Saturday, 14th December 2024

ಇಳೆಯ ಮೇಲೇಕೆ ಅನುಭವಿಸಲಾರದ ಹವಾಮಾನ ರೂಪುಗೊಳ್ಳುತ್ತಿದೆ ?

ನಿಸರ್ಗ ವಿಮರ್ಶೆ

ಬಸವರಾಜ ಶಿವಪ್ಪ ಗಿರಗಾಂವಿ

ಸಮಶೀತೋಷ್ಣವಲಯದಲಿರುವ ನಮ್ಮ ಭಾರತದಿಂದ ಹಿಡಿದು ಶೀತವಲಯದಲ್ಲಿರುವ ಡೆನ್ಮಾರ್ಕ್ ಹಾಗೂ ಉಷ್ಣವಲಯ ದಲ್ಲಿನ ಮರ ಭೂಮಿಯನ್ನು ಹೊಂದಿರುವ ಆಫ್ರಿಕಾದ ದೇಶಗಳ ತನಕ ಆಯಾ ಪ್ರದೇಶಗಳಲ್ಲಾಗುವ ಋತುಗಳ ಕಾಲಮಾನ ಅಥವಾ ಋತುಗಳ ಚಕ್ರವು ಅಲ್ಲಿ ವಾಸಿಸುತ್ತಿರುವ ಸಕಲ ಜೀವಸಂಕುಲಗಳ ಬದುಕಿಗೆ ಮೂಲಾಧಾರ.

ಆಯಾ ಪ್ರದೇಶಗಳ ಇತಿಹಾಸವನ್ನು ಅವಲೋಕಿಸಿದಾಗ ಒಂದು ರೀತಿಯಲ್ಲಿ ಋತುಚಕ್ರದ ಆಧಾರದ ಮೇಲೆಯೆ ಪೃಥ್ವಿಯ ಪ್ರತಿಯೊಂದು ಜೀವಿಗಳ ಜನಜೀವನ ರೂಪುಗೊಂಡಿದೆ ಎಂದು ನಿಖರವಾಗಿ ಹೇಳಬಹುದು. ವಿಭಿನ್ನ ಹವಾಮಾನ, ಭೌಗೋಳಿಕ ಲಕ್ಷಣಗಳಿರುವ ಪ್ರದೇಶಗಳಲ್ಲಿನ ಜನಸಮುದಾಯಗಳು, ಆಯಾ ಪ್ರಾಕೃತಿಕ ವಲಯಗಳಲ್ಲಿ ಜೀವಿಸುತ್ತಿರುವ ಜೀವಸಂಕುಲಗಳು ಋತುಗಳ ಲಯಕ್ಕೆ ತಕ್ಕಂತೆ ತಮ್ಮ ಬದುಕನ್ನು ರೂಪಿಸಿಕೊಂಡಿರು ವುದು ತಿಳಿಯುತ್ತದೆ. ಅಂದರೆ ಒಂದು ಪ್ರದೇಶದಲ್ಲಿನ ಜೀವಿ ಗಣಗಳ ಸಮುದಾಯದ ಜೀವನ ರೂಪುಗೊಳ್ಳುವಲ್ಲಿ ಋತುಗಳ ಕೊಡುಗೆಯು ಎಷ್ಟು ಪ್ರಾಮುಖ್ಯತೆ ಹೊಂದಿದೆ ಎನ್ನುವುದು ಇದರಿಂದ ತಿಳಿಯುತ್ತದೆ.

ಋತುಮಾನಕ್ಕೆ ತಕ್ಕಂತೆ ಜೀವನ ರೂಪುಗೊಂಡಿರುವುದು ಇತ್ತೀಚಿನ ವಿಷಯವೇನಲ್ಲ. ಸಾವಿರಾರು ವರ್ಷಗಳಿಂದಲೂ ಜಗತ್ತಿನಾದ್ಯಂತ ಜೀವಿಸುತ್ತಿರುವ ಜೀವಿಸಮುದಾಯಗಳು (ಮಾನವರು, ಗಿಡಮರಗಳು, ಪ್ರಾಣಿಪಕ್ಷಿಗಳು, ಕ್ರಿಮಿಕೀಟಗಳು, ಹಾಗೂ ಇನ್ನಿತರ ಜೀವಜಗತ್ತು) ಋತುಮಾನಕ್ಕೆ ತಕ್ಕಂತೆ ನಿಸರ್ಗದಲ್ಲಾಗುವ ಬದಲಾವಣೆಗಳಿಗೆ ಪೂರಕವಾಗಿ ಹೊಂದಿಕೊಂಡು ಬದುಕು ನಡೆಸುತ್ತಿರುವುದನ್ನು ಕಾಣುತ್ತೇವೆ. ಅದರಂತೆ ಪ್ರತಿಯೊಂದು ಪ್ರದೇಶದ ಜೀವಸಂಕುಲವು ಅಲ್ಲಿನ ಹವಾಮಾನಕ್ಕನುಗುಣವಾಗಿ ಆಹಾರ ಪದ್ಧತಿಯನ್ನು ಅನುಸರಿಸುವುದನ್ನು ಸಹ ನೋಡು ತ್ತೇವೆ.

ವಿಶೇಷವಾಗಿ ಜೂನ ತಿಂಗಳು ಎಂದರೆ ಮಳೆಗಾಲ ಆರಂಭ ಎಂಬುದನ್ನು ಸೂಚಿಸುತ್ತದೆ. ಹಾಗೆಯೆ ಜೂನ್ ತಿಂಗಳ ಮೊದಲ ವಾರದ ತನಕ ವಿಪರೀತವಿರುತ್ತಿದ್ದ ಬಿಸಿಲು ಒಮ್ಮೆಲೆ ೭ನೇ ತಾರೀಖಿನಿಂದ ಮೃಗಶಿರ ಮಳೆಯ ಆಗಮನದಿಂದ ಒಟ್ಟಾರೆ ನಿಸರ್ಗವು ಶಕೆಯ ಅನುಭವವನ್ನು ತೊರೆದು ಒಮ್ಮೆಲೆ ತಂಪು ಅಥವಾ ಆರ್ಧ್ರತೆಯ ವಾತಾವರಣವನ್ನು ಸೃಷ್ಟಿಸುತ್ತದೆ. ಕಾರಣ ಈ ಅವಧಿ ಯಲ್ಲಿ ಸೂರ್ಯನ ಕಿರಣಗಳು ಒಮ್ಮೆಲೆ ಮೋಡಗಳ ಮರೆಯಲ್ಲಿ ನೆಲೆಸಿ ಪ್ರಖರವಾದ ಬಿಸಿಲನ್ನು ಆಯಾ ಪ್ರದೇಶದ ಭೂಮಿಗೆ ಬರದಂತೆ ತಡೆಯುತ್ತವೆ.

ಆದರೆ ಇಂದು ಕೆಲವೊಮ್ಮೆ ಜೂನ್‌ತಿಂಗಳಲ್ಲಿ ಸಂಪೂರ್ಣ ಮಳೆಯಾಗದೆ ಉರಿ ಬಿಸಿಲಿನಲ್ಲಿಯೆ ಮುಂದುವರಿದ ಅನೇಕ ಉದಾ ಹರಣೆಗಳನ್ನು ಕಳೆದ ದಶಕಗಳಲ್ಲಿ ನಾವು ಅನುಭವಿಸಿದ್ದೇವೆ. ಮಳೆಯು ಮೇ ತಿಂಗಳ ಕೊನೆಯ ವಾರದಿಂದ ನವೆಂಬರ್ ತಿಂಗಳ ಮೊದಲ ವಾರದವರೆಗೆ ಬರುತ್ತದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ನಾವು ಗಮನಿಸಿದಂತೆ ವರ್ಷಪೂರ್ತಿ ಅಕಾಲಿಕ ಮಳೆಬಿದ್ದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದರಲ್ಲೂ ಕಳೆದ ೨೦೨೧ರಲ್ಲಂತೂ ವಿಪರೀತ ಮಳೆ ಬಿದ್ದದ್ದನ್ನು ನಾವು ಗಮನಿಸಿ ದ್ದೇವೆ. ಹೀಗೆ ವರ್ಷಪೂರ್ತಿ ಮೇಲಿಂದ ಮೇಲೆ ಅಕಾಲಿಕ ಮಳೆ ಬೀಳುವುದರಿಂದ ನಿಸರ್ಗದಲ್ಲಿಯ ಪ್ರತಿಯೊಂದು ಜೀವಿಗಳ ಹಾಗೂ ಸಸ್ಯ ಸಂಕುಲದ ಬದುಕು, ಆಹಾರ ಹಾಗೂ ಆರೋಗ್ಯದ ಮೇಲೆ ವಿಪರೀತ ದುಷ್ಪರಿಣಾಮ ಉಂಟಾಗುತ್ತದೆ.

ಕಳೆದ ವರ್ಷದಲ್ಲಿ ವಿಪರೀತ ಮಳೆ ಬಿದ್ದ ಕಾರಣ ಹಾಗೂ ಇನ್ನಿತರ ಪ್ರಾಕೃತಿಕ ವಿಕೋಪಗಳ ಪರಿಣಾಮ ಎಕರೆವಾರು ಕೃಷಿ ಉತ್ಪಾದನೆಯ ಪ್ರಮಾಣವು ತೀವ್ರವಾಗಿ ಕುಸಿದಿದೆ. ಹಾಗೆಯೇ ವಾತಾವರಣದಲ್ಲಿ ಮೇಲಿಂದ ಮೇಲೆ ಬದಲಾಗುವ ಹವಾಮಾನ
ವೈಪರಿತ್ಯದಿಂದ ಕೋರೋನಾದಂತಹ ಅನೇಕ ಹೊಸಹೊಸ ರೋಗಗಳು ಮನುಕುಲ ಸೇರಿದಂತೆ ಅನೇಕ ಜೀವ ಸಂಕುಲವನ್ನೇ ಧೃತಿಗೆಡಿಸಿದ್ದನ್ನು ನಾವು ಪ್ರತಿ ವರ್ಷ ಕಾಣುತ್ತಿದ್ದೇವೆ.

ಹೀಗೆ ಮೇಲಿಂದ ಮೇಲೆ ಉಂಟಾಗುತ್ತಿರುವ ಋತುಮಾನಗಳ ಬದಲಾವಣೆ, ಹೈಬ್ರೀಡ್ ಆಹಾರ ಸೇವನೆ ಹಾಗೂ ಆಹಾರ ಕ್ರಮಗಳ
ಬದಲಾವಣೆಯ ಪ್ರಯುಕ್ತ ಹೆಣ್ಣುಮಕ್ಕಳ ಬೆಳವಣಿಗೆಯ ಮೇಲೂ ಪಿಣಾಮ ಬೀರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದಲ್ಲದೆ ವಾತಾವರಣದ ಏರಿಳಿತದಿಂದ ಚರ್ಮ ಸುತ್ತುಗಟ್ಟುವುದು ಹಾಗೂ ಬೇಗನೆ ಬಿಳಿ ಕೂದಲುಗಳಾಗುವುದು ಸೇರಿದಂತೆ ಹಲವು ಬದಲಾವಣೆಗಳು ಮಾನವನ ಶರೀರದಲ್ಲಿ ಬಹುಬೇಗ ಕಾಣಿಸುತ್ತ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗು ತ್ತಿದೆ.

ಹೀಗೆ ಹವಾಮಾನದ ಬದಲಾವಣೆಯಿಂದ ಕಳೆದ ಇಪ್ಪತ್ತು ವರ್ಷಗಳ ಅವಽಯನ್ನು ಅವಲೋಕಿಸಿದಾಗ ಶರೀರದ ಪ್ರತಿಯೊಂದು ಭಾಗಗಳಿಗೂ ಒಬ್ಬೊಬ್ಬ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಚಳಿಗಾಲವೆಂದರೆ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಚಳಿ ಪ್ರಾರಂಭವಾಗಿ ಡಿಸೆಂಬರ್ ಮತ್ತು ಜನೇವರಿಯಲ್ಲಿ ಹಗಲೂ ರಾತ್ರಿ ಎನ್ನದೆ ಕೊರೆಯುವ ಚಳಿ ಇರುವುದು ಸರ್ವೆ ಸಾಮಾನ್ಯವಾಗಿರುತ್ತದೆ. ನಂತರ ಫೆಬ್ರವರಿಯಲ್ಲಿ ದಿನದ ಅವಧಿಯಲ್ಲಿ ಹೆಚ್ಚಾಗುವ ಬಿಸಿಲು ಹಾಗೂ ರಾತ್ರಿ
ಅವಽಯಲ್ಲಿ ಕೊರೆಯುವ ಚಳಿಯು ಸರ್ವೆ ಸಾಮಾನ್ಯ.

ಹಾಗೆಯೆ ಮಾರ್ಚ್‌ನಿಂದ ಸಂಪೂರ್ಣವಾಗಿ ಬೇಸಿಗೆಯ ಬಿಸಿಲು ಕ್ರಮೇಣ ಹೆಚ್ಚಾಗುತ್ತದೆ. ಆದರೆ ಇಂದು ಹಲವಾರು ದಿನಗಳ ಕಾಲ ಕಾಡುತ್ತಿದ್ದ ಕೊರೆಯುವ ಚಳಿ ಎನ್ನುವುದು ಆಗೊಮ್ಮೆ ಈಗೊಮ್ಮೆ ಮಾತ್ರ ಕಂಡು ಬರುತ್ತಿದೆ. ಈ ಅವಧಿಯಲ್ಲಿ ಮಳೆ ಕೂಡ ಬೀಳುತ್ತದೆ. ಹಿಂದೆ ಚಳಿಗಾಲ ಹಾಗೂ ಬೇಸಿಗೆಯ ಅವಧಿಯಲ್ಲಿ ಮಳೆ ಬೀಳುತ್ತಿರಲಿಲ್ಲ. ಇತ್ತಿತ್ತಲಾಗಿ ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಗಳಲ್ಲಿಯೂ ಕೆಲವೊಮ್ಮೆ ಮಳೆ ಹಾಗೂ ಚಳಿಯ ಅನುಭವವಾಗುತ್ತಿರುವುದು ಸುಳ್ಳೇನಲ್ಲ.

ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ಕೊನೆಯವರೆಗೆ ಸಾಮಾನ್ಯವಾಗಿ ಬೇಸಿಗೆಕಾಲವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಈಚೆಗೆ ಬಿಸಿಲಿನ ಪ್ರಮಾಣ ಬಹಳ ಕಡಿಮೆಯಾಗಿದೆ. ಕಳೆದ ದಶಕಗಳ ಆಚೆ ಇದ್ದ ಬಿರುಬಿಸಿಲು ಯಾರನ್ನೂ ಹೊರಗೆ ಬಿಟ್ಟಿರಲಿಲ್ಲ ಎಂಬುದು ಇನ್ನೂ ಅರಿವಿದೆ. ಹಾಗಾದರೆ ಯಾಕೆ ಹೀಗೆ ವಾತಾವರಣದಲ್ಲಿ ಒಮ್ಮಿಂದೊಮ್ಮೆಲೆ ವಿಪರೀತ ವಾದ ಬದಲಾವಣೆಗಳು ಗೋಚರಿಸುತ್ತಿವೆ? ದಿನನಿತ್ಯ ಮಾನವನಿಂದ ನಿಸರ್ಗದ ವಿರುದ್ಧವಾಗಿ ನಡೆಯುತ್ತಿರುವ ಚಟುವಟಿಕೆ ಗಳಿಂದಲೆ ಹೀಗೆ ವಾತಾವರಣವು ಬದಲಾಗುತ್ತಿದೆ ಎಂಬುದು ಬಹುತೇಕ ವಿಜ್ಞಾನಿಗಳ ಅಂಬೋಣವಾಗಿದೆ.

ಇತಿಹಾಸದಲ್ಲಿ ದಾಖಲಾದಂತೆ ಶತಮಾನಗಳಾಚೆ ಕಡಲಂಚಿನಲ್ಲಿದ್ದ ವಿಶ್ವದ ಹಲವಾರು ಜನವಸತಿಯ ಪ್ರದೇಶಗಳು ಸಮುದ್ರದಲ್ಲಿ ಮುಳುಗಿ ಹೋಗಿವೆ ಎಂಬುದನ್ನು ನಾವು ಕೇಳಿದ್ದೇವೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಪ್ರಸ್ತುತ
ವಾತಾವರಣದ ಬದಲಾವಣೆಗಳಿಂದ ಭವಿಷ್ಯದಲ್ಲಿ ಇನ್ನೂ ಭಯಾನಕ ಪರಿಸ್ಥಿತಿಯನ್ನು ಜೀವಿಗಳು ಎದುರಿಸಬೇಕಾದ ಸನ್ನಿವೇಶ ಬಂದರೂ ಅಚ್ಚರಿ ಪಡಬೇಕಿಲ್ಲ.

ಆದರೆ, ಇತ್ತೀಚೆಗೆ ನಿಯಮಿತವಾಗಿ ನಡೆಯುತ್ತಿದ್ದ ಪ್ರತಿಯೊಂದು ಋತುಮಾನದ ನಡೆಯು ತನ್ನ ಪಥವನ್ನು  ಬದಲಾಯಿಸಿರ ಬಹುದೆ? ಸ್ಥಾನಪಲ್ಲಟಗೊಳ್ಳುತ್ತಿರುವ ಋತುಗಳ ಚಕ್ರದ ಈ ನಡೆಯಿಂದಾಗಿ ಆಯಾ ಪ್ರದೇಶದ ವಲಯದಲ್ಲಿನ ಹವಾಮಾನದ
ಏರುಪೇರುಗಳು ಸಂಭವಿಸುತ್ತಿದ್ದು, ಇದರ ಅಡ್ಡ ಪರಿಣಾಮಗಳ ಪ್ರಭಾವ ಹೇಗಿದೆ ಎಂದರೆ, ಋತುಮಾನದ ಬದಲಾವಣೆ ಯೊಂದಿಗೆ ಜೀವನದಾರಿಯನ್ನು ಕಂಡುಕೊಂಡಿದ್ದ ಜನ-ಜಾನುವಾರುಗಳು ಹಾಗೂ ಕೀಟ- ಪಕ್ಷಿಗಳು ಕಂಗಾಲಾಗಿವೆ.

ಉದಾಹರಣೆಗೆ, ಒಡಿಶಾದಲ್ಲಿ ಕಂಡುಬರುವ ಕಪ್ಪು ತಲೆಯ ಓರಿಯೋಲ್ ಎಂಬ ಪಕ್ಷಿಯು ವಸಂತ ಋತುವಿನ ಆಗಮನವನ್ನು ಮುಂಚಿತವಾಗಿ ತಿಳಿಸುತ್ತದೆ. ಹೇಗೆಂದರೆ, ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಸಾಕಷ್ಟು ಹಳ್ಳಿಗಳಲ್ಲಿ ಈ ಓರಿಯಲ್ ಪಕ್ಷಿ ಕಾಣಿಸಿಕೊಳ್ಳುತ್ತಾ ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಮುಂದಿನ ಮಾರ್ಚ ತಿಂಗಳಿನವರೆಗೂ ಹಳ್ಳಿಗಳ ಪರಧಿಯಲ್ಲೇ ಕಂಡುಬರುವ ಈ ಪಕ್ಷಿ ಮಾರ್ಚ್ ತಿಂಗಳ ಕೊನೆಯಲ್ಲಿ ಮತ್ತೆ ಕಾಡಿನೆಡೆಗೆ ಹಾರಿಬಿಡುತ್ತದೆ.

ವಸಂತ ಋತುವಿನ ಅವಧಿ ಮುಗಿಯಿತೆನ್ನುವುದೇ ಮತ್ತೆ ಕಾಡಿಗೆ ಹಿಂತಿರುಗುವ ಈ ಪಕ್ಷಿಯ ಸೂಚನೆ. ಇದು ಬದಲಾಗುತ್ತಿರುವ
ಋತು ಚಕ್ರ ಹಾಗೂ ನಿಸರ್ಗದ ಪ್ರತಿಲಯದ ನಡುವಿನ ಸಂಬಂಧವನ್ನು ತಿಳಿಸುತ್ತದೆ. ಅದರಂತೆ ಜನವರಿ ೧೪ರಂದು ಬರುತ್ತಿದ್ದ ಮಕರ ಸಂಕ್ರಮಣವು ಈಗ ಕೆಲವು ವರ್ಷಗಳಿಂದ ಜನವರಿ ೧೫ರಿಂದ ಬರುತ್ತಿರುವುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ.

ಇವೆಲ್ಲವುಗಳನ್ನು ಗಮನಿಸಿದರೆ ಋತುಮಾನಗಳು ಬದಲಾಗುತ್ತಿವೆ ಎಂದೆನಿಸುತ್ತಿವೆಯಲ್ಲವೆ? ಒಂದು ವರ್ಷದಲ್ಲಿ ಇರುವಂತಹ ಆರು ಋತುಗಳಲ್ಲಿ ವಸಂತ ಋತುವಿನ ನಂತರ, ಗ್ರೀಷ್ಮ ಋತು ಆವರಿಸುತ್ತದೆ. ಈ ಗ್ರೀಷ್ಮ ಋತುವಿನಲ್ಲಿ ವಾತಾವರಣವು ಬಿಸಿಯಾಗಿಯೆ ಇರುತ್ತದೆ. ಇದನ್ನೇ ಬೇಸಿಗೆ ಕಾಲವೆಂದು ಪರಿಗಣಿಸಲಾಗಿದೆ. ನಂತರದಲ್ಲಿ ಬರುವ ಋತುವೆ ವರ್ಷ ಋತು, ವರ್ಷವೆಂದರೆ ಮಳೆ. ವರ್ಷ ಋತುವಿನ ಆಗಮನವೆ ಮಳೆಗಾಲದ ಪ್ರಾರಂಭ. ಇದರ ನಂತರ ಆವರಿಸುವ ಶರದ ಋತು. ಇದರ
ಬೆನ್ನಲ್ಲೇ ಬರುವ ಶಶಿರ ಋತು ಚಳಿಗಾಲದ ಕಾಲಘಟ್ಟವನ್ನು ಸೂಚಿಸುತ್ತದೆ. ಇದರ ನಂತರ ಹೇಮಂತ ಋತುವಿನ ಆಗಮನವಾಗಿದ್ದು, ಇಬ್ಬನಿ ಬೀಳುವ ದಿನಗಳನ್ನು ಹೇಮಂತ ಋತುವಿನ ಅವಧಿಯು ಸೂಚಿಸುತ್ತದೆ.

ಇಲ್ಲಿ ಪ್ರತಿಯೊಂದು ಋತುವೂ ಸಹ ಎರಡೆರಡು ತಿಂಗಳುಗಳ ಕಾಲ ಅವಧಿಯನ್ನು ಹೊಂದಿರುತ್ತದೆ. ಪ್ರತಿಯೊಂದು ಋತುವಿನ ಕಾಲಾವಽಯಲ್ಲಿ ನಮ್ಮ ಹಿರಿಯರು ಒಂದೊಂದು ಬಗೆಯ ಹಬ್ಬಗಳನ್ನು ಆಚರಿಸುವುದರೊಂದಿಗೆ ಆಯಾ ಋತುಮಾನದಲ್ಲಿ
ಹೊಂದಾಣಿಕೆಯಾಗುವ ಆಹಾರಗಳನ್ನು ಸೇವಿಸುತ್ತಿದ್ದರು. ಪ್ರತಿಯೊಂದು ಋತುವೂ ತನ್ನ ಆಗಮನವನ್ನು ತನ್ನದೇಯಾದ ಸ್ಪಷ್ಟ ವಿಧಾನದಲ್ಲಿ ಸೂಚಿಸುತ್ತಿತ್ತು. ಅಥವಾ ಪ್ರತಿ ಋತುವಿನ ಆಗಮನವನ್ನು ಆಯಾ ಪ್ರದೇಶಗಳಲ್ಲಿನ ಜೀವಿಸಂಕುಲಗಳು ವಿಶಿಷ್ಟ ರೀತಿಯಲ್ಲಿ ಸೂಚಿಸುತ್ತಿದ್ದವು.

ಋತುಗಳ ಆಗಮನದಿಂದ ವಾತಾವರಣದಲ್ಲಿ ಅನೇಕ ಪ್ರಕಾರದ ಬದಲಾವಣೆಗಳಾಗುತ್ತಿದ್ದವು. ಅಂತಹ ಬದಲಾವಣೆಯ ವಾತಾವರಣದಲ್ಲಿ ಬದುಕುವ ಜೀವಿಗಣಗಳು ಸಹ ತಮ್ಮ ಸಹಜವಾದ ಬದಲಾವಣೆಯನ್ನು ಸೂಚಿಸುತ್ತಿದ್ದವು. ಉದ್ದವಾಗಿರುವ ಎರಡು ರೆಕ್ಕೆಗಳನ್ನು ಹೊಂದಿರುವ ಕನ್ನೆನೊಣಗಳಗುಂಪು ದಟ್ಟವಾಗಿ ಆಗಸದಲ್ಲಿ ಹರಡಿದೆಯೆಂದರೆ ಅದು ಮಳೆಗಾಲದ ಪ್ರಾರಂಭದ ಸೂಚನೆಯೆಂದು ತಿಳಿಯುತ್ತಿತ್ತು. ಮುಂಗಾರು ಮಳೆಯನ್ನೇ ಇವು ಕರೆತಂದಿವೆ ಎಂಬ ಭಾವನೆ ಹುಟ್ಟಿಸುವ ಈ
ಕೀಟಗಳು ಇತರ ಋತುಮಾನಗಳಲ್ಲಿ ದಟ್ಟವಾಗಿ ಕಾಣಿಸುವುದಿಲ್ಲ.

ಬಾಯ್ಕಳಕ ಪಕ್ಷಿಗಳು ಹುಣಸೇಮರ ದಲ್ಲಿ ಕಂಡುಬಂದವೆಂದರೆ ಅದು ಅಕ್ಷಯ ತೃತಿಯ ಹಬ್ಬದ ಸೂಚನೆಯಂತೆ. ಬೇಸಾಯ ಸಂಬಂಧಿತ ಚಟುವಟಿಕೆಗಳು ಹೊಲತೋಟಗಳಲ್ಲಿ ಆರಂಭಗೊಳ್ಳುವುದು ಇದೇ ಸಮಯದಲ್ಲಿ. ಬೇಸಾಯದ ಸಮಯವನ್ನು ರೈತರು ಮರೆತರು ಈ ಪಕ್ಷಿ ಅದನ್ನು ನೆನಪಿಸಲು ಬರುತ್ತದೆ ಎಂಬ ನಂಬಿಕೆ ಗ್ರಾಮೀಣ ರೈತ ಸಮುದಾಯದಲ್ಲಿದೆ. ಅದೇ ರೀತಿ ಬೋಧಿಮರದಲ್ಲಿ ಬಾವಲಿಗಳು ಗೂಡು ಕಟ್ಟುತ್ತಿವೆಯೆಂದರೆ ಚಳಿಗಾಲದ ಆಗಮನದ ಸೂಚಕ. ಆ ಮರದಲ್ಲಿ ಹೂಗಳು
ಕಾಣಿಸಿಕೊಂಡರೆ ಅದು ಬೇಸಿಗೆಯ ಮಧ್ಯಕಾಲವಂತೆ.

ಇತ್ತೀಚಿನ ದಿನಗಳಲ್ಲಿ ಕರಾರುವಾಕ್ ಆಗಿ ಋತುಮಾನಗಳ ಆಗಮನ ನಿರ್ಗಮನವನ್ನು ಸೂಚಿಸುತ್ತಿದ್ದ ಇಂತಹ ಋತುಮಾನಗಳ ಧೂತರು/ಹರಿಕಾರರು ಎಂದು ಗುರುತಿಸಲ್ಪಟ್ಟಿರುವ ಈ ಬಗೆಯ ಜೀವಿಗಳ ನಡೆಯನ್ನು ವಿಶ್ವಾಸಾರ್ಹವಾಗಿ ಪರಿಗಣಿಸಲಾಗು ತ್ತಿಲ್ಲ. ಇಂದು ಕನ್ನೆನೊಣಗಳು ಬರಿಯ ಮಳೆಗಾಲದಷ್ಟೆ ಅಲ್ಲ, ಚಳಿಗಾಲದಲ್ಲೂ, ಕಡುಬೇಸಿಗೆಯಲ್ಲೂ ಗುಂಪಾಗಿ ದಟ್ಟವಾಗಿ ಕಾಣಿಸುತ್ತಿವೆ. ಬರಿಯ ಅಕ್ಷಯ ತೃತಿಯ ಸಮಯದಲ್ಲೇ ಕಾಣಸಿಗುತ್ತಿದ್ದ ಬಾಯ್ಕಳಕ ಪಕ್ಷಿಯು ಇತರ ಋತುಮಾನಗಳಲ್ಲೂ ಗೋಚರಿಸುತ್ತಿವೆ. ಗ್ರಾಮೀಣ ಜನತೆ ಓರಿಯೋಲ್ ಪಕ್ಷಿಯ ಗಾನವನ್ನು ಕೇವಲ ವಸಂತ ಋತುವಿನಷ್ಟೆ ಅಲ್ಲದೆ ಬೇಸಿಗೆ,
ಮಳೆಗಾಲದಲ್ಲೂ ಕೇಳಿಸಿಕೊಳ್ಳುತ್ತಿದ್ದಾರೆ.

ಹಾಗಾದರೆ ವಾತಾವರಣವಿಂದು ಬದಲಾವಣೆಯಾಗುತ್ತಿದೆಯಾ? ಇಂದು ವಸಂತ ಋತು ಕೇವಲ ಒಂದು ಕಾಲಮಾನಕ್ಕೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ವರ್ಷದಲ್ಲಿ ಎರಡೆರಡು ತಿಂಗಳಾವಧಿಯ ಪ್ರತಿಯೊಂದು ಋತುವು ಸಹ ಮಾಯವಾಗುತ್ತಿದ್ದು, ಇದರಿಂದಾಗಿ ವರ್ಷದಲ್ಲಿ ಅಲ್ಪಾವಧಿಯ ಮಳೆಗಾಲ ಹಾಗೂ ಉರಿಯೆಬ್ಬಿಸುವ ಎಂಟು ತಿಂಗಳ ಕಡು ಬೇಸಿಗೆ ಕಾಲ ನಮ್ಮ ದೇಶದಾದ್ಯಂತ ವ್ಯಾಪಿಸಿರುವುದನ್ನು ಕಾಣಬಹುದಾಗಿದೆ.

ಇವೆರಡರ ನಡುವೆ ಬಂದೆನೋ ಬಿಟ್ಟೆನೋ ಎಂಬಂತೆ ಕೆಲವು ದಿನಗಳ ಮಟ್ಟಿಗೆ ಅಲ್ಲಲ್ಲಿ ಒಮ್ಮೊಮ್ಮೆ ಚುಮು ಚುಮು ಚಳಿಗಾಲದ ಅನುಭವವಾಗುತ್ತದೆ. ಇನ್ನುಳಿದ ಋತುಗಳ ಬಗ್ಗೆ ಹೇಳುವಂತೆಯೆ ಇಲ್ಲ. ಏಕೆಂದರೆ ಅದರ ಸೂಚನೆಗಳು ಗೋಚರಿಸುತ್ತಿಲ್ಲ. ಋತುಗಳ ಆಗಮನವನ್ನು ಸೂಚಿಸುತ್ತಿದ್ದ ಜೀವಸಂಕುಲವೂ ಸಹ ಅಳಿವಿನಂಚಿನಲ್ಲಿವೆ. ಈಗಿನ ಮಕ್ಕಳಿಗೆ ಋತುಚಕ್ರಗಳ ಅನುಭವವಾಗದಿರುವುದು ಖೇದಕರ ಸಂಗತಿಯಾಗಿದೆ.

ಮಾನವನ ಶರೀರಕ್ಕೆ ವಯಸ್ಸಿಗನುಗುಣವಾಗಿ ಹವಾಮಾನದ ಅನುಭವವು ಮೇಲಿಂದ ಮೇಲೆ ತಟ್ಟುತ್ತಿರಬೇಕು. ಇದರಿಂದ ಶರೀರವು ಸದೃಢವಾಗುವುದಲ್ಲದೆ ಸಣ್ಣಪುಟ್ಟ ಜಡ್ಡು-ಜಾಪತ್ರಯಗಳು ಬರುವುದಿಲ್ಲ. ಹಳ್ಳಿಗಳಲ್ಲಿರುವ ಹಿರಿಯರು ಬದಲಾಗು ತ್ತಿರುವ ಋತುಗಳ ಸ್ಥಾನಪಲ್ಲಟಗಳ ಕುರಿತು ಮಾತನಾಡುವಾಗ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿ
ಋತುವಿನ ಆಗಮನದಲ್ಲಿ ಆಚರಿಸುತ್ತಿದ್ದ ಸಂಭ್ರಮಗಳನ್ನು ಹಂಚಿಕೊಳ್ಳುತ್ತಾ, ಮರೆಯಾಗುತ್ತಿರುವ ಋತುಗಳ ಹವಾಮಾನದ ಕುರಿತು ಮರುಗುತ್ತಾರೆ. ಹಾಗೆಯೇ ನಮ್ಮ ಮುಂದಿನ ಪೀಳಿಗೆಯ ಬದುಕನ್ನು ಯೋಚಿಸುತ್ತಾ ಭಯಗೊಳ್ಳುತ್ತಾರೆ.

ಕಳೆದ ದಶಕಗಳಾಚೆ ಮಾನವನ ದಿನನಿತ್ಯದ ಕಾರ್ಯಚಟುವಟಿಕೆಗಳು ನೈಸರ್ಗಿಕವಾದ ವಾತಾವರಣದಲ್ಲಿ ನಡೆಯುತ್ತಿದ್ದವು. ಅಂದರೆ ಹಗಲಿನಲ್ಲಿ ಯಾವುದೇ ವಿದ್ಯುತ್ ದೀಪಗಳ ಸಹಾಯವಿಲ್ಲದೆ ನೈಸರ್ಗಿಕವಾದ ಸೂರ್ಯನ ಬೆಳಕಿನಲ್ಲಿ ಹಾಗೂ ಪ್ರಾಕೃತಿಕ ತಾಪಮಾನ ದಲ್ಲಿ ನಡೆಯುತ್ತಿದ್ದವು. ಆದರೆ ಇಂದು ಮಾನವನ ಕಾರ್ಯ ಚಟುವಟಿಕೆಗಳು ನಿಸರ್ಗದ ವಿರುದ್ಧವಾಗಿ
ನಡೆಯುತ್ತಿವೆ. ಅಂದರೆ ಹಗಲಿನಲ್ಲಿಯೂ ವಿದ್ಯುತ್ ದೀಪಗಳ ಬೆಳಕಿನಲ್ಲಿ ಕೆಲಸ ನಿರ್ವಹಿಸುವುದು ಹಾಗೂ ವಾತಾವರಣವು ಶಕೆ ಇದ್ದಲ್ಲಿ ಯಂತ್ರಗಳ ಸಹಾಯ ದಿಂದ ಕೆಲಸದ ವಾತಾವರಣದಿಂದ ತಂಪಾಗಿಸುವುದು ಹಾಗೂ ತಂಪಾಗಿದ್ದಲ್ಲಿ ಶಾಖಗೊಳಿಸು ವುದು ಸರ್ವೆಸಾಮಾನ್ಯವಾಗಿದೆ.

ಹೀಗೆ ಯಂತ್ರಗಳ ಬಳಕೆಯಿಂದ ಮಾನವನು ಪ್ರಕೃತಿಯ ವಿರುದ್ದ ಕೆಲಸ ನಿರ್ವಹಿಸುವುದು ಯಾವ ನ್ಯಾಯ? ವಿಶ್ವದಲ್ಲಿ ವಾಸವಿರುವ ಪ್ರತಿಯೊಂದು ಜೀವಿಗಳು ನೈಸರ್ಗಿಕವಾಗಿ ಬರುವ ಎಲ್ಲ ಹವಾಮಾನದ ಬದಲಾವಣೆಗಳನ್ನು ಸ್ವೀಕರಿಸಿ
ಅನುಭವಿಸಲೇಬೇಕು. ಆದರೆ ಮಾನವ ಜೀವಿಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಜೀವಸಂಕುಲವು ನಿಸರ್ಗದತ್ತವಾಗಿ ಬರುವ ಎಲ್ಲ ಹವಾಮಾನದ ಬದಲಾವಣೆಗಳನ್ನು ಸ್ವೀಕರಿಸುತ್ತ ಬದುಕನ್ನು ಮುನ್ನಡೆಸುತ್ತಿವೆ.

ಆದುದರಿಂದಲೆ ಮಾನವನನ್ನು ಹೊರತುಪಡಿಸಿ ಇನ್ನುಳಿದ ಜೀವಸಂಕುಲಕ್ಕೆ ರೋಗಬಾಧೆಯ ಪ್ರಮಾಣವು ಬಹಳ ಕಡಿಮೆ ಇದೆ ಎಂದು ಥಟ್ಟಣೆ ಹೇಳಬಹುದಾಗಿದೆ. ನಿಸರ್ಗದಲ್ಲಿ ಉಂಟಾಗುವ ಹವಾಮಾನದ ಅನುಭವವನ್ನು ಸರಿಯಾಗಿ ಅನುಭವಿಸದ ಪರಿಣಾಮ ಇಂದು ಮಾನವ ಜೀವಿಯು ವಿಪರೀತ ರೋಗಗಳಿಗೆ ತುತ್ತಾಗುತ್ತಿರುವುದನ್ನು ಕಾಣಬಹುದು. ಈಗ ನಮ್ಮಲ್ಲಿ ಹೊಸ ಬಗೆಯ ವಿಚಿತ್ರವೆನಿಸುವ ಹಾಗೂ ಎಂದೂ ಅನುಭವಿಸಲಾರದ ಹವಾಮಾನ ರೂಪಗೊಳ್ಳುತ್ತಿದೆ. ಈಗಿನ ಹವಾಮಾನ ವನ್ನು ಅರ್ಥಮಾಡಿಕೊಳ್ಳುವುದು ವಿಜ್ಞಾನಲೋಕಕ್ಕೆ ಬಹಳ ಸವಾಲಿನ ಮತ್ತು ಕಷ್ಟಕರವಾದ ಕೆಲಸವಾಗಿದೆ.

ಹೀಗಾಗಿ ಈ ಹವಾಮಾನ ಬದಲಾವಣೆಯಿಂದ ಭವಿಷ್ಯದಲ್ಲಿ ಆಗಬಹುದಾದ ದುರಂತಗಳನ್ನು ಮುಂಚಿತವಾಗಿ ಊಹಿಸುವುದು ಕಷ್ಟಕರವಾಗಿದೆ. ಬದಲಾವಣೆ ಜಗದ ನಿಯಮ ಎಂಬ ನಾಣ್ಣುಡಿಯು ನಿಜವಿದ್ದರೂ ಅದಕ್ಕೆ ತಕ್ಕ ಹಾಗೆ ಮನುಕುಲವೂ ಬದಲಾಗಲು ಸನ್ನದ್ಧವಾಗುವುದು ಅತೀ ಅವಶ್ಯವಿದೆ. ನಿಸರ್ಗಕ್ಕಿಂತ ದೊಡ್ಡದು ಯಾವ ವ್ಯಕ್ತಿಯು ಇಲ್ಲ ಹಾಗೂ ಯಾವ ಶಕ್ತಿಯು ಇಲ್ಲ. ಆದ್ದರಿಂದ ನಿಸರ್ಗದ ವಿರುದ್ಧ ದಿಕ್ಕಿನಲ್ಲಿ ಸಾಗದೇ ನೈಸರ್ಗಿಕವಾಗಿ ತಯಾರಾದ ಆಹಾರವನ್ನು ಸೇವಿಸುತ್ತ, ನಿಸರ್ಗ ದೊಂದಿಗೆ ಹೆಜ್ಜೆ ಹಾಕುತ್ತ ನಮ್ಮ ಪೂರ್ವಜರಂತೆ ಸದ್ಯದ ಪೀಳಿಗೆ ಹಾಗೂ ಮುಂಬರುವ ಪೀಳಿಗೆಗಳು ಆರೋಗ್ಯವಂತರಾಗಿ ನೂರಾರು ವರ್ಷಗಳ ಕಾಲ ಬದುಕನ್ನು ಕಟ್ಟಿಕೊಳ್ಳುವುದು ಉಚಿತವಲ್ಲವೆ?

 
Read E-Paper click here