Thursday, 12th December 2024

ಡಯಾಬಿಟಿಸ್‌ ಚಿಕಿತ್ಸೆಯಲ್ಲಿ ಕ್ರಾಂತಿ

ವೈದ್ಯ ವೈವಿಧ್ಯ

ಡಾ.ಎಚ್.ಎಸ್.ಮೋಹನ್

drhsmohan@gmail.com

ಜಗತ್ತಿನಾದ್ಯಂತ ಎಲ್ಲಿಯೂ ಮಾಡದ ದೊಡ್ಡ ಮಟ್ಟದ ಸಮೀಕ್ಷೆಯನ್ನು ಇಂಗ್ಲೆಂಡಿನಲ್ಲಿ ಇತ್ತೀಚೆಗೆ ಮೊದಲ ಬಾರಿಗೆ ಮಾಡಲಾಗಿದೆ. ಅದರ ಪ್ರಕಾರ 900 ಟೈಪ್ 1 ಡಯಾಬಿಟಿಸ್ ರೋಗಿಗಳು ಕೃತಕ ಪ್ಯಾಂಕ್ರಿಯಾಸ್ ಉಪಯೋಗಿಸುತ್ತಿದ್ದಾರೆ. 200ಕ್ಕೂ ಹೆಚ್ಚು ಮಕ್ಕಳು ಕ್ಲೋಸ್ಡ್ ಲೂಪ್ ಸಿಸ್ಟಮ್ ಉಪಯೋಗಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಚಿಕಿತ್ಸೆಯಲ್ಲಿ ಹಲವಾರು ಹೊಸ ರೀತಿಯ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಸ್ವಲ್ಪ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ, ಕಿತ್ಸೆಗೆ ಇನ್ಸುಲಿನ್ ಇಂಜಕ್ಷನ್ನೇ ಅಗತ್ಯವಿರುವ ಟೈಪ್ 1 ಡಯಾಬಿಟಿಸ್‌ಗೆ ಹೊಸ ರೀತಿಯ ಚಿಕಿತ್ಸೆ ಇತ್ತೀಚೆಗೆ ಲಭ್ಯವಾಗಿದೆ. ಹೆಚ್ಚು ಜನರಲ್ಲಿ ಕಂಡು ಬರುವ ಟೈಪ್ 2 ಡಯಾಬಿಟಿಸ್ ಸುಮಾರು 92% ಜನರಲ್ಲಿ ಕಂಡುಬಂದರೆ 8% ಜನರಲ್ಲಿ ಟೈಪ್ 1 ಡಯಾಬಿಟಿಸ್ ಕಂಡುಬರುತ್ತದೆ. ಟೈಪ್ 1 ಡಯಾಬಿಟಿಸ್‌ನಲ್ಲಿ ಸತತವಾಗಿ ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಕಾಯ್ದುಕೊಳ್ಳಲು ಕೃತಕ ಪ್ಯಾಂಕ್ರಿಯಾಸ್ ವ್ಯವಸ್ಥೆ ಈ ರೀತಿಯ ರೋಗಿಗಳಿಗೆ ವರದಾನವಾಗಬಲ್ಲದು.

