Sunday, 15th December 2024

ಪ್ರಜಾಪ್ರಭುತ್ವಕ್ಕೆ ಧರ್ಮ, ಜಾತಿಗಳು ಮಾರಕ

Dr B R Ambedkar

ಸ್ವಾಸ್ಥ್ಯ ಸಂಪದ

Yoganna55@gmail.com

ಕರ್ನಾಟಕದ ವಿಧಾನಸಭೆಯ ಚುನಾವಣೆಗಳ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳಲ್ಲೂ ಜರುಗುತ್ತಿರುವ ಧರ್ಮ ಮತ್ತು ಜಾತಿಗಳ
ಹಿನ್ನೆಲೆಯ ಅಭ್ಯರ್ಥಿಗಳ ಆಯ್ಕೆ, ಅವಕಾಶವಾದಿ ಪಕ್ಷಾಂತರ, ನಾನಾ ಜಾತಿಗಳು ಸಾರ್ವಜನಿಕವಾಗಿ ನಮಗಿಷ್ಟು ಸೀಟುಗಳನ್ನು ನೀಡಿ ಎಂದು ಪಕ್ಷಗಳಿಗೆ ತಾಕೀತು ಮಾಡುತ್ತಿರುವುದು, ಆಯಾಯ ಜಾತಿ, ಧರ್ಮದ ಜಾತಿಯವರಿಗೆ ಮೀಸಲಿಗೆ ಹೋರಾಡುತ್ತಿ
ರುವುದು ಮತ್ತು ಆಯಾಯ ಜಾತಿಗಳಿಗೆ ಸೀಟುಗಳ ಬೇಡಿಕೆ ಇಡುತ್ತಿರುವುದು, ಯಾವುದೇ ಪ್ರಜ್ಞಾವಂತ, ದೇಶಭಕ್ತ, ಪ್ರಜಾಪ್ರಭುತ್ವ ವಾದಿಯ ಮನಸ್ಸನ್ನು ತಲ್ಲಣಗೊಳಿಸದಿರಲು ಅಸಾಧ್ಯ.

ಸ್ವಾತಂತ್ರ್ಯ ಬಂದ ನಂತರ ಪ್ರಥಮ ದೇಶದ ಸರ್ಕಾರ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವ ದಲ್ಲಿ ರಚಿಸಿದ ಸಂವಿಧಾನ ರಚನಾ ಸಮಿತಿ ಅತಿ ದೀರ್ಘವಾಗಿ ಚರ್ಚಿಸಿ, ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ಪರಾಮರ್ಶಿಸಿ ಸಂಸದೀಯ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯೇ ನಮ್ಮ ದೇಶಕ್ಕೆ ಸೂಕ್ತವೆಂದು ತೀರ್ಮಾನಿಸಿತು.

‘ಜನರಿಂದ, ಜನರಿಗೋಸ್ಕರ ಮತ್ತು ಜನರಿಗಾಗಿ’ ಎಂಬ ತತ್ವದಡಿಯಲ್ಲಿ ಪ್ರಜಾಪ್ರಭುತ್ವದ ಬುನಾದಿಯ ಸರ್ಕಾರವೇ ಶ್ರೇಷ್ಠವೆಂದು ಅದರ ರೂಪುರೇಷೆಗಳ ಅಡಿಯಲ್ಲಿ ಸಂವಿಧಾನ ರಚಿತವಾಗಿ ೧೯೫೦ ಜನವರಿ ೨೬ ರಂದು ಸಂವಿಧಾನವನ್ನು ದೇಶಾದ್ಯಂತ ಚಾಲನೆಗೆ ನೀಡಲಾಯಿತು.

ಆಡಳಿತಕ್ಕಾಗಿ ರಾಜಕೀಯ ಪಕ್ಷಗಳಾಧಾರಿತ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳಿಸಲಾ ಯಿತು. ರಾಜಕೀಯ ಪಕ್ಷಗಳ ಸಂಖ್ಯೆಗೆ ಮಿತಿ ಹೇರದ ಕಾರಣ ಪ್ರಾರಂಭದಲ್ಲಿಯೇ ಹಲವಾರು ಪಕ್ಷಗಳು ಹುಟ್ಟಿಕೊಂಡು ಮೊದಲ ಲೋಕಸಭಾ ಚುನಾವಣೆ ಯಲ್ಲಿಯೇ ಸುಮಾರು ೫೩ ರಾಜಕೀಯ ಪಕ್ಷಗಳು ಪಾಲ್ಗೊಂಡಿದ್ದವು.

