ಜನತಂತ್ರ
ಪ್ರೊ.ಆರ್.ಜಿ.ಹೆಗಡೆ
ಚುನಾವಣೆಯ ಕಾವು ಏರುತ್ತಿರುವಂತೆ, ಅಭ್ಯರ್ಥಿಗಳ ಹತಾಶೆ ಮಿತಿಮೀರುತ್ತಿರುವಂತೆ ಹೊಮ್ಮುತ್ತಿರುವ ಮಾತುಗಳ ತೀವ್ರತೆ ಯೂ ಹೆಚ್ಚಾಗುತ್ತಿದೆ. ಒಣಮೆಣಸಿನ ಘಾಟಿನಂಥ ಅವರ ಮಾತುಗಳ ಹೊಗೆ ನಮ್ಮೆಲ್ಲರ ಉಸಿರು ಕಟ್ಟಿಸುತ್ತಿದೆ.
ಕುಸಿಯುತ್ತಿರುವ ಅವರ ಮಾತಿನ ಗುಣಮಟ್ಟವು, ನಾವು ಕಟ್ಟಿ ಬೆಳೆಸಿದ ಮತ್ತು ಹೆಮ್ಮೆ ಪಡುವ ಸಂಸ್ಕೃತಿಯನ್ನೇ ಅಣ. ರಾತ್ರಿ
ಹೊತ್ತು ಸಾರಾಯಿ ಅಂಗಡಿಯ ಆಚೀಚೆ ಕೇಳಿಬರಬಲ್ಲ ‘ಆಣಿಮುತ್ತುಗಳು’ ಈಗ ಸಾರ್ವಜನಿಕವಾಗಿ, ನಿರಂತರವಾಗಿ ಉದುರಲಾ ರಂಭಿಸಿವೆ. ಇಂಥ ಆಣಿಮುತ್ತುಗಳ ಪೈಕಿ ಕೆಲವನ್ನಷ್ಟೇ ಇಲ್ಲಿ ಉದಾಹರಣೆಯಾಗಿ ನೀಡುತ್ತಿದ್ದೇನೆ. ಹಿಮಾಚಲ ಪ್ರದೇಶದ ‘ಮಂಡಿ’ ಎಂಬ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಂಗನಾ ರಣಾವತ್ ಅವರು, ‘ಈಗ ಮಂಡಿಯಲ್ಲಿ (ಮಾರುಕಟ್ಟೆಯಲ್ಲಿ) ಏನು ರೇಟು ನಡೆಯುತ್ತಿದೆ?’ ಎಂಬ ಕೊಳಕು ಪ್ರಶ್ನೆಯನ್ನು ಎದುರಿಸಬೇಕಾಗಿ ಬಂತು. ಈ ಮಾತಿನ ಅರ್ಥವನ್ನು ಗ್ರಹಿಸುವುದು ಕಷ್ಟವೇನಲ್ಲ- ‘ನಿಮ್ಮ ರೇಟು ಎಷ್ಟು?’ ಎಂಬುದು ಇದರರ್ಥ.
