Wednesday, 11th December 2024

ಧೀರೂಬಾಯ್ ಬಿತ್ತಿದ ಮೌಲ್ಯಗಳನ್ನು ಪೋಷಿಸಿದ ಕುಟುಂಬಿಕರು

ಸಂಗತ

ಡಾ.ವಿಜಯ್ ದರಡಾ

ಮನುಷ್ಯನಿಗೆ ಸಣ್ಣ ಪ್ರಮಾಣದ ಸಂಪತ್ತು ಬಂದರೂ ಸಾಕು, ಅವನು ಮಾನವೀಯತೆ ಕಳೆದುಕೊಳ್ಳಲು ಅಷ್ಟು ಸಾಕಾಗುತ್ತದೆ. ಅದರ ಜತೆಗೆ ಸ್ವಲ್ಪ ಪ್ರಸಿದ್ಧಿಯೂ ಬಂದರೆ ಕೇಳುವುದೇ ಬೇಡ. ಸಂಪತ್ತು ಹಾಗೂ ಪ್ರಸಿದ್ಧಿಯೆಂಬುದು ಡೆಡ್ಲಿ ಕಾಂಬಿನೇಶನ್. ಇವೆರಡನ್ನೂ ಹೊಂದಿರುವ ವ್ಯಕ್ತಿಗಳು ಅಹಂಕಾರದಿಂದ ಮೆರೆಯುತ್ತಾ, ತಾವೇ ದೊಡ್ಡ ಸಾಧಕರೆಂದು ತಲೆಯ ಮೇಲೆ ಕೋಡು ಹೊತ್ತುಕೊಂಡು ತಿರುಗಾಡುತ್ತಾರೆ. ಕಾಲಕ್ಕಿರುವ ಶಕ್ತಿಯನ್ನು ಅವರು ಗುರುತಿಸುವಲ್ಲಿ ವಿಫಲರಾಗುತ್ತಾರೆ.