ಸುಮಾರು ೧೭ಕೋಟಿ ಮತದಾರರಿದ್ದ ಮೊದಲನೆ ಚುನಾವಣೆಯಲ್ಲಿ ಅಂದು ಇದ್ದ ೪೮೯ ಲೋಕಸಭಾ ಸ್ಥಾನಗಳಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ೩೬೪ ಸ್ಥಾನಗಳನ್ನು, ಇನ್ನುಳಿದ ಎಲ್ಲ ಪಕ್ಷಗಳು ಸೇರಿ ೧೨೫ ಸ್ಥಾನ ಗಳನ್ನು ಗಳಿಸಿದ್ದವು. ವಿಪರ್ಯಾಸ ವೆಂದರೆ ಪ್ರಾರಂಭ ದಲ್ಲಿಯೇ ಈ ದೇಶದಲ್ಲಿ ರಾಜಕೀಯ ಪಕ್ಷಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಎಲ್ಲ ವಿರೋಧ ಪಕ್ಷಗಳು ಸೇರಿ ೧೨೫ ಸೀಟುಗಳನ್ನು ಪಡೆದಿದ್ದರೂ ಇವೆಲ್ಲವೂ ಒಗ್ಗಟ್ಟಾಗಿ ಪ್ರಬಲ ಪ್ಛ್ರತಿಪಕ್ಷದ ಉಗಮಕ್ಕೆ ಲೋಕಸಭೆಯ ಒಳಗೆ ಮತ್ತು ಹೊರಗೆ ನಾಂದಿ ಹಾಕಲೇ ಇಲ್ಲ. ಅಂದು ಕಾಂಗ್ರೆಸ್ ಒಳಗೊಂಡಂತೆ ಬಹುಪಾಲು ಪಕ್ಷಗಳಲ್ಲಿದ್ದ ರಾಜಕೀಯ ನಾಯಕರು ಗಳು ದೇಶಪ್ರೇಮಿಗಳಾಗಿದ್ದು, ಸಂವಿಧಾನದ ಮೂಲ ಆಶಯಗಳನ್ನು ಕಾಪಾಡುವ ಮನಸ್ಸುಳ್ಳವರಾಗಿದ್ದರು. ಧರ್ಮ ಮತ್ತು ಜಾತಿ ರಾಜಕಾರಣದಿಂದ ದೂರವಿದ್ದು, ಅದು ಅವರವರ ವೈಯಕ್ತಿಕ ವಿಚಾರಕ್ಕಷ್ಟೇ ಸೀಮಿತವಾಗಿತ್ತು.

ಭಾರತ ವಿಸ್ತೀರ್ಣದಲ್ಲಿ ೭ನೇ ಸ್ಥಾನದಲ್ಲಿದ್ದರೂ ಅತಿ ಹೆಚ್ಚು ಜನಸಂಖ್ಯೆಯನ್ನುಳ್ಳ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಸುಮಾರು ೮೦ ದೇಶಗಳು ನಿರ್ದಿಷ್ಟ ಧರ್ಮಗಳ ಆಧಾರದ ಮೇಲೇ ಆಡಳಿತ ಮಾಡುವ ಧಾರ್ಮಿಕ ಸಂವಿಧಾನ ಹೊಂದಿವೆ. ಆದರೆ ಭಾರತದ ಸಂವಿಧಾನ ಧರ್ಮ ನಿರಪೇಕ್ಷೆಯನ್ನು ಹೊಂದಿದ್ದು, ಯಾವುದೇ ಧರ್ಮದ ಆಧಾರದ ಮೇಲೆ ಆಡಳಿತ
ನಡೆಸುವಂತಿಲ್ಲ.