ಏನಿದು ಕೃತಕ ಪ್ಯಾಂಕ್ರಿಯಾಸ್?: ತಮಗೆಲ್ಲ ಗೊತ್ತಿರುವಂತೆ ಇನ್ಸುಲಿನ್ ಹಾರ್ಮೋನ್ ಪ್ಯಾಂಕ್ರಿಯಾಸ್ ಅಥವಾ ಮೇದೋಜೀರಕ ಗ್ರಂಥಿಯಿಂದ ಸ್ರವಿಸಲ್ಪಡುತ್ತದೆ. ಆರೋಗ್ಯ ವಂತ ಮನುಷ್ಯನಲ್ಲಿರುವ ಸಹಜವಾದ ಪ್ಯಾಂಕ್ರಿಯಾಸ್‌ಅನ್ನು ಹೋಲುವ ರೀತಿಯ ವ್ಯವಸ್ಥೆ. ಆರೋಗ್ಯವಂತ ಮನುಷ್ಯನಲ್ಲಿರುವ ಸಹಜವಾದ ಪ್ಯಾಂಕ್ರಿಯಾಸ್ ರಕ್ತದಲ್ಲಿನ ಗ್ಲೂಕೋಸ್ ಅಥವಾ ಸಕ್ಕರೆಯ ಅಂಶವನ್ನು ನಿಯಂತ್ರಿಸುವಂತೆಯೇ ಇದೂ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಟೈಪ್ 1 ಡಯಾಬಿಟಿಸ್ ರೋಗಿಗಳಲ್ಲಿನ ಪ್ಯಾಂಕ್ರಿಯಾಸ್ ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಹಾಗಾಗಿ ಇಂತಹ ರೋಗಿಗಳು ತಮ್ಮ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಆಗಾಗ ಪರೀಕ್ಷಿಸಿಕೊಂಡು ಇನ್ಸುಲಿನ್ ಅನ್ನು ಇಂಜೆಕ್ಷನ್ ರೂಪದಲ್ಲಿ ಅಥವಾ ಇನ್ ಫ್ಯೂಷನ್ ರೂಪ ದಲ್ಲಿ ದಿನದಲ್ಲಿ ಹಲವು ಬಾರಿ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಈ ಕೃತಕ ಪ್ಯಾಂಕ್ರಿಯಾಸ್ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಮಾನಿಟರ್ ಮಾಡಿ, ದಿವಸದ ಯಾವ ಯಾವ ಹೊತ್ತಿಗೆ ಎಷ್ಟು ಪ್ರಮಾಣದ ಇನ್ಸುಲಿನ್ ಬೇಕು ಎಂಬುದನ್ನು ಲೆಕ್ಕಹಾಕಿ ಅಷ್ಟನ್ನು ದೇಹಕ್ಕೆ ದೊರಕು ವಂತೆ ಮಾಡುತ್ತದೆ. ಇದರ ಒಂದು ವಿಧದ ಹೈಬ್ರಿಡ್ ವ್ಯವಸ್ಥೆಯಲ್ಲಿ ಸ್ವಲ್ಪ ಪ್ರಮಾಣದ ಇನ್ಸುಲಿನ್‌ಅನ್ನು ತಾನೇ ಕೊಟ್ಟು ಕೊಳ್ಳುತ್ತದೆ.

ಇನ್ನಷ್ಟು ಪ್ರಮಾಣವನ್ನು ರೋಗಿ ದಾಖಲಿಸುವ ಮಾಹಿತಿಯ ಆಧಾರದ ಮೇಲೆ ಇನ್ಸುಲಿನ್ ಕೊಡಲ್ಪಡುತ್ತದೆ. ಹೀಗೆ ಮಾಡುವುದರಿಂದ ಹಗಲು ಮತ್ತು ರಾತ್ರಿ ಎಲ್ಲಾ ಹೊತ್ತಿನಲ್ಲಿ ದೇಹದಲ್ಲಿನ ಸಕ್ಕರೆಯ ಅಂಶ ನಿರ್ದಿಷ್ಟ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಈ ರೀತಿಯ ಡಯಾಬಿಟಿಸ್ ರೋಗಿಗಳು ಒಂದೇ ಮಟ್ಟದಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶಗಳನ್ನು ಕಾಯ್ದುಕೊಂಡು  ಡಯಾಬಿಟಿಸ್‌ ನಿಂದ ಬರುವ ಹಲವಾರು ತೊಡಕುಗಳು ಬರದಿರುವಂತೆ ಮುನ್ನೆಚ್ಚರಿಕೆ ವಹಿಸಲು ಸಾಧ್ಯ.

ಕೃತಕ ಪ್ಯಾಂಕ್ರಿಯಾಸ್‌ನ ಕೆಲಸದ ವಿಧಾನ ಹೇಗೆ?: ಇದರಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ.

