ವೀಕೆಂಡ್ ವಿತ್ ಮೋಹನ್
camohanbn@gmail.com
ಅನುದಾನ ಹಂಚಿಕೆಯಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್ ನಾಯಕರು, ಭಾರತವನ್ನು ಉತ್ತರ ಮತ್ತು ದಕ್ಷಿಣವೆಂದು ವಿಭಜಿಸುವ ಹೇಳಿಕೆ ನೀಡುತ್ತಿದ್ದಾರೆ. ದೆಹಲಿಯಲ್ಲಿ ಗದ್ದುಗೆ ಏರಲು ಉತ್ತರ ಪ್ರದೇಶವನ್ನು ಬಳಸಿಕೊಂಡ ನೆಹರು ಕುಟುಂಬದವರೆಲ್ಲರೂ
ಅಲ್ಲಿಂದಲೇ ಗೆದ್ದು ಅಧಿಕಾರ ಹಿಡಿದವರು. ನೆಹರು ೩ ಬಾರಿ ಅಲ್ಲಿಂದ ಗೆದ್ದು ಬಂದಿದ್ದರು.
ಇಂದಿರಾ, ರಾಜೀವ್, ಸೋನಿಯಾ ಮತ್ತು ರಾಹುಲ್ ಗಾಂಧಿಯವರೂ ಅಲ್ಲಿಂದಲೇ ಗೆದ್ದು ಬಂದವರು. ಕಾಂಗ್ರೆಸಿಗರು ೬ ದಶಕದ ತಮ್ಮ ಆಡಳಿತಾವಧಿಯಲ್ಲಿ ಉತ್ತರದ ರಾಜ್ಯಗಳ ಅಭಿವೃದ್ಧಿಯೆಡೆಗೆ ಯಾಕೆ ಗಮನ ಹರಿಸಲಿಲ್ಲವೆಂಬ ಪ್ರಶ್ನೆಯನ್ನು ಅವರನ್ನೇ ಕೇಳಬೇಕು. ಕರ್ನಾಟಕದಲ್ಲಿ ನಿರ್ಮಾಣವಾದ ‘ಕೆಜಿಎಫ್’ ಸಿನಿಮಾ ಹಿಂದಿ ಭಾಷೆಗೆ ಡಬ್ ಆಗಿ ಉತ್ತರದ ರಾಜ್ಯಗಳಲ್ಲಿ ಹೆಚ್ಚು ಹಣ ಮಾಡಿತು. ಉತ್ತರದವರು ಆ ಸಿನಿಮಾ ನೋಡಲು ಟಿಕೆಟ್‌ಗೆ ನೀಡಿದ ಹಣ ಕರ್ನಾಟಕದ ನಿರ್ಮಾಪಕರಿಗೆ ಸೇರುತ್ತದೆ. ಈ ನಿರ್ಮಾಪಕರು ಇಡೀ ದೇಶದಿಂದ ತಮಗೆ ಬಂದ ಆದಾಯದ ಮೇಲೆ ಆದಾಯ ತೆರಿಗೆ ಕಟ್ಟುತ್ತಾರೆ.
