Thursday, 19th September 2024

ಯುವಕರ ದೇಶದಲ್ಲಿ ಪ್ರಜಾಪ್ರಭುತ್ವದ ದೊಡ್ಡ ಹಬ್ಬ

ಸಂಗತ 

ವಿಜಯ್ ದರಡಾ

ಜಗತ್ತಿನ ೧೩೦ ದೇಶಗಳ ಜನಸಂಖ್ಯೆಗಿಂತ ನಮ್ಮ ದೇಶದಲ್ಲಿ ಈ ಬಾರಿ ಮೊದಲ ಸಲ ಮತದಾನ ಮಾಡುವ ಯುವಕರ ಸಂಖ್ಯೆಯೇ ಹೆಚ್ಚು! ಯುವ ಮತದಾರರು ಭಾವನೆಗಳ ಅಲೆಗೆ ಸಿಲುಕದೆ, ಜಾತಿ ಹಾಗೂ ಧರ್ಮದ ಗೋಜಲಿನಲ್ಲಿ ಗೊಂದಲಕ್ಕೂ ಒಳಗಾಗದೆ, ನಿಮ್ಮದೇ ವಿವೇಚನೆ ಬಳಸಿ ಮತದಾನ ಮಾಡಿ. ದೇಶ ಯಾವತ್ತೂ ಮೊದಲು ಎಂಬುದು ನೆನಪಿರಲಿ!

ಲೋಕಸಭೆ ಚುನಾವಣೆ ಘೋಷಣೆ ಯಾದ ಬಳಿಕ ಅದರ ಒಳಸುಳಿಗಳನ್ನು ವಿಶ್ಲೇಷಣೆ ಮಾಡುತ್ತಾ ಕುಳಿತಿದ್ದೆ. ಒಂದು ಕುತೂಹಲಕರ ಮಾಹಿತಿ ಎಲ್ಲೋ ಕಣ್ಣಿಗೆ
ಬಿತ್ತು. ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಭಾರತದಲ್ಲಿ ಮೊದಲ ಸಲ ಮತದಾನಕ್ಕೆ ಅರ್ಹತೆ ಪಡೆದ ಯುವಕರ ಸಂಖ್ಯೆಯು ಜಗತ್ತಿನ ೧೩೦ ದೇಶಗಳ ಜನಸಂಖ್ಯೆಗಿಂತ ಹೆಚ್ಚಿದೆಯಂತೆ! ಈ ಬಾರಿಯ ಚುನಾವಣೆಯಲ್ಲಿ ಮೊದಲ ಸಲ ಮತದಾನ ಮಾಡಲು ನೋಂದಾಯಿಸಿಕೊಂಡವರ ಸಂಖ್ಯೆ ೧.೮ ಕೋಟಿ ದಾಟಿದೆ. ೩೦ ವರ್ಷದೊಳಗಿನ ಮತದಾರರ ಸಂಖ್ಯೆಯನ್ನು ಗಮನಿಸಿದರೆ ಅದು ೨೧.೫ ಕೋಟಿಯನ್ನು ದಾಟುತ್ತದೆ. ಆದ್ದರಿಂದಲೇ ನಾನು ಭಾರತದ
ಲೋಕಸಭೆ ಚುನಾವಣೆಯನ್ನು ಯುವಕರ ದೇಶದಲ್ಲಿ ನಡೆಯುವ ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಎನ್ನುತ್ತೇನೆ.

