Thursday, 12th December 2024

ಪ್ರಜಾಪ್ರಭುತ್ವ: ನ್ಯಾಯ ಮತ್ತು ನ್ಯಾಯಾಂಗ

ನ್ಯಾಯಾಲಯ

ಚೆರ್ಕಾಡಿ ಸಚ್ಚಿದಾನಂದ ಶೆಟ್ಟಿ

Of course courts will deliver the law but no guarantee of justice’ ಬಹಳ ಹಿಂದೆ ಸಂವಿಧಾನ ತಜ್ಞರೊಬ್ಬರು ಹೇಳಿದ ಮಾತು. ಪ್ರಜಾ ಪ್ರಭುತ್ವದ ಬಹುಮುಖ್ಯ ಅಂಗ ನ್ಯಾಯಾಲಯ. ಸಂವಿಧಾನವೇ ಅದರ ಮೂಲ ಬೇರು. ಆದರೂ ಪ್ರಾಯೋಗಿಕವಾಗಿ ಅದನ್ನು ಅರ್ಥೈಸುವುದು ನ್ಯಾಯಾಲಯ ಗಳು, ಅರ್ಥಾತ್ ನ್ಯಾಯಾಧೀಶರು. ಅಂದರೆ ಪ್ರಜಾಪ್ರಭುತ್ವದ ಯಶಸ್ಸು ಅಡಗಿರುವುದು ನ್ಯಾಯಾಲಯಗಳ ಅರ್ಥೈಸುಕೆಯಲ್ಲಿ.

ದೇಶದಲ್ಲಿ ಕಾನೂನಿಗಿಂತ ಶ್ರೇಷ್ಠ ಯಾರೂ ಇಲ್ಲ. ಒಬ್ಬ ವ್ಯಕ್ತಿ ಎಷ್ಟೇ ಎತ್ತರದಲ್ಲಿರಲಿ ಆ ವ್ಯಕ್ತಿಯ ಮೇಲೆ ಕಾನೂನು ಇರುತ್ತದೆ. “Be you ever so high, the law is above you”. ಆದರೆ ಕಾನೂನಿನ ನಿಯಮ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಅತ್ಯವಶ್ಯಕ. ಪ್ರಜಾ ಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆ ಶೋಷಿತ ಜನರ ಕೊನೆಯ ತಾಣ. ಅನ್ಯಾಯಕ್ಕೆ ಒಳಪಟ್ಟ ಯಾರೇ ಆಗಲಿ ನಮಗೆ ಕಾನೂನು ಹಾಗೂ ಕೋರ್ಟ್ ಇದೆಯೆಂಬ ನಂಬಿಕೆಯಲ್ಲಿರುತ್ತಾರೆ. ನ್ಯಾಯಾಂಗದ ಕಾರ್ಯಶೈಲಿಯನ್ನು ಸಕ್ರಿಯವಾಗಿಸುವಲ್ಲಿ ಪ್ರಜ್ಞಾವಂತ ಜನರ ಪಾತ್ರವೂ ಮಹತ್ವಪೂರ್ಣವಾದದ್ದು.

ಸ್ವಾತಂತ್ರ್ಯ ಸಿಕ್ಕಿ ೭೬ ವರ್ಷಗಳ ನಂತರದ ಸ್ವತಂತ್ರ ಭಾರತದಲ್ಲಿ ನ್ಯಾಯಾಂಗದ ಪಾತ್ರ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಪ್ರಜ್ಞಾವಂತರಲ್ಲಿ ಕಾಡದೇ ಇರುವ ಪ್ರಶ್ನೆಯಲ್ಲ. ಸ್ವಾತಂತ್ರ್ಯ ಸಿಕ್ಕಿದ ಪ್ರಾರಂಭದಲ್ಲಿ ಸ್ವಾತಂತ್ರ್ಯದ ತ್ಯಾಗ ಬಲಿದಾನಗಳ ನೆನಪುಗಳು ಇನ್ನೂ ಹಸಿರಾಗಿರುವಾಗ ನ್ಯಾಯಾಲಯ ಗಳು ಮತ್ತು ಶಾಸಕಾಂಗಳು ಬಹುತೇಕ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದವು. ಇದೀಗ ಸೂಕ್ಷ್ಮವಾಗಿ ಪರಿಗಣಿಸಿದರೆ ನ್ಯಾಯಾಲಯದ ಬಾಗಿಲುಗಳು ಉಳ್ಳವರಿಗೆ ತ್ವರಿತವಾಗಿ ಎಲ್ಲ ಕಾಲದಲ್ಲೂ ತೆರೆದುಕೊಳ್ಳುತ್ತವೆ. ಆದರೆ ಇನ್ನೊಂದು ಸ್ತರದ ಜನ ಸಮುದಾಯಕ್ಕೆ ನ್ಯಾಯಾಲಯದ ಕದ ತಟ್ಟಲು ಸಾಧ್ಯವೇ
ಇಲ್ಲವೆಂಬುದು ಖಚಿತವಾಗಿದೆ.

