Saturday, 14th December 2024

ಹೊಳಪು ಕಳೆದುಕೊಂಡು ಮಬ್ಬಾದ ಡೈಮಂಡ್ ಹಾರ್ಬರ್‌

ಇದೇ ಅಂತರಂಗ ಸುದ್ದಿ

vbhat@me.com

‘ಡೈಮಂಡ್ ಹಾರ್ಬರ್’ ಹೆಸರು ಕೇಳಿದರೆ, ಎಂಥವರಲ್ಲಾದರೂ ಸಕಾರಾತ್ಮಕ ಭಾವನೆ ಮೂಡುತ್ತದೆ. ಆ ಹೆಸರನ್ನು ಕೇಳಿದಾಕ್ಷಣ ಮನಸ್ಸಿನಲ್ಲಿ ಒಂದು ಹೊಳೆವ ರೇಖೆ ಹಾದುಹೋಗುತ್ತದೆ. ಆದರೆ ಆ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ, ಮನಸ್ಸಿಗೆ ತೀವ್ರ ವ್ಯಥೆಯಾಗದೇ ಹೋಗುವು ದಿಲ್ಲ. ಬಂಗಾರದ ಅಂಗಡಿ ಪಕ್ಕದಲ್ಲೇ ಮಾಂಸದ ಅಂಗಡಿ. ಗ್ರಂಥಿಗೆ ಅಂಗಡಿ ಪಕ್ಕದಲ್ಲಿ ಬಾರ್. ಬಟ್ಟೆ ಅಂಗಡಿಯಲ್ಲಿಯೇ ಕೋಳಿ ಪೆಟ್ಟಿಗೆ. ಲಾರಿಯಂಥ ಛಾಸ್ಸಿಗೆ ಬೈಕ್ ಕಟ್ಟಿದ ಪಟ್ ಪಟಿ.

ಕೋಲ್ಕೊತಾದ ರಸ್ತೆಗಳಲ್ಲಿ ಸಂಚರಿಸುವುದು ಅಪಾಯಕಾರಿ. ಅದರಲ್ಲೂ ನಗರದಿಂದ ಇಪ್ಪತ್ತು-ಮೂವತ್ತು ಕಿ.ಮೀ. ದಾಟಿ ಬೇರೆ ಊರುಗಳಿಗೆ ಹೋಗುವ ಮಾರ್ಗಗಳಲ್ಲಿ ಸಂಚರಿಸುವಾಗ ಜೀವವನ್ನು ಕೈಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಳ್ಳಬೇಕು. ಕೋಲ್ಕೊತಾದಿಂದ ಡೈಮಂಡ್ ಹಾರ್ಬರ್ ಕೇವಲ ೫೨ ಕಿ.ಮೀ. ದೂರದಲ್ಲಿದೆ. ಆದರೆ ಅಷ್ಟು ದೂರವನ್ನು ಕ್ರಮಿಸಲು ಕನಿಷ್ಠ ಎರಡು ಗಂಟೆಗಳಾದರೂ ಬೇಕು. ಆ ಅವಧಿಯಲ್ಲಿ ಕೋಲ್ಕೊತಾದಿಂದ ದಿಲ್ಲಿಗೆ ವಿಮಾನದಲ್ಲಿ ಪಯಣಿಸಬಹುದು.

ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಪ್ರತಿನಿಧಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸಹೋದರನ ಮಗ ಅಭಿಷೇಕ ಬ್ಯಾನರ್ಜಿ. ಕಳೆದ ಹತ್ತು ವರ್ಷಗಳಿಂದ ಅವರೇ ಆ ಕ್ಷೇತ್ರದ ಪ್ರತಿನಿಧಿ. ೧೯೬೭ರಿಂದ ೨೦೦೯ ಅಂದರೆ ನಲವತ್ತೆರಡು ವರ್ಷಗಳ ತನಕ ಸಿಪಿಎಂ ಪಕ್ಷದ
ಅಭ್ಯರ್ಥಿಗಳು ಈ ಕ್ಷೇತ್ರವನ್ನು ತಮ್ಮ ಮುಷ್ಟಿಯಲ್ಲಿ ಇಟ್ಟುಕೊಂಡಿದ್ದರು. ಆದರೆ ಒಂದು ಕ್ಷೇತ್ರವನ್ನು ಎಷ್ಟು ಕೆಟ್ಟದಾಗಿ, ದರಿದ್ರವಾಗಿ ಇಟ್ಟುಕೊಳ್ಳ ಬಹುದು ಎಂಬುದಕ್ಕೆ ಡೈಮಂಡ್ ಹಾರ್ಬರ್ ಒಂದು ಉತ್ತಮ ನಿದರ್ಶನ. ಕೋಲ್ಕೊತಾಕ್ಕೆ ತಾಗಿಕೊಂಡಿದ್ದರೂ ಈ ಕ್ಷೇತ್ರವನ್ನು ಒಳಗೊಂಡ ವಿಧಾನಸಭಾ ಕ್ಷೇತ್ರಗಳಾದ ಫಾಲ್ತಾ, ಬಡ್ಜ್ ಬಡ್ಜ್, ಮೇಟಿಯಾಬುರುಜ್, ಬಿಷ್ಣುಪುರ ಇನ್ನೂ ಐವತ್ತು ವರ್ಷಗಳಷ್ಟು ಹಿಂದಿರುವಂತೆ ಭಾಸವಾಗುತ್ತದೆ.