ಅಂದರೆ, ನೀವು ಮಾರಾಟಕ್ಕಿಟ್ಟಿರುವ ಮಹಿಳೆ (ಹಾಗೆಂದರೇನು ಎಂದು ಹೇಳುವುದು ಬೇಡ) ಎನ್ನುವುದು ಈ ಮಾತಿನ ಸೂಚ್ಯರ್ಥ. ಈ ಮಾತನ್ನು ವಿರೋಧಿಸಿ ದೇಶಾದ್ಯಂತ ಗದ್ದಲವಾಯಿತು, ನಿಜ. ಆದರೆ, ಎಷ್ಟೇ ಗದ್ದಲವಾದರೂ, ಆ ಮಾತಾಡಿದ ವ್ಯಕ್ತಿಯು ಕನಿಷ್ಠಪಕ್ಷ ಕ್ಷಮೆಯನ್ನೂ ಕೇಳಲಿಲ್ಲ. ಅದು ಒತ್ತಟ್ಟಿಗಿರಲಿ, ಪ್ರಧಾನಿ ಮೋದಿಯವರ ಕೆನ್ನೆಗೆ ಬಾರಿಸಬೇಕು ಎನ್ನುವ ಮಾತು ಕರ್ನಾಟಕದ ರಾಜಕಾರಣಿಯೊಬ್ಬರಿಂದ ಹೊಮ್ಮಿತು. ಆದರೆ ಬಿಹಾರದ ವ್ಯಕ್ತಿಯೊಬ್ಬನಿಗೆ ಈ ಮಾತಿನಲ್ಲಿ ಸಾಕಷ್ಟು ‘ದಮ್’ ಇಲ್ಲ ಎನಿಸಿರಬೇಕು; ಅದಕ್ಕಾಗಿ ಆತ, ‘ಮೋದಿಯವರ ಹಣೆಗೆ ಗುಂಡಿಟ್ಟು ಹೊಡೆಯಬೇಕು’ ಎಂದು ಹೇಳಿದ.
ತರುವಾಯದಲ್ಲಿ ಕರ್ನಾಟಕದ ಮಹಾನುಭಾವರೊಬ್ಬರು, ‘ಅಮಿತ್ ಷಾ ಓರ್ವ ಗೂಂಡಾ’ ಎಂದು ಹೇಳಿದರು. ‘ಮಹಿಳೆಯರು
ಅಡುಗೆಮನೆಗೇ ಲಾಯಕ್ಕು’ ಎನ್ನುವ ಮಾತೂ ಬಂತು. ಅದು ಹೋಗಲಿಬಿಡಿ, ಬಂದಿರುವ ಬೇರೆ ಮಾತುಗಳಿಗೆ ಹೋಲಿಸಿದರೆ ಅದು ವಿಷಯವೇ ಅಲ್ಲ. ಆದರೆ ಒಟ್ಟಾರೆ ಹೇಳುವುದಾದರೆ, ಅಸಹ್ಯ, ಅಸಭ್ಯ, ಅನಾಗರಿಕ, ಸೊಂಟದ ಕೆಳಗಿನ ಮಾತುಗಳನ್ನಾ ಡುವುದರಲ್ಲಿ ಕೆಲವರು ಪೈಪೋಟಿಗೆ ಬಿದ್ದಂತಿದೆ.
ನಿಮಗೆ ನೆನಪಿದೆಯಾ? ನಾವೆಲ್ಲಾ ಚಿಕ್ಕವರಿರುವಾಗ ‘ಪತ್ರಿಕೆಗಳನ್ನು ಓದಿ, ಜ್ಞಾನವನ್ನು ಬೆಳೆಸಿಕೊಳ್ಳಿ’ ಎಂದು ಅಪ್ಪ ನಮಗೆ ತಿಳಿಹೇಳುತ್ತಿದ್ದರು. ಇದಕ್ಕೆ ತದ್ವಿರುದ್ಧವಾಗಿ ನಾವಿಂದು ಚಿಕ್ಕಮಕ್ಕಳಿಗೆ, ‘ಏನು ಬೇಕಾದರೂ ಮಾಡಿ, ಪತ್ರಿಕೆಯನ್ನು ಮಾತ್ರ ಓದಬೇಡಿ’ ಎಂದು ಹೇಳುವಂತಾಗಿದೆ! ಏಕೆಂದರೆ, ಅವುಗಳ ಮುಖಪುಟಗಳಲ್ಲೇ ಇಂಥ ಮಾತುಗಳು ಹೆಚ್ಚಾಗಿ ಕಾಣಬರುತ್ತವೆ.