ಈ ಅಂಕಿ-ಅಂಶಗಳು ಭಾರತದ ಪ್ರಜಾಪ್ರಭುತ್ವ ಎಷ್ಟು ದೊಡ್ಡದು ಎಂಬುದನ್ನು ಹೇಳುತ್ತವೆ. ನಮ್ಮದು ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇದು ಜನಸಂಖ್ಯೆಯ ದೃಷ್ಟಿಯಿಂದ ದೊರಕಿರುವ ಮಹತ್ವವಾದರೆ, ನಮ್ಮ ದೇಶವು ಜಗತ್ತಿನಲ್ಲೇ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರವೂ ಹೌದು. ಇದು ಐತಿಹಾಸಿಕ ಮಹತ್ವದ ಸಂಗತಿ. ಭಾರತದ ಪ್ರಜಾಪ್ರಭುತ್ವಕ್ಕೆ ಭವ್ಯ ಇತಿಹಾಸದ ಶ್ರೀಮಂತ ಪರಂಪರೆಯಿದೆ. ಇಲ್ಲಿ ಪ್ರಜಾಪ್ರಭುತ್ವವನ್ನು ಆರಂಭಿಸಿದವರೇ ರಾಜರು ಎಂಬುದು ನಿಮಗೆ ಗೊತ್ತಾ? ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಮೊಟ್ಟಮೊದಲಿಗೆ ಶಂಕುಸ್ಥಾಪನೆ ಮಾಡಿದವರು ವೈಶಾಲಿಯ ಲಿಚ್ಚವಿ ಮನೆತನದ ರಾಜರು.

ಈಗ ಹೇಗೆ ಆಧುನಿಕ ಭಾರತದಲ್ಲಿ ಸಂಸತ್ತು ಇದೆಯೋ ಹಾಗೆಯೇ ಲಿಚ್ಚವಿ ರಾಜರ ಆಳ್ವಿಕೆಯಲ್ಲಿ ಪ್ರಜಾಪ್ರತಿನಿಽಗಳ ಸಂಸತ್ತು ಅಸ್ತಿತ್ವದಲ್ಲಿತ್ತು. ಅಲ್ಲಿಂದ
ಮೊದಲ್ಗೊಂಡು ಇಲ್ಲಿಯವರೆಗೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಮುಂದೆ ಸಾಗಿ ಬಂದಿದ್ದೇವೆ. ನಡುವೆ ಸಾಕಷ್ಟು ಸವಾಲುಗಳನ್ನೂ, ಸಮಸ್ಯೆಗಳನ್ನೂ,
ಕುಂದುಕೊರತೆಗಳನ್ನೂ ಅನುಭವಿಸಿದ್ದೇವೆ. ಅವೆಲ್ಲ ಅಡೆತಡೆಗಳ ನಡುವೆಯೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದಿನೇದಿನೆ ಸುಧಾರಣೆಗೊಳ್ಳುತ್ತಾ, ಹೆಚ್ಚೆಚ್ಚು
ಪ್ರಕಾಶಮಾನವಾಗುತ್ತಾ ಸಾಗುತ್ತಿದೆ. ಭಾರತದ ಪ್ರಜಾಪ್ರಭುತ್ವಕ್ಕೆ ಜಗತ್ತಿನಲ್ಲೇ ಸಾಟಿ ಬೇರೆಯಿಲ್ಲ.

ದೇಶದಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆದಾಗ ಇದ್ದ ಜನಸಂಖ್ಯೆ ಸುಮಾರು ೩೬ ಕೋಟಿ. ಅದರಲ್ಲಿ ಮತದಾನ ಮಾಡಲು ಕೇವಲ ೧೭.೩೨ ಕೋಟಿ ಜನರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ೨೦೨೪ರಲ್ಲಿ ದೇಶದ ಜನಸಂಖ್ಯೆ ೧೪೦ ಕೋಟಿಯನ್ನು ದಾಟಿದೆ.
ಬರೋಬ್ಬರಿ ೯೬.೮೦ ಕೋಟಿ ಜನರು ದೇಶದ ಮತದಾರರ ಪಟ್ಟಿಯಲ್ಲಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಸುಮಾರು ಶೇ.೬೬.೭೬ರಷ್ಟು ಆಗುತ್ತದೆ. ೨೦೧೯ಕ್ಕೆ ಹೋಲಿಸಿದರೆ ದೇಶದಲ್ಲಿ ಮತದಾರರ ಸಂಖ್ಯೆ ಸುಮಾರು ಶೇ.೬ರಷ್ಟು ಏರಿಕೆಯಾಗಿದೆ.

ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕು. ದೇಶದಲ್ಲಿ ಮಹಿಳಾ ಮತದಾರರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗಿದೆ. ಇದು ಮಹಿಳಾ
ಸಬಲೀಕರಣ ಮತ್ತು ಪಾಲ್ಗೊಳ್ಳುವಿಕೆಯ ದೃಷ್ಟಿಯಿಂದ ತುಂಬಾ ತೃಪ್ತಿಕರವಾದ ವಿಚಾರ. ಪುರುಷ ಮತದಾರರ ಸಂಖ್ಯೆಯಲ್ಲಿ ೩.೨೨ ಕೋಟಿಯಷ್ಟು ಏರಿಕೆ ಯಾಗಿದ್ದರೆ, ಮಹಿಳಾ ಮತದಾರರ ಸಂಖ್ಯೆಯಲ್ಲಿ ೪ ಕೋಟಿಯಷ್ಟು ಏರಿಕೆಯಾಗಿದೆ. ದೇಶದಲ್ಲಿ ೮೦ ವರ್ಷಕ್ಕಿಂತ ಮೇಲ್ಪಟ್ಟ ೧.೮೫ ಕೋಟಿ ಮತದಾರರಿದ್ದಾರೆ. ಅವರಲ್ಲಿ ೨.೧೮ ಕೋಟಿ ಮತದಾರರು ೧೦೦ ವರ್ಷಕ್ಕಿಂತ ಹೆಚ್ಚು ವಯಸ್ಸಿನವರು. ಖುಷಿಯ ವಿಚಾರ ಏನೆಂದರೆ ಯುವಕರು ಮತದಾನ ಮಾಡಲು ಉತ್ಸುಕರಾಗಿದ್ದಾರೆ. ಮೊದಲ ಸಲದ ಮತದಾರರಲ್ಲಿ ಅನೇಕರು ತಮ್ಮ ಊರಿನಿಂದ ದೂರದಲ್ಲಿ ನೌಕರಿ ಮಾಡುತ್ತಿದ್ದಾರೆ.

ಅವರಲ್ಲಿ ಸಾಕಷ್ಟು ಜನರು ವೋಟು ಹಾಕುವುದಕ್ಕೆಂದೇ ಊರಿಗೆ ಬರುತ್ತಾರೆ. ಶನಿವಾರ ಕೇಂದ್ರ ಚುನಾವಣಾ ಆಯೋಗವು ಮತದಾನದ ದಿನಾಂಕ ಘೋಷಣೆ
ಮಾಡಿದ ಕೂಡಲೇ ರೈಲ್ವೆ ಟಿಕೆಟ್ ಬುಕ್ ಮಾಡಿದ ಅನೇಕ ಯುವಕರು ನನಗೆ ಗೊತ್ತಿದ್ದಾರೆ. ಇವರು ಮತದಾನದ ಹಕ್ಕು ಚಲಾಯಿಸಲು ತಮ್ಮದೇ ಹಣ ಖರ್ಚು ಮಾಡಿಕೊಂಡು ಊರಿಗೆ ಬಂದು ಹೋಗುವ ಪ್ರಜ್ಞಾವಂತ ಯುವಕರು. ಹಿಂದೆ ಒಂದು ಕಾಲವಿತ್ತು. ಆಗ ಮನೆಯ ಹಿರಿಯರು ಯಾರಿಗೆ ಹೇಳುತ್ತಿದ್ದರೋ ಆ ಅಭ್ಯರ್ಥಿಗೇ ಇನ್ನೆಲ್ಲಾ ಸದಸ್ಯರೂ ಮತ ಹಾಕುತ್ತಿದ್ದರು. ವೋಟಿನ ವಿಷಯದಲ್ಲಿ ಯಜಮಾನನ ಮಾತೇ ಅಂತಿಮವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೆಂಡತಿ, ಮಕ್ಕಳು ಹಾಗೂ ಮೊಮ್ಮಕ್ಕಳು ತಮ್ಮ ಇಷ್ಟದ ಅಭ್ಯರ್ಥಿಗೇ ಮತ ಹಾಕುತ್ತಾರೆ. ತಮಗೆ ಯಾರು ಯೋಗ್ಯ ಅಭ್ಯರ್ಥಿಯೆಂದು ಅನ್ನಿಸುತ್ತಾರೋ ಅವರಿಗೇ
ವೋಟು ನೀಡುತ್ತಾರೆ. ಹಿಂದೆ ಕೆಲ ರಾಜ್ಯಗಳಲ್ಲಿ ಬಡವರು ಹಾಗೂ ದುರ್ಬಲರಿಗೆ ಮತದಾನ ಮಾಡುವುದಕ್ಕೇ ಬಿಡುತ್ತಿರಲಿಲ್ಲ.