ಬಡತನ ಮತ್ತು ಅನಕ್ಷರತೆ ಈ ಪ್ರದೇಶಗಳಲ್ಲಿ ಸಮೃದ್ಧವಾಗಿರುವಂತೆ ತೋರುತ್ತದೆ. ಜನಸಾಮಾನ್ಯರು ನಾಗರಿಕ ಪ್ರe ಕಳೆದುಕೊಂಡವರಂತೆ ಬದುಕುತ್ತಿ
ದ್ದಾರೆ. ಮೋದಿಯವರ ‘ಸ್ವಚ್ಛ ಭಾರತ ಆಂದೋಲನ’ ಅಲ್ಲಿನ ಜನರ ಗಮನಕ್ಕೂ ಬಂದಂತಿಲ್ಲ. ಅವರೇನಾದರೂ ಆ ಆಂದೋಲನದ ಹೆಸರು ಕೇಳಿದ್ದಿದ್ದರೆ ಖಂಡಿತವಾಗಿಯೂ ಸ್ವಲ್ಪಮಟ್ಟಿಗಾದರೂ ತಮ್ಮ ಊರುಗಳನ್ನು, ಬೀದಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಇವರು ತಮ್ಮ ಊರನ್ನೇ ಪೀಕುದಾನಿಯನ್ನಾಗಿ ಮಾಡಿಕೊಂಡಿದ್ದಾರೆ. ಎಲ್ಲೆಂದರಲ್ಲಿ ಉಗುಳುತ್ತಾರೆ.

ಕಂಡಕಂಡಲ್ಲಿ ಕಸವನ್ನು ಎಸೆಯುತ್ತಾರೆ. ಅವರ ಪಾಲಿಗೆ ಕಸದಬುಟ್ಟಿ ಕಸಕ್ಕಿಂತ ಕಡೆ. ಇಡೀ ನಗರವೇ ಕಸ-ಕಡ್ಡಿ, ಹೊಲಸುಗಳಿಂದ ನಾರುತ್ತದೆ. ‘ಡೈಮಂಡ್ ಹಾರ್ಬರ್’ ಹೆಸರು ಕೇಳಿದರೆ, ಎಂಥವರಲ್ಲಾದರೂ ಸಕಾರಾತ್ಮಕ ಭಾವನೆ ಮೂಡುತ್ತದೆ. ಆ ಹೆಸರಿನಲ್ಲಿ ಡೈಮಂಡ್ ಇರುವುದಕ್ಕೋ ಏನೋ, ಆ ಹೆಸರನ್ನು ಕೇಳಿದಾಕ್ಷಣ ಮನಸ್ಸಿನಲ್ಲಿ ಒಂದು ಹೊಳೆವ ರೇಖೆ ಹಾದುಹೋಗುತ್ತದೆ. ಆದರೆ ಆ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ, ಮನಸ್ಸಿಗೆ ತೀವ್ರ ವ್ಯಥೆಯಾಗದೇ ಹೋಗುವುದಿಲ್ಲ. ಬಂಗಾರದ ಅಂಗಡಿ ಪಕ್ಕದಲ್ಲೇ ಮಾಂಸದ ಅಂಗಡಿ. ಗ್ರಂಥಿಗೆ ಅಂಗಡಿ ಪಕ್ಕದಲ್ಲಿ ಬಾರ್. ಬಟ್ಟೆ ಅಂಗಡಿಯಲ್ಲಿಯೇ ಕೋಳಿ ಪೆಟ್ಟಿಗೆ. ಲಾರಿಯಂಥ ಛಾಸ್ಸಿಗೆ ಬೈಕ್ ಕಟ್ಟಿದ ಪಟ್ ಪಟಿ. ಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳ ಸಾಲು. ಸಂಚಾರ ನಿಯಮಗಳಿಗೆ ಅರ್ಥವೇ ಇಲ್ಲ. ಮನಸೋ ಇಚ್ಛೆ ವಾಹನಗಳನ್ನು ಓಡಿಸುವ ಮಂದಿ. ಮೈಗೆ ಮೈ ತಾಕಿಸಿ, ಇನ್ನೇನು ಉಜ್ಜಿಯೇ ಬಿಡುವವೇನೋ ಎಂಬ ವಾಹನಗಳ ನುಗ್ಗಾಟ. ಅಲ್ಲಿನ ವಾಹನಗಳಲ್ಲಿ ಎಲ್ಲರಿಗೂ ಕೇಳಿಸುವಂತೆ ಕೆಲಸ ಮಾಡುವ ವಾಹನಗಳ ಬಿಡಿಭಾಗಗಳೆಂದರೆ ಹಾರ್ನ್ ಮಾತ್ರ.

