ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ಮುಂದಿನ ವಾರ ಮುಂಬೈನಲ್ಲಿ ನನ್ನ ಎರಡನೆಯ ಮಗ ಅನಿಲನ ಮದುವೆ ಇದೆ. ಪ್ರತಿಯೊಬ್ಬರ ಮನೆಗೆ ಬಂದು ಆಹ್ವಾನಿಸ ಬೇಕಿತ್ತು, ಆದರೆ ಸಮಯದ ಅಭಾವ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗದ ಕಾರಣ ಇಲ್ಲಿಂದಲೇ ತಮ್ಮನ್ನು ಆಹ್ವಾನಿಸುತ್ತಿದ್ದೇನೆ. ಈ ಕಾರ್ಖಾನೆ ಬಿಡುವಿಲ್ಲದೇ ದಿನದ ಇಪ್ಪತ್ತನಾಲ್ಕು ಗಂಟೆ, ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ.
ಒಂದೇ ಒಂದು ನಿಮಿಷ ಕಾರ್ಖಾನೆಯಲ್ಲಿ ಕೆಲಸ ನಿಲ್ಲಿಸಲಾಗದು ಎಂಬುದೂ ನಮಗೆ ಗೊತ್ತು. ಆದ್ದರಿಂದ ಯಾರು ಕೆಲಸ ದಲ್ಲಿರುತ್ತಾರೋ ಅವರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಕುಟುಂಬ ಸಮೇತ ಮದುವೆಗೆ ಬಂದು ವಧುವರರನ್ನು ಆಶೀರ್ವದಿಸಿ. ಬರಲಾಗದಿದ್ದವರು ಇಲ್ಲಿಂದಲೇ ಹರಸಿ. ಇದು ಭಾರತ ಕಂಡ ಅತ್ಯುತ್ತಮ ಉದ್ಯಮಿಗಳಲ್ಲೊಬ್ಬರಾದ ಧೀರೂ ಭಾಯಿ ಅಂಬಾನಿ ತನ್ನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಮಗನ ಮದುವೆಗೆ ಕರೆದ ರೀತಿ.
ಆಗ ಅವರಿಗೆ ಲಘು ಪಾರ್ಶ್ವವಾಯು ಪ್ರಹಾರವಾಗಿ ಸುಮಾರು ಐದು ವರ್ಷ ಕಳೆದಿತ್ತು. ಆದರೂ ಬಿಳಿಯ ಅಂಗಿ ತೊಟ್ಟು, ನಿಧಾನವಾಗಿ ನಡೆದು ಬಂದು, ಸಣ್ಣ ವೇದಿಕೆ ಏರಿ, ಎಡಗೈಯಿಂದ ಪಾರ್ಶ್ವವಾಯು ಪೀಡಿತ ಬಲಗೈ ಎತ್ತಿ, ಕೈಮುಗಿದು ಮಗನ ಮದುವೆಗೆ ಆಹ್ವಾನಿಸಿದ್ದು ಅಂದು ಕೆಲಸದಲ್ಲಿದ್ದ ಕಾರ್ಮಿಕ ವರ್ಗದವರ ಕಣ್ಣುಗಳನ್ನು ಮಂಜಾಗಿಸಿದ್ದವು. ದೇಶದ ಖ್ಯಾತ ಉದ್ಯಮಿಯೊಬ್ಬರು ಇಷ್ಟು ಸೌಜನ್ಯದಿಂದ ತನ್ನನ್ನು ಕುಟುಂಬ ಸಮೇತ ಆಹ್ವಾನಿಸುತ್ತಿದ್ದಾರೆ ಎಂಬುದನ್ನೇ ಅವರಿಂದ
ನಂಬಲಾಗುತ್ತಿರಲಿಲ್ಲ.
ಇದು ನಡೆದದ್ದು ಫೆಬ್ರವರಿ 1991, ಮಹಾರಾಷ್ಟ್ರದ ರಾಯಗಢ ಜಿಯ ಪಾತಾಳಗಂಗಾದಲ್ಲಿರುವ ರಿಲಾಯನ್ಸ್ ಇಂಡಸ್ಟ್ರೀಸ್‌ನ ‘ಪಿಟಿಎ’ ಪ್ಲಾಂಟ್ ನಲ್ಲಿ. ಆಗ ಅಲ್ಲಿ ಸುಮಾರು ಎಂಟು ನೂರು ಜನ (ಕಟ್ಟಡ ನಿರ್ಮಾಣ ಮಾಡುವ ಸಂಸ್ಥೆಯ ಕೆಲಸಗಾರರನ್ನು
ಹೊರತುಪಡಿಸಿ) ಕೆಲಸ ಮಾಡುತ್ತಿದ್ದರು ಎಂದು ನೆನಪು. ಇದು ಅಷ್ಟಕ್ಕೇ ನಿಲ್ಲಲಿಲ್ಲ. ಮದುವೆಯ ದಿನ ಮಧ್ಯಾಹ್ನದ ವೇಳೆಗೆ ಖಾರ, ಲಾಡು ಇತ್ಯಾದಿ ಮಿಠಾಯಿ ತುಂಬಿದ ಎರಡು ಸಣ್ಣ ಲಾರಿಗಳು (407) ಕಾರ್ಖಾನೆಯ ಮುಂದೆ ಬಂದು ನಿಂತಿದ್ದವು.
