Monday, 14th October 2024

ಏರುಗತಿಯಲ್ಲಿರುವ ಮಧುಮೇಹಕ್ಕೆ ಕಾರಣಗಳೇನು ?

ಸ್ವಾಸ್ಥ್ಯ ಸಂಪದ

yoganna55@gmail.com

‘ಸಾವಿಲ್ಲದವರ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ’- ಇದು ಸಾವು ಎಲ್ಲರನ್ನೂ ವ್ಯಾಪಿಸುತ್ತದೆ, ಯಾರೂ ಇದಕ್ಕೆ ಹೊರತಾ ಗಿಲ್ಲ ಎಂಬುದನ್ನು ಸೂಚಿಸುವ ಜನಪ್ರಿಯ ನಾಣ್ಣುಡಿ. ಇದಕ್ಕೆ ಪರ್ಯಾಯವಾಗಿ, ‘ಸಕ್ಕರೆ ಕಾಯಿಲೆ ಇಲ್ಲದವರ ಮನೆಯಿಂದ ಸಕ್ಕರೆ ತೆಗೆದುಕೊಂಡು ಬಾ’ ಎನ್ನುವಷ್ಟರ ಮಟ್ಟಿಗೆ ಸಕ್ಕರೆ ಕಾಯಿಲೆ ಅಥವಾ ಮಧುಮೇಹವು ಮನೆಮನೆ ಯಲ್ಲಿಯೂ ಕಾಣಿಸಿ ಕೊಳ್ಳುವ ಹಂತ ತಲುಪುವ ದಿನಗಳು ದೂರವಿಲ್ಲ.

ಪ್ರಪಂಚದಾದ್ಯಂತ ಸಕ್ಕರೆ ಕಾಯಿಲೆಗೀಡಾಗುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. 60 ವರ್ಷ ವಯೋಮಾನ ಮೀರಿದ ಶೇ. 40ರಷ್ಟು ಜನ ಈ ಕಾಯಿಲೆಗೀಡಾಗುತ್ತಿದ್ದು, ದಿನ ಗಳೆದಂತೆ ಈ ಪ್ರಮಾಣ ಏರುತ್ತಿದೆ. ಒಂದು ಕಾಲಕ್ಕೆ ‘ಶ್ರೀಮಂತರ ಕಾಯಿಲೆ’ ಎನ್ನಲಾಗು ತ್ತಿದ್ದ ಇದು ಇಂದು ಬಡವ-ಬಲ್ಲಿದ ಎನ್ನದೆ ಎಲ್ಲರಿಗೂ ವ್ಯಾಪಿಸುತ್ತಿದೆ. ಕಾರಣ, ಶ್ರೀಮಂತ ರಿಗಿದ್ದ ಎಲ್ಲ ದುರಭ್ಯಾಸ ಗಳು ಇಂದು ಎಲ್ಲರನ್ನೂ ಆವರಿಸಿರುವುದು.

ಸಾಮಾನ್ಯವಾಗಿ 50-60 ವರ್ಷಗಳ ವಯೋಮಾನದ ನಂತರ ಕಾಣಿಸಿಕೊಳ್ಳುತ್ತಿದ್ದ ಮಧು ಮೇಹವೀಗ 15-20ರ ಹರೆಯ ದವರನ್ನೂ ಅಪ್ಪಳಿಸುತ್ತಿದೆ. ಸಾಮಾನ್ಯವಾಗಿ ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ ಇಂದು ಸ್ತ್ರೀರಲ್ಲೂ ಗಣನೀಯ ವಾಗಿ ಕಾಣಬರುತ್ತಿದೆ. ಯುವಕರಲ್ಲಿ ಹೆಚ್ಚುತ್ತಿರುವ ಮದ್ಯಪಾನ, ಧೂಮಪಾನ ಮತ್ತು ಸ್ಥೂಲ ಕಾಯಗಳೇ ಇದಕ್ಕೆ ಕಾರಣ. ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಮಧುಮೇಹವು ಗರ್ಭದ ಕೂಸನ್ನೂ ಅವಘಡಕ್ಕೆ ಈಡುಮಾಡುವ ಸಾಧ್ಯತೆ ಮತ್ತು ನಂತರ ಹುಟ್ಟುವ ಮಗುವೂ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.