ಬೂತ್‌ಗಳನ್ನು ಕಬ್ಜಾಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ ಅದೆಲ್ಲ ನಡೆಯುವುದಿಲ್ಲ. ಜನರು ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಲು ಹಿಂದೆಂದಿಗಿಂತ ಹೆಚ್ಚು ಗಮನ ನೀಡುತ್ತಾರೆ. ಈ ವಿಷಯದಲ್ಲಿ ಎಲ್ಲರೂ ಬಹಳ ಎಚ್ಚರಿಕೆ ವಹಿಸುತ್ತಾರೆ. ಈ ರೂಪಾಂತರವು ಪ್ರಜಾಪ್ರಭುತ್ವದ ನಿಜವಾದ ಸ್ಫೂರ್ತಿಯನ್ನು
ತೋರಿಸುತ್ತದೆ. ದೇಶಕ್ಕೆ ಹೆಮ್ಮೆ ತರುವ ಹಾಗೂ ದೇಶದ ಘನತೆ ಕಾಪಾಡುವ ವಿಷಯದಲ್ಲಿ ಮತದಾರರಿಗೆ ಎಷ್ಟು ಕಳಕಳಿಯಿದೆ ಎಂಬುದನ್ನು ಇದು ಹೇಳುತ್ತದೆ.
ನಮ್ಮ ದೇಶದ ಪ್ರಜಾಪ್ರಭುತ್ವಕ್ಕಿರುವ ದೊಡ್ಡ ಸಮಸ್ಯೆಯೆಂದರೆ ಕ್ರಿಮಿನಲ್ ಚಟುವಟಿಕೆಗಳು ಮತ್ತು ರಾಜಕೀಯದ ನಡುವಿನ ನಂಟು. ಇದನ್ನೇ ಇನ್ನೊಂದು
ರೀತಿಯಲ್ಲಿ ಹೇಳಿದರೆ, ಕ್ರಿಮಿನಲ್‌ಗಳಿಗೂ ರಾಜಕಾರಣಿಗಳಿಗೂ ಇರುವ ನಂಟು ದೇಶಕ್ಕೆ ಮಾರಕವಾಗಿದೆ.