ಅಂದು ಅಲ್ಲಿ ದುಡಿಯುತ್ತಿದ್ದವರಲ್ಲಿ ಯಾರೂ ಖಾಲಿ ಕೈಯಲ್ಲಿ ಮನೆಗೆ ಹೋಗಲಿಲ್ಲ. ಆ ದಿನ ಬಿಡಿ, ಕೆಲವರು ಮಾರನೆ ದಿನವೂ ಮನೆಯಲ್ಲಿ ಒಲೆ ಹೊತ್ತಿಸಲಿಲ್ಲ. ಆ ದಿನಗಳಲ್ಲಿ ನಡೆದ ಅತ್ಯಂತ ಭರ್ಜರಿ ಮದುವೆ ಅದಾಗಿತ್ತು. ಪಾತಾಳಗಂಗಾ ಹೆಸರಿನ ನದಿಯ
ತಟದಲ್ಲಿರುವ ಒಂದು ಸಣ್ಣ ಊರು ಪಾತಾಳಗಂಗಾ. ನದಿಯ ಒಂದು ತಟದಲ್ಲಿ ಸುಮಾರು ಒಂದು ಕಿಲೋ ಮೀಟರ್‌ನಷ್ಟು ರಿಲಾಯನ್ಸ್ ಇಂಡಸ್ಟ್ರೀಸ್ ತನ್ನ ಮೈ ಚಾಚಿಕೊಂಡಿದೆ. ರಿಲಾಯನ್ಸ್‌ನ ಕಾಂಪೌಂಡ್‌ಗೆ ಹೊಂದಿಕೊಂಡು ನದಿಯ ತೀರದಲ್ಲಿ ಒಂದು ಪುಟ್ಟ ಗುಡಿಯಿದೆ.
ಮದುವೆಯಾದ ಕೆಲವೇ ದಿನಗಳಲ್ಲಿ ಹೊಸ ಜೋಡಿ ಅನಿಲ್ ಮತ್ತು ಟೀನಾ ಅಂಬಾನಿ ಪಾತಾಳಗಂಗಾಕ್ಕೆ ಭೇಟಿ ನೀಡಿದ್ದರು. ಅವರ ಭೇಟಿಯ ನಿಮಿತ್ತ ಗುಡಿಯನ್ನು ಶುಚಿಗೊಳಿಸಿ, ಹೋಗುವ ದಾರಿಯಲ್ಲಿರುವ ಕಳೆಕಿತ್ತು, ನಾಲ್ಕು ಕಲ್ಲು ಚಪ್ಪಡಿ ಸರಿಪಡಿಸಿ, ಒಂದು ಶಾಮಿಯಾನ ಹಾಕಿದ್ದ ಕಂಪನಿ ಯೊಂದು ಆ ಕಾಲದಲ್ಲಿ ಬರೊಬ್ಬರಿ ಒಂದೂಕಾಲು ಲಕ್ಷ ರುಪಾಯಿ ಪಡೆದುಕೊಂಡಿತ್ತು
ಎಂದರೆ, ಮದುವೆಯ ವೈಭವವನ್ನು ಊಹಿಸಿಕೊಳ್ಳಬಹುದು. ವಿಷಯ ಅದಲ್ಲ, ಅಂದು ಮದುಮಕ್ಕಳನ್ನೂ ಮೀರಿಸಿ ಹೀರೋ ಆದದ್ದು ಸಂಸ್ಥೆಯ ಸ್ಥಾಪಕರಾದ ದೊಡ್ಡ ಅಂಬಾನಿ.
ಅವರು ಮದುವೆಗೆ ಕರೆದ ಪರಿಯಿಂದಾಗಿ ಕಾರ್ಮಿಕ ವರ್ಗದವರಲ್ಲಿ ಅವರ ಬಗ್ಗೆ, ಸಂಸ್ಥೆಯ ಬಗ್ಗೆ ಗೌರವ ನೂರ್ಮಡಿಯಾಗಿತ್ತು. ಮದುವೆ ಮುಗಿದ ಎಷ್ಟೋ ವರ್ಷಗಳ ನಂತರವೂ ಕಾರ್ಮಿಕರು ಅದನ್ನು ನೆನಪಿಸಿಕೊಳ್ಳುತ್ತಿದ್ದರು. ಸಂಸ್ಥೆಯ ಒಡೆಯ ಎನಿಸಿಕೊಳ್ಳುವವನು ತಂದೆಯಿದ್ದಂತೆ ಇರಬೇಕು. ಕಾರ್ಮಿಕರನ್ನು, ತನ್ನೊಂದಿಗೆ ಕೆಲಸ ಮಾಡುವವರನ್ನು, ಮಕ್ಕಳಂತೆ ಕಾಣಬೇಕು. ಮಕ್ಕಳು ಸರಿಯಾಗಿದ್ದರೆ, ಸಂತೋಷದಿಂದ ಇದ್ದರೆ ತಂದೆ ತಾಯಿಯ ಮುಕ್ಕಾಲು ಭಾಗ ತಲೆಬಿಸಿ ಕಮ್ಮಿಯಾ ದಂತೆಯೇ.