ಭಾರತದಲ್ಲಿ ಶೇ. ೮೦ ಭಾಗ ಹಿಂದೂ ಧರ್ಮ, ಶೇ. ೧೪.೨ ಇಸ್ಲಾಂ ಧರ್ಮ ಮತ್ತು ಶೇ. ೨.೩ ಕ್ರೈಸ್ತ ಧರ್ಮ ಗಳ ಪಾಲಕರಿದ್ದಾರೆ. ಪ್ರಪಂಚದಲ್ಲಿ ಕ್ರಿಶ್ಚಿಯನ್ ಧರ್ಮದ ಪಾಲಕರು ಮೊದಲ ಸ್ಥಾನದಲ್ಲಿದ್ದು, ಇಸ್ಲಾಂ ಧರ್ಮ ಪಾಲಕರು ೨ನೇ ಸ್ಥಾನದಲ್ಲಿಯೂ, ಹಿಂದೂಗಳು ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಹೊರತುಪಡಿಸಿ ಇನ್ನಿತರ ಜಾತಿಗಳ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ.

ಆದರೆ ಪರಿಶಿಷ್ಟ ಜಾತಿ ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು ಹಾಗೂ ಎಲ್ಲ ಬಗೆಯ ಶೋಷಣೆಗೆ
ಒಳಗಾಗಿರುವವರಿಗೆ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರಗಳು ಪ್ರೋತ್ಸಾಹ ನೀಡಬೇಕೆಂಬುದಿದೆ. ಭಾರತೀಯ ಜಾತಿ ವ್ಯವಸ್ಥೆಯನ್ನು ಪ್ರಾರಂಭ ದಿಂದ ಗಮನಿಸಿದಾಗ ಅವರವರ ಜಾತಿ ಆಧಾರದ ಮೇಲೆಯೇ ತುಳಿತಕ್ಕೆ ಒಳಗಾಗಿರುವುದು ಮತ್ತು
ಶೋಷಣೆಗೆ ಒಳಗಾಗಿರುವುದನ್ನು ನಿರ್ವಿವಾದವಾಗಿ ಗುರುತಿಸಬಹುದಾಗಿದೆ.

ಶತಮಾನಗಳಿಂದ ತುಳಿತಕ್ಕೊಳಗಾದ ವಂಶವಾಹಿ ತನ್ನ ಗುಣದಲ್ಲೂ ಬದಲಾವಣೆಯಾಗಿ ತುಳಿಯಲ್ಪಟ್ಟ ಜಾತಿಯವರ ಸಾಮರ್ಥ್ಯ ವಂಶವಾಹಿಗಳಲ್ಲಿಯೇ ಅದುಮಲ್ಪಟ್ಟಿದೆ. ಇದರಿಂದ ಈ ವರ್ಗದವರಿಗೆ ಮೀಸಲು ಅತ್ಯವಶ್ಯಕ ಎಂಬುದು ವೈಜ್ಞಾನಿಕ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ಹೊರತುಪಡಿಸಿ ಇನ್ನಿತರ ಜಾತಿ/ವರ್ಗಗಳಿಗೆ ರಾಜ
ಕೀಯ ಮೀಸಲು ನೀಡಬೇಕೆಂಬುದು ಸಂವಿಧಾನದಲ್ಲಿಲ್ಲ. ಆದರೂ ರಾಜಕೀಯ ಪಕ್ಷಗಳು ಆಯಾಯ ಜಾತಿ ಮತಗಳನ್ನು ಸೆಳೆಯಲು ಆಯಾಯ ಕ್ಷೇತ್ರ ಗಳಲ್ಲಿ ಅಧಿಕ ಸಂಖ್ಯೆಯಲ್ಲಿರುವ ಜಾತಿಯವರಿಗೆ ಅಸಂವಿಧಾನಿಕವಾಗಿ ಟಿPಟ್ ನೀಡಿ ಅಧಿಕಾರ
ಹಿಡಿಯುವ ಹುನ್ನಾರ ನಡೆಸುತ್ತಿವೆ.

