Tuesday, 10th September 2024

ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ವಿಪಕ್ಷಗಳ ಧ್ಯೇಯದ ಇತಿಮಿತಿಗಳು

ಚಕ್ರವ್ಯೂಹ

ರಾಜದೀಪ್ ಸರ್‌ದೇಸಾಯಿ

‘ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಬಿಜೆಪಿ’- ಇದು ಇತ್ತೀಚೆಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಿಜೆಪಿಯೇತರ ವಿಪಕ್ಷ ಗಳು ಹಮ್ಮಿಕೊಂಡಿದ್ದ ‘ಪ್ರಜಾಪ್ರಭುತ್ವವನ್ನು ಉಳಿಸಿ’ ಎಂಬ ಹಣೆಪಟ್ಟಿಯ ಭಾರಿ ಬಹಿರಂಗ ಸಭೆಯಲ್ಲಿ ಮುಖಕ್ಕೆ ರಾಚಿದ
ಭರ್ಜರಿ ಬ್ಯಾನರ್! ಸರಿಸುಮಾರು ೭-೮ ತಿಂಗಳಿಂದ ದೇಶದ ರಾಜಕೀಯ ಅಖಾಡದಲ್ಲಿ ನಡೆಯುತ್ತಿರುವ ‘ಹೊಯ್-ಕೈ’ ಶೈಲಿಯ ಕಸರತ್ತುಗಳನ್ನು ನೋಡಿಕೊಂಡೇ ಬಂದವರಲ್ಲಿ, ‘೨೦೨೪ರ ಚುನಾವಣಾ ಕಾರ್ಯಸೂಚಿಯನ್ನು ನಿಗದಿಪಡಿಸುವೆಡೆಗೆ ಈ ಬ್ಯಾನರ್ ಗುರಿಯಿಟ್ಟಿದೆಯೇ?’ ಎಂಬ ಚಿಂತನೆ ಸುಳಿದಾಡಿರಲಿಕ್ಕೂ ಸಾಕು!

ರಾಮಲೀಲಾ ಮೈದಾನದಲ್ಲಿನ ಈ ಅಬ್ಬರವನ್ನು ನೋಡಿದಾಗ, ೧೯೭೭ರ ಐತಿಹಾಸಿಕ ಚುನಾವಣೆ ಅಪ್ರಯತ್ನವಾಗಿ ನೆನಪಾ ಯಿತು. ಕಾರಣ, ಅದು ಇಂಥದೇ ವೃತ್ತಾಂತ ನಿರೂಪಣೆಯ ಮೇಲೆ ಗಮನವನ್ನು ಕೇಂದ್ರೀಕರಿಸಿ ಅಂದಿನ ವಿಪಕ್ಷಗಳು ಕಡೆಯ ಬಾರಿಗೆ ಜಮಾವಣೆಗೊಂಡಿದ್ದ ಸಂದರ್ಭವಾಗಿತ್ತು. ಆ ಚುನಾವಣೆಯಲ್ಲಿ ವಿಪಕ್ಷಗಳ ಸಂಯೋಜಿತ ಬಲವು ಒಗ್ಗೂಡಿದ ಪರಿಣಾಮ ಕಾಂಗ್ರೆಸ್‌ನ ಇಂದಿರಾ ಗಾಂಧಿಯವರು ಸೋಲುಣ್ಣಬೇಕಾಯಿತು ಎನ್ನಿ.

ಆದರೆ, ೨೦೨೪ರ ಈ ಚುನಾವಣೆಯನ್ನು ೧೯೭೭ರ ಆ ಚುನಾವಣೆಗೆ ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಶುದ್ಧಾಂಗವಾಗಿ ಹೋಲಿಸಲಾಗುವುದಿಲ್ಲ ಎಂಬುದು ವಾಸ್ತವ. ಇದಕ್ಕಿರುವ ಸಮರ್ಥನೆಗಳನ್ನು ಒಂದೊಂದಾಗಿ ನೋಡುತ್ತಾ ಹೋಗೋಣ. ಮೊದಲಿಗೆ, ೧೯೭೭ರ ಕಾಲಘಟ್ಟದಲ್ಲಿ ಹೇರಲ್ಪಟ್ಟ ೨೧ ತಿಂಗಳ ಅವಧಿಯ ತುರ್ತುಪರಿಸ್ಥಿತಿಯು, ನೂರಾರು ಜನ ರಾಜಕಾರಣಿಗಳು ಹಾಗೂ ರಾಜಕೀಯ ಹೋರಾಟಗಾರರು/ ಕ್ರಿಯಾವಾದಿಗಳು ಜೈಲುಪಾಲಾಗುವುದಕ್ಕೆ ಸಾಕ್ಷಿಯಾಯಿತು; ಆದರೆ ವಿಪಕ್ಷಗಳಿಗೆ ಸೇರಿದ ಇಬ್ಬರು ಮುಖ್ಯಮಂತ್ರಿಗಳನ್ನು ಇತ್ತೀಚೆಗೆ ಬಂಧಿಸಿದ ಬೆಳವಣಿಗೆಗೆ ಈ ‘ಫ್ಲ್ಯಾಷ್‌ಬ್ಯಾಕ್’ ಘಟನೆಯನ್ನು ಹೋಲಿಸಲಾಗುವುದಿಲ್ಲ.

