Wednesday, 11th December 2024

ಪ್ರಜಾಪ್ರಭುತ್ವವೋ ಮಜಾ ಪ್ರಭುತ್ವವೋ ?

ಪ್ರಸ್ತುತ

ಮೋಹನದಾಸ ಕಿಣಿ, ಕಾಪು

ರಾಜಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಕೆಲವೊಂದು ಬೆಳವಣಿಗೆಗಳನ್ನು ನೋಡಿದರೆ ನಾವು ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೋ ಅಥವಾ ಮಜಾಪ್ರಭುತ್ವ ವ್ಯವಸ್ಥೆಯ ಎಂಬುದೊಂದು ಚಿಕ್ಕ ಗೊಂದಲವಾಗುತ್ತದೆ. ಒಂದೆರಡು ಉದಾಹರಣೆಗಳನ್ನು ನೀಡುವುದಾದರೆ, ಇತ್ತೀಚೆಗೆ ಹಾಸನದ
ಸಂಸದ ಪ್ರಜ್ವಲ್ ರೇವಣ್ಣ ಹಲವಾರು ವರ್ಷಗಳಿಂದ ತನ್ನ ಬಳಿ ಬೇರೆ ಬೇರೆ ಕೆಲಸಗಳಿಗೆ ಬರುತ್ತಿದ್ದ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದು ಅದನ್ನು ಆತನ ಕಾರ್ ಚಾಲಕ ಪ್ರಜ್ವಲ್‌ಗೆ ಗೊತ್ತಿz ಗೊತ್ತಿಲ್ಲದೆಯೋ ವಿಡಿಯೊ ಮಾಡಿದ್ದು, ಲೋಕಸಭಾ ಚುನಾವಣೆಯ ಮುಂಚಿನ ದಿನ
ಅದರ ಸಾವಿರಾರು ಪೆನ್ ಡ್ರೈವ್ ಪ್ರತಿಗಳನ್ನು ಮಾಡಿ ಎಡೆ ಹಂಚಿದ್ದು ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಎಲ್ಲವೂ ಈಗ ಹಳೆಯ ಸುದ್ದಿ.

ಮೇ.೨೫ರಂದು ಈ ಸುದ್ಧಿ ಪ್ರಕಟವಾಗುತ್ತದೆ. ೨೭ರಂದು ಪ್ರಜ್ವಲ್ ವಿದೇಶಕ್ಕೆ ಪಲಾಯನ ಮಾಡುತ್ತಾರೆ. ತದ ನಂತರ ಸರಕಾರ ತನಿಖಾ ತಂಡ ರಚಿಸಿ
ಆದೇಶ ಹೊರಡಿಸುತ್ತದೆ. ಇದನ್ನು ಚುನಾವಣೆಯ ಮೇಲೆ ಪರಿಣಾಮ ಬೀರುವ ಉದ್ದೇಶದಿಂದ ಮಾಡಿದ್ದಲ್ಲಿ ಕನಿಷ್ಠ ಒಂದು ವಾರದ ಮೊದಲಾದರೂ ಮಾಡುತ್ತಿದ್ದರು. ಹಾಗಾದರೆ ಇದರ ಉದ್ದೇಶ? ಪ್ರಜ್ವಲ್ ತಂದೆ, ಶಾಸಕ ರೇವಣ್ಣ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಯನ್ನು ಕಿಡ್ನಾಪ್ ಮಾಡಿದ ಆಪಾದನೆ ಮೇರೆಗೆ ದಸ್ತಗಿರಿಯಾಗುತ್ತಾರೆ. ಈ ನಡುವೆ ಆ ಮಹಿಳೆ ತನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ, ತಾನು ಕ್ಷೇಮವಾಗಿದ್ದೇನೆ ಎಂದು ಹೇಳಿzರೆ ಎನ್ನಲಾದ ವಿಡಿಯೊ ಎಲ್ಲಿಂದಲೋ ಹರಿದಾಡುತ್ತದೆ.

ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾರೆ! ಆರಂಭದಲ್ಲಿ ವಿಶೇಷ ತನಿಖಾ ದಳದ ಪೋಲೀಸರು ಸಮ ನೀಡಲು ಬಂದಾಗ ರೇವಣ್ಣ ಅವರಿಗೇ
ಬೆದರಿಕೆ ಹಾಕಿದ್ದರೆನ್ನಲಾಗಿದೆ. ಇದು ನಿಜವಾದರೆ, ನಕಲಿ ವಿಡಿಯೊ ಮಾಡುವುದು, ಜಾಮೀನಿನ ಮೇಲೆ ಹೊರಗೆ ಬಂದು ಸಾಕ್ಷಿ ನಾಶ ಮಾಡುವುದು ಕಷ್ಟದ ವಿಷಯವೇನಲ್ಲ. ಇನ್ನೊಂದು ಪ್ರಕರಣದಲ್ಲಿ, ಸಂತ್ರಸ್ತ ಮಹಿಳೆಯರು ನೀಡುವ ಹೇಳಿಕೆಯನ್ನು ಮಹಿಳಾ ಅಧಿಕಾರಿ ದಾಖಲಿಸಿಕೊಳ್ಳಬೇಕು ಹಾಗೂ ಅದರ ವಿಡಿಯೊ ಚಿತ್ರೀಕರಣ ಮಾಡಬೇಕೆಂದು ಕಾನೂನು ಇದ್ದರೂ ಎರಡನ್ನೂ ಉಲ್ಲಂಘಿಸಲಾಗಿದೆ. ಆ ಪ್ರಕರಣದಲ್ಲೂ ಸಲೀಸಾಗಿ
ಜಾಮೀನು ದೊರೆತರೂ ಆಶ್ಚರ್ಯವಿಲ್ಲ.

ಪ್ರಜ್ವಲ್ ರೇವಣ್ಣ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಬಿಟ್ಟು ಹೋಗುವವರೆಗೂ ಸುಮ್ಮನಿದ್ದು ನಂತರ ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ಸಂಬಂಧಪಡದ ಪ್ರಧಾನಿಯವರಿಗೆ ಪತ್ರ ಬರೆದು, ಅದಕ್ಕೆ ಒಂದಿಷ್ಟು ಪ್ರಚಾರ ಕೂಡಾ ನೀಡಿ ಪ್ರಧಾನಿಯವರು ಕ್ರಮ ಕೈಗೊಂಡಿಲ್ಲ ಎಂಬಂತೆ ಬಿಂಬಿಸಲಾಗುತ್ತದೆ. ಇದೆ ನೋಡುವಾಗ ಎಲ್ಲವೂ ಪೂರ್ವನಿಯೋಜಿತ ನಾಟಕದಂತೆ ಭಾಸವಾಗುತ್ತದೆ. ಏಕೆಂದರೆ ಹಾಸನದ ಚುನಾವಣೆ ಮುಗಿದಿದೆ. ಜೆಡಿಎಸ್ ಬಿಜೆಪಿಯ ಮೈತ್ರಿ ಪಕ್ಷ. ಬೇರೆ ರಾಜ್ಯಗಳಲ್ಲಿ ಇದು ಪರಿಣಾಮ ಬೀರಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿರಬಹುದಲ್ಲ? ಇದಿಷ್ಟು ರಾಜ್ಯದ ವಿಷಯವಾದರೆ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಸಂಪುಟ ಸದಸ್ಯರು ಒಬ್ಬೊಬ್ಬರಾಗಿ
ಕಾರಾಗೃಹ ಸೇರುತ್ತಾರೆ.

