Sunday, 15th December 2024

ಓಷಧ ಚಿಕಿತ್ಸೆಯಿಂದ ಮಧುಮೇಹ ಹಿಮ್ಮೆಟಿಸಬಹುದೇ ?

ಸ್ವಾಸ್ಥ್ಯ ಸಂಪದ

yoganna55@gmail.com

ಸಕ್ಕರೆ ಕಾಯಿಲೆ, ಸಮರ್ಥ ನಿರಂತರ ಚಿಕಿತ್ಸೆಯಿಂದ ನಿಯಂತ್ರಿಸಬಲ್ಲ ದೇಹಸ್ನೇಹಿ ಅವ್ಯವಸ್ಥೆ. ಬಹುಪಾಲು ಸಂದರ್ಭಗಳಲ್ಲಿ
ಮಧುಮೇಹ ನಿಯಂತ್ರಣಕ್ಕೆ ಔಷಧ ಚಿಕಿತ್ಸೆ ಅನಿವಾರ್ಯವಾಗುತ್ತದೆ ಹಾಗೂ ಜೀವನವಿಡಿ ಔಷಧಗಳನ್ನು ಮಧುಮೇಹಿಗಳು ಸೇವಿಸಬೇಕಾಗಿರುವುದರಿಂದ ಮತ್ತು ಔಷಧಗಳ ಏರುಪೇರುಗಳಿಂದ ಗಂಭೀರ ಪ್ರಮಾಣದ ತೊಂದರೆಗಳು ಉಂಟಾಗುವ ಸಾಧ್ಯತೆಯಿರುವುದರಿಂದ ತಾವು ಸೇವಿಸುತ್ತಿರುವ ಸಕ್ಕರೆ ಕಾಯಿಲೆ ನಿಯಂತ್ರಕ ಔಷಧಗಳ ಬಗ್ಗೆ ಕನಿಷ್ಠ ತಿಳಿವಳಿಕೆ ಇರಬೇಕಾ ದುದು ಅತ್ಯವಶ್ಯಕ.

ಸಕ್ಕರೆ ಕಾಯಿಲೆ ವಾಸಿಯಾಗುತ್ತದೆ ಮತ್ತು ಕೇಜಿಗಟ್ಟಲೆ ಸಿಹಿ ತಿಂದರೂ ಏನೂ ಆಗುವು ದಿಲ್ಲ ಎಂಬ ವಾಣಿಜ್ಯ ಜಾಹೀರಾತುಗಳು ಎಲ್ಲ ಮಾಧ್ಯಮಗಳಲ್ಲೂ ಬಿತ್ತರಗೊಂಡು ಜನರನ್ನು ದಾರಿತಪ್ಪಿಸುತ್ತಿವೆ. ಈ ಜಾಹೀರಾತುಗಳನ್ನು ನಂಬಿ ಔಷಧಗಳನ್ನು ಬಿಟ್ಟು ಕಾಯಿಲೆಯನ್ನು ಏರಿಸಿಕೊಂಡು ಹಲವಾರು ಅವಘಡಗಳಿಗೆ ಈಡಾಗುತ್ತಿರುವ ರೋಗಿಗ ಳನ್ನು ಪ್ರತಿನಿತ್ಯ ನೋಡುತ್ತಿದ್ದೇನೆ.

ಯಾರಿಗೆ ಯಾವ ಚಿಕಿತ್ಸೆ? ಔಷಧಗಳನ್ನು ಯಾವಾಗ ಸೇವಿಸಬೇಕು? ಯಾವಾಗ ನಿಲ್ಲಿಸಬಹುದು? ಮತ್ತು ಮಧುಮೇಹವನ್ನು ಸಂಪೂರ್ಣವಾಗಿ ವಾಸಿಮಾಡಲು ಸಾಧ್ಯವೇ? ಎಂಬಿತ್ಯಾದಿಗಳ ಹಿನ್ನೆಲೆಯಲ್ಲಿ ಈ ಲೇಖನ. ಸಕ್ಕರೆ ಕಾಯಿಲೆ ಪೂರ್ವ ಹಂತ ಮತ್ತು ಅಲ್ಪ ಪ್ರಮಾಣದ ಪ್ರಾರಂಭಿಕ ಕಾಯಿಲೆಯನ್ನು ಜೀವನ ಶೈಲಿಯ ಬದಲಾವಣೆಯಿಂದಲೇ ಬಾರದಂತೆ ಅಥವಾ ಮುಂದು ವರಿಯದಂತೆ ತಡೆಗಟ್ಟಬಹುದಾದರೂ ಕೆಲವರಿಗೆ ಔಷಧ ಚಿಕಿತ್ಸೆ ಅನಿವಾರ್ಯವಾಗುತ್ತದೆ.