ಹಾಗೆಯೇ ಎಂತೆಂಥಾ ಬೃಹತ್ ಮರಗಳನ್ನು ಕೂಡ ಬುಡಮೇಲು ಮಾಡುವ ಶಕ್ತಿ ಬಿರುಗಾಳಿಗೆ ಇರುವಂತೆ ಬದುಕಿನಲ್ಲಿ ಯಾವಾಗ ಬೇಕಾದರೂ ಕಾಲನ ಬಿರುಗಾಳಿ ಎಲ್ಲವನ್ನೂ ಬದಲಾಯಿಸಿ ಎಸೆಯಬಲ್ಲದು ಎಂಬುದನ್ನು ಅವರು ಮರೆತುಬಿಡುತ್ತಾರೆ. ನಮ್ಮಲ್ಲಿರುವ ಮೌಲ್ಯಗಳ ನಿಜವಾದ ಶಕ್ತಿ ತಿಳಿಯುವುದೇ ಇಂಥ  ಸಮಯದಲ್ಲಿ. ನಮ್ಮ ವ್ಯಕ್ತಿತ್ವಕ್ಕೆ ನಿಜವಾಗಿಯೂ ಇರುವ ಘನತೆ ಎಂಥದು ಎಂಬುದು ಸಂಪತ್ತು ಹಾಗೂ ಪ್ರಸಿದ್ಧಿ ಬಂದಾಗ ತಿಳಿಯುತ್ತದೆ. ಹೀಗಾಗಿ, ಧೀರೂಭಾಯಿ ಅಂಬಾನಿ ಹಾಗೂ ಕೋಕಿಲಾ ಬೆನ್ ಬಿತ್ತಿದ ಮೌಲ್ಯಗಳ ಬೀಜವು ಬೆಳೆದು ದೊಡ್ಡ ಮರವಾಗಿ ನಿಂತಿರುವು ದನ್ನು ನೋಡಲು ಖುಷಿಯಾಗುತ್ತದೆ. ಆ ಮರದ ಬೇರುಗಳು ಆಳವಾಗಿ ಎಲ್ಲೆಡೆ ಹರಡಿ ಗಟ್ಟಿಯಾಗಿರುವುದಲ್ಲದೆ, ಅಂಬಾನಿ ಕುಟುಂಬದಲ್ಲಿ ಅದು ಬೃಹತ್ತಾಗಿ ಬೆಳೆಯುತ್ತಿದೆ ಕೂಡ. ಇದರ ಕ್ರೆಡಿಟ್ ಕೇವಲ ಮುಕೇಶ್ ಅಂಬಾನಿಗೆ ಸಲ್ಲುವುದಿಲ್ಲ, ಜತೆಗೆ ಧೀರೂಭಾಯಿ ನೆಟ್ಟ ಮರಕ್ಕೆ ನೀರು ಮತ್ತು ಗೊಬ್ಬರ ಹಾಕಿ ಪ್ರೀತಿಯಿಂದ ಬೆಳೆಸಿದ ಕೀರ್ತಿ ನೀತಾ ಅಂಬಾನಿಗೂ ಸಲ್ಲುತ್ತದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ಪ್ರಿ-ವೆಡ್ಡಿಂಗ್ ಸಮಾರಂಭದ ಬಗ್ಗೆ ಇಂದು ಜಗತ್ತೇ ಮಾತನಾಡುತ್ತಿದೆ. ವಿಡಿಯೋಗಳ ಮೂಲಕ ಆ ವೈಭವೋಪೇತ ಸಮಾರಂಭವನ್ನು ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ, ಆಗರ್ಭ ಶ್ರೀಮಂತರಾದ ಅಂಬಾನಿ ಕುಟುಂಬದ ಕಿರಿಯ ಕುಡಿ ಅನಂತ್ ಎಲ್ಲರಿಗೂ ತೋರಿದ ಪ್ರೀತಿ ಹಾಗೂ ವಿಧೇಯತೆಯಿಂದ ನಡೆದುಕೊಂಡ ಪರಿಯನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಹಳ್ಳಿಯ ಒಬ್ಬಳು ಸಾಧಾರಣ ಹೆಂಗಸು ಕೈಯಲ್ಲಿ ಮಡಚಿಟ್ಟುಕೊಂಡು ಬಂದಿದ್ದ ಹತ್ತೋ ಇಪ್ಪತ್ತೋ ರುಪಾಯಿಯ ನೋಟನ್ನು ಅನಂತ್‌ಗೆ ಕೊಟ್ಟು ಆಶೀರ್ವಾದ ಮಾಡುತ್ತಾಳೆ. ಅನಂತ್ ತಲೆಬಾಗಿ ಅದನ್ನು ಪಡೆದುಕೊಂಡು ಆ ಮಹಿಳೆಗೆ ಕೈಮುಗಿಯುತ್ತಾರೆ. ಬಳಿಕ ಆಕೆ ಪ್ರೀತಿಯಿಂದ ಆತನ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತಾಳೆ.

ಗ್ರಾಮೀಣ ಭಾಗದಲ್ಲಿ ಇಂದಿಗೂ ಹೀಗೆ ಮದುವೆಯಲ್ಲಿ ಹಣ ಅಥವಾ ಉಡುಗೊರೆ ಕೊಟ್ಟು ದಂಪತಿಗೆ ಆಶೀರ್ವಾದ ಮಾಡುವ ಸಂಪ್ರದಾಯವಿದೆ. ನಂತರ ಆ ಮಹಿಳೆ ರಾಧಿಕಾಗೆ ಸೀರೆ ಕೊಡುತ್ತಾಳೆ. ಆಕೆ ಕೂಡ ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ. ಈ ದೃಶ್ಯವನ್ನು ನೋಡಿದ ಯಾರ ಮನಸ್ಸಾದರೂ ಒಮ್ಮೆ ಆರ್ದ್ರವಾಗುತ್ತದೆ. ಅನಂತ್ ಮಾತ್ರವಲ್ಲ, ಅವರ ಅಕ್ಕ ಇಶಾ ಮತ್ತು ಅಣ್ಣ ಆಕಾಶ್ ಕೂಡ ಕೋಕಿಲಾ ಬೆನ್, ಮುಕೇಶ್ ಹಾಗೂ ನೀತಾ ಅಂಬಾನಿಯಷ್ಟೇ ನಮ್ರತೆಯಿಂದ ನಡೆದು ಕೊಳ್ಳುತ್ತಾರೆ. ಆಕಾಶ್ ಅಂಬಾನಿಯ ಹೆಂಡತಿ ಶ್ಲೋಕಾ ಕೂಡ ಇಂಥದೇ ಹೆಣ್ಣುಮಗಳು. ನೀವು ಊಹೆ ಮಾಡಲೂ ಆಗದಷ್ಟು ಧಾರ್ಮಿಕ ವ್ಯಕ್ತಿ ಆಕೆ.

