Thursday, 12th December 2024

ವಜ್ರ ಎಂದರೆ ಇವರಿಗೆ ಕಲ್ಲಿನ ಚೂರು

ವೇದಾಂತಿ ಹೇಳಿದ ಕಥೆ

ಶಶಾಂಕ್ ಮುದೂರಿ

ಹದಿನೈದನೆಯ ಶತಮಾನದಲ್ಲಿ ರವಿದಾಸ್ ಎಂಬ ಸಂತರು ಉತ್ತರ ಭಾರತದಲ್ಲಿದ್ದರು. ರವಿದಾಸರ ಕುಟುಂಬವು ಚಮ್ಮಾರ
ವೃತ್ತಿಯನ್ನು ಅನುಸರಿಸುತ್ತಿತ್ತು. ಮೀರಾಬಾಯಿಯು ಇವರ ಶಿಷ್ಯೆ. ರಾಜಕುಮಾರಿಯಾಗಿದ್ದ ಮೀರಾಬಾಯಿಯು, ತನ್ನ ಬೆಲೆ ಬಾಳುದ ಬಟ್ಟೆಯನ್ನು ಮತ್ತು ಆಭರಣಗಳನ್ನು ಧರಿಸಿ, ರವಿದಾಸ್ ಕುಟೀರಕ್ಕೆ ಬಂದು, ನಮಸ್ಕರಿಸುತ್ತಿದ್ದಳು.

ಆದರ ಊರಿನ ಇತರ ಕೆಲವರಿಗೆ ರವಿದಾಸ್ ಕುರಿತು ಆ ದಿನಗಳಲ್ಲಿ ಅಷ್ಟೊಂದು ಗೌರವ ಇರಲಿಲ್ಲ. ರಾಜಕುಮಾರಿಯೊಬ್ಬಳು ರವಿದಾಸರಿಗೆ ನಮಸ್ಕರಿಸುವುದನ್ನು ಅಪಹಾಸ್ಯ ಮಾಡುತ್ತಾ, ‘ಇವಳೋ ರಾಜಕುಮಾರಿ, ಶ್ರೀಮಂತರು. ರವಿದಾಸರು ಬಡವರು ಮತ್ತು ಚಮ್ಮಾರ ವೃತ್ತಿ ಮಾಡುವವರು. ಅವರ ಕಾಲಿಗೆ ರಾಜಕುಮಾರಿ ಬೀಳುವುದು ಸರಿಯಲ್ಲ’ ಎಂದು ಟೀಕೆ ಮಾಡುತ್ತಿದ್ದರು. ಇದರ ಜತೆಯಲ್ಲೇ, ‘ರವಿದಾಸರು ಗುಡಿಸಲಿನಲ್ಲಿ ವಾಸಿಸು ತ್ತಿದ್ದಾರೆ, ಆದರೆ ಅವರ ಶಿಷ್ಯೆ ಅರಮನೆಯಲ್ಲಿ ವಾಸಿಸುತ್ತಿದ್ದಾಳೆ!’ ಎಂದು ಕುಹಕವಾಡು ತ್ತಿದ್ದರು.

ಈ ಮಾತು ಮೀರಾಬಾಯಿಯ ಕಿವಿಗೆ ಬಿತ್ತು. ರವಿದಾಸರನ್ನು ಅಪಾರವಾಗಿ ಗೌರವಿಸುತ್ತಿದ್ದ ರಾಜಕುಮಾರಿಯು, ಅವರ ಬಡತನ ವನ್ನು ಹೋಗಲಾಡಿಸಲು ಏನಾದರೂ ಪ್ರಯತ್ನ ಮಾಡಬೇಕು ಎಂದು ನಿರ್ಧರಿಸಿದಳು. ಒಂದು ದಿನ ತನ್ನಲ್ಲಿದ್ದ ಒಂದು ಬೆಲೆ ಬಾಳುವ ವಜ್ರವನ್ನು ರವಿದಾಸರಿಗೆ ನೀಡಿ, ‘ಗುರುಗಳೇ, ನೀವು ಗುಡಿಸಲಿನಲ್ಲಿ ಇರುವುದನ್ನು ನೋಡಲಾಗುವುದಿಲ್ಲ. ಜತೆಗೆ ಹಳ್ಳಿಯ ಜನರು ನಿಮ್ಮನ್ನು ಬಡವರು ಎಂದು ವ್ಯಂಗ್ಯ ಮಾಡುವುದನ್ನು ಸಹ ನೋಡಲಾಗುವುದಿಲ್ಲ. ಇದಕ್ಕಾಗಿ ನನ್ನ ಕೈಲಾದ ಸಹಾಯ ಮಾಡಲು ಅನುಮತಿ ನೀಡಿ. ಈ ವಜ್ರವನ್ನು ನೀವು ಮಾರಿ, ಸಣ್ಣ ಮನೆಯನ್ನು ಕಟ್ಟಿಕೊಳ್ಳಿ, ನಿಮಗೆ ಬೇಕಾದ ವಸ್ತು ಗಳನ್ನು ತೆಗೆದುಕೊಳ್ಳಿ’ ಎಂದು ನಮಸ್ಕರಿಸಿದಳು.