ಇದಕ್ಕೆ ಪೂರಕವಾಗಿ ದೇಶದಾದ್ಯಂತ ನ್ಯಾಯಪಾಲಿಕೆಗಳೆದುರು ನಾಲ್ಕಾರು ಕೋಟಿ ಮೊಕದ್ದಮೆಗಳು ಇತ್ಯರ್ಥವಾಗದೇ ನ್ಯಾಯಾಲಯದ ಕಡತಗಳಲ್ಲಿಯೇ  ಉಳಿದಿವೆ. ಈ ಇತ್ಯರ್ಥವಾಗದ ಮೊಕದ್ದಮೆಗಳ ಸಮಸ್ಯೆ ಒಟ್ಟಾರೆ ನ್ಯಾಯ ವ್ಯವಸ್ಥೆಯ ಹಲವಾರು ದಶಕಗಳ ಕಾರ್ಯ ವಿಧಾನಗಳಿಗೆ ಕನ್ನಡಿ ಹಿಡಿದಂತಿದೆ. ಹೀಗಿರುವಾಗ ಜನ ಸಾಮಾನ್ಯರಿಗೆ ನ್ಯಾಯಾಲಯದ ಮೇಲೆ ಭರವಸೆ ಸಾಧ್ಯವೇ? ನ್ಯಾಯಾಲಯ ಮತ್ತು ನ್ಯಾಯಾಂಗದಲ್ಲಿ ಬದಲಾವಣೆ ಬೇಕೆಂದು ನಾವು ಹೇಳಬಹುದು. ಆದರೆ ಅದು ಎಲ್ಲಿಂದ ಮತ್ತು ಹೇಗೆಂದು ಕೂಡ ನಾವು ತಲೆ ಕೆಡಿಸಿಕೊಳ್ಳಬೇಕಾಗಿದೆ.

ನ್ಯಾಯಾಂಗದ ಬದಲಾವಣೆಗೆ ಕೇವಲ ಶಾಸಕಾಂಗ – ಕಾರ್ಯಾಂಗಗಳ ಬದಲಾವಣೆಯಷ್ಟೇ ಸಾಕಾಗಲಾರದು. ನ್ಯಾಯಾಂಗದಲ್ಲಿನ ಸಾವಿರಾರು ಹುಳುಕುಗಳು ಹಾಗೂ ಸಾಂಸ್ಥಿಕ ಸವಾಲುಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಶಾಸಕಾಂಗ – ಕಾರ್ಯಾಂಗಗಳು ಫಲವಾದರೆ ನಮ್ಮ ನ್ಯಾಯಾಂಗ ವ್ಯವಸ್ಥೆ ಯಿಂದ ಅದನ್ನು ಸರಿಪಡಿಸುವ ಕಾರ್ಯವಾಗಬೇಕು. ಈ ಕಾರ್ಯ ದೇಶದಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿದೆಯೇ ಎಂಬ ಅನುಮಾನ ಎಲ್ಲರಲ್ಲಿ
ಮೂಡಿರುವುದು ಸುಳ್ಳಲ್ಲ. ಭಾರತದ ನ್ಯಾಯ ವ್ಯವಸ್ಥೆ ಬಹುಮಟ್ಟಿಗೆ ಇಂಗ್ಲೆಂಡ್‌ನ ಸಾಮಾನ್ಯ ಕಾನೂನಿನ ಮೇಲೆ ಆಧಾರಿತವಾಗಿದೆ. ಪ್ರಚಲಿತವಾಗಿ ಕಾನೂನಿನ ಬಹುತೇಕ ಭಾಗಗಳು ಐರೋಪ್ಯ ಮತ್ತು ಅಮೆರಿಕಾದ ಪ್ರಭಾವವನ್ನು ತೋರಿಸುತ್ತವೆ. ಇಲ್ಲಿ ಇದರ ಅನುಷ್ಠಾನದ ತೊಡಕುಗಳು ಇಲ್ಲದೇ ಇಲ್ಲ.

