Friday, 13th December 2024

ಡೀಪ್ ಫೇಕ್‌ಗಳು ಎಂಬ ಹೊಸ ಸಾಮಾಜಿಕ ಪಿಡುಗು !

ಸಂಗತ

ವಿಜಯ್ ದರಡಾ

ಜನಸಾಮಾನ್ಯರ ಬದುಕನ್ನು ಸರಳಗೊಳಿಸಿದ ಇಂಟರ್ನೆಟ್ ಈಗ ಸಮಾಜಘಾತಕರ ಕೈಯಲ್ಲಿ ಕೆಟ್ಟ ಅಸವಾಗಿ ಪರಿಣಮಿಸಿದೆ. ಅವರು ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಸಮಾಜವನ್ನು ಕೆಡಿಸಲು ಹೊರಟಿದ್ದಾರೆ. ತಂತ್ರಜ್ಞಾನ ದಿಂದ ಸಾಕಷ್ಟು ಅನುಕೂಲವಿದ್ದರೂ ನಾವೀಗ ಅದು ತಂದೊಡ್ಡುವ ವಿಪ್ಲವಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಆದ್ದರಿಂದ ಈ ಅಪಾಯಕಾರಿ ಡೀಪ್-ಕ್‌ಗಳನ್ನು ಏನಕೇನ ಪ್ರಕಾರೇಣ ತಡೆಯಲೇಬೇಕು.

ಇತ್ತೀಚೆಗೆ ಡೀಪ್ ಫೇಕ್‌ಗಳದೇ ಸುದ್ದಿ. ಎಲ್ಲೆಡೆ ಅವು ಚರ್ಚೆಗೆ ಬಿಸಿಬಿಸಿ ಸರಕು ಒದಗಿಸುತ್ತಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಕೆಲ ದಿನಗಳ
ಹಿಂದೆ ಇದೇ ವಿಷಯದ ಬಗ್ಗೆ ಬಹಿರಂಗವಾಗಿ ಕಳವಳ ವ್ಯಕ್ತಪಡಿಸಿದ್ದರು. ಆ ಕಳವಳಕ್ಕೆ ಗಂಭೀರವಾದ ಕಾರಣವೇ ಇದೆ. ಒಂದೆಡೆ ಜನಸಾಮಾನ್ಯರು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಸೋಷಿಯಲ್ ಮೀಡಿಯಾಗಳನ್ನು ಎಗ್ಗಿಲ್ಲದೆ ಬಳಸುತ್ತಿದ್ದಾರೆ. ಇನ್ನೊಂದೆಡೆ ಜಗತ್ತಿನ ಬೇರೆಬೇರೆ ಕಡೆ ಇರುವ
ಭಯೋತ್ಪಾದಕ ಸಂಘಟನೆಗಳು ಕೂಡ ಇದೇ ಇಂಟರ್ನೆಟ್ಟನ್ನು ತಮ್ಮ ಅನುಕೂಲಕ್ಕೆ ಹೇಗೆ ಬೇಕೋ ಹಾಗೆ ದುರ್ಬಳಕೆ ಮಾಡಿಕೊಳ್ಳುತ್ತಿವೆ.

ಭಯೋತ್ಪಾದಕ ಸಂಘಟನೆಗಳ ಮುಖಂಡರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಮ್ಮ ಸಂಘಟನೆಗಳಿಗೆ ಹೊಸ ಹೊಸ ಉಗ್ರರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಅವೇ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅವರು ವಿಧ್ವಂಸಕ ಕೃತ್ಯಗಳನ್ನು ಎಸಗಲು ರಹಸ್ಯ ಮಾಹಿತಿ ಗಳನ್ನು ಸಂಗ್ರಹಿಸುತ್ತಿದ್ದಾರೆ ಹಾಗೂ ತಮ್ಮ ತಮ್ಮಲ್ಲೇ ಅವುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಪರಿಣಾಮ, ಸೋಷಿಯಲ್ ಮೀಡಿಯಾ ಎಂಬ ಸ್ನೇಹಪರ ವೇದಿಕೆಗಳು ಇಂದು ನಮ್ಮ ಗುಪ್ತಚರ ಏಜೆನ್ಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಏಕೆಂದರೆ ದೇಶದ ಭದ್ರತೆಗೆ ಧಕ್ಕೆ ತರುವ ಎಲ್ಲ ಸಮಾಜಘಾತಕ ಚಟುವಟಿಕೆಗಳೂ ಈಗ ಸೋಷಿಯಲ್ ಮೀಡಿಯಾಗಳಲ್ಲೇ ಕಾವು ಪಡೆದು ಮರಿಯಾಗಿ ರೂಪುಗೊಳ್ಳುತ್ತಿವೆ.