ಒಂದು ನಾಗರಿಕತೆಯಾಗಿ, ಪ್ರಜಾಪ್ರಭುತ್ವದ ದೇಶವಾಗಿ ನಾವು ಎಷ್ಟು ಇಳಿದಿದ್ದೇವೆ, ಇಳಿಯುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇತಿಹಾಸವನ್ನು ಒಂಚೂರು ಸುತ್ತು ಹಾಕಿ ಬರಬೇಕು. ಮಾತೆಂಬುದು ಕೂಡ ಮಹಾತ್ಮ ಗಾಂಧಿಯವರ ಅಹಿಂಸೆಯ ಪರಿಕಲ್ಪನೆಯ ದೊಡ್ಡ ಭಾಗವಾಗಿತ್ತು. ತಾವಾಡುವ ಮಾತು ತಮ್ಮ ರಾಜಕೀಯ ವಿರೋಧಿಗಳನ್ನು (ಜಿನ್ನಾ ರಂಥವರನ್ನು ಕೂಡ) ನೋಯಿಸಬಾರದು ಎಂಬ ಪ್ರಜ್ಞೆ ಗಾಂಧೀಜಿಗಿತ್ತು. ಕೆಟ್ಟ ಮಾತು, ಕೆಟ್ಟ ಕೆಲಸದ ಹಾಗೆಯೇ ಜಗತ್ತನ್ನು ಹಾಳುಮಾಡುತ್ತದೆ ಎಂಬುದು ಅವರ ಗಟ್ಟಿ ನಂಬಿಕೆಯಾಗಿತ್ತು.
ಪ್ರತೀಕಾರದ ಮಾತು ಹೇಗೆ ಮಾನವ ದುರಂತಕ್ಕೆ ಕಾರಣವಾಗುತ್ತದೆ ಎಂಬುದರ ಕುರಿತು ಅವರು ಜಿನ್ನಾರಿಗೆ ಹೇಳಿದ ಮಾತಿದು: Dear Mr. Jinnah, an eye for an eye, makes the whole world blind. ಇದು ಈಗ ಜಾಗತಿಕ ಈಡಿಯಂ ಆಗಿಹೋಗಿದೆ. ನೆಹರು ರನ್ನು ಸುತ್ತುವರಿದಿರುವ ಮಿಕ್ಕ ವಿಷಯಗಳೆಲ್ಲ ಒತ್ತಟ್ಟಿಗಿರಲಿ, ಆದರೆ ಅವರು ತಮ್ಮ ವಿರುದ್ಧದ ಟೀಕೆಯನ್ನೂ ಗಮನವಿಟ್ಟು ಕೇಳಿ, ಅತಿರೇಕದ ಉತ್ತರ ಕೊಡದೆ ಎದ್ದುಹೋಗಬಲ್ಲಂಥ ಪ್ರಜಾಪ್ರಭುತ್ವವಾದಿಗಳಾಗಿದ್ದರು ಎಂಬುದು ಸುಳ್ಳಲ್ಲ. ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣ, ಎಚ್.ಡಿ. ದೇವೇಗೌಡ, ಯಡಿಯೂರಪ್ಪ ಮುಂತಾದ ನಾಯಕರು ಕೂಡ ವೈಯಕ್ತಿಕವಾಗಿ ಗುರಿಯಿಟ್ಟ ಕೀಳುಭಾಷೆ ಆಡಿದವರಲ್ಲ, ಆಡುವವರಲ್ಲ.
ಸುಮಾರು ೪೦ ವರ್ಷಗಳಿಂದ ರಾಜಕಾರಣದಲ್ಲಿರುವ ಆರ್ .ವಿ.ದೇಶಪಾಂಡೆಯವರ ಬಾಯಿಂದ ತಪ್ಪಿ ಕೂಡ ಕೆಳಮಟ್ಟದ
ಮಾತು ಹೊಮ್ಮಿಲ್ಲ. ಆದರೆ ಇತ್ತೀಚೆಗೆ ಇಂಥ ಮಾತುಗಳು ಯುದ್ಧಗಳಲ್ಲಿ ಚಿಮ್ಮುವ ಬಾಣಗಳಂತೆ ಹಾರಾಡಲಾರಂಭಿಸಿವೆ. ಚುನಾವಣೆ ಬಂತೆಂದರೆ ಅಸಹ್ಯದ, ಕೊಳಕು ಮಾತುಗಳ ಹೊಳೆಯೇ ಹರಿಯುತ್ತದೆ.