ಒಂದು ಕಾಲಕ್ಕೆ ಡೈಮಂಡ್ ಹಾರ್ಬರ್ ಹಾಜಿಪುರ ಆಗಿತ್ತು. ಬ್ರಿಟಿಷರು ಆ ನಗರವನ್ನು ಡೈಮಂಡ್ ಹಾರ್ಬರ್ ಎಂದು ಪುನರ್ ನಾಮಕರಣ ಮಾಡಿದರು. ಹೂಗ್ಲಿ ನದಿ ಬಂಗಾಳ ಕೊಲ್ಲಿಯನ್ನು ಸೇರುವ ತಾಣ ಡೈಮಂಡ್ ಥರ ಕಾಣಿಸುವುದರಿಂದ ಅದನ್ನು ಅನ್ವರ್ಥವಾಗಿ ಡೈಮಂಡ್ ಹಾರ್ಬರ್ ಎಂದು ಕರೆಯಲಾಯಿತು. ಇದನ್ನು ಪಶ್ಚಿಮ ಬಂಗಾಳದ ಸೂರ್ಯೋದಯದ ತಾಣ ಎಂದೂ ಕರೆಯುತ್ತಾರೆ. ದಕ್ಷಿಣ ೨೪ ಪರಗಣ ಜಿಲ್ಲೆಯಲ್ಲಿ ಒಂದು ಪ್ರಮುಖ
ನಗರವಾಗಿರುವ ಡೈಮಂಡ್ ಹಾರ್ಬರ್, ಅತಿ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿರುವ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಪೈಕಿ ಒಂದು.

ಈ ಚುನಾವಣೆ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಎಲ್ಲಿಯೇ ಸಂಚರಿಸಿ, ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ)ದ ನಾಯಕಿ ಮಮತಾ ಬ್ಯಾನರ್ಜಿ ಯವರ ದೊಡ್ಡ ದೊಡ್ಡ ಕಟೌಟ್, ಜಾಹೀರಾತು ಫಲಕಗಳು ಮಾತ್ರ ಕಾಣಿಸುತ್ತವೆ. ಇಡೀ ಫಲಕಗಳಲ್ಲಿ ಬೇರೆ ಯಾವ ನಾಯಕರ ಸಣ್ಣ -ಟೋವನ್ನು ನೋಡಲೂ ಸಾಧ್ಯವಿಲ್ಲ. ಆದರೆ ಡೈಮಂಡ್ ಹಾರ್ಬರ್‌ನಲ್ಲಿ ಸಂಚರಿಸುವಾಗ ರಸ್ತೆಯ ಎರಡೂ ಬಾಜು ಟಿಎಂಸಿ ಫಲಕಗಳೇ ರಾರಾಜಿಸುತ್ತವೆ. ಆ
ಫಲಕಗಳಲ್ಲಿ ಮಮತಾ ದೀದಿ ಜತೆ ಅಭಿಷೇಕ್ ಪೋಟೋ ಮಾತ್ರ. ಬಹುತೇಕ ಕಡೆಗಳಲ್ಲಿ ದೀದಿಗಿಂತ ಅಭಿಷೇಕ್ ಫೋಟೋವೇ ದೊಡ್ಡದಾಗಿ ರಾರಾಜಿಸುತ್ತಿರುವುದು ಬಂಗಾಳ ಟಿಎಂಸಿಯಲ್ಲಿ ಬದಲಾಗುತ್ತಿರುವ ರಾಜಕೀಯದ ಮುನ್ಸೂಚನೆ.

ಟಿಎಂಸಿ ಫಲಕದಲ್ಲಿ ದೀದಿ ಜತೆ ಫೋಟೋ ಹಾಕಿಕೊಳ್ಳುವಷ್ಟು ಧೈರ್ಯವನ್ನು ಮತ್ಯಾವ ನಾಯಕರೂ ಪ್ರದರ್ಶಿಸಲಾರರು. ಆದರೆ ಅಭಿಷೇಕ್ ಬ್ಯಾನರ್ಜಿ ದೀದಿ ಫೊಟೋಕ್ಕಿಂತ ಎರಡು ಪಟ್ಟು ದೊಡ್ಡ ಗಾತ್ರದ ಫೋಟೋ ಹಾಕಿಕೊಂಡಿರುವುದು ಭವಿಷ್ಯದ ಟಿಎಂಸಿ ಯಾರ ಕೈಯಲ್ಲಿದೆ ಎಂಬುದಕ್ಕೆ ಸ್ಪಷ್ಟ ಸಂದೇಶ. ಒಂದು ಕಾಲಕ್ಕೆ ಕೋಲ್ಕೊತಾಕ್ಕೆ ಬಂದವರು ಡೈಮಂಡ್ ಹಾರ್ಬರ್‌ಗೆ ಬರುತ್ತಿದ್ದರು. ಅಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತ ನಯನಮನೋಹರ. ಇಂಗ್ಲಿಷರಿಗೆ ಈ ತಾಣ ಅಚ್ಚುಮೆಚ್ಚು. ಹೀಗಾಗಿ ಹೆಸರನ್ನು ಬದಲಿಸಿ, ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡಿದ್ದರು.