ಜೀವನಶೈಲಿಯ ಬದಲಾವಣೆ ಎಲ್ಲ ವಿಧದ ಸಕ್ಕರೆ ಕಾಯಿಲೆಯವರಿಗೆ ಅನಿವಾರ್ಯ. ಆದರೆ ಔಷಧಗಳ ಚಿಕಿತ್ಸೆ ಸಕ್ಕರೆ ಕಾಯಿಲೆ ವಿಧ, ಗಂಭೀರತೆ ಮತ್ತು ಈಗಾಗಲೇ ಉಂಟಾಗಿರಬಹುದಾದ ಅವಘಡಗಳನ್ನು ಅವಲಂಬಿಸಿರುತ್ತದೆ.

ಔಷಧಗಳ ಚಿಕಿತ್ಸಾ ವಿಧಾನಗಳು

ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಲಭ್ಯವಿರುವ ಔಷಧಗಳನ್ನು ಪ್ರಧಾನವಾಗಿ ಬಾಯಿಯ ಮೂಲಕದ ಗ್ಲುಕೋಸ್ ಇಳಿಕೆ ಔಷಧಗಳು (ಓರಲ್ ಹೈಪೋಗ್ಲೈಸೀಮಿಕ್ ಡ್ರಗ್ಸ್) ಮತ್ತು ಇನ್ಸ್ಯುಲಿನ್ ಎಂದು ೨ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಬಾಯಿ ಮೂಲಕದ ಗ್ಲುಕೋಸ್ ಇಳಿಕೆ ಔಷಧಗಳನ್ನು ಹೆರೇ ಹೇಳುವಂತೆ ಬಾಯಿ ಮೂಲಕ ನೀಡಲಾಗುತ್ತದೆ. ಇನ್ಸ್ಯುಲಿನ್ ಅನ್ನು ಚುಚ್ಚುಮದ್ದು ಮೂಲಕ ಚರ್ಮದಡಿಗೆ ಅಥವಾ ಕೆಲವು ಸಂದರ್ಭಗಳಲ್ಲಿ ನೇರವಾಗಿ ರಕ್ತಕ್ಕೆ ನೀಡಲಾಗುತ್ತದೆ.

ಯಾರಿಗೆ, ಯಾವ ಔಷಧ?
ಯಾರಿಗೆ, ಯಾವ ಔಷಧವನ್ನು ಆಯ್ಕೆ ಮಾಡಿಕೊಳ್ಳಬೇಕು? ಎಂಬುದು ಸಕ್ಕರೆಕಾಯಿಲೆಯ ವಿಧ, ರಕ್ತಗ್ಲುಕೋಸಿನ ಪ್ರಮಾಣ,
ಉಂಟಾಗಿರಬಹುದಾದ ಮೂತ್ರಜನಕಾಂಗ(ಕಿಡ್ನಿ), ದಯದ ತೊಂದರೆಗಳು, ಕೀಟೋನ್ ವಿಷಮತೆ, ಒಡಗೂಡಿದ ಸೋಂಕು ರೋಗಗಳು ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಕಾಯಿಲೆ ಪತ್ತೆಯಾದಾಗ ಅಥವಾ ಅನಂತರದ ಸಂದರ್ಭಗಳಲ್ಲಿ ಕೀಟೋನ್ ವಿಷಮತೆ(ಕೀಟೋಸಿಸ್)ರೋಗ ಲಕ್ಷಣಗಳಿದ್ದಲ್ಲಿ ಪ್ರಾರಂಭದಲ್ಲಿಯೇ ಇನ್ಸ್ಯುಲಿನ್ ಉಪಯೋಗಿಸುವುದು ಅತ್ಯವಶ್ಯಕ. ಗಂಭೀರ ಸ್ವರೂಪದ ಮಾರಣಾಂತಿಕವಾಗಬಲ್ಲ ಸೋಂಕುರೋಗಗಳು ಜತೆಗೂಡಿದ ಸಂದರ್ಭಗಳಲ್ಲೂ ಪ್ರಾರಂಭದಲ್ಲಿಯೇ ಇನ್ಸ್ಯುಲಿನ್ ಉಪಯೋಗಿಸುವುದು ಅನಿವಾರ್ಯ.

ಹೃದಯಾಘಾತವಾದ ಸಂದರ್ಭದಲ್ಲೂ ಮತ್ತು ಮೂತ್ರಜನಕಾಂಗಗಳ ವಿಫಲತೆಯಿದ್ದಲ್ಲಿ ಇನ್ಸ್ಯುಲಿನ್ ಉಪಯೋಗ ಪ್ರಾರಂಭ ದಿಂದಲೇ ಅನಿವಾರ್ಯವಾಗುತ್ತದೆ. ಮೇಲೆ ಪ್ರಸ್ತಾಪಿಸಿದ ಯಾವ ಅವಘಡಗಳೂ ಇಲ್ಲದಿದ್ದಲ್ಲಿ ಪ್ರಾರಂಭದಲ್ಲಿ ಬಾಯಿ
ಮೂಲಕದ ಔಷಧಗಳಿಂದ ಕಾಯಿಲೆಯನ್ನು ನಿಯಂತ್ರಿಸಲು ಪ್ರಯತ್ನಿಸಲಾಗುತ್ತದೆ.

