Wednesday, 9th October 2024

ಕಳ್ಳನೂ ಧ್ಯಾನ ಕಲಿಯಬಹುದು

ವೇದಾಂತಿ ಹೇಳಿದ ಕಥೆ

ಶಶಾಂಕ್ ಮುದೂರಿ

ದಕ್ಷಿಣ ಭಾರತದಲ್ಲಿದ್ದ ಬೌದ್ಧ ಋಷಿ ನಾಗಾರ್ಜುನರು, ಒಂದು ದಿನ ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಅರಮನೆಯಲ್ಲಿದ್ದ ರಾಣಿ ಅವರನ್ನು ಬರಹೇಳಿ, ಬೋಧನೆ ಗಳನ್ನು ಹೇಳಿಸಿಕೊಂಡಳು. ನಾಗಾರ್ಜುನರು ಹೊರಡುವಾಗ, ರಾಣಿ ಕೇಳಿದಳು:‘ಸ್ವಾಮಿ, ನನಗೆ ನೀವು ಭಿಕ್ಷಾಟನೆ ಮಾಡುವ ಪಾತ್ರೆ ಬೇಕು’ ಎಂದಳು ರಾಣಿ.

ನಾಗಾರ್ಜುನರು ತಮ್ಮ ಮರದ ಭಿಕ್ಷಾಪಾತ್ರೆ ಕೊಟ್ಟರು. ರಾಣಿ ಒಂದು ಚಿನ್ನದ ಪಾತ್ರೆ ಕೊಟ್ಟಳು. ‘ಗುರುಗಳೆ, ಚಿನ್ನದ, ವಜ್ರಗಳಿಂದ ಅಲಂಕೃತ ಈ ಭಿಕ್ಷಾ ಪಾತ್ರೆಯನ್ನು ನೀವು ಇಟ್ಟುಕೊಳ್ಳಿ. ನಿಮ್ಮಂತಹ ಮಹಾಮಹಿಮರು ಸಾಮಾನ್ಯ ಮರದ ಭಿಕ್ಷಾಪಾತ್ರೆ ಇಟ್ಟು ಕೊಂಡರೆ ಶೋಭೆಯಲ್ಲ’ ಎಂದಾಗ, ನಾಗಾರ್ಜುನರು ಮರುಮಾತಾಡದೆ ತೆಗೆದು ಕೊಂಡರು.

ಊರಿನಿಂದ ಹೊರಗಿರುವ ಪಾಳು ಮಂಟಪವೇ ನಾಗಾರ್ಜುನರ ವಾಸಸ್ಥಾನ. ಅವರು ಆ ಬೆಲೆಬಾಳುವ ಭಿಕ್ಷಾಪಾತ್ರೆಯನ್ನು ಕೈಯಲ್ಲಿ ಹಿಡಿದು ಹೋಗುವಾಗ, ಒಬ್ಬ ಕಳ್ಳ ಅವರನ್ನು ಹಿಂಬಾಲಿಸಿದ. ಚಿನ್ನದ ಭಿಕ್ಷಾಪಾತ್ರೆಯನ್ನು ಕದಿಯಬೇಕು ಎಂದು ಹೊಂಚು ಹಾಕುತ್ತಾ ಕುಳಿತ. ಅಲ್ಲಲ್ಲೇ ಸುಳಿದಾಡುತ್ತಿದ್ದ ಕಳ್ಳನನ್ನು ಕಂಡ ನಾಗಾರ್ಜುನರು, ಚಿನ್ನದ ಭಿಕ್ಷಾ ಪಾತ್ರೆಯನ್ನು  ಬಾಗಿಲಿನಿಂದ ಹೊರಗೆ ಎಸೆದರು.

