Thursday, 12th December 2024

ಮ್ಯೂಕಾರ್‌ ಮೈಕೋಸಿಸ್‌ ಮತ್ತು ಡೆಲ್ಟಾ ಪ್ರಭೇದ

ವೈದ್ಯವೈವಿಧ್ಯ

ಡಾ.ಎಚ್‌.ಎಸ್‌.ಮೋಹನ್‌

ಈ ಕೋವಿಡ್ ಕಾಯಿಲೆ ಇತ್ತೀಚೆಗೆ ಭಾರತದಲ್ಲಿ ಬ್ಲಾಕ್ ಫಂಗಸ್ ಸೋಂಕನ್ನು ಜಾಸ್ತಿ ಮಾಡುತ್ತಿರುವ ವಿಚಾರ ತಮಗೆ ಗೊತ್ತೇ
ಇದೆ. ಹೌದು, ಬ್ಲಾಕ್ ಫಂಗಸ್ ಎಂದರೆ ಮ್ಯೂಕಾರ್ ಮೈಕೋಸಿಸ್ ಎಂದು ನಾವು ಕರೆಯುತ್ತಿರುವ ಒಂದು ಶಿಲೀಂಧ್ರದ ಸೋಂಕು. ಇದು ತುಂಬಾ ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಒಂದು ರೀತಿಯ ದೌರ್ಭಾಗ್ಯವೇ ಸರಿ.

ಆದರೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ತುಂಬಾ ಭೀಕರವಾಗಿ ಚಿತ್ರಿಸಲಾಗುತ್ತಿದೆ, ಹಾಗೆಯೇ ತಪ್ಪು ಕಲ್ಪನೆಗಳು ಮತ್ತು ತಪ್ಪು ಮಾಹಿತಿಗಳು ಭಿತ್ತರವಾಗುತ್ತಿವೆ. ಮ್ಯೂಕೊರೋಲಿಸ್ ಗುಂಪಿಗೆ ಸೇರಿದ ಈ ಶಿಲೀಂಧ್ರಕ್ಕೆ ಮಾನವ ದೇಹವು ಸಾಮಾನ್ಯವಾಗಿ ಆಶ್ರಯ ತಾಣವಲ್ಲ. ಇದು ಹೆಚ್ಚಾಗಿ ಮಣ್ಣು, ಧೂಳು, ಕೊಳೆಯುತ್ತಿರುವ ಹಣ್ಣು, ತರಕಾರಿಗಳು, ಗೊಬ್ಬರ, ಪ್ರಾಣಿಗಳ ಮಲಗಳು – ಇವುಗಳಲ್ಲಿ ಕಂಡು ಬರುತ್ತದೆ.

ವ್ಯಕ್ತಿ ಆರೋಗ್ಯದಿಂದಿರುವಾಗ ನಮ್ಮ ದೇಹದ ಪ್ರತಿರೋಧ ವ್ಯವಸ್ಥೆ ಈ ಶಿಲೀಂಧ್ರದ ಸೋಂಕಿಗೆ ಸಾಮಾನ್ಯವಾಗಿ ಒಳಗಾಗುವು ದಿಲ್ಲ. ಆದರೆ ಡಯಾಬಿಟಿಸ್, ಕೋವಿಡ್ ಕಾಯಿಲೆ, ಸ್ಟೀರಾಯ್ಡ ಚಿಕಿತ್ಸೆ – ಈ ಅಪವಿತ್ರ ತ್ರಿಮೂರ್ತಿಗಳು ನಮ್ಮ ದೇಹದ ಪ್ರತಿ ರೋಧ ಶಕ್ತಿಯನ್ನು ಕುಂಠಿತಗೊಳಿಸುವು ದರಿಂದ ಈ ಶಿಲೀಂಧ್ರವು ವ್ಯಕ್ತಿಯ ದೇಹವನ್ನು ಆಕ್ರಮಿಸುತ್ತದೆ. ಹೌದು ಡಯಾಬಿಟಿಸ್ ತೀವ್ರ ಪ್ರಮಾಣದ ರಿಸ್ಕನ್ನು ಜಾಸ್ತಿ ಮಾಡುವುದಲ್ಲದೆ ಶಿಲೀಂಧ್ರದ ಸೋಂಕು ದೇಹವನ್ನು ಆಕ್ರಮಿಸಲು
ಅನುವುಮಾಡಿಕೊಡುತ್ತದೆ.

