Sunday, 8th September 2024

ತಳದಲ್ಲಿದ್ದೋನು ಬಾಳಿಯಾನು- ಧೋನಿ

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ

ಮೊನ್ನೆ ತಮಿಳುನಾಡಲ್ಲಿ ಕೆಜಿಎಫ್ ಪತ್ರಿಕಾಗೋಷ್ಠಿ ಸಮಯದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯಿಂದ ಯಶ್‌ಗೆ, ಕೆಜಿಎಫ್ಗೆ ಅವಮಾನ ಆಯ್ತು ಅನ್ನೋ ಥರ ಕೆಲವರು ಮಾತಾಡ್ತಾ ಇದ್ದಾರೆ.

ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಚಿತ್ರತಂಡ ಮಾತನಾಡುವಾಗ ಅಲ್ಲಿನ ಪತ್ರಕರ್ತನೊಬ್ಬ, ಬರೀ ಅವರಿವರಿಗೆ ಥ್ಯಾಂಕ್ಸ್ ಹೇಳ್ಕೊತಾ ಇದ್ದೀರಾ, ನಾವು ಇದನ್ನ ಕೇಳೋಕೆ ಬಂದಿಲ್ಲ, ನಿಮ್ಮ ಸಿನಿಮಾ ಬಗ್ಗೆ ಹೇಳಿ ಅಂತ ಕಿರಿಕಿರಿಯ ಪ್ರಶ್ನೆ ಕೇಳಿದ್ದಾನೆ. ಸಹಜ ವಾಗಿಯೇ ಪರಭಾಷೆಯವರಿಗೆ ನಮ್ಮ ಕನ್ನಡದ ಕೆಜಿಎಫ್ ಸಿನಿಮಾ ಮಾಡುತ್ತಿರುವ ಸದ್ದು, ಸುದ್ದಿ ಹೊಟ್ಟೆ ಉರಿ ತಂದಿದೆ ಅನ್ನೋದು ಎಲ್ಲರಿಗೂ ಗೊತ್ತು. ಅದನ್ನು ಪತ್ರಿಕಾ ಗೋಷ್ಠಿಯಲ್ಲಿ ಈ ಪ್ರಶ್ನೆ ಕೇಳುವ ಮೂಲಕ ತೋರಿಸಿಕೊಂಡು, ತನ್ನ ಅಸಮಾಧಾನ ತೀರಿಸಿಕೊಂಡಿದ್ದಾನೆ ಆ ಪತ್ರಕರ್ತ.

ಆತ ಸದ್ಯದ ತೆರೆಕಾಣಲಿರುವ ಬೀ ಚಿತ್ರದ ನಾಯಕ ವಿಜಯ್ ಅಭಿಮಾನಿಯಾ ಗಿದ್ದಿರಲೂಬಹುದು. ಆದರೆ ಇದನ್ನು ಅವಮಾನ ಅಂದುಕೊಳ್ಳೋದು ಮಾತ್ರ ನಾವು ಮಾಡುತ್ತಿರೋ ತಪ್ಪು. ಅದು ನಮ್ಮ ಕನ್ನಡ ಚಿತ್ರರಂಗದ ಗೆಲುವು ಎಂದುಕೊಳ್ಳೋಣ. ಅಂದ ಹಾಗೆ ಆ ಪತ್ರಕರ್ತನ ಇಂತಹ ವರ್ತನೆ ನಮ್ಮ ಕನ್ನಡ ಸಿನಿಪತ್ರಕರ್ತರಿಗೂ ಹೊರತಲ್ಲ.