ನಾವು ಮಕ್ಕಳನ್ನು ಪ್ರೀತಿಸಿದರೆ ಮಕ್ಕಳು ನಮ್ಮನ್ನು, ಮನೆಯನ್ನು ಪ್ರೀತಿಸುತ್ತಾರೆ. ನಾವೇ ಸರಿಯಿಲ್ಲದಿದ್ಧಾಗ ಮಕ್ಕಳನ್ನು ದೂಷಿಸುವುದು ಸರಿಯಲ್ಲ. ಯಾವುದೇ ವಿಷಯವಾದರೂ, ಅಧಿಕಾರದಿಂದ ಹೇಳುವುದಕ್ಕೂ, ಸಿಟ್ಟಿನಿಂದ ಹೇಳುವು ದಕ್ಕೂ, ಪ್ರೀತಿಯಿಂದ ಹೇಳುವುದಕ್ಕೂ ವ್ಯತ್ಯಾಸವಿರುತ್ತದೆ. ಪ್ರೀತಿಯಿಂದ ಆಗುವ ಕಾರ್ಯ ದರ್ಪದಿಂದ ಆಗುವುದಿಲ್ಲ. ಇದನ್ನು
ಧೀರೂಭಾಯಿ ಚೆನ್ನಾಗಿ ಅರಿತಿದ್ದರು. ಹೆಚ್ಚು ಕಾರ್ಮಿಕ ವರ್ಗವನ್ನು ಹೊಂದಿದ ಎಲ್ಲಾ ದೊಡ್ಡ ಸಂಸ್ಥೆಗಳಲ್ಲೂ ಅಸಮಾಧಾನ, ಮುಷ್ಕರಗಳು ಸಾಮಾನ್ಯ. ಬಟ್ಟೆ ಗಿರಣಿಗಳಲ್ಲಿ ಅದು ಅವಶ್ಯಕತೆಗಿಂತ ಎರಡು ಸೌಟು ಹೆಚ್ಚೇ ಎನ್ನಬಹುದು.
ಆ ದಿನಗಳಲ್ಲಿ ತಿಂಗಳಿಗೆ ಒಂದೆರಡಾದರೂ ಕಾರ್ಮಿಕರ ಮುಷ್ಕರ ಇಲ್ಲವೆಂದರೇ ಆಶ್ಚರ್ಯಪಡುವ ಸ್ಥಿತಿಯಿತ್ತು. ಆದರೆ ರಿಲಾಯನ್ಸ್ ಕಾರ್ಖಾನೆ ಮಾತ್ರ ಇದಕ್ಕೆ ಹೊರತಾಗಿತ್ತು. ಧೀರೂಭಾಯಿ ಇರುವಲ್ಲಿಯವರೆಗೆ ಒಂದೇ ಒಂದು ನಿಮಿಷವೂ ರಿಲಾಯನ್ಸ್ ಇಂಡಸ್ಟ್ರಿಯಲ್ಲಿ ಮುಷ್ಕರ ಎಂಬ ಪದ ಹತ್ತಿರವೂ ಸುಳಿಯಲಿಲ್ಲ. ಅಲ್ಲಿಗೆ ಒಬ್ಬ ಆಡಳಿತಗಾರನಾಗಿ ಅವರು ಹೇಗಿದ್ದರು ಎಂಬುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು.
ಅಸಲಿಗೆ ಧೀರೂಭಾಯಿ ಅಂಬಾನಿ ಕಟ್ಟಿದ್ದು ಒಂದು ಸಂಸ್ಥೆಯನ್ನಲ್ಲ, ಸಂಸ್ಥಾನವನ್ನು! ಒಂದು ಉದ್ಯಮ ಆರಂಭಿಸಲು ಏನು ಬೇಕು ಎಂದು ಕೇಳಿದರೆ ಸಾಮಾನ್ಯವಾಗಿ ಸಿಗುವ ಉತ್ತರಗಳು, ಹಣ, ವಿದ್ಯೆ, ಜ್ಞಾನ, ಅನುಭವ, ಅವಕಾಶ, ಮನೆತನ, ಇತ್ಯಾದಿ.
ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ಬೇಕಾದದ್ದು ಧೈರ್ಯ. ಉದ್ಯಮ ಆರಂಭಿಸುವ ಧೈರ್ಯವೇ ಇಲ್ಲದಿದ್ದರೆ ಉಳಿದದ್ದೆಲ್ಲವೂ ನಿಷ್ಪ್ರಯೋಜಕ. ಆಗ ಕೈಯಲ್ಲಿದ್ದ ಹಣವೂ ನಿರುಪಯುಕ್ತ, ಬುದ್ಧಿಯೂ ಬುರ್ನಾಸು, ಜ್ಞಾನವೂ ಜುಜುಬಿ. ಉದ್ಯಮದಲ್ಲಿ ಯಶಸ್ಸಿಗೆ ಅದೃಷ್ಟ ಒಲಿಯಬೇಕು ಎಂಬುದು ಎಷ್ಟು ಸತ್ಯವೋ, ಅದೃಷ್ಟ ಧೈರ್ಯ ವಂತರಿಗೆ ಮಾತ್ರ ಒಲಿಯುತ್ತದೆ ಎಂಬ ಮಾತೂ ಅಷ್ಟೇ ಸತ್ಯ.
Luck favours the brave ಎಂಬ ಮಾತೇ ಇದೆ. ಸಮುದ್ರದ ಅಲೆಗಳು ಕೂಡ ಧೈರ್ಯವಂತ ನಾವಿಕನನ್ನು ಅನುಸರಿಸುತ್ತವಂತೆ. ಉದ್ಯಮವೆಂಬ ಸಾಹಸದ ಪರ್ವತ ಏರಬೇಕಾದರೆ ಎಲ್ಲಕ್ಕಿಂತ ಮೊದಲು ಸಿಗುವ ಮೆಟ್ಟಿಲೇ ಧೈರ್ಯ. ಅದರ ನಂತರ ಉಳಿದವು. ಧೈರ್ಯವೆಂಬ ಮೊದಲ ಮೆಟ್ಟಿಲು ಏರಿದರೆ ಮಾತ್ರ ಯಶಸ್ಸಿನ ತುದಿ ಮುಟ್ಟಲು ಸಾಧ್ಯ. ಧೈರ್ಯವೊಂದು ಇಲ್ಲದಿದ್ದರೆ
ಮನುಷ್ಯ ಜೀವನದಲ್ಲಿ ಒಂದು ಹೆಜ್ಜೆ ಕಿತ್ತಿಡಲೂ ಸಾಧ್ಯವಿಲ್ಲ. ಧೈರ್ಯವೊಂದಿದ್ದರೆ ಅರ್ಧ ಯುದ್ಧ ಗೆದ್ದಂತೆ.
‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಮಾತಿನಂತೆ, ಧೈರ್ಯ ಇದ್ದರೆ ಎಂತಹ ಸಂಕಷ್ಟ ಪರಿಸ್ಥಿತಿಯನ್ನೂ ಜಯಿಸಿ, ಪಾರಾಗಿ ಬರಬಹುದು. ಹೆದರು ಪುಕ್ಕಲಿರಿಗೆ ಸ್ವಂತ ಉದ್ಯಮ ಹೇಳಿಸಿದ್ದಲ್ಲ. ಉದ್ಯಮ ಎಂದಲ್ಲ, ಮನುಷ್ಯ ಏನೇ ಕೆಲಸ ಮಾಡುವುದಿದ್ದರೂ ಮೊದಲು ಬೇಕಾದದ್ದು ಧೈರ್ಯ ವೇ. ಬಿಬಿಎ, ಎಂಬಿಎನಂಥ ಯಾವ ಶಿಕ್ಷಣವನ್ನೂ ಪಡೆಯದೇ ಉದ್ಯಮದ ಸಾಮ್ರಾಜ್ಯವನ್ನೇ
ಕಟ್ಟಿದ ಧೀರೂಭಾಯಿ ಅಂಬಾನಿಯೇ ಇದಕ್ಕೆ ಸಾಕ್ಷಿ.