ಹಾಗೆಯೇ ತೀವ್ರ ಪ್ರಮಾಣದ ಕೋವಿಡ್ ಕಾಯಿಲೆಯ ಹಲವು ವ್ಯಕ್ತಿಗಳಲ್ಲಿ ಜೀವ ಉಳಿಸಲು ಸ್ಟೀರಾಯ್ಡ ಔಷಧದ ಉಪಯೋಗ
ತೀರಾ ಅನಿವಾರ್ಯ. ಇದೂ ಸಹ ಆ ವ್ಯಕ್ತಿಯ ಪ್ರತಿರೋಧ ಶಕ್ತಿಯನ್ನು ಕುಂಠಿತ ಗೊಳಿಸುತ್ತದೆ. ಪರಿಣಾಮ ಎಂದರೆ ಈ ಮ್ಯೂಕಾರ್ ಮೈಕೋಸಿಸ್ ಅಥವಾ ಜೈಗೋಮೈಕೋಸಿಸ್ (Zygomycosis) ಸೋಂಕು ಅತೀ ವೇಗವಾಗಿ ಮೂಗಿನಿಂದ ಅದರೊಳ ಗಿನ ಸೈನಸ್‌ಗಳಿಗೆ, ಮುಖದ ಭಾಗಕ್ಕೆ , ದವಡೆಗೆ, ಕಣ್ಣಿಗೆ ಮತ್ತು ಮೆದುಳಿಗೆ ಹರಡುತ್ತದೆ.

ಜೂನ್ ಮೊದಲ ವಾರದ ಹೊತ್ತಿಗೆ ಭಾರತದಲ್ಲಿ 14 ಸಾವಿರಕ್ಕೂ ಹೆಚ್ಚು ಜನರಲ್ಲಿ ಈ ಕಪ್ಪು ಶಿಲೀಂಧ್ರದ ಸೋಂಕು ಇರಬಹು ದಾದ ಅಂದಾಜಿದೆ. ಚೀನಾ ಹೊರತುಪಡಿಸಿ ಅತೀ ಹೆಚ್ಚು ಡಯಾಬಿಟಿಸ್ ರೋಗಿಗಳ ತಾಣ ಭಾರತವಾದ್ದರಿಂದ ಈ ಸೋಂಕು ನಮ್ಮ ದೇಶದಲ್ಲಿ ಹೆಚ್ಚು ಕಂಡು ಬಂದಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಚಾರವಿದೆ. ಜಗತ್ತಿನಲ್ಲಿ ಈ ಕೋವಿಡ್ ಸಾಂಕ್ರಾಮಿಕದ ಮೊದಲು ಸಹಿತ ಈ ಮ್ಯೂಕಾರ್ ಮೈಕೋಸಿಸ್ ಸೋಂಕು ಜಗತ್ತಿನ ಉಳಿದ ಭಾಗಗಳಿಗಿಂತ ಭಾರತದಲ್ಲಿ 70 ಪಟ್ಟು ಹೆಚ್ಚು ಎನ್ನಲಾಗಿದೆ.

ರಕ್ತನಾಳದ ರಕ್ತದ ಹರಿವನ್ನು ಈ ಫಂಗಸ್ ತಡೆಯುತ್ತದೆ. ಪರಿಣಾಮವಾಗಿ ಸೋಂಕಿತ ಅಂಗಾಂಶವು ಮರಣ ಹೊಂದುತ್ತದೆ. ಹೀಗೆ ಸತ್ತ, ಕೊಳೆತ ಅಂಗಾಂಶವು ಚರ್ಮವನ್ನು ಕಪ್ಪು ಬಣ್ಣವಾಗಿಸುತ್ತದೆ. ಹಾಗಾಗಿ ಈ ಸೋಂಕಿಗೆ ಬ್ಲಾಕ್ ಫಂಗಸ್ ಎಂಬ ಹೆಸರು ಅಂಟಿಕೊಂಡಿದೆ. ಜಗತ್ತಿನ ಹಲವಾರು ತಜ್ಞ ವೈದ್ಯರುಗಳು ಈ ಹೆಸರು ಸಂಪೂರ್ಣವಾಗಿ ಸರಿಯಲ್ಲ ಎಂದು ಅಭಿಪ್ರಾಯ
ಪಡುತ್ತಾರೆ. ಯುನೈಟೆಡ್ ಕಿಂಗ್ಡಮ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ವೈದ್ಯಕೀಯ ಶಿಲೀಂಧ್ರ ಶಾಸ್ತ್ರ (Medical Mycology) ಪ್ರೊಫೆಸರ್ ಮಾಲ್ಕಮ್ ರಿಚರ್ಡ್ ಸನ್ ಆ ತಜ್ಞ ವೈದ್ಯರುಗಳಲ್ಲಿ ಪ್ರಮುಖರು.