ಭಾರತದ ಸಂವಿಧಾನದ ಆರ್ಟಿಕಲ್ ೨೫, ೨೬, ೨೭, ೨೮ರಲ್ಲಿ ಧರ್ಮ ಅವರವರ ವೈಯಕ್ತಿಕ ವಿಚಾರವಾಗಿದ್ದು, ಸರಕಾರಕ್ಕೆ ಯಾವ ಧರ್ಮವೂ ಇಲ್ಲ ಮತ್ತು ಯಾವ ಧರ್ಮ ಪ್ರತಿಪಾದಿಸು ವಂತೆಯೂ ಇಲ್ಲ ಹಾಗೂ ಪ್ರಚಾರ ಮಾಡುವಂತೆಯೂ ಇಲ್ಲ
ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ರೆಪ್ರೆಂಜೆಂಟೇಷನ್ ಆಫ್ ಪೀಪಲ್ ಆಕ್ಟ್ ಪ್ರಕಾರ ರಾಜಕೀಯ ಪಕ್ಷ ಚುನಾವಣಾ ಆಯೋಗದಲ್ಲಿ ನೋಂದಾಯಿತವಾಗಬೇಕು. ನೋಂದಾಯಿತ ಎಲ್ಲ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಗಳಿಗೆ ಪರವಾಗಿರಬೇಕೇ ವಿನಃ
ವಿರುದ್ಧವಾಗಿರಬಾರದು. ಅಂದರೆ ಯಾವುದೇ ಧರ್ಮ ಪ್ರತಿಪಾದಕ ಪಕ್ಷವಾಗಿರಬಾರದು. ಇಷ್ಟಾದರೂ ಧರ್ಮದ ಆಧಾರದ ಮೇಲೆಯೇ ಉದ್ಭವಿಸಿ ಕಾರ್ಯ ನಿರ್ವಹಿಸುತ್ತಿರುವ ಸಿಖ್ ಧರ್ಮಾಧಾರಿತ ಶಿರೋಮಣಿ ಮತ್ತಿತರ ಅಕಾಲಿದಳ (೧೯೨೦),
ಇಸ್ಲಾಂ ಧರ್ಮದ ಹಿನ್ನೆಲೆಯ ಮುಸ್ಲಿಂ ಲೀಗ್ ೧೯೦೬) ಮತ್ತು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ಹಿಂದೂ ಧರ್ಮದ ಹಿನ್ನೆಲೆಯ ಮಹಾರಾಷ್ಟ್ರದ ಶಿವಸೇನೆ (೧೯೬೬), ತಮಿಳುನಾಡಿನ ಭಾಷೆ ಮತ್ತು ಪ್ರಾದೇಶ ಕತೆಯ ಹಿನ್ನೆಲೆಯ ದ್ರಾವಿಡ ಮುನ್ನೇತರ ಕಜಗಂ (೧೯೪೯) ಮತ್ತು ಎಐಡಿಎಂಕೆ, ಹಿಂದೂ ಧರ್ಮ ಪ್ರತಿಪಾದಕ ಸಂಘಟನೆ ಯಾದ ಆರ್‌ಎಸ್ ಎಸ್ ಬೆಂಬಲಿತ ಬಿಜೆಪಿ, ದಲಿತ ವರ್ಗ ಹಿನ್ನೆಲೆಯ ಬಿಎಸ್‌ಪಿ, ಯಾದವ ಜನಾಂಗ ಹಿನ್ನೆಲೆಯ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ (ಎಸ್‌ಪಿ) ಇತ್ಯಾದಿ ರಾಜಕೀಯ ಪಕ್ಷಗಳು ಧರ್ಮ ಮತ್ತು ಜಾತಿಗಳ ಆಧಾರದ ಮೇಲೆಯೇ ಚುನಾವಣಾ ಪ್ರಣಾಳಿಕೆಗಳನ್ನು ಜನರ ಮುಂದಿಟ್ಟು ಚುನಾವಣೆಯಲ್ಲಿ ಸ್ಪರ್ಧಿಸುತ್ತಿವೆ. ಇದು ಸಂವಿಧಾನ ವಿರೋಧಿಯಲ್ಲವೇನು?
ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಇಂತಹ ಪಕ್ಷಗಳನ್ನು ಏಕೆ ಅಮಾನ್ಯ ಮಾಡುತ್ತಿಲ್ಲ? ಸಾರ್ವಜನಿಕರು ಇವೆಲ್ಲವನ್ನು ಒಪ್ಪಿಕೊಂಡು ಮೌನವಾಗಿ ಏಕೆ ಇದ್ದಾರೆ? ಮತದಾರನೂ ಸಹ ಇವೆಲ್ಲಾ ಕೃತ್ಯಗಳ ಭಾಗವಾಗಿರುವುದು ದುರ್ದೈವ.