ಹೀಗಾಗಿ ಈ ಸಲ ಚುನಾವಣಾ ಆಯೋಗವು ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣೆಗೆ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಚಟುವಟಿಕೆಗಳ ದಾಖಲೆಯನ್ನು ಪೂರ್ಣ ಪ್ರಮಾಣದಲ್ಲಿ ಬಹಿರಂಗಪಡಿಸಬೇಕು ಎಂದು ತಾಕೀತು ಮಾಡಿದೆ. ಅದರ ಜತೆಗೆ, ಅಂಥ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೇ ಪಕ್ಷದಿಂದ ಟಿಕೆಟ್ ಏಕೆ ನೀಡಿದ್ದೇವೆ, ಬೇರೆ ಯಾರಿಗೂ ಏಕೆ ಟಿಕೆಟ್ ನೀಡಿಲ್ಲ ಎಂಬ ಬಗ್ಗೆ ಸ್ಪಷ್ಟನೆಯನ್ನೂ ನೀಡಬೇಕೆಂದು ಸೂಚಿಸಲಾಗಿದೆ. ಚುನಾವಣಾ ಆಯೋಗದ
ಸೂಚನೆಯನ್ನು ರಾಜಕೀಯ ಪಕ್ಷಗಳು ಹೇಗೆ ಅರ್ಥೈಸಿಕೊಳ್ಳುತ್ತವೆ ಮತ್ತು ಹೇಗೆ ಪಾಲಿಸುತ್ತವೆ ಎಂಬುದು ಕುತೂಹಲಕರ ಸಂಗತಿ.

ರಾಜಕೀಯ ವ್ಯವಸ್ಥೆ ಕ್ರಿಮಿನಲ್‌ಗಳಿಂದ ಮುಕ್ತವಾಗ ಬೇಕು. ಸಜ್ಜನರು ನಮ್ಮನ್ನು ಆಳಬೇಕು. ಹೀಗಾಗಿ ರಾಜಕೀಯವನ್ನು ಅಪರಾಧಿಗಳ ಕಪಿಮುಷ್ಟಿಯಿಂದ ಹೊರಗೆ ತಂದು ವ್ಯವಸ್ಥೆಯನ್ನು ಸ್ವಚ್ಛಗೊಳಿಸಬೇಕು. ರಾಜಕೀಯ ಪಕ್ಷಗಳ ವ್ಯವಹಾರ ಮತ್ತು ಸಂಪರ್ಕಗಳು ಪಾರದರ್ಶಕವಾಗಿರಬೇಕು. ಹೀಗೆಂದು ದೇಶ ಬಯಸುತ್ತದೆ. ಆದ್ದರಿಂದಲೇ ಇಂದು ಚುನಾವಣಾ ಬಾಂಡ್‌ಗಳ ವಿಷಯದಲ್ಲಿ ದೇಶಾದ್ಯಂತ ದೊಡ್ಡ ವಿವಾದವೆದ್ದಿದೆ. ಆರ್ಥಿಕ ಅಪರಾಧಗಳನ್ನು ಎಸಗಿದವರು, ನೂರಾರು ಅಥವಾ ಸಾವಿರಾರು ಕೋಟಿ ರುಪಾಯಿ ವಂಚನೆ ಎಸಗಿದವರು ಮತ್ತು ದಗಾಕೋರರಿಂದ ಹೇಗೆ ರಾಜಕೀಯ ಪಕ್ಷಗಳು ಯಾವ ಹಿಂಜರಿಕೆಯೂ ಇಲ್ಲದೆ ದೇಣಿಗೆ ಪಡೆದುಕೊಳ್ಳುತ್ತವೆ ಎಂಬುದೇ ಜನರಿಗೆ ಅರ್ಥವಾಗುತ್ತಿಲ್ಲ. ಯಾರ ಚಾರಿತ್ರ್ಯ ಶುದ್ಧವಾಗಿದೆಯೋ ಮತ್ತು ಯಾರ ಉದ್ದೇಶ ಪ್ರಾಮಾಣಿಕವಾಗಿದೆಯೋ ಅವರಿಂದ ಮಾತ್ರ ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವಂತಾದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೇ!