ಎಷ್ಟೋ ಪತ್ರಿಕಾಗೋಷ್ಠಿಗಳಲ್ಲಿ ಕೇಳಿರುವ ಸವಕಲು ಡೈಲಾಗ್ ಅದು. ಆದರೆ ನಮ್ಮ ಪತ್ರಕರ್ತರು, ಥ್ಯಾಂಕ್ಸ್ ಹೇಳಿದ್ದು ಸಾಕು, ಸಿನಿಮಾದ ಬಗ್ಗೆ ಹೇಳಿ ಅನ್ನೋದನ್ನ ಯಾರೂ ಗಾಡ್ ಫಾದರ್ ಇಲ್ಲದ ಹೊಸಬರ ಚಿತ್ರದ ಪತ್ರಿಕಾಗೋಷ್ಠಿಗಳಲ್ಲಿ ಮಾಡುತ್ತಾರೆಯೇ ಹೊರತು, ಸ್ಟಾರ್ ಚಿತ್ರಗಳ ಪತ್ರಿಕಾಗೋಷ್ಠಿಗಳಲ್ಲಿ ಕಮಕ್ ಕಿಮಕ್ ಅನ್ನಲ್ಲ. ಅಂದಹಾಗೆ, ಆ ತಮಿಳುನಾಡಿನ ಪತ್ರಕರ್ತ ಮಾಡಿದ್ದೂ ಅದನ್ನೇ. ನಾಳೆ ವಿಜಯ್ ಅಭಿನಯದ ಬೀ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರು ಮತ್ತು ನಟ ವಿಜಯ್ ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತಿದ್ದರೆ, ಥ್ಯಾಂಕ್ಸ್ ಹೇಳಿದ್ದು ಸಾಕು, ನಿಮ್ಮ ಸಿನಿಮಾ ಬಗ್ಗೆ ಮಾತಾಡಿ ಅಂತ ಹೇಳುವ ಮೀಟರ್, ಮನಸ್ಸು ಅವನಿಗೂ ಇರಲ್ಲ.

ಲೂಸ್ ಟಾಕ್
ಧೋನಿ ಜೊತೆಗೆ ರೋಹಿತ್ ಶರ್ಮಾ (ಕಾಲ್ಪನಿಕ ಸಂದರ್ಶನ)
ರೋಹಿತ್- ನಿನ್ನ ಟೀಮ್ ಬಾಟಮ್ ಅಲ್ಲಿ ಇರೋದ್ ನೋಡಿ, ನೀನು ತಲ ಅಲ್ಲ, ತಳ ಅಂತ ತಲಾಕೊಂದೊಂದ್ ಆಡ್ಕೊತಾ ಇದ್ದಾರೆ ಜನ ಧೋನಿ- ‘ಆಡ್ಕೊಳ್ಳೋರು, ಆಡ್ಕೊಳ್ಳಲಿ’, ನಾವು ನಮಗೆ ಬಂದಂಗೆ ‘ಆಡ್ಕೊಳ್ತಾ’ ಇರೋಣ. ರೋಹಿತ್- ನಿನ್ನನ್ನ ಗೇಮ್ ಚೇಂಜರ್ ಅಲ್ಲ. ಬ್ಯಾಟ್ ಚೇಂಜರ್ ಅಂತನೂ ಗೇಲಿ ಮಾಡ್ತಿದ್ಧಾರೆ ಧೋನಿ- ಗೇಲಿ ಮಾಡೋಕೆ ನಾನೇನು, ಗೇಲ್ ಅಲ್ಲ, ಕ್ಯಾಪ್ಟನ್ ಕೂಲ್ ರೋಹಿತ್- ಎಲ್ಲಿಯ ಕ್ಯಾಪ್ಟನ್, ನಿನ್ನ ಬಿಟ್ಟು ಜಡೇಜಾನ್ನ ಕ್ಯಾಪ್ಟನ್ ಮಾಡಿದ್ರಲ್ಲ