ಆದರೆ ಬ್ರಿಟಿಷರ ಆಳ್ವಿಕೆ ಬಳಿಕ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ನಾಯಕರು ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಬಡಾವಣೆಗಳ ನಿರ್ಮಾಣಕ್ಕೆ ಕುಮ್ಮಕ್ಕು ನೀಡಿದ್ದರಿಂದ, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಬಂದು ನೆಲೆಸಿದರು. ಆ ಪ್ರದೇಶದಲ್ಲಿ ಅಕ್ಕಿ ಗಿರಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ, ಮುಸಲ್ಮಾನರು ಅಲ್ಲಿ ಕಾರ್ಮಿಕರಾಗಿ ಸೇರಿಕೊಂಡರು. ಮುಸ್ಲಿಂ ಪ್ರಾಬಲ್ಯ ಹೆಚ್ಚಲು ಇದು ಕಾರಣವಾಯಿತು. ಮುಸ್ಲಿಂ ಓಲೈಕೆಯಲ್ಲಿ ದೇಶದಲ್ಲಿಯೇ ಹೊಸ ಪರ್ವಕ್ಕೆ ಕಾರಣ ವಾದ ಟಿಎಂಸಿ, ಡೈಮಂಡ್ ಹಾರ್ಬರ್ ಅನ್ನು ಮುಸ್ಲಿಂ ಮೀಸಲು ಕ್ಷೇತ್ರವಾಗಿ ಮಾಡುವುದೊಂದು ಬಾಕಿ. ಆದರೆ ಮುಸ್ಲಿಮರ
ಅಭಿವೃದ್ಧಿಗೆ ಕಿಂಚಿತ್ತೂ ಪ್ರಯತ್ನಿಸದೇ ಇರುವುದು ದುರ್ದೈವ.

ಡೈಮಂಡ್ ಹಾರ್ಬರ್ ಅನ್ನು ಯಾರೇ ಬರಲಿ, ಸಾಕ್ಷಾತ್ ಭಗವಂತನೇ ಬಂದರೂ ಈ ಜನ್ಮದಲ್ಲಿ ಉದ್ಧಾರ ಮಾಡಲಾರ ಎನಿಸುವಷ್ಟು ಹಿಂದುಳಿದಿದೆ ಅಥವಾ ಅವ್ಯವಸ್ಥೆಯಿಂದ ಕೂಡಿದೆ. ಆ ಕ್ಷೇತ್ರವನ್ನು ಪ್ರತಿನಿಧಿಸಿದ ಮತ್ತು ಪ್ರತಿನಿಧಿಸುತ್ತಿರುವವರಿಗೆ, ಅಲ್ಲಿನ ಮುಸ್ಲಿಮರು ಕೇವಲ ನಡೆದಾಡುವ ಮತಗಳಂತೆ ಭಾಸವಾಗುತ್ತಿರುವುದು ವಿಚಿತ್ರವೆನಿಸಿದರೂ ವಾಸ್ತವ. ಆ ಕ್ಷೇತ್ರ (ಡೈಮಂಡ್ ಹಾರ್ಬರ್)ದ ಹೆಸರಿನ ಹೊರತಾಗಿ ಮತ್ಯಾವುದೂ ಅಲ್ಲಿ ಹೊಳೆಯುವುದಿಲ್ಲ.