ಹಾಗೆ ನೋಡಿದರೆ ಎಲ್ಲಾ ಸಂಗತಿಗಳಿಗೂ ಎರಡು ಮುಖ ವಿರುತ್ತದೆ. ಒಂದು ಒಳ್ಳೆಯದು, ಇನ್ನೊಂದು ಕೆಟ್ಟದ್ದು. ಹಾಗೆಯೇ ತಂತ್ರಜ್ಞಾನಕ್ಕೆ ಕೂಡ ಎರಡು ಮುಖಗಳಿವೆ. ಒಳ್ಳೆಯ ಸಂಗತಿ ಏನೆಂದರೆ, ಅದು ಜನರನ್ನೂ ಜಗತ್ತನ್ನೂ ಹತ್ತಿರ ತಂದಿದೆ. ವೈದ್ಯಕೀಯ ಕ್ಷೇತ್ರವು ಅದ್ಭುತವಾದ ಪ್ರಗತಿ ಸಾಧಿಸಲು ಅದು ಇನ್ನಿಲ್ಲದಂತೆ ಸಹಾಯ ಮಾಡಿದೆ. ಜಗತ್ತಿನಾದ್ಯಂತ ತಾಂತ್ರಿಕ ಆವಿಷ್ಕಾರಗಳು ಇಂದು ಸಾವಿರಾರು ಜನರ ಜೀವ ಉಳಿಸುತ್ತಿವೆ. ಶಿಕ್ಷಣ ಕ್ಷೇತ್ರದಲ್ಲೂ ತಂತ್ರಜ್ಞಾನವು ಮಾಡುತ್ತಿರುವ ಅದ್ಭುತವಾದ ಕೆಲಸಗಳನ್ನು ನಾವು ಪ್ರತ್ಯಕ್ಷ ವಾಗಿ ನೋಡುತ್ತಿದ್ದೇವೆ. ತಂತ್ರಜ್ಞಾನದ ಸಹಾಯದಿಂದಾಗಿ ದೇಶದ ಕಟ್ಟಕಡೆಯ ಕುಗ್ರಾಮದ ಮಗು ಕೂಡ ಇಂಟರ್ನೆಟ್ ಮೂಲಕ ಶಿಕ್ಷಣ ಪಡೆಯುವುದು ಇಂದು ಸಾಧ್ಯವಾಗಿದೆ.