ನ್ಯಾಯಾಂಗದ ಘೋರ ವೈಫಲ್ಯದ ಕಾರಣಗಳು ಈ ದೇಶದ ಪ್ರಜಾತಂತ್ರದ ಅಡಿಪಾಯದಲ್ಲೇ ಅಡಗಿದೆ. ನಮ್ಮ ದೇಶದ ಸಂವಿಧಾನದ ಆಶಯಗಳೇನೋ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳು. ಅಂಬೇಡ್ಕರ್ ಹೇಳುವಂತೆ ಈ ದೇಶದ ಸಾಮಾಜಿಕ ಜೀವನದ ಸಂವಿಧಾನ ಅಸಮಾನತೆಯನ್ನು ಮತ್ತು ಮೇಲು ಕೀಳುಗಳನ್ನು ಬೋಧಿಸುವ ಮನುಸ್ಮೃತಿ ಆಧಾರಿತ ಜಾತಿ ಪದ್ಧತಿಯೇ ಆಗಿರುವುದರಿಂದ ಪ್ರಜಾತಂತ್ರ ಮತ್ತು ಸಮಾನತೆಯೆಂಬುದು ಈ ದೇಶಕ್ಕೆ ಹೊರಗಿನಿಂದ ತಂದ ಎರೆಮಣ್ಣು. ಪ್ರಜೆಗಳು ಯಾವತ್ತೂ “Nation First” ಎಂಬುದನ್ನು ತಿಳಿದು ಕೊಳ್ಳಬೇಕಾಗಿದೆ.

ಭಾರತವು ಜಾತ್ಯತೀತ ರಾಷ್ಟ್ರ. “Religion is a matter of personal faith and belief” ಕೆಲವೊಮ್ಮೆ ಸಂಧಾನದಲ್ಲಿ ನಮಗೆ ಸಿಕ್ಕಿರುವ ಸ್ವಾತಂತ್ರ್ಯ ಹೆಚ್ಚಾಯಿತೆಂದು ಭಾಸವಾಗುತ್ತಿದೆ. ಹೀಗಾಗಿ ಮೌಲ್ಯಗಳು ಸಮಾಜದಲ್ಲಿ ಬೇರು ಬಿಡದೆ ಸಂಧಾನ ಜಾರಿಯಾಗುವುದಿಲ್ಲ. ಆದುದರಿಂದ ದೇಶದ ಸಂಧಾನ ಪಾಲಕರ ಮೊದಲ ಕೆಲಸ ಪ್ರಜಾತಂತ್ರಕ್ಕೆ ಅಡ್ಡಿಯಾಗಿದ್ದ ಶಕ್ತಿಗಳನ್ನು ನಿವಾರಿಸಿ ಸಮಾನತೆ ಅರಳಲು ಅವಕಾಶ ಮಾಡಿಕೊಡಬೇಕಾಗಿತ್ತು. ಆದಾಗ ಬೇಕಿದ್ದರೆ ಯಾರೇ ಅಧಿಕಾರಕ್ಕೆ ಬಂದರೂ ಸಂವಿಧಾನವನ್ನು ಪ್ರಜಾತಂತ್ರ ಮತ್ತು ಸಮಾನತೆಯ ವ್ಯಾಖ್ಯಾನಕ್ಕೆ ವಿರುದ್ಧವಾಗಿ ವ್ಯಾಖ್ಯಾನಿಸದಷ್ಟು ಸಂವಿಧಾನ ಮತ್ತು ಕಾನೂನುಗಳು ಸ್ವಷ್ಟವೂ, ಸರಳವೂ ಮತ್ತು ಬದ್ಧವೂ ಆಗಿರಬೇಕಿತ್ತು.