ಕೋಲ್ಕೊತಾ ಟ್ರಾಫಿಕ್ ಜಾಮ್ 
ನಾವು ಡೈಮಂಡ್ ಹಾರ್ಬರ್‌ನಿಂದ ವಾಪಸ್ ಬರುವಾಗ, ನಮ್ಮೊಂದಿಗಿದ್ದ ಹಿರಿಯ ಪತ್ರಕರ್ತ, ಸಂಪಾದಕ ಮತ್ತು ಮಾಜಿ ರಾಜಕಾರಣಿ ಎಂ.ಜೆ.ಅಕ್ಬರ್ ಅವರಿಗೆ ಹೇಳಿದೆ- ‘ಸರ್, ನಾನು ಸುರಕ್ಷಿತವಾಗಿ ವಾಪಸ್ ಬರುವ ಬಗ್ಗೆ ನನ್ನಲ್ಲಿ ಸಂದೇಹಗಳು ಮೂಡಿದ್ದವು. ಎದುರಿನಿಂದ ಬರುವ ವಾಹನಗಳು ನಮ್ಮ
ಮೇಲೆಯೇ ಹರಿದು ಬರುವಂತೆ ಭಾಸವಾಗುತ್ತಿತ್ತು. ಆ ವಾಹನಗಳು ನಮ್ಮ ವಾಹನಕ್ಕೆ ಉಜ್ಜಿಕೊಂಡು ಹೋಗುವವೇನೋ ಎಂದು ಅನಿಸುತ್ತಿತ್ತು. ಹಾಗೆ ಕೋಲ್ಕೊತಾದಲ್ಲಿ ಸಹ ಇಷ್ಟು ಓಡಾಡಿದರೂ ಏನೂ ಆಗಲಿಲ್ಲವಲ್ಲ..SeZh ಎಟb ..’ ಎಂದೆ. ಅದಕ್ಕೆ ಅಕ್ಬರ್ ಹೇಳಿದರು- ‘ಕೋಲ್ಕೊತಾದಲ್ಲಿ ಆಕ್ಸಿಡೆಂಟ್
ಆಗುವುದಿಲ್ಲ. ಬೇಕಾದರೆ ಇಲ್ಲಿನ ವಾಹನಗಳನ್ನು ನೋಡಿ.. ಅವುಗಳಿಗೆ ತರಚಿದ ಗಾಯಗಳೂ ಆಗುವುದಿಲ್ಲ. ಕಾರಣ ಇಲ್ಲಿನ ವಾಹನಗಳು ಚಲಿಸುವುದೇ ಇಲ್ಲ. ಆ ಪರಿ ಟ್ರಾಫಿಕ್ ಜಾಮ್’.

ಡಾರ್ಜಿಲಿಂಗ್ ಕುರಿತು
ಕೆಲವರ ಬಗ್ಗೆ ಜನ ಹೇಳುವುದನ್ನು ಕೇಳಿರಬಹುದು. ಅದು ನಿಜವಾ, ಸುಳ್ಳಾ ಗೊತ್ತಿಲ್ಲ. ಆದರೆ ಅಂಥ ಅಭಿಪ್ರಾಯವಿರುವುದು ಮಾತ್ರ ಸುಳ್ಳಲ್ಲ. ಉದಾಹರಣೆಗೆ, ‘ಇಬ್ಬರು ತೆಲುಗಿನಲ್ಲಿ ಮಾತಾಡುವವರು ಸಿಕ್ಕರೆ, ಮೂರು ಅಭಿಪ್ರಾಯಗಳು ವ್ಯಕ್ತವಾಗುತ್ತವೆ’. ಅದೇ ರೀತಿ ಬಂಗಾಳಿಗಳ ಬಗ್ಗೆ ಒಂದು ಮಾತಿದೆ. ಅದೇನೆಂದರೆ, ‘ಬಂಗಾಳದಲ್ಲಿ ಇಬ್ಬರು ಸಿಕ್ಕರೆ ಸ್ನೇಹಿತರು. ಮೂವರು ಭೇಟಿಯಾದರೆ ಟ್ರೇಡ್ ಯೂನಿಯನ್’. ಮೊನ್ನೆ ಡಾರ್ಜಿಲಿಂಗ್‌ಗೆ ಹೋದಾಗ, ಜತೆಯಲ್ಲಿದ್ದ ಹಿರಿಯ ಸಂಪಾದಕ ಮಿತ್ರರಾದ ಎಂ.ಜೆ.ಅಕ್ಬರ್ ಅವರಿಗೆ, ‘ಈ ರೀತಿಯ ಅಭಿಪ್ರಾಯಗಳು ಡಾರ್ಜಿಲಿಂಗಿಗಳ ಬಗ್ಗೆ ಇದೆಯಾ?’ ಎಂದು ಕೇಳಿದೆ. ಅದಕ್ಕೆ ಅವರು ‘ಡಾರ್ಜಿಲಿಂಗಿಗಳಿಗೆ ಫುಟ್ಬಾಲ್ ಅಂದ್ರೆ ಬಹಳ ಇಷ್ಟ.

ಆದರೆ ಬರೀ ಗುಡ್ಡ, ಬೆಟ್ಟ, ಕಣಿವೆಗಳಿಂದ ಆವರಿಸಿರುವ ಡಾರ್ಜಿಲಿಂಗ್‌ನಲ್ಲಿ ನೆಲೆಸಿರುವವರು ಜೀವನದಲ್ಲಿ ಒಮ್ಮೆಯೂ ತಮ್ಮ ತಾಯ್ನಾಡಿನಲ್ಲಿ ಫುಟ್ಬಾಲ್ ಆಡಿರಲಾರರು’ ಎಂದು ಚಟಾಕಿ ಹಾರಿಸಿದರು. ‘ಡಾರ್ಜಿಲಿಂಗಿಗಳು ದಟ್ಟವಾದ ಮಂಜಿನಲ್ಲಿ ಕುಳಿತು ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿಯದೇ ಇಡೀ ಫುಟ್ಬಾಲ್ ಮ್ಯಾಚನ್ನು ನೋಡಬಲ್ಲರು’ ಎಂದೂ ಅಕ್ಬರ್ ಹೇಳಿದರು.