ಒಮ್ಮೆ ಅನಂತ್ ಬಳಿ ಯಾರೋ ಹೋಗಿ ‘ನೀವಿಬ್ಬರು ಅಣ್ಣ-ತಮ್ಮ ಮುಂದೆ ಬೇರೆಯಾಗುವ ಸಾಧ್ಯತೆಯಿದೆಯೇ?’ ಎಂದು ಕೇಳುತ್ತಾರೆ. ಆಗ ಅನಂತ್ ಏನು ಹೇಳಿದ್ದರು ಗೊತ್ತಾ? ‘ಆಕಾಶ್ ನನಗೆ ತಂದೆಯ ಜಾಗದಲ್ಲಿದ್ದಾರೆ. ಇಶಾ ನನಗೆ ತಾಯಿಯ ಜಾಗದಲ್ಲಿದ್ದಾರೆ. ನಾವು ಬೇರೆಯಾಗುವ ಪ್ರಶ್ನೆಯೇ ಬರುವುದಿಲ್ಲ’ ಅಂತ. ತನ್ಮೂಲಕ ತಮ್ಮ ಕುಟುಂಬ ದಲ್ಲಿರುವ ಬಲವಾದ ಬಂಧವನ್ನು ಅವರು ತೋರಿಸಿದ್ದರು. ಕಳೆದ ತಿಂಗಳು ನಡೆದ ಒಂದು ಘಟನೆಯ ಬಗ್ಗೆ ನಾನಿಲ್ಲಿ ಹೇಳಬೇಕು. ಮುಂಬೈನ ಐತಿಹಾಸಿಕ ಗೇಟ್ ವೇ ಆಫ್ ಇಂಡಿಯಾ ಬಳಿ ಲೋಕಮತ್ ಮೀಡಿಯಾ ಸಮೂಹದಿಂದ ‘ವರ್ಷದ ಮಹಾರಾಷ್ಟ್ರಿಗ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ನಾವು ಈ ಕಾರ್ಯಕ್ರಮವನ್ನು ಸರಳವಾಗಿ ನಡೆಸುತ್ತೇವೆ. ಸಹಜವಾಗಿಯೇ ಅಲ್ಲಿ ಐಷಾರಾಮಿ ಕುರ್ಚಿಗಳಿರಲಿಲ್ಲ. ಎಲ್ಲರಿಗೂ ಆರಾಮವಾಗಿ ಕುಳಿತುಕೊಳ್ಳಲು ಬೇಕಾದ ವ್ಯವಸ್ಥೆ ಯನ್ನು ಮಾಡಲಾಗಿತ್ತೇ ಹೊರತು, ದೊಡ್ಡ ದೊಡ್ಡ ವ್ಯಕ್ತಿಗಳು ಬರುತ್ತಾರೆಂದು ಸಿಂಹಾಸನದಂಥ ಕುರ್ಚಿಗಳನ್ನು ಎಲ್ಲೂ ಹಾಕಿಸಿರಲಿಲ್ಲ. ಆ ಸಮಾರಂಭದಲ್ಲಿ ಇಶಾ ಅಂಬಾನಿಗೆ ‘ಯೂಥ್ ಐಕಾನ್’ ಪ್ರಶಸ್ತಿ ನೀಡಿದ್ದೆವು. ಮಗಳು ಪ್ರಶಸ್ತಿ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲು ತಂದೆ ಮುಕೇಶ್ ಅಂಬಾನಿ ಕೂಡ ಬಂದಿದ್ದರು. ನನ್ನ ಸಹೋದ್ಯೋಗಿಗಳು ‘ಮುಕೇಶ್ ಅಂಬಾನಿಯನ್ನು ಸಾಧಾರಣ ಕುರ್ಚಿಯಲ್ಲಿ ಕೂರಿಸುವುದು ಸರಿಯಾಗುವುದಿಲ್ಲ, ಅವರಿಗೆ ಸ್ವಲ್ಪವಾದರೂ ವಿಶೇಷವಾಗಿ ಕಾಣಿಸುವ ಕುರ್ಚಿ ತರಿಸಬೇಕು’ ಎಂದು ಸಲಹೆ ನೀಡಿದರು. ಇದನ್ನು ಗಮನಿಸಿದ ಮುಕೇಶ್ ಭಾಯಿ, ಯಾವುದೇ ಕಾರಣಕ್ಕೂ ಅದನ್ನೆಲ್ಲ ಮಾಡಲು ಹೋಗಬಾರದು ಎಂದು ನಮಗೆ ಸೂಚಿಸಿದ್ದಷ್ಟೇ ಅಲ್ಲ, ಎಲ್ಲರಿಗೂ ಹಾಕಿದ್ದ ಸರಳ ಕುರ್ಚಿಯಲ್ಲೇ ಕಾರ್ಯಕ್ರಮ ಮುಗಿಯುವವರೆಗೂ ಒಂದೂವರೆ ತಾಸು ಕುಳಿತಿದ್ದರು!