ಧೀರಜ್‌ಲಾಲ್ ಅಂಬಾನಿ ಉರ್ಫ್ ಧೀರೂಭಾಯಿಯ ತಂದೆ ಹೀರಾಚಂದ್ ಅಂಬಾನಿ ಗುಜರಾತ್‌ನ ಜುನಾಗಡ್ ಜಿಯ ಚೋರ್ವಾಡ್ ಎಂಬ ಹಳ್ಳಿಯ ಶಾಲೆಯೊಂದರಲ್ಲಿ ಸಾಮಾನ್ಯ ಶಿಕ್ಷಕಕರಾಗಿದ್ದರು. ಶಿಕ್ಷಕನ ಮಗನಾದರೂ ಇವರಿಗೆ ಶಾಲಾ ಶಿಕ್ಷಣ ಕಬ್ಬಿಣದ ಕಡಲೆಯೇ ಆಗಿತ್ತು. ಜತೆಗೆ ಮನೆಯ ಆರ್ಥಿಕ ಪರಿಸ್ಥಿತಿಯೂ ಅಷ್ಟಕ್ಕಷ್ಟೇ ಆಗಿದ್ದುದರಿಂದ ಪ್ರೌಢಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿ, ಸಣ್ಣ ವಯಸ್ಸಿನ ಪುಟ್ಟ ಉದ್ಯಮ ಆರಂಭಿಸಿದರು. ಮೊದಲು ತಿಂಡಿ, ಹಣ್ಣು ಮಾರಲು ಆರಂಭಿಸಿದರು. ಅದು ಯಶಸ್ವಿಯಾಗದಿದ್ದಾಗ ಮೌಂಟ್ ಗಿರ್ನಾರ್‌ನ ಧಾರ್ಮಿಕ ಸ್ಥಳಗಳಲ್ಲಿ ಬಜ್ಜಿ (ಪಕೋಡ) ಮಾಡಿ ಮಾರಲು ಆರಂಭಿಸಿದರು. ಅದು ಸಂಪೂರ್ಣವಾಗಿ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆಯನ್ನು ಅವಲಂಬಿಸಿರುತ್ತಿತ್ತು.
ಹವಾಮಾನದ ವೈಪರೀತ್ಯ ದಿಂದ ವರ್ಷದಲ್ಲಿ ಮೂರರಿಂದ ನಾಲ್ಕು ತಿಂಗಳು ಪ್ರವಾಸಿಗರ ಸಂಖ್ಯೆಯಲ್ಲಿ ತೀರಾ ಇಳಿಮುಖ ವಾಗುತ್ತಿತ್ತು. ಅಲ್ಲಿಗೆ ಅನಿವಾರ್ಯವಾಗಿ ಆ ಕೆಲಸವನ್ನೂ ನಿಲ್ಲಿಸಬೇಕಾಯಿತು. ಇಲ್ಲಿ ಯಾವುದೂ ಸರಿಹೋಗದಿದ್ದಾಗ, ತಂದೆಯ ಒತ್ತಾಯಕ್ಕೆ ನೌಕರಿ ಮಾಡಲು ಒಪ್ಪಿಕೊಂಡರು. ಅದಾಗಲೇ ಅವರ ಸಹೋದರ ರಮನಿಕ್‌ಲಾಲ್ ಯೆಮನ್ ದೇಶದ ಆದೆನ್ ಎಂಬ ಸ್ಥಳದಲ್ಲಿ ಕೆಲಸಮಾಡುತ್ತಿದ್ದರು. ಬ್ರಿಟಿಷ್ ಒಡೆತನದ ಅ Besse Co ಇಟನ ಆಡಳಿತ ಪರಿಧಿಯಲ್ಲಿದ್ದ ಶೆಲ್ ಪೆಟ್ರೋಲ್
ಬಂಕ್‌ನಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿಕೊಳ್ಳುವಾಗ ಅವರಿಗೆ ಕೇವಲ ಹದಿನೇಳು ವರ್ಷ.
ತಮ್ಮ ಶ್ರಮ ಮತ್ತು ಚುರುಕುತನದಿಂದ ಎರಡು ಮೂರು ವರ್ಷದ ಅವಧಿಯಲ್ಲಿ ವ್ಯವಸ್ಥಾಪಕ ಹುದ್ದೆಗೆ ಏರಿದರು. ಇಷ್ಟರ
ನಡುವೆ ಭಾರತ ಸ್ವಾತಂತ್ರ್ಯಪಡೆದ ನಂತರ, ಜುನಾಗಢನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂಬ ನವಾಬನ ವಿರುದ್ಧ ನಡೆದ ಚಳವಳಿ ಯಲ್ಲೂ ಪಾಲ್ಗೊಂಡು ದೇಶಪ್ರೇಮ ಮೆರೆದಿದ್ದರು. ವಿದೇಶದಲ್ಲಿನ ಉನ್ನತ ಪದವಿಯ ನೌಕರಿಗೂ ಅವರ ಮನಸ್ಸಿನಲ್ಲಿದ್ದ ಉದ್ಯಮದ ಬೀಜವನ್ನು ಕಿತ್ತೊಗೆಯಲು ಸಾಧ್ಯವಾಗಲಿಲ್ಲ.