ಇಂಥ ಅನುಕೂಲವನ್ನು ಹಿಂದೆ ನಾವು ಊಹಿಸಿಕೊಳ್ಳುವುದಕ್ಕಾದರೂ ಸಾಧ್ಯವಿತ್ತೇ? ಅದು ಹೋಗಲಿ, ಹಿಂದೆ ಒಂದು ದಿನಪತ್ರಿಕೆಯ ಆವೃತ್ತಿ ಯೊಂದನ್ನು ಯಾವುದೋ ಊರಿನಲ್ಲಿ ಆರಂಭಿಸಬೇಕು ಅಂದರೆ ಅದಕ್ಕೆ ದೊಡ್ಡ ಸರ್ಕಸ್ ಮಾಡಬೇಕಿತ್ತು. ಅದಕ್ಕೆಂದೇ ಒಂದು ಆಫೀಸು, ಸಿಬ್ಬಂದಿ,
ಕಂಪ್ಯೂಟರುಗಳು ಸೇರಿದಂತೆ ಬಹಳ ದೊಡ್ಡ ಸೆಟಪ್ ಮಾಡಿ, ಅದಕ್ಕಾಗಿ ಲಕ್ಷಾಂತರ ರುಪಾಯಿ ಹಣ ವ್ಯಯಿಸಬೇಕಿತ್ತು. ಸಾಕಷ್ಟು ದುಡ್ಡಿರುವ ಶ್ರೀಮಂತ ಪತ್ರಿಕೆಗಳು ಮಾತ್ರ ಬೇರೆ ಬೇರೆ ಊರುಗಳಲ್ಲಿ ಆವೃತ್ತಿಗಳನ್ನು ಆರಂಭಿಸಲು ಸಾಧ್ಯವಿತ್ತು. ಆದರೆ ಇಂದು ಇಂಟರ್ನೆಟ್ ಈ ಕೆಲಸವನ್ನು ಬಹಳ ಸುಲಭ
ಮಾಡಿಬಿಟ್ಟಿದೆ. ರಕ್ಷಣೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲೂ ತಂತ್ರಜ್ಞಾನವು ತಂದ ಅದ್ಭುತವಾದ ಬದಲಾವಣೆಗಳನ್ನು ನಾವಿಂದು ನೋಡುತ್ತಿದ್ದೇವೆ. ನಿಮಗೆ ನೆನಪಿರಬಹುದು, ಕೆಲ ವರ್ಷಗಳ ಹಿಂದೆ ಯಾರಿಗಾದರೂ ಒಂದು ಫೋನ್ ಕರೆ ಮಾಡಬೇಕೆಂದರೆ ಅದು ಬಹಳ ದುಬಾರಿಯಾಗಿತ್ತು. ಸುಲಭಕ್ಕೆ
ನೆಟ್‌ವರ್ಕ್ ಕೂಡ ಸಿಗುತ್ತಿರಲಿಲ್ಲ. ಆದರೆ ಇಂದು ಮೊಬೈಲ್ ಗಳು ಬಹಳ ಸುಲಭವಾಗಿ ಕ್ಷಣಮಾತ್ರದಲ್ಲಿ ಆ ಕೆಲಸ ಮಾಡುತ್ತವೆ. ಹಿಂದೆ ವಿದೇಶಕ್ಕೆ ಫೋನ್ ಮಾಡಬೇಕೆಂದರೆ ಹಿಂದೆಮುಂದೆ ನೋಡಬೇಕಿತ್ತು. ಇಂದು ವಿದೇಶದಲ್ಲಿರುವ ಆಪ್ತರ ಜತೆಗೆ ಪುಕ್ಕಟೆಯಾಗಿ ಎಷ್ಟು ಹೊತ್ತು ಬೇಕಾದರೂ ಹರಟೆ ಹೊಡೆಯಬಹುದು. ತಂತ್ರಜ್ಞಾನದಿಂದ ಸಿಗುತ್ತಿರುವ ಇಂಥ ಇನ್ನೂ ಸಾವಿರಾರು ಅನುಕೂಲಗಳನ್ನು ನಾವು ಪಟ್ಟಿ ಮಾಡಬಹುದು. ಅವು ನಮ್ಮ ಬದುಕನ್ನು ಸುಂದರ ಗೊಳಿಸಿವೆ.