ಽರೂಭಾಯಿಯ ಸರಳತೆ ಹಾಗೂ ಮುಂದಾಲೋಚನೆಯ ಬಗ್ಗೆ ನಾನಿಲ್ಲಿ ಎರಡು ಘಟನೆಯನ್ನು ಹೇಳಬೇಕು. ನನ್ನ ತಂದೆ, ಸ್ವಾತಂತ್ರ್ಯ ಹೋರಾಟಗಾರ ಜವಾಹರ ಲಾಲ್ ದರಡಾ ಅವರು ಎಂಭತ್ತರ ದಶಕದಲ್ಲಿ ಮಹಾರಾಷ್ಟ್ರದ ಔದ್ಯೋಗಿಕ ಸಚಿವರಾಗಿದ್ದರು. ಆಗ ಒಮ್ಮೆ ಽರೂಭಾಯಿ ಅಂಬಾನಿ ಯನ್ನು ತಂದೆಯವರಿಗೆ ಪರಿಚಯ ಮಾಡಿಸುವ ಅವಕಾಶ ನನಗೆ ಸಿಕ್ಕಿತ್ತು. ಅದರ ಬಳಿಕ ನನ್ನ ಹಾಗೂ ಅಂಬಾನಿ ಕುಟುಂಬದ ನಡುವಿನ ಆತ್ಮೀಯತೆ ಹೆಚ್ಚುತ್ತಲೇ ಹೋಯಿತು. ನಾನು ಪ್ರತಿ ಬಾರಿಯೂ ಲೋಕಮತ್ ಪತ್ರಿಕೆಯ ದೀಪಾವಳಿ ವಿಶೇಷ ಸಂಚಿಕೆಯ ಬಗ್ಗೆ ಧೀರೂಭಾಯಿಗೆ ಒಂದು ಪತ್ರ ಕಳು ಹಿಸುತ್ತಿದ್ದೆ. ಒಂದು ವರ್ಷ ಅವರಿಗೆ ಪತ್ರ ಬರೆಯಲು ಮರೆತು ಹೋಗಿತ್ತು. ಆ ಸಮಯಕ್ಕೆ ಲೋಕಮತ್ ಪತ್ರಿಕೆ ಕೂಡ ಆರ್ಥಿಕವಾಗಿ ಬೆಳೆದು ತನ್ನ ಕಾಲಿನ ಮೇಲೆ ನಿಂತುಕೊಂಡಿತ್ತು. ಆದರೆ, ನನಗೆ ಆಶ್ಚರ್ಯವಾಗುವಂತೆ ಸ್ವತಃ ಧೀರೂಭಾಯಿಯೇ ಫೋನ್ ಮಾಡಿದರು.