ಕೇಂದ್ರೀಯ ಸಂಸ್ಥೆಗಳನ್ನು ‘ರಾಜಕೀಯದ ಆಯುಧಗಳನ್ನಾಗಿಸಿ’ ವಿಪಕ್ಷಗಳ ನಾಯಕರ ವಿರುದ್ಧ ಅವನ್ನು ಲಂಗುಲಗಾಮಿಲ್ಲದೆ ಬಳಸುವ ಪರಿಪಾಠವು ‘ಅಧಿಕಾರದ ದುರುಪಯೋಗವಾಗುತ್ತಿದೆ ಮತ್ತು ರಾಜಕೀಯ ಅಖಾಡವು ಸಮತಟ್ಟಾಗಿಲ್ಲ’ ಎಂಬುದನ್ನು ‘ಅನಿಷ್ಟ ಸೂಚಕ’ ದಂತೆ ಹೇಳುತ್ತಿರುವುದರ ಜತೆಗೆ, ‘ವಿಪಕ್ಷ-ಮುಕ್ತ ಭಾರತ’ ಎಂಬ ಹಂತವನ್ನು ನಾವು ಪ್ರವೇಶಿಸುತ್ತಿದ್ದೇವೆ ಎಂಬುದನ್ನೂ ಸೂಚಿಸುತ್ತಿದೆ. ಇದು ನಿಜಕ್ಕೂ ಗಾಬರಿ ಹುಟ್ಟಿಸುವ ಸಂಗತಿ.

ಮಹಾರಾಷ್ಟ್ರದಂಥ ರಾಜ್ಯದಲ್ಲಿ, ಒಂದೊಂದು ಸ್ಥಾನಕ್ಕೆ ಸಂಬಂಧಿಸಿದಂತೆಯೂ ತಲೆದೋರಿರುವ ತೀವ್ರ ಪೈಪೋಟಿಯನ್ನು ಕಂಡಾಗ ನಿಮಗೆ ಇದರ ಅರಿವಾಗುತ್ತದೆ. ಎರಡನೆಯದಾಗಿ, ಪ್ರಸ್ತುತ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿಯೇತರ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟ ಎಂಬ ‘ಅಸಂಘಟಿತ’ ಕೂಟದ ನಾಯಕತ್ವಕ್ಕೆ ಹೋಲಿಸಿದಾಗ, ೧೯೭೭ರಲ್ಲಿ ಹೊರಹೊಮ್ಮಿದ್ದ ವಿಪಕ್ಷಗಳ ನಾಯಕ ತ್ವವು ಹೆಚ್ಚು ಅನುಭವಿಯೂ, ಗೌರವಾನ್ವಿತವೂ ಆಗಿತ್ತು. ಆದರೆ ಈಗಿನ ‘ಇಂಡಿಯ’ ಮೈತ್ರಿಕೂಟವು ತನ್ನನ್ನು ಒಂದು ‘ಐಕಮತ್ಯ ದ ರಂಗಸ್ಥಳ’ವಾಗಿ ಬಿಂಬಿಸಿಕೊಳ್ಳಲು ಹೆಣಗಾಡುವಂತಾಗಿದೆ.