ಧೋನಿ- ಅದಕ್ಕೇ ನಾನು ೩ ಮ್ಯಾಚ್ ಸೋತ್ರೂ ಇಷ್ಟು ಕೂಲ್ ಆಗಿರೋದು.
ರೋಹಿತ್- ಆದ್ರೂ, ಏನ್ ಗುರೂ ನಮ್ಮ ಪರಿಸ್ಥಿತಿ, ೩ಕ್ಕೆ ಮೂರು  ಮ್ಯಾಚ್ ಸೋತು, ಎಂಥಾ ಪರಿಸ್ಥಿತಿ ಬಂತು ನಮಗೆ?
ಧೋನಿ- ಡೋಂಟ್ ವರಿ, ೩ಕ್ಕೆ ಮುಕ್ತಾಯ ಅಂದ್ಕೊ.
ರೋಹಿತ್ – ಮೂರಕ್ಕೆ ಮುಕ್ತಾಯನೋ, ನಾಕಕ್ಕೆ ನಾಕ್ ಔಟೋ? ಹಿಂಗೇ ಆದ್ರೆ ಐಪಿಎಲ್ ಮುಕ್ತಾಯ ಆಗುತ್ತೆ ಅಷ್ಟೇ.
ಧೋನಿ- ಈಗ್ಲೇ ಅವಸರ ಬೇಡ. ಇನ್ನೂ ಟೂರ್ನಮೆಂಟ್ ಬಾಕಿ ಇದೆ. ‘ತಳದಲ್ಲಿದ್ದಾನು ಬಾಳಿಯಾನು’

ನೆಟ್ ಪಿಕ್ಸ್

ನ್ಯಾಷನಲ್ ಹೈವೇನಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ದೊಡ್ಡ ಅಪಘಾತವೇ ಆಯಿತು. ಕಾರು ಚಲಾಯಿಸುತ್ತಿದ್ದ ಖೇಮು ಕೆಳಗಿಳಿದು ಬಂದು ನೋಡಿದ. ಇನ್ನೊಂದು ಕಾರಿನಲ್ಲಿದ್ದಿದ್ದು ಒಂದು ಹುಡುಗಿ. ಹಾಗೆ ನೋಡಿದರೆ ಖೇಮುದೇನೂ ತಪ್ಪಿರಲಿಲ್ಲ. ಆಕೆಯೇ – ಆಗಿ
ರಾಂಗ್ ಸೈಡಲ್ಲಿ ಬಂದು ಗುದ್ದಿದ್ದಳು. ಇಬ್ಬರ ಕಾರಿಗೂ ಡ್ಯಾಮೇಜ್ ಆಗಿತ್ತು. ಖೇಮು ಅವಳ ಬಳಿ ಎಲ್ಲದರ ಖರ್ಚು ವಸೂಲಿ ಮಾಡಬೇಕು ಎಂದುಕೊಂಡು ಬಂದ. ಆದರೆ ಹುಡುಗಿಯನ್ನ ನೋಡಿ ಒಂದು ಕ್ಷಣ ಮೈಮರೆತ.

ಅಷ್ಟು ಚೆನ್ನಾಗಿದ್ಳು ಹುಡುಗಿ. ಅವಳು ಸೀದಾ ಇವನ ಬಳಿ ಬಂದವಳೇ, ಕಾಮ್ ಆಗಿ ಮಾತಾಡಿದಳು. ‘ಇಲ್ನೋಡಿ, ಇಬ್ಬರ ಕಾರೂ ಸಿಕ್ಕಾಪಟ್ಟೆ ಡ್ಯಾಮೇಜ್ ಆಗಿದೆ. ಆದರೆ ನಮಗಿಬ್ಬರಿಗೂ ಏನೂ ಆಗಿಲ್ಲ. ಇದರ ಅರ್ಥ ಏನು?’ ಅಂತ ಕೇಳಿದಳು. ‘ಏನು?’ ಅಂದ ಖೇಮು. ‘ನೋಡಿ, ನಮ್ಮಿಬ್ಬರನ್ನು ಸೇರಿಸೋಕೆ ಅಂತನೇ ದೇವರು ಈ ರೀತಿ ಮಾಡಿದ್ದಾನೆ. ಅವನ ಮನಸ್ಸಿನಲ್ಲಿ ನಾವಿಬ್ಬರೂ ಜೊತೆಯಾಗಿ ಜೀವನ ಮಾಡಬೇಕು ಅನ್ನೋ ಆಸೆ ಇದೆ ಅನ್ನಿಸುತ್ತೆ. ಹಾಗಾಗಿ ನಮ್ಮನ್ನ ಈ ರೀತಿ ಭೇಟಿ ಮಾಡಿಸಿದ್ದಾನೆ’ ಅಂತ ರೊಮ್ಯಾಂಟಿಕ್
ಆಗಿ ಹೇಳಿದಳು.