ಹಾಗಾದರೆ ಉತ್ತರದ ರಾಜ್ಯಗಳಿಂದ ಕರ್ನಾಟಕದ ನಿರ್ಮಾಪಕರಿಗೆ ಬಂದ ಟಿಕೆಟ್ ಹಣದ ಮೇಲಿನ ತೆರಿಗೆ ಪಾಲು ಯಾರಿಗೆ ಸೇರಬೇಕು? ಬೆಂಗಳೂರಿನಿಂದ ಬಿಹಾರಕ್ಕೆ ಕಳುಹಿಸಿದ ವಸ್ತುವೊಂದರ ಮೇಲೆ ಹಾಕುವ ಜಿಎಸ್‌ಟಿ ತೆರಿಗೆಯನ್ನು ನೀಡುವವನು ಬಿಹಾರದಲ್ಲಿರುವವನು. ಹಾಗಾದರೆ ಅದರ ಸಂಪೂರ್ಣ ತೆರಿಗೆ ಪಾಲು ಯಾರಿಗೆ ಸಿಗಬೇಕು? ಇನ್ಫೋಸಿಸ್ ಸಂಸ್ಥೆ ದೇಶದ ಪ್ರಮುಖ ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ; ಕೋಲ್ಕತ್ತಾ ಶಾಖೆಯಿಂದ ಬರುವ ಆದಾಯ
ವನ್ನು ಕರ್ನಾಟಕದಲ್ಲಿ ತೋರಿಸಿ ಕಟ್ಟಬೇಕಾದ ಆದಾಯ ತೆರಿಗೆ ಕರ್ನಾಟಕಕ್ಕೆ ಮಾತ್ರ ಯಾಕೆ ಸೇರುತ್ತದೆ? ಮಂಗಳೂರು ಮೂಲದ ಹಲವು ಬ್ಯಾಂಕುಗಳು ದೇಶಾದ್ಯಂತ ಶಾಖೆಗಳನ್ನು ಹೊಂದಿವೆ.
ಉತ್ತರ ಭಾರತದ ಶಾಖೆಗಳಿಂದ ಬರುವ ಆದಾಯದ ಮೇಲಿನ ತೆರಿಗೆಯನ್ನು ಕರ್ನಾಟಕದಲ್ಲಿ ಯಾಕೆ ಕಟ್ಟಬೇಕೆಂದು ಉತ್ತರದವರು ಕೇಳಲಾಗುತ್ತದೆಯೇ?
ಭಾರತವೆಂಬ ರಾಷ್ಟ್ರಕ್ಕಿರುವುದು ಒಂದೇ ಸಂವಿಧಾನ. ಅದರಡಿಯಲ್ಲಿ ದೇಶದ ಅಷ್ಟೂ ರಾಜ್ಯಗಳನ್ನು ಒಟ್ಟಿಗೆ ಅಭಿವೃದ್ಧಿಯೆಡೆಗೆ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ರಚಿಸಿರುವ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗುತ್ತದೆ. ಈ ಆಯೋಗ ರಚನೆಯಾಗಿದ್ದು ಬಾಬಾಸಾಹೇಬ್ ಅಂಬೇಡ್ಕರ್‌ರ ನೇತೃತ್ವದಲ್ಲಿ. ಸಂವಿಧಾನದ ಬಗ್ಗೆ ಸದಾ ಮಾತನಾಡುವವರು ಬಾಬಾ ಸಾಹೇಬರು ಹಾಕಿದ ಸೂತ್ರವನ್ನೇ ಪ್ರಶ್ನೆ ಮಾಡುತ್ತಿದ್ದಾರೆ.
ಭಾರತ ಸ್ವತಂತ್ರಗೊಂಡ ನಂತರ ದೇಶದಲ್ಲಿದ್ದ ರಾಜಮನೆತನಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೇರಿಸುವ ದೊಡ್ಡ ಕೆಲಸದ ಹಿಂದೆ ಇದ್ದದ್ದು ಸರ್ದಾರ್ ವಲ್ಲಭಭಾಯಿ ಪಟೇಲರ ಪರಿಶ್ರಮ. ಹಲವು ರಾಜಮನೆತನಗಳು ಒಂದಷ್ಟು ಷರತ್ತು ಗಳೊಂದಿಗೆ ಭಾರತ ಒಕ್ಕೂಟ ವ್ಯವಸ್ಥೆಯನ್ನು ಸೇರಿಕೊಂಡವು. ತದನಂತರ ಈ ಒಕ್ಕೂಟ ವ್ಯವಸ್ಥೆಗೆ ಅನ್ವಯವಾಗುವಂಥ ಸಂವಿಧಾನದ ರಚನೆಯಾಗಬೇಕಿತ್ತು. ಅಂಬೇಡ್ಕರರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಕ್ಕುಗಳಿಗನುಗುಣವಾಗಿ
ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವರಲ್ಲಿ ಕೇಳಿಬರುತ್ತಿದ್ದ ಒಂದೇ ಒಂದು ಕೂಗು ‘ಭಾರತ ಮಾತಾ ಕಿ ಜೈ’. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ದಿಕ್ಕು ಗಳಿಂದಲೂ ಹೋರಾಟಗಾರರು ಭಾರತ ಮಾತೆಗೆ ಜೈಕಾರ ಹಾಕುತ್ತಾ ರಸ್ತೆಗಿಳಿದಿದ್ದರು. ಈ ಹೋರಾಟದಲ್ಲಿ ಉತ್ತರ- ದಕ್ಷಿಣವೆಂಬ ಭೇದಭಾವ ವಿರಲಿಲ್ಲ, ಸ್ವಾತಂತ್ರ್ಯ ಪಡೆಯು ವುದು ಎಲ್ಲರ ಕನಸಾಗಿತ್ತು. ಈ ಹೋರಾಟಗಾರರು ಭಾರತಕ್ಕೆ ಸ್ವಾತಂತ್ರ್ಯ ಬೇಕೆಂದು ಹೋರಾಡಿದರೇ ಹೊರತು ತಂತಮ್ಮ
ರಾಜ್ಯಕ್ಕೆ ಸ್ವಾತಂತ್ರ್ಯ ಬೇಕೆಂದು ಅಲ್ಲ. ಅವರ ಕಲ್ಪನೆಯಲ್ಲಿ ಕಾಣುತ್ತಿದ್ದುದು ಅಖಂಡ ಭಾರತ ಹಾಗೂ ಭಾರತಮಾತೆ ಮಾತ್ರವೇ. ಒಂದು ಪ್ರಾಂತ್ಯದವರು, ಮತ್ತೊಂದು ಪ್ರಾಂತ್ಯ ದವರಿಗೆ ಸಹಾಯ ಮಾಡುವಾಗ ಎಂದಿಗೂ ತಮ್ಮ ತಮ್ಮ ರಾಜ್ಯಗಳ ಬಗ್ಗೆ ಯೋಚಿಸಿರಲಿಲ್ಲ.
ತಮಿಳುನಾಡಿನ ಚೆಟ್ಟಿಯಾರ್‌ಗಳು ಆಗರ್ಭ ಶ್ರೀಮಂತರು. ಆಗ್ನೇಯ ಏಷ್ಯಾ ಭಾಗದ ವಿಯೆಟ್ನಾಂ, ಸಿಂಗಾಪುರ, ಮಲೇಷ್ಯಾಗಳಲ್ಲಿ ಹಲವು ದಶಕಗಳಿಂದ ನೆಲೆಸಿದ್ದಾರೆ. ಅವರು, ಸುಭಾಷ್‌ಚಂದ್ರ ಬೋಸರು ಬ್ರಿಟಿಷರ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷವನ್ನು ತೊರೆದು ವಿಯೆಟ್ನಾಂನ ಸೈಗಾನ್ ನಗರಕ್ಕೆ
ಬಂದಾಗ ‘ಇಂಡಿಯನ್ ನ್ಯಾಷನಲ್ ಆರ್ಮಿ’ ಸ್ಥಾಪನೆಗೆ ಬೇಕಿದ್ದ ಹಣ ಸಂಗ್ರಹ ಮಾಡಿಕೊಟ್ಟಿದ್ದರು. ಅವರೆಂದೂ ತಾವು ತಮಿಳುನಾಡಿನವರು, ಬೋಸರು ಪಶ್ಚಿಮ ಬಂಗಾಳದ ವರೆಂದು ಯೋಚಿಸಲಿಲ್ಲ ಅಥವಾ ನಾವ್ಯಾಕೆ ಉತ್ತರ ಭಾರತ ದವರಿಗೆ ನೆರವಾಗಬೇಕೆಂದು ಅವರಿಗನಿಸಿರಲಿಲ್ಲ.