ಆ ಸಮಯದಲ್ಲಿ ರವಿದಾಸರು, ಒಂದು ಜೊತೆ ಚಪ್ಪಲಿ ತಯಾರಿಸಲು ಚರ್ಮವನ್ನು ಹದಮಾಡುತ್ತಿದ್ದರು. ಕೆಲಸದಲ್ಲಿ ಮಗ್ನ
ರಾಗಿದ್ದ ಅವರು ತಲೆ ಎತ್ತದೇ, ‘ರಾಜಕುಮಾರಿ ಮೀರಾಬಾಯಿ, ನಿನಗೆ ಯಾಕೆ ಅರ್ಥವಾಗುತ್ತಿಲ್ಲ! ಈ ಅಲ್ಪನು ಏನಾದರೂ ಅಧ್ಯಾತ್ಮದ ಕುರಿತು ಕಿಂಚಿತ್ ಅರಿವು ಪಡೆದಿದ್ದರೆ, ಅದು ಈ ನನ್ನ ಕೆಲಸದಿಂದಾಗಿ. ಚಮ್ಮಾರಿಕೆ ಕೆಲಸವೆಂದರೆ ನನಗೆ ಇಷ್ಟ. ಇದರಿಂದಲೇ ನನ್ನ ಜೀವನ ಸಾಗುತ್ತಿದೆ. ನನ್ನ ಗುಡಿಸಲಿಗೆ ಬರಲು ನಿನಗೆ ಅವಮಾನವಾದರೆ, ನೀನು ಅರಮನೆಯಲ್ಲಿದ್ದುಕೊಂಡೇ ನಿನ್ನ ನಮಸ್ಕರಿಸು. ಅದು ನನಗೆ ತಲುಪುತ್ತದೆ. ಈ ವಜ್ರ ನನಗೆ ಬೇಡ. ನೀನೇ ತೆಗೆದುಕೊಂಡು ಹೋಗು.

ಅದು ಅರಮನೆಯಲ್ಲಿರಬೇಕಾದ ವಸ್ತು’ ಎಂದರು. ಅವರು ಚರ್ಮಹದಮಾಡುವ ಕಾಯಕ ಮಾಡುತ್ತಾ, ಇವಳ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಮೀರಾಬಾಯಿ ಹೇಗಾದರೂ ಮಾಡಿ ಈ ವಜ್ರವನ್ನು ಗುರುಗಳಿಗೆ ಕೊಡಲೇಬೇಕು ಎಂದು ನಿಶ್ಚಯಿಸಿ, ‘ಗುರುಗಳೇ, ಇದನ್ನು ನೀವು ಕೈಯಿಂದ ಮುಟ್ಟದಿದ್ದರೇನಾಯಿತು, ನಿಮ್ಮ ಗುಡಿಸಲಿಗೆ ಹೊದಿಸಿರುವ ಹುಲ್ಲಿನಲ್ಲಿ ಇದನ್ನು ಇಟ್ಟು ಹೋಗಿರುತ್ತೇನೆ. ನಿಮಗೆ ಎಂದಾದರೂ ಹಣದ ಅವಶ್ಯಕತೆ ಬಂದೇ ಬರುತ್ತದೆ. ಈ ವಜ್ರವನ್ನು ಮಾರಿ, ನೀವು ಒಂದು ಗಟ್ಟಿ ಮುಟ್ಟಾದ ಮನೆಯನ್ನು ಕಟ್ಟಿಸಿಕೊಳ್ಳಿ. ಎಂದು ನಮಸ್ಕರಿಸಿ ಅರಮನೆಗೆ ವಾಪಸಾದಳು.

