ವಿವೇಕ ಸಂಪದ
ಡಾ.ಸುಧಾಕರ ಹೊಸಳ್ಳಿ
ಇಂದು (ಜ.೧೨) ಇಡೀ ದೇಶವೇ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವವನ್ನು ವಿವಿಧ ಮಜಲುಗಳಲ್ಲಿ ಆಚರಿಸುತ್ತದೆ. ಪ್ರಾದೇಶಿಕತೆಯನ್ನು ಬದಿಗೆ ಸರಿಸಿ ತಾವೇ ಮುಂದಾಗುವ ಕೆಲವೇ ವಿಶೇಷ ವ್ಯಕ್ತಿತ್ವಗಳಲ್ಲಿ ವಿವೇಕಾನಂದರು ಅಗ್ರಸ್ಥಾನಾಂಕಿತರಾಗಿದ್ದಾರೆ. ಇಂಥ ಮಹನೀಯರ ಕುರಿತು ಈ ನೆಲದ ಮಹಾರಥಿಗಳು ಭಿನ್ನಕೋನಗಳಲ್ಲಿ ವಿಶ್ಲೇಷಿಸಿದ್ದಾರೆ. ಈ ಎಲ್ಲ ವಿಶ್ಲೇಷಣೆಗಳು ವಿವೇಕಾನಂದರು ಮತ್ತು ಅವರ ಸಂದೇಶಗಳ ಸಾರ್ವತ್ರಿಕತೆಯನ್ನೇ
ಬಿಂಬಿಸಿವೆ.
ಇಷ್ಟಾಗಿಯೂ ಕೆಲವು ಸ್ವಘೋಷಿತ ಬುದ್ಧಿಜೀವಿಗಳು ವಿವೇಕಾನಂದರ ಚಿಂತನೆಗಳನ್ನು ಮಬ್ಬಿನಲ್ಲಿಟ್ಟು, ಅಪವ್ಯಾಖ್ಯಾನ ಮಾಡಿ ಸಮಾಜಕ್ಕೆ ಮುಟ್ಟಿಸುವ ಹುನ್ನಾರದಲ್ಲೇ ವ್ಯಸ್ತರಾಗಿದ್ದಾರೆ. ಹೀಗಾಗಿ ವಿವೇಕಾನಂದರ ಸಂದೇಶ, ಚಿಂತನೆಗಳನ್ನು ಮಹಾತ್ಮರ ದೃಷ್ಟಿಯಲ್ಲಿ, ಸತ್ಯದ ನೆಲೆಯಲ್ಲಿ ಪರಾಮರ್ಶಿಸ ಬೇಕಾದ ಅಗತ್ಯವಿದೆ. ೧೯೬೩ರ ಫೆಬ್ರವರಿ ೩ರಂದು ಚೆನ್ನೈ ನಗರದಲ್ಲಿ, ಸ್ವಾಮಿ ವಿವೇಕಾನಂದರ ಜನ್ಮಶತಾಬ್ದಿ ಸಮಾರಂಭ ಸಮಿತಿ ಮತ್ತು ವಿವೇಕಾ ನಂದ ಶಿಲಾಸ್ಮಾರಕ ಸಮಿತಿಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಆರೆಸ್ಸೆಸ್‌ನ ೨ನೇ ಸರಸಂಘ ಚಾಲಕರಾದ ಗುರೂಜಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ‘ಕಳೆದ ಶತಮಾನದಲ್ಲಿ ಜಗತ್ತು ಒಂದು ಮಹಾನ್ ವಿಭೂತಿಯ ಆವಿರ್ಭಾವವನ್ನು ಕಂಡಿತು.
ಆ ಶಕ್ತಿಗೆ ಆದರಾಂಜಲಿಯನ್ನು ಅರ್ಪಿಸಲೋಸುಗ ನಾವಿಲ್ಲಿ ಸೇರಿದ್ದೇವೆ. ವಿವೇಕಾನಂದರು ಚೆನ್ನೈ ನಗರದಲ್ಲಿ ಸಾಮಾನ್ಯ ಸನ್ಯಾಸಿಯಾಗಿ ಓಡಾಡಿದ್ದರು ಹಾಗೂ ಶಿಕಾಗೋದ ಸರ್ವಧರ್ಮ ಸಮ್ಮೇಳನಕ್ಕೆ ಅವರು ತೆರಳಲು ಈ ನೆಲದ ಪ್ರೇರಣೆಯಿದೆ. ಹಾಗಾಗಿ ಚೆನ್ನೈ ನಗರ ಪುಣ್ಯಭೂಮಿ’ ಎಂದರು. ನಮ್ಮ ದೇಶವು ಪರಕೀಯರ ದಾಸ್ಯದಲ್ಲಿ ನತಮಸ್ತಕವಾಗಿದ್ದಾಗಲೇ ವಿವೇಕಾನಂದರ ಆವಿರ್ಭಾವವಾಯಿತು. ನಮ್ಮ ಸಮಾಜ, ಧರ್ಮ, ದೇವ-ದೇವತೆಯರನ್ನು ಅವಮಾನಿಸಲಾಗುತ್ತಿದ್ದ ಕಾಲಘಟ್ಟವದು. ಇಂಥ ಅಪಮಾನದಿಂದ ದೇಶವನ್ನು ಬಿಡುಗಡೆ ಮಾಡಲು ವಿವೇಕಾನಂದರು ಉಪಾಯ ಹುಡುಕಿದರು.