ಆದರೆ ತಮಿಳುನಾಡಿನ ದ್ರಾವಿಡ ಪಕ್ಷದವರು ಆಧಾರ ರಹಿತ ಆರ್ಯ ಮತ್ತು ದ್ರಾವಿಡ ಸಿದ್ಧಾಂತವನ್ನು ಪ್ರತಿಪಾದಿಸಿ ಉತ್ತರ ಹಾಗೂ ದಕ್ಷಿಣವೆಂಬ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಅವರ ಜತೆಗೆ ನೂತನ ಸೇರ್ಪಡೆ ಕರ್ನಾಟಕದ ಕಾಂಗ್ರೆಸ್ ನಾಯಕರು. ೧೮೯೧ರಲ್ಲಿ ಅಮೆರಿಕ ದೇಶದ ಶಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾರತವನ್ನು ಪ್ರತಿನಿಽಸಲು ಕಾರಣ ವಾದದ್ದು ಚಿಕ್ಕಮಗಳೂರಿನ ಅಳಸಿಂಗ ಪೆರುಮಾಳ್ ಎಂಬುದು ಅದೆಷ್ಟು ಕಾಂಗ್ರೆಸಿಗರಿಗೆ ಗೊತ್ತು? ಹಿಂದೂ ಧರ್ಮದ ಬಗ್ಗೆ ಅಮೆರಿಕದಲ್ಲಿ ಮಾತನಾಡಬಲ್ಲ ವ್ಯಕ್ತಿಯೊಬ್ಬ ನನ್ನು ಗುರುತಿಸಿದ್ದು ಒಬ್ಬ ಕನ್ನಡಿಗ. ಅಂದು ಅಳಸಿಂಗರು
ವಿವೇಕಾನಂದರನ್ನು ಪಶ್ಚಿಮ ಬಂಗಾಳದ ಒಬ್ಬ ಸಂತನನ್ನಾಗಿ ನೋಡಲಿಲ್ಲ, ಬದಲಾಗಿ ಭಾರತದ ಹಿಂದೂ ಧರ್ಮ- ಸಂಸ್ಕೃತಿಯ ಪ್ರತಿನಿಧಿಯನ್ನಾಗಿ ನೋಡಿದ್ದರು.
ವಿವೇಕಾನಂದರನ್ನು ಸರ್ವಧರ್ಮ ಸಮ್ಮೇಳನಕ್ಕೆ ಕಳುಹಿಸಬೇಕೆಂಬ ಒಂದೇ ಉದ್ದೇಶದಿಂದ ಮನೆ ಮನೆಗೆ ತೆರಳಿ ಅಂದಿನ ಕಾಲದಲ್ಲೇ ಸುಮಾರು ೪,೦೦೦ ರುಪಾಯಿಯನ್ನು ಅಳಸಿಂಗರು ಸಂಗ್ರಹಿಸಿದ್ದರು. ಈ ವಿಷಯವು ಸ್ವಾತಂತ್ರ್ಯ ಹೋರಾಟದ ಪ್ರಮುಖ ಭಾಗವಾಗದಿದ್ದರೂ, ರಾಜ್ಯ- ಭಾಷೆಗಳ ಗಡಿ ಮೀರಿ ಭಾರತವೆಂಬ ಏಕೈಕ ಅಭಿಮಾನದಿಂದ ಮಾಡಿದ ಪ್ರಮುಖ ಕೆಲಸಕ್ಕೊಂದು ಉದಾಹರಣೆಯಾಗಿದೆ. ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆಯನ್ನು
ಶಾಲೆಗಳಲ್ಲಿ ಪ್ರಾರ್ಥನೆಯಾಗಿ ಹೇಳಿಕೊಂಡು ಬಂದಿರುವ ನಾವು ಕಲಿತಿದ್ದು ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಅಂತ.
ತಾಯಿ ಭಾರತಾಂಬೆಯ ಮಗಳು ಕರ್ನಾಟಕ ಮಾತೆ ಎಂದಿದ್ದಾರೆ ಕವಿ. ‘ಜನನಿಯ ಜೋಗುಳ ವೇದದ ಘೋಷ’ ಅಂದರೆ, ಕರ್ನಾಟಕವೆಂಬ ತನುಜಾತೆಗೆ ವೇದವನ್ನೇ ಲಾಲಿಹಾಡಾಗಿ ಹಾಡಿದವಳು ಭಾರತ ಮಾತೆ ಎಂಬ ಅದ್ಬುತ ಸಾಲುಗಳನ್ನು ಬರೆದದ್ದು ಕುವೆಂಪು. ಅದೇ ರೀತಿ, ‘ಚೈತನ್ಯ ಪರಮಹಂಸ ವಿವೇಕರ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂಬ ಸಾಲುಗಳಲ್ಲಿ ಪಶ್ಚಿಮ ಬಂಗಾಳದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರನ್ನು
ನಾಡಗೀತೆಗೆ ತಂಡಿದ್ದಾರೆ. ಕುವೆಂಪು ಈ ಗೀತೆ ರಚಿಸುವಾಗ ಭಾರತ ಗಣರಾಜ್ಯವಾಗಿತ್ತು. ಅವರೆಂದೂ ಕರ್ನಾಟಕದ ನಾಡಗೀತೆಯನ್ನು ಬರೆಯುವಾಗ ಪಶ್ಚಿಮ ಬಂಗಾಳದ ರಾಮಕೃಷ್ಣ ಪರಮಹಂಸ ಹಾಗು ವಿವೇಕಾನಂದರನ್ನು ‘ಒಕ್ಕೂಟ ಭಾರತ’ದ ಸಂತರೆನ್ನಲಿಲ್ಲ.
ಕರ್ನಾಟಕದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಜಿಎಸ್‌ಟಿ ಸಂಗ್ರಹವಾಗುವುದು ಬೆಂಗಳೂರಿನಲ್ಲಿ, ಹಾಗಂತ ನಾವು ನಮ್ಮ ಪಾಲಿನ ತೆರಿಗೆ ಹಣವನ್ನು ಮೈಸೂರಿಗೆ ಕೊಡುವುದಿಲ್ಲ ವೆಂದು ಹೋರಾಟ ಮಾಡಲಾದೀತೇ? ಹುಬ್ಬಳ್ಳಿ, ಬೆಳಗಾವಿ ನಗರಗಳಿಗೆ ಕಡಿಮೆ ಅನುದಾನ ನೀಡಲಾದೀತೇ? ಹಿಂದುಳಿದ ಜಿಲ್ಲೆಗಳಿಂದ ಅತ್ಯಂತ ಕಡಿಮೆ ತೆರಿಗೆ ಸಂಗ್ರಹ ವಾಗುತ್ತದೆ. ಆದರೆ ಆ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಕರ್ನಾಟಕದ ಒಟ್ಟು ಜಿಲ್ಲೆಗಳು ಹೇಗೆ ನಮ್ಮ ಅಣ್ಣ-ತಮ್ಮಂದಿರೋ, ಭಾರತದ ಅಷ್ಟೂ ರಾಜ್ಯಗಳೂ ನಮ್ಮ ಅಣ್ಣ-ತಮ್ಮಂದಿರೇ. ಒಂದು ದೇಶವನ್ನು ನಿರ್ವಹಿಸುವುದು, ಒಂದು ಕುಟುಂಬದ ನಿರ್ವಹಣೆಗೆ ಸಮ.
ಕರ್ನಾಟಕದಲ್ಲಿನ ಹಿಂದುಳಿದ ಜಿಲ್ಲೆಗಳ ರೀತಿ ಭಾರತದಲ್ಲೂ ಹಿಂದುಳಿದ ರಾಜ್ಯಗಳಿವೆ. ರಾಜ್ಯ ಮಟ್ಟದಲ್ಲಿ ನಮ್ಮ ಹಿಂದುಳಿದ ಜಿಲ್ಲೆಗಳಿಗೆ ಕೊಟ್ಟ ಪ್ರಾತಿನಿಧ್ಯವನ್ನು ಸಮರ್ಥಿಸುವಂತೆಯೇ ಹಿಂದುಳಿದ ರಾಜ್ಯಗಳ ಅನುದಾನವನ್ನೂ ಸಮರ್ಥಿಸಿಕೊಳ್ಳಬೇಕೆಂಬುದು ಹಣಕಾಸು ಆಯೋಗದ ಉದ್ದೇಶ. ೨೮ ರಾಜ್ಯಗಳು ಭಾರತಮಾತೆಯ ಮಕ್ಕಳು; ರಾಜ್ಯ ಮಟ್ಟದಲ್ಲಿ ಜಿಲ್ಲೆಗಳಿಗೆ ತೆರಿಗೆಯ ಹಣ ಹಂಚಿಕೆ ಯಾಗುವ ರೀತಿಯಲ್ಲೇ ರಾಷ್ಟ್ರ ಮಟ್ಟದಲ್ಲಿ ರಾಜ್ಯಗಳಿಗೆ ತೆರಿಗೆಯ ಹಣ ಹಂಚಿಕೆಯಾಗುತ್ತದೆ. ರಾಜ್ಯವೆಂಬ ಪರಿಕಲ್ಪನೆಯೇ ಇಲ್ಲದ ಸಮಯದಲ್ಲಿ ಜಾತಿ, ಭಾಷೆ, ನಾಡು, ನುಡಿಯೆಂಬ ಭೇದ-ಭಾವವಿಲ್ಲದೆ ಬ್ರಿಟಿಷರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದ ದೇಶ ಭಾರತ.
ಗುಜರಾತಿನಲ್ಲಿ ಹುಟ್ಟಿದ ಮಹಾತ್ಮ ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರು ಅವರನ್ನು ದೇಶದ ನಾಯಕನನ್ನಾಗಿ ಒಪ್ಪಿಕೊಳ್ಳಲಿಲ್ಲವೇ? ಇಂದು ಗುಜರಾತಿಗಳ ಬಗ್ಗೆ ಮಾತಾಡುವವರು, ಗಾಂಧಿಯವರೂ ಒಬ್ಬ ಗುಜರಾತಿಯೆಂಬುದನ್ನು ತಿಳಿದುಕೊಳ್ಳಬೇಕು. ಇಂದಿರಾ ಗಾಂಽಯವರಿಗೆ ರಾಜಕೀಯ ಮರುಜನ್ಮ ಕೊಟ್ಟ ಜಿಲ್ಲೆ ಚಿಕ್ಕಮಗಳೂರು; ಇಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ ಜನರು ಇಂದಿರಾರ ಮುಖ ನೋಡಿ ಮತ ಹಾಕಿದ್ದರು.
ಅವರು ಇಂದಿರಾರನ್ನು ಉತ್ತರ ಭಾರತದವರೆಂದು ನಿರ್ಲಕ್ಷಿ ಸಿದ್ದರೆ, ಬಹುಶಃ ಅವರ ರಾಜಕೀಯ ಜೀವನವೇ ಮುಗಿದು ಹೋಗಿರುತ್ತಿತ್ತು. ಕಾವೇರಿ ವಿಚಾರದಲ್ಲಿ ಪ್ರತಿಭಟನೆಗಳು ನಡೆದರೆ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಬೆಂಬಲ ಸಿಗುವುದಿಲ್ಲ.