೧೯೭೭ರ ಕಾಲಘಟ್ಟದಲ್ಲಿ, ಜನಸಂಘ ಮತ್ತು ಸಮಾಜವಾದಿಗಳಂಥ ಭಿನ್ನ ಚಿಂತನೆಯ ಶಕ್ತಿಗಳನ್ನು ಒಗ್ಗೂಡಿಸಿ, ‘ಕಾಂಗ್ರೆಸ್
ವಿರೋಧಿ ನಿಲುವು’ ಎಂಬ ಶಕ್ತಿಶಾಲಿ ಅಂಟಿನಿಂದ ಅವನ್ನು ಪರಸ್ಪರ ಸೇರಿಸಿ, ಜನತಾಪಕ್ಷ ಎಂಬ ಕೂಟವನ್ನು ರಾತ್ರೋರಾತ್ರಿ
ಕಟ್ಟಲಾಯಿತು; ಜಯಪ್ರಕಾಶ್ ನಾರಾಯಣರಂಥ (ಜೆಪಿ) ಸ್ವಾತಂತ್ರ್ಯ ಚಳವಳಿಯ ಧುರೀಣರ ನೈತಿಕ ಮಾರ್ಗದರ್ಶನ ಈ ಕೂಟಕ್ಕಿತ್ತು. ಆದರೆ, ಮೊನ್ನೆ ರಾಮಲೀಲಾ ಮೈದಾನದಲ್ಲಿ ಜಮಾಯಿಸಿದ್ದವರ ಪೈಕಿ ಯಾರಾದರೂ ಜೆಪಿಯವರಲ್ಲಿದ್ದಂಥ ‘ತತ್ವನಿಷ್ಠ ನಾಯಕತ್ವ’ವನ್ನು ವಹಿಸಿಕೊಳ್ಳಬಲ್ಲರೇ? ಅಂಥದೊಂದು ಪ್ರಜ್ಞೆಯನ್ನು ಆವಾಹಿಸಿಕೊಳ್ಳಬಲ್ಲರೇ? ಈ ಒಕ್ಕೂಟದ
ಸಹವರ್ತಿಗಳಲ್ಲಿನ ವಿಪರ್ಯಾಸವೆಂದರೆ, ‘ಮೋದಿ-ವಿರೋಧಿ ನಿಲುವು’ ಎಂಬುದು ಮೇಲ್ನೋಟಕ್ಕೆ ಈ ಎಲ್ಲ ವಿಪಕ್ಷಗಳನ್ನೂ
ಒಗ್ಗೂಡಿಸಿದ್ದರೆ, ಮತ್ತೊಂದೆಡೆ ವಾಸ್ತವದಲ್ಲಿ ಅವುಗಳ ನಡುವಿನ ವಿರೋಧಾಭಾಸಗಳು ದಟ್ಟವಾಗಿವೆ.

ಅಂದರೆ, ಪಂಜಾಬ್‌ನಲ್ಲಿ ಆಮ್ ಆದ್ಮಿಗೆ ಎದುರಾಗಿ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಎದುರಾಗಿ ಎಡಪಕ್ಷಗಳು ಮತ್ತು ಕಾಂಗ್ರೆಸ್‌ನ ಸಂಯೋಜನೆ, ಅಷ್ಟೇಕೆ ಕೇರಳದಲ್ಲೂ ಕಾಂಗ್ರೆಸ್ ಎದುರಿಗೆ ಎಡಪಕ್ಷಗಳು ಜಟಾಪಟಿಯಲ್ಲಿ ತೊಡಗಿವೆ. ಮೂರನೆಯದಾಗಿ, ‘ಪ್ರಜಾಪ್ರಭುತ್ವವು ಅಪಾಯದಲ್ಲಿ ಸಿಲುಕಿದೆ’ ಎಂದು ಅಬ್ಬರಿಸಿ ಬೊಬ್ಬಿರಿಯುತ್ತಿರುವ ಈ ವಿಪಕ್ಷ
ನಾಯಕರಲ್ಲಿ ಅನೇಕರು ಶುದ್ಧಹಸ್ತರಾಗೇನೂ ಉಳಿದಿಲ್ಲ. ಕಳೆದ ದಶಕದಲ್ಲಿ, ವಿಪಕ್ಷಗಳ ಹಲವು ಮುಖ್ಯಮಂತ್ರಿಗಳ ವಿರುದ್ಧ
ನಿರಂಕುಶ ವರ್ತನೆಯ ಆರೋಪಗಳು ಹೊಮ್ಮಿರುವುದುಂಟು.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ (ಈ ರಾಜ್ಯವು ಮಹಾರಾಷ್ಟ್ರ ವಿಕಾಸ್ ಅಘಾಡಿ ಒಕ್ಕೂಟದ
ಆಳ್ವಿಕೆಯಲ್ಲಿದ್ದಾಗ) ರಾಜ್ಯಗಳಲ್ಲಿ ಹೊಮ್ಮಿದ ಭಿನ್ನಮತೀಯ ದನಿಗಳು ದಂಡನಾತ್ಮಕ ಕ್ರಮವನ್ನು ಎದುರಿಸಿವೆ. ಕೇಂದ್ರ ಸರಕಾರದ ಪಾಲಿಗೆ ಜಾರಿ ನಿರ್ದೇಶನಾಲಯವು ‘ಬಲತೋಳು’ ಆಗಿಬಿಟ್ಟಿರುವಂತೆಯೇ, ರಾಜ್ಯಗಳ ರಾಜಧಾನಿಗಳಲ್ಲಿ ಸ್ಥಳೀಯ
ಪೊಲೀಸರು ಆ ಜಾಗವನ್ನು ತುಂಬಿದ್ದಾರೆ.