ಆದರೆ ರುಚಿಯಾದ ಆಹಾರ ಎಂದು ಅತಿಯಾಗಿ ತಿಂದರೆ ಏನಾಗುತ್ತದೆ? ಹಾಗೆಯೇ ತಂತ್ರಜ್ಞಾನ ಕೂಡ ಅತಿಯಾದ ಬಳಕೆಯಿಂದಾಗಿ ಇಂದು ಸಾಕಷ್ಟು
ಸಮಸ್ಯೆಗಳನ್ನು ಸೃಷ್ಟಿ ಮಾಡಿದೆ. ಎಲ್ಲಾ ರಂಗದಲ್ಲೂ ಇದು ಸಹಜ. ಹಲವಾರು ಒಳ್ಳೆಯ ಸಂಗತಿಗಳ ಜತೆಗೆ ಒಂದಷ್ಟು ಕೆಟ್ಟ ಸಂಗತಿಗಳೂ ತೂರಿ ಕೊಂಡು ಒಳಗೆ ಬಂದು  ಬಿಡುತ್ತವೆ. ತಂತ್ರಜ್ಞಾನದ ವಿಷಯದಲ್ಲಿ ಆ ಕೆಟ್ಟ ಸಂಗತಿಗಳೇ ನಮ್ಮನ್ನಿಂದು ದೊಡ್ಡದಾಗಿ ಕಾಡುತ್ತಿವೆ. ಮುಂದಿನ ದಿನಗಳಲ್ಲಿ ಅವು ಇನ್ನೂ ದೊಡ್ಡ ಅಪಾಯವಾಗಿ ಪರಿಣಮಿಸಲಿವೆ ಎಂಬ ಆತಂಕ ನಮ್ಮನ್ನು ಚಿಂತೆಗೆ ತಳ್ಳಿದೆ. ಕೃತಕ ಬುದ್ಧಿಮತ್ತೆ (ಎ.ಐ.) ಎಂಬ ಪರಮಾದ್ಭುತ ತಂತ್ರಜ್ಞಾನಕ್ಕೆ ತಳಪಾಯ ಹಾಕಿದ ವಿಜ್ಞಾನಿಗಳೇ ಇಂದು ಕೃತಕ ಬುದ್ಧಿಮತ್ತೆಯ ಅಪಾಯದ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿದ್ದಾರೆ. ಜಾಗತಿಕ ಮಟ್ಟದ ದೊಡ್ಡ ದೊಡ್ಡ ನಾಯಕರು ಕೂಡ ಕೃತಕ ಬುದ್ಧಿಮತ್ತೆಯ ನಾನಾ ಆಯಾಮ ಗಳನ್ನು ನಾವು ಗಂಭೀರವಾಗಿ ಗಮನಿಸಬೇಕು ಎಂದು ಒತ್ತಾಯ ಮಾಡ ತೊಡಗಿದ್ದಾರೆ.

ಅಂಥ ಆಯಾಮ ಅಥವಾ ಅಪಾಯಗಳಲ್ಲಿ ಡೀಪ್ ಫೇಕ್ ಕೂಡ ಒಂದು. ಇದು ಎರಡು ಇಂಗ್ಲಿಷ್ ಪದಗಳಿಂದ ಆದ ಶಬ್ದ. ಡೀಪ್ ಮತ್ತು ಫೇಕ್. ಡೀಪ್ ಅಂದರೆ ಆಳ, ಫೇಕ್ ಅಂದರೆ ನಕಲಿ. ಡೀಪ್ ಫೇಕ್ ಅಂದರೆ ಬಹಳ ನಾಜೂಕಾಗಿ ತಯಾರಿಸಿದ ನಕಲಿ ವಿಡಿಯೋ ಅಥವಾ ಫೋಟೋ ಅಥವಾ
ಆಡಿ ಯೋ. ಅದನ್ನು ಎಷ್ಟು ನಾಜೂಕಾಗಿ ಚಾಕಚಕ್ಯತೆಯಿಂದ ತಯಾರು ಮಾಡಿರುತ್ತಾರೆ ಅಂದರೆ, ಅದು ನಕಲಿಯೆಂದು ಪತ್ತೆಹಚ್ಚುವುದೇ ಬಹಳ ಕಷ್ಟ. ಹಿಂದೆಲ್ಲ ಮಾರ್ಫಿಂಗ್ ಮಾಡುತ್ತಿದ್ದರಲ್ಲ, ಅದರ ಅತ್ಯಂತ ಸುಧಾರಿತ ವರ್ಷನ್ ಇದು. ಮಾರ್ಫಿಂಗ್‌ನಿಂದ ಏನು ತೊಂದರೆಯಾಗುತ್ತಿತ್ತೋ ಅದರ
ಹಲವಾರು ಪಟ್ಟು ಹೆಚ್ಚು ತೊಂದರೆಗಳು ಡೀಪ್ ಫೇಕ್‌ನಿಂದ ಆಗುತ್ತಿವೆ.