‘ವಿಜಯ್, ಈ ಸಲ ನಿಮ್ಮ ಪತ್ರ ಬರಲೇ ಇಲ್ಲವಲ್ಲ. ಲೋಕಮತ್ ಪತ್ರಿಕೆಗೆ ಈಗ ಯಾರ ಆಸರೆಯೂ ಬೇಕಿಲ್ಲವೆಂಬುದು ನನಗೆ ಗೊತ್ತು. ಆದರೆ, ಈಗಲೂ ನಮಗೆ ಲೋಕಮತ್ ಬೇಕು! ದಯವಿಟ್ಟು ಒಂದು ಪತ್ರ ಕಳುಹಿಸಿ, ನಮ್ಮ ಜಾಹೀರಾತು ಸ್ವೀಕರಿಸಿ’ ಎಂದು ಹೇಳಿದರು. ೧೯೯೮ರಲ್ಲಿ ನಾನು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದೆ. ಧೀರೂಭಾಯಿ ನನಗೆ ಕರೆ ಮಾಡಿ ಕೂಡಲೇ ಬಂದು ತಮ್ಮನ್ನು ಕಾಣುವಂತೆ ಹೇಳಿದರು. ನಾನು ಅವರ ಆಫೀಸಿಗೆ ಹೋದೆ. ‘ನಿಮಗೆ ಸಮಾಜವಾದಿ ಪಾರ್ಟಿಯ ವೋಟು ಕೂಡ ಬೇಕು ಅಲ್ಲವೇ?’ ಎಂದು ಕೇಳಿದರು. ಅವರಿಗಿರುವ ದೂರದೃಷ್ಟಿ ನೋಡಿ ನನಗೆ ಆಶ್ಚರ್ಯವಾಯಿತು. ‘ಹೌದು, ಬೇಕಾಗುತ್ತದೆ’ ಎಂದೆ. ಮುಕೇಶ್ ಭಾಯಿ ಮತ್ತು ಅನಿಲ್ ಭಾಯಿ ಕೂಡ ಅಲ್ಲೇ ಇದ್ದರು. ‘ಮುಲಾಯಂ ಸಿಂಗ್ ಯಾದವ್‌ಗೆ ಕರೆ ಮಾಡಿ’ ಎಂದು ಧೀರೂಭಾಯಿ ಹೇಳಿದರು.

ನಂತರ ಸಮಾಜ ವಾದಿ ಪಾರ್ಟಿ ನಾಯಕ ಮುಲಾಯಂ ಸಿಂಗ್‌ರನ್ನು ಮರುದಿನವೇ ಮುಂಬೈಗೆ ಕರೆಸಿ ನನ್ನ ಜತೆಗೊಂದು ಸಭೆ ಏರ್ಪಾಟು ಮಾಡಿಸಿದರು. ಅಲ್ಲೇ ಮುಲಾಯಂ ಸಿಂಗ್ ತಕ್ಷಣ ಅಮರ್ ಸಿಂಗ್ ಅವರಿಗೆ ಎಲ್ಲಾ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಪರಿಣಾಮ, ನನಗೆ ಸಮಾಜವಾದಿ ಪಾರ್ಟಿಯ ನಾಲ್ಕು ಮತಗಳು ದೊರೆತವು. ‘ಇನ್ನೇನಾದರೂ ಆಗಬೇಕೇ?’ ಎಂದು ಧೀರೂಭಾಯಿ ಕೇಳಿದರು. ನಾನು ಬಹಳ ವಿನಮ್ರವಾಗಿ ‘ಇನ್ನೇನೂ ಬೇಡ’ ಎಂದೆ. ಯಾವುದೇ ಸಂಬಂಧವನ್ನು ಅವರು ಆಳವಾದ ದೂರದೃಷ್ಟಿಯೊಂದಿಗೆ ಪೊರೆಯುತ್ತಿದ್ದರು!

ಅಂಬಾನಿ ಕುಟುಂಬ ಅನಂತ್ ಅಂಬಾನಿಯ ಪ್ರಿ-ವೆಡ್ಡಿಂಗ್ ಸಮಾರಂಭಕ್ಕೇ ೧೦೦೦ ಕೋಟಿ ರುಪಾಯಿ ಖರ್ಚು ಮಾಡಿದೆ ಎಂದು ವರದಿಯಾಗಿದೆ. ಮುಂಬರುವ ಜುಲೈನಲ್ಲಿ ಮುಂಬೈನಲ್ಲಿ ದೊಡ್ಡದೊಂದು ಕ್ರೂಸ್ ಪಾರ್ಟಿ ಹಾಗೂ ಮಹಾವೈಭವದ ಮದುವೆ ಸಮಾರಂಭ ನಡೆಯಲಿದೆ. ಇದೇನೂ ಹೊಸತಲ್ಲ. ಶ್ರೀಮಂತ ಉದ್ಯಮಿಗಳು ಹಾಗೂ ರಾಜಕಾರಣಿಗಳು ಹೀಗೆ ಅದ್ದೂರಿಯಾಗಿ ತಮ್ಮ ಮಕ್ಕಳ ಮದುವೆ ಮಾಡಿರುವುದು ಇತಿಹಾಸದುದ್ದಕ್ಕೂ ಕಾಣಿಸುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಎಲ್ಲರೂ ತಮ್ಮ ಗಳಿಕೆಯ ಶೇ. ೧೦ರಷ್ಟು ಹಣವನ್ನು ಮಕ್ಕಳ ಮದುವೆಗೆ ಖರ್ಚು ಮಾಡುತ್ತಾರೆ. ಅಂಬಾನಿ ಕುಟುಂಬದ ಒಟ್ಟು ಆಸ್ತಿ ೭.೬೫ ಲಕ್ಷ ಕೋಟಿ ರುಪಾಯಿ ಎಂದುಕೊಂಡರೆ, ಅವರು ಶೇ.೧೦ರಷ್ಟು ಅಲ್ಲ, ಶೇ.೧ರಷ್ಟು ಹಣವನ್ನು ಮದುವೆಗೆ ಖರ್ಚು ಮಾಡಿದರೂ ೭೬೫೦ ಕೋಟಿ ರೂಪಾಯಿ ಆಗುತ್ತದೆ! ಪ್ರಿ-ವೆಡ್ಡಿಂಗ್ ಸಮಾರಂಭದಲ್ಲಿ ಐವತ್ತು ಸಾವಿರ ಅತಿಥಿಗಳಿಗೆ ಅಂಬಾನಿ ಕುಟುಂಬವು ಜಾಮ್‌ನಗರದಲ್ಲಿ ಆದರದ ಆತಿಥ್ಯ ನೀಡಿತು.

ಸ್ವತಃ ಅಂಬಾನಿಗಳು ಊಟ ಬಡಿಸಿ ಎಲ್ಲರನ್ನೂ ಮಾತನಾಡಿಸಿದರು. ರಿಲಯನ್ಸ್ ಕಂಪನಿಯ ನೌಕರರನ್ನು ಔತಣಕ್ಕೆ ಆಹ್ವಾನಿಸಲಾಗಿತ್ತು. ಅವರೆಲ್ಲರಿಗೂ ಉಡುಗೊರೆ ಕೂಡ ನೀಡಲಾ ಯಿತು. ಹಣ ಸಾಕಷ್ಟು ಜನರ ಬಳಿ ಇರುತ್ತದೆ, ಆದರೆ ಇಂಥ ಔದಾರ್ಯ ನಿಜಕ್ಕೂ ಹೃದಯಕ್ಕೆ ತಟ್ಟುತ್ತದೆ! ಈ ಮದುವೆ ಭಾರತ ದಲ್ಲೇ ನಡೆಯುತ್ತಿದೆ ಎಂಬುದು ಕೂಡ ಮುಖ್ಯವಾದ ವಿಚಾರ. ಕೆಲ ಸಮಯದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಶ್ರೀಮಂತರು ವಿದೇಶಗಳಲ್ಲಿ ‘ಡೆಸ್ಟಿನೇಶನ್ ವೆಡ್ಡಿಂಗ್’ ಹಮ್ಮಿಕೊಳ್ಳದೆ ಭಾರತ ದಲ್ಲೇ ಮದುವೆ ಮಾಡಬೇಕೆಂದು ಕರೆ ನೀಡಿದ್ದರು.