ಒಂಬತ್ತು ಬಾರಿ ಸಮ ನೀಡಿದರೂ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್ ಅಂತಿಮವಾಗಿ ನ್ಯಾಯಾಲಯದ ಹಸ್ತಕ್ಷೇಪದ ನಂತರ ಹಾಜರಾಗುತ್ತಾರೆ.
ಜೈಲು ಸೇರಿದ ನಂತರ ವಿಚಾರಣೆಯ ಹಂತದಲ್ಲಿ ಆರೋಗ್ಯ ಮತ್ತಿತರ ನೆಪವೊಡ್ಡಿ ಜಾಮೀನು ಪಡೆಯಲು ಪ್ರಯತ್ನ ಮಾಡುತ್ತಾರೆ. ನಂತರ, ಚುನಾವಣಾ ಪ್ರಚಾರಕ್ಕೆ ಅವರಿಗೆ ಜಾಮೀನು ಸಿಗುತ್ತದೆ. ಕೇಜ್ರಿವಾಲ, ರೇವಣ್ಣ ಮತ್ತು ಇನ್ನೂ ಹಲವಾರು ಪ್ರಭಾವಿಗಳು ಜಾಮೀನು ಸಿಗುವವರೆಗೂ ಅನಾರೋಗ್ಯ ದಿಂದ ಬಳಲುತ್ತಿದ್ದು, ಜಾಮೀನು ಸಿಕ್ಕ ತಕ್ಷಣ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ, ಮೆರವಣಿಗೆ ಮಾಡುತ್ತಾರೆ. ಯಾವುದೋ ಬಲುದೊಡ್ಡ ಸಾಧನೆ
ಮಾಡಿರುವಂತೆ!ಅದೇ ಜನಸಾಮಾನ್ಯರಿಗೆ ಜಾಮೀನು ಅಂತಿರಲಿ, ವಿಚಾರಣೆಯೇ ಇಲ್ಲದೆ ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತಾರೆ.

ಕೇಜ್ರಿವಾಲ್ ಜಾರಿ ನಿರ್ದೇಶನಾಲಯದೆದುರು ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ಮಧ್ಯೆ ಪ್ರವೇಶಿಸಬೇಕಾಯಿತು. ಇದಕ್ಕೂ ಮಿಗಿಲಾಗಿ, ಕೇಜ್ರಿವಾಲ್ ಬಂಧನವಾದ ಕೂಡಲೇ ಅಮೆರಿಕ, ಜರ್ಮನಿ ಮುಂತಾದ ದೇಶಗಳಲ್ಲಿ ಪ್ರತಿಭಟನೆ ನಡೆಯುತ್ತದೆ? ಭ್ರಷ್ಟಾಚಾರದಂತಹ ಗುರುತರ ಆಪಾದನೆ
ಇದ್ದರೂ ಚುನಾವಣಾ ಪ್ರಚಾರಕ್ಕಾಗಿ ಜಾಮೀನು ಸಿಗುತ್ತದೆ. ಜಾಮೀನಿನ ಮೇಲೆ ಹೊರಗೆ ಬಂದ ಕೂಡಲೇ ದೇಶದ ಒಳಗೆ ಮಾತ್ರವಲ್ಲ, ಕೆನಡಾದಂತಹ ದೇಶದಲ್ಲಿ ಖಲಿಸ್ತಾನ್ ಬೆಂಬಲಿಸುವ ಪ್ರದೇಶದಲ್ಲಿ, ಸಂಭ್ರಮಾಚರಣೆ ನಡೆಯುತ್ತದೆ,ಮಾತ್ರವಲ್ಲ ಮೋದಿಯವರ ಪ್ರತಿಕೃತಿಯನ್ನು ಒಂದು ಜೈಲಿನ ರೂಪದ ಕಟಾಂಜನದಲ್ಲಿ ಇರಿಸಿ ಘೋಷಣೆ ಕೂಗಲಾಗುತ್ತದೆ. ಇಂತಹ ದೇಶ ವಿರೋಧಿ ಕೃತ್ಯಕ್ಕೆ ಏನನ್ನೋಣ? ಇಷ್ಟು ಮಾತ್ರವಲ್ಲ, ಜಾರಿ ನಿರ್ದೇಶನಾಲಯ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದರೂ ಕೇಜ್ರಿವಾಲ್ ಸಂಪುಟದ ಹಲವಾರು ಸದಸ್ಯರು ವರ್ಷಗಳಿಂದ ಜೈಲಿನಲ್ಲಿದ್ದು ಅವರ
ಶಿಕ್ಷೆಯನ್ನು ನ್ಯಾಯಾಲಯ ನೀಡಿzದರೂ, ಚುನಾವಣಾ ಭಾಷಣದಲ್ಲಿ, ತಾನು, ತನ್ನ ಬೆಂಬಲಿಗರು ಬಿಜೆಪಿ ಕಚೇರಿಗೆ ಬರುವುದಾಗಿ, ಈಗಾಗಲೇ ಜೈಲಿನಲ್ಲಿ ಇರುವ ಸಿಸೋಡಿಯಾ ಮುಂತಾದವರೊಂದಿಗೆ ತಮ್ಮನ್ನೂ ಜೈಲಿಗೆ ಕಳುಹಿಸಲಿ ಎಂದು ಪಂಥಾಹ್ವಾನ ನೀಡುತ್ತಾರೆ.

ಎಲ್ಲಿಂದೆಲ್ಲಿಯ ಸಂಬಂಧ? ಚುನಾವಣಾ ಪ್ರಚಾರಕ್ಕೆ ಜಾಮೀನು ನೀಡಿದ ಮಾದರಿಯಲ್ಲಿ ತನಗೂ ಜಾಮೀನು ನೀಡುವಂತೆ ಓರ್ವ ಉಗ್ರಗಾಮಿ ಅರ್ಜಿ
ಸಲ್ಲಿಸುತ್ತಾನೆ. ಸಾಲದೆಂಬಂತೆ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಪೂರ್ವ ಅನುಮತಿ ಇಲ್ಲದೆ ಯಾರನ್ನೂ ಬಂಧಿಸುವಂತಿಲ್ಲ ಎಂದು ಆದೇಶ ಹೊರಡಿಸುತ್ತದೆ. ಸಿಬಿಐ ಅಥವಾ ಜಾರಿ ನಿರ್ದೇಶನಾಲಯ ವಿಚಾರಣೆಯ ಹಂತದಲ್ಲಿ ಬಂಧಿಸಿದರೂ ತಕ್ಷಣವೇ ನ್ಯಾಯಾಲಯದೆದುರು ಹಾಜರು
ಪಡಿಸಿ, ಅನುಮತಿ ಪಡೆದೇ ವಶಕ್ಕೆ ಪಡೆಯುತ್ತದೆ. ಹಾಗಿರುವಾಗ, ಮುಂದೊಮ್ಮೆ ರಾಷ್ಟ್ರೀಯ ಭದ್ರತಾ ದಳ ಯಾರನ್ನಾದರೂ ದೇಶದ್ರೋಹದ ಆಪಾದನೆ ಮೇರೆಗೆ ವಶಕ್ಕೆ ತೆಗೆದುಕೊಳ್ಳಬೇಕಾದರೂ ನ್ಯಾಯಾಲಯದ ಪೂರ್ವಾನುಮತಿ ಬೇಕು ಎಂದರೆ ಪರಿಸ್ಥಿತಿ ಏನಾಗಬಹುದು? ಕೊನೆಯದಾಗಿ, ಎರಡು ವಿಭಿನ್ನ ಪ್ರಕರಣಗಳಲ್ಲಿ ಇಬ್ಬರು ಹಿಂದೂ ಹುಡುಗಿಯರ ಕಗ್ಗೊಲೆಯಾಗುತ್ತದೆ.

ಒಂದಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದೆಂದು ಮುಖ್ಯಮಂತ್ರಿ ಘೋಷಣೆ ಮಾಡುತ್ತಾರೆ. ಇನ್ನೊಂದರ ಬಗ್ಗೆ ಮೌನ. ವಿಷಯ ಇಷ್ಟೇ, ಮೊದಲನೇ ಪ್ರಕರಣದಲ್ಲಿ ಕೊಲೆ ಮಾಡಿದವ ಹಿಂದೂ. ಇನ್ನೊಂದರಲ್ಲಿ ಅಪರಾಧ ಅನ್ಯ ಧರ್ಮೀಯ! ಜನರ ಆಶೋತ್ತರಗಳಿಗೆ ಪೂರಕ ಆಡಳಿತವಿದ್ದರೆ ಅದು ಪ್ರಜಾಪ್ರಭುತ್ವ, ಬದಲಿಗೆ ಸ್ವಾರ್ಥ ಸಾಧನೆಗಾಗಿ ಇದ್ದಾಗ ಮಜಾ ಪ್ರಭುತ್ವ. ಇದೇ ಇಂದಿನ ವ್ಯವಸ್ಥೆಯ ನಿಜವಾದ ಮುಖ.