ಬಾಯಿ ಮೂಲಕದ ಔಷಧಗಳು
ಈ ಔಷಧಗಳು ಏರಿದ ರಕ್ತಗ್ಲುಕೋಸನ್ನು ಕಡಿಮೆಗೊಳಿಸುತ್ತವೆ. ಈ ಔಷಧಗಳಲ್ಲಿ ಪ್ರಧಾನವಾಗಿ ೧. ಜೀರ್ಣಾಂಗದಿಂದ ಗ್ಲುಕೋಸನ್ನು ನಿಧಾನವಾಗಿ ರಕ್ತಗತಗೊಳಿಸುವ ಔಷಧಗಳು(ಗ್ಲಿಪ್‌ಟಿನ್‌ಗಳು, ಓಬಿಗ್ಲೋಸ್ ಇತ್ಯಾದಿ) ೨. ಪ್ಯಾಂಕ್ರಿಯಾಸ್‌ನಿಂದ
ಇನ್ಸ್ಯುಲಿನ್ ಉತ್ಪತ್ತಿಯನ್ನು ಹೆಚ್ಚಿಸುವ ಔಷಧಗಳು (ಸಲಾನಿಲ್ ಯೂರಿಯಾಗಳು-ಗ್ಲಿಮಿಪ್ರೈಡ್, ಗ್ಲಿಪಿ ಝೈಡ್, ಗ್ಲಿಬಿನ್‌ ಕ್ಲಮೈಡ್.) ಇವು ರಕ್ತಗ್ಲುಕೋಸ್ ಇಳಿಸುವುದರಲ್ಲಿ ಹೆಚ್ಚು ಪರಿಣಾಮಕಾರಿ. ೩.ಇನ್ಸ್ಯುಲಿನ್ ಸಾಮರ್ಥ್ಯವನ್ನು ಹೆಚ್ಚಿಸುವ ಔಷಧಗಳು (ಮೆಟ್ಫೋನ್, ಪಯೋಗ್ಲಿಟಝೋನ್) ಮತ್ತು ೪. ಮೂತ್ರಜನಕಾಂಗಗಳಿಂದ ರಕ್ತದ ಹೆಚ್ಚುವರಿ ಗ್ಲುಕೋಸನ್ನು ಮೂತ್ರದ ಮೂಲಕ ಹೊರದೂಡುವ ಔಷಧಗಳು(ಡೆಪೋ-ಜಿನ್ ಇತ್ಯಾದಿ) ಎಂಬ ೪ ಗುಂಪುಗಳ ಔಷಧಗಳಿವೆ. ಈ ವಿಧ ಗುಂಪುಗಳ ಔಷಧಗಳನ್ನು ಹಂತ ಹಂತವಾಗಿ ರಕ್ತಗ್ಲುಕೋಸಿನ ಪ್ರಮಾಣಕ್ಕನುಗುಣವಾಗಿ ಒಂದು ಔಷಧವನ್ನು ಪ್ರಾರಂಭಿಸಿ ಅದರ ಗರಿಷ್ಠ ಪ್ರಮಾಣಕ್ಕೂ ರಕ್ತಗ್ಲುಕೋಸ್ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತೊಂದು ಗುಂಪಿನ ಔಷಧವನ್ನು ಹಂತಹಂತವಾಗಿ ಜತೆಗೂಡಿಸಿ ಯಾವ ಔಷಧಗಳ ಮಿಶ್ರಣಕ್ಕೆ ರಕ್ತ ಗ್ಲುಕೋಸ್ ನಿಯಂತ್ರಣಕ್ಕೆ ಬರುತ್ತದೆಯೋ ಆ ಮಿಶ್ರಣ ಔಷಧ ಚಿಕಿತ್ಸೆಯನ್ನು
ಮುಂದುವರಿಸಬೇಕು. ಒಂದೇ ಗುಂಪಿನ ಔಷಧದಲ್ಲಿ ನಿಯಂತ್ರಣಕ್ಕೆ ಬಂದಲ್ಲಿ ಮತ್ತೊಂದನ್ನು ಜತೆಗೂಡಿಸುವ ಅವಶ್ಯಕತೆ ಯಿಲ್ಲ.