ಮ್ಯೂಕಾರ್ ಮೈಕೋಸಿಸ್ ಉಂಟು ಮಾಡುವ ಶಿಲೀಂಧ್ರವಾದ ರೈಜೋಫಸ್ ಒರೈಜೇ (Rhizopus Oryzae) ಸಂಪೂರ್ಣವಾಗಿ ಪಾರದರ್ಶಕ ವಾಗಿರುತ್ತದೆ. ಶಿಲೀಂಧ್ರ ಶಾಸದ ರೀತಿ ಬ್ಲ್ಯಾಕ್ ಫಂಗಸ್ ಅಥವಾ ಬ್ಲ್ಯಾಕ್ ಯೀಸ್ಟ್ ಈ ಹೆಸರು Dematiaceous ಫಂಗಸ್ ಗೆ ಸೀಮಿತವಾಗಿದೆ. ಏಕೆಂದರೆ ಅವುಗಳ ಹೊರಪದರದಲ್ಲಿ ಮೆಲಾನಿನ್ ಪಿಗ್ ಮೆಂಟ್ ಇರುತ್ತದೆ. ಹಾಗಾಗಿ ಈ ರೀತಿಯ ತಪ್ಪು ಹೆಸರು ಬಂದಿರುವುದನ್ನು ಹಲವು ತಜ್ಞ ವೈದ್ಯರುಗಳು ಟ್ವಿಟರ್‌ನಲ್ಲಿ ಇತರ ಮಾಧ್ಯಮಗಳಲ್ಲಿ ಸರಿಪಡಿಸಲು ಪ್ರಯತ್ನಿಸಿ ದ್ದಾರೆ. ಅದು ಏನೂ ಪ್ರಯೋಜನವಾಗಿಲ್ಲ ಎಂದು ಅವರ ಅಭಿಪ್ರಾಯ.

ಹಾಗೆಯೇ ಭಾರತದಲ್ಲಿನ ಮಾಧ್ಯಮಗಳು ಮ್ಯೂಕಾರ್ ಮೈಕೋಸಿಸ್‌ನ ಪ್ರಬೇಧಗಳನ್ನು ಬಿಳಿ ಶಿಲೀಂಧ್ರ (White
fungus), ಹಳದಿ ಶಿಲೀಂಧ್ರ (Yellow fungus) ಎಂದು ಬಿಂಬಿಸುತ್ತಿವೆ. ಇದು ಜನರಿಗೆ ಸಂಪೂರ್ಣವಾಗಿ ತಪ್ಪು ಸಂದೇಶ ಕೊಡುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಈ ಸೋಂಕಿಗೆ ತಕ್ಷಣ ಫಂಗಸ್ ವಿರುದ್ಧದ ಔಷಧಿಗಳಿಂದ ಮತ್ತು ಶಸ್ತ್ರಚಿಕಿತ್ಸೆಯಿಂದ ಚಿಕಿತ್ಸೆ ಕೈಗೊಳ್ಳದಿದ್ದಾಗ ಹೆಚ್ಚಿನ ಸಂದರ್ಭಗಳಲ್ಲಿ ರೋಗಿ ಮರಣ ಹೊಂದುತ್ತಾನೆ.