ಹೀಗಾಗಿ ಮತದಾರ ಪ್ರತಿಭಟನೆಯ ಮನೋವೃತ್ತಿಯನ್ನೂ ಸಹ ಕಳೆದುಕೊಂಡಿರುವುದು ಶೋಚನೀಯ. ಸರಕಾರಗಳು ಸಮಾಜ ಮತ್ತು ಪ್ರಜಾಪ್ರಭುತ್ವ ವಿರೋಧಿ ಕಾರ್ಯಗಳನ್ನು ಕೈಗೊಂಡಾಗ ಜನರು ಪ್ರತಿಭಟನೆ ಮತ್ತು ಚಳವಳಿಗಳ ಮೂಲಕ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿ ಸರ್ಕಾರಗಳಿಗೆ ಎಚ್ಚರಿಕೆ ನೀಡಿ ಸರಿದಾರಿಗೆ ತರುವ ಪ್ರಯತ್ನಗಳಾಗುತ್ತಿದ್ದವು. ಇತ್ತೀಚೆಗೆ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರಮಟ್ಟ ದಲ್ಲಿ ನಡೆದ ಯಶಸ್ವಿ ಬೃಹತ್ ಚಳವಳಿಯನ್ನು ಬಿಟ್ಟರೆ ಇನ್ನಾವ ಚಳವಳಿಗಳೂ ಕಣ್ಮುಂದೆ ಕಾಣುತ್ತಿಲ್ಲ.

ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಧರ್ಮ ಮತ್ತು ಜಾತಿಗಳ ಆಧಾರದಲ್ಲಿ ಓಟಿಗೋಸ್ಕರ ನಿರ್ಧಾರ ತೆಗೆದು ಕೊಳ್ಳುತ್ತಿರುವು ದನ್ನು ಪ್ರತಿಭಟಿಸುವ ಜನ ರ ಚಳವಳಿಗಳು ಮರೆಯಾಗಿರುವುದು ದುರ್ದೈವ. ಧರ್ಮ ರಾಜಕಾರಣಕ್ಕೆ ಬಲಿಯಾದವರು ಸ್ವಾತಂತ್ರ ಬಂದ ಒಂದೇ ವರ್ಷದಲ್ಲಿ ಧರ್ಮದ ಕಾರಣಕ್ಕಾಗಿಯೇ, ಸ್ವಾತಂತ್ರ್ಯವನ್ನು ತಂದುಕೊಟ್ಟ ದೇಶದ ಪಿತಾಮಹ ಮಹಾತ್ಮಗಾಂಧಿ ಯವರನ್ನೆ ಕೊಲೆ ಮಾಡಲಾಯಿತು. ಧರ್ಮ ರಾಜಕೀಯದಲ್ಲಿ ಬೆರೆತರೆ ಏನಾಗುತ್ತದೆ ಎಂಬುದಕ್ಕೆ ಗಾಂಧೀಜಿ  ಕೊಲೆಗಿಂತ ಬೇರೆ ಉದಾಹರಣೆಬೇಕಿಲ್ಲ. ಪಂಜಾಬಿನಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ನೊಳಗೆ ಧರ್ಮದ ಅಫೀಮು ಕುಡಿದ, ಧಾರ್ಮಿಕ ಮುಖಂಡರೆಂಬ ಮುಖವಾಡ ಹೊತ್ತ ಧಾರ್ಮಿಕ ಉಗ್ರಗಾಮಿಗಳನ್ನು ಸದೆಬಡಿದರೆಂಬ ಕಾರಣಕ್ಕೆ ಇಂದಿರಾ ಗಾಂಧಿಯವರನ್ನು ಪ್ರಧಾನಿಯಾಗಿದ್ದಾ ಗಲೇ ಅದೇ ಧರ್ಮದ ಮೂಲದ ಅವರ ಅಂಗ ರಕ್ಷಕನೆ ಕೊಂದ.

ಜಾತಿ ಮತ್ತು ಭಾಷೆ ಆಧಾರದ ಎಲ್‌ಟಿಟಿ ಉಗ್ರ ಗಾಮಿಗಳಿಗೆ ರಾಜೀವ್‌ಗಾಂಧಿ ಬಲಿಯಾಗಬೇಕಾಯಿತು. ಇಸ್ಲಾಂ ಉಗ್ರಗಾಮಿಗಳಿಗೆ
ಅಸಂಖ್ಯಾತ ಜನರು ಭಾರತದಲ್ಲಿ ಮತ್ತು ಇನ್ನಿತರ ದೇಶಗಳಲ್ಲಿ ಬಲಿಯಾದರು. ಆಗಿಂ ದಾಗ್ಗೆ ದೇಶದಲ್ಲಿ ರಾಜಕೀಯ ಪಕ್ಷಗಳು ಪೋಷಿತ ಜಾತಿ ಮತ್ತು ಧರ್ಮಗಳ ನಡುವಿನ ಸಂಘರ್ಷಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿರುವುದಲ್ಲದೆ ಅಮಾಯ
ಕರು ಬಲಿಯಾಗುತ್ತಿರುವುದು ಸರ್ವೇ ಸಾಮಾನ್ಯ. ೧೯೭೭ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ನೇತೃತ್ವದ ಪ್ರಪ್ರಥಮ ಕಾಂಗ್ರೆಸ್ಸೇತರ ಸಮ್ಮಿಶ್ರ ಸರ್ಕಾರ ಕೇವಲ ೨ ವರ್ಷಗಳಲ್ಲಿಯೇ ಪತನಗೊಂಡು ಜನತಾ ಪಕ್ಷದ ನೇತೃತ್ವದಲ್ಲಿ ಒಗ್ಗೂಡಿದ್ದ ಎಲ್ಲ ಪಕ್ಷಗಳು ಛಿದ್ರ ಛಿದ್ರವಾಗಿ ಧಾರ್ಮಿಕ, ಪ್ರಾದೇಶಿಕ ಮತ್ತು ಜಾತಿಗಳ ಆಧಾರದ ಮೇಲೆ ಹೊಸ ಹೊಸ ಪಕ್ಷಗಳು ಅಸ್ತಿತ್ವಕ್ಕೆ ಬಂದು
ಜಾತಿ ಮತ್ತು ಧರ್ಮದ ಪ್ರಭಾವ ರಾಜಕೀಯ ಪಕ್ಷಗಳ ಮೇಲೆ ಮತ್ತಷ್ಟು ಬಿಗಿಯಾಗತೊಡಗಿ ಇಂದು ಅವು ಗಳೇ ರಾಜಕೀಯ ಪಕ್ಷಗಳ ಪ್ರಮುಖ ಪ್ರಣಾಳಿಕೆ ಗಳಾಗಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಕೃತ್ಯಗಳಾಗಿವೆ.

೧೯೮೦ರಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದು ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್‌ಕೃಷ್ಣ ಅಡ್ವಾಣಿ ಅದರ ಸಂಸ್ಥಾಪಕರಾದರು.
೧೯೮೯ರಲ್ಲಿ ವಿ.ಪಿ. ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ೧೯೭೯ರಲ್ಲಿ ಮೊರಾರ್ಜಿ ಸರ್ಕಾರ ರಚಿಸಿದ್ದ ಮಂಡಲ್ ಆಯೋಗದ ಶಿಫಾರಸನ್ನು ಜಾರಿಗೆ ತರಲು ನಿರ್ಧರಿಸಿ, ಹಿಂದುಳಿದ ಜಾತಿಗಳಿಗೆ ಮೀಸಲು ನೀಡುವ ಆe ಹೊರಡಿಸಿದರ ಫಲವಾಗಿ ಮೇಲ್ಜಾತಿ ಯವರು ದೇಶಾದ್ಯಂತ ಚಳವಳಿಗಿಳಿದು ಜಾತಿ- ಜಾತಿಗಳ ನಡುವಿನ ಸಂಘರ್ಷ ಪ್ರಪ್ರಥಮವಾಗಿ ಸಾರ್ವತ್ರಿಕವಾಗಿ ರಾಷ್ಟ್ರಮಟ್ಟ ದಲ್ಲಿ ಬಿಂಬಿತವಾಯಿತು.

ಇದು ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಯಲ್ಲಿ ಜಾತಿಗಳ ಪ್ರಭಾವ ಮತ್ತಷ್ಟು ಪ್ರಬಲವಾಗಲು ನಾಂದಿಯಾಯಿತು. ಇದೇ ಕಾಲಕ್ಕೆ ಬಿಜೆಪಿ ಅಡ್ವಾಣಿ ಯವರು ರಾಮಮಂದಿರ ಕಟ್ಟಲು ದೇಶಾದ್ಯಂತ ರಥಯಾತ್ರೆ ಪ್ರಾರಂಭಿಸಿ, ಬಿಜೆಪಿ ಪಕ್ಷ ಹಿಂದೂ ಧಾರ್ಮಿಕ ಚಟುವಟಿಕೆಗಳಲ್ಲಿ ನೇರವಾಗಿ ಪಾಲ್ಗೊಂಡು ಭಾವನಾತ್ಮಕ, ಧಾರ್ಮಿಕ ವಿಚಾರಗಳ ಆಧಾರದ ಮೇಲೆ ಹಿಂದೂ ಗಳನ್ನುಒಗ್ಗೂಡಿಸುವ ಪ್ರಯತ್ನವನ್ನು ಪ್ರಾರಂಭಿಸಿ ಇಂದಿಗೂ ಆ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ. ಇದು ಬಿಜೆಪಿಯ ರಾಜಕೀಯ ಬಲವರ್ಧ ನೆಗೆ ಭದ್ರವಾದ ಬುನಾದಿ ಹಾಕಿತಾದರೂ ದೇಶದಲ್ಲಿ ಧರ್ಮ ಧರ್ಮಗಳ ನಡುವೆ
ಸಂಘರ್ಷಗಳಿಗೂ ನಾಂದಿಯಾ ಯಿತೆಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಬಿಜೆಪಿ ಪಕ್ಷಕ್ಕೆ ಲಾಭ ತಂದುಕೊಟ್ಟು ಹಂತ ಹಂತವಾಗಿ ರಾಜ್ಯಗಳಲ್ಲಿ ಮತ್ತು ಇಂದು ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತಾಯಿತು.

ಪ್ರಸ್ತುತ ರಾಜಕೀಯ ಪಕ್ಷಗಳ ಅದರಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಿಜೆಪಿ ಹಿಂದೂ ಪರವಾಗಿಯೂ, ಕಾಂಗ್ರೆಸ್ ಮುಸ್ಲಿಂರ ಪರವಾಗಿಯೂ ಇವೆ ಎಂಬುದು ಸಾರ್ವತ್ರಿಕ ಅಭಿಪ್ರಾಯ. ಇಸ್ಲಾಂ ಧರ್ಮ ಪಾಲನೆ ಮಾಡುವ ಎಲ್ಲರೂ ಜಾತಿಯಲ್ಲಿ ಮುಸ್ಲಿಮರೇ ಆಗಿದ್ದಾರೆ. ಆದರೆ ಹಿಂದೂ ಧರ್ಮ ಪಾಲನೆ ಮಾಡುವವರಲ್ಲಿ ಸುಮಾರು ೩ಸಾವಿರ ಜಾತಿಗಳಿವೆ. ದೇಶದಲ್ಲಿ ಅತಿ ಹೆಚ್ಚು ತಿಕ್ಕಾಟವಿರುವುದು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ.ದೀರ್ಘಕಾಲ ರಾಷ್ಟ್ರವನ್ನಾಳಿದ ಅಂದಿನ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ವಿಶೇಷ ಸವಲತ್ತುಗಳನ್ನು ನೀಡಿ, ಹಿಂದೂಗಳನ್ನು ನಿರ್ಲಕ್ಷಿಸುತ್ತ, ಇಬ್ಬರನ್ನೂ ಸಮಾನ ವಾಗಿ ಕಂಡು, ಮುಸಲ್ಮಾನರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುನ್ನಡೆಗೆ ತರದ ಪರಿಣಾಮವಾಗಿ ಹಿಂದೂ ಮತ್ತು ಮುಸ್ಲಿಂಗಳ ನಡುವೆ ಕಂದಕ ಏರ್ಪಡಲು ಕಾರಣವಾಯಿತು ಎಂಬುದು ಹಲವರ ಅಭಿಪ್ರಾಯ.