ಯಾವ ಅವಘಡಗಳೂ ಇಲ್ಲದಿದ್ದಲ್ಲಿ ಸಾಮಾನ್ಯವಾಗಿ ಪ್ರಾರಂಭಿಕವಾಗಿ ೨ ನೇ ವಿಧದ ಸಕ್ಕರೆಕಾಯಿಲೆಗೆ ಮೆಟ್ ಫೋನ್ ಅನ್ನು ಆಹಾರಕ್ಕಿಂತ ೨೦-೩೦ ನಿಮಿಷಗಳ ಮುಂಚೆ ಕನಿಷ್ಠ ಪ್ರಮಾಣ ಪ್ರತಿನಿತ್ಯ 500 ಮಿ.ಗ್ರಾಂ ಬೆಳಗ್ಗೆ ಪ್ರಾರಂಭಿಸಿ 10 ದಿನಗಳಿ ಗೊಮ್ಮೆ ರಕ್ತಗ್ಲುಕೋಸ್ ಅನ್ನು ಅಳೆದು ಅದಕ್ಕನುಗುಣವಾಗಿ ಗರಿಷ್ಠ ಪ್ರತಿನಿತ್ಯ 2500 ಗ್ರಾಂವರೆಗೆ ಏರಿಸಿ ಅಷ್ಟಕ್ಕೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಪಯೋಗ್ಲಿಟಿಝೋನ್ ಅನ್ನು ಜತೆಗೂಡಿಸಿದ 15ದಿನಗಳ ನಂತರವೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಜೀರ್ಣಾಂಗದ ಮೇಲೆ ಪರಿಣಾಮ ಬೀರುವ ಔಷಧಗಳ ಗುಂಪಿನ ಔಷಧವೊಂದನ್ನು (ಟೆನಿಲಿಗ್ಲಿಪ್ಟಿನ್, ಓಲೋಗ್ಲಿಪ್ಟಿನ್ ಇತ್ಯಾದಿ)
ಜತೆಗೂಡಿಸಬೇಕು. ಈ ಮಿಶ್ರಣವನ್ನು ಕನಿಷ್ಠ 15 ದಿನಗಳ ಕಾಲ ನೀಡಿದರೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮೂತ್ರಜನಕಾಂಗದ ಮೇಲೆ ಪರಿಣಾಮ ಬೀರುವ ಗುಂಪಿನ ಔಷಧವನ್ನು ಜತೆಗೂಡಿಸಬೇಕು.

ಈ ಮಿಶ್ರಣಕ್ಕೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಪ್ಯಾಂಕ್ರಿಯಾಸ್‌ನಿಂದ ಇನ್ಸ್ಯುಲಿನ್ ಉತ್ಪತ್ತಿಯನ್ನು ಹೆಚ್ಚಿಸುವ ಗುಂಪಿನ ಔಷಧವನ್ನು ಜತೆಗೂಡಿಸಬೇಕು. ಈ ಎಲ್ಲ ಮಿಶ್ರಿತ ಔಷಧಗಳನ್ನು ಕನಿಷ್ಠ 15 ದಿನಗಳು ಸೇವಿಸಿದ ನಂತರವೂ ರಕ್ತಗ್ಲುಕೋಸ್ ಮತ್ತು ಎಚ್ ಬಿಎ೧ಸಿ ಸಹಜ ಪ್ರಮಾಣಕ್ಕೆ ಬಾರದಿದ್ದಲ್ಲಿ ಜೀವನಶೈಲಿಯ ಬದಲಾವಣೆಯ ಬಗ್ಗೆ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಬೇಕು. ಅನಂತರವೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಇನ್ಸ್ಯುಲಿನ್ ಜತೆಗೂಡಿಸುವುದು ಅತ್ಯವಶ್ಯಕ.

ಸಾಮಾನ್ಯವಾಗಿ ಪರಿಣಾಮಕಾರಿಯಾಗುವ ಹಂತ ಹಂತದ ಈ ಔಷಧಗಳ ಜೋಡಣಾ ಚಿಕಿತ್ಸೆ ಕೆಲವರಲ್ಲಿ ಫಲಕಾರಿಯಾಗ ದಿರಬಹುದು. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು, ಆತ್ಮ, ಜೀವನಶೈಲಿ ಭಿನ್ನವಾಗಿದ್ದು ಅವರವರಿಗೆ ಪರಿಣಾಮಕಾರಿಯಾಗುವ ಔಷಧಗಳ ಚಿಕಿತ್ಸೆಯನ್ನು ಅವರವರಿಗೆ ಪ್ರಯೋಗಿಸಿ ಯಾವ ಔಷಧ ಚಿಕಿತ್ಸಾ ವಿಧಾನ ನಿರ್ದಿಷ್ಟ ವ್ಯಕ್ತಿಗೆ ಪರಿಣಾಮಕಾರಿ ಯಾಗುತ್ತದೆ ಎಂಬುದನ್ನು ನಿರ್ದಿಷ್ಟ ಔಷಧಗಳಿಗೆ ಅವರವರು ಪ್ರತಿಕ್ರಿಯಿಸುವುದನ್ನು ದೃಢೀಕರಿಸಿ, ವೈಯಕ್ತೀಕರಿಸಿಯೇ ನಿರ್ಧರಿಸಿಕೊಳ್ಳಬೇಕು.

