ವಿಶ್ಲೇಷಣೆ
ಮಂಜುನಾಥ ಅಜ್ಜಂಪುರ
ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಪ್ರಜಾಪ್ರಭುತ್ವವು ಉಳಿಯಲು ಬೆಳೆಯಲು, ಕಾಂಗ್ರೆಸ್ ಗಾಂಧಿ ನೆಹರೂ ಕಾರಣರಲ್ಲ, ಬದಲಿಗೆ, ಈ ದೇಶವು ಅನೇಕ ಸಾವಿರ ವರ್ಷಗಳಿಂದ ಸನಾತನ ಹಿಂದೂ ಮೌಲ್ಯಗಳನ್ನು ಅನುಸರಿಸಿ ಕೊಂಡು ಬಂದಿರುವುದೇ ಕಾರಣ.
ಪ್ರಜಾಪ್ರಭುತ್ವವೆಂಬುದು ಬಹಳ ದೊಡ್ಡ ಮೌಲ್ಯ. ಅದು ನಮ್ಮ ಅಸ್ತಿತ್ವ, ಅದು ನಮ್ಮ ಉಸಿರು. ಪ್ರಸ್ತುತ ಭಾರತದ ನಮ್ಮಂತಹ ಹಿರಿಯ ಮತದಾರರಿಗೆ ಪ್ರಾಯಶಃ ಪ್ರಜಾ ಪ್ರಭುತ್ವವೆಂಬುದು ಅಮೂಲ್ಯ ಎಂದು ಅತಿ ಹೆಚ್ಚು ಅನ್ನಿಸಲು ಕಾರಣ ತುರ್ತು ಪರಿಸ್ಥಿತಿಯೇ.
ಮುಕ್ತವಾಗಿ ಬರೆಯಲಾಗದ, ಬರೆಯುವುದಿರಲಿ ಮಾತನಾಡಲಾಗದ, ಮಾತನಾಡುವು ದಿರಲಿ ನಗಲೂ ಆಗದ, ಉಸಿರು ಕಟ್ಟು ವಂತಹ ಆ ಸ್ಥಿತಿ ಅನುಭವಿಸಿದವರಿಗೇ ಗೊತ್ತು. ತುರ್ತುಪರಿಸ್ಥಿತಿಯ ಪೂರ್ಣಾವಧಿಯ ಕಾಲ ಪತ್ರಿಕೆಗಳು ನಿರ್ವೀರ್ಯವಾಗಿ ಬಿಟ್ಟವು, ನಿಸ್ತೇಜವಾಗಿಬಿಟ್ಟವು. 21ನೆಯ ಶತಮಾನದ ಈ ವೈಜ್ಞಾನಿಕ ಯುಗದಲ್ಲಿ ಸಹಜವಾಗಿ ನಾನಾ ಮಾಧ್ಯಮಗಳಿವೆ. ಆಗ ಪತ್ರಿಕೆಗಳು, ರೇಡಿಯೋ ಬಿಟ್ಟು ಬೇರೇನೂ ಇರಲಿಲ್ಲ. ಅಂದಿನ ಟೆಲಿಫೋನ್ ಟೆಲಿಪ್ರಿಂಟರುಗಳು ಸರಕಾರಗಳಿಗೆ ಮಾತ್ರ ಉಪಯೋಗವಾಗು ವಂತಿದ್ದವು ಮತ್ತು ಟೆಲಿಗ್ರಾಮ್ ಕೇವಲ ಮರಣಸಂದೇಶ ವಾಹಕವಾಗಿ ಹೋಗಿತ್ತು.
ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಸರ್ವಾಧಿಕಾರಿ ಎಂಬ ಅಭಿದಾನಕ್ಕೆ ‘ಇಂದಿರಾ’ ಇನ್ನೊಂದು ಹೆಸರು ಎನ್ನು ವಂತಾಗಿದೆ. ವಿಚಿತ್ರವೆಂದರೆ, ಅವರ ಅಪ್ಪ ಪ್ರಧಾನಿಯಾಗಿದ್ದಾಗ ಅತಿ ಹೆಚ್ಚು ಪುಸ್ತಕಗಳು ನಿಷೇಧಕ್ಕೆ ಒಳಪಟ್ಟವು, ಸ್ವತಂತ್ರವಾಗಿ ಚಿಂತಿಸುವ ಲೇಖಕರು ಜೈಲು ಸೇರಬೇಕಾಯಿತು. ಗಾಂಧಿವಾದಿ ಧರ್ಮಪಾಲರು ಸೆರೆಮನೆ ಪಾಲಾದಷ್ಟೇ ವಿಚಿತ್ರವಾದುದು ಹಿಂದೀ ಚಿತ್ರಗೀತೆ ಬರೆಯುತ್ತಿದ್ದ ಮಜ್ರೂ ಹ್ ಸುಲ್ತಾನಪುರಿ ಅವರ ಬಂಧನ ಸಹ. ನೆಹರು ಇಷ್ಟಪಡದ ಚಿಂತನೆಗಳಿರುವ ಪುಸ್ತಕಗಳು ಸಾದರ ಸ್ವೀಕಾರದಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.
ಆದರೂ, ಕಾಂಗ್ರೆಸಿಗರು ಭಾರತದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಅರಳಿದ್ದು ಬೆಳೆದಿದ್ದು ಜವಾಹರಲಾಲ್ ನೆಹರು ಅವರಿಂದಲೇ ಎಂದು ಉಘ್ಘಡಿಸುವುದುಂಟು. ಇನ್ನು ಕಾಂಗ್ರೆಸೇತರ ಸರಕಾರಗಳನ್ನು ಉರುಳಿಸುವುದು, ಒಕ್ಕೂಟದ (Union) ಮೂಲಭೂತ
ಪರಿಕಲ್ಪನೆಯನ್ನೇ (Federal Structure) ಪರಿಹಾಸಕ್ಕೀಡು ಮಾಡುವುದು, ನೆಹರು, ಇಂದಿರಾ ಇಬ್ಬರೂ ಹುಟ್ಟುಹಾಕಿದ
ಪರಂಪರೆ, ಬಿಟ್ಟುಹೋದ ಅನಪೇಕ್ಷಿತ ವಾರಸಿಕೆ (ಪ್ರತಿಪಕ್ಷಗಳ ಸರಕಾರಗಳನ್ನು ಅದೆಷ್ಟು ಬಾರಿ ಉರುಳಿಸಲಾಯಿತೆಂದರೆ,
ಅಂತಹ ಸಂವಿಧಾನಾತ್ಮಕ ಅಕ್ರಮವನ್ನು ತತ್ತ್ವಶಃ ವಿರೋಧಿಯತ್ತ ಬಂದ ಭಾರತೀಯ ಜನಸಂಘ – ಭಾರತೀಯ ಜನತಾ ಪಕ್ಷಗಳಿಗೆ ಸೇರಿದ ನರೇಂದ್ರ ಮೋದಿಯವರು, ಅಪ್ಪಿತಪ್ಪಿಯೂ ಪ್ರತಿಪಕ್ಷಗಳ ಸರಕಾರಗಳನ್ನು ಉರುಳಿಸುವ, ವಜಾ ಮಾಡುವ ದುಃಸಾಹಸಕ್ಕೆ ಹೋಗಲಿಲ್ಲ.