ಮಾರ್ಫಿಂಗ್ ಮಾಡಿದ್ದನ್ನು ಚುರುಕಾದ ಕಣ್ಣಿರುವ ಯಾರು ಬೇಕಾದರೂ ಸುಲಭವಾಗಿ ಪತ್ತೆಹಚ್ಚ ಬಹುದಿತ್ತು, ಆದರೆ ಡೀಪ್ ಫೇಕ್‌ಗಳನ್ನು ಜನಸಾಮಾನ್ಯರು ಪತ್ತೆಹಚ್ಚಲು ಸಾಧ್ಯವೇ ಇಲ್ಲ. ಅವು ನಿಜವೆಂದೇ ಎಲ್ಲರೂ ನಂಬಬೇಕು, ಹಾಗಿರುತ್ತವೆ. ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ವೈರಲ್ ಆದ ನಟಿ
ರಶ್ಮಿಕಾ ಮಂದಣ್ಣ ಅವರ ಡೀಪ್-ಕ್ ವಿಡಿಯೋದಿಂದಾಗಿ ಇದರ ಬಗ್ಗೆ ಚರ್ಚೆಗಳು ಹೆಚ್ಚು ಕಾವು ಪಡೆದಿವೆ. ನಂತರ ಕಾಜೋಲ್, ಕತ್ರಿನಾ ಕೈಫ್, ಆಲಿಯಾ ಭಟ್ ಮುಂತಾದವರ ಡೀಪ್ ಫೇಕ್ ವಿಡಿಯೋಗಳು ಕೂಡ ಬಂದವು. ಅದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ಯಾವ್ಯಾವುದೋ ಟ್ಯೂನ್‌ಗಳಿಗೆ ಹಾಡುವ ವಿಡಿಯೋಗಳು ಮತ್ತು ಗರ್ಬಾ ಡ್ಯಾನ್ಸ್ ಮಾಡುವ ವಿಡಿಯೋಗಳು ವೈರಲ್ ಆದವು.

ಇಂಟರ್ನೆಟ್ ಲೋಕವನ್ನು ಜಾಲಾಡಿದರೆ ಇಂದು ಅಂಥ ಸಾವಿರಾರು ವಿಡಿಯೋಗಳು ಸಿಗುತ್ತವೆ. ಹೀಗಾಗಿ ಇಂದಿನ ಡಿಜಿಟಲ್ ಯುಗಕ್ಕೆ ಈ ಡೀಪ್ ಫೇಕ್‌ಗಳು ಬಹುದೊಡ್ಡ ಪಾಯ ತರುವುದು ನಿಶ್ಚಿತವಾಗಿದೆ. ಆದ್ದರಿಂದ ಏನಕೇನ ಪ್ರಕಾರೇಣ ಇದನ್ನು ತಡೆಯಲೇಬೇಕು. ಡೀಪ್ ಫೇಕ್ ವಿಡಿಯೋ ಗಳನ್ನು ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ಸಾಫ್ಟ್ ವೇರ್ ಬಳಸಿ ತಯಾರಿಸಲಾಗುತ್ತದೆ. ಅವು ಎಷ್ಟು ನೈಜವಾಗಿರುತ್ತವೆ ಅಂದರೆ, ನಿಜವಾದ ವಿಡಿಯೋ ಮತ್ತು ಡೀಪ್ ಫೇಕ್ ವಿಡಿಯೋವನ್ನು ಅಕ್ಕಪಕ್ಕ ಇರಿಸಿಕೊಂಡು ನೋಡಿದರೆ ಅಸಲಿ ಯಾವುದು, ನಕಲಿ ಯಾವುದು ಎಂಬುದೇ ತಿಳಿಯುವುದಿಲ್ಲ.