ನಾಲ್ಕನೆಯದಾಗಿ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಪಾಡುವ ಅಗತ್ಯತೆ ಮತ್ತು ನಾಗರಿಕರ ಪೂರ್ವಕಲ್ಪಿತ ಅಭಿಪ್ರಾಯಗಳ
ನಡುವಿನ ಸಂಬಂಧ ದಿನೇದಿನೆ ಶಿಥಿಲಗೊಳ್ಳುತ್ತಿದೆ. ೧೯೭೭ರಲ್ಲಿ, ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳನ್ನು ನಿರ್ಬಂಧಿಸುವ, ಅವುಗಳ
ಕತ್ತು ಹಿಸುಕುವ ಪರಿಪಾಠದ ವಿರುದ್ಧ ತಾರಕಕ್ಕೇರಿದ್ದ ಜನಾಕ್ರೋಶವು ಸ್ವತಃ ಪ್ರಕಟಗೊಂಡಿತು. ಅದರಲ್ಲೂ ನಿರ್ದಿಷ್ಟವಾಗಿ ಉತ್ತರ ಭಾರತದಲ್ಲಿ ಈ ಕೆರಳಿಕೆ ಒಂದು ಗುಕ್ಕು ಹೆಚ್ಚೇ ಎನ್ನುವಂತಿತ್ತು; ಕಾರಣ, ಇಂದಿರಾ ಗಾಂಧಿಯವರ ಸರಕಾರವು ಬಲವಂತ ವಾಗಿ ಹೇರಿದ ಸಂತಾನಶಕ್ತಿಹರಣ ಉಪಕ್ರಮವು ದೌರ್ಜನ್ಯದ ರೂಪ ತಳೆದು ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.

ಆದರೆ, ತುರ್ತುಪರಿಸ್ಥಿತಿಯ ಕ್ರಮಗಳು ಮತದಾರರ ಮೇಲೆ ನೇರ ಪರಿಣಾಮಗಳನ್ನು ಬೀರದ ದಕ್ಷಿಣ ಭಾರತವು ೧೯೭೭ರಲ್ಲಿ ಹೇಗೆ ಕಾಂಗ್ರೆಸ್‌ನ ತೆಕ್ಕೆಯನ್ನು ಸೇರಿತು ಎಂಬುದನ್ನು ನೆನಪಿಸಿಕೊಳ್ಳಿ. ಎಲ್ಲಕ್ಕಿಂತ ಮಿಗಿಲಾಗಿ, ಒಂದು ಕಾಲಕ್ಕೆ ‘ಪ್ರಜಾಪ್ರಭುತ್ವದ ಆದರ್ಶಗಳ ಜ್ಯೋತಿಯನ್ನು ಹೊತ್ತವರು’ ಎಂಬ ಹೆಗ್ಗಳಿಕೆ ಹೊಂದಿದ್ದ ನಗರ ಪ್ರದೇಶಗಳ ಮಧ್ಯಮ ವರ್ಗದ ಜನರು ಈಗ, ೧೯೭೦ರ ದಶಕದಲ್ಲಿ ಇದ್ದುದಕ್ಕಿಂತ ವಿಭಿನ್ನವಾದ ಸಮಾಜೋ- ಆರ್ಥಿಕ ವರ್ಗದವರು ಎನಿಸಿಕೊಂಡಿದ್ದಾರೆ. ಭಾರತದಂಥ
ವೇಗವಾಗಿ ಬೆಳೆಯುತ್ತಿರುವ, ತಂತ್ರಜ್ಞಾನದ ಒತ್ತಾಸೆಯಿರುವ ಆರ್ಥಿಕತೆಯಲ್ಲಿ, ಮಹತ್ವಾಕಾಂಕ್ಷೆಯ, ‘ನನಗೆ-ಮೊದಲು’
ಎನ್ನುವಂಥವರ ಪೀಳಿಗೆಯು, ವೈಯಕ್ತಿಕ ಹಿತಾಸಕ್ತಿಗಳು ನೇರವಾಗಿ ಅಪಾಯಕ್ಕೆ ಈಡಾಗದ ಹೊರತು ರಾಜಕೀಯ ಕ್ರಿಯಾವಾದ ದಿಂದ ದೂರ ಉಳಿಯುತ್ತಿದೆ.