ನೇತ್ರಾವತಿಯ ಎತ್ತಿನ ಹೊಳೆ ಯೋಜನೆಯ ವಿಚಾರದಲ್ಲಿ ದಕ್ಷಿಣ ಕನ್ನಡದಲ್ಲಿ ಪ್ರತಿಭಟನೆಯಾದರೆ ಬೆಂಗಳೂರಿನಲ್ಲಿ ಹೆಚ್ಚಿನ ಬೆಂಬಲ ಸಿಗುವುದಿಲ್ಲ. ಕೃಷ್ಣಾ ನದಿಯ ನೀರು ಹಂಚಿಕೆ ವಿಚಾರಕ್ಕೆ ಉತ್ತರ ಕರ್ನಾಟಕದಲ್ಲಿ, ಟಿಪ್ಪು ಸುಲ್ತಾನನ ವಿರುದ್ಧ ಕೊಡಗಿನಲ್ಲಿ ಪ್ರತಿಭಟನೆ ನಡೆದರೆ ಬೆಂಗಳೂರಿನಲ್ಲಿ ಹೆಚ್ಚಿನ ಬೆಂಬಲ ಸಿಗುವುದಿಲ್ಲ. ಉತ್ತರ ಮತ್ತು ದಕ್ಷಿಣವೆಂಬ ದೇಶ ಒಡೆಯುವ ಹೇಳಿಕೆಗಳು ಹೆಚ್ಚಾದರೆ ಮುಂದೊಂದು ದಿನ ಒಕ್ಕೂಟ ಕರ್ನಾಟಕವೆಂದು ದಕ್ಷಿಣಕನ್ನಡದ ತುಳುವರು, ಕೊಡಗಿನ ಕೂರ್ಗಿಗಳು, ಉತ್ತರ ಕನ್ನಡದ ಕೊಂಕಣಿ ಗಳು ಮಾತನಾಡುವ ಅಪಾಯವಿದೆ.
ಬ್ರಿಟಿಷರ ಅಡಿಯಲ್ಲಿದ್ದ ಜಗತ್ತಿನ ದೇಶಗಳಲ್ಲಿ ಬಹು ದೊಡ್ಡ ಭೂಭಾಗವೊಂದು ವಿಭಜನೆಯಾದ ಉದಾಹರಣೆ ಭಾರತದ್ದು ಮಾತ್ರವೇ. ಬ್ರಿಟಿಷರ ಒಡೆದು ಅಳುವ
ನೀತಿಯು ಸ್ವಾತಂತ್ರ್ಯಾನಂತರವೂ ಮುಂದುವರಿದದ್ದು ನಮ್ಮ ದೇಶದ ಬಹುದೊಡ್ಡ ದುರಂತ. ತಾವು ಭಾರತವನ್ನು ಬಿಟ್ಟು ತೊಲಗಿದ ನಂತರವೂ ಇಲ್ಲಿ ಅರಾಜಕತೆ ಕಾಡುತ್ತಿರ ಬೇಕೆಂಬುದು ಬ್ರಿಟಿಷರ ಸ್ಪಷ್ಟ ಉದ್ದೇಶವಾಗಿತ್ತು. ಭಾರತೀಯರನ್ನು ಒಡೆದು ಅಳುವ ನೀತಿಯನ್ನು ಬ್ರಿಟಿಷರು ೩ ಶತಮಾನಗಳ ಕಾಲ ಅನುಸರಿಸಿದರು. ಬ್ರಿಟಿಷರ ಹಾದಿಯಲ್ಲೇ ನಡೆದುಬಂದ ಪಕ್ಷ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತೊಮ್ಮೆ ದೇಶ ವಿಭಜನೆಯ ಹೇಳಿಕೆ ನೀಡುತ್ತಿರುವುದು ಭಾರತಮಾತೆಯ ಕಣ್ಣುಗಳಲ್ಲಿ ನೀರು ತರಿಸುತ್ತಿರುವುದು ನಿಜ.