ಅದನ್ನು ಖೇಮು ಒಂದೇ ನಿಮಿಷದಲ್ಲಿ ಅವಳ ಕಡೆ ಆಕರ್ಷಿತನಾದ. ಆ ಹುಡುಗಿ ಮತ್ತೆ ಹೇಳಿದಳು, ‘ಅಲ್ನೋಡಿ, ನನ್ನ ಕಾರು ಅಷ್ಟೊಂದ್ ಡ್ಯಾಮೇಜ್ ಆಗಿದ್ದರೂ, ಅದರಲ್ಲಿದ್ದ ಈ ವಿಸ್ಕಿ ಬಾಟಲ್ ಮಾತ್ರ ಹಾಗೇ ಇದೆ. ಇದರ ಅರ್ಥ, ದೇವರು ನಮ್ಮ ಜೀವನದ ಈ ಪ್ರಮುಖ ಘಳಿಗೆಯನ್ನು ಎಂಜಾಯ್ ಮಾಡಿ ಅಂತ ನಮಗೆ ಹೇಳ್ತಾ ಇದ್ದಾನೆ’. ಖೇಮು ಹೌದು ಅಂತ ತಲೆ ಆಡಿಸಿದ. ತಕ್ಷಣ, ಖೇಮುಗೆ ಒಂದು ಗ್ಲಾಸಿನಲ್ಲಿ ವಿಸ್ಕಿ ಸುರಿದು ಕೊಟ್ಟಳು.

ಅವಳನ್ನು ನೋಡುತ್ತಾ ವಿಸ್ಕಿ ಹೀರುತ್ತಿದ್ದ ಖೇಮುಗೆ ಗ್ಲಾಸ್ ಖಾಲಿ ಆಗಿದ್ದೇ ಗೊತ್ತಾಗಲಿಲ್ಲ. ಮತ್ತೆ ವಿಸ್ಕಿ ಹಾಕಿದಳು ಹುಡುಗಿ. ಅದನ್ನೂ ಹೀರುತ್ತಾ ಖೇಮು, ‘ಅರೇ, ಬರೀ ನನಗೇ ಕುಡಿಸುತ್ತಿದ್ದೀಯ, ನೀನು ಕುಡಿಯಲ್ವಾ?’ ಅಂತ ಕೇಳಿದ. ಅದಕ್ಕೆ ಹುಡುಗಿ ಹೇಳಿದಳು, ಇಲ್ಲ,
ನಾನು ಪೊಲೀಸ್ ಬರ್ಲಿ ಅಂತ ಕಾಯ್ತಾ ಇದ್ದೀನಿ’.

ಲೈನ್ ಮ್ಯಾನ್
ಫುಡ್ qo ಫಿಲಾಸಫಿ
-ಹಸಿವಿಲ್ಲದವನಿಗೆ ಅನ್ನ ಕೊಡಬಾರದು, ಟೇಸ್ಟ್ ಇಲ್ಲದವನಿಗೆ ಬಿರಿಯಾನಿ ಕೊಡಬಾರದು.

ಸಹಕಾರ-ಸರಕಾರ
‘ಒಂದು ನಿಸ್ವಾರ್ಥ ಸೇವೆಯ ಕೆಲಸದ ಮಾಡಬೇಕು ಅಂತಿದ್ದೀವಿ’ ‘ಮಾಡಿ, ಮಾಡಿ, ನನ್ನ ಸಹಕಾರ ಇದ್ದೇ ಇರುತ್ತೆ’ ‘ಹಂಗಾದ್ರೆ ಒಂದ್ ೧೦ ಲಕ್ಷ ಕೊಡಿ’ ‘ನಾನ್ ಹೇಳಿದ್ದು, ನನ್ನ ಸಹಕಾರ ಇದೆ ಅಂತ, ನನ್ನ ಸರಕಾರ ಇದೆ ಅಂತ ಅಲ್ಲ’

ಗಣೇಶ್ ಅಭಿನಯದ ಪಟಾಕಿ ಸಿನಿಮಾ ಶೂಟಿಂಗ್ ಮುಗೀತು ಅಂತ ಹೆಂಗೆ ಹೇಳಬಹುದಾಗಿತ್ತು ?
-ಪ‘ಟಾಕಿ ಪೋರ್ಷನ್’ ಮುಕ್ತಾಯ ಆಯ್ತು

ತನ್ನ ಬ್ಯಾಟಿಂಗ್‌ನಲ್ಲಿ ರನ್ ಹೊಡೆದು, ಬೋಲಿಂಗ್‌ನಲ್ಲಿ ತಾನೂ ಹೊಡೆಸಿಕೊಳ್ಳುವ ಆಲ್ ರೌಂಡರ್ ಒಬ್ಬನ ಪಾಲಿಸಿ
-ದುಡಿದ್ದರಲ್ಲಿ ಮಾತ್ರ ಅಲ್ಲ, ಹೊಡೆದಿದ್ದರಲ್ಲೂ ಒಂದಿಷ್ಟಾದರೂ ದಾನ ಮಾಡಬೇಕು.

ಮದ್ಯಪಾನ ಮಾಡುವವರು ಭಾರತೀಯರಲ್ಲ- ನಿತೀಶ್ ಕುಮಾರ್ ಖೇಮು- ಸರಿನಪ್ಪಾ, ನಾವು ಭಾರತೀಯರಲ್ಲ, ಬಾರ್-ತೀಯರು

ಐಪಿಎಲ್ ಅವಾರ್ಡ್ಸ್ -ಪ್ರತಿ ಮ್ಯಾಚ್ ಮುಗಿದಾಗಲೂ ಒಂದೊಂದ್ ಸ್ಪಾನ್ಸರ್ ಹೆಸರಲ್ಲಿ ಒಂದೊಂದ್ ಅವಾರ್ಡ್ ಕೊಡ್ತಾರೆ. ಹಂಗೆನೇ, ಮ್ಯಾಚಲ್ಲಿ ಜಾಸ್ತಿ ಬಾಲು ‘ತಿಂದವನಿಗೂ’ ಒಂದ್ ಅವಾರ್ಡ್ ಕೊಡ್ರೋ.. ‘ಜೊಮ್ಯಾಟೋ’ದವ್ರು ಸ್ಪಾನ್ಸರ್ ಮಾಡ್ತಾರೆ

ಐಪಿಎಲ್ ಗಾದೆ-ಊಟ ಬಲ್ಲವನಿಗೆ ರೋಗವಿಲ್ಲ, ಆಟ ಬಲ್ಲವನಿಗೆ ಜಗಳವಿಲ್ಲ

ಐಪಿಎಲ್ ಫ್ಯಾನ್ಸ್ ವಿಷ್ಯ -ಎನಿ ಸ್ಪೋರ್ಟ್ ಈಸ್ ನಥಿಂಗ್ ವಿತೌಟ್ ಸಪೋರ್ಟ್

error: Content is protected !!