ಉದಾಹರಣೆಗೆ, ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಪದೇಪದೆ ಸೋರಿಕೆಯಾಗಿದ್ದರಿಂದ ಕೋಪಗೊಂಡ ಯುವಜನರು, ಕೃಷಿ ಕಾನೂನು ಸಂಬಂಧದ ಹೋರಾಟದ ವೇಳೆ ರೈತರು ಮಾಡಿದಂತೆಯೇ ಬೀದಿಗಿಳಿದರು. ಆದರೆ, ಬಹುತೇಕರ ಪಾಲಿಗೆ, ಧ್ರುವ ರಾಠೀ ಅವರ ವೈರಲ್ ವಿಡಿಯೋವೊಂದನ್ನು ಉತ್ಸಾಹಭರಿತರಾಗಿ ಹಂಚಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ‘ಕ್ಲಿಕ್‌ಬೈಟ್’ ಕ್ರಿಯಾವಾದ ಅಥವಾ ಸಿದ್ಧಾಂತವು ‘ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ರಕ್ಷಿಸುವ’ ಯಾವುದೇ ಹೋರಾಟದಲ್ಲಿನ ಸಾರ್ವಜನಿಕ ಸಹಭಾಗಿತ್ವ ಕ್ಕಿರುವ ಮಿತಿಯಾಗಿದೆ. ಆದರೆ, ೧೯೭೦ರ ದಶಕದಲ್ಲಿ ಪ್ರಜಾಸತ್ತಾತ್ಮಕ ಅವಕಾಶಗಳಿಗಾಗಿ, ಹಕ್ಕುಗಳಿಗಾಗಿ ಹೋರಾಡುವುದು ಅಂದಿನ ಯುವಪೀಳಿಗೆಯವರಿಗೆ ಮುಖ್ಯವಾಗಿತ್ತು; ಆಕ್ರಮಣಶೀಲ ವೃತ್ತಿಸಂಘ ವ್ಯವಸ್ಥೆ, ಬದ್ಧತೆಯುಳ್ಳ ಪೌರಸ್ವಾತಂತ್ರ್ಯದ ಗುಂಪುಗಳು ಮತ್ತು ಆದರ್ಶವಾದಿ ರಾಜಕೀಯ ಇತ್ಯಾದಿ ಪರಿಕಲ್ಪನೆಗಳು ಕೆನೆಗಟ್ಟಿದ್ದ ಕಾಲಘಟ್ಟವಾಗಿತ್ತು ೧೯೭೦ರ ದಶಕ.

ಆದರೆ ಈ ಪರಿಪಾಠವೀಗ ತನ್ನದೇ ಮಿತಿಯಲ್ಲಿ ತೊಳಲಾಡುತ್ತಿದೆ; ಕೈಬರಹದ ಘೋಷಣೆಗಳು ಮತ್ತು ಚರ್ವಿತಚರ್ವಣ ವಾಟ್ಸ್ಯಾಪ್ ಸಂದೇಶಗಳಿಂದ ಆಚೆಗೆ ಈ ಹೋರಾಟ ಪ್ರಜ್ಞೆಯುಣುಕುವುದೇ ಅಪರೂಪವಾಗಿಬಿಟ್ಟಿದೆ. ತಮಾಷೆಯೆನ್ನುವಂತೆ, ನಗರ ಪ್ರದೇಶಗಳ ಮಧ್ಯಮ ವರ್ಗೀಯರು ಕೆಲವರ್ಷದ ಹಿಂದೆ ಆಕ್ರೋಶವನ್ನು ತೋರಿದ್ದುಂಟು; ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಗಡಿಗರು ೨೦೧೧ರಲ್ಲಿ ‘ಭ್ರಷ್ಟಾಚಾರ-ವಿರೋಧಿ ಆಂದೋಲನ’ವನ್ನು ಹುಟ್ಟುಹಾಕಿದಾಗ ಭುಗಿಲೆದ್ದಿದ್ದ ಮಧ್ಯಮ ವರ್ಗೀಯರ ಆಕ್ರೋಶವು ರಾಜಕೀಯ ವಲಯದ ಮಹಾರಥಿಗಳನ್ನು ಅಕ್ಷರಶಃ ಅಲುಗಾಡಿಸಿತ್ತು.