ನಾನು ಮೊದಲಿನಿಂದಲೂ ಒಂದು ವಿಷಯವನ್ನು ಹೇಳುತ್ತಲೇ ಬಂದಿದ್ದೇನೆ. ಚುನಾವಣೆಗಳನ್ನು ಆರ್ಥಿಕವಾಗಿ ಪಾರದರ್ಶಕವಾಗಿಸಲು ಮತ್ತು ಅಲ್ಲಿ ಕ್ರಿಮಿನಲ್‌ಗಳ ಹಣ ನೀರಿನಂತೆ ಹರಿಯುವುದನ್ನು ತಪ್ಪಿಸಲು ಇರುವ ಏಕೈಕ ದಾರಿಯೆಂದರೆ ಚುನಾವಣಾ ವೆಚ್ಚದ ಮೇಲಿನ ಮಿತಿಯನ್ನು ಹೆಚ್ಚಿಸುವುದು ಎಂಬುದು ನನ್ನ ವಾದ. ಇಂದು ಲೋಕಸಭೆ ಚುನಾವಣೆಗೆ ಸ್ಪಽಸುವ ಒಬ್ಬ ಅಭ್ಯರ್ಥಿ ಗರಿಷ್ಠ ೯೫ ಲಕ್ಷ ರೂಪಾಯಿ ಖರ್ಚು ಮಾಡಬಹುದು. ಈ ಮಿತಿ ನಿಜಕ್ಕೂ ವೈಜ್ಞಾನಿಕವಾಗಿದೆಯೇ? ಅಥವಾ ಇಷ್ಟು ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಲು ಸಾಧ್ಯವೇ? ಇದನ್ನು ಮರುಪರಿಶೀಲನೆ ಮಾಡಬೇಕಿದೆ. ಚುನಾವಣೆ ಮುಗಿಸಲು ಒಬ್ಬ ಪ್ರಾಮಾಣಿಕ ಅಭ್ಯರ್ಥಿಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ಅಧ್ಯಯನ ಮಾಡಿ, ಅದರ ಆಧಾರದ ಮೇಲೆ ಗರಿಷ್ಠ ಮಿತಿ ನಿಗದಿಪಡಿಸುವುದು ಒಳ್ಳೆಯದು.

ಚುನಾವಣೆಗೆ ಸಂಬಂಽಸಿದಂತೆ ಇನ್ನೊಂದು ಅಪ್‌ಡೇಟ್ ಇದೆ. ದೇಶದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಎಲ್ಲಾ ಚುನಾವಣೆಗಳನ್ನೂ ಒಂದೇ ಸಲ ನಡೆಸುವ ‘ಏಕ ದೇಶ, ಏಕಚುನಾವಣೆ’ ವ್ಯವಸ್ಥೆ ಜಾರಿಗೆ ತರಬೇಕೆಂದು ಚಿಂತನೆ ನಡೆದಿತ್ತಲ್ಲವೇ? ಅದರ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ನೇಮಕಗೊಂಡಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಉನ್ನತಾಽಕಾರ ಸಮಿತಿಯು ತನ್ನ ೧೮,೦೦೦ ಪುಟಗಳಿಗೂ ಹೆಚ್ಚು ಬೃಹತ್ ಗಾತ್ರದ ವರದಿಯನ್ನು ಇತ್ತೀಚೆಗೆ ರಾಷ್ಟ್ರಪತಿಗಳಿಗೆ ಸಲ್ಲಿಸಿದೆ. ಮುಂಬರುವ ಲೋಕಸಭೆ ಚುನಾವಣೆ ಮುಗಿದ ನಂತರವೇ ಇದರ ಬಗ್ಗೆ ಚರ್ಚೆಗಳು ಶುರುವಾಗುತ್ತವೆ ಎಂಬುದು ಸ್ಪಷ್ಟ. ಈ ನಡುವೆ, ಈ ಬಾರಿಯ ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತಿದೆ. ಇದೊಂದು ದೊಡ್ಡ ಹಾಗೂ ದೀರ್ಘ ಕಸರತ್ತು. ಹೀಗಾಗಿ ನನ್ನ ಪ್ರಕಾರ, ‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ತರುವುದಕ್ಕೂ ಮೊದಲು ಇಡೀ ದೇಶದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು!