ಇಂಥ ಮಾತುಗಳೇ ಚುನಾವಣಾ ಕಣವನ್ನು ತುಂಬಿಕೊಂಡಿರುವುದಕ್ಕೆ ಕಾರಣಗಳಿವೆ. ಒಂದನೆಯದು, ಇಂದಿನ ರಾಜಕೀಯ ದಲ್ಲಿರುವ ಹಲವರು ಹಣದ ದೃಷ್ಟಿಯಿಂದ ಅತಿ ಶ್ರೀಮಂತರು, ಹೆಚ್ಚಾಗಿ ರಾಜಕೀಯ ಕುಟುಂಬಗಳಿಂದ ಬಂದವರು ಅಥವಾ ವಾಣಿಜ್ಯ-ವ್ಯವಹಾರಗಳ ಹಿನ್ನೆಲೆಯನ್ನು ಹೊಂದಿದವರು. ಅವರಲ್ಲಿಯೂ ಉನ್ನತ ಶಿಕ್ಷಣ ಪಡೆದವರು, ಸಭ್ಯರು, ಸುಸಂಸ್ಕೃತರು, ಗುಣವಂತರು ಇದ್ದಾರೆ. ಪ್ರಸ್ತುತ ಇಂಥವರು ಇಲ್ಲವೆಂದೇನೂ ಇಲ್ಲ. ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್, ಮಿಲಿಂದ್ ದೇವೊರಾ, ಜಿತಿನ್ ಪ್ರಸಾದ್, ಕರ್ನಾಟಕದ ಕೃಷ್ಣ ಭೈರೇಗೌಡ ಅಂಥವರು ಇದ್ದಾರೆ.
ವಿಷಾದವೆಂದರೆ, ಇಂಥವರ ಸಂಖ್ಯೆ ಬೆರಳೆಣಿಕೆಯಷ್ಟು. ಅಂದರೆ, ಹಲವರಿಗೆ ದೇಶದ ಇತಿಹಾಸ, ಸಂವಿಧಾನ, ಆರ್ಥಿಕ-ಸಾಮಾಜಿಕ ಪರಿಸ್ಥಿತಿಗಳು, ಸಾರ್ವಜನಿಕವಾಗಿ ಚರ್ಚೆಯಾಗಬೇಕಾದ ವಿಷಯಗಳ ಕುರಿತು ಅರಿವಿಲ್ಲ; ಚರ್ಚಾಸ್ಪದ ವಿಷಯಗಳ ಕುರಿತು ತಮ್ಮ ಬೌದ್ಧಿಕ ನಿಲುವೇನು ಎಂಬ ಬಗ್ಗೆ ಜ್ಞಾನ ಕಡಿಮೆ ಅಥವಾ ಇಲ್ಲವೇ ಇಲ್ಲ. ಹಾಗೇ ಒಮ್ಮೆ ಗಮನಿಸಿ, ಇತ್ತೀಚಿನ ಪ್ರಜಾಪ್ರತಿನಿಧಿ ಸಭೆಗಳಲ್ಲಿ ‘ವಿಷಯಾಧಾರಿತವಾಗಿ’ ಮಾತನಾಡಬಲ್ಲವರು, ವಾದ ಮಂಡಿಸಬಲ್ಲವರು ಕಡಿಮೆ. ಹೀಗಾಗಿಯೇ ಹಲವು ವಿಧೇಯಕಗಳು ಚರ್ಚೆಯೇ ಇಲ್ಲದೆ ಕೊನೆಯ ದಿನ ಅನುಮೋದಿಸಲ್ಪಡುತ್ತವೆ. ಬೇರೆ ರೀತಿಯ ‘ಭಂಡವಾಳ’ವನ್ನು
ಹೊಟ್ಟೆ ಬಿರಿಯುವಷ್ಟು ತುಂಬಿಕೊಂಡಿರುವ ಕೆಲ ಜನಪ್ರತಿನಿಧಿಗಳ ಬಳಿ ಜ್ಞಾನದ, ಸಂಸ್ಕೃತಿಯ ‘ಬಂಡವಾಳ’ ಕಡಿಮೆ.