ನಗರ ಪ್ರದೇಶಗಳ ಮಧ್ಯಮ ವರ್ಗದ ಜನರು ಹಾಗೆ ಭುಗಿಲೆದ್ದಿದ್ದು ಅದೇ ಕೊನೆಯಬಾರಿಗೆ ಎನ್ನಬೇಕು. ರಾಜಕೀಯವನ್ನು ಶುದ್ಧೀಕರಿಸುವಲ್ಲಿನ ಧರ್ಮಯುದ್ಧ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡ ಈ ಆಂದೋಲನವು, ಒಂದಿಡೀ ರಾಜಕೀಯ ವರ್ಗದ ವಿರುದ್ಧ ಮುನ್ನೆಲೆಗೆ ಬಂದ, ’ಚೆನ್ನಾಗಿ ಪರ್ಯಾಲೋಚಿಸಿದ’ ಹೋರಾಟವಾಗಿತ್ತು. ‘ಸಬ್ ನೇತಾ ಚೋರ್ ಹೈ’ (ಎಲ್ಲ ಜನನಾ ಯಕರೂ ಕಳ್ಳರಿದ್ದಾರೆ) ಎಂಬ ಘೋಷಣೆಯು ಸ್ಥಾಪಿತ ವ್ಯವಸ್ಥೆ/ಸರಕಾರದ ವಿರೋಧಿ ಭಾವನೆಯ ಒಂದು ಪುನರಾವರ್ತಿತ ಕೂಗಾಗಿ ಮಾರ್ಪಟ್ಟಿತು.

ಈಗ, ಚಕ್ರವು ಒಂದು ಸಂಪೂರ್ಣ ಸುತ್ತು ತಿರುಗಿದೆ. ‘ಭ್ರಷ್ಟಾಚಾರ-ವಿರೋಧಿ’ ಆಂದೋಲನದ ಮುಖವಾಣಿ ಎನಿಸಿಕೊಂಡಿದ್ದ ಅರವಿಂದ ಕೇಜ್ರಿವಾಲರೇ ಈಗ ಅಂಥದೊಂದು ಕಳಂಕವನ್ನು ಅಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ; ಒಂದು ಕಾಲಕ್ಕೆ ಯಾರ ವಿರುದ್ಧ ಕೇಜ್ರಿವಾಲರು ಅಬ್ಬರಿಸಿ ಭ್ರಷ್ಟಾಚಾರದ ಆರೋ ಪವನ್ನು ಮಾಡಿದ್ದರೋ, ಅಂಥವರ ಸಂಗದಲ್ಲೇ ಅವರೀಗ ಸಿಲುಕಿ
ದೆಹಲಿ ಮದ್ಯ ಹಗರಣದ ಮಸಿಯನ್ನು ಮೆತ್ತಿಕೊಳ್ಳುವಂತಾಗಿದೆ. ಹೀಗೆ ಮೂಲಭೂತವಾಗಿ ಸ್ವಯಂರಕ್ಷಣೆಯ ಗುರಿಯನ್ನೇ
ಹೊಂದಿರುವ ಇಂಥ ರಾಜಕೀಯ ವ್ಯವಸ್ಥೆಯು ಹೇಗೆ ತಾನೇ ವಿಶ್ವಾಸಾರ್ಹವಾಗಿದ್ದೀತು? ಅಥವಾ ಸಮರ್ಥನೀಯವಾದೀತು? ವಿರೋಧಾಭಾಸವೆಂದರೆ, ಕೇಜ್ರಿವಾಲರ ‘ಇಂಡಿಯಾ ಅಗೇನ್ ಕರಪ್ಷನ್’ (ಭ್ರಷ್ಟಾಚಾರ-ವಿರೋಧಿ ಭಾರತ) ಆಂದೋಲನವು
ಹುಟ್ಟುಹಾಕಿದ, ರಾಜಕಾರಣಿಗಳನ್ನು ತೀವ್ರವಾಗಿ ವಿರೋಧಿಸುವ ಚಿತ್ತಸ್ಥಿತಿಯ ಅತಿದೊಡ್ಡ ಫಲಾನುಭವಿಯಾಗಿದ್ದು ಪ್ರಧಾನಿ
ಮೋದಿಯವರು.

