮ್ಮ ವಿನಾಶ ಎಂದು ಮನದ ಅಂದುಕೊಳ್ಳುತ್ತ ಹಣತೆ ಹಚ್ಚಿದೆ. ಬೆಳಕಲ್ಲಿ ರವಿ ಮುಗುಳುನಕ್ಕಂತಾಯ್ತು.