ಸಂವಿಧಾನವನ್ನು ಪ್ರಜಾತಂತ್ರ ಸಮಾನತೆಗೆ ತಕ್ಕಂತೆ ವ್ಯಾಖ್ಯಾನಿಸಿ ಆಚರಣೆಗೆ ತರುವವರು ಮಾತ್ರ ಸಾಂವಿಧಾನಿಕ ಸಂಸ್ಥೆಗಳ ಜವಾಬ್ದಾರಿ ಹೊರುವಂತಾಗಿ ರಬೇಕಿತ್ತು. ಎರಡೂ ಕೂಡ ಮೊದಲಿನಿಂದಲೂ ಆದದ್ದು ಅರೆಬರೆ, ಅದು ಕೂಡ ಅಕ್ಷರ ದಲ್ಲೇ ವಿನಾ, ಅರ್ಥದಲ್ಲಿ ಮತ್ತು ಆಚರಣೆಯಲ್ಲಿಲ್ಲ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಅಕ್ಷರದಲ್ಲೂ ಕೂಡ ಅದಕ್ಕೆ ತದ್ವಿರುದ್ಧವಾದ ಸಂಗತಿಗಳೇ; ಪ್ರಭುತ್ವದ ಮೂರು ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಸಂಭಸುತ್ತಿದೆ.

ಬಹಳ ಪ್ರಾಮುಖ್ಯವಾದ ವಿಚಾರವೆಂದರೆ ಜನ ಸಮುದಾಯದಲ್ಲಿ ಪ್ರಜಾತಾಂತ್ರಿಕತೆ ಮತ್ತು ನ್ಯಾಯ ಪ್ರಜ್ಞೆಯನ್ನು ಹುಟ್ಟಿಸದೇ ಅದನ್ನು ಒಂದು ಜನಶಕ್ತಿಯಾಗಿ ಬದಲಾಯಿಸದೇ ನ್ಯಾಯಾಂಗವನ್ನಾಗಲೀ ಸಂವಿಧಾನವನ್ನಾಗಲೀ ಭಾರತೀಯ ಗಣರಾಜ್ಯವನ್ನಾಗಲೀ ಉಳಿಸಿಕೊಳ್ಳಲಾಗದು. ಅದೇ ಸಂದರ್ಭದಲ್ಲಿ ನ್ಯಾಯಾಂಗವು ಸಂವಿಧಾನ ನೀಡಿದ ತನ್ನ ಸ್ವಾಯತ್ತತೆಯನ್ನು ಎಲ್ಲ ಕಾಲಕ್ಕೂ ಕಾಪಾಡಿಕೊಳ್ಳಬೇಕಾದ ಅಗತ್ಯ ಎಂದಿಗಿಂತಲೂ ಈಗನ ಸಮದರ್ಭದಲ್ಲಿ
ಹೆಚ್ಚಿದೆ. ನ್ಯಾಯಾಂಗ ಯಾವ ರೀತಿಯಲ್ಲಿ ತನ್ನ ಆದ್ಯತೆಗಳನ್ನು ಕಾಲಕಾಲಕ್ಕೂ ಪರಿಷ್ಕರಿಸಿ, ಕಾರ್ಯ ನಿರ್ವಸುತ್ತದೆಯೆಂಬುದು ಅದರ ಸ್ವಾಯತ್ತತೆಯ ಸವಾಲಾಗಿದೆ. ಆದರೆ ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ನ್ಯಾಯಾಂಗಗಳು ಬಲಿಷ್ಠ ಸರಕಾರಗಳು ಅಽಕಾರದಲ್ಲಿದ್ದಾಗ ಅವುಗಳ – ತಪ್ಪುಗಳನ್ನು ತಿದ್ದಿ ಹೇಳುವ ಬದಲು ಅವಕ್ಕೆ ಶರಣಾಗಿವೆ.

ಸ್ವಾತಂತ್ರ್ಯದ ಪ್ರಾರಂಭದಲ್ಲಿ ಅಕ್ಷರದಲ್ಲಾದರೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸುವ ಕಾನೂನುಗಳನ್ನು ತಂದಾಗ ನ್ಯಾಯಾಲಯಗಳು ಅದಕ್ಕೆ ದೊಡ್ಡ ಅಡೆತಡೆಯಾಗಿ ನಿಂತಿದ್ದವು. ಮೀಸಲಾತಿ ಮತ್ತು ಭೂಸುಧಾರಣೆಯಂತಹ ಪ್ರಗತಿಪರ ಕಾನೂನುಗಳನ್ನು ಸರ್ವ ಸಮಾನತೆ ಮತ್ತು ಆಸ್ತಿ ಹಕ್ಕುಗಳಿಗೆ ವಿರೋಧವೆಂಬಂತೆ ಸಂವಿಧಾನವನ್ನು ಅತ್ಯಂತ ಪ್ರತಿಗಾಮಿಯಾಗಿ ಸುಪ್ರೀಂ ಕೋರ್ಟ್ ಅಪವ್ಯಾಖ್ಯಾನ ಮಾಡಿ ಅಡ್ಡಿಯಾಗಿದ್ದಕ್ಕೆ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಆ ತಡೆಯನ್ನು ನಿವಾರಿಸಿಕೊಳ್ಳಬೇಕಾಯಿತು.

ಭಾರತದ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯಾಂಗ ನಿರ್ವಹಿಸಬೇಕಾದ ಹಾಗೂ ನಿರ್ವಸುತ್ತಿರುವ ಪಾತ್ರವನ್ನು ನಿಷ್ಕರ್ಷೆ ಮಾಡಬೇಕಿದೆ. ಜನಸಾಮಾನ್ಯರ ನಿತ್ಯ ಬದುಕನ್ನು ಹಸನಾಗಿಸುವ, ಭವಿಷ್ಯವನ್ನು ಸುರಕ್ಷಿತವಾಗಿಸುವ ಆಡಳಿತ ನೀತಿಗಳನ್ನು ರೂಪಿಸಿ, ನಿರೂಪಿಸಿ, ಜಾರಿಗೊಳಿಸುವ ನೈತಿಕ, ಸಾಂವಿಧಾನಿಕ ಜವಾಬ್ದಾರಿ ಹೊಂದಿರುವ ಶಾಸಕಾಂಗವು ತನ್ನ ಜನಮುಖಿ – ಸಮಾಜಮುಖಿ ಮುಖವನ್ನು ಕಳಚಿ ಹಾಕಿ ದಶಕಗಳೇ ಸರಿದು ಹೋಗಿವೆ. ಶಾಸಕಾಂಗ ಹಾಗೂ
ಕಾರ್ಯಾಂಗಗಳನ್ನು ಖಂಡಿತವಾಗಿಯೂ ನ್ಯಾಯದ ಕಟಕಟೆಯಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯದೆ. ಆದರೆ ನ್ಯಾಯಾಂಗವನ್ನು ಹೀಗೆ ನಿಲ್ಲಿಸಲಾಗುವು ದಿಲ್ಲ.

ಒಟ್ಟಾರೆ ಭಾರತದ ಜನತೆಗೆ ನ್ಯಾಯಾಂಗವೇ ಅಂತಿಮ ನ್ಯಾಯ ಒದಗಿಸುತ್ತಿದೆ. ಕೆಲವು ಸಾಂಸ್ಥಿಕ ನ್ಯೂನತೆ ಹಾಗೂ ವೈಫಲ್ಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಯು ಸ್ವಾಯುತ್ತವಾಗಿ ತನ್ನ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದಾದರೆ ಎಲ್ಲ ಜಟಿಲ ಸಮಸ್ಯೆಗಳನ್ನು ಬಗೆಹರಿಸಬಹುದು. ಆದರೆ ಇದೀಗ, ಹಿಂದೆ ನ್ಯಾಯಾಂಗ ಕೇವಲ ಭ್ರಷ್ಟಗೊಂಡಿದೆ ಎಂಬ ಆರೋಪ ಕೇಳಿ ಬರುತ್ತಿತ್ತು. ಪ್ರಸಕ್ತ ಸನ್ನಿವೇಶದಲ್ಲಿ ಭ್ರಷ್ಟಾಚಾರದ ಜತೆಗೆ ಕೋಮುವಾದದ ಸುಳಿಗೆ ಸಿಲುಕಿದೆಯೆಂಬ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮತ್ತು ಇದರ ಹೊಗೆ ದಟ್ಟವಾಗುತ್ತಾ ಹೋಗುತ್ತಿರುವುದು ದುರದೃಷ್ಟ.

ಭಾರತದ ಸಂವಿಧಾನದ ವೈಶಿಷ್ಟ್ಯವೆಂದರೆ ಆಡಳಿತ ವ್ಯವಸ್ಥೆಯ ಮೂರು ಸ್ಥಂಬಗಳಾದ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಂಗಗಳಿಗೆ ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಜಂಟಿ ಹೊಣೆಗಾರಿಕೆಯನ್ನು ಕಲ್ಪಿಸಿರುವುದು. ೭೬ ವರ್ಷಗಳ ಸ್ವಾತಂತ್ರ್ಯಾ ನಂತರವೂ ಏಳು ಬೀಳುಗಳ ನಡುವೆ ತನ್ನ ಸಾಂವಿ ಧಾನಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರೂ ಅಧಿಕಾರ ರಾಜಕಾರಣಿಗಳ ಪ್ರಭಾವದಿಂದ ತನ್ನ ವಿಶ್ವಾಸರ್ಹತೆಯನ್ನು ಕಳೆದುಕೊಂಡಿದೆ. ಶಾಸಕಾಂಗದ ಕಾರ್ಯ ನಿರ್ವಹಣೆಯಲ್ಲಿ ಇರಬೇಕಾಗಿದ್ದ ಸಾಂವಿಧಾನಿಕ ನೈತಿಕತೆ, ಪಾರದರ್ಶಕತೆ ಹಾಗೂ ಜನನಿಷ್ಠೆಯ ಪ್ರಾಮಾಣಿಕತೆ ಕುಸಿಯುತ್ತಿರುವುದು ಸಾರ್ವಭೌಮ ಪ್ರಜೆಗಳಲ್ಲಿ ಹೆಚ್ಚಿನ ಆತಂಕ ಮೂಡಿಸುತ್ತಿರುವುದು ವಾಸ್ತವವೇ ಆಗಿದೆ.

ಇಂದು ದೇಶದ ನ್ಯಾಯಾಂಗದ ಮಿತಿಗಳು ಭ್ರಷ್ಟಾಚಾರ ಮತ್ತು ಕೊರತೆಗಳ ನಡುವೆ ಇದಕ್ಕೆ ಪೂರಕವಾಗಿ ಜನ ಬೆಂಬಲವು ಖೇದದ ವಿಚಾರವೇ ಆಗಿದೆ. ಜನರಲ್ಲಿ ಪ್ರಜಾತಾಂತ್ರಿಕತೆ ಮತ್ತು ನ್ಯಾಯ ಪ್ರಜ್ಞೆಯನ್ನು ಹುಟ್ಟಿಸುವುದು ಮತ್ತು ಅದನ್ನು ಒಂದು ಜನಶಕ್ತಿಯಾಗಿ ಬದಲಾಯಿಸದೇ ನ್ಯಾಯಾಂಗವನ್ನಾಗಲೀ, ಸಂವಿಧಾನ ವನ್ನಾಗಲೀ, ಭಾರತೀಯ ಗಣರಾಜ್ಯವನ್ನಾಗಲೀ ಉಳಿಸಿಕೊಳ್ಳಲಾಗದು.

(ಲೇಖಕರು: ನಿವೃತ್ತ ಮುಖ್ಯ ಪ್ರಬಂಧಕರು ಜಯ
ಬ್ಯಾಂಕ್)