೧) ನಿರಂತರ ಗ್ಲುಕೋಸ್ ಮಾನಿಟರ್(ಸಿ.ಜಿ. ಎ.ಎಮ್.): ಚರ್ಮದ ಕೆಳಗೆ ತೂರಿಸಿರುವ ಚಿಕ್ಕ ಸೆನ್ಸರ್‌ಅನ್ನು ಉಪಯೋಗಿಸಿ ಇದು ಕೆಲವು ನಿಮಿಷಗಳ ಅಂತರದಲ್ಲಿ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಟ್ರ್ಯಾಕ್ ಮಾಡುತ್ತಿರುತ್ತದೆ. ಈ ಮಾಹಿತಿಯನ್ನು ಸೆನ್ಸರ್, ವೈರ್‌ಗಳ ಸಹಾಯವಿಲ್ಲದೆ ಸ್ಮಾರ್ಟ್ ಫೋನ್‌ನಲ್ಲಿ ಈಗಾಗಲೇ ಶೇಖರಗೊಂಡಿರುವ ಪ್ರೋಗ್ರಾಮ್‌ಗೆ ರವಾನಿಸುತ್ತದೆ. ಅಥವಾ ಅದು ಮಾಹಿತಿ ಯನ್ನು ಇನ್ಸುಲಿನ್ ಇನ್ ಫ್ಯೂಷನ್ ಪಂಪ್‌ಗೂ ಕಳಿಸಬಹುದು. 2) ಈ ಪ್ರೋಗ್ರಾಮ್ ಎಷ್ಟು ಇನ್ಸುಲಿನ್ ಬೇಕೆಂದು ಲೆಕ್ಕ ಹಾಕಿ ಇನ್ಸುಲಿನ್ ಇನ್ಷಫ್ಯೂನ್ ಪಂಪಿಗೆ ಸೂಚಿಸಿ ಅದೇ ಡೋಸನ್ನು ಡೆಲಿವರಿ ಮಾಡುತ್ತದೆ. 3) ಇನ್ಸುಲಿನ್ ಇನ್ಷಫ್ಯೂನ್ ಪಂಪ್ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಇರಬೇಕಾದ ಮಟ್ಟಕ್ಕಿಂತ ಜಾಸ್ತಿಯಾದಾಗ ದಿನವಿಡಿ ಸಣ್ಣ ಪ್ರಮಾಣದ ಇನ್ಸುಲಿನ್‌ಅನ್ನು ದೇಹಕ್ಕೆ ರವಾ ನಿಸುತ್ತಾ ಇರುತ್ತದೆ.

ಇನ್ಸುಲಿನ್ ಪಂಪ್‌ಗಳಲ್ಲಿ ಹಲವು ವಿಧಗಳಿವೆ: ಒಂದು ರೀತಿಯ ಪಂಪನ್ನು ದೇಹದ ಹೊರಗೆ ಬೆಲ್ಟ್, ಪಾಕೆಟ್ ಅಥವಾ ಚೀಲದಲ್ಲಿ ಧರಿಸ ಬೇಕು. ಸಣ್ಣ ಪ್ಲಾಸ್ಟಿಕ್ ಟ್ಯೂಬಿಗೆ ಸೇರಿರುವುದರಿಂದ ಅದರ ಮೂಲಕ ಇನ್ಸುಲಿನ್ ರವಾನೆಯಾಗುತ್ತದೆ. ಇದನ್ನು ಹಲವಾರು ದಿವಸಗಳ ವರೆಗೆ ದೇಹದಲ್ಲಿ ಇಟ್ಟುಕೊಳ್ಳಬಹುದು.

ಇನ್ನೊಂದು ರೀತಿಯ ಪಂಪ್: ಇದು ಅಂಟುವ ಪ್ಯಾಡ್ ಮೂಲಕ ಚರ್ಮಕ್ಕೆ ನೇರವಾಗಿ ಅಂಟಿರುತ್ತದೆ. ಸಣ್ಣ ಕ್ಯಾಥೆಟರ್ (ಟ್ಯೂಬ್) ಮೂಲಕ ಇನ್ಸುಲಿನ್ ದೇಹ ಸೇರುತ್ತದೆ. ಕೆಲವು ದಿವಸಗಳ ನಂತರ ಇದನ್ನು ಬದಲಾಯಿಸಬೇಕಾಗುತ್ತದೆ. ಕೃತಕ ಪ್ಯಾಂಕ್ರಿಯಾಸ್‌ಅನ್ನು
ಆಟೋಮೇಟೆಡ್ ಇನ್ಸುಲಿನ್ ಡೆಲಿವರಿ ವ್ಯವಸ್ಥೆ, ಕ್ಲೋಸ್ಡ್ ಲೂಪ್ ಸಿಸ್ಟಮ, ಬಯೋನಿಕ್ ಪ್ಯಾಂಕ್ರಿಯಾಸ್- ಈ ಹೆಸರುಗಳಿಂದಲೂ ಕರೆಯುತ್ತಾರೆ.