ಡಾರ್ಜಿಲಿಂಗಿಗಳ ಬಗ್ಗೆ ಇನ್ನಷ್ಟು ಇಂಥ ಮಾತುಗಳಿವೆ: ಡಾರ್ಜಿಲಿಂಗ್ ನಗರದ ಬೀದಿಗಳಲ್ಲಿ ನೀವು ಒಂದು ಸಲ ನಡೆದರೆ, ಒಮ್ಮೆ ಭೇಟಿಯಾದವರು ಹತ್ತು ಸಲ ಸಿಗುತ್ತಾರೆ. ಹತ್ತೂ ಸಲವೂ ನಕ್ಕೂ ಮುಂದಕ್ಕೆ ಹೋಗುತ್ತಾರೆ. ಡಾರ್ಜಿಲಿಂಗ್‌ನಲ್ಲಿ ಉದ್ಯೋಗದಲ್ಲಿ ಇರುವವನಿಗಿಂತ ನಿರುದ್ಯೋಗಿಯೇ ಚೆನ್ನಾಗಿ ಡ್ರೆಸ್ ಮಾಡುತ್ತಾನೆ. ಡಾರ್ಜಿಲಿಂಗ್‌ನಲ್ಲಿ ಮಾತ್ರ ಟ್ರೇನು ಸಹ ಟ್ರಾಫಿಕ್ ಜಾಮ್ ನಿಂದಾಗಿ ನಿಲ್ಲುತ್ತದೆ ಮತ್ತು ನಿಧಾನವಾಗಿ ಚಲಿಸುತ್ತದೆ. ನಿನ್ನನ್ನು ರೋಲ್ಸ್ ರಾಯ್ಸ್ ಕಾರಿನಲ್ಲಿ ಡಾರ್ಜಿಲಿಂಗ್‌ನಲ್ಲಿ ಸುತ್ತಿಸುತ್ತೇನೆ ಎಂದು ಅಲ್ಲಿನ ತರುಣಿಗೆ ಹೇಳಿದರೆ ನಂಬುವುದಿಲ್ಲ. ಕಾರಣ ಅಲ್ಲಿನ ರಸ್ತೆಯಲ್ಲಿ ರೋಲ್ಸ್ ರಾಯ್ಸ್ ಕಾರು ಹೋಗುವುದಿಲ್ಲ.

ಡಾರ್ಜಿಲಿಂಗ್‌ನಲ್ಲಿ ಮಾತ್ರ ದೂರವನ್ನು ಕಿಲೋಮೀಟರಿನಲ್ಲಿ ಮತ್ತು ಸ್ಥಳಗಳ ಹೆಸರನ್ನು ಮೈಲಿನಲ್ಲಿ ಹೇಳುತ್ತಾರೆ. ಉದಾಹರಣೆಗೆ, ಚಾರ್-ಮೈಲ್, ದಸ್-ಮೈಲ್, ಬಾರಹ್  -ಮೈಲ್, ಬೀಸ್-ಮೈಲ್.. ಕೆಲವರಿಗೆ ತಾವು ಎಲ್ಲಿಗೆ ಬಂದಿದ್ದೇವೆ ಎಂಬುದು ಗೊತ್ತಾಗುವುದಿಲ್ಲ. ಕಾಶಿಗೆ ಹೋಗಿ ತಿಮ್ಮಪ್ಪನ ದರ್ಶನ
ಮಾಡೋಣವಾ ಅಂತ ಕೇಳುತ್ತಾರೆ ಮತ್ತು ಜಗತ್ತಿನ ಸರ್ವಶ್ರೇಷ್ಠ ಚಹ ಉತ್ಪಾದಿಸುವ ಡಾರ್ಜಿಲಿಂಗ್‌ಗೆ ಬಂದು, ಕಾಫಿ ಕುಡಿಯೋಣವಾ ಎಂದು ಕೇಳು ತ್ತಾರೆ. ಡಾರ್ಜಿಲಿಂಗ್‌ನಲ್ಲಿ ಜಗತ್ತಿನ ಉತ್ಕೃಷ್ಟ ಚಹವನ್ನು ಕುಡಿಯಬಹುದು ಮತ್ತು ಚಹ ತೋಟವನ್ನು ನೋಡಬಹುದು. ಅವೆರಡನ್ನೂ ಏಕಕಾಲಕ್ಕೂ ಮಾಡಬಹುದು.

