Sunday, 15th December 2024

ಅಭಿವೃದ್ದಿ ವಿಳಂಬ: ಇಲಾಖೆಗಳ ಸಮನ್ವಯದ ಕೊರತೆಯ ಬಿಂಬ

ಅಭಿಪ್ರಾಯ

ರಮಾನಂದ ಶರ್ಮಾ

ಅದೊಂದು ಸುಂದರ ಬಡಾವಣೆ. ಕೇವಲ ಎರಡು ದಶಕಗಳ ಹಿಂದೆ ಪಾಳು ಬಿದ್ದ ಗದ್ದೆಯಾಗಿದ್ದು, ಇಂದು ಸಮಾಜದಲ್ಲಿ who is who ಎಂದು ಕರೆಯಲ್ಪಡುವವರು ಉಳಿದುಕೊಂಡಿರುವ ಸ್ವಲ್ಪ ಐಷಾರಾಮಿ ಎಂದು ಹೇಳಬಹುದಾದ ವಸತಿ ಬಡಾವಣೆ ಯಾಗಿದೆ.

ಸುಮಾರು 30 ಅಡಿ ಅಗಲವಾದ ರಸ್ತೆಗಳು, ರಸ್ತೆಯ ಎರಡೂ ಪಕ್ಕದಲ್ಲಿ ಸಾಲಾಗಿ ಬೆಳೆದು ಹರಡಿರುವ ಹಸಿರು ಗಿಡಗಳು, ಪ್ರತಿ ಮನೆಯ ಮುಂದೆ ಸ್ವಲ್ಪ ಚಿಕ್ಕದಾದರೂ ಪುಟ್ಟದಾದ ಗಾರ್ಡನ್‌ಗಳು, ರಸ್ತೆಯೂ ಎರಡೂ ಪಕ್ಕದಲ್ಲಿ ಸಾಲಾಗಿ ನಿಂತಿರುವ ತರವೇವಾರಿ ಕಾರುಗಳು, ಹೀಗೆ ನೋಡಿದವರು ಅಸೂಯೆಪಡಬಹುದಾದ, ಆಶ್ಚರ್ಯಗೊಳ್ಳಬಹುದಾದ ಬಡಾವಣೆ. ಈ ಎಲ್ಲಾ ಸೌಲಭ್ಯಗಳು ದಿನ ಬೆಳಗಾಗುವದರೊಳಗಾಗಿ ಬಂದಿಲ್ಲ ಮತ್ತು ಒಮ್ಮೆಲೆ ಬಂದಿಲ್ಲ.

ಒಂದೊಂದು ಸೌಲಭ್ಯದ ಹಿಂದೆ ಪುಟಗಳಷ್ಟು ಉದ್ದದ ಕಥೆ, ವ್ಯಥೆ, ಆಶೆ, ನಿರಾಶೆ, ಹತಾಷೆ, ತಾಳ್ಮೆ ಪರೀಕ್ಷಿಸುವ ವಿಳಂಬ ಮತ್ತು ಸಂಕಟಗಳ ಸರಮಾಲೆ ಇದೆ. ಯಾವುದೂ ಕ್ರಮಬದ್ಧವಾಗಿ ಬಂದ ದಾಖಲೆ ಇಲ್ಲ. ರಸ್ತೆ, ನೀರು, ಚರಂಡಿ, ಒಳಚರಂಡಿ ವಿದ್ಯುತ್ ಸಂಪರ್ಕ, ಕೊಳವೆ ಬಾವಿಗಳ ವೈಫಲ್ಯ, ತ್ಯಾಜ್ಯ ವಿಲೇವಾರಿ, ಹಳ್ಳಿಗಳನ್ನು ನಗರಸಭೆಗೆ ಸೇರಿಸುವುದರಿಂದಾದ ಖಾತಾ ಬದಲಾವಣೆ
ಎನ್ನುವ ಕ್ಲಿಷ್ಟ ಪ್ರಕ್ರಿಯೆ. ಒಂದೇ ಎರಡೇ ಹತ್ತಾರು ಸಮಸ್ಯೆಗಳು. ಹಲವರು ಈ ಬಡಾವಣೆಯಲ್ಲಿ ನಿವೇಶನ ಮಾಡಿದ್ದಕ್ಕೆ ಪಶ್ಚಾತ್ತಾ ಪ ಪಟ್ಟಿದ್ದರೂ ಕೂಡಾ.