ಕೃತಕ ಪ್ಯಾಂಕ್ರಿಯಾಸ್ ವ್ಯವಸ್ಥೆಯ ಪ್ರಭೇದಗಳು: ಮುಖ್ಯವಾಗಿ ಮೂರು ವಿಧಗಳಿವೆ. 1) ಥ್ರೆಶೋಲ್ಡ್ ಸಸ್ಪೆಂಡ್ ಮತ್ತು ಪ್ರೆಡಿಕ್ಷನ್ ಸಸ್ಪೆಂಡ್ ಸಿಸ್ಟಮ 2) ಇನ್ಸುಲಿನ್ ಮಾತ್ರವಿರುವ ವ್ಯವಸ್ಥೆ 3) ಎರಡು ಹಾರ್ಮೋನ್ ಇರುವ ವ್ಯವಸ್ಥೆ.

ಥ್ರೆಶೋಲ್ಡ ಸಸ್ಪೆಂಡ್ ಮತ್ತು ಪ್ರೆಡಿಕ್ಷನ್ ವ್ಯವಸ್ಥೆ: ಈ ವ್ಯವಸ್ಥೆಯಲ್ಲಿ ರಕ್ತದಲ್ಲಿನ ಗ್ಲುಕೋಸ್‌ನ ಅಂಶ ಒಮ್ಮೆಲೇ ಕಡಿಮೆಯಾದಾಗ ತಾತ್ಕಾ ಲಿಕವಾಗಿ ಇನ್ಸುಲಿನ್ ಪೂರೈಸುವುದನ್ನು ನಿಲ್ಲಿಸುತ್ತದೆ. ನಿರ್ದಿಷ್ಟ ಮಟ್ಟಕ್ಕಿಂತ ಸಕ್ಕರೆಯ ಅಂಶ ಕಡಿಮೆಯಾದಾಗ ಈ ರೀತಿಯ ಕ್ರಿಯೆ ಜರಗುತ್ತದೆ. ಇದರಲ್ಲಿನ ಪ್ರೆಡಿಕ್ಷನ್ ಸಸ್ಪೆಂಡ್ ವ್ಯವಸ್ಥೆ ರಕ್ತದ ಗ್ಲೂಕೋಸ್ ಮಟ್ಟವನ್ನು ಅಳೆಯುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆಯಾಗುವ ಮೊದಲೇ ಇನ್ಸುಲಿನ್ ಪೂರೈಸುವುದನ್ನು ನಿಲ್ಲಿಸುತ್ತದೆ. ಈ ಎರಡೂ ವ್ಯವಸ್ಥೆಗಳು ಅಗತ್ಯವಿದ್ದರೆ ತನ್ನಿಂದ ತಾನೇ
ಇನ್ಸುಲಿನ್ ಡೋಸನ್ನು ಹೆಚ್ಚು ಮಾಡುತ್ತವೆ.

ಹೀಗೆ ಸರಿಯಾದ ಸಮಯದಲ್ಲಿ ಇನ್ಸುಲಿನ್ ಪೂರೈಸುವುದನ್ನು ನಿಲ್ಲಿಸಿದರೆ ಟೈಪ್ ಡಯಾಬಿಟಿಸ್‌ನ ಈ ವ್ಯಕ್ತಿ ಹೈಪೋಗ್ಲೈಸಿಮಿಯಾ ಅಥವಾ ರಕ್ತದಲ್ಲಿ ಗ್ಲೂಕೋಸ್ ದಿಢೀರ್ ಕಡಿಮೆಯಾಗುವ ಹಂತಕ್ಕೆ ಹೋಗುವುದನ್ನು ತಪ್ಪಿಸಬಹುದು. ಅದರಲ್ಲಿಯೂ ಮಕ್ಕಳು ರಾತ್ರಿ ಹೊತ್ತು ಹೈಪೋಗ್ಲೈಸಿಮಿಯಾ ಹಂತಕ್ಕೆ ಹೋಗುವುದನ್ನು ಈ ವ್ಯವಸ್ಥೆ ಸರಿಯಾಗಿ ನಿಯಂತ್ರಿಸುತ್ತದೆ.