ಮಧುಮೇಹವು ಯಾವ ತೊಂದರೆಯನ್ನೂ ನೀಡದೆ ಗೌಪ್ಯವಾಗಿದ್ದುಕೊಂಡೇ ದೇಹದ ಪ್ರಮುಖ ಅಂಗಗಳಾದ ಹೃದಯ,
ರಕ್ತನಾಳಗಳು, ಮೂತ್ರಜನಕಾಂಗಗಳು, ನರಮಂಡಲ ಮತ್ತು ಕಣ್ಣುಗಳನ್ನು ಗಂಭೀರವಾಗಿ ಕಾಯಿಲೆಗೆ ಈಡು ಮಾಡಿ, ಅವುಗಳಿಗೆ ಸಂಬಂಧಿಸಿದ ಘೋರ ಪರಿಣಾಮಗಳಿಂದಲೇ ಪ್ರಪ್ರಥಮವಾಗಿ ವ್ಯಕ್ತವಾಗುವ ಪ್ರಸಂಗಗಳು ಹೆಚ್ಚಾಗುತ್ತಿವೆ.

ಭಾರತವು ಪ್ರಪಂಚದಲ್ಲಿಯೇ ಹೆಚ್ಚು ಮಧುಮೇಹಿಗಳನ್ನು ಒಳಗೊಂಡ ಮತ್ತು ಈ ಕಾಯಿಲೆ ಅತಿವೇಗದಲ್ಲಿ ಪಸರಿಸುತ್ತಿರುವ ದೇಶವಾಗಿದ್ದು, ‘ಮಧುಮೇಹದ ಜಾಗತಿಕ ರಾಜಧಾನಿ’ ಎಂಬ ಅಪಖ್ಯಾತಿಗೂ ಒಳಗಾಗಿದೆ. ತಮಿಳುನಾಡು, ಕೇರಳ ಮತ್ತು ಕರ್ನಾ ಟಕಗಳಲ್ಲಿ ಮಧುಮೇಹದ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಮಧುಮೇಹ ಒಂದಿದ್ದರೆ ಸೋಂಕುರೋಗಗಳು, ಕ್ಷಯ, ಹೃದಯಾಘಾತ, ಮೂತ್ರಜನಕಾಂಗದ ವೈಫಲ್ಯ, ಲಕ್ವ, ಅಂಧತ್ವ ಇತ್ಯಾದಿ ಕಾಯಿಲೆಗಳು ಬಂದು ಇಡೀ ದೇಹವೇ ‘ರೋಗಗಳ ಕೋಶ’ವಾಗುವ ಸಂಭಾವ್ಯತೆ ಹೆಚ್ಚಿರುತ್ತದೆ.

ದೇಹಸ್ನೇಹಿ ಕಾಯಿಲೆ: ಮಧುಮೇಹ ದೇಹಸ್ನೇಹಿ ಕಾಯಿಲೆ. ಇದನ್ನು ಮಿತ್ರನಂತೆ ಸತ್ಕರಿಸಿದಲ್ಲಿ ಹಿತಮಿತ್ರನಾಗಿಯೂ,
ಉದಾಸೀನ ಮಾಡಿದಲ್ಲಿ ಒಳಶತ್ರುವಾಗಿಯೂ ಪರಿಣಮಿಸುತ್ತದೆ. ಈ ಕಾಯಿಲೆಯ ಇರುವಿಕೆಯನ್ನು ಬಹುಬೇಗ ಪತ್ತೆ ಮಾಡಿ ಅದರ ವಿವಿಧ ಮಜಲುಗಳನ್ನು ಅರ್ಥಮಾಡಿಕೊಂಡು ಆರೈಕೆ ಮಾಡಿಕೊಂಡಲ್ಲಿ ಅದು ದೇಹಸ್ನೇಹಿಯಾಗಿದ್ದು, ಆರೋಗ್ಯಕರ ಜೀವನಶೈಲಿಯ ಪರಿಪಾಲನೆಯನ್ನು ಕ್ಷಣಕ್ಷಣಕ್ಕೂ ಜ್ಞಾಪಿಸಿ ಹಿತಮಿತ್ರನಂತಿರುತ್ತದೆ.