ಇಂಥವರಿಗೆ ಗೊತ್ತಿರುವ ಮಾತು ‘ಹೊಡಿ-ಬಡಿ-ಕಡಿ’ ಸಂಸ್ಕೃತಿಗೆ ಸೇರಿದ್ದು. ಅದೇ ಅವರ ಭಾಷೆ. ಪ್ರಧಾನಿ ಮತ್ತು ರಾಷ್ಟ್ರಪತಿಗಳ ಕುರಿತಾಗಿಯೇ ಇರಲಿ, ತಮ್ಮ ಗೌರವಾನ್ವಿತ ಎದುರಾಳಿಯ ಬಗ್ಗೆಯೇ ಇರಲಿ, ಇವರ ಭಾಷೆ ಅದೇ! ತಮಗೆ ಗೊತ್ತಿಲ್ಲದ ಬೇರೆ ಭಾಷೆಯನ್ನು ಅವರು ತಾನೇ ಒಮ್ಮೆಲೇ ಎಲ್ಲಿಂದ ತಂದಾರು?! ಎರಡನೆಯ ಕಾರಣ, ಇತ್ತೀಚಿನ ದಿನಗಳಲ್ಲಿ ನಮ್ಮ ರಾಜಕೀಯ ಪಕ್ಷಗಳಿಗೆ ‘ಚುನಾವಣಾ ಪ್ರಣಾಳಿಕೆ’ ಎಂಬ ಪರಿಕಲ್ಪನೆಯು ಮರೆತೇಹೋಗಿರುವುದು. ಪ್ರಣಾಳಿಕೆಯು ರಾಜಕೀಯ ಪಕ್ಷವೊಂದರ ಮಹತ್ವದ ಚುನಾವಣಾ ಅಂಗ. ಅದರಲ್ಲಿ ಪಕ್ಷದ ನೀತಿಗಳು (ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜಕೀಯ, ಆರ್ಥಿಕ, ಸಾಮಾಜಿಕ ಇತ್ಯಾದಿ) ವಿವರವಾಗಿ ಮಂಡಿಸಲ್ಪಟ್ಟಿರುತ್ತವೆ, ಮಂಡಿಸಲ್ಪಡಬೇಕು ಕೂಡ.
ಹಾಗೆಯೇ, ಮುಂದಿನ ೫ ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷವು ಅಭಿವೃದ್ಧಿಯ ನಿಟ್ಟಿನಲ್ಲಿ ಏನನ್ನು ಆಲೋಚಿಸುತ್ತಿದೆ ಎಂಬ ವಿವರಗಳೂ ಅದರಲ್ಲಿರಬೇಕು. ಪಕ್ಷದ ಕುರಿತಾದ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ಪಕ್ಷದ ಕಾರ್ಯಕರ್ತ ರಿಗೆ ಒದಗಿಸುವುದು ಇದರ ಮೂಲೋದ್ದೇಶ. ಮೊದಲೆಲ್ಲಾ ಪಕ್ಷದ ಹಿರಿಯರು, ಬುದ್ಧಿವಂತರು, ಶಿಕ್ಷಣವೇತ್ತರು ಇಂಥ ಪ್ರಣಾಳಿಕೆಗಳನ್ನು ಸಜ್ಜುಗೊಳಿಸುತ್ತಿದ್ದರು. ಬಹುತೇಕರಿಗೆ ನೆನಪಿರಬಹುದು, ಕಾಂಗ್ರೆಸ್ನಲ್ಲಿ ಈ ಜವಾಬ್ದಾರಿಯನ್ನು ಪಿ.ವಿ.ನರಸಿಂಹರಾವ್, ಪ್ರಣಬ್ ಮುಖರ್ಜಿ, ವಿಠ್ಠಲ ಗಾಡ್ಗೀಳ್ ಅಂಥವರು ನಿರ್ವಹಿಸುತ್ತಿದ್ದರು.