ಒಬ್ಬರಿಗೆ ಪರಿಣಾಮಕಾರಿಯಾಗುವ ಔಷಧ ಚಿಕಿತ್ಸಾ ವಿಧಾನ ಮತ್ತೊಬ್ಬರಲ್ಲಿ ಪರಿಣಾಮಕಾರಿಯಾಗದಿರಬಹುದು. ಆದುದರಿಂದ
ಮಧುಮೇಗಳು ಈ ವೈಜ್ಞಾನಿಕ ಸತ್ಯವನ್ನು ಅರಿತು ತಾಳ್ಮೆಯಿಂದ ತಜ್ಞರ ಸಲಹೆಯಂತೆ ರಕ್ತಗ್ಲುಕೋಸ್ ನಿಯಂತ್ರಣಕ್ಕೆ ಬರುವವ ರೆಗೂ ಚಿಕಿತ್ಸೆಯನ್ನು ಅನುಸರಿಸಬೇಕು. ರಕ್ತಗ್ಲುಕೋಸ್ ೨೦೦ಮಿ.ಗ್ರಾಂಗಿಂತಲೂ ಅಧಿಕವಾಗಿದ್ದಲ್ಲಿ ಸಲಾನಿಲ್‌ ಯೂರಿಯಾ ಗುಂಪಿನ ಗ್ಲಿಮಿಪ್ರೈಡ್, ಗ್ಲಿಕಾಝೈಡ್ ಹೆಚ್ಚು ಪರಿಣಾಮಕಾರಿ.

ಅಡ್ಡಪರಿಣಾಮಗಳು
ಮೆಟ್ ಫೋನ್ ಕಿಡ್ನಿ ಮೇಲೆ ಪರಿಣಾಮ ಬೀರುವುದರಿಂದ ಕಿಡ್ನಿ ಸಮಸ್ಯೆ ಇರುವವರಿಗೆ ಇದನ್ನು ನೀಡಬಾರದು. ಇವರಿಗೆ ಗ್ಲಿಪಿಝೈಡ್ ಪ್ರಯೋಜನಕಾರಿ. ಹೃದಯದ ಸಮಸ್ಯೆ ಇರುವವರಿಗೆ ಪಯೋಗ್ಲಿಟಿಝೋನ್ ನಿಷಿದ್ಧ. ಇವರಿಗೆ   ತ್ರಜನಕಾಂಗಗಳ
ಮೇಲೆ ಪರಿಣಾಮ ಬೀರುವ ಔಷಧಗಳು ಉಪಯುಕ್ತ. ಔಷಧಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಸುಸ್ತು, ಸಂಕಟ, ವಾಂತಿ, ಆಲಸ್ಯ, ರಕ್ತ ಗ್ಲುಕೋಸ್ ಇಳಿಕೆ, ಮೂತ್ರಾಂಗದ ಸಮಸ್ಯೆಗಳು ಈ ಔಷಧಗಳಲ್ಲಿ ಅಡ್ಡ ಪರಿಣಾಮಗಳಾಗಿ ಕಾಣಿಸಿಕೊಳ್ಳಬಹುದು. ಮದ್ಯ ಪಾನದ ಜತೆಗೆ ಮೆಟ್ ಫೋನ್ ಇತ್ಯಾದಿ ಔಷಧಗಳನ್ನು ಸೇವಿಸಿದಲ್ಲಿ ಮಾರಣಾಂತಿಕ ಪರಿಣಾಮ ಗಳುಂಟಾಗಬಹುದು. ಔಷಧಗಳನ್ನು ತೆಗೆದುಕೊಳ್ಳುವಾಗ ಯಾವುದೇ ತೊಂದರೆಗಳು ಕಾಣಿಸಿಕೊಂಡಲ್ಲಿ ಔಷಧಗಳ
ಅಡ್ಡಪರಿಣಾಮಗಳನ್ನು ಶಂಕಿಸಿ ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯಕ.

ರಕ್ತ ಗ್ಲುಕೋಸ್ ಇಳಿಕೆ
ಔಷಧಗಳ ಚಿಕಿತ್ಸೆಯಿಂದ ಅದರಲ್ಲೂ ಇನ್ಸ್ಯುಲಿನ್ ಮತ್ತು ಪ್ಯಾಂಕ್ರಿಯಾಸ್ ಪ್ರಚೋದಕ ಔಷಧಗಳನ್ನು (ಗ್ಲಿಮಿಪ್ರೈಡ್, ಗ್ಲಿಕಾಝೈಡ್, ಗ್ಲಿಮಿಕ್ಲಮೈಡ್) ಸೇವಿಸುವವರಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದಲ್ಲಿ ಅಥವಾ ಅಗತ್ಯಕ್ಕಿಂತ ಹೆಚ್ಚು ಔಷಧಗಳನ್ನು ಸೇಸಿದಲ್ಲಿ ರಕ್ತಗ್ಲುಕೋಸ್ ಕಡಿಮೆಯಾಗಿ ಅವಘಡಗಳು ಸಂಭಸುತ್ತವೆ. ಮೈ ಬೆವರುವಿಕೆ, ಎದೆ ಬಡಿತ, ಸುಸ್ತು,
ಸಂಕಟ, ಪ್ರಜ್ಞಾನತೆ, ದೃಷ್ಟಿಹೀನತೆ, ತೊದಲು ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ದೀರ್ಘಕಾಲ ಉಳಿದಲ್ಲಿ ಸಾವು ಸಂಭಸಬಹುದು. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದರಿಂದ ಇದರಿಂದ ಪಾರಾ ಗಬಹುದು. ಈ ತೊಂದರೆಗಳು ಕಾಣಿಸಿಕೊಂಡ ತಕ್ಷಣ ಸಕ್ಕರೆ, ಚಾಕೊಲೇಟ್‌ಗಳನ್ನು ಸೇವಿಸಬೇಕು. ಸಕ್ಕರೆ ಕಾಯಿಲೆ ರೋಗಿಗಳು ತಮ್ಮೊಡನೆ ಸಕ್ಕರೆ ಮತ್ತು ಚಾಕೋಲೆಟ್‌ಗಳನ್ನು ಸದಾಕಾಲ ಇಟ್ಟುಕೊಳ್ಳಬೇಕು. ರಾತ್ರಿ ನಿದ್ರೆ ವೇಳೆಯಲ್ಲಿ ಇದು ಸಂಭವಿಸಿದಲ್ಲಿ
ಯಾರಿಗೂ ಗೊತ್ತಾಗದಿರಬಹುದು. ರಾತ್ರಿ ವೇಳೆ ಒದ್ದಾಡುವುದು, ಉಸಿರಾಟದ ಏರುಪೇರುಗಳಾದಲ್ಲಿ ಪಕ್ಕದಲ್ಲಿ ಮಲಗಿರುವವರು ಇದನ್ನು ಶಂಕಿಸಬೇಕು. ಮಧುಮೇಹಿಗಳು ಅದರಲ್ಲೂ ಇನ್ಸ್ಯುಲಿನ್ ತೆಗೆದುಕೊಳ್ಳುತ್ತಿರುವವರು ಬೇರೊಬ್ಬರ ಜತೆಗೂಡಿ ಮಲಗುವುದು ಕ್ಷೇಮಕರ.

ಯಾರಿಗೆ ಇನ್ಸ್ಯುಲಿನ್?
1ನೇ ವಿಧದ ಸಕ್ಕರೆಕಾಯಿಲೆಯವರಿಗೆ ಪ್ರಾರಂಭದಿಂದಲೇ ಇನ್ಸ್ಯುಲಿನ್ ಅತ್ಯವಶ್ಯಕ. ಬಾಯಿ ಮೂಲಕದ ಔಷಧಗಳು ಅನವಶ್ಯಕ. ಕೀಟೋಸಿಸ್ ವಿಷಮತೆ, ತೀವ್ರ ಪ್ರಮಾಣದ ಸೋಂಕುಗಳಿದ್ದಲ್ಲಿ ಎಲ್ಲ ವಿಧದ ಸಕ್ಕರೆಕಾಯಿಲೆಯವರಿಗೂ ಪ್ರಾರಂಭದಿಂದಲೇ ಇನ್ಸ್ಯುಲಿನ್ ಅನಿವಾರ್ಯ. ೨ನೇ ವಿಧದ ಸಕ್ಕರೆಕಾಯಿಲೆಯವರಲ್ಲಿ ಬಾಯಿ ಮೂಲಕದ ಔಷಧಗಳ ಚಿಕಿತ್ಸೆ ಫಲವಾದಲ್ಲಿ ಅವರಿಗೂ ಇನ್ಸ್ಯುಲಿನ್ ಅನಿವಾರ್ಯವಾಗುತ್ತದೆ. ಬಾಯಿ ಮೂಲಕದ ಔಷಧಗಳ ಜತೆಗೆ ದೀರ್ಘಕಾಲೀಕ ಪರಿಣಾಮ ಬೀರುವ ಇನ್ಸ್ಯುಲಿನ್ ಅನ್ನು ಜತೆಗೂಡಿಸಬಹುದು.