ಕೇಜ್ರಿವಾಲರ ಹೋರಾಟದ ಫಲವಾಗಿ ಇಕ್ಕಟ್ಟಿಗೆ ಸಿಲುಕಿ ಗದ್ದುಗೆ ಕಳೆದುಕೊಂಡ ಮನಮೋಹನ್ ಸಿಂಗ್ ಸರಕಾರದ ಸಮಾಧಿಯ  ಮೇಲೆಯೇ ಮೋದಿಯವರ ಅಧಿಕಾರ ಸಿಂಹಾಸನ ರಾರಾಜಿಸಿದ್ದಲ್ಲವೇ?! ರಾಜಕೀಯ ನಿಷ್ಕೃಷ್ಟತೆಯ ಯಾವುದೇ ಸಂಹಿತೆಗೆ ಅಂಟಿಕೊಳ್ಳದೆಯೇ, ಮೋದಿಯವರು ಈ ಘಟ್ಟದಲ್ಲಿ ಜಾಣಹೆಜ್ಜೆಯನ್ನಿಟ್ಟರು ಎನ್ನಬೇಕು; ಅಂದರೆ, ರಾಜಕೀಯ ವಲಯದಲ್ಲಿ ಸಂಪೂರ್ಣ ಪ್ರಾಬಲ್ಯವನ್ನು ಸಾಧಿಸಬೇಕೆಂಬ ತಮ್ಮ ಹೆಬ್ಬಯಕೆಯನ್ನು ಈಡೇರಿಸಿಕೊಳ್ಳಲೆಂದು ಮೋದಿಯವರು ಎಲ್ಲ ತೆರನಾದ ಸಾಂಸ್ಥಿಕ ಇತಿಮಿತಿಗಳನ್ನು ಕಿತ್ತೊಗೆಯಲು ಮುಂದಾದರು ಮತ್ತು ಈ ಪ್ರಯತ್ನದಲ್ಲಿ ಅವರ ನೆರವಿಗೆ ಬಂದಿದ್ದು ಇಂದಿರಾ ಗಾಂಧಿಯವರ ಬಳಿಯಿದ್ದ ‘ಚಿತ್ರಕಥೆ’ಯಿಂದ ಎರವಲು ಪಡೆದ ತಂತ್ರಗಳೇ! ಈ ತಂತ್ರಗಳನ್ನು ಕುಶಲತೆಯಿಂದ ಬಳಸಿದ್ದು ಮೋದಿಯವರ ಹೆಗ್ಗಳಿಕೆ.

ಹಿಂಜರಿಕೆಯಿಲ್ಲದ ಓರ್ವ ಜನಪ್ರಿಯ ಮತ್ತು ಸಮರ್ಥ ವ್ಯಕ್ತಿಯಾಗಿ ಮೋದಿಯವರು ರಾಜಕೀಯವಾಗಿ ಇಂದಿರಾ ಗಾಂಧಿಯವರಿ ಗಿಂತಲೂ ತೀಕ್ಷ್ಣತೆಯುಳ್ಳವರೂ ನಿಷ್ಠುರವಾದಿಯೂ ಆಗಿದ್ದಾರೆ. ತಮ್ಮ ಮಗ ಸಂಜಯ್ ಗಾಂಧಿಯವರ ಹೆಬ್ಬಯಕೆಗಳಿಂದಾಗಿ ಚಿತಾವಣೆಗೊಳಗಾದ ಇಂದಿರಾ ಗಾಂಧಿಯವರು, ಆ ತಳಮಳಗಳಿಂದಾಗಿಯೇ ತುರ್ತುಪರಿಸ್ಥಿತಿಯನ್ನು ಘೋಷಿಸುವಂತಾಯಿತು. ಮತ್ತೊಂದೆಡೆ ಮೋದಿಯವರು, ಸಾಂವಿಧಾನಿಕ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೇ ತಾವು ಕೆಲಸ ಮಾಡುವುದಾಗಿ ಸಮರ್ಥಿಸಿ ಕೊಳ್ಳುತ್ತಲೇ, ಪ್ರಜಾಪ್ರಭುತ್ವವನ್ನು ಚುನಾವಣಾ ನಿರಂಕುಶಪ್ರಭುತ್ವ ಮತ್ತು ಧಾರ್ಮಿಕ ಬಹುಸಂಖ್ಯಾತ ವಾದದೆಡೆಗೆ ವ್ಯವಸ್ಥಿತವಾಗಿ ತಳ್ಳುತ್ತಾರೆ.

ಅಸ್ತಿತ್ವದಲ್ಲಿರುವ ಕಾನೂನುಗಳೇ ವಿಪಕ್ಷಗಳನ್ನು ಬೆದರಿಸಲು ಸಾಕಾಗಿರುವಾಗ, ಅಥವಾ ಆಜ್ಞಾನುವರ್ತಿ ಮಾಧ್ಯಮಗಳು ಅದಕ್ಕೆಂದೇ ಸಾಲುಗಟ್ಟಿರುವಾಗ, ತುರ್ತುಪರಿಸ್ಥಿತಿಯ ಕಟ್ಟಳೆಯನ್ನು ಅವರು ತಾನೇ ಯಾಕೆ ಹೇರಿಯಾರು? ಉದಾಹರಣೆಗೆ,
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಜಾಮೀನು ನಿಬಂಧನೆಯ ತಿದ್ದುಪಡಿಗಳನ್ನು ಒಂದು ಹಣಕಾಸು ವಿಧೇಯಕವಾಗಿ ಸಂಸತ್ತಿನ ಮೂಲಕ ಪರಿಸಮಾಪ್ತಿಗೊಳಿಸಲಾಯಿತು ಮತ್ತು ತರುವಾಯದಲ್ಲಿ, ನಿವೃತ್ತಿಯ ಅಂಚಿನಲ್ಲಿರುವ ನ್ಯಾಯಾಧೀಶ ರೊಬ್ಬರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವೊಂದರಿಂದ ಇದು ವಿವರಿಸಲಾಗದ ರೀತಿಯಲ್ಲಿ ಊರ್ಜಿತಗೊಳಿಸಲ್ಪಟ್ಟಿತು;
ಸದರಿ ನ್ಯಾಯಾಧೀಶರು ಈಗ ಲೋಕಪಾಲರಾಗಿದ್ದಾರೆ!