ಇಷ್ಟಾಗಿಯೂ ನಮ್ಮ ದೇಶದ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಕೈಗೊಳ್ಳುವ ಕ್ರಮವಿದೆಯಲ್ಲ, ಅದು ನಿಜಕ್ಕೂ ದೊಡ್ಡ ಸಾಹಸವೇ ಸರಿ. ಯಾವುದೇ ಅಭಿವೃದ್ಧಿ  ಹೊಂದಿದ ದೇಶಕ್ಕೂ ಇದು ಸುಲಭವಿಲ್ಲ. ೧೦.೫ ಲಕ್ಷಕ್ಕೂ ಹೆಚ್ಚು
ಮತದಾನ ಕೇಂದ್ರಗಳು, ೩.೪ ಲಕ್ಷಕ್ಕೂ ಹೆಚ್ಚು ಕೇಂದ್ರೀಯ ಭದ್ರತಾ ಪಡೆಗಳು ಮತ್ತು ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ಬಳಸಿ, ಕೋಟ್ಯಂತರ ಸರಕಾರಿ ನೌಕರರ ನೆರವಿನೊಂದಿಗೆ ಮತದಾನ ನಡೆಸಲಾಗುತ್ತದೆ. ಇದರಲ್ಲಿ ೫೫ ಲಕ್ಷ ಇಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು ಬಳಕೆಯಾಗುತ್ತವೆ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಆರಂಭಿಸಿ, ಮತ ಎಣಿಕೆ ಮುಗಿದು ಫಲಿತಾಂಶ ಘೋಷಣೆ ಯಾಗುವವರೆಗೆ ಪ್ರತಿಯೊಂದು ಹಂತವೂ ತಾರತಮ್ಯವಿಲ್ಲದೆ ನ್ಯಾಯಸಮ್ಮತವಾಗಿ ನಡೆಯಬೇಕೆಂದು ಚುನಾವಣಾ ಆಯೋಗ ಬಹಳ ಎಚ್ಚರಿಕೆಯಿಂದ ಕೆಲಸ ಮಾಡುತ್ತದೆ. ಇದು ಸಣ್ಣ ಸಂಗತಿಯಲ್ಲ.
ದೇಶದ ಮತದಾರರು ಎಚ್ಚರಿಕೆಯಿಂದ ಇದ್ದಾಗ ಸಹಜವಾಗಿಯೇ ಪ್ರಜಾಪ್ರಭುತ್ವದ ಬೇರುಗಳನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಆತ್ಮವಿಶ್ವಾಸ ಕೂಡ ನಮಗಿರುತ್ತದೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ಐದು ವರ್ಷಕ್ಕೊಮ್ಮೆ ಅಧಿಕಾರವನ್ನು ತಮ್ಮದಾಗಿಸಿಕೊಳ್ಳಬಹುದು, ಆದರೆ ಅಂತಿಮ ಹಾಗೂ ಶಾಶ್ವತ ಅಧಿಕಾರ ಈ ದೇಶದ ಮತದಾರರ ಕೈಯಲ್ಲೇ ಇರುತ್ತದೆ. ಈ ಶಕ್ತಿಯನ್ನು ಸದಾಕಾಲ ನಿಮ್ಮಲ್ಲೇ ಉಳಿಸಿಕೊಳ್ಳಿ. ಚುನಾವಣೆಯ ಸಮಯ
ದಲ್ಲಿ ಭಾವನೆಗಳ ಅಲೆಯಲ್ಲಿ ತೇಲಿ ಹೋಗಬೇಡಿ. ಜಾತಿ, ಧರ್ಮ ಅಥವಾ ವೈಯಕ್ತಿಕ ಆಸೆಗಳ ಆಮಿಷಕ್ಕೆ ಬಲಿ ಯಾಗಬೇಡಿ. ದೇಶಕ್ಕಿಂತ ಮುಖ್ಯವಾಗಿರುವುದು ಯಾವುದೂ ಇರಲು ಸಾಧ್ಯವಿಲ್ಲ!

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *