Sunday, 15th December 2024

ಸ್ವರಧಾರೆ ಹರಿಸಿದ ಧಾರೇಶ್ವರ…

ವಿದೇಶವಾಸಿ

dhyapaa@gmail.com

‘ಸುಬ್ರಹ್ಮಣ್ಯ ಧಾರೇಶ್ವರ ಅವರು ಎಲ್ಲಿದ್ದರೂ ಕಂಟ್ರೋಲ್ ರೂಮಿಗೆ ಬರಬೇಕು…’, ‘ಯಕ್ಷಗಾನದ ಪ್ರಸಿದ್ಧ ಭಾಗವತರಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ
ಅವರು ಕೂಡಲೇ ಕಂಟ್ರೋಲ್ ರೂಮಿಗೆ ಬರಬೇಕು…’, ‘ಯಕ್ಷಗಾನದಲ್ಲಿ ಸಿನಿಮಾ ಹಾಡು ಹಾಡುವ ಧಾರೇಶ್ವರ ಭಾಗವತರು ಕೂಡಲೇ ಕಂಟ್ರೋಲ್ ರೂಮಿಗೆ ಬರಬೇಕು, ನಿಮ್ಮ ಬಸ್ಸು ಹೊರಡಲಿಕ್ಕೆ ತಯಾರಾಗಿದೆ…’ ಹೀಗೆ ಮೂರು ಬಾರಿ ಶಿರಸಿ ಬಸ್ ನಿಲ್ದಾಣದ ಕಂಟ್ರೋಲ್ ರೂಮಿನ ಧ್ವನಿವರ್ಧಕ ದಲ್ಲಿ ಕಂಟ್ರೋಲರ್ ಕೂಗಿ ಆಗಿತ್ತು. ಮೂರನೆಯ ಬಾರಿ ಹೇಳುವ ಹೊತ್ತಿಗೆ ಸುಬ್ಬಣ್ಣ ಕಂಟ್ರೋಲ್ ರೂಮ್ ತಲುಪಿದ್ದ.

ಅಲ್ಲಿ ನನ್ನನ್ನು ಕಂಡು ಅವನ ಅವನ ಬಾಯಿಂದ ‘ಎಲಾ… ಪಾಪಿ ಮಗನೆ…’ ಎಂಬ ಪದ ಹೊರಟಿತ್ತು, ಅದೂ ಪ್ರೀತಿಯಿಂದ ನಕ್ಕು! ಅಂದಿನಿಂದ
ಅನೇಕ ಬಾರಿ ಸುಬ್ಬಣ್ಣ ನನ್ನನ್ನು ‘ಪಾಪಿ ಮಗನೇ’ ಎಂದು ಕರೆದದ್ದಿದೆ. ಅದರಲ್ಲೂ, ಯಾರೊಂದಿಗಾದರೂ ವಡ್ಡ ಕಟ್ಟಿದರೆ (ಚಾಲೆಂಜ್ ಮಾಡಿದರೆ) ಆತ
ನನ್ನ ಎದುರಿನವರಿಗೆ ಹೇಳುತ್ತಿದ್ದ, ‘ಈ ಪಾಪಿ ಮಗ ಏನೂ ಮಾಡುವಾ… ಹುಷಾರಿ!’. ಇಷ್ಟೇ ಹೇಳಿದರೆ ಯಾರಿಗೂ ಅರ್ಥವಾಗುವುದಿಲ್ಲ. ಇದನ್ನು ವಿವರಿಸಬೇಕಾಗುತ್ತದೆ. ಅದಕ್ಕೂ ಮೊದಲು ಒಂದಷ್ಟು ಪೂರ್ವಾಪರ, ಪುರಾಣ.

ಸುಮಾರು ನಾಲ್ಕು ದಶಕದ ಹಿಂದಿನ ಮಾತು, ಶಿರಸಿಯ ‘ಸಮಯ ಸಮೂಹ’ (ಸಹ್ಯಾದ್ರಿ ಮಕ್ಕಳ ಯಕ್ಷಗಾನ ಸಮೂಹ) ದಲ್ಲಿ ನಾನು ವಿದ್ಯಾರ್ಥಿ ಯಾಗಿದ್ದೆ. ಆಗ ಮೊದಲು ನಮ್ಮ ತಂಡದ, ನಂತರ ಅಮೃತೇಶ್ವರಿ ಮೇಳದ ಕೆಲವು ಯಕ್ಷಗಾನ ಪ್ರದರ್ಶನವಾಗಿದ್ದಿದೆ. ಆ ಕಾಲದಲ್ಲಿ ಅಮೃತೇಶ್ವರಿ
ಮೇಳದಲ್ಲಿ ಬಾಲಗೋಪಾಲರು, ಪೀಠಿಕಾಸ್ತ್ರೀಯರನ್ನು ಕುಣಿಸುತ್ತಿದ್ದದ್ದು, ಒಡ್ಡೋಲಗ ಮಾಡಿಸುತ್ತಿ ದ್ದದ್ದು, ಹಾಗೆಯೇ ನಿಧಾನವಾಗಿ ಪ್ರಸಂಗದ
ಮೊದಲ ಭಾಗವನ್ನು ಆಡಿಸುತ್ತಿದ್ದದ್ದು ಸುಬ್ರಹ್ಮಣ್ಯ ಧಾರೇಶ್ವರ. ಅದರ ಹೊರತಾಗಿ ಮಳೆಗಾಲದಲ್ಲಿ ನಡೆಯುತ್ತಿದ್ದ ಹೆಕ್ಕುಮೇಳದ ಆಟದಲ್ಲಿ ಅತಿಥಿ
ಯಾಗಿಯೂ ಆತ ಬರುತ್ತಿದ್ದ.

ಅಲ್ಲಿ ನಾನೂ ಬಾಲ ಕಲಾವಿದನಾಗಿ ಕೆಲವು ಬಾರಿ ಭಾಗವಹಿಸುತ್ತಿದ್ದೆ. ಆಗ ಪರಿಚಯವಾದ ಸಲುಗೆಯೋ ಏನೊ, ನನ್ನ ಪಾಲಿಗೆ ಆತ ಸುಬ್ರಹ್ಮಣ್ಯ ಧಾರೇಶ್ವರನಾಗಿರದೇ, ‘ಸುಬ್ಬಣ್ಣ’ ಆಗಿದ್ದ. ನಂತರದ ದಿನಗಳಲ್ಲಿ ಸುಬ್ಬಣ್ಣ ಯಕ್ಷವಟ ವೃಕ್ಷವಾಗಿ ಬೆಳೆದು ನಿಂತರೂ, ನಮ್ಮಿಬ್ಬರ ನಡುವೆ ಆ ಸಲುಗೆ ಕೊನೆಯವರೆಗೂ ಇತ್ತು. ಒಂದು ವರ್ಷದ ಹಿಂದೆ ವಿಶ್ವವಾಣಿ ಕಬ್‌ಹೌಸ್‌ನ ವೇದಿಕೆಯಲ್ಲೂ ಸುಬ್ಬಣ್ಣ ಅತಿಥಿಯಾಗಿ ಬಂದಾಗ ‘ಕಿರಣ, ಇಲ್ಲೂ ನಾ ನಿನ್ನ ಏಕವಚನದಲ್ಲೇ ಮಾತಾಡಸ್ತೆ, ಅಡ್ಡಿಲ್ಯಲ?’ ಎಂದು ಪಕ್ಕಾ ಹವ್ಯಕ ಭಾಷೆಯಲ್ಲೇ ಹೇಳಿ, ಅದನ್ನು ದೃಢಪಡಿಸಿದ್ದ.

ಕಾರ್ಯಕ್ರಮದ ನಂತರವೂ ದೂರ ವಾಣಿಯಲ್ಲಿ ‘ನೀನು ಎಷ್ಟೇ ಬೆಳೆದರೂ ನನಗೆ ಕಿರಣ, ನಾನು ಎಷ್ಟೇ ಬೆಳೆದರೂ ನಿನ್ನ ಪಾಲಿಗೆ ಸುಬ್ಬಣ್ಣ’ ಎಂದಿದ್ದ. ಅದಕ್ಕಾಗಿ, ಯಕ್ಷಲೋಕ ಕಂಡ ಅಪ್ರತಿಮ ಕಲಾವಿದರಾದ ಸುಬ್ರಹ್ಮಣ್ಯ ಧಾರೇಶ್ವರರನ್ನು ಈ ಲೇಖನದುದ್ದಕ್ಕೂ ‘ಸುಬ್ಬಣ್ಣ’ ಎಂದೇ ಸಂಬೋಧಿಸು ತ್ತಿದ್ದೇನೆ. ಸುಬ್ಬಣ್ಣ ತನ್ನ ಶ್ರಮ, ಬುದ್ಧಿವಂತಿಕೆ ಮತ್ತು ಬದ್ಧತೆಯಿಂದ ‘ಧಾರೇಶ್ವರ ಭಾಗವತರು’ ಎಂದು ಕರೆಸಿಕೊಳ್ಳುವ ಹಂತಕ್ಕೆ ತಲುಪಿದರೂ ನನ್ನ ಪಾಲಿಗೆ ಸುಬ್ಬಣ್ಣನಾಗಿಯೇ ಆಪ್ತತೆ ಉಳಿಸಿಕೊಂಡಿದ್ದ.

ಆಗ ಪ್ರಾಚಾರ್ಯ ನಾರಣಪ್ಪ ಉಪ್ಪೂರರು ಸ್ವರ್ಗಸ್ಥರಾಗಿದ್ದರು. ನೆಬ್ಬೂರು ನಾರಾಯಣ ಭಾಗವತರು ಕೆರೆಮನೆ ಮೇಳದ ಕಾಲಮಿತಿಯ ಯಕ್ಷಗಾನಕ್ಕೆ
ಮಿತಿಯಾಗಿದ್ದರು, ಕಡತೋಕ ಮಂಜುನಾಥ ಭಾಗವತರು ತೆಂಕು ತಿಟ್ಟಿಗೇ ಹೆಚ್ಚು ತಗುಲಿಕೊಂಡಿದ್ದರು. ಆ ಕಾಲದಲ್ಲಿ ಬಡಗು ತಿಟ್ಟಿನ ಯಕ್ಷಗಾನ
ವಲಯದಲ್ಲಿ ನಿರ್ವಾತ ನಿರ್ಮಾಣವಾಗುತ್ತಿದೆ ಎಂಬ ಆತಂಕವನ್ನು ಹೋಗಲಾಡಿಸಿದ್ದು ನಾವಡ- ಧಾರೇಶ್ವರ ದ್ವಯರು. ಕಾಳಿಂಗ ನಾವಡರು ತಾವೇ ರಚಿಸಿದ ಪಂಚ-ಶ್ರೀ (ನಾಗಶ್ರೀ, ಭಾಗ್ಯಶ್ರೀ, ಕಾಂಚನಶ್ರೀ, ವಿಜಯಶ್ರೀ, ರೂಪಶ್ರೀ) ಜತೆಗೆ ಚೆಲುವೆ ಚಿತ್ರಾವತಿ ಇತ್ಯಾದಿ ಪ್ರಸಂಗಗಳನ್ನು ಆಡಿಸುತ್ತಿದ್ದರು.

ಅದರಲ್ಲಿ ನಾಗಶ್ರೀ ಮತ್ತು ಚೆಲುವೆ ಚಿತ್ರಾವತಿ ಪ್ರಸಂಗಗಳು ಜಯಭೇರಿ ಬಾರಿಸಿದ್ದವು. ಉಳಿದವು ಈ ಎರಡು ಪ್ರಸಂಗ ಗಳಷ್ಟು ಯಶಸ್ವಿಯಾಗಿರಲಿಲ್ಲ. ನಾವಡರು ಪೌರಾಣಿಕ ಪ್ರಸಂಗಗಳಲ್ಲಿಯೇ ಹೆಸರು ಮಾಡಿದ್ದರು. ಅದಕ್ಕೆ ಕಾರಣ ನಾವಡರ ಸ್ವರದ ತಾಕತ್ತು ಮತ್ತು ಒಲವು ಇದ್ದೀತು. ನಾವಡರು ಹೊಸ ಪ್ರಸಂಗ ಆಡಿಸಿದ್ದು ಕಡಿಮೆ. ಕಾಳಿಂಗ ನಾವಡ ಮತ್ತು ಸುಬ್ರಹ್ಮಣ್ಯ ಧಾರೇಶ್ವರ ಇಬ್ಬರೂ ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಶಿಷ್ಯೋತ್ತಮರೇ.

ನಾವಡರು ಸಾಲಿಗ್ರಾಮ ಮೇಳವನ್ನು ಸಶಕ್ತವಾಗಿ ಹಲವಾರು ವರ್ಷ ಮುನ್ನಡೆಸಿದ್ದರು ಎನ್ನುವುದು ಎಷ್ಟು ಸತ್ಯವೋ, ಪೆರ್ಡೂರು ಮೇಳ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ವಿಜಯ ಪತಾಕೆ ಹಾರಿಸಲು ಸುಬ್ಬಣ್ಣ ಕಾರಣ ಎನ್ನುವುದೂ ಅಷ್ಟೇ ಸತ್ಯ. ನಾವಡರು ಸುಬ್ಬಣ್ಣನನ್ನು ‘ಕಾಳಿದಾಸ ಭಾಗವತ’ ಎಂದು
ತಮಾಷೆ ಮಾಡುತ್ತಿದ್ದರು. ನಂತರ ಅದೇ ನಾವಡರು ‘ಕಾಳಿದಾಸ ಪ್ರಸಂಗಕ್ಕೆ ಧಾರೇಶ್ವರನೇ ಸೈ’ ಎಂದು ಶ್ಲಾಘಿಸಿದ್ದರು.

ನಂತರದ ಕೆಲವು ವರ್ಷ ಸುಬ್ಬಣ್ಣ ಬಡಗು ತಿಟ್ಟಿನ ಮೇರು ಭಾಗವತನಾಗಿ, ಭಾಗವತಿಕೆಯ ಉಚ್ಛ್ರಾಯದಲ್ಲಿದ್ದ ಕಾಲ. ಅದು ಕರಾವಳಿಯ ‘ಗಾನ ಕೋಗಿಲೆ’ಯ ಉತ್ಕರ್ಷ ಯುಗ ಎಂದರೂ ತಪ್ಪಾಗ ಲಾರದು. ಬಡಗು ತಿಟ್ಟಿನ ವ್ಯವಸಾಯಿ ಮೇಳಗಳ ಪೈಕಿ ಪೆರ್ಡೂರು ಮೇಳದ ಸಾರಥ್ಯ ವಹಿಸಿದ್ದ ‘ಗಾನ
ಸಾರಥಿ’ ಮೇಳವನ್ನು ಉನ್ನತಿಯ ತುತ್ತ ತುದಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದ. ಆಗಷ್ಟೇ ಕಾಳಿಂಗ ನಾವಡರ ಯುಗಾಂತ್ಯವಾಗಿತ್ತು. ಸುಬ್ಬಣ್ಣ
ಬಡಗು ತಿಟ್ಟಿನ ಅಗ್ರ ಶ್ರೇಣಿಯ ಭಾಗವತನಾಗಿ ರೂಪುಗೊಂಡಿದ್ದ. ನೂತನ ಪ್ರಸಂಗಗಳನ್ನು ರಂಗದಲ್ಲಿ ಪ್ರದರ್ಶಿಸಿ, ‘ಹೊಸ ಪ್ರಸಂಗಗಳ ಹರಿಕಾರ’,
ರಂಗಸ್ಥಳದಲ್ಲಿ ಹೊಸ ಹೊಸ ತಂತ್ರಗಳನ್ನು ಬಳಸಿ  ಯಶಸ್ವಿಯಾದದ್ದರಿಂದ ‘ರಂಗ ಮಾಂತ್ರಿಕ’ ಇತ್ಯಾದಿ ಬಿರುದುಗಳನ್ನೂ ಪಡೆದಿದ್ದ, ಅದಕ್ಕೆ ಸುಬ್ಬಣ್ಣ
ಯೋಗ್ಯನೂ, ಅರ್ಹನೂ ಆಗಿದ್ದ.

‘ತೋಟಕ್ಕೆ ಗೊಬ್ಬರ ಬೇಕು, ಆಟಕ್ಕೆ ಅಬ್ಬರ ಬೇಕು’ ಎಂಬ ಮಾತನ್ನು ಹುಸಿಗೊಳಿಸಿದವ ಸುಬ್ಬಣ್ಣ. ಸುಬ್ಬಣ್ಣನ ಶರೀರ, ಶಾರೀರ ಎರಡೂ ಸಣ್ಣದೇ. ಆತ
ಗೆದ್ದದ್ದು ಸಣ್ಣ ಸ್ವರದಲ್ಲಿಯೇ ಹೊರತು ಅಬ್ಬರದಲ್ಲಲ್ಲ. ಸುಬ್ಬಣ್ಣ ನಿರಂತರ ಆರ್ಭಟಕ್ಕೆ ಇಳಿದವನಲ್ಲ. ಹೊಸ ಪ್ರಸಂಗಗಳ ಮೂಲಕ ಅದರಲ್ಲೂ ಜಾನಪದ ಹಾಡುಗಳು ಭಾವಗೀತೆಗಳನ್ನು ಯಕ್ಷಗಾನದಲ್ಲಿ ಬಳಸಿ ಸುಬ್ಬಣ್ಣ ಹೆಸರು ಮಾಡಿದ. ಸುಬ್ಬಣ್ಣನ ಪದ್ಯ ಎಂದರೆ ಸಟಿಕದಷ್ಟು ಸ್ಪಷ್ಟ. ಕೆಲವು ಭಾಗವತರು ಶೃಂಗಾರ, ಕರುಣಾರಸದ ಪದ್ಯಗಳನ್ನು ಹಾಡುವಾಗಲೂ ಅರ್ಥವಾಗದಿದ್ದ ಕಾಲದಲ್ಲಿ ವೀರರಸದ ಪದ್ಯದ ಸಾಹಿತ್ಯವೂ ಅರ್ಥವಾಗುವಂತೆ ಹಾಡಿದವ ಸುಬ್ಬಣ್ಣ.

ಕುವೆಂಪು, ಬೇಂದ್ರೆ, ಸುಬ್ರಾಯ ಚೊಕ್ಕಾಡಿಯವರನ್ನು ಸುಬ್ಬಣ್ಣ ಯಕ್ಷಗಾನಕ್ಕೆ ಪರಿಚಯಿಸಿದ. ಇಂದು ‘ಗಾನ ವೈಭವ’ದಲ್ಲಿ ಹೆಚ್ಚಾಗಿ ಕೇಳಿ ಬರುವ
ಚೊಕ್ಕಾಡಿಯವರ ‘ಮುನಿಸು ತರವೇ…’ ಪದ್ಯವನ್ನು ‘ಪಂಚಮ ವೇದ’ ಯಕ್ಷಗಾನದಲ್ಲಿ ಮೊದಲ ಬಾರಿ ಬಳಸಿಕೊಂಡದ್ದು ಸುಬ್ಬಣ್ಣ. ಕುವೆಂಪು ವಿರಚಿತ
‘ಸೊಬಗಿನ ಸೆರೆಮನೆ ಆಗಿಹೆ ನೀನು…’ ಹಾಡಿದ, ‘ಬಳೆಗಾರ ಚೆನ್ನಯ್ಯ’ನನ್ನು ಯಕ್ಷಗಾನದ ಬಾಗಿಲಿನೊಳಗೆ ತಂದ. ‘ಆಪ್ತಮಿತ್ರ’ ಚಿತ್ರದ ‘ಪಟ ಪಟ…
ಗಾಳಿ ಪಟ…’ ಹಾಡನ್ನೂ ಯಕ್ಷಗಾನಕ್ಕೆ ಅಳವಡಿಸಿಕೊಂಡು ಜಯಿಸಿದ. ಕೋಲಾಟ, ದೀಪನೃತ್ಯ, ನವಿಲು ನೃತ್ಯ ಇತ್ಯಾದಿಗಳನ್ನೆಲ್ಲ ರಂಗಕ್ಕೆ ತಂದ.
ಅನೇಕ ಬಾರಿ ನೃತ್ಯ ಸಂಯೋಜನೆ ಸುಬ್ಬಣ್ಣನ ಮನೆಯಲ್ಲೇ ಆಗುತ್ತಿತ್ತು.

ಅದಕ್ಕೆ ಪ್ರಮುಖವಾಗಿ ಸಹಕರಿ ಸುತ್ತಿದ್ದವರು ಭರತನಾಟ್ಯ ಪ್ರವೀಣೆ, ಸುಬ್ಬಣ್ಣನ ಮಡದಿ ಸುಜಾತಾ ಧಾರೇಶ್ವರ. ಸುಬ್ಬಣ್ಣನಲ್ಲಿ ಆತ ಕಲಿತ ಇಲೆಕ್ಟ್ರಿಶಿ ಯನ್ ಕೆಲಸ ಮತ್ತು ಕೆಲ ಕಾಲ ನಾಟಕ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವವಿತ್ತು. ಮೈಕ್ ಬಳಸುವುದು ಹೇಗೆ ಎಂಬುದನ್ನು ಆತ ಸರಿಯಾಗಿ ಅರ್ಥೈಸಿಕೊಂಡಿದ್ದ. ಕೆಲವರು ‘ಧಾರೇಶ್ವರ ಭಾಗವತರು ಹಾಡುವಾಗ ಮೈಕ್ ಅವರ ಬಾಯಿಯ ಒಳಗೆ ಇರುತ್ತದೆ’, ‘ಭಾಗವತರು ಯಕ್ಷಗಾನದಲ್ಲಿ ಸಿನಿಮಾ ತಂದರು’ ಎಂದರು. ಮೊದಮೊದಲು ಸುಬ್ಬಣ್ಣನೊಂದಿಗೆ ನಾನೂ ತಕರಾರು ತೆಗೆಯುತ್ತಿದ್ದೆ. ಅದಕ್ಕೆಲ್ಲ ಸುಬ್ಬಣ್ಣ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಗುತ್ತಲೇ, ‘ಹೊಸತನ ಬೇಕು. ಕಲೆ ನಿಂತ ನೀರಾಗಬಾರದು.

ಯುವ ಪೀಳಿಗೆಯನ್ನು ಯಕ್ಷಗಾನದ ಟೆಂಟಿಗೆ ಕರೆ ತರಬೇಕಾದರೆ ಭಾವಗೀತೆ, ಜಾನಪದ, ಹಾಸ್ಯ, ನೃತ್ಯ ಸಂಯೋಜನೆ, ವಿದ್ಯುತ್ ಮತ್ತು ಧ್ವನಿವರ್ಧಕದ
ಕಸರತ್ತು ಎಲ್ಲವೂ ಬೇಕು’ ಎನ್ನುತ್ತಿದ್ದ. ಕೊನೆಗೆ ‘ನಿನ್ನ ಗುರುಗಳಾದ ಹೊಸ್ತೋಟ ಭಾಗವತರೇ ಹೊಸ ಪ್ರಸಂಗ ರಚಿಸಿದ್ದಾರಲ್ಲ, ಒಂದು ಕಾಲದಲ್ಲಿ ಎಲ್ಲವೂ ಹೊಸ ಪ್ರಸಂಗಗಳೇ ಆಗಿದ್ದವಲ್ಲ’ ಎಂದು ಸಮಜಾಯಿಶಿ ನೀಡುತ್ತಿದ್ದ. ಆತ ಹೇಳಿದ್ದರಲ್ಲಿ ಸುಳ್ಳಿಲ್ಲ ಅನ್ನಿಸಿತ್ತು. ಆದರೂ ಒಮ್ಮೆ ಸಿದ್ದಾಪುರದಲ್ಲಿ
‘ಸಿರಿಸಂಪಿಗೆ’ ಪ್ರಸಂಗದಲ್ಲಿ ಹಾಸ್ಯಗಾರ ರಂಗಸ್ಥಳ ದಲ್ಲಿ ಒಂದೊಂದಾಗಿ ಬಟ್ಟೆ ಕಳಚಿ, ಒಳ ಉಡುಪಿನಲ್ಲಿ ನಿಲ್ಲುವುದನ್ನು ತೀವ್ರವಾಗಿ ಖಂಡಿಸಿದ್ದೆ.

ಸುಬ್ಬಣ್ಣ ಅದನ್ನೂ ನಗುತ್ತಲೇ ಸ್ವೀಕರಿಸಿದ್ದ. ಅಂದರೆ, ಒಬ್ಬ ಪ್ರೇಕ್ಷಕ ಹೇಳಿದ ಮಾತನ್ನು ಕೇಳಿ, ಅವರ ಅಭಿಪ್ರಾಯ ಸರಿಯಾಗಿದ್ದರೆ ಒಪ್ಪಿಕೊಳ್ಳುವ ಗುಣವೂ ಅವನಲ್ಲಿತ್ತು. ಜತೆಗೆ ನೀಲ್ಕೋಡು ಶಂಕರ ಹೆಗಡೆ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ವಿದ್ಯಾಧರ ಜಲವಳ್ಳಿ, ರಮೇಶ ಭಂಡಾರಿ, ವಿಶ್ವನಾಥ
ಆಚಾರ್ಯ ತೊಂಬಟ್ಟು, ವಿಜಯ ಗಾಣಿಗ, ಶಂಕರ ಉಳ್ಳೂರು, ರವೀಂದ್ರ ದೇವಾಡಿಗ ಮುಂತಾದ ಕಲಾವಿದರನ್ನು ಮುನ್ನೆಲೆಗೆ ತರುವ ತಾಕತ್ತೂ
ಅವನಲ್ಲಿತ್ತು.

‘ಸಂಗ್ಯಾ-ಬಾಳ್ಯಾ’, ‘ಶೂದ್ರ ತಪಸ್ವಿನಿ’, ‘ವಸಂತ ಸೇನೆ’, ‘ಚೈತ್ರ ಚಂದನ’, ‘ಪದ್ಮ ಪಲ್ಲವಿ’, ‘ಚಾರು ಚಂದ್ರಿಕೆ’ಯಂಥ ನೂರಾರು ಹೊಸ ಪ್ರಸಂಗಗಳು
ಇಂದಿಗೂ ಜನಮಾನಸದಲ್ಲಿ ಉಳಿಯಲು ಸುಬ್ಬಣ್ಣನ ಪದ್ಯ, ನಿರ್ದೇಶನ ಕಾರಣ. ಇತಿಹಾಸ ನಿರ್ಮಿಸಿದ ‘ನಾಗವಲ್ಲಿ’ ಕಥಾನಕದಲ್ಲಿ ರಂಗಸ್ಥಳದ ಮೇಲೆ
ಇನ್ನೊಂದು ರಂಗಸ್ಥಳ ನಿರ್ಮಿಸಿದ್ದು ಸುಬ್ಬಣ್ಣನ ಸೃಜನಶೀಲತೆಗೆ ಹಿಡಿದ ಕೈಗನ್ನಡಿ. ಆ ಪ್ರಸಂಗ ನೂರಾರು ಪ್ರದರ್ಶನ ಕಂಡಿತು. ಪ್ರತಿ ಬಾರಿಯೂ
ಎರಡು ರಂಗಸ್ಥಳ ನಿರ್ಮಾಣವಾಗುತ್ತಿತ್ತು.

ಉಳಿದಂತೆ, ೪೦೦ ಕಥಾಭಾಗಗಳಿಗೆ ನಿರ್ದೇಶನ, ೬೦೦ ಆಡಿಯೋ ಕ್ಯಾಸೆಟ್‌ಗಳು, ಗಾನ ವೈಭವ, ಸಂಗೀತ ಕಾರ್ಯಕ್ರಮ, ಇತ್ಯಾದಿಗಳೆಲ್ಲ ಎಲ್ಲರಿಗೂ
ತಿಳಿದಿರುವಂಥದ್ದೇ. ಹಾಗಂತ ಸುಬ್ಬಣ್ಣ ಕೇವಲ ಹೊಸ ಪ್ರಸಂಗಗಳಿಗೇ ಸೀಮಿತವಾಗಿರಲಿಲ್ಲ, ಹಳೆಯ ಪ್ರಸಂಗಗಳಿಗೂ ಹೆಸರಾಗಿದ್ದ. ಒಂದು ಕಾಲ ಘಟ್ಟದಲ್ಲಿ ಅತಿ ಹೆಚ್ಚು ಮಟ್ಟುಗಳನ್ನು ಬಳಸುವ ಭಾಗವತ ಎಂದೇ ಹೆಸರಾಗಿದ್ದ. ಪ್ರಸಂಗಕ್ಕೆ ತಕ್ಕಂತೆ ಹೊಂದಿಕೊಳ್ಳುವ ವಿಶೇಷತೆ ಅವನಲ್ಲಿತ್ತು.
ಶಿರಸಿಯ ಸುತ್ತ-ಮುತ್ತ ಎಲ್ಲೇ ಆಟ (ಯಕ್ಷಗಾನ) ಆದರೂ ಸುಬ್ಬಣ್ಣ ಶಿರಸಿಯಲ್ಲಿರುವ ಆತನ ಚಿಕ್ಕಮ್ಮ ಸುಲೋಚನಾ ಮಧ್ಯಸ್ಥರ ಮನೆಯಲ್ಲಿ
ಉಳಿಯುತ್ತಿದ್ದ. ರಾತ್ರಿ ಊಟ ಮುಗಿಸಿ, ನಮ್ಮ ಮಿತ್ರ ಮಂಡಳಿಯೊಂದಿಗೆ ಆಟದ ಡೇರೆಗೆ ಹೋಗುತ್ತಿದ್ದ.

ಆಟ ಮುಗಿದ ನಂತರ ಪುನಃ ಶಿರಸಿಗೆ ಬಂದು ಮುಂದಿನ ಊರಿಗೆ ಬಸ್ ಹತ್ತಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಅಂದು ‘ಗಿರಿಮಲ್ಲಿಗೆ’ ಆಟ ಮುಗಿಸಿ ಬರುವಾಗ ಕೇಳಿದೆ, ‘ಏನು ಅಂದ ಏನು ಚೆಂದ ಕಾಣುತಿದ್ದನು… ಪದ್ಯದ ಧಾಟಿ ಎಲ್ಲೋ ಕೇಳಿದ ಹಾಗೆ ಇದೆಯಲ್ಲ…’ ಏನೇ ಕೇಳಿದರೂ ಹೇಳುತ್ತಿದ್ದ ಸುಬ್ಬಣ್ಣ ಅಂದು ಹೇಳಲಿಲ್ಲ. ‘ನೀನೇ ಹುಡುಕಿ ಹೇಳು’ ಎಂದಿದ್ದ. ಶಿರಸಿಯಲ್ಲಿ ಬಸ್ ಹತ್ತಿಸುವವರೆಗೂ ಹೇಳದೇ ಸತಾಯಿಸಿದಾಗ, ‘ಸುಬ್ಬಣ್ಣ ಈಗ ಹೇಳದೇ ಇದ್ದರೆ, ನೀನು ಸಿನಿಮಾ ಹಾಡು ಹೇಳುವ ಭಾಗವತ ಎಂದು ಬಸ್‌ಸ್ಟ್ಯಾಂಡ್ ನ ಮೈಕ್‌ನಲ್ಲಿ ಹೇಳಿ ಪ್ರಚಾರ ಮಾಡಿಸುತ್ತೇನೆ’ ಎಂದೆ.