ಇನ್ಸ್ಯುಲಿನ್‌ನಲ್ಲಿ ಅಲ್ಪಕಾಲೀಕ ಪರಿಣಾಮ ಬೀರುವ (4-6 ಗಂಟೆ), ಮಧ್ಯಕಾಲೀಕ ಪರಿಣಾಮ ಬೀರುವ (೮-೧೨ಗಂಟೆ) ಮತ್ತು ದೀರ್ಘಕಾಲೀಕ ಪರಿಣಾಮ ಬೀರುವ (24ಗಂಟೆ) ಹಾಗೂ ಇವುಗಳ ಮಿಶ್ರಣ ಇರುವ ೪ ವಿಧಗಳಿವೆ. ಅಲ್ಪಕಾಲೀಕ ಮತ್ತು ಮಧ್ಯಕಾಲೀಕ ಇನ್ಸ್ಯುಲಿನ್‌ಗಳ ಮಿಶ್ರಿತ ಇನ್ಸ್ಯುಲಿನ್ ಕೂಡ ಲಭ್ಯ(ಮಿಕ್ಸ್ ಟಾರ್ಡ್). ರೋಗಿಯ ಅವಶ್ಯಕತೆಗನುಗುಣವಾಗಿ ನಿರ್ದಿಷ್ಟ ವಿಧದ ಇನ್ಸ್ಯುಲಿನ್ ಅನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಪರಿಣಾಮಕಾರಿಯಾದ ಶುದ್ಧ ಇನ್ಸ್ಯುಲಿನ್‌ಗಳೂ ಸಹ ಲಭ್ಯ.

ಸಮಗ್ರ ಅನುಕರಣೆ
ಮಧುಮೇಹ ನಿಯಂತ್ರಣಕ್ಕೆ ಬರಲು ಅವಶ್ಯಕವಿರುವ ಔಷಧಗಳ ಪ್ರಮಾಣ, ಸೇವಿಸುವ ಆಹಾರದ ಪ್ರಮಾಣ ಮತ್ತು ಗುಣಮಟ್ಟ, ದೇಹದ ತೂಕ, ಮಾನಸಿಕ ಸ್ಥಿತಿಗತಿ, ದೈಹಿಕ ಚಟುವಟಿಕೆಗಳನ್ನು ಅವಲಂಬಿಸಿರುತ್ತದೆ. ಒಮ್ಮೆ ನಿರ್ಧರಿಸಿದ ರಕ್ತ ಗ್ಲುಕೋಸ್
ನಿಯಂತ್ರಿಸುವ ಔಷಧದ ಪ್ರಮಾಣ ಅಂದು ಸೇವಿಸುತ್ತಿದ್ದ ಆಹಾರ, ದೇಹದ ತೂಕ, ದೈನಂದಿನ ದೈಹಿಕ ಚಟುವಟಿಕೆಗಳು ಮತ್ತು ಮಾನಸಿಕ ಸ್ಥಿತಿಗತಿಗಳನ್ನು ಅವಲಂಬಿಸುವುದರಿಂದ ಮುಂದಿನ ದಿನಗಳಲ್ಲಿ ಇವುಗಳಲ್ಲಿ ಏರುಪೇರಾದಲ್ಲಿ ಅದಕ್ಕನುಗುಣ
ವಾಗಿ ಔಷಧಗಳ ಪರಿಣಾಮಗಳು ಏರುಪೇರಾಗಿ ರಕ್ತ ಗ್ಲುಕೋಸ್ ಪ್ರಮಾಣದಲ್ಲೂ ಏರುಪೇರಾಗುತ್ತದೆ.

ಜೀವನಶೈಲಿಯನ್ನು ಕರಾರುವಾಕ್ಕಾಗಿ ಪಾಲಿಸಿದಲ್ಲಿ ಮುಂದಿನ ದಿನಗಳಲ್ಲಿ ಔಷಧಗಳ ಪ್ರಮಾಣವೂ ಕಡಿಮೆಯಾಗಬಹುದು. ಇಲ್ಲದಿದ್ದಲ್ಲಿ ಔಷಧಗಳ ಪ್ರಮಾಣ ವನ್ನೂ ಹೆಚ್ಚಿಸಿಕೊಳ್ಳಬೇಕಾಗಬಹುದು. ಆದುದರಿಂದ ಒಮ್ಮೆ ನಿರ್ಧರಿತವಾದ ಜೀವನಶೈಲಿ ಮತ್ತು ಔಷಧಗಳ ಪ್ರಮಾಣವನ್ನು ಪ್ರತಿನಿತ್ಯ ಪಾಲಿಸುವ ಸಮಗ್ರ ಚಿಕಿತ್ಸಾ ಅನುಕರಣೆಯಿಂದ ಮಾತ್ರ ಸಕ್ಕರೆಕಾಯಿಲೆಯ ನಿರಂತರ ನಿಯಂತ್ರಣ ಸಾಧ್ಯ. ಇವುಗಳಲ್ಲಿ ವ್ಯತ್ಯಾಸವಾದಲ್ಲಿ ನಿಯಂತ್ರಣದಲ್ಲಿದ್ದ ಕಾಯಿಲೆ ಅನಿಯಂತ್ರಿತವಾಗುತ್ತದೆ.