ಇದೊಂದು ಸರಳವಾದ ಕರೆ. ಆದರೆ ಪರಿಣಾಮ ದೊಡ್ಡದು. ಭಾರತದ ಶ್ರೀಮಂತರು ನಮ್ಮ ದೇಶದಲ್ಲೇ ದೊಡ್ಡ ದೊಡ್ಡ ಮದುವೆ ಸಮಾರಂಭಗಳನ್ನು ಆಯೋಜಿಸಿದರೆ ಅದರಿಂದ ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿ ಹೊಂದುತ್ತದೆ. ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಪ್ರಧಾನಿ ಮೋದಿಯವರ ಮಾತನ್ನು ಮುಕೇಶ್ ಅಂಬಾನಿ ಗೌರವಿಸಿದ್ದಾರೆ. ಪುನಃ ನಾನಿಲ್ಲಿ ಅನಂತ್ ಅಂಬಾನಿಯ ದಯಾಪರ ವ್ಯಕ್ತಿತ್ವದ ಬಗ್ಗೆ ಹೇಳಬೇಕು. ಅವರಿಗೆ ಮೂಕಪ್ರಾಣಿಗಳ ಬಗ್ಗೆ ತುಂಬಾ ಪ್ರೀತಿ. ಹೀಗಾಗಿ ಜಾಮ್‌ನಗರದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡದಾದ ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಅದರ ಹೆಸರು ‘ವನತಾರಾ’.

ಹೆಚ್ಚುಕಮ್ಮಿ ಮೂರು ಸಾವಿರ ಎಕರೆ ವಿಸ್ತಾರವಾದ ಪ್ರದೇಶ ದಲ್ಲಿದೆ. ಇಲ್ಲಿ ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಅಪರೂಪದ ಅಥವಾ ಅಳಿವಿ ನಂಚಿನಲ್ಲಿರುವ ಪ್ರಾಣಿ ಪ್ರಭೇದಗಳನ್ನು ಸಂರಕ್ಷಿಸಲಾಗುತ್ತದೆ. ವನತಾರಾದ ವ್ಯವಹಾರದಲ್ಲಿ ಅನಂತ್ ಆಳವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಪಕ್ಕ ರಾಧಿಕಾ ಮರ್ಚಂಟ್ ಇದ್ದಾರೆ. ವನತಾರಾದ ಪ್ರಾಥಮಿಕ ಉದ್ದೇಶ ಲಾಭವಲ್ಲ, ಬದಲಿಗೆ ಸೇವೆ. ಪ್ರಾಣಿಗಳ ಬಗ್ಗೆ ವಿಶೇಷವಾದ ಪ್ರೀತಿ ಹೊಂದಿರುವ ಅನಂತ್, ನಮ್ಮ ದೇಶವನ್ನು ರಕ್ಷಿಸುವ ಸೈನಿಕರ ಬಗ್ಗೆ ಹಾಗೂ ಪೊಲೀಸರ ಬಗ್ಗೆಯೂ ತುಂಬಾ ಅಭಿಮಾನ ಹೊಂದಿದ್ದಾರೆ.

ಮುಂಬೈನಲ್ಲಿ ಅನೇಕ ಕಡೆ ಅವರು ಏರ್ ಕಂಡೀಶನ್ ಇರುವ ಪೊಲೀಸ್ ಚೌಕಿಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ರಸ್ತೆಯ ಬಿಸಿಲು, ಮಳೆ, ಧೂಳಿನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಅಗತ್ಯ ಬಿದ್ದಾಗ ದಣಿವಾರಿಸಿಕೊಳ್ಳಲು ಹಾಗೂ ಹವಾಮಾನದ ವೈಪರೀತ್ಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅನುಕೂಲವಾಗಲಿ ಎಂಬುದು ಅನಂತ್ ಉದ್ದೇಶ. ಇಂಥ ಕರುಣಾಮಯಿ ಜೋಡಿಯಾದ ಅನಂತ್ ಅಂಬಾನಿ ಹಾಗೂ ರಾಧಿಕಾಗೆ ನನ್ನ ಶುಭ ಹಾರೈಕೆಗಳು!

(ಲೇಖಕರು ಹಿರಿಯ ಪತ್ರಕರ್ತರು)