ಬಿಜೆಪಿಯಲ್ಲಾದರೆ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಷಿ, ಸಿಕಂದರ್ ಬಖ್ತ್ ಮುಂತಾದವರು ಖುದ್ದು ನಿರ್ವಹಿಸುತ್ತಿದ್ದರು. ರಾಮಕೃಷ್ಣ ಹೆಗಡೆಯವರು ಸಂಯೋಜಿಸುತ್ತಿದ್ದ ಪ್ರಣಾಳಿಕೆ ಸಮಿತಿಯಲ್ಲಿ ಘನವಿದ್ವಾಂಸರು ಇರುತ್ತಿದ್ದರು. ಇದರ ಪ್ರಯೋಜನವೆಂದರೆ, ಪ್ರತಿಯೊಬ್ಬ ಕಾರ್ಯಕರ್ತರಿಗೂ ತಮ್ಮ ಪಕ್ಷದ ಹಾಗೂ ಎದುರಾಳಿ ಪಕ್ಷದ ಕುರಿತು ಮಾತನಾಡಲು ವಿಷಯ ಸಿಗುತ್ತಿತ್ತು. ವಿಷಾದದ ಸಂಗತಿಯೆಂದರೆ, ಇಂದು ಬಹುತೇಕ ಪಕ್ಷಗಳು ಪ್ರಣಾಳಿಕೆಯನ್ನು ಹೀಗೆ ಶ್ರದ್ಧೆಯಿಂದ ಸಜ್ಜುಗೊಳಿಸುವ ಪರಿಪಾಠಕ್ಕೆ ತಿಲಾಂಜಲಿಯಿತ್ತಿವೆ.
ಇದಕ್ಕೆ ಮತ್ತೊಂದು ಕಾರಣ, ಜನರು ಅದನ್ನೆಲ್ಲ ಬಯಸುವುದಿಲ್ಲ. ಇದರ ಪರಿಣಾಮವಾಗಿ, ಕಾರ್ಯಕರ್ತರಿಗೆ ರಾಜಕೀಯ
ಬೌದ್ಧಿಕತೆಯನ್ನು ತುಂಬಿಕೊಳ್ಳುವ ಅವಕಾಶವೇ ದಕ್ಕುತ್ತಿಲ್ಲ. ಅವರಿಗೆ ಸಿಗುತ್ತಿರುವುದು ‘ಹೊಡಿ-ಬಡಿ-ಕಡಿ’ ಧಾಟಿಯ ಮಾತುಗಳು ಮಾತ್ರವೇ. ಬಹುಶಃ ನಮ್ಮ ಸಾಮಾನ್ಯ ರಾಜಕೀಯ ಕಾರ್ಯಕರ್ತರ ‘ರಾಜಕೀಯ ಅಜ್ಞಾನ’ವೇ ಮೇಲೆ ಹೇಳಲಾದ ರೀತಿಯ ಮಾತುಗಳು ಹೊಮ್ಮಲು ಕಾರಣ.