ಶೆಲ್ ಕಂಪನಿಯಲ್ಲಿ ಅವರ ಸಂಬಳ ತಿಂಗಳಿಗೆ ಮುನ್ನೂರು ರುಪಾಯಿಯಾಗಿತ್ತು. ಆ ದಿನಗಳಲ್ಲಿ ಶೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕರ್ಮಚಾರಿಗಳಿಗೆ ಒಂದು ಕಪ್ ಚಹಾ ಇಪ್ಪತ್ತೈದು ಪೈಸೆಗೆ ಸಿಗುತ್ತಿದ್ದರೂ, ಅದನ್ನು ಬಿಟ್ಟು ಒಂದು ರುಪಾಯಿಗೆ ಚಹಾ ಮಾರುವ ದೊಡ್ಡ ಹೋಟೆಲಿಗೆ ಹೋಗುತ್ತಿದ್ದುರು. ಜತೆಗೆ ಕೆಲಸ ಮಾಡುವವರು ಅಣಕಿಸುತ್ತಿದ್ದರೂ ಅದನ್ನು ಮಾತ್ರ ಕೊನೆತನಕ ಬಿಡಲಿಲ್ಲ. ಕಾರಣ, ಅಲ್ಲಿ ಬರುವವರು ದೊಡ್ಡ ಹುದ್ದೆಯಲ್ಲಿರುವವರು ಅಥವಾ ಉದ್ಯಮಿಗಳು, ಅವರ ಮಾತನ್ನು ಕೇಳಬಹುದು, ಅವರ ಪರಿಚಯ ಮಾಡಿಕೊಳ್ಳಬಹುದು, ಅಂಥವರಿಂದ ಸಾಕಷ್ಟು ತಿಳಿದುಕೊಳ್ಳಬಹುದು ಎಂದು ಅವರು ನಂಬಿ ದ್ದರು.
ಯಾವ ಸ್ಥಳ ಜನಸಾಮಾನ್ಯರಿಗೆ ಊಟ ತಿಂಡಿಯ ಹೋಟೆಲ್ ಆಗಿತ್ತೋ, ಅದೇ ಸ್ಥಳ ಧೀರೂಭಾಯಿಗೆ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕಲಿಸಿಕೊಟ್ಟ ವಿಶ್ವವಿದ್ಯಾಲಯವಾಯಿತು. ಧೀರೂಭಾಯಿ ಅದಾಗಲೇ ಸ್ವಂತ ಉದ್ಯಮ ಆರಂಭಿಸುವ ದೃಢ ನಿರ್ಧಾರಕ್ಕೆ ಬಂದಿ ದ್ದರು. ಹೊಸ ಉದ್ಯಮ ಆರಂಭಿಸುವುದಕ್ಕೆ ಲಂಡನ್‌ನಲ್ಲಿ ಭರಪೂರ ಅವಕಾಶವಿದ್ದರೂ ಭಾರತದ ಘಮಲು ಅವರನ್ನು
ಮುಂಬೈಗೆ ಸೆಳೆದಿತ್ತು. ಟರ್ಕಿಯಲ್ಲಿದ್ದ ಸೋದರ ಸಂಬಂಧಿ ಚಂಪಕಲಾಲ್ ದಮಾನಿಯೊಂದಿಗೆ ಸೇರಿ ‘ಮಾಜಿನ್’ ಸಂಸ್ಥೆ
ಆರಂಭಿಸುವಾಗ ಅವರ ಕೈಯಲ್ಲಿದಲದ್ದು ಕೇವಲ ಒಂದು ಸಾವಿರ ರುಪಾಯಿ.
ಬಟ್ಟೆ ತಯಾರಿಕೆಯಲ್ಲಿ ಬಳಸುವ ಯಾರ್ನ್ ಆಮದು ಮಾಡಿಕೊಂಡು ಈ ಸಂಸ್ಥೆಯ ಪ್ರಮುಖ ಉದ್ಯಮವಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬಟ್ಟೆ ತಯಾರಿಸುವ ಹೆಚ್ಚಿನ ಕಾರ್ಖಾನೆಗಳು ಮುಂಬೈ ಪ್ರಾಂತ್ಯದಲ್ಲೂ, ಹೆಚ್ಚು ಹತ್ತಿ ಬೆಳೆಯುವ ಪ್ರಾಂತ್ಯ
ಪಾಕಿಸ್ತಾನದಲ್ಲೂ ಇತ್ತು. ಭಾರತ ಪಾಕಿಸ್ತಾನ ವಿಭಜನೆಯಾದ ನಂತರ ಪಾಕಿಸ್ತಾನದಿಂದ ಹತ್ತಿ ಬರುವುದು ನಿಂತುಹೋದದ್ದ ರಿಂದ ಯಾರ್ನ್ ಬೇಡಿಕೆ ಅಧಿಕವಾಗಿತ್ತು.
ಆಮದಿನ ಜತೆಗೆ, ಭಾರತದ ಸಾಂಬಾರ ಪದಾರ್ಥಗಳನ್ನು ಯೆಮನ್‌ಗೆ ರಫ್ತು ಮಾಡುವ ಕಾರ್ಯವನ್ನೂ ಸಂಸ್ಥೆ ಆರಂಭಿಸಿತು. ವ್ಯವಹಾರವೇನೋ ಚೆನ್ನಾಗಿಯೇ ನಡೆದಿತ್ತಾದರೂ ಇಬ್ಬರ ದೃಷ್ಟಿಕೋನಗಳೂ ವಿಭಿನ್ನವಾಗಿದ್ದು, ಹೊಂದಾಣಿಕೆಯಾಗದೇ 1965ರಲ್ಲಿ ಧೀರೂಭಾಯಿ ಸಹಭಾಗಿತ್ವದಿಂದ ಹೊರಬಂದರು. ಧೀರೂಭಾಯಿ ರಿಲಾಯನ್ಸ್ ಸಂಸ್ಥೆ (ರಿಲಾಯನ್ಸ್ ಕಮರ್ಷಿಯಲ್ ಕಾರ್ಪೊರೇಶನ್) ಸ್ಥಾಪಿಸಿದ್ದು 1973ರಲ್ಲಿ.