ಭಾರತದ ತಜ್ಞ ವೈದ್ಯ ಡಾ. ಅವಽಶ್ ಕುಮಾರ್ ಸಿಂಗ್ ಮತ್ತು ಅವರ ಸಹೋದ್ಯೋಗಿಗಳು ಒಟ್ಟೂ ರೋಗಿಗಳಲ್ಲಿ ಶೇ.60 ಮ್ಯೂಕಾರ್ ಮೈಕೋಸಿಸ್, ಕೋವಿಡ್ ಸೋಂಕಿನ ಅವಧಿಯಲ್ಲಿ ಮತ್ತು ಶೇ.40 ಕೋವಿಡ್ ಕಾಯಿಲೆಯಿಂದ ಗುಣಮುಖರಾ ದವರಲ್ಲಿ ಕಂಡು ಬಂದಿರುವುದನ್ನು ದಾಖಲಿಸಿದ್ದಾರೆ. ಅದರಲ್ಲಿ ಶೇ.80 ರೋಗಿ ಗಳಲ್ಲಿ ಡಯಾಬಿಟಿಸ್ ಇತ್ತು. ಶೇ.76 ರೋಗಿಗಳಿಗೆ ಸ್ಟೀರಾಯ್ಡ್ ನಿಂದ ಚಿಕಿತ್ಸೆ ನೀಡಲಾಗಿತ್ತು.

ಮಾಧ್ಯಮಗಳಲ್ಲಿ ಈ ಮ್ಯೂಕಾರ್ ಮೈಕೋಸಿಸ್ ಸೋಂಕಿನ ಮೂಲದ ಬಗ್ಗೆ ಹಲವು ತಪ್ಪು ಮತ್ತು ಅವೈಜ್ಞಾನಿಕ ಮಾಹಿತಿಗಳು ಹರಿದಾಡುತ್ತಿವೆ. ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆ ವ್ಯಕ್ತಿಗೆ ಕೋವಿಡ್ ಕಾಯಿಲೆ ಆ ಹೊತ್ತಿಗೆ ಇಲ್ಲದಿದ್ದರೆ ಆತನನ್ನು ಪ್ರತ್ಯೇಕಿಸಬೇಕು ಎಂದೇನಿಲ್ಲ. ಮೊದಲೇ ತಿಳಿಸಿದಂತೆ ಸೋಂಕಿನ ಮೂಲ ಇರುವುದು ವಾತಾವರಣದಲ್ಲಿ, ಶಿಲೀಂಧ್ರದ ಬೀಜಕಣದಲ್ಲಿ (Spores). ಈ ಶಿಲೀಂಧ್ರವು ಆಸ್ಪತ್ರೆಯ ಕೊಳಕು ನೀರಿನಲ್ಲಿ, ಆಮ್ಲಜನಕ ಸಿಲಿಂಡರ್‌ನಲ್ಲಿ ಅಥವಾ ಹ್ಯುಮಿಡಿಫೈ ಯರ್‌ಗಳಲ್ಲಿ ಹರಡುತ್ತಿವೆ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಈ ಬಗೆಗೆ ಖಚಿತವಾದ ಪುರಾವೆಗಳು ಇದುವರೆಗೆ ಲಭ್ಯವಿಲ್ಲ. ಶಿಲೀಂಧ್ರವು ನೀರಿನಲ್ಲಿ ಬೀಜಕಣಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ ಎಂದು ಶಿಲೀಂಧ್ರ ತಜ್ಞರು ಅಭಿಪ್ರಾಯ ಪಡುತ್ತಾರೆ.

ಮುಖ್ಯ ವಿಚಾರ ಎಂದರೆ ಸಿಲಿಂಡರ್ ನಲ್ಲಿರುವ ಶುದ್ಧ ಆಮ್ಲಜನಕವು ಯಾವ ರೀತಿಯ ಸೂಕ್ಷ್ಮ ಜೀವಿಗಳಿಗೂ ಬೆಳವಣಿಗೆ ಯಾಗಲು ಬಿಡುವುದಿಲ್ಲ. ಇನ್ನೊಂದು ತಪ್ಪು ಮಾಹಿತಿ ಪ್ರಚಾರವಾಗುತ್ತಿರುವುದೆಂದರೆ ಮುಖದ ಮೇಲಿನ ಮಾಸ್ಕ್‌ಗಳಲ್ಲಿ ಫಂಗಸ್ ಇರುತ್ತವೆ ಎಂದು. ಇದುವರೆಗೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ರೆಫ್ರಿಜಿರೇಟರ್‌ಗಳಲ್ಲಿರುವ ನೀರುಳ್ಳಿಯ ಮೇಲೆ
ಯಾವಾಗಲಾದರೂ ಕಾಣಿಸಿಕೊಳ್ಳುವ ಕಪ್ಪು ಮೌಲ್ಡೇ ಮ್ಯೂಕರಾಲಿಸ್ ಎಂದು ತಪ್ಪು ತಿಳಿಯಲ್ಪಟ್ಟಿದೆ. ಆದರೆ ಅದು ಮ್ಯೂಕಾರಾಲಿಸ್ ಅಲ್ಲ. ಆಸ್ಪರ್ ಜಿಲಸ್ ಎಂಬ ಬೇರೊಂದು ಶಿಲೀಂಧ್ರ. ಮುಖ್ಯ ಸಂದೇಶ ಎಂದರೆ ಮನೆಯಲ್ಲಿ ಇರುವ ವ್ಯಕ್ತಿಗಳು ತಮ್ಮ ದೈನಂದಿನ ವಾತಾವರಣದಲ್ಲಿ ಈ ಶಿಲೀಂಧ್ರಕ್ಕೆ ಒಡ್ಡಿಕೊಳ್ಳುವುದಿಲ್ಲ.