ಇನ್ಸುಲಿನ್ ಮಾತ್ರ ಇರುವ ವ್ಯವಸ್ಥೆ: ನಿರಂತರ ಗ್ಲೂಕೋಸ್ ಮಾನಿಟರ್ ವ್ಯವಸ್ಥೆಯು ತಿಳಿಸುವ ಅಂಕಿ-ಅಂಶಗಳ ಪ್ರಕಾರ ಇನ್ಸುಲಿನ್
ಪ್ರಮಾಣವನ್ನು ಹೆಚ್ಚಾಗಿಸುವುದು ಅಥವಾ ಕಡಿಮೆ ಯಾಗಿಸುವುದು- ಈ ಎರಡೂ ಕ್ರಿಯೆಗಳನ್ನು ಅಗತ್ಯ ಬಿದ್ದಾಗ ಮಾಡುತ್ತಾ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಅಗತ್ಯವಿರುವ ನಿರ್ದಿಷ್ಟ ರೇಂಜ್‌ನಲ್ಲಿಯೇ ಇರಿಸುತ್ತದೆ. ದೇಹದಲ್ಲಿ ಇರಬೇಕಾದದ್ದಕ್ಕಿಂತ ಜಾಸ್ತಿ ಪ್ರಮಾಣದ ಗ್ಲೂಕೋಸ್ ದೇಹದಲ್ಲಿದ್ದರೆ ಈ ವ್ಯವಸ್ಥೆ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಲ್ಲಿಯೇ ಇನ್ನೊಂದು ಪ್ರಭೇದ ಅಂದರೆ ಹೈಬ್ರಿಡ್ ವ್ಯವಸ್ಥೆ. ಇದು ದೇಹ ದಲ್ಲಿನ ಸಕ್ಕರೆಯ ಅಂಶವನ್ನು ನಿಖರವಾಗಿ ಲೆಕ್ಕಾಚಾರ ಹಾಕಿ ಆಟೋಮ್ಯಾಟಿಕ್ ಆಗಿ ಇನ್ಸುಲಿನ್ ಡೋಸ್ ನಿರ್ಧ ರಿಸುತ್ತದೆ.

ಎರಡು ಹಾರ್ಮೋನ್ ವ್ಯವಸ್ಥೆ : ಎರಡು ಹಾರ್ಮೋನ್ ವ್ಯವಸ್ಥೆಯಲ್ಲಿ ಸಂಶೋಧಕರು ಇನ್ಸುಲಿನ್ ಮತ್ತು ಗ್ಲೂಕಾಗಾನ್- ಈ 2
ಹಾರ್ಮೋನ್‌ಗಳನ್ನು ಉಪಯೋಗಿಸಿ ನವೀಕರಿಸಲು ಸಂಶೋಧನೆ ನಡೆಸುತ್ತಿದ್ದಾರೆ. ಇನ್ಸುಲಿನ್ ಹಾರ್ಮೋನ್ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡಿದರೆ ಗ್ಲುಕಾಗಾನ್ ಹಾರ್ಮೋನ್ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹೆಚ್ಚು ಮಾಡುತ್ತದೆ. ಡಯಾಬಿಟಿಸ್ ಕಾಯಿಲೆ ಇಲ್ಲದ ವ್ಯಕ್ತಿಗಳಲ್ಲಿ ಪ್ಯಾಂಕ್ರಿಯಾಸ್ ಯಾವ ರೀತಿ ಕೆಲಸ ಮಾಡುತ್ತದೆ ಅದೇ ರೀತಿ ಈ ಎರಡು ಹಾರ್ಮೋನ್ ವ್ಯವಸ್ಥೆ ಕೆಲಸ ಮಾಡುತ್ತದೆ. ಇದರ ಒಂದು ಧನಾತ್ಮಕ ಅಂಶವೆಂದರೆ ಇದು ಯಾವ ಸಮಯ ದಲ್ಲಿಯೂ ಹೈಪೋಗ್ಲೈಸಿಮಿಯಾ ಅಥವಾ ರಕ್ತ
ದಲ್ಲಿ ಗ್ಲೂಕೋಸ್ ಕಡಿಮೆಯಾಗುವ ಹಂತಕ್ಕೆ ಹೋಗುವುದನ್ನು ತಪ್ಪಿಸುತ್ತದೆ.

ಕೃತಕ ಪ್ಯಾಂಕ್ರಿಯಾಸ್ ಯಾರಲ್ಲಿ ಉಪಯೋಗವಾಗುತ್ತದೆ ?: ವೈದ್ಯರು ಮತ್ತು ರೋಗಿಗಳು ಒಟ್ಟಾಗಿ ಕುಳಿತು ಸಮಾಲೋಚನೆ ಮಾಡಿ ಯಾರಿಗೆ ಯಾವ ರೀತಿಯ ಕೃತಕ ಪ್ಯಾಂಕ್ರಿಯಾಸ್ ಹೊಂದುತ್ತದೆ ಎಂದು ನಿರ್ಧರಿಸಿ ನಂತರ ಅದನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

ಇನ್ನಿತರ ಅಂಶಗಳು: ವಯಸ್ಸು- ಕೆಲವು ಮಾಡೆಲ್ ಗಳು ಎರಡು ವರ್ಷದ ಒಳಗಿನ ಮಕ್ಕಳಲ್ಲಿಯೂ ಉಪಯೋಗಿಸಲು ಅನುಮತಿ ದೊರಕಿದೆ. ಮತ್ತೆ ಕೆಲವು ಮಾಡೆಲ್‌ಗಳು ಆರು ವರ್ಷ ಮತ್ತು ನಂತರದ ಮಕ್ಕಳಲ್ಲಿ ಉಪಯೋಗಿಸಲು ಪರವಾನಗಿ ಪಡೆದಿವೆ.

ಕೃತಕ ಪ್ಯಾಂಕ್ರಿಯಾಸ್‌ನ ಲಾಭಗಳೇನು?: ಟೈಪ್ 1 ಡಯಾಬಿಟಿಸ್ ಇರುವವರಲ್ಲಿ ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ಸರಿಯಾದ
ಮಟ್ಟದಲ್ಲಿ ಇಡಲು ಸಹಾಯ ಮಾಡುತ್ತದೆ. ಅಂತೆಯೇ ಅವರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ
ಗ್ಲುಕೋಸ್ ಮಟ್ಟವು ನಿರಂತರವಾಗಿ ಕಂಪ್ಯೂಟರ್ ನಿಂದ ಮಾನಿಟರ್ ಮಾಡಲ್ಪಟ್ಟು ದೇಹಕ್ಕೆ ಅಗತ್ಯವಿರುವಷ್ಟೇ ಇನ್ಸುಲಿನ್ ಅನ್ನು ಆಯಾಯ ಹೊತ್ತಿಗೆ ಪೂರೈಕೆ ಮಾಡುತ್ತಿರುತ್ತದೆ. ಈ ವ್ಯವಸ್ಥೆಯಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟ ದಿಢೀರ್ ಜಾಸ್ತಿ ಯಾಗುವುದು (ಹೈಪರ್ ಗ್ಲೈಸಿಮಿಯಾ)ಅಥವಾ ಗ್ಲೂಕೋಸ್ ಮಟ್ಟ ದಿಢೀರ್ ಕುಸಿಯುವುದು ಅಥವಾ ಕಡಿಮೆಯಾಗುವುದು(ಹೈಪೊಗ್ಲೈಸಿಮಿಯಾ)- ಹಂತಗಳಿಗೆ ತಲುಪುವುದನ್ನು ಸಂಪೂರ್ಣವಾಗಿ ತಪ್ಪಿಸುತ್ತದೆ. ದೂರದಲ್ಲಿರುವ ವೈದ್ಯರು ಸಹಿತ ಇನ್ಸುಲಿನ್ ಡೋಸ್‌ಅನ್ನು ಮಾನಿಟರ್
ಮಾಡಬಹುದು.

ಯಾರಿಗೆ ಡೋಸ್ ಅಡ್ಜಸ್ಟ್ಮೆಂಟ್ ಅಗತ್ಯವಿದೆಯೋ ಅವರಿಗೆ ಹಾಗೆ ಮಾಡಲು ಸಲಹೆ ಮಾಡಬಹುದು. ಮಕ್ಕಳ ಪಾಲಕರು ರಕ್ತದ ಗ್ಲೂಕೋಸ್ ಮಟ್ಟವನ್ನು ತಮ್ಮ ಸ್ಮಾರ್ಟ್ ಫೋನ್‌ನಿಂದ ಹಗಲು ಮತ್ತು ರಾತ್ರಿ ಎರಡೂ ಸಂದರ್ಭಗಳಲ್ಲಿ ನಿರಂತರವಾಗಿ ಮಾನಿ
ಟರ್ ಮಾಡಬಹುದು.

ಕೃತಕ ಪ್ಯಾಂಕ್ರಿಯಾಸ್‌ನ ಪರಿಮಿತಿಗಳು (ಲಿಮಿಟೇಷನ್‌ಗಳು): ಈ ಉಪಕರಣವು ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ನಿಯಮಿತವಾಗಿ ಪರೀಕ್ಷೆ ಮಾಡುತ್ತಿರಬೇಕು. ಪ್ರತಿ ಬಾರಿ ಆಹಾರ ತೆಗೆದುಕೊಂಡ ನಂತರ ಅದರ ವಿವರಗಳನ್ನು ಈ ವ್ಯವಸ್ಥೆಗೆ ದಾಖಲಿಸುತ್ತಿರಬೇಕು. ಇನ್ ಫ್ಯೂಷನ್ ಪಂಪ್, ಕೆಥಟರ್- ಇವುಗಳನ್ನು ಆಗಾಗ ಪರೀಕ್ಷಿಸಿ, ಅಗತ್ಯ ಬಿದ್ದಾಗ ಬದಲಿಸುತ್ತಿರಬೇಕು.
ಕಂಪ್ಯೂಟರ್ ಪ್ರೋಗ್ರಾಮ್‌ಅನ್ನು ಆಗಾಗ ಅಡ್ಜಸ್ಟ್ ಮಾಡುತ್ತಿರಬೇಕು. ಸರಿಯಾದ ಇನ್ಸುಲಿನ್ ಮಟ್ಟ ಡೆಲಿವರಿ ಆಗು ತ್ತಿದೆಯೋ ಎಂದು ಪರೀಕ್ಷಿಸುತ್ತಿರಬೇಕು.

ಯಾವುದೇ ಕಾರಣದಿಂದ ಈ ವ್ಯವಸ್ಥೆಯಲ್ಲಿ ಗ್ಲೂಕೋಸ್ ಮಟ್ಟವನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಈ ವ್ಯವಸ್ಥೆ ರಹಿತವಾಗಿ ಅಂತಹ ಸಂದರ್ಭ ನಿವಾರಿಸಲು ಬೇರೆ ವ್ಯವಸ್ಥೆ ಯನ್ನು ಮಾಡಿಕೊಳ್ಳಬೇಕಾಗುತ್ತದೆ.

ಜಗತ್ತಿನಾದ್ಯಂತ ಎಲ್ಲಿಯೂ ಮಾಡದ ದೊಡ್ಡ ಮಟ್ಟದ ಸಮೀಕ್ಷೆಯನ್ನು ಇಂಗ್ಲೆಂಡಿನಲ್ಲಿ ಇತ್ತೀಚೆಗೆ ಮೊದಲ ಬಾರಿಗೆ ಮಾಡಲಾಗಿದೆ. ಅದರ ಪ್ರಕಾರ 900 ಟೈಪ್ 1 ಡಯಾಬಿಟಿಸ್ ರೋಗಿಗಳು ಕೃತಕ ಪ್ಯಾಂಕ್ರಿಯಾಸ್ ಉಪಯೋಗಿಸುತ್ತಿದ್ದಾರೆ. 200ಕ್ಕೂ ಹೆಚ್ಚು ಮಕ್ಕಳು ಕ್ಲೋಸ್ಡ್ ಲೂಪ್ ಸಿಸ್ಟಮ್ ಉಪಯೋಗಿಸುತ್ತಿದ್ದಾರೆ. 16 ವರ್ಷದ ಹುಡುಗಿಯ ತಾಯಿಯೊಬ್ಬಳು ಮೊದಲು ರಾತ್ರಿ ಅಲಾರಾಮ್ ಇಟ್ಟು ಪ್ರತಿ 2 ಗಂಟೆಗೊಮ್ಮೆ ಎದ್ದು ಸಕ್ಕರೆಯ ಅಂಶ ನೋಡಬೇಕಿತ್ತು. ಈಗ ಈ ಕೃತಕ ಪ್ಯಾಂಕ್ರಿಯಾಸ್‌ನಿಂದ ಆ ಬವಣೆ ನೀಗಿದೆಯೆಂದು ಸಂತಸ ಪಡುತ್ತಾಳೆ. ಇದುವರೆಗೆ ಇದರಲ್ಲಿ ಬಹಳ ಧನಾತ್ಮಕ ಫಲಿತಾಂಶ ಬಂದಿದೆ ಎಂಬುದು ಆಶಾದಾಯಕ.