ಮುಂಬೈನ ಮಸ್ಜಿದ್ ಬಂದರ್‌ನಲ್ಲಿ ಆರಂಭಗೊಂಡ ರಿಲಾಯನ್ಸ್‌ನ ಮೊದಲ ಕಚೇರಿಯ ವಿಸ್ತೀರ್ಣ ಮುನ್ನೂರಾ ಐವತ್ತು ಚದರ ಅಡಿಗಳು ಅಂದರೆ ಸುಮಾರು ಮೂವತ್ತಮೂರು ಚದರ ಮೀಟರ್ ಮಾತ್ರ. ಆ ಕಚೇರಿಯಲ್ಲಿದ್ದದ್ದು ಒಂದು ಮೇಜು, ಮೂರು ಕುರ್ಚಿ, ಒಂದು ಟೆಲಿಫೋನ್, ಜತೆಗೆ ಇಬ್ಬರು ಸಹಾಯಕರು. 1977ರಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಎಂದು ಮರುನಾಮಕರಣ ಗೊಳ್ಳುವ ಮುನ್ನ ಸಂಸ್ಥೆ ರಿಲಾಯನ್ಸ್ ಟೆಕ್ಸ್ ಟೈಲ್ಸ್ ಪ್ರೈವೇಟ್ ಲಿಮಿಟೆಡ್ ಹಸರಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.
ಸಂಸ್ಥೆ 1996ರಲ್ಲಿ ಅಂತಾರಾಷ್ಟ್ರೀಯ ಸಂಘಟನೆಯಾಗಿ ಗುರುತಿಸಿಕೊಂಡು, ಅಂತಾರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಗಳಿಂದ ಮನ್ನಣೆ ಪಡೆದ ಮೊದಲ ಭಾರತೀಯ ಖಾಸಗಿ ಕಂಪನಿಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಂಬಾನಿಯ ಕನಸಿನ ಕೂಸಾದ ರಿಲಾಯನ್ಸ್ ಗ್ರೂಪ್‌ಗೆ ಸಾಲ ನೀಡಿ ಬೆಳೆಸುವಲ್ಲಿ ಕರ್ನಾಟಕದ ಉಡುಪಿ ಮೂಲದ ತೋನ್ಸೆ ಮಾಧವ ಅನಂತ (ಟಿ. ಎಂ. ಎ.) ಪೈ ಸ್ಥಾಪಿಸಿದ ಸಿಂಡಿಕೇಟ್ ಬ್ಯಾಂಕ್ ಮತ್ತು ನಂತರದ ದಿನಗಳಲ್ಲಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ತೋನ್ಸೆ ಅನಂತ ಪೈ ಅವರ ಹೆಸರು ಎದ್ದು ಕಾಣುವಂಥದ್ದು.
ಅಷ್ಟರ ಮಟ್ಟಿಗೆ ರಿಲಾಯನ್ಸ್‌ನ ಯಶಸ್ಸಿನಲ್ಲಿ ಕರ್ನಾಟಕದ ಪಾತ್ರವೂ ಇದೆ ಎಂದು ನಾವು ಹೆಮ್ಮೆಪಡಬಹುದು. ಧೀರೂಭಾಯಿ ಕೂಡ ಕೊನೆಯವರೆಗೂ ಅದನ್ನು ಸ್ಮರಿಸುತ್ತಿದ್ದರು. 2002ರಲ್ಲಿ ಅವರ ಮರಣಕ್ಕೂ ಪಾರ್ಶ್ವವಾಯುವೇ ಕಾರಣವಾಯಿತು. ಅವರ ಗೌರವಾರ್ಥ ಅದೇ ವರ್ಷ ಅವರ ಭಾವಚಿತ್ರವುಳ್ಳ ಅಂಚೆ ಚೀಟಿಯನ್ನು ಹೊರತರಲಾಯಿತು. ಭಾರತ ಸರಕಾರ 2016ರಲ್ಲಿ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.