ಮಧುಮೇಹವು ಜೀವನಶೈಲಿಯಿಂದ, ಅಗತ್ಯ ಬಿದ್ದರೆ ಔಷಧಿಗಳಿಂದ ಸಮರ್ಥವಾಗಿ ನಿಯಂತ್ರಿಸಿಕೊಂಡು ನಿಗದಿತ ಜೀವಾವಧಿ ಯಲ್ಲಿ ಪೂರ್ಣ ನೆಮ್ಮದಿಯಿಂದ ಬದುಕುವುದಕ್ಕೆ ಅನುವು ಮಾಡಿಕೊಡುವ ಕಾಯಿಲೆಯೆನ್ನಬಹುದು. ಈ ಕಾಯಿಲೆಯ ಕಾರಣ ಗಳು, ಉತ್ಪತ್ತಿಯ ರೀತಿ, ಸಂಭವಿಸಬಹುದಾದ ಅವಘಡಗಳು, ಚಿಕಿತ್ಸೆ, ಆಹಾರ ನಿಯಮಗಳು, ಅನುಸರಿಸಬೇಕಾದ ಜೀವನಶೈಲಿ ಇವೆಲ್ಲದರ ಅರಿವಿದ್ದಲ್ಲಿ ಮಾತ್ರ ರೋಗಿಯು ಈ ಕಾಯಿಲೆಯನ್ನು ಸಮರ್ಥವಾಗಿ ನಿಯಂತ್ರಿಸಿಕೊಳ್ಳಲು ಸಾಧ್ಯ.

ಇದು ಒಮ್ಮೆ ಬಂದು-ಹೋಗುವ ಸಮಸ್ಯೆಯಲ್ಲ, ಜೀವನವಿಡೀ ದೇಹದೊಡನೆ ಇರುವ ‘ಅವಿನಾಭಾವ ಸಮಸ್ಯೆ’. ಆದ್ದರಿಂದ, ಇದನ್ನು ಅನಿವಾರ್ಯ ಸ್ನೇಹಿತ/ ಅತಿಥಿಯಂತೆ ಸ್ವೀಕರಿಸಿ, ಸೂಕ್ತ ಆರೈಕೆಗಳಿಂದ ಸತ್ಕರಿಸುವ ವಿಧಿ-ವಿಧಾನಗಳನ್ನು ಅರಿತು
ನಡೆದಲ್ಲಿ ದೇಹಸ್ನೇಹಿಯಾಗುತ್ತದೆ.

*ಅಂತಾರಾಷ್ಟ್ರೀಯ ಮಧುಮೇಹ ದಿನ: 1991ರಲ್ಲಿ ಪ್ರಾರಂಭವಾದ ಅಂತಾರಾಷ್ಟ್ರೀಯ ಡಯಾಬಿಟಿಸ್ ಫೆಡರೇಷನ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಜತೆಗೂಡಿ ಮಧುಮೇಹದ ಬಗ್ಗೆ ಪ್ರಪಂಚದಾದ್ಯಂತ ಅರಿವು ಮೂಡಿಸುವಲ್ಲಿ
ವ್ಯಸ್ತವಾಗಿದೆ. ಇದರನ್ವಯ ಪ್ರತಿವರ್ಷದ ನವೆಂಬರ್ ೧೪ರಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಂತಾ ರಾಷ್ಟ್ರೀಯ ಮಧುಮೇಹ ದಿನವಾಗಿ ಆಚರಿಸಲಾಗುತ್ತಿದೆ.