ಸುಗಮ ಜೀವನಕ್ಕೆ ಬೇಕಾದ ಎಲ್ಲಾ ನಾಗರಿಕ ಸೌಲಭ್ಯ ಪಡೆಯುವ ಹೊತ್ತಿಗೆ ತಾವು ಹರಿಶ್ಚಂದ್ರ ಘಾಟ್‌ನ ಬಾಗಿಲು ಬಡಿಯುವ
ಸಮಯ ಬರಬಹುದೆಂದು ಹೆದರಿ ನಿವೇಶನ ಮಾರಿ ಸುಸಜ್ಜಿತ ಫ್ಲ್ಯಾಟ್‌ಗೆ ಹೋದವರು ಇಲ್ಲದಿಲ್ಲ. ಆಗೊಮ್ಮೆ ಈಗೊಮ್ಮೆ ಈ ಬಡಾವಣೆಗೆ ತಮ್ಮ ಪರಿಚಯದವರನ್ನು ಭೇಟಿ ಮಾಡಲು ಬರುವ ಇವರು ತಾವು ಮಾರಿ ಹೋದ ನಿವೇಶನದ ಈಗಿನ ಬೆಲೆಯನ್ನು ನೋಡಿ ಹೌಹಾರುತ್ತಾರೆ. ಕೈ ಹೊಸಕಿಕೊಂಡು ತಮ್ಮ ದುಡುಕಿನ ನಿರ್ಧಾರವನ್ನು ಶಪಿಸುತ್ತಾರೆ.

ಅಭಿವೃದ್ಧಿ ಕಾರ್ಯ ಎಂದೂ ದಿನಬೆಳಗಾಗುವದರೊಳಗಾಗಿ ಆಗುವುದಿಲ್ಲ. ಇದು ಯವಾಗಲೂ ಲೋಗೇರ್ ನಲ್ಲಿಯೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಗೇರ್ ಚೇಂಜ್ ಮಾಡುವವರಿಗೆ ಹಸಿವು ಇರುವುದಿಲ್ಲ. ಮಾಡಿಸುವವರಿಗೆ ಇರುವ ಅರ್ಜೆನ್ಸಿ ಮಾಡುವವ ರಿಗೆ ಇರುವುದಿಲ್ಲ. ಗೇರ್‌ಚೇಂಜ್ ಮಾಡಿ ಗಾಡಿಯನ್ನು ಪುಷ್ ಮಾಡಿದಾಗಲೇ ಗಾಡಿ ಓಡುತ್ತದೆ. ಈ ಪ್ರಕ್ರಿಯೆಗೆ ಹಗಲು ರಾತ್ರಿ ಎನ್ನದೇ ಸದಾ ಜಾಗೃತರಾಗಿ ಡೆಡಿಕೇಟೆಡ್ ಅಗಿ ದುಡಿಯುವವರು ಬೇಕು. ಬೇತಾಳನಂತೆ ಫೈಲುಗಳ ಬೆನ್ನು ಹತ್ತಿ ಹೋಗಬೇಕಾಗು ತ್ತದೆ. ಒಂದೇ ಒಂದು ಸಣ್ಣ ತಪ್ಪು ಅಥವಾ ಕೊರತೆ ಇಡೀ ಪ್ರಕ್ರಿಯೆಯ ಹಳಿ ತಪ್ಪಿಸುತ್ತದೆ.

ಈ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಇದ್ದು, ಈ ಕೆಲಸ ಬಡಾವಣೆಯಲ್ಲಿರುವ ಹಿರಿಯ ಮತ್ತು ನಿವೃತ್ತರ ಮೇಲೆ ಬೀಳುತ್ತದೆ. ಅದಕ್ಕೂ ಹೆಚ್ಚಾಗಿ ಈ ಪ್ರಕ್ರಿಯೆಯಲ್ಲಿ ಹತ್ತಾರು ಇಲಾಖೆಗಳು ಇರುತ್ತಿದ್ದು ಇವುಗಳ ಮದ್ಯದಲ್ಲಿ ಸಮನ್ವಯತೆ ಮತ್ತು ಸಹಕಾರವಿಲ್ಲದೇ ಅಗುವ ಕೆಲಸ ಮುಂದೆ ಹೋಗುತ್ತಿರುತ್ತದೆ. ಹಾಗೆಯೇ ಕೆಲವು ನಿಯಮಾವಳಿಗಳು ಫೈಲುಗಳು ಮುಂದೆ ಹೋಗಲು ಅಡಚಣೆ ಉಂಟುಮಾಡುತ್ತವೆ. ಒಂದು ನಿವೇಶನವನ್ನು ಖರೀದಿಸಿ ದಾಗ ಅದರ ಸಂಗಡ ಖಾತಾ ವರ್ಗಾವಣೆ ಅಗುವು ದಿಲ್ಲ. ಅದಕ್ಕೆ ಪುನಃ ಅರ್ಜಿ ಗುಜರಾಯಿಸಬೇಕಾಗುತ್ತದೆ. ಮನೆಗೆ ವಿದ್ಯುತ್ ಸಂಪರ್ಕ ಬೇಕಾದರೆ ಪುನಃ ಸೇಲ್ ಡೀಡ್, ಖಾತಾ ಪತ್ರ, ನೀರಿನ ಸಂಪರ್ಕ ಬೇಕಾದರೆ ಪುನಃ ಖಾತಾ ಪ್ರಮಾಣಪತ್ರ, ಅಸ್ತಿ ಪತ್ರದ ನಕಲು.

ವಿಚತ್ರವೆಂದರೆ ಒಂದು ಹಳ್ಳಿಯನ್ನು ಹತ್ತಿರದ ನಗರ ಸಭೆಗೆ ಸೇರಿಸದಾಗ ನಿಮ್ಮ ಅಸ್ತಿಯ ಖಾತಾ ನಂಬರ್ ಅಟೋಮ್ಯಾಟಿಕ್ ಅಗಿ ಬದಲಾಗಬೇಕು. ಈ ಬದಲಾವಣೆ ಸರಕಾರ ಮಾಡಿದ್ದು. ಅದರೆ, ನೀವು ಇದನ್ನು ಪುನಃ ಅರ್ಜಿ ಗುಜರಾಯಿಸಿಯೇ ಪಡೆದುಕೊಳ್ಳ ಬೇಕು ಮತ್ತು ಅದಕ್ಕಾಗಿ ಶುಲ್ಕವನ್ನೂ ನೀಡಬೇಕು. ಇತ್ತೀಚೆಗೆ ಇನ್ನೊಂದು ಪ್ರತ್ಯೇಕ ಮೀಟರ್ ಬೇಕು ಎಂದು ಕೋರಿಕೆ ಸಲ್ಲಿಸಿದಾಗ ಆಧಿಕಾರಿ ಮನೆಯ ಟೆರೇಸ್ ಮೇಲೆ ಇರಿಸಿದ ಸೋಲಾರ್ ವ್ಯವಸ್ಥೆಯನ್ನು ನೋಡಿಯೂ ಸೋಲಾರ್ ಖರೀದಿಸಿದ್ದಕ್ಕೆ ರಸೀದಿ ತೋರಿಸಲು ಒತ್ತಾಯಿಸಿದ್ದ..

ಹದಿನೈದು ವರ್ಷದ ಹಿಂದೆ ಖರೀದಿಸಿದ ಸಾಮಗ್ರಿಗಳಿಗೆ ಯಾರಾದರೂ ರಸೀದಿ- ಗ್ಯಾರಂಟಿ ಇಡುತ್ತಾರೆಯೇ ಎನ್ನುವ ಕಾಮನ್
ಸೆನ್ಸ್ ಅನ್ನು ಅಧಿಕಾರಿ ಉಪಯೋಗಿಸುವ ಪ್ರಯತ್ನ ಮಾಡಲಿಲ್ಲ. ಇತ್ತೀಚೆಗೆ ನೀವು ಯಾವುದೇ ಕೆಲಸಕ್ಕೆ ಹೋದರೂ ಯಾರಿಗೆ ಯಾವ ಕಾರ್ಡ್ ನೀಡಬೇಕು ಎನ್ನುವ ಬಗೆಗೆ ಮುಗಿಯದ ಗೊಂದಲ ಕಾಣುತ್ತದೆ. ಈ ಬಗೆಗೆ ಒಂದು ದೃಢತೆ ಇರುವುದಿಲ್ಲ. ಒಂದೊಂದು ಕಡೆ ಒಂದೊಂದು ಕಾರ್ಡ್ ಕೇಳುತ್ತಾರೆ. ವರ್ಷಗಳ ಹಿಂದೆ ಒಬ್ಬರು ತಮ್ಮ ಮತದಾರರ ಗುರುತಿನ ಚೀಟಿ, ಆಧಾರ
ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಐಡಿ ಕಾರ್ಡ್ ಮತ್ತು ರೇಷನ್ ಕಾರ್ಡ್‌ಗಳ ತಲಾ ೧೦೦ ಜೆರಾಕ್ಸ್ ಪ್ರತಿಗಳನ್ನು ಮಾಡಿಸಿದ್ದರು.

ಅದನ್ನು ನೋಡಿ ಈತನಿಗೆ ಹುಚ್ಚೇ ಎಂದು ನಕ್ಕಿದ್ದರು. ಅಂದು ನಕ್ಕಿದವರು ಇಂದು ನಗಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಗೊಂದಲ ಗಳಿಗೆ ಮುಖ್ಯ ಕಾರಣ, ಹಲವು ಇಲಾಖೆಗಳ ಮಧ್ಯ ಸಾಮರಸ್ಯ ಮತ್ತು ಸಮನ್ವತೆಯ ಕೊರತೆ ಎನ್ನುವುದರಲ್ಲಿ ಚೌಕಾಶಿ ಇಲ್ಲ. ಇದರಲ್ಲಿ ಇಲಾಖೆ ಗಳ ಅಗೋಚರ ಅಹಂ ಕೂಡಾ ಕ್ರಿಯಾಶೀಲವಾಗಿರುತ್ತದೆ. ರಸ್ತೆ ಮಾಡಿಸುವಾಗ ಅಥವಾ ರಸ್ತೆಗೆ ಡಾಂಬರ್ ಹಾಕುವಾಗ, ಆ ರಸ್ತೆಯ ಪಕ್ಕದಲ್ಲಿ ಚರಂಡಿಗಳಿವೆಯೇ, ಮದ್ಯದಲ್ಲಿ ಒಳಚರಂಡಿ ಇದೆಯೇ, ಪಕ್ಕದಲ್ಲಿ ನೀರಿನ ಪೈಪ್ ಇದೆಯೇ, ಯಾವುದಾದರೂ ಮನೆಗೆ ನೀರು ಮತ್ತು ಒಳ ಚರಂಡಿ ಸಂಪರ್ಕ ಕೊಡುವುದು ಬಾಕಿ ಇದೆಯೇ, ಚರಂಡಿ ರಿಪೇರಿ ಇದೆಯೇ, ದೂರವಾಣಿ, ಮೊಬೈಲ್ ಫೋನ್ ಮತ್ತು ಟಿವಿ ಕೇಬಲ್‌ಗಳ ಡಕ್ಟ್ ಇದೆಯೇ ಅಥವಾ ಇವುಗಳನ್ನು ಸದ್ಭವಿಷ್ಯದಲ್ಲಿ ನೀಡುವ ಯೋಜನೆ ಇದೆಯೇ ಎನ್ನುವುದನ್ನು ಗಮನಿಸುವ ಮತ್ತು ವಿಚಾರಿಸುವ ವ್ಯವಸ್ಥೆ ಕಾಣುವುದಿಲ್ಲ. ಈ ಸಮನ್ವಯತೆ ಮತ್ತು ಸಹಕಾರದ ಕೊರತೆಯಿಂದಾಗಿ ರಸ್ತೆ ಮಾಡಿ ಅಥವಾ ಡಾಂಬರ್ ಹಾಕಿದ ವಾರದಲ್ಲಿ ಅಥವಾ ತಿಂಗಳು ಗಳಲ್ಲಿ ಒಳಚರಂಡಿ ಯವರು ಬಂದು ರಸ್ತೆ ಅಗೆಯುತ್ತಾರೆ.

ಅವರು ತಮ್ಮ ಕೆಲಸ ಮುಗಿದು ಜಾಗ ಖಾಲಿ ಮಾಡುವ ಹೊತ್ತಿಗೆ ನೀರಿನ ಸಂಪರ್ಕ ನೀಡುವವರು ಬಂದು ಗುದ್ದಲಿ ಹಚ್ಚುತ್ತಾರೆ.
ನೆಪ ಮಾತ್ರಕ್ಕೆ ಅಗೆದ ಸ್ಥಳದಲ್ಲಿ ಮಣ್ಣನ್ನು ತುಂಬುತ್ತಿದ್ದು, ವಾಹನ ಓಡಾಟ ಅಥವಾ ಮಳೆಯಿಂದ ಒಂದೇ ದಿನದಲ್ಲಿ ರಸ್ತೆಯಲ್ಲಿ ಹೊಂಡ ಅನಾವರಣವಾಗುತ್ತದೆ. ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘಗಳು ಎಲ್ಲಾ ಅಡ್ಡಾಡಿ ಯಾರನ್ನೋ ಹಿಡಿದು ವ್ಯವಸ್ಥೆ ಯನ್ನು ಸರಿ ದಾರಿಗೆ ತರುವ ಹೊತ್ತಿಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಸುವವರು ಜೆಸಿಬಿಯೊಂದಿಗೆ ಬಂದು ಇಳಿಯುತ್ತಾರೆ.

ಇದು ಮುಗಿಯುವ ಹೊತ್ತಿಗೆ ಅಡುಗೆ ಅನಿಲ ಪೈಪ್ ಎಳೆಯುವವರು ಅಗೆಯಲು ರಸ್ತೆಯನ್ನು ಮಾರ್ಕ್ ಮಾಡುತ್ತಾರೆ. ಅಂತೂ
ಇಂತೂ ಕುಂತಿ ಪುತ್ರಿಗೆ ರಾಜ್ಯ ಇಲ್ಲ ಎನ್ನುವಂತೆ ನಿವಾಸಿಗಳಿಗೆ ಸುಗಮ ವ್ಯವಸ್ಥೆ ಮರೀಚಿಕೆ ಯಾಗುತ್ತದೆ. ಒಂದು ರಸ್ತೆಯನ್ನು ಸಂಚಾರ ಯೋಗ್ಯ ಮಾಡಿದರು ಎಂದರೆ ಇನ್ನು ಕೆಲವೇ ದಿನಗಳಲ್ಲಿ ಇದನ್ನು ಅಗೆಯುತ್ತಾರೆ ಎನ್ನುವ ಮುನ್ಸೂಚನೆ ಎನ್ನುವ ಹಿರಿಯ ನಾಗರಿಕರ ಜೋಕ್‌ನಲ್ಲಿ ಅರ್ಥವಿಲ್ಲದಿಲ್ಲ.

ಮಳೆಗಾಲ ಅರಂಭವಾಗುವ ಸುಮಾರು ತಿಂಗಳ ಮೊದಲೇ ರಸ್ತೆಯ ಪಕ್ಕದ ಚರಂಡಿಗಳಲ್ಲಿ ತುಂಬಿರುವ ಹೂಳನ್ನು – ಕಸವನ್ನು ತೆಗೆದು ಸ್ವಚ್ಚ ಗೊಳಿಸಬೇಕೆನ್ನುವ ನಿಯಮಾವಳಿ ಇಂಗ್ಲಿಷರ ಕಾಲದಿಂದ ದೇಶಾದ್ಯಂತ ಇದೆ. ಆದರೆ,ಇದು ಅಗುತ್ತಿದೆಯೇ? ಸಾಮಾನ್ಯವಾಗಿ ಮಳೆ ಅರಂಭವಾಗಿ ಅನಾಹುತವಾದ ಮೇಲೆ ಮತ್ತು ಸಾರ್ವಜನಿಕರು ತಮ್ಮ ಅಕ್ರೋಶದ ಹೊಳೆಯನ್ನು ಮಾಧ್ಯಮದಲ್ಲಿ ಹರಿಸಿದಾಗಲೇ ಸಂಬಂಧಪಟ್ಟವರು ಎಚ್ಚರವಾಗುತ್ತಾರೆ.

ಇದರ ಇನ್ನೊಂದು ವೈಶಿಷ್ಟ್ಯವೆಂದರೆ ತೆಗೆದ ಹೂಳನ್ನು ಮತ್ತು ತ್ಯಾಜ್ಯವನ್ನು ಕೂಡಲೇ ಹೊರಸಾಗಿಸದೇ ಅಲ್ಲೇ ವಾರಗಟ್ಟಲೇ ಬಿಡುವುದು. ಇದು ಮಳೆಯಿಂದ, ವಾಹನ- ಜನರ ಸಂಚಾರದಿಂದ ಪುನಃ ಚರಂಡಿಯನ್ನು ತುಂಬಿಕೊಳ್ಳುತ್ತದೆ. ಇದು ಒಂದು ರೀತಿಯಲ್ಲಿ ಪುನರಪಿ ಜನನಂ ಪುರಪಿ ಮರಣಂ ಎನ್ನುವಂತೆ ಸದಾ ನಡದೇ ಇರುತ್ತದೆ. ಇದರಿಂದ ಸಾರ್ವಜನಿಕರಿಗೆ ಅನಾನು ಕೂಲವಾಗುವುದರೊಂದಿಗೆ ದೇಶದ ಬೊಕ್ಕಸಕ್ಕೆ ಕೊರೆತ ಬೇರೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ರಸ್ತೆಯ ಪಕ್ಕದಲ್ಲಿ ರುವ ಗಿಡಗಳ ಟೊಂಗೆಗಳು ವಿಸ್ತಾರವಾಗಿ ಬೆಳೆಯುತ್ತಿದ್ದು, ಅವು ವಾಹನ ಚಾಲಕರ ರಸ್ತೆ ವ್ಯೂಗೆ ಅಡಚಣೆಯಾಗುತ್ತಿದ್ದು, ಇದರಿಂದಾಗಿ ಅನೇಕ ಅಪಘಾತಗಳಾಗಿದ್ದು ಹಲವರು ಜೀವ ಕಳೆದುಕೊಂಡಿದ್ದಾರೆ.

ಪ್ರತಿ ವರ್ಷ ಒಂದು ನಿರ್ದಿಷ್ಟ ಅವಧಿಯಲ್ಲಿ ಈ ಟೊಂಗೆಗಳನ್ನು ಕತ್ತರಿಸಿ ಟ್ರಿಮ್ ಮಾಡಬೇಕೆ ನ್ನುವ ನಿಯಮಾವಳಿ ಇದ್ದು, ಅದಕ್ಕಾಗಿ ಹಣವನ್ನೂ ಮೀಸಲಾಗಿಡಲಾಗುತ್ತದೆ. ಈ ಕೆಲಸ ಕೂಡಾ ಜನತೆಯ ಅಕ್ರೋಶ ಮತ್ತು ಮಾಧ್ಯಮದ ತರಾಟೆಯ ನಂತರವೇ ಅಗುತ್ತದೆ. ಈ ದೇಶದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಎಂದೂ ಇಲ್ಲ. ಅದರೆ, ರಾಜಕೀಯ ಇಚ್ಚಾಶಕ್ತಿ ಮತ್ತು
ಅಭಿವೃದ್ಧಿಯನ್ನು ಕೈಗೊಳ್ಳುವ ಹಲವು ಇಲಾಖೆಗಳ ಮಧ್ಯದ ಸಮನ್ವತೆ, ಸಹಕಾರ ಮತ್ತು ಸಾಮರಸ್ಯದ ಕೊರತೆಯಿಂದಾಗಿ ಟಾಪ್ ಗೇರ್‌ಗೆ ಬದಲಾಗದೇ ಲೋ ಗೆರ್‌ನಲ್ಲಿ ಇದ್ದು ಅಮೆಯ ಓಟದಲ್ಲಿ ನಡೆಯತ್ತದೆ.

ಹಲವು ಬಾರಿ cost escalation ಹೆಸರಿನಲ್ಲಿ ಬೊಕ್ಕಸಕ್ಕೆ ಹೊರೆಯಾಗುವದರೊಂದಿಗೆ, ಜನ ಸಾಮಾನ್ಯರ ನಿತ್ಯ ಬದುಕಿಗೆ ಅಡಚಣೆಯಾಗುತ್ತದೆ.