ಯಾರು ಕನಸು ಕಾಣುವ ಧೈರ್ಯ ಮಾಡುತ್ತಾರೋ ಅವರು ಲೋಕವನ್ನೇ ತಮ್ಮದಾಗಿಸಿಕೊಳ್ಳಬಲ್ಲರು ಎಂದು ನಂಬಿದವರು, ಮಾಡಿ ತೋರಿಸಿದವರು ಧೀರೂಭಾಯಿ. ಉದ್ಯಮ ಕ್ಷೇತ್ರ ದಲ್ಲಿ ತಾನು ಹೆಸರು ಮಾಡಿದ್ದಲ್ಲದೇ, ಉದ್ಯೋಗ ಜಗತ್ತಿನಲ್ಲಿ
ಭಾರತದ ಹೆಸರಿಗೂ ಹೊಳಪು ತಂದವರು. ಗುಮಾಸ್ತನಾಗಿದ್ದವ ಮೂರು ದಶಕದ ಅವಧಿಯಲ್ಲಿ ದೇಶದ ನಂಬರ್ ವನ್ ಉದ್ಯಮಿ ಯಾಗಬಹುದೆಂದು ತೋರಿಸಿಕೊಟ್ಟವರು. ಅವರ ಯಶಸ್ಸಿಗೆ ಕಾರಣ ಅವರ ಷದೃಷ್ಟಿಕೋನ, ಅಪಾಯ ಎದುರಿಸುವ ಸಾಮರ್ಥ್ಯ ಅಥವಾ ಧೈರ್ಯ ಮತ್ತು ಅವರ ಜತೆಗೆ ಕೆಲಸ ಮಾಡುವವರ ಕೌಶಲ್ಯ ಮತ್ತು ಸಹಕಾರ. ಎಲ್ಲವನ್ನೂ ಸರಿಯಾದ ಸಮಯದಲ್ಲಿ, ಸರಿಯಾದ ಹದದಲ್ಲಿ ಸ್ವೀಕರಿಸಿದ ಅವರ ಬುದ್ಧಿಮತ್ತೆಗೆ ತಲೆದೂಗಲೇಬೇಕು.
ಧೀರೂಭಾಯಿ ಅಂದು ಬಿತ್ತಿದ ರಿಲಾಯನ್ಸ್ ಎಂಬ ಬೀಜ ಇಂದು ವಟವೃಕ್ಷವಾಗಿ ಬೆಳೆದು ನಿಂತಿದೆ. ಅವರ ಮರಣಾನಂತರ 2014 ರಲ್ಲಿ ಸಂಸ್ಥೆ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅನಿಲ ಅಂಬಾನಿ ಒಡೆತನದ ರಿಲಾಯನ್ಸ್ ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್ಸ್ ಹೆಸರಿನಲ್ಲಿ ಎರಡು ಷ ಭಾಗವಾಗಿದೆ. ಅನಿಲ್ ಒಡೆತನದ ಸಂಸ್ಥೆ ಸಾಕಷ್ಟು ನಷ್ಟ ಅನುಭವಿಸಿದೆ. ಮುಖೇಶ್ ನೇತೃತ್ವದ ಸಂಸ್ಥೆ ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದ ಸಾಗಿದೆ.
ಇಂದು ರಿಲಾಯನ್ಸ್ ಸಂಸ್ಥೆ ಸುಮಾರು ಎರಡು ಲಕ್ಷ ಕುಟುಂಬಕ್ಕೆ ಅನ್ನ ನೀಡುತ್ತಿದೆ. ವಿಶ್ವದ ನೂರಕ್ಕೂ ಹೆಚ್ಚು ದೇಶದಲ್ಲಿ ತನ್ನ
ವರ್ಚಸ್ಸನ್ನು ಬೆಳೆಸಿಕೊಳ್ಳುತ್ತಿದೆ. ಈ ವರ್ಷ ತೊಂಬತ್ತು ಬಿಲಿಯನ್ ಡಾಲರ್‌ನಷ್ಟು ವಹಿವಾಟು ನಡೆಸಿದ್ದು, ಆರು ಬಿಲಿಯನ್ ಡಾಲರ್ ನಿವ್ವಳ ಲಾಭ ಗಳಿಸಿದೆ. ದೇಶದ ಆರ್ಥಿಕತೆಯಲ್ಲಿ ಮಹತ್ತರ ಪಾತ್ರವಹಿಸುತ್ತಿದೆ. ಒಂದು ದೇಶಕ್ಕೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ತಾನು ಕಟ್ಟಿಕೊಂಡ ಕನಸನ್ನು ಸ್ವಂತ ಬಲದಿಂದ ತನ್ನ ಕಾಲಬುಡದಲ್ಲಿ ತಂದಿಟ್ಟುಕೊಂಡವರು ಧೀರೂಭಾಯಿ ಅಂಬಾನಿ.
ಜೀವನದಲ್ಲಿ ಸಾಧಿಸಬೇಕೆಂಬ ಉತ್ಕಟ ಆಕಾಂಕ್ಷೆಯೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಧಿಸಿ ತೋರಿಸಿದ ಛಲಗಾರ. ಇಂದು ರಿಲಾಯನ್ಸ್ ಸಾಮ್ರಾಜ್ಯದ ಮೊದಲ ಚಕ್ರವರ್ತಿಯ ಜನ್ಮದಿನ.