ಎಲ್ಲ ಕ್ಷೇತ್ರಗಳಲ್ಲೂ ವಿದೇಶಿ ಪ್ರಣಾಳಿಕೆಗಳನ್ನೇ ನಕಲು ಮಾಡಲಾಗುತ್ತಿದ್ದ ಪರಿಪಾಠವನ್ನು ಕಂಡ ವಿವೇಕಾನಂದರು, ‘ಪಾಶ್ಚಾತ್ಯರ ನಕಲು ಮಾಡುವು ದರಿಂದ ನಮಗೆ ಅವರ ಕ್ರಿಯಾಶಕ್ತಿಯೂ ಬರದು, ಭೌತಿಕ ಉನ್ನತಿಯೂ ದೊರಕದು; ಸಿಂಹದ ಚರ್ಮ ಹೊದ್ದ ಮಾತ್ರಕ್ಕೆ ಕತ್ತೆಯೊಂದು ಸಿಂಹವಾಗ ಲಾರದು’ ಎಂದು ಸಾರಿದರು.
ವಿವೇಕಾನಂದರ ಅಮೆರಿಕ ವಾಸ್ತವ್ಯ ಕುರಿತಾದ ‘ಸ್ವಾಮಿ ವಿವೇಕಾನಂದ: ಎ ಡಿಸ್ಕವರಿ’ ಎಂಬ ಕೃತಿಯಲ್ಲಿ ವಿವೇಕಾನಂದರ ಕುರಿತು ಬಹುತೇಕರಿಗೆ ಗೊತ್ತಿಲ್ಲದ ಸಂಗತಿಗಳು ಮತ್ತು ಅಮೆರಿಕದ ಪತ್ರಿಕೆಗಳಲ್ಲಿ ಭಾರತೀಯ ಸಮಾಜದ ವಿರುದ್ಧ ಬರೆದ ನಿಂದನೆಗಳ ಉಲ್ಲೇಖವಿದೆ. ಭಾರತದ ಬಗ್ಗೆ ಅತ್ಯಂತ ನಿಕೃಷ್ಟ ಅಭಿಮತವಿದ್ದ ಸಂದರ್ಭದಲ್ಲಿ ಅಮೆರಿಕಕ್ಕೆ ತೆರಳಿದ ವಿವೇಕಾನಂದರ ಬಳಿ ಯಾವುದೇ ಪರಿಚಯ ಪತ್ರ ಅಥವಾ ಯಾವುದೇ ಸಂಸ್ಥೆಯ ಪ್ರತಿನಿಧಿತ್ವ ಇರಲಿಲ್ಲ; ಅವರ ಬಳಿಯಿದ್ದುದು ಭಾರತದ ಜ್ಞಾನಪಾವಿತ್ರ್ಯ ಮತ್ತು ಬ್ರಹ್ಮತೇಜಗಳ ಪ್ರತಿನಿಧಿತ್ವ.
ಅಮೆರಿಕದ ಶಿಕಾಗೊದಲ್ಲಿ ನಡೆದ ಸಭೆಯ ವೇಳೆ ಅಹಂಕಾರದಿಂದ ಮೆರೆಯುತ್ತಿದ್ದ ತಥಾಕಥಿತ ಪಂಡಿತರ ನಡುವೆ ತಮ್ಮ ಅಲೌಕಿಕ ದಿವ್ಯಶಕ್ತಿಯಿಂದಲೇ ರಾರಾಜಿಸುತ್ತಿದ್ದ ವಿವೇಕಾನಂದರು, ಭಾಷಣಕ್ಕೆ ಎದ್ದು ನಿಂತಾಗ ತಮ್ಮ ಪ್ರಾರಂಭಿಕ ಸಂಬೋಧನೆಯಿಂದಲೇ ಇಂಥ ವಿದ್ವಾಂಸರ ದರ್ಪಗಳನ್ನು ಪುಡಿಗೈದು ಭಾರತದ ವಿಶ್ವವಿಜಯಿ ತತ್ವವನ್ನು ಸಾಬೀತುಪಡಿಸಿದರು. ಒಮ್ಮೆ ರಾಮಕೃಷ್ಣ ಪರಮಹಂಸರ ಬಳಿ ಬಂದ ಕೆಲವರು, ‘ನಾವು ಸಮಾಜವನ್ನು ಸುಧಾರಿಸಬೇಕಿದೆ’ ಎಂದಾಗ ರಾಮಕೃಷ್ಣರು, ‘ಸಮಾಜವನ್ನು ಸುಧಾರಿಸಲು ನೀವು ಯಾರು? ಅದು ಸುಧಾರಿಸುವುದಿಲ್ಲ, ಈಶಭಾವದಿಂದ ಸೇವೆ ಮಾಡಿ’ ಎಂದು ಹೇಳಿದರು.