ವಾಯ್ಸ್ ಕ್ಲೋನಿಂಗ್ ಸಾಫ್ಟ ವೇರ್ ಬಳಸಿ ಇಂದು ಯಾರ ಧ್ವನಿಯನ್ನು ಬೇಕಾದರೂ ನಕಲು ಮಾಡಬಹುದು. ಆ ಧ್ವನಿಯಲ್ಲಿ ನಮಗೆ ಏನು ಬೇಕೋ ಅದನ್ನು ಹೇಳಿಸಬಹುದು. ಅದು ಪಕ್ಕಾ ಒರಿಜಿನಲ್ ಧ್ವನಿಯಂತೆಯೇ ಕೇಳಿಸುತ್ತದೆ. ಇತ್ತೀಚೆಗೆ ಬಹಳ ಜನರಿಗೆ ಒಬ್ಬಳು ಹುಡುಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ವಿಡಿಯೋ ಬಂದಿತ್ತು. ಅದರಲ್ಲಿನ ಹುಡುಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವವರ ಹೆಸರನ್ನು ಕೂಡ ಸ್ಪಷ್ಟವಾಗಿ
ಹೇಳುತ್ತಿತ್ತು. ಅಂಥ ವಿಡಿಯೋಗಳನ್ನು ತಯಾರಿಸುವುದು ಈಗ ಕಷ್ಟವೇ ಅಲ್ಲ. ಅದಕ್ಕಾಗಿಯೇ ಸಾಕಷ್ಟು ಆಪ್‌ಗಳು ಇಂಟರ್ನೆಟ್‌ನಲ್ಲಿ ಉಚಿತವಾಗಿ ಸಿಗುತ್ತವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಡೌನ್‌ಲೋಡ್ ಮಾಡಿಕೊಂಡರೆ ಇಂಥ ಬೇಕಾದಷ್ಟು ಡೀಪ್ ಫೇಕ್ ವಿಡಿಯೋ, ಆಡಿಯೋ,
ಫೋಟೋಗಳನ್ನು ತಯಾರಿಸಬಹುದು.

ಭಾರತದಲ್ಲಿ ನಾವು ಈಗ ಡೀಪ್ ಫೇಕ್‌ಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರೂ ಅಮೆರಿಕದಲ್ಲಿ ಹೆಚ್ಚುಕಮ್ಮಿ ಆರು ವರ್ಷಗಳ ಹಿಂದೆಯೇ ಅನೇಕ ಸೆಲೆಬ್ರಿಟಿಗಳ ಡೀಪ್ ಫೇಕ್ ಪೋರ್ನ್ ವಿಡಿಯೋಗಳನ್ನು ಇಂಟರ್ನೆಟ್‌ನಲ್ಲಿ ಹರಿಬಿಡಲಾಗಿತ್ತು. ಸದ್ಯಕ್ಕೆ ಭಾರತೀಯ ಸೆಲೆಬ್ರಿಟಿಗಳ ಡೀಪ್ ಫೋಕ್ ಪೋರ್ನ್
ವಿಡಿಯೋ ಇನ್ನೂ ಬಂದಿಲ್ಲ. ಶೀಘ್ರದಲ್ಲೇ ಅವು ಬಂದರೂ ಅಚ್ಚರಿಯಿಲ್ಲ. ಯಾವುದೋ ಒಂದು ಪೋರ್ನ್ ವಿಡಿಯೋ ವನ್ನು ತೆಗೆದುಕೊಂಡು ಅದಕ್ಕೆ ಸೆಲೆಬ್ರಿಟಿಯ ಮುಖ ಮತ್ತು ಧ್ವನಿಯನ್ನು ಕ್ಲೋನಿಂಗ್ ಮಾಡಿದರೆ ಬಹಳ ಸುಲಭವಾಗಿ ಆ ಕೆಲಸ ಮಾಡಬಹುದು!