ಸುಬ್ಬಣ್ಣ ‘ಸಾಧ್ಯವೇ ಇಲ್ಲ, ಗಂಡು ಮಗ ಆದರೆ ಮಾಡು’ ಎಂದು ಭಟ್ಕಳಕ್ಕೆ ಹೋಗುವ ಬಸ್ ಹತ್ತಿ ಕುಳಿತ. ನಾನು ಕಂಟ್ರೋಲ್ ರೂಮಿಗೆ ಹೋಗಿ,
ಕಂಟ್ರೋಲರ್ ಬಳಿ ‘ಭಟ್ಕಳ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ?’ ಎಂದು ಕೇಳಿದೆ. ನನ್ನ ಅದೃಷ್ಟಕ್ಕೆ ಅವರು ಪರಿಚಯದವರೇ ಅಗಿದ್ದರು, ‘ಈಗ
ಹೊರಡುತ್ತದೆ’ ಎಂದರು. ನಾನು ‘ನನ್ನ ಮಿತ್ರ ರೊಬ್ಬರು ಟಿಕೆಟ್ ತೆಗೆದು ಇಳಿದುಹೋಗಿದ್ದಾರೆ. ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ, ಒಂದು ಬಾರಿ ಮೈಕ್
ನಲ್ಲಿ ಕೂಗಿ’ ಎಂದೆ. ಅದಕ್ಕೆ ಒಪ್ಪಿದ ಅವರು ನಾನು ಹೇಳಿದಂತೆಯೇ ಮೂರು ಬಾರಿ ಕೂಗಿದರು. ಈ ರೀತಿ ಖೆಡ್ಡಾ ತೋಡಬಹುದು ಎಂದು ಸುಬ್ಬಣ್ಣ
ಊಹಿಸಿರಲಿಲ್ಲ. ತನ್ನ ಹೆಸರು ಕೇಳುತ್ತಲೇ, ಬಸ್ ನಿಂದ ಇಳಿದು ಕಂಟ್ರೋಲ್ ರೂಮಿನ ಕಡೆ ಬಂದ.

ಅಲ್ಲಿ ನನ್ನನ್ನು ಕಂಡಕೂಡಲೇ ತಾನು ಹೊಂಡಕ್ಕೆ ಬಿದ್ದೆನೆಂದು ಅವನಿಗೆ ಅರ್ಥವಾಯಿತು. ಆಗ ಸುಬ್ಬಣ್ಣ ಹೇಳಿದ್ದು, ‘ಎಲಾ… ಪಾಪಿ ಮಗನೆ!’.
‘ಸುಬ್ಬಣ್ಣ ಅದೆಲ್ಲ ಬಿಡು, ಏನು ಅಂದ ಏನು ಚೆಂದ ಪದ್ಯದ ಮೂಲ ಎಲ್ಲಿ?’ ಎಂದೆ. ಸುಬ್ಬಣ್ಣ ನಗುತ್ತಾ, ‘ಲಾಲ್ ದುಪಟ್ಟೆವಾಲಿ ತೆರಾ ನಾಮ್ ತೊ ಬತಾ…’ ಎಂದ. ಇದು ಸುಬ್ಬಣ್ಣನ ಸರಳತೆ. ಮೊನ್ನೆ ಎಪ್ರಿಲ್ ೨೫ರ ನಸುಕಿನ ಜಾವ ‘ಸುಬ್ಬಣ್ಣ ಇನ್ನಿಲ್ಲ’ ಎಂಬ ವಾರ್ತೆ ಕಿವಿಗೆ ಅಪ್ಪಳಿಸಿತು. ನಂಬಲಾಗಲಿಲ್ಲ, ಮನಸ್ಸು ಭಾರವಾಯಿತು. ‘ಭೂಲೋಕದಲ್ಲಿ ಪದ್ಯ ಹೇಳಿ ಗಂಧರ್ವರ, ದೇವತೆಗಳ ಪಾತ್ರ ಮಾಡುವವರನ್ನು ಕುಣಿಸಿದ್ದು  ಸಾಕು, ನಮ್ಮ ಲೋಕಕ್ಕೆ ಬಾ’ ಎಂದು ಕರೆ ಬಂದಿರಬಹುದು, ‘ದೇವ ನಿಲ್ದಾಣದ ಕಂಟ್ರೋಲರ್ ಕರೆದಿರಬೇಕು, ಸುಬ್ಬಣ್ಣ ಹೊರಟಿದ್ದಾನೆ’ ಅಂದುಕೊಂಡೆ. ನಮ್ಮ ಆಪ್ತರು ನಮ್ಮನ್ನು ಅಗಲಿದಾಗ ‘ಮತ್ತೆ ಹುಟ್ಟಿ ಬಾ’ ಎಂದು ಹೇಳುವುದಿದೆ. ಆದರೆ ಸುಬ್ಬಣ್ಣ ಬರುವುದು ಬೇಡ. ಅಲ್ಲಿಯೇ ಇರಲಿ, ದೇವತೆಗಳೊಂದಿಗೆ,
ದೇವಲೋಕದಲ್ಲಿ.