ಇಂಥವರ ಸಾನ್ನಿಧ್ಯವನ್ನು ಪಡೆದಿದ್ದ ವಿವೇಕಾನಂದರು, ‘ಮಾತೃಭೂಮಿಯ ಸೇವೆಯನ್ನು ದೃಢವಿಶ್ವಾಸದಿಂದ ಮಾಡಿ. ಅದು ಸರ್ವಕಾಲಕ್ಕೂ ಸ್ವೀಕೃತ ವಾದದ್ದು. ದುರ್ಬಲತೆ ಎಂಬುದು ಪಾಪವೇ ಸರಿ. ಪ್ರತಿಯೊಬ್ಬರೂ ದೈಹಿಕ-ಮಾನಸಿಕ ಸ್ವಾಸ್ಥ್ಯ ಹಾಗೂ ಬಲವಂತಿಕೆಯನ್ನು ವೃದ್ಧಿ ಪಡಿಸಿ ಕೊಳ್ಳಬೇಕು. ಆಗ ಮಾತ್ರ ರಾಷ್ಟ್ರವನ್ನು ಕಟ್ಟಲು ಸಾಧ್ಯ. ಎಷ್ಟೇ ಕುಶಾಗ್ರಮತಿಯಾಗಿದ್ದರೂ, ಸದೃಢವಾದ ದೇಹ ಲಭಿಸದೆ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ’ ಎಂದು ಕರೆ ನೀಡಿದ್ದರು. ವಿವೇಕಾನಂದರ ವಿಚಾರಗಳನ್ನು ಸಾಕಾರಗೊಳಿಸಲು ನಾವು ಸಂಪೂರ್ಣ ಸಮಾಜವು ಅವರ ಆದರ್ಶ ಗಳಿಗೆ ಅನುಗುಣವಾದ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸಬೇಕು.
‘ಜಗತ್ತಿನಲ್ಲಿ ಪೂಜೆಯ ಮೂಲಕ ಭಗವಂತನೊಂದಿಗೆ ಮನುಷ್ಯನು ಸುಸಂವಾದ ನಡೆಸುವಂಥ ದೇಶವೆಂದರೆ ಭಾರತವೊಂದೇ. ಹಿಂದಿನ ಜನ್ಮಗಳ ಪುಣ್ಯದಿಂದ ನಾವು ಈ ಪಾವನಭೂಮಿಯಲ್ಲಿ ಜನಿಸಿದ್ದೇವೆ. ಈ ನೆಲವನ್ನು ಹೊರತುಪಡಿಸಿ ಉಳಿದೆಡೆ ಭೋಗ-ಉಪಭೋಗಗಳಷ್ಟೇ ಲಭ್ಯ. ವೈಜ್ಞಾನಿಕ ಸಾಧನೆಗಳನ್ನು ಮೆರೆಯಬಹುದು, ಚಂದ್ರ ನಲ್ಲಿಗೂ ತಲುಪಬಹುದು; ಆದರೆ ದೇವರನ್ನು ಕಾಣುವುದು ದುರ್ಲಭ’ ಎನ್ನುತ್ತಿದ್ದ ವಿವೇಕಾನಂದರು, ಬಾಲ್ಯವಿವಾಹದಂಥ ಮೌಢ್ಯವನ್ನು ಅಮಾನ್ಯಗೊಳಿಸಿ, ಇಂಥ ಮಿಥ್ಯಾಚರಣೆಯು ವಿದೇಶಿ ಆಕ್ರಮಣದಿಂದ ಬಂತೆಂಬುದನ್ನು ತಿಳಿಯಪಡಿಸಿದ್ದರು.