ಕಳ್ಳನಿಗೆ ತುಂಬಾ ಸಂತೋಷವಾಯಿತು. ಕಷ್ಟಪಟ್ಟು ಕಳ್ಳತನ ಮಾಡಬೇಕು ಎಂದುಕೊಂಡಿದ್ದ ವಸ್ತು, ಸಲೀಸಾಗಿ ಸಿಕ್ಕಿದ್ದನ್ನು ಕಂಡು ಅವನೆಷ್ಟು ಖುಷಿಗೊಂಡನೆಂದರೆ, ಗುರುಗಳಿಗೆ ಧನ್ಯವಾದ ಸಮರ್ಪಿಸಬೇಕು ಎಂಬ ಮನಸ್ಸಾಯಿತು. ‘ಗುರುಗಳೇ, ನನಗೆ ನಂಬಲು ಆಗುತ್ತಿಲ್ಲ, ಬೆಲೆಬಾಳುವ ಚಿನ್ನದ ಭಿಕ್ಷಾಪಾತ್ರೆಯನ್ನು ಬೀದಿಗೆ ಎಸೆದು ಬಿಟ್ಟಿರುವಿರಲ್ಲಾ. ಬೆಲೆಬಾಳುವ ವಸ್ತುಗಳನ್ನು ತ್ಯಾಗ ಮಾಡುವ ನಿಮ್ಮನ್ನು ಕಂಡು ನನಗೆ ಅಚ್ಚರಿ ಆಗಿದೆ.’ ಎಂದ ಆ ಕಳ್ಳ. ನಾಗಾರ್ಜು ನರು ‘ಬೆಲೆಬಾಳುವ ಭಿಕ್ಷಾ ಪಾತ್ರೆ ನನ್ನಲ್ಲಿ ಇದ್ದಷ್ಟೂ ಅಪಾಯ. ಅದಕ್ಕೇ ಎಸೆದೆ. ನೀನೇ ಇಟ್ಟುಕೋ’ ಎಂದರು.

ಕಳ್ಳ ಅವರ ಕಾಲಿಗೆ ನಮಸ್ಕರಿಸಿ, ಕೇಳಿದ: ‘ನಿಮ್ಮ ರೀತಿ ನಾನು ಆಗ ಬೇಕಾದರೆ ಎಷ್ಟು ಜನ್ಮ ಬೇಕಾಗುತ್ತೆ?’‘ಮನಸ್ಸು ಮಾಡಿದರೆ ಇದೇ ಜನ್ಮದಲ್ಲಿ ನೀನು ಒಳ್ಳೆಯವನಾಗ ಬಹುದು’ ಎಂದರು ಗುರುಗಳು. ಕಳ್ಳನಿಗೆ ಅಚ್ಚರಿಯಾಯಿತು. ‘ಗುರುಗಳೇ, ನಾನು ಕಳ್ಳತನ
ದಿಂದಲೇ ಜೀವನ ಮಾಡಿದವನು. ಎಲ್ಲಿ ಬೇಕಾದರೂ ಕಳ್ಳತನ ಮಾಡುವ ಚಾಕಚಕ್ಯತೆ ನನ್ನಲ್ಲಿದೆ. ಅರಮನೆಯಲ್ಲೇ ಒಮ್ಮೆ ಕಳ್ಳತನ ಮಾಡಿದ್ದೇನೆ. ಕಳ್ಳತನ ಬಿಟ್ಟರೆ ನನಗೆ ಬೇರೇನೂ ಗೊತ್ತಿಲ್ಲ. ನನ್ನ ವೃತ್ತಿಯನ್ನು ಬಿಡಬೇಕು ಎಂದು ಮಾತ್ರ ನೀವು ಹೇಳಬಾ ರದು. ನನ್ನ ಹೊಟ್ಟೆ ತುಂಬುವುದು ಆ ಕೆಲಸದಿಂದ ಮಾತ್ರ’ ಎಂದ. ನಾಗಾರ್ಜುನರು ನಸುನಕ್ಕು, ‘ನಿನ್ನ ವೃತ್ತಿಯನ್ನು ಮಾಡುವುದು, ಬಿಡುವುದು ನಿನಗೆ ಬಿಟ್ಟದ್ದು. ಆದರೆ ಮೋಕ್ಷ ಪಡೆಯಲು, ನಿನಗೆ ಒಂದು ಉಪಾಯ ಹೇಳಿಕೊಡುತ್ತೇನೆ’ ಎಂದರು. ಕಳ್ಳನು ಸರಿ ಎಂದ.

‘ಭಗವಾನ್ ಬುದ್ಧರು ಹೇಳಿದ್ದಾರೆ, ಉಸಿರಿನ ಮೇಲೆ ಗಮನ ಇಟ್ಟರೆ ಮನಸ್ಸು ಪರಿಶುದ್ಧ ಆಗುತ್ತದೆ ಎಂದು. ಯಾವಾಗಲೂ ನಿನ್ನ
ಉಸಿರಿನ ಮೇಲೆ ಗಮನ ಇಡು. ಮೂಗಿನಲ್ಲಿ ಗಾಳಿ ಒಳಗೆ ಹೋಗುವುದು, ಹೊರಗೆ ಬರುವುದು ಇದರ ಮೇಲೆ ಧ್ಯಾನ ಮಾಡು. ನೀನು ಕಳ್ಳತನ ಮಾಡುವಾಗ ಸಹ, ಉಸಿರಿನ ಮೇಲೆ ಗಮನ ಇಡು. ಒಳ್ಳೆಯದಾಗುತ್ತದೆ’ ಎಂದರು ಗುರುಗಳು. 15 ದಿನಗಳ ನಂತರ ಕಳ್ಳ ವಾಪಸಾಗಿ, ನಾಗಾರ್ಜುನರ ಕಾಲಿಗೆ ಬಿದ್ದ. ‘ಗುರುಗಳೇ, ನೀವು ಹೇಳಿ ಕೊಟ್ಟ ತಂತ್ರ ನನ್ನನ್ನೇ ಆವರಿಸಿ ಬಿಟ್ಟಿದೆ.

ಕಳ್ಳತನ ಮಾಡುವಾಗಲೂ, ನನ್ನ ಉಸಿರಿನ ಮೇಲೆ ಧ್ಯಾನ ಮಾಡುವ ಕೆಲಸ ಸಾಧ್ಯವೇ ಇಲ್ಲ. ನನ್ನ ಉಸಿರನ್ನು ಗಮನಿಸುತ್ತಾ, ಗಮನಿಸುತ್ತಾ, ನಾನೀಗ ಮೌನಿಯಾಗಿದ್ದೇನೆ. ಈಗ ಚಿನ್ನ ಮತ್ತು ವಜ್ರಗಳು ನನಗೆ ಮಣ್ಣು, ಕಲ್ಲುಗಳ ರೀತಿ ಕಾಣಿಸುತ್ತಿದೆ. ಉಸಿರಿನ ಮೇಲಿನ ಧ್ಯಾನ ಚೆನ್ನಾಗಿದೆ, ಆದರೆ ಕಳ್ಳತನ ಮಾಡುವುದೋ, ಬಿಡುವುದೋ ಎಂಬ ಗೊಂದಲ ಉಂಟಾಗಿದೆ. ಏನು ಮಾಡಲಿ’ ಎಂದು ಕೇಳಿದ. ‘ಆಯ್ಕೆ ನಿನ್ನದು. ನಿನಗೆ ಈಗ ಧ್ಯಾನದ ಶಕ್ತಿ ಗೊತ್ತಾ ಗಿದೆ. ಅದರ ಮೂಲಕ ನಿನಗೆ ಶಾಂತಿ, ನೆಮ್ಮದಿ, ಆತ್ಮೋನ್ನತಿ ಬೇಕಿದ್ದರೆ ಉಸಿರನ್ನು ಗಮನಿಸು.

ಅದು ಬೇಡವಾದರೆ, ಚಿನ್ನ, ಬೆಳ್ಳಿಯಲ್ಲೇ ನಿನಗೆ ಸಂತೋಷ ಸಿಗುವುದಾದರೆ, ಕಳ್ಳತನ ಮಾಡಲು ಹೋಗು. ಆಯ್ಕೆ ನಿನ್ನದು. ಇದರಲ್ಲಿ ನನ್ನದೇನೂ ಇಲ್ಲ’ ಎಂದರು ಗುರುಗಳು. ಕಳ್ಳನು ನಾಗಾರ್ಜುನರ ಕಾಲನ್ನು ಹಿಡಿದು, ‘ಗುರುಗಳೇ, ನಾನು ಪುನಃ ಆ ಕತ್ತಲ ಲೋಕಕ್ಕೆ ಹೋಗಲಾರೆ. ನಾನು ನಿಮ್ಮಂತೆ ಆಗಬೇಕು. ನನಗೆ ಉಸಿರಿನ ಮೇಲಿನ ಧ್ಯಾನವೇ ಇಷ್ಟ. ಇದೇ ಕುಟೀರದಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ, ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ’ ಎಂದು ಗೋಗರೆದ. ನಾಗಾರ್ಜುನರು ನಸುನಕ್ಕು, ಅವನನ್ನು ಆಶೀರ್ವದಿಸಿದರು.