ಡಾರ್ಜಿಲಿಂಗ್‌ನ ರಸ್ತೆಗಳು ಕಿರಿದಾದುದು. ಒಮ್ಮೊಮ್ಮೆ ಎದುರಿನಿಂದ ಬರುವ ಒಂದು ವಾಹನಕ್ಕೆ ದಾರಿ ಮಾಡಿಕೊಡಲು ಹರಸಾಹಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಏನೇ ಮಾಡಿದರೂ ವಾಹನಗಳು ಪಾಸ್ ಆಗುವುದಿಲ್ಲ. ಅಂಥ ಸಮಯದಲ್ಲಿ ಎದುರು-ಬದುರಿನ ವಾಹನಗಳ ಚಾಲಕರು ಪರಿಚಿತರಾದರೆ,
ಹರಟೆ ಹೊಡೆಯಲು ಅದರಂಥ ಪ್ರಶಸ್ತ ಸ್ಥಳ ಇನ್ನೊಂದಿಲ್ಲ. ಡಾರ್ಜಿಲಿಂಗ್ ನಗರದಲ್ಲಿ ಅಪರಿಚಿತರು ಎಂಬುವವರು ಯಾರೂ ಇಲ್ಲ. ಅಲ್ಲಿನ ಕಿರಿದಾದ ರಸ್ತೆಯಲ್ಲಿ ನಡೆಯುವಾಗ, ಬೇಡವೆಂದರೂ ಅಕ್ಕಪಕ್ಕದವರ ಮೈ ತಾಕುತ್ತದೆ. ಕೈ ಕುಲುಕಿ ಸ್ನೇಹಿತರಾಗಲು ಅದಕ್ಕಿಂತ ಉತ್ತಮ ಅವಕಾಶ ಇನ್ನೊಂದಿಲ್ಲ.
ಡಾರ್ಜಿಲಿಂಗ್ ಎಲ್ಲರಿಗೂ ಅಲ್ಲ. ನಿಮಗೆ ರಾಜಕೀಯ ಬೇಕು ಅಂದ್ರೆ ದಿಲ್ಲಿಗೆ ಹೋಗಿ. ಟ್ರಾಫಿಕ್ ಜಾಮ್‌ನಲ್ಲಿ ಜೀವನವನ್ನು ಕಳೆಯಬೇಕು ಅಂತಿದ್ದರೆ ಕೋಲ್ಕೊತಾಗೆ ಹೋಗಿ. ಪಬ್‌ನಲ್ಲಿ ಕುಳಿತು ಬಿಯರ್ ಕುಡಿಯಬೇಕೆನಿಸಿದರೆ ಬೆಂಗಳೂರಿಗೆ ಹೋಗಿ.

ಹಣ ಮಾಡಬೇಕು ಅಂತಿದ್ದರೆ ಮುಂಬೈಗೆ ಹೋಗಿ. ಆದರೆ ಆತ್ಮವಿರುವ, ಆಪ್ತ ಸಂಗಾತಿಯಂಥ ನಗರ ಬೇಕೆಂದರೆ ಡಾರ್ಜಿಲಿಂಗ್‌ಗೆ ಬನ್ನಿ. ಉತ್ತಮ ಪೋಟೋಗ್ರಾಫರ್ ಆಗಬೇಕೆ? ಹಾಗಾದರೆ ಡಾರ್ಜಿಲಿಂಗ್‌ಗೆ ಬನ್ನಿ. ಕೈಯಲ್ಲಿನ ಕೆಮರಾವನ್ನು ಹೇಗಾದರೂ ಹಿಡಿಯಿರಿ. ಸುಮ್ಮನೆ ಕ್ಲಿಕ್ ಮಾಡುತ್ತಾ ಹೋಗಿ. ನೀವು ಉತ್ತಮ ಫೋಟೋಗ್ರಾಫರ್ ಎಂದು ಕರೆಯಿಸಿಕೊಳ್ಳುತ್ತೀರಿ.

ಡಾರ್ಜಿಲಿಂಗ್ ಸಮಸ್ಯೆ ಅಂದ್ರೆ ಅದನ್ನು ಇನ್ನೊಂದಕ್ಕೆ ಹೋಲಿಸಲು ಸಾಧ್ಯವಾಗದಿರುವುದು. ಕಾರಣ ಅದರ ಹಾಗೆ ಇರುವ ಮತ್ತೊಂದು ಊರು ಇಲ್ಲ.
ಬೇರೆಯವರು ಪಾರ್ಟಿ ಮಾಡ್ತಾರೆ. ಆದ್ರೆ ಡಾರ್ಜಿಲಿಂಗಿಗಳು ಸೆಲೆಬ್ರೇಟ್ ಮಾಡ್ತಾರೆ. ಡಾರ್ಜಿಲಿಂಗ್ ಅನ್ನು ಕೆಲವರು ಗರ್ಲ್ ಫ್ರೆಂಡ್ ಅಂತಾರೆ. ಇನ್ನು ಕೆಲವರು ಮಾಜಿ ಗರ್ಲ್ ಫ್ರೆಂಡ್ ಅಂತಾರೆ. ಇವೆರಡೂ ಸರಿಯೇ. ಕಾರಣ ಇಬ್ಬರನ್ನೂ ಮರೆಯಲು ಸಾಧ್ಯವಿಲ್ಲ. ಡಾರ್ಜಿಲಿಂಗ್‌ನಲ್ಲಿ ಊಟ ಸಿಗದಿದ್ದರೆ ಚಹ ಕುಡಿಯಬಹುದು. ಅಲ್ಲಿನ ಒಂದು ಕಪ್ ಚಹ ಮೃಷ್ಟಾನ್ನ ಭೋಜನಕ್ಕೆ ಸಮ. ಡಾರ್ಜಿಲಿಂಗ್ ಅನ್ನು ಕೆಲವರು ದೊಡ್ಡ ಟ್ರ್ಯಾಪ್ (ಬಲೆ) ಅಂತಾರೆ. ಅದು ನಿಜ. ಹಲವರು ಅದರೊಳಗೆ ಬೇಕೆಂದೇ ಸಿಕ್ಕಿಬೀಳಲು ಪ್ರಯತ್ನಿಸುತ್ತಾರೆ.

ಬದುಕುವುದು ಮತ್ತು ಕನಸು ಕಾಣುವುದು ಇವೆರಡನ್ನೂ ಏಕಕಾಲಕ್ಕೆ ಮಾಡಬೇಕೆಂದರೆ ಅದಕ್ಕೆ ಯೋಗ್ಯಸ್ಥಳ ಡಾರ್ಜಿಲಿಂಗ್. ನೀವು ವಿವಾಹಿತರಾಗಿದ್ದರೆ ಪ್ರವಾಸಕ್ಕೆ ಡಾರ್ಜಿಲಿಂಗ್‌ಗೆ ಹೋಗಿ. ಅವಿವಾಹಿತರಾಗಿದ್ದರೂ ಅದನ್ನೇ ಮಾಡಬಹುದು. ಡಾರ್ಜಿಲಿಂಗ್‌ನಲ್ಲಿ ನೀವು ಯಾರು ಎಂದು ಯಾರೂ
ಕೇಳುವುದಿಲ್ಲ. ಒಂದು ವೇಳೆ ಕೇಳಿದರೆ ಏನು ಬೇಕಾದರೂ ಹೇಳಬಹುದು. ಅದನ್ನು ಯಾರೂ ಪರಿಶೀಲಿಸುವುದಿಲ್ಲ.

ಟೀ ಬ್ಯಾಗ್
ಮಕೈಬಾರಿ ಎಂಬ ಊರಿನಲ್ಲಿರುವ ಚಿಯಾ ತಾಜ್ ಕುಟೀರ್ ಆಂಡ್ ಸ್ಪಾ ಎಂಬ ಹೊಟೇಲಿನಲ್ಲಿ ನಾನು ಉಳಿದುಕೊಂಡಿದ್ದೆ. ಅಲ್ಲಿಗೆ ಆಗಮಿಸಿದ ಅತಿಥಿ ಗಳನ್ನು ಸ್ವಾಗತಿಸುವುದು, ಸತ್ಕರಿಸುವುದು ಚಹದಿಂದಲೇ. ಆ ಹೊಟೇಲ್ ಕೂಡ ಚಹ ತೋಟದ ಮಧ್ಯದಲ್ಲಿಯೇ ಇದೆ. ಅಲ್ಲಿಗೆ ಸನಿಹದಲ್ಲಿಯೇ ಮಕೈಬಾರಿ ಚಹ ಫ್ಯಾಕ್ಟರಿ ಕೂಡ ಇದೆ. ಚಹದ ಸುವಾಸನೆ ದೂರದಿಂದಲೇ ಆಘ್ರಾಣಿಸಬಹುದು.

ಆ ಹೊಟೇಲಿನಲ್ಲಿ ಪ್ರತಿದಿನ ಮಧ್ಯಾಹ್ನ ಮೂರು ಗಂಟೆಗೆ ಚಹದ ಬಗ್ಗೆ ಉಪನ್ಯಾಸ ಇರುತ್ತದೆ. ನಂತರ ಬಗೆಬಗೆಯ ಚಹವನ್ನು ಕುಡಿಯಲು ಕೊಡುತ್ತಾರೆ. ಕುರುಕ್ಷೇತ್ರ ಕತೆಯಂತೆ ಚಹದ ಮಹಿಮೆಯನ್ನು ವಿವರಿಸುವುದನ್ನು ಕೇಳಲು ರೋಚಕವಾಗಿರುತ್ತದೆ. ಚಹ ಕುರಿತು ಉಪನ್ಯಾಸ ನೀಡಿದವನ ಟೀ-ಶರ್ಟ್ ಗಮನಿಸಿದೆ. ಅದರ ಮೇಲೆ ಬರೆದಿತ್ತು- ‘ನಾನು ಎಲ್ಲಿಗೇ ಹೋಗಲಿ, ನನ್ನ ಬ್ಯಾಗನ್ನು ತೆಗೆದುಕೊಂಡು ಹೋಗಲು ಮರೆಯುವುದಿಲ್ಲ ಹಾಗೂ ಆ ಬ್ಯಾಗ್, ಟೀ ಬ್ಯಾಗ್ ಆಗಿರುವಂತೆ ನೋಡಿಕೊಳ್ಳುತ್ತೇನೆ’.