ಇಡೀ ಪ್ರಪಂಚದಲ್ಲಿಯೇ ಅದರಲ್ಲೂ ಭಾರತದಲ್ಲಿ ಉಗ್ರಗಾಮಿ ಕೃತ್ಯ ನಡೆಸುವ ಬಹುಪಾಲು ದುಷ್ಕರ್ಮಿಗಳು ಮುಸ ಲ್ಮಾನರೇ ಆಗಿದ್ದರೂ, ಸಾಮಾಜಿಕ ವಿರೋಧಿ ಚಟುವ ಟಿಕೆಗಳಲ್ಲಿ ಭಾಗವಹಿಸುತ್ತಿದ್ದರೂ, ಆ ದುಷ್ಕೃತ್ಯಗಳನ್ನು ಖಂಡಿಸದೆ ರಾಜಕೀಯ ಕಾರಣಕ್ಕಾಗಿ ಇನ್ನಿತರ ರಾಜಕೀಯ ಪಕ್ಷಗಳು, ಅದೇ ಧರ್ಮದ ಮುಖಂಡರುಗಳು ಮೌನವಾಗಿರುವುದು ಅಥವಾ ಬೆಂಬಲಿ ಸುವುದು ಹಿಂದೂ ಪರವಾದ ಪಕ್ಷಗಳ ಯಶಸ್ವಿಗೆ ಕಾರಣವಾಗುತ್ತಿದೆ.

ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ರಾಜಕೀಯ ಅಧಿಕಾರ ಹಿಡಿದವರು ಆಯಾಯ ಜಾತಿ ಮತ್ತು ಧರ್ಮಗಳ ಅಭಿಪ್ರಾಯ ಗಳನ್ನೇ ಸಾರ್ವಜನಿಕಗೊಳಿಸಲು ಪ್ರಯತ್ನಿಸುತ್ತಾರೆ ಮತ್ತು ಆಯಾಯ ಜಾತಿ ಮತ್ತು ಧರ್ಮಗಳ ಪುರೋಹಿತ ಶಾಹಿ ವರ್ಗವನ್ನೇ ಸೃಷ್ಟಿಮಾಡಿ, ಮತ್ತಿತರರನ್ನು ಶೋಷಣೆ ಮಾಡುತ್ತಾರೆ. ಇದು ಜಾತಿ ಜಾತಿಗಳ ನಡುವೆ ಮತ್ತು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಲು ನಾಂದಿಯಾಗುತ್ತಿದೆ. ದುರ್ದೈವ ರಾಜಕೀಯ ಪಕ್ಷಗಳು ಈಗಾಗಲೆ ಈ ವಿಷಬೀಜ ಗಳನ್ನು ಸಮಾಜದಲ್ಲಿ ಬಿತ್ತಿದ್ದು, ಅವು ಮೊಳಕೆ ಯೊಡೆದು ಹೆಮ್ಮರವಾಗುತ್ತಿವೆ.

ಧರ್ಮಾಧಾರಿತವಾಗಿ ಮತ್ತು ಜಾತಿ ಆಧಾರಿತವಾಗಿ ಇಂದು  ಅದಕ್ಷರು, ಅಯೋಗ್ಯರುಗಳು,ಧರ್ಮಾಂಧರುಗಳು ಲೋಕಸಭೆ ಮತ್ತು ಶಾಸನಸಭೆಗಳಿಗೆ ಆಯ್ಕೆಯಾಗಿ ಅವು ಇಂದು ಚರ್ಚೆಯ ಅಖಾಡಗಳಾಗದೆ, ಕುಸ್ತಿಯ ಅಖಾಡಗಳಾಗಿರುವುದು ನಿಮಗೆಲ್ಲಾ ಗೊತ್ತಿದೆ. ಈ ದುಃಸ್ಥಿತಿಯನ್ನು ಸರಿಪಡಿಸುವ ಹೊಣೆಗಾರಿಕೆ ನಿಮ್ಮದಲ್ಲವೇ?