ಆದರೆ ಅವು ಕಲುಷಿತಗೊಂಡ ಬ್ರೆಡ್ ಮತ್ತು ಹಣ್ಣುಗಳಲ್ಲಿ ಇರುತ್ತವೆ ಎಂಬುದನ್ನು ಗಮನಿಸಬೇಕು. ಸೋಂಕು ಯಾವ ರೀತಿ ಪ್ರಸರಣವಾಗುತ್ತದೆ? ಇದುವರೆಗೆ ಪ್ರಕಟಗೊಂಡ ಪುರಾವೆಗಳ ಪ್ರಕಾರ ಆಸ್ಪತ್ರೆಗಳಲ್ಲಿ ಸರಿಯಾಗಿ ಸ್ವಚ್ಛಮಾಡದ ಬಟ್ಟೆ ಮತ್ತು
ಲಿನನ್‌ಗಳು ಕಾರಣವಾಗುತ್ತವೆ ಎಂದು 2014 ಮತ್ತು 2016ರಲ್ಲಿ ಪ್ರಕಟವಾದ ಎರಡು ಅಧ್ಯಯನಗಳು ತಿಳಿಸುತ್ತವೆ.

2009ರಲ್ಲಿನ ಮತ್ತೊಂದು ಅಧ್ಯಯನ ದಲ್ಲಿ ಆಸ್ಪತ್ರೆಯ ವೆಂಟಿಲೇಶನ್ ವ್ಯವಸ್ಥೆ, ಅಡೇಸಿವ್ ಬ್ಯಾಂಡೇಜ್‌ಗಳೂ ಕಾರಣ ವಾಗುತ್ತವೆ ಎಂದು ತಿಳಿಸುತ್ತದೆ. ಏರ್ ಕಂಡೀಷನ್ ಫಿಲರ್‌ಗಳು ಕಲುಷಿತಗೊಳ್ಳುವುದೂ ಕಾರಣ ಎಂದು ಮತ್ತೊಂದು ಮಾಹಿತಿ
ಯಿದೆ. ಸುಟ್ಟ ಗಾಯವಾದಾಗ ಚರ್ಮದ ಮೂಲಕ ಸೋಂಕು ಬರಬಹುದು, ಕ್ಯಾಥೆಟರ್‌ಗಳ ಜೋಡಣೆಯ ಭಾಗಗಳು, ಕೀಟಗಳ ಕಡಿತ – ಹೀಗೆ ಈ ರೀತಿಯಲ್ಲೂ ಸೋಂಕು ಪ್ರಸರಣಗೊಳ್ಳಬಹುದು ಎನ್ನಲಾಗಿದೆ.

ಚಿಕಿತ್ಸೆ : ಫಲಪ್ರದ ಚಿಕಿತ್ಸೆ ಎಂದರೆ ನಿರ್ಜೀವ ಅಂಗಾಂಶಗಳನ್ನು ಶಸಚಿಕಿತ್ಸೆ ಮಾಡಿ ತೆಗೆಯುವುದು ಹಾಗೂ ಸೂಕ್ತ ಪ್ರಮಾಣ ದಲ್ಲಿ ಫಂಗಸ್ ವಿರುದ್ಧದ ಔಷಧ ಆಂ-ಟೆರಿಸಿನ್ ಬಿ ಔಷಧ ಉಪಯೋಗಿಸುವುದು.