ಇದು ಇನ್ಸುಲಿನ್ ಅನ್ನು ಕಂಡುಹಿಡಿದ ಟೊರೆಂಟೊ ವಿಶ್ವವಿದ್ಯಾಲಯದ ಫ್ರೆಡ್ರಿಕ್ ಬಾಂಟಿಂಗ್‌ನ ಜನ್ಮದಿನವೂ ಹೌದು. ಕ್ರಿ.ಪೂ. ೫ನೇ ಶತಮಾನದಲ್ಲಿ, ಜನಪ್ರಿಯ ಭಾರತೀಯ ಶಸಚಿಕಿತ್ಸಕ ಸುಶ್ರುತ, ಸಕ್ಕರೆ ಕಾಯಿಲೆಯ ರೋಗಿಗಳ ಮೂತ್ರವು ಸಿಹಿಯಾಗಿರುವು ದನ್ನು ಗುರುತಿಸಿ ಈ ಕಾಯಿಲೆಗೆ ‘ಮಧುಮೇಹ’ ಎಂದು ಹೆಸರಿಸಿ, ಭಾರತದಲ್ಲಿ ಈ ಕಾಯಿಲೆಯನ್ನು ಗುರುತಿಸಿದ ಪ್ರಥಮ ವೈದ್ಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಪ್ರತಿವರ್ಷದ ನವೆಂಬರ್ ೧೪ರಂದು, ಮಧುಮೇಹಕ್ಕೆ ಸಂಬಂಧಿಸಿದ ಘೋಷವಾಕ್ಯವೊಂದನ್ನು ಹೊರಡಿಸುವ ಮೂಲಕ ಈ
ಕಾಯಿಲೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ‘ಡಯಾಬಿಟಿಸ್ ಶಿಕ್ಷಣಕ್ಕೆ ಆಹ್ವಾನ’ ಎಂಬುದು ಈ ವರ್ಷದ  ಘೋಷವಾಕ್ಯ ವಾಗಿದೆ.

ಮಧುಮೇಹ ಎಂದರೇನು?: ವಾಹನಗಳ ಎಂಜಿನ್ ಕಾರ್ಯನಿರ್ವಹಿಸಲು ಪೆಟ್ರೋಲ್ ಇತ್ಯಾದಿ ಇಂಧನಗಳು ಅವಶ್ಯವಿರು ವಂತೆ, ಮನುಷ್ಯನೆಂಬ ಜೈವಿಕಯಂತ್ರದ ಕಾರ್ಯನಿರ್ವಹಣೆಗೆ ಶಕ್ತಿ ಅಗತ್ಯ. ಈ ಶಕ್ತಿಯು ನಾವು ಸೇವಿಸಿದ ಆಹಾರ ಪದಾರ್ಥ ಗಳಿಂದ, ಅದರಲ್ಲೂ ಮುಖ್ಯವಾಗಿ ಅಕ್ಕಿ, ರಾಗಿ, ಜೋಳ, ಗೋದಿ, ಸಕ್ಕರೆ ಇತ್ಯಾದಿ ಪದಾರ್ಥಗಳ ಕಾರ್ಬೋ ಹೈಡ್ರೇಟ್‌ಗಳಲ್ಲಿರುವ ಗ್ಲೂಕೋಸ್‌ನಿಂದ ಲಭಿಸುತ್ತದೆ. ಈ ಗ್ಲೂಕೋಸ್ ಜೀರ್ಣಾಂಗಗಳಲ್ಲಿ ಬಿಡುಗಡೆಯಾಗಿ ರಕ್ತಗತವಾಗುತ್ತದೆ ಮತ್ತು ರಕ್ತನಾಳಗಳ ಮೂಲಕ ಜೀವಕೋಶಗಳನ್ನು ತಲುಪುತ್ತದೆ.