‘ಭ್ರಷ್ಟಾಚಾರ-ವಿರೋಽ’ ಎಂಬ ಜನಪರ ಭಾವತೀವ್ರತೆಯ ಸೋಗಿನಲ್ಲಿ ರಾಜಕೀಯದ ಹಿತಾಸಕ್ತಿಗಳನ್ನು ನೆರವೇರಿಸಿಕೊಳ್ಳಲು ಕಟ್ಟುನಿಟ್ಟಿನ ಕಾನೂನೊಂದು ಬಳಕೆಯಾಗುತ್ತಿರುವುದಕ್ಕೆ ಇದೊಂದು ಉತ್ಕೃಷ್ಟ ಉದಾಹರಣೆಯಾಗಿದೆ. ಈ ಪ್ರಕ್ರಿಯೆಯಲ್ಲಿ ‘ಜೈಲುವಾಸವಲ್ಲ ಜಾಮೀನು’ ಎಂಬ ಸೂತ್ರವನ್ನು ರದ್ದುಗೊಳಿಸಲಾಗಿದೆ ಹಾಗೂ ಸೇಡಿನ ರಾಜಕಾರಣವನ್ನು ಯಥಾಸ್ಥಿತಿ ಯಲ್ಲಿರಿಸಲಾಗಿದೆ. ಆದ್ದರಿಂದ, ಸ್ವಾತಂತ್ರ್ಯಾನಂತರದ ಭಾರತದಲ್ಲಿ, ಅತ್ಯಂತ ಅಸಾಧಾರಣವಾದ ಚುನಾವಣಾ ವ್ಯವಸ್ಥೆಯ ಒತ್ತಾಸೆ ಹೊಂದಿರುವ ಪ್ರಭಾವಿ-ಪ್ರಬಲ ರಾಜಕಾರಣಿಯೊಬ್ಬನಿಗೆ ಸವಾಲು ಹಾಕಲು ‘ಪ್ರಜಾಪ್ರಭುತ್ವವನ್ನು ಉಳಿಸಿ’ ಎಂಬ ವಿಪಕ್ಷಗಳ ಬಹಿರಂಗ ಸಭೆಯೊಂದೇ ಸಾಕಾಗದು, ಅದಕ್ಕಿಂತ ಹೆಚ್ಚಿನ ಕಸರತ್ತಿನ ಅಗತ್ಯವಿದೆ ಎಂಬುದಕ್ಕೆ ಇದು ಮತ್ತೊಂದು ಕಾರಣವಾಗಿದೆ.

ಕೊನೇಹನಿ: ‘ಸಂಸತ್ತು ಅಥವಾ ನ್ಯಾಯಾಲಯಗಳ ಮಧ್ಯ ಪ್ರವೇಶವಿಲ್ಲದೆಯೇ ಪ್ರಬಲ ನಾಯಕನೊಬ್ಬನು ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಿರುವ ವ್ಯವಸ್ಥೆಯೊಂದು, ದೇಶವನ್ನು ಆಳುವುದಕ್ಕಿರುವ ಒಂದು ಉತ್ತಮ ಮಾರ್ಗವಾಗಿರುತ್ತದೆ ಎಂದು
ಶೇ.೬೭ರಷ್ಟು ಭಾರತೀಯರು ಆಲೋಚಿಸುತ್ತಾರೆ’ -ಇದು ಈ ವರ್ಷದ ಫೆಬ್ರುವರಿಯಲ್ಲಿ ‘ಪ್ಯೂ ರಿಸರ್ಚ್ ಸೆಂಟರ್’ ಸಂಸ್ಥೆಯು
ನಡೆಸಿದ ಸಮೀಕ್ಷೆಯೊಂದು ಕಂಡುಕೊಂಡಿರುವ ಸಂಗತಿ. ೨೦೧೭ರಲ್ಲಿ ಶೇ.೫೫ರಷ್ಟಿದ್ದ ಈ ಪ್ರಮಾಣವು ಈಗ ಶೇ.೬೭ಕ್ಕೆ
ಮುಟ್ಟಿದೆ. ಹಾಗಿದ್ದರೆ ಪ್ರಜಾಪ್ರಭುತ್ವ ಎಲ್ಲಿದೆ?

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *