Thursday, 12th December 2024

ಕಾಂಗ್ರೆಸ್ಸೆಂಬ ಇಡೀ ಮನೆ ಕೆಡವಿ, ಹೊಸ ಮನೆ ಕಟ್ಟಬೇಕು !

ಬೇಟೆ

ಜಯವೀರ ವಿಕ್ಷಮ್ ಸಂಪತ್ ಗೌಡ

ಮೊನ್ನೆ ಕಾಂಗ್ರೆಸ್ಸಿನ ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ‘ನಮ್ಮ ಪಕ್ಷದ ಇಂದಿನ ದಯನೀಯ ಸ್ಥಿತಿಗೆ ನಾಯಕರ -ವ್ ಸ್ಟಾರ್ ಸಂಸ್ಕೃತಿಯೇ ಕಾರಣ’ ಎಂದು ಹೇಳಿದಾಗ, ನನಗೆ ಆಶ್ಚರ್ಯ ಆಗಲಿಲ್ಲ. ಅಜಾದ್‌ಗೆ ಈಗ ಆಜಾದಿ (ಸ್ವಾತಂತ್ರ್ಯ) ಸಿಕ್ಕಿತಲ್ಲ, ಕೊನೆಗೂ ತನ್ನೊಳಗೆ ಬೆನ್ನು ಮೂಳೆ ಇದೆ ಎಂಬುದನ್ನು ಈ ಮನುಷ್ಯ ಅರ್ಥ ಮಾಡಿಕೊಂಡನಲ್ಲ ಎಂದು ಅನಿಸಿತು.

ಹಾಗೆ ನೋಡಿದರೆ, ಮಹಾತ್ಮ ಗಾಂಧಿ ಅಂದೇ, ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಬಿಡಿ ಎಂದು ಹೇಳಿದ್ದರು. ಅವರ ದೃಷ್ಟಿಯಲ್ಲಿ ಕಾಂಗ್ರೆಸ್ ಅಂದೇ ವಿಸರ್ಜನೆ ಯಾಗಿತ್ತು. ಇದು ಎಲ್ಲಾ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಆದರೆ ಈಗ ಗುಲಾಮ್ ನಬಿ ಅಜಾದ್ ಅಂತರಂಗದ ಆ ಮಾತನ್ನು ಹೇಳಿದ್ದಾರೆ ಅಷ್ಟೇ.

ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನ ತಮ್ಮ ಕೈತಪ್ಪಿ ಹೋಗಿರುವು ದರಿಂದ, ಮುಂದೆ ಯಾವ ಮಹತ್ವದ ಸ್ಥಾನವೂ ಸಿಗದಿರುವುದರಿಂದ ಹತಾಶ ರಾಗಿ, ಅಜಾದ್ ಹಾಗೆ ಹೇಳಿರಬಹುದು. ಆದರೆ ಅವರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಈ ಎದೆಗಾರಿಕೆ ಯನ್ನು ಅವರು ಪಕ್ಷದ ನಾಯಕರು, ಸಿಂಗಲ್ ಸ್ಟಾರ್ ಮತ್ತು ಡಬಲ್ ಸ್ಟಾರ್‌ಗೆ ಹೋಗುವ ಹಂತದಲ್ಲಿದ್ದಾ ಗಲೇ ಹೇಳಬೇಕಿತ್ತು. ಈಗ ತಡವಾಯಿತು. ಈಗ ಹೇಳಿ ಹೆಚ್ಚು ಪ್ರಯೋಜನವಿಲ್ಲ. ಈಗಲಾದರೂ ಹೇಳುವ ಧೈರ್ಯ ಪ್ರದರ್ಶಿಸಿದ್ದಾ ರಲ್ಲ ಎಂದು ಅವರನ್ನು ಪ್ರಶಂಸಿಸಬೇಕಷ್ಟೆ.

ನನಗೆ ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕರನ್ನು ನೋಡಿದರೆ ‘ನರಪೇತಲ ನಾರಾಯಣ’ನನ್ನು ನೋಡಿದಂತೆ ಭಾಸವಾಗುತ್ತದೆ. ಯಾರ ಮುಖದದರೂ ಉತ್ಸಾಹ ಇದೆಯಾ? ಯಾರಾದರೂ ಭರವಸೆ ಮೂಡಿಸುತ್ತಾರಾ? ಯಾವ ಒಬ್ಬ ನಾಯಕನಾದರೂ, ಪ್ರಸ್ತುತ ವಿದ್ಯಮಾನಗಳಿಗೆ ಸ್ಪಂದಿಸುತ್ತಿದ್ದಾರಾ? ಪ್ರತಿಪಕ್ಷವಾಗಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರಾ? ಒಬ್ಬನೇ ಒಬ್ಬ ನಾಯಕನನ್ನು ಆಸೆ ಕಂಗಳಿಂದ ನೋಡಬಹುದು ಎಂದು ಅನಿಸುತ್ತದಾ? ಈ ಕಾಂಗ್ರೆಸ್ಸಿನ ನಾಯಕರ ಪೈಕಿ ಯಾರಾದರೂ ಒಬ್ಬರು ಮೋದಿಗೆ ಸಮ ಎಂದು ಅನಿಸುತ್ತಾರಾ? ಯಾವ ಸಂಗತಿಗಳನ್ನು ನೋಡಿ ಇವರನ್ನು ಆರಿಸಬೇಕು? ಕಾಂಗ್ರೆಸ್ ನಾಯಕರು ಎಲ್ಲಿದ್ದಾರೆ? ಇವರಿಗೆ ಇನ್ನೂ ಆತ್ಮಾವಲೋಕನ ಮಾಡಿಕೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ? ಎರಡು – ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದನ್ನು ಬಿಟ್ಟರೆ, ಕಾಂಗ್ರೆಸ್ ಸತತವಾಗಿ ಸೋಲುತ್ತಿದೆ, ಎಡೆಯೂ ಮಣ್ಣು ಮುಕ್ಕುತ್ತಿದೆ.

ಪಕ್ಷದ ಸಂಘಟನೆಯಲ್ಲಿ ದಮ್ಮಿಲ್ಲ. ಪಕ್ಷ ಎಲ್ಲಾ ರಾಜ್ಯಗಳಲ್ಲೂ ಶಿಥಿಲವಾಗು ತ್ತಿದೆ. ಮೇಲಿಂದ ಮೇಲೆ ಸೋಲನ್ನು ಅನುಭವಿಸು ತ್ತಿದ್ದರೂ, ಅದಕ್ಕೆ ಕಾರಣ ವನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ, ಅದಕ್ಕಿಂತ ಹೆಚ್ಚಾಗಿ ಕಾರಣ ಗಳನ್ನು ಕಂಡು ಹಿಡಿಯುವ ಮನಸ್ಸೂ ಇಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಾಗಲಿ, ರಾಹುಲ್ ಗಾಂಧಿ ಅವರಾಗಲಿ, ಈ ಕ್ಷಣಕ್ಕೆ ಪಕ್ಷಕ್ಕೆ ಹೊಸ
ಕಸುವು ತುಂಬುತ್ತಾರೆ ಎಂದು ಅನಿಸುತ್ತಿಲ್ಲ.

ಸೋನಿಯಾ ಗಾಂಧಿಯವರ ಆರೋಗ್ಯ ಬೇರೆ ಸರಿಯಿಲ್ಲ. ಮೊನ್ನಿನ ಬಿಹಾರ ಚುನಾವಣಾ ಪ್ರಚಾರದಲ್ಲಿ ಅವರ ಪಾತ್ರ ಸೊನ್ನೆ. ಅವರು ಮನೆಯಿಂದ ಹೊರ ಬಂದು ಪಕ್ಷವನ್ನು ಕಟ್ಟುವ ಯಾವ ಚೇತನವನ್ನೂ ಉಳಿಸಿಕೊಂಡಿಲ್ಲ. ಅವರ ಮಾತಿನಲ್ಲೂ ಯಾವ ಆಕರ್ಷಣೆಯೂ ಉಳಿದಿಲ್ಲ. ಮುಂಚೆಯೂ ಇರಲಿಲ್ಲ ಎನ್ನುವುದು ಬೇರೆ ಮಾತು. ರಾಹುಲ್ ಗಾಂಧಿ ತಮಗೆ ಅಂಟಿದ ನಾನಾ ಬಿರುದು ಬಾವಲಿಗಳಿಂದ ಮುಕ್ತರಾಗುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಅವರಿಗಿನ್ನೂ ಸೀರಿಯಸ್ನೆಸ್ ಬಂದಿದೆ ಎಂದು ಅವರ ಪಕ್ಷದವರಿಗೇ ಅನಿಸುತ್ತಿಲ್ಲ.

ಮೊನ್ನೆ ಬಿಹಾರದಲ್ಲಿ ಚುನಾವಣಾ ನಡೆಯುತ್ತಿದ್ದರೆ, ರಾಹುಲ್ ಗಾಂಧಿ ಎಲ್ಲಾ ಟೂರ್ ಹೋಗಿದ್ದರಂತೆ. ಅವರ ಉಪಸ್ಥಿತಿ ತೀರಾ ಅವಶ್ಯಕವಾಗಿzಗಲೇ, ಅವರು ಇದ್ದಕ್ಕಿದ್ದಂತೆ ಗಾಯಬ್ ಆಗಿಬಿಡುತ್ತಾರೆ. ಯಾರ ಕೈಗೂ ಸಿಗದೇ ತಪ್ಪಿಸಿಕೊಂಡು ಬಿಡುತ್ತಾರೆ. ತಾವು ಹೋಗಿರುವ ತಾಣದ ಕುರುಹನ್ನು ಬಿಟ್ಟು ಕೊಡದೇ ಅದೃಶ್ಯ ರಾಗಿ ಬಿಡುತ್ತಾರೆ. ಅಂದರೆ ಮನುಷ್ಯನಿಗೆ ಒಟ್ಟಾರೆ ಸೀರಿಯಸ್ನೆಸ್ ಇಲ್ಲ. ಇದನ್ನು ಬೇರೆಯವರನ್ನಲ್ಲ, ಅವರ ಪಕ್ಷದ ಹಿರಿಯ ನಾಯಕರನ್ನು ಕೇಳಿದರೆ ಅವರೇ ಇದನ್ನು ಹೇಳುತ್ತಾರೆ. ಇಲ್ಲಿಯ ತನಕ ರಾಹುಲ್ ಗಾಂಧಿ, ತಾನೊಬ್ಬ ನಾಯಕ, ಪ್ರಧಾನಿ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಎಂಬ ಸಣ್ಣ ಭರವಸೆಯನ್ನೂ ಮೂಡಿಸಿಲ್ಲ. ಹೋಲಿಕೆಗಾದರೂ ಮೋದಿ ಪಕ್ಕದಲ್ಲಿ ನಿಲ್ಲಲು ಅವರಿಗೆ ಅರ್ಹತೆಯಿಲ್ಲ. ಹೀಗಿರುವಾಗ, ಕಾಂಗ್ರೆಸ್ ಪಕ್ಷ ಅದ್ಯಾವ ಸ್ಥಿತಿ ತಲುಪಿರ ಬಹುದು ಎಂಬುದನ್ನು ಯೋಚಿಸಬಹುದು. ಸೋನಿಯಾ ಗಾಂಧಿಯವರನ್ನೂ ಮೋದಿ ಜತೆಗೆ ಹೋಲಿಸಲು ಸಾಧ್ಯವಿಲ್ಲ. ಸೋನಿಯಾ ಗಾಂಧಿ ಯಾವ ರೀತಿಯಲ್ಲಿ ಪಕ್ಷವನ್ನು ಮುನ್ನಡೆಸಬಹುದು ಎಂಬುದು ಅವರ ಪಕ್ಷದ ನಾಯಕರಿಗೇ ಜಿಜ್ಞಾಸೆಯಾಗಿದೆ.

ಕಾಂಗ್ರೆಸ್ ಪಕ್ಷ ವಿಚಿತ್ರವಾಗಿ ನಡೆದುಕೊಂಡು ಹೊರಟಿದೆ. ಅದಕ್ಕೆ ಗುರಿಯೂ ಇಲ್ಲ, ಗುರುವೂ (ನಾಯಕ) ಇಲ್ಲ. ತನ್ನ ಪಾಡಿಗೆ ತಾನು ಹೊರಟಂತಿದೆ. ಗಾಂಧಿ ಮನೆತನವನ್ನೇ ಅವಲಂಬಿಸಿದ ಊಸರವಳ್ಳಿ ನಾಯಕರಿಗೆಲ್ಲ ತಮ್ಮ ನಾಯಕರ ಭಜನೆ ಮಾಡಿದರೆ, ಫೋಟೋ ತೋರಿಸಿದರೆ, ಹೆಸರು ಹೇಳಿದರೆ ಮತಗಳು ಬರುವುದಿಲ್ಲ ಎಂಬುದು ಮನವರಿಕೆಯಾಗಿದೆ. ಕಾಂಗ್ರೆಸ್ಸಿನ ಹಿರಿಯ ತಲೆಗಳೆ ಇಷ್ಟು ವರ್ಷ ಅಧಿಕಾರವನ್ನು ಅನುಭವಿಸಿದರು. ಯುಪಿಎ ಒಂದು ಮತ್ತು ಎರಡು ಅವಧಿಯಲ್ಲಿ ಚೆನ್ನಾಗಿ ಕೊಬ್ಬಿದ್ದರು.

ಕಳೆದ ಏಳು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರವಿಲ್ಲದೇ ಕಂಗೆಟ್ಟಿದ್ದಾರೆ. ಮೋದಿ ಇರುವ ತನಕ, ತಮಗೆ ಅಧಿಕಾರವೆಂಬು ವುದು ಮರೀಚಿಕೆ ಎಂಬುದು ಅವರಿಗೆ ಗೊತ್ತಾಗಿದೆ. ಮೋದಿ ಏನಾದರೂ ತಪ್ಪು ಮಾಡಿ, ದುರಾಡಳಿತ ಮಾಡಿ ಅಧಿಕಾರ ಕಳೆದುಕೊಳ್ಳಬೇಕೇ ಹೊರತು, ಕಾಂಗ್ರೆಸ್‌ಗೆ ಯಾವ ರೀತಿಯಲ್ಲೂ ಅನುಕೂಲಕರ ವಾತಾವರಣ ಇಲ್ಲ. ಆ ಪಕ್ಷದ ಮುಂದೆ ಯಾವ road map ಇಲ್ಲ. ಇಂದಿಗೂ ಓಬಿರಾಯನ ಕಾಲದ ಮತಬ್ಯಾಂಕುಗಳನ್ನೇ ಅವಲಂಬಿಸಿದೆ.

ಜಾತ್ಯತೀತ ಶಕ್ತಿಗಳೆಲ್ಲ ಒಂದಾಗಬೇಕು ಎಂದು ಕಾಂಗ್ರೆಸ್ ನಾಯಕರು ಕರೆ ಕೊಟ್ಟರೆ, ಮುಸ್ಲಿಮರೇ ಈ ಮಾತುಗಳನ್ನು ನಂಬು ವುದಿಲ್ಲ. ಮುಸಲ್ಮಾನ ಮಹಿಳೆಯರು ಮೋದಿ ಹಿಂದೆ ಇzರೆ ಎಂಬ ಸರಳ ಸತ್ಯವನ್ನು ಕಾಂಗ್ರೆಸ್ ನಾಯಕರಿಗೆ ಅರ್ಥ ವಾಗಿಲ್ಲ. ಅದು ಬಿಹಾರ್ ಚುನಾವಣೆಯಲ್ಲಿ ಮತ್ತೊಮ್ಮೆ ದೃಢಪಟ್ಟಿತು. ನೋಟ್ ಬಂದಿ, ಜಿಎಸ್‌ಟಿಗಳೆಲ್ಲ ಯಾವ ರೀತಿ ಯಿಂದಲೂ ಬಿಜೆಪಿ ಮೇಲೆ ಪರಿಣಾಮ ಬೀರಿಲ್ಲ. ಕೋವಿಡ್ ಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರ ಸೋತಿತು ಎಂಬ ಕಾಂಗ್ರೆಸ್ ನಾಯಕರ ವಾದವನ್ನು ಬಿಹಾರ ಮತದಾರ ಒಪ್ಪಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ವಾದವನ್ನು ಕೂಡ. ಹಾಗೆಂದು ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಆದರೂ ಜನ ಮೋದಿ ನಾಯಕತ್ವದಲ್ಲಿ ಇನ್ನೂ ವಿಶ್ವಾಸ ಇರಿಸಿಕೊಂಡಿದ್ದಾರೆ ಎಂಬುದು ಪದೇ ಪದೆ ಸಾಬೀತಾಗುತ್ತಿದೆ.

ಕೇಂದ್ರಕ್ಕೊಂದೇ ಅಲ್ಲ, ರಾಜ್ಯದಲ್ಲೂ ಮೋದಿ ಚಲಾವಣೆಯಲ್ಲಿರುವ ಮುಖ್ಯ. ಬಿಜೆಪಿ ನೆಪ ಮಾತ್ರಕ್ಕೆ. ಮೋದಿಯವರ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕುವುದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಗಂಭೀರವಾಗಿ ಆತ್ಮಾವಲೋಕನ ಮಾಡಿದಂತಿಲ್ಲ.
ಟ್ವಿಟರ್‌ನಲ್ಲಿ ಮಾತ್ರ ಕಾಂಗ್ರೆಸ್ ನಾಯಕರು ಸ್ವಲ್ಪ active ಆಗಿದ್ದಾರೆ. ಉಳಿದಂತೆ ಅವರು ಕುದುರೆಯಿಲ್ಲದ ಜಟಕಾ ಸಾಬಿ ಯಂತಾಗಿದ್ದಾರೆ.

ಅತ್ತ ಕುದುರೆಯೂ ಇಲ್ಲ, ಸ್ವಂತವಾಗಿ ಜಗ್ಗುವ ಸಾಮರ್ಥ್ಯವೂ ಇಲ್ಲ. ಹೀಗಾಗಿ ಅವರು ತಲೆ ಮೇಲೆ ಕೈಹೊತ್ತು ಅಂಬೋ ಎನ್ನುತ್ತಿದ್ದಾರೆ. ಅದರ ಫಲವೇ ಗುಲಾಮ್ ನಬಿ, ಕಪಿಲ್ ಸಿಬಲ್ ಮುಂತಾದ ನಾಯಕರು ಆಗಾಗ ಸಿಂಬಳ ಸುರಿಸುತ್ತಾ ನಾಯ ಕತ್ವದ ವಿರುದ್ಧ ಮಾತಾಡುತ್ತಾರೆ. ನಾಯಕರಾದವರು ಹೀಗೆಲ್ಲ ಮಾತಾಡಿದಾಗ ಮೊದಲಾಗಿದ್ದರೆ, ಪಕ್ಷದ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುತ್ತಿತ್ತು. ಆದರೆ ಈಗ ಹೈಕಮಾಂಡ್ ಲೋಕಮಾಂಡ್ ಆಗಿದೆ. ಯಾರ ಮೇಲೂ ಕ್ರಮ ಜರುಗಿಸುವ ತಾಕತ್ತಿಲ್ಲ. ಒಂದು ಕಾಲಕ್ಕೆ ಕೇವಲ ಎರಡು ಸ್ಥಾನಗಳು ಬಂದಾಗಲೂ ಬಿಜೆಪಿ ಇಷ್ಟೊಂದು ಧೃತಿಗೆಟ್ಟಿರಲಿಲ್ಲ. ನಾಯಕತ್ವ ನೈತಿಕವಾಗಿ ಕುಗ್ಗಿ
ಹೋಗಿರಲಿಲ್ಲ. ಕಾರಣ ಆಗ ಪಕ್ಷದ ಸಂಘಟನೆ (ಕೇಡರ್) ಛಿದ್ರವಾಗಿರಲಿಲ್ಲ. ಆದರೆ ಪ್ರಸ್ತುತ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರೊಂದೇ ಅಲ್ಲ, ಕಾರ್ಯಕರ್ತರು ವಿಮುಖರಾಗಿದ್ದಾರೆ. ಕೇಡರ್ ಹೇಳ ಹೆಸರಿಲ್ಲದಂತಾಗಿದೆ.

ಹಾರ್ಡ್ ಕೋರ್ ಕಾರ್ಯಕರ್ತರೂ ಮೆತ್ತಗಾಗಿದ್ದಾರೆ. ಅವರಲ್ಲಿ ಮೊದಲಿನ ಹುಮ್ಮಸ್ಸಿಲ್ಲ. ನಾಯಕರೇ ಕಳಾಹೀನವಾಗಿರುವಾಗ ಅವರಲ್ಲಿ ಹೊಸ ಹುರುಪು ಬರುವುದಾದರೂ ಹೇಗೆ? ಹಾಗಾದರೆ ಏನು ಮಾಡುವುದು? ಕಾಂಗ್ರೆಸ್ಸಿನಲ್ಲಿ ನಾಯಕತ್ವ ಬದಲಾವಣೆ ಮಾಡುವುದರಿಂದ ಈಗಿನ ಪರಿಸ್ಥಿತಿ ಸರಿ ಹೋಗಬಹುದಾ? ಸೋನಿಯಾ ಗಾಂಧಿ ಅವರು ತಮ್ಮ ಮಗನಿಗೆ ಪುನಃ ಪಟ್ಟ ಕಟ್ಟುವು ದರಿಂದ ಎಲ್ಲವೂ ಸರಿಹೋಗಬಹುದಾ? ಹೀಗೆ ಮಾಡುವುದರಿಂದ, ಪಕ್ಷವನ್ನು ಮತ್ತೆ ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ.

ಕಾರಣ, ರಾಹುಲ್ ಗಾಂಧಿಯವರು ಈಗಾಗಲೇ ಪಕ್ಷದ ನಾಯಕರಾಗಿ ಏನು ಮಾಡಿದ್ದಾರೆ ಎಂಬುದು ಗೊತ್ತು. ಅವರೇನೂ ಮೊದಲ ಸಲಕ್ಕೆ ಅಧ್ಯಕ್ಷರಾಗುತ್ತಿಲ್ಲ. ಅವರ ನಾಯಕತ್ವದ ಪಕ್ಷ ಆರೂವರೆ ವರ್ಷಗಳ ಹಿಂದೆ, ಲೋಕಸಭೆ ಚುನಾವಣೆಯನ್ನು ಎದುರಿಸಿದೆ. ಆಗ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. 2019ರಲ್ಲಿಯೂ ಅವರ ನಾಯಕತ್ವದಲ್ಲಿಯೇ ಕಾಂಗ್ರೆಸ್
ಚುನಾವಣೆಗೆ ಹೋಯಿತು. ಆಗಲೂ ಏನಾಯಿತು ಎಂಬುದು ಗೊತ್ತಿದೆ. ಈ ಮಧ್ಯದ ಅವಧಿಯಲ್ಲಿ, ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಯಿತು.

ಪಕ್ಷವನ್ನು ಮುನ್ನಡೆಸುವ ನೈತಿಕತೆಯನ್ನು ಕಳೆದುಕೊಂಡು ಅವರೇ ಕೈಚೆಲ್ಲಿ ಅಧ್ಯಕ್ಷ ಪದವಿಯನ್ನು ತೊರೆದರು. ಈಗ ಅದೇ ರಾಹುಲ್ ಗಾಂಧಿ ಮತ್ತೊಮ್ಮೆ ಪಕ್ಷದ ಅಧ್ಯಕ್ಷರಾಗಲು ಹೊರಟಿದ್ದಾರೆ. ಇಂಥ ನಾಯಕ ತನಗಾಗಲಿ, ತನ್ನ ಪಕ್ಷಕ್ಕಾಗಲಿ, ತನ್ನನ್ನು ನಂಬಿದ ಕೋಟ್ಯಂತರ ಕಾರ್ಯಕರ್ತರಿಗಾಗಲಿ ಯಾವ ನ್ಯಾಯ ಕೊಡಬಹುದು? ಇದು ಎಲ್ಲರನ್ನೂ ಕಾಡುವ ಪ್ರಶ್ನೆ. ಆಗಲೇ ಆಗದ ಕೆಲಸ, ಈಗ ಆಗುವುದಾದರೂ ಹೇಗೆ? ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ರಾಹುಲ್ ಗಾಂಧಿ ಏನು ಮಾಡಿzರೆ?
ಅಷ್ಟಕ್ಕೂ ಅವರು ಆಗ ಪಕ್ಷದ ಅಧ್ಯಕ್ಷ ಸ್ಥಾನವನ್ನು ಏಕೆ ತೊರೆಯಬೇಕಿತ್ತು? ಮತ್ತು ಈಗ ಪುನಃ ಏಕೆ ಅಧ್ಯಕ್ಷರಾಗಬೇಕು? ಇದೇ ಅರ್ಥವಾಗುವುದಿಲ್ಲ.

ಈ ಒಂದೂವರೆ ವರ್ಷದಲ್ಲಿ ಅವರಲ್ಲಿ ಅಂಥ ಹೇಳಿಕೊಳ್ಳುವ ಯಾವ ಬದಲಾವಣೆಗಳಾಗಿವೆ? ಈ ಅವಧಿಯಲ್ಲಿ ಪಕ್ಷಕ್ಕೆ ಅವರ ಕೊಡುಗೆಗಳಾದರೂ ಏನು? ಯಾರಿಗೂ ಗೊತ್ತಿಲ್ಲ. ಬಿಹಾರದಲ್ಲಿ ಬಿಜೆಪಿ, ಜೆಡಿಯು, ರಾಷ್ಟ್ರೀಯ ಜನತಾದಳದ ನಂತರದ ಸ್ಥಾನ ಕಾಂಗ್ರೆಸ್ಸಿಗೆ. ಇದೇ ಸ್ಥಿತಿ ಹಲವು ರಾಜ್ಯಗಳಲ್ಲಿವೆ. ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಇಂದು ಮೂರು, ನಾಲ್ಕನೇ ಸ್ಥಾನ ದಲ್ಲಿದೆ. ಇನ್ನೇನು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಬರಲಿದೆ.

ಬಿಜೆಪಿ ಈಗಾಗಲೇ ಚುನಾವಣಾ ಕೆಲಸವನ್ನು ಬಿರುಸಿನಿಂದ ನಡೆಸಿದೆ. ಮೊದಲ ಬಾರಿಗೆ ಬಂಗಾಳ ಗದ್ದುಗೆಯೇರುವ ತರಾತುರಿ ಯಲ್ಲಿದೆ. ತಮಿಳುನಾಡಿನಲ್ಲಿ ಕನಿಷ್ಠ ಐವತ್ತು ಸೀಟನ್ನಾದರೂ ಪಡೆಯುವ ಗುರಿ ಹೊಂದಿದೆ. ಆದರೆ ಕಾಂಗ್ರೆಸ್ ಈ ಎರಡೂ ರಾಜ್ಯಗಳಲ್ಲಿ ಅಸ್ತಿತ್ವ ಕಂಡುಕೊಳ್ಳುವ ದೈನೇಸಿ ಸ್ಥಿತಿಯಲ್ಲಿದೆ. ಆ ಬಗ್ಗೆ ಪಕ್ಷದ ನಾಯಕರ ಮುಂದೆ ಯಾವ ಕಾರ್ಯಕ್ರಮವೂ ಇದ್ದಂತಿಲ್ಲ. ಆ ಎರಡು ರಾಜ್ಯಗಳಲ್ಲಿ ಪಕ್ಷವನ್ನು ಮುನ್ನಡೆಸುವ ಯಾವ ಕನಸುಗಳೂ ಇದ್ದಂತಿಲ್ಲ.

ಸರಿ, ಸೋನಿಯಾ ಅವರ ಆರೋಗ್ಯವಂತೂ ಸರಿ ಇಲ್ಲ. ಅವರು ಸದ್ಯದಲ್ಲಿಯೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ ಬಹುದು. ಪುನಃ ತಮ್ಮ ಮಗನನ್ನು ಅಧ್ಯಕ್ಷರನ್ನಾಗಿ ಮಾಡಬಹುದು. ಅದು ಬಿಟ್ಟು ಪಕ್ಷದ ಮುಂದೆ ಬೇರೆ ಯಾವ ಆಯ್ಕೆಗಳಿವೆ? ಪ್ರಿಯಾಂಕಾ ಗಾಂಧಿ ಕೂಡ ವಿಫಲ ನಾಯಕಿಯೇ. ಅವರಲ್ಲೂ ಯಾವ ಚಮಕ್ ಉಳಿದಿಲ್ಲ. ಅವರ ಉಸ್ತುವಾರಿಗೆ ಬಿಟ್ಟ ಉತ್ತರ ಪ್ರದೇಶದಲ್ಲಿ ಪಕ್ಷ ಹೇಳಹೆಸರಿಲ್ಲದಂತಾಗಿದೆ. ಅವರ ಪ್ರವೇಶದಿಂದ ಪರಿಸ್ಥಿತಿ ಸ್ವಲ್ಪವೂ ಉತ್ತಮವಾಗಿಲ್ಲ. ಇನ್ನು ಗಾಂಧಿ ಮನೆತನದವರು ಯಾರೂ ಬೇಡ, ಹೊರಗಿನವರನ್ನು ಅಧ್ಯಕ್ಷರನ್ನಾಗಿ ಮಾಡೋಣ ಅಂದರೆ ಅಂಥ ನಾಯಕರು ಯಾರಿದ್ದಾರೆ?
ಒಂದು ವೇಳೆ ಸ್ವತಃ ಸೋನಿಯಾ ಗಾಂಧಿಯವರೇ, ಅಂಥ ನಾಯಕನನ್ನು ಹುಡುಕಿ, ಪಕ್ಷದ ಮೇಲೆ ಹೇರಿದರೆನ್ನಿ, ಅವರ ಪಕ್ಷದ ನಾಯಕರು ಆ ನಾಯಕನನ್ನು ಒಪ್ಪಿಕೊಳ್ಳುತ್ತಾರೆಯೇ? ಖಂಡಿತಾ ಸಾಧ್ಯವಿಲ್ಲ.

ಒಂದು ವೇಳೆ ಅಶೋಕ್ ಗೆಹಲೋಟ್, ಮಲ್ಲಿಕಾರ್ಜುನ ಖರ್ಗೆ, ಚಿದಂಬರಂ, ಶಶಿ ತರೂರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ ರೆನ್ನಿ. ಅವರಿಂದ ಪಕ್ಷವನ್ನು ಮುನ್ನಡೆಸಲು ಸಾಧ್ಯವಾ? ಇವರ ಮಾತುಗಳನ್ನು ಯಾರು ಕೇಳುತ್ತಾರೆ? ಹೀಗಾಗಿ ಬೇಕೋ, ಬೇಡವೋ, ಇಷ್ಟವೋ, ಅನಿಷ್ಟವೋ, ಮತ್ತೊಮ್ಮೆ ಹಳೆ ಗಂಡನ ಪಾದವೇ ಗತಿ ಎಂದು ರಾಹುಲ್ ಗಾಂಧಿ ಮುಂದೆ ಶರಣಾಗು ವುದು ಅನಿವಾರ್ಯ. ಅಲ್ಲಿಗೆ ಎಲ್ಲಿಗೆ ಎಲ್ಲಿಂದ ಹೊರಟಿದ್ದರೋ, ಪುನಃ ಅಲ್ಲಿಂದಲೇ ಹೊರಡಬೇಕಾದ ಅನಿವಾರ್ಯತೆ. ಇದು
ಕಾಂಗ್ರೆಸ್ಸಿನ ಇಂದಿನ ಸ್ಥಿತಿ.

ಕಾಂಗ್ರೆಸ್ ಮನೆ ಹಳತಾಗಿದೆ. ಆಯುಷ್ಯ ತೀರಿದೆ. ಅದು ತನ್ನ ಮನೆಯನ್ನು ಸಂಪೂರ್ಣ ಕೆಡವಿ, ಹೊಸ ಮನೆ ಕಟ್ಟಬೇಕಿದೆ. 2024ಕ್ಕೆ ಸಾಧ್ಯವಾಗದಿದ್ದರೂ 2029ರಲ್ಲಿ ಅಧಿಕಾರ ಹಿಡಿಯುವುದು ಹೇಗೆ ಎಂಬ ಬಗ್ಗೆ ಖಚಿತ ಲೆಕ್ಕಾಚಾರ ಹಾಕಿಕೊಂಡು ಕಾರ್ಯಪ್ರವೃತ್ತವಾಗಬೇಕಿದೆ. ಆಗಲೂ ರಾಹುಲ್ ಗಾಂಧಿಗೆ ವಯಸ್ಸು ಇರುತ್ತದೆ, ಬೇಕಿರುವ ವರ್ಚಸ್ಸನ್ನಷ್ಟೇ ಬೆಳೆಸಿಕೊಳ್ಳಬೇಕು. ಇನ್ನು ಬೇರೆ ಮಾತಾಡಿ ಪ್ರಯೋಜನವಿಲ್ಲ