ಹೀಗೆ ರಕ್ತದಿಂದ ಜೀವಕೋಶಗಳಿಗೆ ಗ್ಲೂಕೋಸ್ ರವಾನೆಯಾಗಲು ಪ್ಯಾಂಕ್ರಿಯಾಸ್ ಗ್ರಂಥಿಯಿಂದ ಉತ್ಪತ್ತಿಯಾಗುವ ಇನ್ಸುಲಿನ್
ಹಾರ್ಮೋನ್ ಅತ್ಯವಶ್ಯಕ. ಹೀಗೆ ಇನ್ಸುಲಿನ್‌ನಿಂದ ಜೀವಕೋಶಗಳ ಒಳಕ್ಕೆ ರವಾನೆಯಾದ ಗ್ಲೂಕೋಸ್ ನಿಂದ ಶಕ್ತಿ ಉತ್ಪತ್ತಿ ಯಾಗುತ್ತದೆ. ರಕ್ತದಲ್ಲಿರುವ ಗ್ಲೂಕೋಸ್‌ನ ಪ್ರಮಾಣಕ್ಕನುಗುಣವಾಗಿ ಪ್ಯಾಂಕ್ರಿಯಾಸ್ ಗ್ರಂಥಿಯಿಂದ ಇನ್ಸುಲಿನ್ ಕ್ಷಣಕ್ಷಣಕ್ಕೂ
ಬಿಡುಗಡೆಯಾಗುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವು, ಸೇವಿಸಿದ ಆಹಾರದ ಪ್ರಮಾಣ, ಬಿಡುಗಡೆಯಾಗುವ ಇನ್ಸುಲಿನ್ ಪ್ರಮಾಣ ಮತ್ತು ಇನ್ಸುಲಿನ್‌ನ ಕಾರ್ಯಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ಪ್ಯಾಂಕ್ರಿಯಾಸ್‌ನಿಂದ ಬಿಡುಗಡೆಯಾಗುವ ಇನ್ಸುಲಿನ್ ಪ್ರಮಾಣ ಕಡಿಮೆಯಾದಲ್ಲಿ ಅಥವಾ/ಮತ್ತು ಬಿಡುಗಡೆಯಾಗುವ ಇನ್ಸುಲಿನ್ ಪ್ರಮಾಣ ಸಹಜವಾಗಿದ್ದರೂ ಅದರ ಕಾರ್ಯಸಾಮರ್ಥ್ಯ ಕುಗ್ಗಿದಲ್ಲಿ, ರಕ್ತದಲ್ಲಿರುವ ಗ್ಲೂಕೋಸ್ ಜೀವಕೋಶಗಳಿಗೆ ರವಾನೆಯಾಗದೆ ಅದರ ಪ್ರಮಾಣ ಏರುತ್ತದೆ. ಹೀಗೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಏರಿಕೆಯಾಗುವುದು ಮಧುಮೇಹದ
ಪ್ರಮುಖ ‘ರೋಗನ್ಯೂನತೆ’.

ಸಹಜ ದೇಹಸ್ಥಿತಿಯ ಮನುಷ್ಯ ಎಷ್ಟೇ ಸಿಹಿ ಅಥವಾ ಹೆಚ್ಚಿನ ಪ್ರಮಾಣದ ಆಹಾರ ಸೇವಿಸಿದರೂ ರಕ್ತದ ಗ್ಲೂಕೋಸ್ ಪ್ರಮಾಣವು 140ರಿಂದ 170 ಮಿ.ಗ್ರಾಂ/ಡಿ.ಎಲ್ ಗಡಿಯನ್ನು ಮೀರುವುದಿಲ್ಲ. ಈ ಗಡಿ ದಾಟದ ಹಾಗೆ ಸಹಜ ವ್ಯವಸ್ಥೆ ಕಾರ್ಯ ನಿರ್ವಹಿಸು ತ್ತದೆ. ಈ ಗಡಿಯೊಳಗೆ ರಕ್ತದ ಗ್ಲೂಕೋಸ್ ಇದ್ದಲ್ಲಿ, ಮೂತ್ರದಲ್ಲಿ ಗ್ಲೂಕೋಸ್ ಹೊರಹೋಗುವುದಿಲ್ಲ. ಈ ಗಡಿ ದಾಟಿದಲ್ಲಿ, ಮೂತ್ರದಲ್ಲಿ ಗ್ಲೂಕೋಸ್ ಕಾಣಿಸಿಕೊಂಡು ಅದು ಸಿಹಿಮೂತ್ರವಾಗುತ್ತದೆ. ಈ ಕಾರಣಕ್ಕಾಗಿಯೇ ಇದನ್ನು ಸಿಹಿಮೂತ್ರರೋಗ ಅಥವಾ ಮಧುಮೇಹ ಎನ್ನುವುದು.

ರಕ್ತದ ಗ್ಲೂಕೋಸ್ ಏರಿಕೆಯಿಂದಾಗಿ ರಕ್ತನಾಳಗಳು, ಮೂತ್ರಜನಕಾಂಗ, ಕಣ್ಣಿನ ರೆಟಿನಾ, ಹೃದಯ, ನರಮಂಡಲ ಅತೀವ ಹಾನಿಗೊಳಗಾಗುತ್ತವೆ. ಜೀವಕೋಶಗಳಿಗೆ ಗ್ಲೂಕೋಸ್ ರವಾನೆ ಕಡಿಮೆಯಾಗುವುದರಿಂದ ಅವು ಶಕ್ತಿಹೀನವಾಗಿ, ದೇಹದ ಅಂಗಾಂಗಗಳ ಕಾರ್ಯದಕ್ಷತೆ ಕುಗ್ಗಿ, ಹಲವು ಬಗೆಯ ಕಾಯಿಲೆಗಳಿಗೆ ನಾಂದಿ ಯಾಗುತ್ತದೆ. ಸಕ್ಕರೆಯಲ್ಲಿ ಗ್ಲೂಕೋಸ್ ಮತ್ತು
-ಕ್ಟೋಸ್ ಕಣಗಳಿದ್ದು, ಈ ಕಾಯಿಲೆಯು ಗ್ಲೂಕೋಸ್ ಚಯಾಪಚಯ ಕ್ರಿಯೆಗೆ ಸಂಬಂಧಪಟ್ಟಿರುವುದರಿಂದ ಇದನ್ನು ‘ಗ್ಲೂಕೋಸ್ ಕಾಯಿಲೆ’ ಎಂದೇ ಕರೆಯುವುದು ಸಮಂಜಸ.

ಬಗೆಗಳು ಮತ್ತು ಕಾರಣಗಳು: ಮಧುಮೇಹದಲ್ಲಿ ಅನೇಕ ವಿಧಗಳಿದ್ದರೂ, 1ನೇ ವಿಧ, 2ನೇ ವಿಧ, 1 ಮತ್ತು 2ನೇ ವಿಧಗಳ ಮಿಶ್ರಿತ ವಿಧ ಮತ್ತು ಗರ್ಭಿಣಿಯರ ಮಧುಮೇಹ ಎಂಬ 4 ಪ್ರಮುಖ ವಿಧಗಳನ್ನು ಗುರುತಿಸಲಾಗಿದೆ. 1ನೇ ವಿಧದ ಮಧುಮೇಹ ದಲ್ಲಿ, ಇನ್ಸುಲಿನ್ ಸ್ರವಿಸುವ ಪ್ಯಾಂಕ್ರಿಯಾಸ್ ಗ್ರಂಥಿಯ ಜೀವಕೋಶಗಳು ಸಂಪೂರ್ಣ ನಾಶವಾಗಿ ಇನ್ಸುಲಿನ್ ಉತ್ಪತ್ತಿಯೇ ಸ್ಥಗಿತ ವಾಗಿರುತ್ತದೆ. ಇದಕ್ಕೆ ವೈರಸ್ ಸೋಂಕು ಕಾರಣ ಎನ್ನಲಾಗಿದೆ.

2ನೇ ವಿಧದ ಮಧುಮೇಹದಲ್ಲಿ, ಪ್ಯಾಂಕ್ರಿಯಾಸ್‌ನಲ್ಲಿ ಇನ್ಸುಲಿನ್ ಉತ್ಪತ್ತಿ ಪ್ರಮಾಣ ಕಡಿಮೆಯಿರುತ್ತದೆ ಅಥವಾ ಸಹಜ ಪ್ರಮಾಣದಲ್ಲಿದ್ದರೂ ಅದರ ಕಾರ್ಯಸಾಮರ್ಥ್ಯ ಕುಗ್ಗಿರುತ್ತದೆ ಅಥವಾ ಇವೆರಡೂ ಜತೆಗೂಡಿರಬಹುದು. ವಂಶವಾಹಿ ನ್ಯೂನತೆ, ಸ್ಥೂಲಕಾಯ, ದೈಹಿಕ ವ್ಯಾಯಾಮವಿಲ್ಲದ ಬದುಕು, ಅತಿಯಾದ ಮಾನಸಿಕ ಒತ್ತಡ, ಅತಿಯಾದ ಆಹಾರ ಸೇವನೆ, ಧೂಮಪಾನ,
ಮದ್ಯಪಾನ ಇವು ೨ನೇ ವಿಧದ ಮಧುಮೇಹಕ್ಕೆ ಪ್ರಮುಖ ಕಾರಣಗಳು ಎನ್ನಲಾಗಿದೆ.

ಮಕ್ಕಳಲ್ಲಿ ೧ನೇ ವಿಧದ ಮಧುಮೇಹವಿದ್ದು, ಸ್ಥೂಲಕಾಯವೂ ಜತೆಗೂಡಿದಲ್ಲಿ ಅದು ಮಿಶ್ರಿತ ವಿಧದ ಮಧುಮೇಹ ಎನಿಸಿ ಕೊಳ್ಳುತ್ತದೆ. ಇನ್ನು, ಈ ಹಿಂದೆ ಮಧುಮೇಹ ಇಲ್ಲದ ಗರ್ಭಿಣಿಯರಲ್ಲಿ ಪ್ರಪ್ರಥಮ ಬಾರಿಗೆ ೩ನೇ ತ್ರೈಮಾಸಿಕರಲ್ಲಿ ಕಾಣಿಸಿಕೊಳ್ಳುವ ಸಕ್ಕರೆ ಕಾಯಿಲೆಯನ್ನು ಗರ್ಭಿಣಿಯರ ಮಧುಮೇಹ ಎನ್ನಲಾಗುತ್ತದೆ.

ಇದು ಗರ್ಭಿಣಿಯರಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳ ವಿಷಮ ಪರಿಣಾಮದಿಂದ ಉಂಟಾಗುತ್ತದೆ ಎನ್ನಲಾಗಿದ್ದು, ಬಹುತೇಕರಲ್ಲಿ ಹೆರಿಗೆಯ ನಂತರ ಅದು ಇಲ್ಲವಾಗುತ್ತದೆ. ಮತ್ತೆ ಕೆಲವರಲ್ಲಿ ನಂತರದ ದಿನಗಳಲ್ಲೂ ಮುಂದುವರಿಯಬಹುದು. ಮುಂಜಾಗ್ರತಾ ಕ್ರಮ ವಹಿಸದಿದ್ದಲ್ಲಿ ಹುಟ್ಟುವ ಮಗುವಿನಲ್ಲೂ ಮುಂದಿನ ದಿನಗಳಲ್ಲಿ ಮಧುಮೇಹ ಕಾಣಸಿಕೊಳ್ಳುವ
ಸಾಧ್ಯತೆ ಯಿರುತ್ತದೆ. ಈ ಪ್ರಮುಖ ವಿಧಗಳಲ್ಲದೆ, ಥೈರಾಯ್ಡ್ ಗ್ರಂಥಿಯ ಕಾಯಿಲೆಗಳು, ಅಡ್ರಿನಲಿನ್ ಗ್ರಂಥಿಯ ಕಾಯಿಲೆಗಳು ಇರುವವರಲ್ಲಿ, ದೀರ್ಘಕಾಲ ಸ್ಟೀರಾಯ್ಡ್ ಔಷಧಗಳನ್ನು  ಸೇವಿಸುತ್ತಿರುವವರಲ್ಲೂ ಮಧುಮೇಹದ ರೋಗಲಕ್ಷಣಗಳು ಕಾಣಿಸಿ ಕೊಳ್ಳಬಹುದು.

ತೊಂದರೆಗಳು: ಮಧುಮೇಹವು ದೀರ್ಘಕಾಲದವರೆಗೆ ಯಾವುದೇ ತೊಂದರೆ ನೀಡದೆ ಮೌನವಾಗಿರಬಹುದು. ಈ ಕಾರಣ ದಿಂದಲೇ ಅದನ್ನು ‘ಸದ್ದಿಲ್ಲದ ಕೊಲೆಗಾರ’ ಎನ್ನುವುದು. ಅತಿಯಾದ ದಾಹ, ಅತಿಮೂತ್ರ ವಿಸರ್ಜನೆ, ಅತಿಹಸಿವು, ಸುಸ್ತು,
ಸಂಕಟ, ತೂಕನಷ್ಟ, ಉರಿಮೂತ್ರ, ಎದೆನೋವು, ಮೈಮೇಲೆ ಗಾಯಗಳು, ಕಣ್ಣಿನ ತೊಂದರೆ, ಕೈಕಾಲು ಉರಿ, ಲೈಂಗಿಕ ಸಮಸ್ಯೆ ಗಳು (ಶಿಶ್ನ ನಿಮಿರುವಿಕೆಯ ಸಮಸ್ಯೆ, ಶಿಶ್ನದ ಉರಿ, ಲೈಂಗಿಕಾಸಕ್ತಿ ಕುಂದಿಕೆ, ಮರ್ಮಾಂಗಾವರಣದಲ್ಲಿ ಕೆರೆತ), ಲಕ್ವಗಳು, ಸಂತಾನಹೀನತೆ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳಬಹುದು.

ಮಧುಮೇಹವು ಸರ್ವರೋಗಗಳ ಉಗಮಕ್ಕೆ ನಾಂದಿ ಯಾಗುವುದರಿಂದ, ಬಹುಪಾಲು ಎಲ್ಲ ಕಾಯಿಲೆಗಳ ತೊಂದರೆಗಳು ಮತ್ತು ಲಕ್ಷಣಗಳು ಇದರಲ್ಲಿ ಕಾಣಿಸಿಕೊಳ್ಳಬಹುದು.

ದೃಢೀಕರಣ: ರಕ್ತದ ಗ್ಲೂಕೋಸ್ ಪ್ರಮಾಣವನ್ನು ಅಳೆದು ಮಧುಮೇಹವನ್ನು ದೃಢೀಕರಿಸಿಕೊಳ್ಳಲಾಗುತ್ತದೆ. 12 ಗಂಟೆ ಹಸಿದ ಹೊಟ್ಟೆಯಲ್ಲಿನ ರಕ್ತದ ಗ್ಲೂಕೋಸ್ ಪ್ರಮಾಣವನ್ನು ಅಳೆಯುವುದು ಅತ್ಯವಶ್ಯಕ. ಈ ಪ್ರಮಾಣ 110 ಮಿ.ಗ್ರಾಂ/ಡಿ.ಎಲ್. ಗಿಂತಲೂ ಅಧಿಕವಾಗಿದ್ದಲ್ಲಿ ಅದು ಮಧುಮೇಹದ ಸೂಚಕವಾಗಿರುತ್ತದೆ. ಅಂದರೆ, 110-115 ಮಿ. ಗ್ರಾಂ/ಡಿ.ಎಲ್ ಇದ್ದಲ್ಲಿ ಆರಂಭಿಕ ಹಂತವನ್ನೂ, 120 ಮಿ.ಗ್ರಾಂ.ಗಿಂತ ಅಧಿಕವಾಗಿದ್ದಲ್ಲಿ ಸ್ಥಿರವಾಗಿರುವ ಮಧುಮೇಹವನ್ನೂ ಅದು ಸೂಚಿಸುತ್ತದೆ.

ಆಹಾರಸೇವನೆಯ ೧.೩೦ರಿಂದ ೨ ಗಂಟೆ ನಂತರದ ರಕ್ತದ ಗ್ಲೂಕೋಸ್ ೧೭೦-೧೮೦ ಮಿ.ಗ್ರಾಂ.ಗಿಂತಲೂ ಅಧಿಕವಾಗಿದ್ದಲ್ಲಿ ಅದು ಕೂಡ ಕಾಯಿಲೆಯನ್ನು ದೃಢೀಕರಿಸುತ್ತದೆ. ಮೂತ್ರದಲ್ಲಿಯೂ ಈ ಪ್ರಮಾಣದಲ್ಲಿ ಗ್ಲೂಕೋಸ್ ಇರುತ್ತದೆ. ರಕ್ತದ ಗ್ಲೂಕೋಸ್ ಪ್ರಮಾಣವು ಆಹಾರ, ವ್ಯಾಯಾಮ, ಮಾನಸಿಕ ಒತ್ತಡದಂಥ ಹಲವಾರು ಅಂಶಗಳನ್ನು ಅವಲಂಬಿಸಿರುವುದರಿಂದ, ಒಂದು ಬಾರಿಯ ಪರೀಕ್ಷಾ ಫಲಿತಾಂಶದಿಂದ ನಿಖರ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ.

ರಕ್ತದ ಏಚಿಅ೧ (ಗ್ಲೈಕಾಸಿಲೇಟೆಡ್ ಹಿಮೋಗ್ಲೋಬಿನ್) ಪ್ರಮಾಣವು, ಹಿಂದಿನ ೩ ತಿಂಗಳ ಸರಾಸರಿ ರಕ್ತದ ಗ್ಲೂಕೋಸಿನ ಪ್ರಮಾಣ ವನ್ನು ತಿಳಿಸುವುದರಿಂದ, ಮಧುಮೇಹವನ್ನು ಪತ್ತೆಮಾಡಲು ಮತ್ತು ನಿಯಂತ್ರಣದ ಮಾರ್ಗೋಪಾಯವನ್ನು ತಿಳಿಯಲು ಈ ಪರೀಕ್ಷೆ ಅತ್ಯಂತ ಉಪಯೋಗಕಾರಿ.

(ಮುಂದುವರಿಯುವುದು)