ವಿವೇಕಾನಂದರ ಬರವಣಿಗೆಯಲ್ಲಿ ಅನೇಕ ಬಾರಿ ಹಿಂದೂ ರಾಷ್ಟ್ರದ ಉಲ್ಲೇಖವಿರುತ್ತಿತ್ತು. ಗುರುಗೋವಿಂದ ಸಿಂಹರು, ಶಿವಾಜಿ ಮಹಾರಾಜರನ್ನು ಉಲ್ಲೇಖಿಸಿ ಸಮಗ್ರ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಒತ್ತಿಹೇಳುತ್ತಿದ್ದರು. ಹಿಂದೂ ರಾಷ್ಟ್ರಕ್ಕೆ ಬಂದೊದಗುವ ಆಪತ್ತಿನ ಬಗ್ಗೆ ಅಂದೇ ಎಚ್ಚರಿಸಿದ್ದ ಅವರು, ಅಮೆರಿಕದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ಇಂದು ಚೀನಾ ಮಲಗಿದ್ದಂತೆ ಕಂಡರೂ, ಮುಂದೊಂದು ದಿನ ಅದು ಎಚ್ಚೆತ್ತುಕೊಂಡು ಜಗತ್ತಿಗೇ ಕಂಟಕಪ್ರಾಯವಾಗುತ್ತದೆ’ ಎಂದಿದ್ದರು. ಸಂಸ್ಕೃತಕ್ಕಿರುವ ಮಹತ್ವದ ಕುರಿತಾಗಿ ಅವರು ಮಾತನಾಡುತ್ತಾ, ‘ನಾವು ಸಂಸ್ಕೃತ ಅಧ್ಯಯನದ ಪ್ರಸಾರಕ್ಕಾಗಿ ಪ್ರಯತ್ನಿಸಬೇಕಿದೆ, ಏಕೆಂದರೆ ನಮ್ಮೆಲ್ಲ ಮೌಲಿಕ ವಿದ್ವತ್ತು ಅದರಲ್ಲೇ ಅಡಗಿದೆ.
ನಮ್ಮಲ್ಲಿನ ಅಜ್ಞಾನದಿಂದಾಗಿ ನಾವು ಈ ಸಂಪತ್ತಿನಿಂದ ವಂಚಿತರಾಗಿದ್ದೇವೆ. ಭಾರತವನ್ನು ತಾಯಿಯೆಂದು ಕಾಣುವ ಪ್ರತಿಯೊಬ್ಬರೂ ಸಂಸ್ಕೃತವನ್ನು ಅಧ್ಯಯನ ಮಾಡಬೇಕು, ಮಿಕ್ಕವರಿಗೂ ಕಲಿಸಬೇಕು’ ಎಂದಿದ್ದರು. ವಿದೇಶಿ ದಾಳಿಗಳ ಬಗ್ಗೆ ಅವರು ಪ್ರಸ್ತಾಪಿಸಿ, ‘ಭಾರತದ ಮೇಲೆ ಅದೆಷ್ಟೇ ದಾಳಿ ಗಳಾದರೂ, ಅಂತಿಮ ವಿಜಯ ಭಾರತದ್ದೇ ಆಗಿರುತ್ತದೆ. ಭಾರತದಲ್ಲಿ ಹಿಂದೂ ಸಮಾಜವು ಅಮರವಾಗಿದೆ; ಏಕೆಂದರೆ ಇದು ಸ್ವಭಾವದಲ್ಲೇ ನಮ್ರವೂ ಶಾಂತವೂ ಆಗಿದೆ. ನಮ್ರ ಸ್ವಭಾವದ ಹಿಂದೂ ಸಮಾಜವು ಅನೇಕ ಆಘಾತಗಳನ್ನು ಸಹಿಸಿಯೂ ಜೀವಂತವಾಗಿದ್ದು, ಮುಂದೆಯೂ ದೇಶಕ್ಕಾಗಿ ಜೀವಂತ ವಾಗಿರುತ್ತದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
ಒಟ್ಟಾರೆ ಹೇಳುವುದಾದರೆ, ವಿವೇಕಾನಂದರ ಆದರ್ಶಗಳು ಮತ್ತು ಸಂದೇಶಗಳು ಸಾರ್ವಕಾಲಿಕವಾಗಿದ್ದು, ಭಾರತವನ್ನು ಸಿರಿವಂತವಾಗಿಸಲು ಮತ್ತು ಈ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅವನ್ನು ಸದಾಕಾಲ ಯುವಪೀಳಿಗೆಯ ಮನಸ್ಸಿನಲ್ಲಿ ಅಚ್ಚೊತ್ತಬೇಕಾಗಿದೆ.
(ಲೇಖಕರು ಸಂವಿಧಾನ ತಜ್ಞರು)