ಪಶ್ಚಿಮ ಬಂಗಾಳದ ಹಿಂದೂ ವಿರೋಧಿ ಮಮತಾ ಸರಕಾರವನ್ನು ಕಿತ್ತೆಸೆಯಲು ಕಾರಣಗಳಿದ್ದರೂ ವಜಾ ಮಾಡಿಲ್ಲ)
ಭಾರತದ್ದಿರಲಿ, ವಿದೇಶಗಳ ಸುದ್ದಿಗಳೂ ತುರ್ತುಪರಿಸ್ಥಿತಿಯಲ್ಲಿ ಸೆನ್ಸಾರ್ ಆಗಿರುತ್ತಿದ್ದವು. ರೇಡಿಯೋದಲ್ಲಿ ಹಾಡುಗಳನ್ನು – ಸಂಗೀತವನ್ನಾದರೂ ಕೇಳಬಹುದಿತ್ತು. ಆಗ ಹೆಚ್ಚು ನಿರುಪಯುಕ್ತವಾದುದು ಪತ್ರಿಕಾ ಮಾಧ್ಯಮವೇ. ತುರ್ತು ಪರಿಸ್ಥಿತಿಯ ಅನಂತರದ ನಾಲ್ಕೂವರೆ ದಶಕಗಳ ಹಿನ್ನೋಟದಿಂದ ಮೂಡುವ ವಿಷಾದಪೂರ್ಣ ಅನಿಸಿಕೆಯೆಂದರೆ, ನಮ್ಮ ಪತ್ರಿಕೆಗಳಿಗೆ ಪ್ರಜಾಪ್ರಭುತ್ವದ ನಿಜವಾದ ಬೆಲೆ ಅರ್ಥವಾಗಿಲ್ಲ ಎನ್ನುವುದೇ ಆಗಿದೆ.
ಪ್ರಜಾಪ್ರಭುತ್ವವಿಲ್ಲದೆ ಹೋದರೆ, ಬೇರೆ ಮಾಧ್ಯಮಗಳಾದರೂ ಉಳಿದುಕೊಂಡಾವು, ಪತ್ರಿಕಾ ಮಾಧ್ಯಮ ಉಳಿಯುವುದಿಲ್ಲ ಎಂಬ ಸತ್ಯವನ್ನಾದರೂ ನಮ್ಮ ಪತ್ರಿಕಾ ಸಂಪಾದಕರು – ಪತ್ರಕರ್ತರು ಅರಿಯಬೇಕಾಗಿತ್ತು. ಏಕೆಂದರೆ, ಪ್ರಜಾಪ್ರಭುತ್ವವಿಲ್ಲದ ಕಮ್ಯು ನಿಸ್ಟ್ ಮತ್ತು ಇಸ್ಲಾಮೀ ಪ್ರಭುತ್ವಗಳಲ್ಲಿ ಪತ್ರಿಕೆಗಳಿಗೆ ಯಾವುದೇ ಸ್ಕೋಪ್ ಇಲ್ಲ. ಪತ್ರಿಕೆಗಳಿಗಿರಲಿ, ನ್ಯಾಯಾಲಯಗಳಿಗೇ ಮುಕ್ತ ಅವಕಾಶ – ಸ್ವಾತಂತ್ರ್ಯವಿಲ್ಲ.
ಆದರೂ, ನಮ್ಮ ಬಹುತೇಕ ನ್ಯಾಯವಾದಿಗಳು, ಪತ್ರಿಕಾ ಸಂಪಾದಕರು ಪತ್ರಕರ್ತರು, ಕಾಂಗ್ರೆಸ್ – ಕಮ್ಯುನಿಸ್ಟ್ – ಇಸ್ಲಾಮೀ ಶಕ್ತಿಗಳನ್ನೇ ಬೆಂಬಲಿಸುವುದು ಅಸಹಜವಾಗಿದೆ. ಸರಿಯಾಗಿ ಪರಾಮರ್ಶಿಸಿದರೆ, ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಪ್ರಜಾಪ್ರಭುತ್ವವು ಉಳಿಯಲು ಬೆಳೆಯಲು, ಕಾಂಗ್ರೆಸ್ ಗಾಂಧಿ ನೆಹರೂ ಕಾರಣರಲ್ಲ, ಬದಲಿಗೆ, ಈ ದೇಶವು ಅನೇಕ ಸಾವಿರ ವರ್ಷಗಳಿಂದ ಸನಾತನ ಹಿಂದೂ ಮೌಲ್ಯಗಳನ್ನು ಅನುಸರಿಸಿಕೊಂಡು ಬಂದಿರುವುದೇ ಕಾರಣ. ಪ್ರಜಾಪ್ರಭುತ್ವವು ಈ ಮಣ್ಣಿನ ಲ್ಲಿಯೇ ಇದೆ.
ಇಸ್ಲಾಮೀ ಪ್ರಭುತ್ವಗಳಾಗಿಯೇ ಹುಟ್ಟಿ ಬೆಳೆದ ಪಶ್ಚಿಮ – ಪೂರ್ವ ಪಾಕಿಸ್ತಾನ, ಬಾಂಗ್ಲಾದೇಶಗಳು ಬಹುಕಾಲ ಸೈನಿಕ ಸರ್ವಾಧಿ ಕಾರದಲ್ಲಿ ಮುಂದುವರಿಯಲು ಹಿಂದೂ ಮೌಲ್ಯಗಳಿಂದ ಆ ದೇಶಗಳು ದೂರ ಸರಿದುದೇ ಕಾರಣ. ಈ ಹಿನ್ನೆಲೆಯಲ್ಲಿ ನಮ್ಮ ಪತ್ರಿಕೆಗಳಿಗೆ ಕಮ್ಯುನಿಸ್ಟ್ ಮತ್ತು ಇಸ್ಲಾಮೀ ಪ್ರಭುತ್ವಗಳ ಪ್ರಜಾಪ್ರಭುತ್ವ-ವಿರೋಧಿ ಸ್ವರೂಪ ಬೇಗ ಅರ್ಥವಾಗಬೇಕಿತ್ತು. ಅಪಾರ ಬಹುಮತ ಪಡೆದು ಸರ್ವಾಧಿಕಾರಿಗಳಾಗಿ ಮೆರೆದ ಇಂದಿರಾ – ರಾಜೀವ್ ಅವರುಗಳು ಚುನಾವಣೆಗಳಲ್ಲಿ ಸೋತು ಹೋದುದು, ಅಧಿಕಾರವನ್ನು ಕಳೆದುಕೊಂಡು ಬೀದಿಪಾಲಾದುದು ನಮ್ಮ ಸಂವಿಧಾನದ ಮತ್ತು ನಮ್ಮ ಸಂವಿಧಾನವನ್ನು ರೂಪಿಸಿದವರ ಚಿಂತನೆಯ ವೈಶಿಷ್ಟ್ಯ – ಸೊಬಗು.
ಕಾಂಗ್ರೆಸ್ ಪಕ್ಷದಲ್ಲಂತೂ ಎಂದೂ ಆಂತರಿಕ ಪ್ರಜಾಪ್ರಭುತ್ವವಿರಲಿಲ್ಲ. ಸೋತು ನಾಶವಾಗಿದ್ದರೂ ಈಗಲೂ ಅಲ್ಲಿ ಪ್ರಜಾ ಪ್ರಭುತ್ವದ ಮೌಲ್ಯಗಳಿಗೆ ಅವಕಾಶ ಇಲ್ಲ. ಆ ಪಕ್ಷದ ಇತಿಹಾಸವೇ ಈ ಮಾತಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಸೇರಿದಂತೆ, ನಮ್ಮ ರಾಜಕೀಯ ಪಕ್ಷಗಳು ಚುನಾವಣೆಗಳನ್ನು – ಮತದಾನ ವ್ಯವಸ್ಥೆಯನ್ನು ಸಾಕಷ್ಟು ಕುಲಗೆಡಿಸಿವೆ. ಆದರೂ, ಇತಿಹಾಸದ ಪರಿಪ್ರೇಕ್ಷ್ಯ
ದಲ್ಲಿ 1977 ಮತ್ತು 1989ರ ಚುನಾವಣೆಗಳು ಮತ್ತೆ ಮತ್ತೆ ನಮ್ಮ ಮರು-ವಿಶ್ಲೇಷಣೆ ಅವಲೋಕನಗಳಿಗೆ ಒಳಪಡಬೇಕಾಗು ತ್ತವೆ.
1977ರ ಮಹತ್ವದ ಚುನಾವಣೆಗಳಲ್ಲಿ ಸರ್ವಾಧಿಕಾರಿ ಇಂದಿರಾ ಅವರನ್ನು ಕಿತ್ತೆಸೆದವರು ದೇಶದ ಹಿಂದೀ ಭಾಷಿಕರು (Hindi Belt) ಎನ್ನುವುದೂ ಇಲ್ಲಿ ನೆನಪಿಸಿಕೊಳ್ಳಬೇಕಾದುದೇ. ದಕ್ಷಿಣ ಭಾರತದ ನಾವು ಆಗಲೂ ಇಂದಿರಾ ಅವರನ್ನೇ ಬೆಂಬಲಿಸಿ ದ್ದೆವು, ಸರ್ವಾಧಿಕಾರವನ್ನೇ ಸಮರ್ಥಿಸಿದ್ದೆವು. ಇದು ವಿಚಿತ್ರ ಆದರೂ ನಿಜ, ಎನ್ನುವಂತಹ ಕಟುಸತ್ಯ. ಭಾರತದಲ್ಲಿ ಆದ ಬಹಳ ಮುಖ್ಯವಾದ ಐತಿಹಾಸಿಕ ಬದಲಾವಣೆಯೆಂದರೆ, 2014ರ ಚುನಾವಣೆಗಳಲ್ಲಿ ಸ್ವದೇಶೀ ಚಿಂತನೆಯ ಪಕ್ಷವೊಂದು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದುದು. ಕಾಂಗ್ರೆಸ್ ನೇತೃತ್ವದ ಭ್ರಷ್ಟ ಸರಕಾರವೊಂದು ಉರುಳಿತು, ಎನ್ನುವುದಕ್ಕಿಂತ ಪ್ರಜಾಪ್ರಭುತ್ವದ ಪರವಾದ ಮತ್ತು ಸರ್ವಾಧಿಕಾರಕ್ಕೆ ವಿರುದ್ಧವಾದ ಸರಕಾರ ಬಂತು ಎನ್ನುವುದೇ ಮುಖ್ಯವಾದುದು.
ಈ 2014ರ ಚುನಾವಣೆಗಳಲ್ಲೂ (ಕರ್ನಾಟಕದ ಬಹುಮೂಲ್ಯ ಕೊಡುಗೆಯನ್ನು ಹೊರತುಪಡಿಸಿದರೆ) ದಕ್ಷಿಣ ಭಾರತದ ಪಾತ್ರ ನಗಣ್ಯವೇ ಆಗಿದೆ. ಪ್ರಜಾ ಪ್ರಭುತ್ವಕ್ಕೆ ಬೆಲೆ ಕೊಡದ ಕಾಂಗ್ರೆಸ್ – ಕಮ್ಯುನಿಸ್ಟ್ – ಜಿಹಾದೀ ಶಕ್ತಿಗಳಿಗೇ ದಕ್ಷಿಣ ಭಾರತವು ಬೆಂಬಲ ವನ್ನು ಮುಂದುವರಿಸುತ್ತ ಬಂದಿರುವುದು ವಿಷಾದದ ಸಂಗತಿಯೇ. ದಕ್ಷಿಣ ಭಾರತದ ಈ ಮೂರೂ ಶಕ್ತಿಗಳಿಗೆ ಸ್ವತಃ ಸೇರಿದವರು ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತಿರುವುದು, ಹಿಂದೀ ಭಾಷಿಕರ ಮತ-ಶಕ್ತಿಯಿಂದ ಮತ್ತು 1977 ಮತ್ತು 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಜಾಪ್ರಭುತ್ವವಾದಿ ರಾಜಕೀಯ ಪಕ್ಷಗಳ ಕಾರಣದಿಂದ ಎಂಬುದು ವಿರೋಧಾಭಾಸ ವೆನಿಸಿದರೂ ಸತ್ಯ ಸಂಗತಿಯೇ.
ನಮ್ಮ ಕನ್ನಡನಾಡಿನಲ್ಲೂ ನಾವು ದ್ರಾವಿಡರು. ಹಿಂದೀ ಭಾಷಿಕರು ನಮ್ಮ ಶತ್ರುಗಳು. ಹಿಂದೀ ಭಾಷೆಯಿಂದ ಕನ್ನಡಕ್ಕೆ
ಅನ್ಯಾಯವಾಗುತ್ತಲೇ ಇದೆ ಎಂದು ವಾದಿಸುವವರಿದ್ದಾರೆ. ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷ್ ಮಾಧ್ಯಮದಿಂದ ಆಗಿರುವ
ಮತ್ತು ಆಗುತ್ತಲೇ ಇರುವ ಅಪಾಯಗಳನ್ನು ಬೇಕೆಂದೇ ಹೊರತುಪಡಿಸಿ, ಹಿಂದೀ ವಿರೋಧಿಸುವ ವಾದಬ್ರಹ್ಮರಿದ್ದಾರೆ. ನಿಮ್ಮ ಇಂತಹ ವಾದಮಂಡನೆ ಸಾಧ್ಯವಾಗಿರುವುದು ಹಿಂದೀ ಭಾಷಿಕರ ಕೃಪೆಯಿಂದ ದೊರೆತಿರುವ ಪ್ರಜಾಪ್ರಭುತ್ವದಿಂದಲೇ ಎಂದು ನಾನು ‘ಓರಾಟಗಾರ’ರನ್ನು ಛೇಡಿಸುತ್ತಿರುತ್ತೇನೆ.
ಇದೀಗ 2022ರ ಇತಿಹಾಸ-ನಿರ್ಣಾಯಕ ಚುನಾವಣೆಗಳಲ್ಲಿ ಹಿಂದೀ ಭಾಷಿಕರ ಉತ್ತರಪ್ರದೇಶದಲ್ಲಿ ಮೋದಿ- ಯೋಗಿ ನೇತೃತ್ವದ ಭಾಜಪ ಭಾರೀ ಬಹುಮತವನ್ನು ಮತ್ತೆ ಪಡೆದು ದಾಖಲೆ ಮಾಡಿದೆ. ಭಾರತ್ ಮಾತಾಕೀ ಜೈ, ಜೈ ಶ್ರೀರಾಮ ಎನ್ನುವ ಪಕ್ಷವೊಂದು ಮತ್ತೆ ಪೂರ್ಣಾಧಿಕಾರ ಪಡೆದಿರುವುದು ಬರೀ ಉತ್ತರಪ್ರದೇಶ ಎಂಬ ರಾಜ್ಯಕ್ಕಲ್ಲ, ಇಡೀ ಭಾರತಕ್ಕೆ ಶುಭಸೂಚನೆಯಾಗಿದೆ, ಇಡೀ ದೇಶದ ಭವಿಷ್ಯಕ್ಕೆ ಆಶಾದಾಯಕವಾಗಿದೆ. ಮುಖ್ಯವಾಗಿ ಪ್ರಜಾಪ್ರಭುತ್ವ ಎಂಬ ಮೌಲ್ಯ ಉಳಿದಿದೆ, ಉಳಿಯುತ್ತದೆ.
ಹಾಗಾಗಿ ಇದು ಬಹಳ ಬಹಳ ದೊಡ್ಡ ಸಂಗತಿ. ಈ ಚುನಾವಣಾ ಫಲಿತಾಂಶಗಳ ಸ್ವಾಗತಾರ್ಹ ಸಾರವೇ ಇದು.