ಸಮಸ್ಯೆ ಏನೆಂದರೆ, ನಾವು ನಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬೇಕಾಬಿಟ್ಟಿಯಾಗಿ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್
ಮಾಡುತ್ತಿರು ತ್ತೇವೆ. ಇನ್ನು ಮಂದಾದರೂ ಹಾಗೆ ಫೋಟೋ ಹಾಗೂ ವಿಡಿಯೋಗಳನ್ನು ಕಣ್ಣುಮುಚ್ಚಿ ಪೋಸ್ಟ್ ಮಾಡುವ ಮುನ್ನ ಎಚ್ಚರಿಕೆ ವಹಿಸುವು ದನ್ನು ಅಭ್ಯಾಸ ಮಾಡಿಕೊಳ್ಳೋಣ. ಅದು ಮಾತ್ರವಲ್ಲ, ನಾವು ಭೇಟಿ ನೀಡುವ ವೆಬ್‌ಸೈಟುಗಳ ಬಗ್ಗೆಯೂ ಬಹಳ ಎಚ್ಚರವಾಗಿರಬೇಕಿದೆ. ಪೋರ್ನ್ ಸ್ಕ್ರೀನ್‌ಗಳಲ್ಲಿ ಕ್ಯಾಮೆರಾ ಮೂಲಕ ಜನರ ಫೋಟೋ ಕ್ಲಿಕ್ಕಿಸಿ, ಅದನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ.

ಸೈಬರ್ ವಂಚನೆಗಳು ಸರ್ವೇಸಾಮಾನ್ಯವಾಗು ತ್ತಿವೆ. ಕಳೆದ ಐದೇ ವರ್ಷಗಳಲ್ಲಿ ಸೈಬರ್ ವಂಚನೆಗಳು ಐದು ಪಟ್ಟು ಹೆಚ್ಚಾಗಿವೆ. ಕೆಲವರು ಮೋಜಿಗಾಗಿ ಡೀಪ್ ಫೇಕ್‌ಗಳನ್ನು ತಯಾರಿಸಿ ಪೋಸ್ಟ್ ಮಾಡುವುದುಂಟು. ಆದರೆ ಅವೇ ವಿಡಿಯೋಗಳು ಕ್ರಿಮಿನಲ್‌ಗಳ ಕೈಗೆ ಸಿಕ್ಕಿ ಅಪರಾಧಗಳಿಗೆ ಅಸ್ತ್ರವಾದರೆ ಏನು
ಗತಿ? ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಬೇಕು ಎಂದಾದರೆ ಮೊದಲು ನಾವೆಲ್ಲಾ ನಮ್ಮ ಭಯದ ಕೋಶದಿಂದ ಹೊರಗೆ ಬರಬೇಕು. ನಮ್ಮ ಡೀಪ್ ಫೇಕ್ ವಿಡಿಯೋ ಅಥವಾ ಫೋಟೋ ಕಾಣಿಸಿಕೊಂಡರೆ ತಕ್ಷಣ ಮುಜುಗರ ಬಿಟ್ಟು ಅದರ ಬಗ್ಗೆ ಪೊಲೀಸ್ ಇಲಾಖೆಯ ಸೈಬರ್ ಘಟಕಕ್ಕೆ ದೂರು
ನೀಡಬೇಕು. ವಿಡಿಯೋ ನಕಲಿ ಅಂದಮೇಲೆ ಅದರಿಂದ ಮರ್ಯಾದೆ ಹೋಗುತ್ತದೆ ಎಂದು ಹೆದರುವುದಾದರೂ ಏಕೆ? ಹಾಗಾಗಿ ಸೋಷಿಯಲ್ ಮೀಡಿಯಾ ಬಳಸುವಾಗ ಇನ್ನುಮುಂದೆ ಹುಷಾರಾಗಿರಿ!

(ಲೇಖಕರು ಹಿರಿಯ ಪತ್ರಕರ್ತರು ಹಾಗೂ ರಾಜ್ಯಸಭಾ ಮಾಜಿ ಸದಸ್ಯರು)