ಕಾಡ್ಗಿಚ್ಚಿನಂತೆ ಹರಡುತ್ತಿರುವ ಡೆಲ್ಟಾ ಪ್ರಬೇಧ: ಇತ್ತೀಚೆಗೆ ಕರೋನಾ ವೈರಸ್‌ನ ಡೆಲ್ಟಾ ಪ್ರಬೇಧ ಜಗತ್ತಿನ ಹಲವಾರು ದೇಶಗಳಲ್ಲಿ ಶೀಘ್ರ ಗತಿಯಲ್ಲಿ ಹರಡುತ್ತಿರುವ ವಿಚಾರ ತಮಗೆಲ್ಲ ಗೊತ್ತಿದೆ ಎಂದು ಭಾವಿಸುತ್ತೇನೆ. ಈ ಡೆಲ್ಟಾ ಪ್ರಬಂಧವನ್ನು ವಿಜ್ಞಾನಿಗಳು B.1.617.2 ಎಂದು  ಗುರುತಿಸುತ್ತಾರೆ. ಮೊಟ್ಟ ಮೊದಲ ಬಾರಿಗೆ ಡಿಸೆಂಬರ್ 2020ರಲ್ಲಿ ನಮ್ಮ ದೇಶದಲ್ಲಿ ಗುರುತಿಸ ಲ್ಪಟ್ಟ ಈ ಪ್ರಬೇಧವು ಏಪ್ರಿಲ್ 2021ರ ಹೊತ್ತಿಗೆ ಹೆಚ್ಚು ಹರಡುತ್ತಿರುವ ಕರೋನಾ ವೈರಸ್ ಪ್ರಬೇಧವಾಗಿ ಗುರುತಿಸಲ್ಪಟ್ಟಿತು.

ವಿಶ್ವ  ಆರೋಗ್ಯ ಸಂಸ್ಥೆಯ ಪ್ರಕಾರ ಆನಂತರ 80ಕ್ಕೂ ಹೆಚ್ಚಿನ ದೇಶಗಳಿಂದ ಈ ಪ್ರಬೇಧವು ವರದಿಯಾಗಿದೆ. ಇತ್ತೀಚೆಗೆ ಯುಕೆ ಮತ್ತು ಅಮೆರಿಕಗಳಲ್ಲಿ ಈ ಪ್ರಬೇಧವು ಇನ್ನೊಂದು ಹೊಸ ಅಲೆಗೆ ಕಾರಣ ವಾಗುವುದೇ ಎಂಬ ಬಗ್ಗೆ ಪ್ರಬಲವಾದ ಸಂದೇಹಗಳು ಕೇಳಿಬರುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ ಯುಕೆಯಲ್ಲಿ ಇದು ಬೇರೆ ಎ ಪ್ರಬೇಧಗಳಿಗಿಂತ ಪ್ರಮುಖ ಪ್ರಬೇಧ ವಾಗಿ ಹೊರ ಹೊಮ್ಮಿದೆ.

ಸೀಕ್ವೆನ್ಸ್ ಮತ್ತು ಜೀನೋಟೈಪ್ ಮಾಡಿದ ಸುಮಾರು ಶೇ.75-80 ಸಂದರ್ಭದಲ್ಲಿ ಇದು ಕಂಡುಬಂದಿದೆ. ಭಾರತದಲ್ಲಿ ನಿಖರವಾದ ಅಂಕಿ ಸಂಖ್ಯೆಗಳು ಲಭ್ಯವಿಲ್ಲದಿದ್ದರೂ ಇತ್ತೀಚಿನ ಎರಡನೇ ಅಲೆಯ ಹೆಚ್ಚಿನ ಸಂಖ್ಯೆಯ ರೋಗಿಗಳಲ್ಲಿ ಇದು ಕಂಡುಬಂದಿದೆ. ಅಂತಾ ರಾಷ್ಟ್ರೀಯ ಮಟ್ಟದ ತಜ್ಞರು ಡೆಲ್ಟಾ ಪ್ರಬೇಧ ವಿರುವ ದೇಶಗಳು ತಮ್ಮಲ್ಲಿನ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿರುವ ಬಗ್ಗೆ ಹೆಚ್ಚು ಗಮನಿಸಿ ಎಚ್ಚರ ವಹಿಸಬೇಕು. ಅದರಲ್ಲೂ ವ್ಯಾಕ್ಸಿನೇಷನ್ ಪ್ರಮಾಣ ಕಡಿಮೆ ಇರುವ ದೇಶಗಳಲ್ಲಿ ಇದು ತೀವ್ರವಾಗಿ ಹರಡುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ಈ ಪ್ರಬೇಧದ ಲಕ್ಷಣಗಳು ಭಿನ್ನವಾಗಿವಿಯೇ?: ಯುಕೆಯ ವಿಜ್ಞಾನಿಗಳು ಈ ಬಗ್ಗೆ ಹಲವು ಅಧ್ಯಯನ ಗಳನ್ನು ಕೈಗೊಂಡಿ ದ್ದಾರೆ. ಲಂಡನ್‌ನ ಕಿಂಗ್ಸ್ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರುಗಳು ZOE Covid Symptom Study ಎಂಬ ಅಧ್ಯಯನ ಕೈಗೊಂಡಿದ್ದರು. ಅದರ ಪ್ರಕಾರ ತಲೆನೋವು, ಗಂಟಲಿನಲ್ಲಿ ಶೀತ ಮತ್ತು ಸೋಂಕಿನ ಲಕ್ಷಣಗಳು, ಮೂಗು ಸೇರುತ್ತಿರು ವುದು ಡೆಲ್ಟಾ ಪ್ರಬೇಧದ ಮುಖ್ಯ ರೋಗ ಲಕ್ಷಣಗಳು. ಜ್ವರ, ಕೆಮ್ಮು, ವಾಸನೆ ಮತ್ತು ರುಚಿ ನಷ್ಟವಾಗುವುದು – ಇವು ಕೋವಿಡ್ ಕಾಯಿಲೆಯ ಮುಖ್ಯ ರೋಗ ಲಕ್ಷಣಗಳು.

ಹಾಗಾಗಿ ಡೆಲ್ಟಾ ಪ್ರಬೇಧ ತೋರಿಸುವ ರೋಗ ಲಕ್ಷಣಗಳು ತುಂಬಾ ಭಿನ್ನ ಎಂಬುದನ್ನು ಗಮನಿಸಬೇಕು. ಮೇಲಿನ ಅಧ್ಯಯನದ ಮುಖ್ಯಸ್ಥರಾದ ಪ್ರೊ. ಟಿಮ್ ಸ್ಪೆಕ್ಟರ್ ಈ ಡೆಲ್ಟಾ ಪ್ರಬೇಧ ಭಿನ್ನವಾಗಿ ವರ್ತಿಸುತ್ತಿದೆ. ಹಾಗಾಗಿ ಜನರು ಮಾಮೂಲಿ ಶೀತ, ನೆಗಡಿ ಎಂದು ನಿರ್ಲಕ್ಷಿಸುವ ಸಾಧ್ಯತೆಗಳಿವೆ. ಎಂದು ಎಚ್ಚರಿಸುತ್ತಾರೆ. ಯುಕೆಯಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ ಈ ಡೆಲ್ಟಾ ಪ್ರಬೇಧ ಮೊದಲಿನ ಆಲಾ (ಆ.1.17) ಪ್ರಬೇಧಕ್ಕಿಂತ ಶೇ.60ಕ್ಕೂ ಹೆಚ್ಚು ಪ್ರಸರಣಗೊಳ್ಳುತ್ತದೆ.

ಇದು ಮೊದಲಿನ ಪ್ರಬೇಧಗಳಿಗಿಂತ ಹೆಚ್ಚು ವೇಗವಾಗಿ ಹರಡಲು ಮುಖ್ಯ ಕಾರಣ ಎಂದರೆ ವೈರಸ್‌ನ ಸ್ಪೆ ಕ್ ಪ್ರೊಟೀನ್‌ನಲ್ಲಿ
ಆದ ಮುಖ್ಯ ಮ್ಯುಟೇಷನ್. ಚೀನಾದ ವುಹಾನ್‌ನಲ್ಲಿ ಕಂಡುಬಂದ ಪ್ರಬೇಧ ಸಾಮಾನ್ಯ ಮಟ್ಟದ್ದಾಗಿತ್ತು. ವೈರಸ್‌ನ ಅದು ಪ್ರಸರಣ ಮಾಡಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಅಲ್ಲ. ಮ್ಯುಟೇಷನ್ ಹೊಂದಿದ ಆಲಾ ಪ್ರಬೇಧ ಒಂದು ಹೆಜ್ಜೆ ಮುಂದೆ ಹೋಯಿತು. ಈಗ ಡೆಲ್ಟಾ ಪ್ರಬೇಧವು ಮತ್ತೊಂದು ದೊಡ್ಡ ಹೆಜ್ಜೆ ಕ್ರಮಿಸಿ ತೀವ್ರ ಪ್ರಸರಣ ಮಾಡುವ ಗುಣ ಪಡೆದುಕೊಂಡಿದೆ. ಆಲಾ ಪ್ರಬೇಧಕ್ಕಿಂತ ಡೆಲ್ಟಾ ಪ್ರಬೇಧವು ಲಸಿಕೆ ತೆಗೆದುಕೊಂಡವರಲ್ಲಿಯೂ ಸೋಂಕು ತರಬಲ್ಲದು.

ಬೇರೆ ಪ್ರಬೇಧಗಳಿಗಿಂತ ಇದು ಲಸಿಕೆಯ ನ್ಯೂಟ್ರಲೈಷನ್ ಸಾಮರ್ಥ್ಯವನ್ನು ಕುಗ್ಗಿಸಬಲ್ಲದು. ಡೆಲ್ಟಾ ಪ್ರಭೇದದ ಎಲ್ಲಾ  ಮಾಹಿತಿಗಳನ್ನು ತಿಳಿಸಲು ಸೀಮಿತ ಸ್ಥಳಾವಕಾಶದ ಈ ಲೇಖನದಲ್ಲಿ ಸಾಧ್ಯವಾಗಿಲ್ಲ. ವೈದ್ಯ ವಿಜ್ಞಾನಿಗಳು ಇದರ ಬಗ್ಗೆ
ವಿಸ್ತೃತ ಅಧ್ಯಯನ ಕೈಗೊಂಡಿದ್ದು ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ಅನಾವರಣ ಗೊಳ್ಳಬಹುದು. ಈ ಲೇಖನ ಸಿದ್ಧಪಡಿಸುತ್ತಿರುವಾಗಲೇ ಇತ್ತೀಚಿನ ಹೊಸ ಪ್ರಬೇಧ ಡೆಲ್ಟಾ ಪ್ಲಸ್ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿವೆ.

ಇದು K.417 N ಮ್ಯುಟೇಷನ್ ಹೊಂದಿದೆ. ಇದನ್ನು ಈಗ B.1.617.2.1  ಎಂದು ಕರೆಯುತ್ತಾರೆ. ಇದು ಮೊಟ್ಟ ಮೊದಲ ಬಾರಿಗೆ ೨೦೨೧ರ ಮಾರ್ಚ್‌ನಲ್ಲಿ ಯುರೋಪಿನಲ್ಲಿ ಕಾಣಿಸಿಕೊಂಡಿತು. ನಂತರ ಅವು ನೇಪಾಳ ಮತ್ತು ಟರ್ಕಿಯಿಂದ ಬಂದಿರ ಬಹುದೇ ಎಂಬ ಸಂದೇಹ ಬಂದಿದೆ. ಭಾರತದಲ್ಲಿ ಇದರ ಸಂಖ್ಯೆ ೨೫ಕ್ಕೂ ಜಾಸ್ತಿಯಿರಬಹುದೆಂದು ಒಂದು ಅಂದಾಜು. ಯುನೈಟೆಡ್ ಕಿಂಗ್ಡಮ್‌ನಲ್ಲಿ ಹೆಚ್ಚಿನ ಸಂಖ್ಯೆಯ ರೋಗಿಗಳಿದ್ದಾರೆ. ಆರಂಭಿಕ ವರದಿಗಳ ಪ್ರಕಾರ ಈ ಪ್ರಬೇಧವು ಮಾನೋ ಕ್ಲೋನಲ್ ಆಂಟಿಬಾಡಿ ಸಂಯುಕ್ತ ಚಿಕಿತ್ಸೆಗೆ ಬಗ್ಗುವುದಿಲ್ಲ ಎನ್ನಲಾಗಿದೆ.

(ಅಂದರೆ Casirvimab ಮತ್ತು Imdevimab ಔಷಧಗಳ ಸಂಯುಕ್ತ ) ಈ ಕಾಯಿಲೆಯ ವಿವರಗಳನ್ನು ವಿಜ್ಞಾನಿ ಗಳು ಅಧ್ಯಯನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಸ್ಪಷ್ಟ ಸಂಪೂರ್ಣ ಸ್ವರೂಪ ಗೊತ್ತಾಗಬಹುದು.