ಮಧುಮೇಹ ಹಿಮ್ಮೆಟ್ಟಿಸಬಹುದೇ?
ಜೀವನಶೈಲಿಯ ಬದಲಾವಣೆಯಿಂದ ಪ್ರಾರಂಭಿಕ ಹಂತದ ಕಾಯಿಲೆಯನ್ನು ತಡೆಗಟ್ಟಬಹುದು. ಕಾಯಿಲೆ ಉಲ್ಬಣಗೊಂಡು ಔಷಧ ಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆಗಳಿಂದ ನಿಯಂತ್ರಣಕ್ಕೆ ಬಂದ ಕಾಯಿಲೆಯನ್ನು ಅವೆರಡನ್ನೂ ತ್ಯಜಿಸಿದಲ್ಲಿ ಕಾಯಿಲೆ ಮರುಕಳಿಸುವುದು ಖಂಡಿತ. ಎಲ್ಲಿಯವರೆಗೆ ಜೀವನಶೈಲಿಯ ಮಾರ್ಪಾಡುಗಳನ್ನು ಪಾಲಿಸಲಾಗುತ್ತದೋ ಆ
ದಿನದವರೆಗೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ.

ಜೀವನಶೈಲಿಯಲ್ಲಿ ಅದಲು ಬದಲಾದ ದಿನವೇ ರಕ್ತ ಗ್ಲುಕೋಸ್‌ನಲ್ಲಿ ಏರುಪೇರು ಕಂಡುಬರುತ್ತದೆ. ಸಕ್ಕರೆಕಾಯಿಲೆ ವಾಸಿಯಾಗಿದೆ ಎಂದು ಹೇಳಬೇಕಾದರೆ ತಮ್ಮ ಮನಸೋ ಇಚ್ಛೆ ನಡೆದುಕೊಂಡು ಯಾವ ಔಷಧಗಳನ್ನೂ ಸೇವಿಸದೆ ಎಚ್‌ಬಿಎ೧ಸಿ ರಕ್ತ ಪ್ರಮಾಣ ಶೇ.೭ಕ್ಕಿಂತ ನಿರಂತರವಾಗಿ ಕಡಿಮೆ ಇದ್ದಲ್ಲಿ ಮಾತ್ರ ಕಾಯಿಲೆ ವಾಸಿಯಾಗಿದೆ ಎಂಬ ತೀರ್ಮಾನಕ್ಕೆ ಬರಬಹುದು. ಯಾವುದೋ ಒಂದು ದಿನ ಮಾಡುವ ರಕ್ತ ಗ್ಲುಕೋಸ್ ಪರೀಕ್ಷೆಯಿಂದ ಕಾಯಿಲೆ ನಿಯಂತ್ರಣದಲ್ಲಿದೆ ಎಂದು ತೀರ್ಮಾನಿಸ ಬಾರದು.

ಜಾಹೀರಾತುಗಳ ಆಕರ್ಷಣೆಗೀಡಾಗಿ ಕಾಯಿಲೆಯನ್ನು ಉಲ್ಬಣ ಗೊಳಿಸಿಕೊಳ್ಳದಿರಿ. ಹಾಗೊಮ್ಮೆ ನಂಬಿ ಔಷಧಗಳನ್ನು
ನಿಲ್ಲಿಸಿ ದಲ್ಲಿ 3 ತಿಂಗಳಿಗೊಮ್ಮೆ ಮಾಡುವ ರಕ್ತ ಎಚ್ ಬಿಎ೧ಸಿ ಪರೀಕ್ಷೆ ಮತ್ತು ರಕ್ತ ಗ್ಲುಕೋಸ್ ಪರೀಕ್ಷೆಯಿಂದ ನಿಯಂತ್ರಣವನ್ನು ಆಗಿಂದಾಗ್ಗೆ ದೃಢೀಕರಿಸಿಕೊಳ್ಳಿ.

ಸ್ಪರ್ಧಾತ್ಮಕ ಆಧುನಿಕ ಜಗತ್ತಿನಲ್ಲಿ, ಅತ್ಯಲ್ಪ ಅವಧಿಯಲ್ಲಿ ಹೆಚ್ಚು ಭೌತಿಕ ಸಂಪತ್ತು ಗಳಿಕೆ ಮತ್ತು ಸಾಧನೆಗಳನ್ನು ಮಾಡ ಬೇಕೆಂಬ ಹಂಬಲದಿಂದ ನಾಗಾಲೋಟದಲ್ಲಿ ಸಾಗುತ್ತಿರುವ ಆಧುನಿಕ ಮಾನವನಿಗೆ ನಿರಂತರ ಜೀವನಶೈಲಿಯ ಪಾಲನೆ ಸಾಧ್ಯವೇ?!