ಇಂಥ ಮಾತುಗಳು ಸಾರ್ವಜನಿಕ ವಲಯದಲ್ಲಿ ನಿರ್ವಿಘ್ನವಾಗಿ ಹಬ್ಬುತ್ತಿರುವುದಕ್ಕೆ ಮೂರನೆಯ ಕಾರಣ, ನಮ್ಮ ಕಾನೂನು ಗಳಲ್ಲಿನ ನ್ಯೂನತೆ. ದ್ವೇಷ ಭಾಷಣ, ಪ್ರಚೋದನಕಾರಿ ಭಾಷಣ ಅಥವಾ ಮೂರನೇ ದರ್ಜೆಯ ಮಾತುಗಳು ಬಯಲಿಗೆ ಬಾರದಂತೆ ತಡೆಯುವ ಗಟ್ಟಿಯಾದ ಕಾನೂನುಗಳು ನಮ್ಮ ಬಳಿ ಇದ್ದಂತಿಲ್ಲ. ಅವರನ್ನು ಕತ್ತರಿಸಬೇಕು, ಇವರನ್ನು ತುಂಡರಿಸಬೇಕು, ಇನ್ನೊಬ್ಬರನ್ನು ಅರಬ್ಬಿ ಸಮುದ್ರಕ್ಕೆ ಎಸೆಯಬೇಕು, ರಕ್ತ ಹರಿಸಬೇಕು, ಕಣ್ಣು ಕೀಳಬೇಕು ಇಂಥ ಮಟ್ಟದ ಬಹಿರಂಗ ಮಾತುಗಳನ್ನು ಕೂಡ ನಮ್ಮ ಕಾನೂನು-ಸುವ್ಯವಸ್ಥೆ ವ್ಯವಸ್ಥೆಯು ಹೊಟ್ಟೆಗೆ ಹಾಕಿಕೊಂಡು, ಉದಾರ ನೀತಿ ಅನುಸರಿಸಿ, ಮಾ- ಮಾಡಿ ಬಿಟ್ಟುಬಿಡುತ್ತಿರುವಂತಿದೆ.
ಇಂಥ ಮಾತಾಡುವವರಿಗೆ ಖಡಕ್ ಶಿಕ್ಷೆ ನೀಡಬಲ್ಲ ಕಾನೂನಿನ ಮುನ್ನೇರ್ಪಾಡುಗಳು/ನಿಬಂಧನೆ ಗಳು ನಮ್ಮ ಬಳಿ ಇದ್ದಂತಿಲ್ಲ. ಹೀಗಾಗಿ, ಏನು ಬೇಕಾದರೂ ಮಾತಾಡಿ ದಕ್ಕಿಸಿಕೊಳ್ಳಬಲ್ಲಂಥ ಸ್ವಾತಂತ್ರ್ಯ ಕೆಲವರಿಗೆ ಸಿಕ್ಕಿದಂತಿದೆ. ಇನ್ನೂ ಒಂದು ಮಹತ್ವದ ಕಾರಣವಿದೆ, ಅದು ಅಕಡೆಮಿಕ್ ಜಗತ್ತಿಗೆ ಸಂಬಂಽಸಿದ್ದು ಮತ್ತು ಒಟ್ಟಾರೆಯಾಗಿ ಭಾಷೆಗಳ ಕಲಿಕೆಗೆ/ಕಲಿಸುವಿಕೆ, ಭಾಷಾ ಮಾಧ್ಯಮದ ಕುರಿತಾದದ್ದು. ಅದೆಂದರೆ, ನಾವು ಭಾಷೆಗಳ ಕಲಿಕೆಯನ್ನು ಸತತವಾಗಿ ಅವಗಣನೆ ಮಾಡಿದ್ದರಿಂದ, ಸಹಜ ವಾಗಿಯೇ ಜನರ ಭಾಷಾಬಳಕೆಯ ಸಾಮರ್ಥ್ಯ ಕಳೆದುಹೋಗಿದೆ. ಅಂದರೆ, ಅವರ ಶಬ್ದಸಂಪತ್ತು, ಬದಲಿ ಶಬ್ದಗಳ ಬಳಕೆಯ ಸಾಧ್ಯತೆ, ಸೂಕ್ಷ್ಮ ಶಬ್ದಗಳನ್ನು ಉಪಯೋಗಿಸಬಲ್ಲ ಪ್ರೌಢಿಮೆ ಹಾಗೂ ವೈವಿಧ್ಯಮಯ ವಾಕ್ಯಗಳನ್ನು ರಚಿಸಬಲ್ಲ ಸಾಮರ್ಥ್ಯ ತೀರಾ ಕಡಿಮೆಯಾಗಿದೆ.