ಕೆಲವು ತಿಂಗಳುಗಳು ಕಳೆದವು. ಮಳೆಗಾಲ ಬಂತು. ಬಿರುಗಾಳಿಯಿಂದ ಆ ಹಳ್ಳಿಯ ಕೆಲವು ಗುಡಿಸಲುಗಳ ಛಾವಣಿಯು ಹಾರಿ
ಹೋಯಿತು. ಬಿರುಗಾಳಿ ತಣ್ಣಗಾದ ನಂತರ, ಮೀರಾಬಾಯಿಯು ರವಿದಾಸರ ಕುಟೀರದ ಬಳಿ ಬಂದು ಗುರುಗಳಿಗೆ ನಮಸ್ಕರಿಸಿ ದಳು. ರವಿದಾಸರ ಕುಟೀರ ಭದ್ರವಾಗಿತ್ತು. ಅವರು ಛಾವಣಿಗೆ ಚರ್ಮದ ಪಟ್ಟಿಗಳನ್ನು ಬಿಗಿದು, ಭದ್ರ ಮಾಡಿದ್ದರಿಂದ,  ಬಿರುಗಾಳಿ ಯನ್ನು ಆ ಗುಡಿಸಲು ತಡೆದುಕೊಂಡಿತ್ತು. ಆದರೆ, ಅವರು ಇನ್ನೂ ಚರ್ಮ ಹದ ಮಾಡುತ್ತಾ, ಚಪ್ಪಲಿಗಳನ್ನು ತಯಾರಿಸು ತ್ತಿರುವುದನ್ನು ಕಂಡು ಮೀರಾಬಾಯಿಗೆ ಅಚ್ಚರಿಯಾಯಿತು.

‘ಗುರುಗಳೇ, ಇದೇಕೆ ಈ ಗುಡಿಸಲಿನಲ್ಲೇ ಇದ್ದೀರಿ? ಮಳೆ, ಗಾಳಿ ಬರುತ್ತಿದೆ. ನಾನು ಕೊಟ್ಟ ವಜ್ರ ನಿಮ್ಮ ಬಳಿ ಇರುವಾಗ, ನೀವೇಕೆ
ಇಷ್ಟು ಬಡತನದಲ್ಲಿರಬೇಕು?’ ಎಂದು ಆಕೆ ವಿನಯದಿಂದ ಕೇಳಿದಳು. ‘ಮೀರಾ, ಬಿರುಗಾಳಿ ಬಂದರೂ,ಆ ಭಗವಂತನ ಕೃಪೆ ಯಿಂದ ನನ್ನ ಗುಡಿಸಲಿಗೆ ಏನೂ ಆಗಿಲ್ಲ. ಆ ಕೃಪೆಯು ನನ್ನ ಮೇಲೆ ಎಷ್ಟಿದೆ ಎಂದರೆ, ಅದರಿಂದ ನಾನೊಬ್ಬ ಶ್ರೀಮಂತನೇ ಆಗಿಬಿಟ್ಟಿದ್ದೇನೆ. ನೀನು ಕೊಟ್ಟ ವಜ್ರ ಅಲ್ಲೇ ಛಾವಣಿಯ ಹುಲ್ಲಿನೊಳಗೆ ಅಡಗಿದೆ. ನನಗೆ ಅದೊಂದು ಕಲ್ಲಿನ ಚೂರು. ಅದನ್ನು ತೆಗೆದುಕೊಂಡು ಹೋಗು’ ಎಂದು ತಮ್ಮ ಕೆಲಸದಲ್ಲಿ ಮಗ್ನರಾದರು. ಮೀರಾಬಾಯಿಯ ರವಿದಾಸರಿಗೆ ನಮಸ್ಕರಿಸಿ, ವಾಪಸಾದಳು.