Sunday, 15th December 2024

ಧ್ಯಾನ್ ಚಂದ್ ವಿಷಯದಲ್ಲೂ ನಾನು ಬೆಲೆ ಏರಿಕೆನೇ ಮಾಡಿರೋದು !

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ
ಹೊಂಬಾಳೆ ಪಿಲ್ಮ್ಸ್ ಈಗ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತದಾದ್ಯಂತ ಸದ್ದು ಮಾಡುತ್ತಿದೆ. ವಿಜಯ್ ಕಿರಂಗಂದೂರು ಅವರು ಈ ಬ್ಯಾನರ್‌ನ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ನಿನ್ನಿಂದಲೇ ಸಿನಿಮಾ ಮಾಡಿ ಸೋತಾಗ, ನಿನ್ನಿಂದಲೇ ಸೋತೆ ಒಪ್ಪಿಕೋ ಎಂದು ಆಡಿಕೊಂಡವರು ಈ ಹೊಂಬಾಳೆ ಇಷ್ಟರ ಮಟ್ಟಕ್ಕೆ ಬೆಳೆಯುತ್ತೆ ಅಂತ ಅಂದುಕೊಂಡಿರಲಿಲ್ಲ. ಈಗ ಈ ಹೊಂಬಾಳೆಯ ಗೊನೆ, ಕೊನೆ ಇಲ್ಲ ಎಂಬಂತೆ ಬೆಳೆಯುತ್ತಿದೆ.

ಅದಕ್ಕೆ ಕಾರಣ ಕೆಜಿಎಫ್ ಎಂದರೆ ತಪ್ಪಿಲ್ಲ. ಇದರ ನಂತರ ಕೆಜಿಎಫ್ 2 ಮತ್ತು ಸಲಾರ್ ಅನ್ನೋ ತೆಲುಗು ಸಿನಿಮಾ ಮೂಲಕ ಸದ್ದು ಮಾಡಿತ್ತು ಈ ಬ್ಯಾನರ್. ಇದರ ಜತೆಗೆ ಪುನೀತ್ ಅವರ ಜತೆಗೆ ರಾಜಕುಮಾರ ಸಿನಿಮಾ ಮಾಡಿ ಗೆದ್ದಿತ್ತು. ಈಗ ಮತ್ತೆ ಪುನೀತ್ ಜತೆ ದ್ವಿತ್ವ ಸಿನಿಮಾ ಕೂಡ ಅನೌನ್ಸ್ ಮಾಡಿದೆ.

ಆದರೆ
ಅದಾದ ನಂತರ ತಾನು ಕೇವಲ ಯಶ್, ಪುನೀತ್ ಮತ್ತು ಪ್ರಶಾಂತ್ ನೀಲ್ ಅವರಿಗೆ ಮಾತ್ರ ಸೀಮಿತ ಅಲ್ಲ ಎನ್ನುವಂತೆ ಈಗ ಕನ್ನಡದ ಎಲ್ಲ ನಟರನ್ನೂ ಟಚ್ ಮಾಡಲು ಶುರು ಮಾಡಿದೆ ಹೊಂಬಾಳೆ. ಈ ಮೊದಲು ಶ್ರೀ ಮುರಳಿ ಅವರ ಜತೆ ಭಗೀರಾ ಚಿತ್ರ ಘೋಷಣೆ ಆಗಿತ್ತು.

ಇತ್ತೀಚೆಗೆ ತಾನೇ ರಕ್ಷಿತ್ ಶೆಟ್ಟಿ ನಿರ್ದೇಶನದ ರಿಚರ್ಟ್ ಆಂಟನಿ ಚಿತ್ರ ಅನೌನ್ಸ್ ಆಗಿದ್ದು ಇದೇ ಹೊಂಬಾಳೆ ಬ್ಯಾನರ್‌ನಿಂದ. ಈಗ ರಿಷಬ್ ಶೆಟ್ಟಿ ಅವರ ಜತೆಗೂ ಕಾಂತಾರ ಅನ್ನೋ ಚಿತ್ರ ಅನೌನ್ಸ್ ಮಾಡಿದೆ ಹೊಂಬಾಳೆ. ಇದನ್ನೆಲ್ಲಾ ನೋಡಿ, ಹಿಂದೊಮ್ಮೆ, ಹೊಂಬಾಳೆ, ಹೊಂಬಾಳೆ ಅಂತ ತಮ್ಮ ಸಿನಿಮಾದಲ್ಲಿ ಹಾಡಿದ್ದ ನಮ್ಮ ನವರಸ ನಾಯಕ ಜಗ್ಗೇಶ್, ನಿಮ್ ಬ್ಯಾನರ್‌ನಲ್ಲಿ ನನ್ನಾಸೆಯ ಹೂವೇ ಪಾರ್ಟ್ 2 ಮಾಡೋಣ್ವೇ ಅಂತ ಕೇಳಿದ್ರು ಅನ್ನೋದು ಮಾತ್ರ ಶುದ್ಧ ಸುಳ್ಳು.

ಲೂಸ್ ಟಾಕ್

ನರೇಂದ್ರ ಮೋದಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ನೀವು ರಾಜೀವ್ ಗಾಂಽ ಹೆಸರಲ್ಲಿದ್ದ ಅವಾರ್ಡ್‌ನ ಧ್ಯಾನ್ ಚಂದ್‌ಗೆ ಬರೆದು ಕೊಟ್ರಿ ಅಂತ ತುಂಬಾ ಜನ ನಿಮ್ಮನ್ನ ಆಡ್ಕೋತಾ ಇದ್ದಾರಲ್ಲ?
– ದೇಶದ ಜನ ಕೇಳಿದ್ರು ಅಂತ ನಾನು ಈ ಬದಲಾವಣೆ ಮಾಡಿದ್ದು. ನನ್ನ ವಿರೋಧಿಗಳದ್ದು ಬಿಡಿ, ಅವರದ್ದು ಸದಾಶಿವನಿಗೆ ಅದೇ “ಧ್ಯಾನ” ಅನ್ನೋ ಮನಸ್ಥಿತಿ.

ಅಲ್ಲಾ ಸಾರ್, ಅದೇ ದೇಶದ ಜನ ಬೆಲೆ ಏರಿಕೆ ಬಗ್ಗೆನೂ ಯೋಚನೆ ಮಾಡಿ, ಕಡಿಮೆ ಮಾಡಿ ಅಂತ ಕೇಳ್ತಾ ಇದ್ದಾರಲ್ಲ, ಆ ಮಾತನ್ನ ಯಾಕೆ ಕೇಳಲ್ಲ ನೀವು?
– ಹಂಗೆಲ್ಲಾ ಬೆಲೆ ಕಡಿಮೆ ಮಾಡೋಕಾಗಲ್ಲ. ರಾಜೀವ್ ಗಾಂಧಿ ಹೆಸರು ಬದಲಾಯಿಸಿ ಧ್ಯಾನ್ ಚಂದ್ ಹೆಸರು ಇಟ್ಟು ಈ ವಿಷಯದಲ್ಲೂ ನಾನು ಧ್ಯಾನ್ ಚಂದ್ ಅವರ “ಬೆಲೆ ಏರಿಕೆ”ನೇ ಮಾಡಿರೋದು ಗೊತ್ತಾ?

ಓ ಹಂಗೆ, ಸರಿ, ಆದ್ರೆ ನಿಮಗೂ ಕ್ರೀಡೆಗೂ ಏನ್ ಸಂಬಂಧ, ನೀವೇನು ಧ್ಯಾನ್ “ಚಂದ್ ಕಾ ತುಕ್ಡಾ” ನಾ, ನೀವ್ಯಾಕೆ ಸ್ಟೇಡಿಯಂಗೆ ನಿಮ್ಮ ಹೆಸರಿಟ್ಟುಕೊಂಡಿದ್ದೀರಿ ಅನ್ನೋ ಪ್ರಶ್ನೆಗೆ ನಿಮ್ಮ ಉತ್ತರ ಏನು?
– ನೋಡ್ರೀ “ಸ್ಟೇ”ಡಿಯಂಗೆ ನನ್ನ ಹೆಸರಿಟ್ಟಿರೋದಕ್ಕೆ ತಕರಾರಿದ್ರೆ, ನೀವು ಕೋರ್ಟ್‌ಗೆ ಹೋಗಿ “ಸ್ಟೇ” ತನ್ನಿ. ನೌ ದ ಬಾಲ್ ಈಸ್ ಇನ್ ಯುವರ್ ಕೋರ್ಟ್.

ಓ, ಬಾಲು, ಕೋರ್ಟು ಅಂತ ಹೇಳಿ, ನಿಮಗೂ ಆಟಕ್ಕೂ ಸಂಬಂಧ ಇದೆ ಅಂತ ಪ್ರೂವ್ ಮಾಡೋಕೆ ನೋಡ್ತಾ ಇದ್ದೀರಾ?
– ಮತ್ತೆ, ನಾವ್ ಆಡ್ದೇ ಇರೋ ಆಟನಾ. ಎಲ್ಲಾ ಆಟಗಳಲ್ಲೂ ಗೆದ್ದವರಿಗೆ ಪದಕನೇ ಸಿಗಬೇಕಾಗಿಲ್ಲ. ಕೆಲವು ಆಟದಲ್ಲಿ ಗೆದ್ರೆ ಪದವಿನೂ ಸಿಗುತ್ತೆ. ರಾಜಕೀಯದಲ್ಲಿ ಎಷ್ಟ್ “ಗೋಲ್” ಮಾಲ್ ಮಾಡಿಲ್ಲ ನಾವು.

ಅಲ್ಲಾ ಸಾರ್, ನೀವಿಂಗೆ ಹಿಂದಿನ ಸರಕಾರ ಇಟ್ಟ ಹೆಸರುಗಳನ್ನೆಲ್ಲಾ ಬದಲಾವಣೆ ಮಾಡೋದನ್ನ ನೋಡಿ, ಕಾಂಗ್ರೆಸ್‌ನವರು, ಬಸ್ರು ನಮ್ದು, ಹೆಸ್ರು ನಿಮ್ದು ಅಂತ ಗೇಲಿ ಮಾಡಲ್ವಾ?
– ಒಂದ್ ಹೆಸ್ರು ಬದ್ಲಾಯಿಸಿದ್ದಕ್ಕೆ ಇಷ್ಟೊಂದು ರಂಪ ಮಾಡ್ತೀರಲ್ಲ, ನೀವು ಮೊದ್ಲು ಪಂಚಕಜ್ಜಾಯ ಅಂತ ಬರೀತಿದ್ರಿ, ಆಮೇಲೆ ಹರಿಕಥೆ, ಈವಾಗ ತುಂಟರಗಾಳಿ ಅಂತೆಲ್ಲಾ ಹೆಸರು ಬದಲಾಯಿಸಿಕೊಂಡಾಗ ನಾವ್ ಕೇಳಿದ್ವಾ… ಬಂದ್ಬಿಟ್ರು ನಂಗ್ ಹೇಳೋಕೆ, ಹೋಗ್ರೀ ಹೋಗ್ರೀ..

ನೆಟ್ ಪಿಕ್ಸ್
ಖೇಮು ಹುಟ್ಟಾ ಕುರುಡ. ಆದರ ಜತೆಗೆ ಹುಟ್ಟಾ ಕುಡುಕ. ಊರಲ್ಲಿರೋ ಎಲ್ಲಾ ಬಾರುಗಳು, ಪಬ್ಬುಗಳು ಅವನಿಗೆ ಚೆನ್ನಾಗಿ ಗೊತ್ತಿದ್ದವು. ಕುರುಡನಾದ್ರೂ ಹೋದ ಕಡೆಯಲ್ಲೆಲ್ಲಾ ಹುಡುಗಿಯರನ್ನ ಪಟಾಯಿಸಿ ಪ್ಲೇ ಬಾಯ್ ಎನಿಸಿಕೊಂಡಿದ್ದ. ಹೀಗಿದ್ದ ಖೇಮು ಒಂದಿನ ಒಂದು ಹೊಸ ಪಬ್ಬಿಗೆ ಹೋದ. ಖೇಮುಗೆ ಒಂದು ಸ್ಪೆಷಲ್ ಕಲೆ ಇತ್ತು. ಏನಂದ್ರೆ ಅಲ್ಲಿ ಕುಡಿಯುವಾಗ ತಿನ್ನೋಕೆ ಅಂತ ಫುಡ್ ತರಿಸುವಾಗ ಅವನು ಆ ಡಿಷ್‌ನಲ್ಲಿ ಅದ್ದಿ ತೆಗೆದ ಸ್ಪೂನ್ ಅನ್ನು ಮೂಸಿ ನೋಡಿ ಅದು ಯಾವ ಡಿಷ್ ಎಂದು ಕಂಡು ಹಿಡಿದು ಆರ್ಡರ್ ಮಾಡುತ್ತಿದ್ದ.

ಅಂದು ಕೂಡಾ ಒಂದು ಹೊಸ ಪಬ್ಬಿಗೆ ಹೋಗಿದ್ದರಿಂದ ವೈಟರ್‌ನ ಕರೆದು, ಡ್ರಿಂಕ್ಸ್ ಹೇಳಿದ. ಸೈಡ್ ಡಿಶ್ ಏನು ಕೊಡ್ಲಿ ಅಂತ ಅವನು ಕೇಳಿದಾಗ, ಖೇಮು ಹೇಳಿದ, ನೀವು ತಯಾರಿಸಿದ ಡಿಶ್‌ನಲ್ಲಿ ಇಟ್ಟಿರೋ ಸ್ಪೂನ್ ತಗೊಂಡ್ ಬಾ. ಸ್ಮೆಲ್ ನೋಡಿ ಹೇಳ್ತೀನಿ ಅಂದ. ವೈಟರ್‌ಗೆ ಆಶ್ಚರ್ಯ ಆದ್ರೂ,. ಸರಿ ಅಂತ ಒಳಗೆ ಹೋಗಿ ಒಂದು ಸ್ಪೂನ್ ತಗೊಂಡ್ ಬಂದು ಕೊಟ್ಟ. ಖೇಮು ಅದನ್ನು ಮೂಸಿ ನೋಡಿ, ಸರಿ ಈ ಚೈನೀಸ್ ಶೆಜ್ವಾನ್ ಫುಡ್ ಚಿಕನ್ ಚೆನ್ನಾಗಿರುತ್ತೆ, ಒಂದ್ ಪ್ಲೇಟ್ ತಗೊಂಡ್ ಬಾ ಅಂದ. ವೈಟರ್‌ಗೆ ಆಶ್ಚರ್ಯ ಆಯ್ತು.

ಸರಿ ಒಂದು ಪ್ಲೇಟ್ ಅದೇ ಚಿಕನ್ ತಂದುಕೊಟ್ಟ. ಖೇಮು ಮುಂದಿನ ಬಾರಿ ಇನ್ನೊಂದು ಡಿಷ್ ಆರ್ಡರ್ ಮಾಡುವಾಗ ಮತ್ತೆ ಸ್ಪೂನ್ ತಗೊಂಡ್ ಬಾ ಅಂದ. ಈ ಬಾರಿ ಅವನನ್ನು ಆಟ ಆಡಿಸಬೇಕು ಅಂತ ಡಿಸೈಡ್ ಮಾಡಿದ ವೈಟರ್, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಹೆಂಡತಿಯನ್ನು ಕರೆದು, ಈ ಸ್ಪೂನ್ ಅನ್ನು ನಿನ್ನ ಬಾಯಲ್ಲಿ ಒಂದು ಸಲ ಚೀಪಿ, ಆಮೇಲೆ ಅದನ್ನು ನಿನ್ನ ಲಿಪ್ ಸ್ಟಿಕ್‌ಗೆ ಒರೆಸಿಕೊಡು ಅಂದ. ಹೆಂಡತಿ ಯಾಕೆ ಅಂದ್ಳು. ಸುಮ್ನೆ ಹೇಳಿದಷ್ಟು ಮಾಡು ಅಂತ
ಮಾಡಿಸಿ ಆ ಸ್ಪೂನ್ ಅನ್ನು ತಗೊಂಡ್ ಬಂದು ಖೇಮುಗೆ ಕೊಟ್ಟ. ಖೇಮು ಅದನ್ನು ಮೂಸಿ ನೋಡಿ ಹೇಳಿದ “ಓ, ಲಿಂಡಾ ಈವಾಗ ನಿಮ್ ಹೋಟಲ್‌ನಲ್ಲಿ ಕೆಲ್ಸ ಮಾಡ್ತಾ ಇದ್ದಾಳಾ?”

ಲೈನ್ ಮ್ಯಾನ್

ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸಿ ಧ್ಯಾನ್ ಚಂದ್ ಹೆಸರಿಟ್ಟಿದ್ದಕ್ಕೆ ಕೆಲವರ ಆರೋಪ
– ಧ್ಯಾನ್ ಚಂದ್ ಉತ್ತರಪ್ರದೇಶದವರು, ಹಂಗಾಗಿ ಕಮಿಂಗ್ ಎಲೆಕ್ಷನ್‌ಗೋಸ್ಕರ ಇದೆಲ್ಲಾ ಮಾಡ್ತಿರೋದು.

ಮೋದಿ ಸೆಮಿ-ನಲ್ ಮ್ಯಾಚ್ ನೋಡಿದ್ದಕ್ಕೇ ನಮ್ಮೋರು ಹಾಕಿ ಮ್ಯಾಚ್ ಸೋತಿದ್ದು. ಅವ್ರು ಐರನ್ ಲೆಗ್- ವಿರೋಧಿಗಳು
– ಹಂಗಾದ್ರೆ, ಐರನ್ ಮೆಡಲ್ ಬರಬೇಕಿತ್ತಲ್ವಾ?

ನಮ್ಮವರಿಗೆ ಸಚಿವ ಸ್ಥಾನ ಕೊಡದಿದ್ರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕ್ತೀವಿ- ಸ್ವಾಮೀಜಿ
– ಇವ್ರದ್ದೇನು “ಮುತ್ತಿಗೆ ಮಠ”ನಾ?

ಇಂದಿನ ಸರಕಾರಗಳಲ್ಲಿ ಮಿನಿಸ್ಟರ್ ಆಗೋಕೆ ಬರೀ ಸಜ್ಜನ ಆಗಿದ್ರೆ ಆಗಲ್ಲ
– ಅವ್ರ್ “ಯಾವ್ ಜನ” ಅನ್ನೋದೂ ಮುಖ್ಯ ಆಗುತ್ತೆ.

ನಗರದ ಹೊರವಲಯದಲ್ಲಿ ಸೈಟ್ ತಗೊಂಡೋರು ಆಗಾಗ ಹೋಗಿ ನೋಡ್ಕಂಡ್ ಬರೋದು
– ಸೈಟ್ ಸೀಯಿಂಗ್

ಮಕ್ಕಳ ಭಾಷೆ ಖೇಮು- ಕೊಳಿ ಕೊಯ್ದ್ರೇನೋ?
– ಮರಿಖೇಮು- ಇನ್ನೂ ಇಲ್ಲಾ ಪಪ್ಪಾ, ಬರೀ ಡ್ರೆಸ್ ಬಿಚ್ಚವ್ರೇ

ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಲವ್ಲಿನಾ ಅವರ ಊರಿಗೆ “ರಸ್ತೆ” ಮಾಡಿಸಿದ ಶಾಸಕ
– ಲವ್ಲಿನಾ- ಒಲಂಪಿಕ್ಸ್ ವರೆಗೆ ನಡೆದು ಬಂದ “ದಾರಿ” ಅಂತ ಒಂದು ಆರ್ಟಿಕಲ್ ಬರೀಬಹುದು.

ರೌಡಿಗಳಿಗೆ ಇರಬೇಕಾದ ಸ್ಕಿಲ್
– “ಚಾಕು”ಚಕ್ಯತೆ

ಮಿರರ್ ಮಾರುವವನಿಗೆ ಒಂದು ಹೆಸರು
– “ಕನ್ನಡಿ”ಗ

ರಾಮುಲುಗೆ ಎಸ್‌ಟಿ ಕಲ್ಯಾಣ ಖಾತೆ
– ಆ ಖಾತೆ ನಂಗೆ ಕೊಡಬೇಕಾಗಿತ್ತು- ಎಸ್.ಟಿಸೋಮಶೇಖರ್

ಶಶಿಕಲಾ ಜೊಲ್ಲೆಗೆ ಮುಜರಾಯಿ ಖಾತೆ
– ಜನ ಮೊಟ್ಟೆ ಕಾಸು, ತಟ್ಟೆಕಾಸು ಅಂತ ಟ್ರೋಲ್ ಮಾಡ್ಲಿ ಅಂತನೇ ಅವರಿಗೆ ಈ ಖಾತೆ ಕೊಟ್ಟಿದ್ದಾ?

ನೂತನ ಸಚಿವ ಸಂಪುಟದ ಬಗ್ಗೆ ಒಂದ್ ಡೌಟು
– ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು ಯಾವ ಕೋಟಾದಲ್ಲಿ?

ಯಾರನ್ನಾದ್ರೂ ಪರೀಕ್ಷೆ ಮಾಡಬೇಕು ಅಂತ ಅವರಿಗೆ ಸಚಿವ ಸ್ಥಾನ ಕೊಟ್ರೆ ಅದು
– ಸಂ”ಪುಟಕ್ಕಿಟ್ಟ ಚಿನ್ನ”

ಆಟೋ ಗ್ಯಾಸ್ ದರವೂ ಏರಿಕೆ ಆಗಿದೆ
– ಈಗ ಮೋದಿ “ರಿಕ್ಷಾ ಪೇ ಚರ್ಚಾ” ಮಾಡ್ತಾರಾ?