ಕಲಿಯುವಿಕೆ/ಕಲಿಸುವಿಕೆಯಲ್ಲಿನ ಇಂಥ ವ್ಯಾಪಕ ನ್ಯೂನತೆಯನ್ನು ಮರೆಮಾಚಲು ಅಕಡೆಮಿಕ್ ಜಗತ್ತು ವಿದ್ಯಾರ್ಥಿಗಳಿಗೆ ಕಣ್ಣು ಮುಚ್ಚಿ ನೂರಕ್ಕೆ ನೂರು ಅಂಕಗಳನ್ನು ನೀಡಿಬಿಡುತ್ತಿದೆ. ಪರಿಣಾಮವಾಗಿ, ಇಂದಿನ ಸಾಕಷ್ಟು ಪದವೀಧರರು, ಸ್ನಾತಕೋ ತ್ತರ ಪದವೀಧರರಲ್ಲಿ ಭಾಷಾಬಳಕೆಯ ಸೂಕ್ಷ್ಮತೆ ಮೈಗೂಡುವುದೇ ಇಲ್ಲ. ಇಂಥವರಿಗೆ ಒಂದು ನೀಳ್ಗತೆಯನ್ನು ಇಡಿಯಾಗಿ ಓದಲಾಗುವುದಿಲ್ಲ; ಏಕೆಂದರೆ ಕೇವಲ ಒಂದು ಶಬ್ದವನ್ನು ವಾಕ್ಯದ ಖಾಲಿಬಿಟ್ಟ ಸ್ಥಳದಲ್ಲಿ ತುಂಬಿ ಕೈತೊಳೆದು ಕೊಳ್ಳುವ ‘ಆಬ್ಜೆಕ್ಟಿವ್ ಮಾದರಿ’ ಪ್ರಶ್ನೆಪತ್ರಿಕೆ ಸಂಸ್ಕೃತಿಯ ಮಕ್ಕಳಿವರು. ಅಂಥ ಒಂದು ಶಬ್ದತುಂಬಲೂ ಸಹಾಯವಾಣಿಯ ಲಭ್ಯತೆಯು ಹೆಚ್ಚುಕಡಿಮೆ ಪದವಿಯ ತನಕವೂ ಇರುತ್ತದೆ. ಹೀಗಾಗಿ ಭಾಷೆಗಳ ಅಸ್ತಿತ್ವವೇ ಕುಸಿಯುತ್ತಿದೆ.
ಇಂಥ ಭಾಷಾವೈಕಲ್ಯವನ್ನು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞ ಗಣೇಶ್ ದೇವಿ ಅವರು ‘ಅ-ಸಿಯ’ ಎಂದು ಕರೆಯು ತ್ತಾರೆ. ಒಂದು ಸಮಸಮಾಜವೇ ತನ್ನ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿರುವಾಗ ಇಂಥ ಮಾತೆಲ್ಲ ಸಾಮಾನ್ಯವಾಗಿ ಬಿಡುತ್ತವೆ. ‘ಐ ಲವ್ ಯೂ’ ಎಂಬ ಮಾತು, ‘ಆತೀ ಕ್ಯಾ ಖಂಡಾಲಾ’ ಎಂಬುದಾಗಿ ರೂಪಾಂತರಗೊಳ್ಳುತ್ತದೆ. ಕೇಳಿದೊಡನೆ ಮನವನ್ನು ಕಲಕಿಬಿಡುವ ಸಿನಿಮಾ ಹಾಡುಗಳ ಸಾಲುಗಳು, ಮರೆಯಲಾಗದ ಸಿನಿಮಾ-ಸೀರಿಯಲ್ ಸಂಭಾಷಣೆಗಳು, ಭಾವಗೀತೆಗಳು ಕಣ್ಮರೆಯಾಗುತ್ತಿರುವ ಕಾರಣ ಕೂಡ ಇದೇ. ಸಾರ್ವಜನಿಕ ಭಾಷೆಯ ಗುಣಮಟ್ಟ ಪಾತಾಳ ತಲುಪಿರುವುದೂ ನಮ್ಮ ಪ್ರಜಾ ಪ್ರಭುತ್ವದ ವಿಕೃತಿಯೇ!
(ಲೇಖಕರು ಮಾಜಿ ಪ್ರಾಂಶುಪಾಲರು)