ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ಕಾಲೇಜ್ ದಿನಗಳಲ್ಲಿ ನಾವೊಂದು ಮೂವರು ಸ್ನೇಹಿತರು ಹಿರಿತನದ ಲಾಭವನ್ನು ಪಡೆದು ಎನ್ ಎಸ್ ಎಸ್ ನಲ್ಲಿ ಕಾರುಬಾರು ನಡೆಸುತ್ತಿದ್ದೆವು. ಜ್ಯೇಷ್ಠತೆ ನಮಗಷ್ಟೇ ಇರಲಿಲ್ಲ. ಆದರೂ ನಮ್ಮ ಪಟೇಲ್ಗಿರಿ ನಡೆಯುತ್ತಿತ್ತು. ವಾರ್ಷಿಕ ಕ್ಯಾಂಪ್ನಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ವಸತಿ- ಊಟದೊಂದಿಗೆ, ಒಟ್ಟಾಗಿ ಕಲೆತು ಹತ್ತು ದಿನ ಸೇವೆ ಸಲ್ಲಿಸುವ ಅವಕಾಶ.
ನವ ಯೌವನಿಗರಲ್ಲಿ ಹಾರ್ಮೋನುಗಳ ಹಾವಳಿಗೆ ಸೂಕ್ತ ಕಾಲವೂ ಹೌದು. ಎನ್ ಎಸ್ ಎಸ್ ಸೇರುವುದರ ನಿರ್ಧಾರದ ಹಿಂದೆ ಸೇವಾಮನೋಭಾವಕ್ಕಿಂತ ಹಾರ್ಮೋನ್ಗಳ ಪ್ರಭಾವವೇ ಹೆಚ್ಚಿರಲೂ ಸಾಕು. ಒಂದು ಕ್ಯಾಂಪ್ನಲ್ಲಿ, ನಿರೀಕ್ಷೆಯಂತೆ, ಎರಡು ಹೃದಯಗಳು ಮೌನವಾಗಿ ಬೆಸೆದುಕೊಂಡಿದ್ದವು. ಅದಾದ ಕೆಲವು ವಾರಗಳ ನಂತರ ಪ್ರೇಮಾಂಕುರವಾಗಿದ್ದ ಹುಡುಗಿ ದೂರೊಂದಿಗೆ ನಮ್ಮ ಬಳಿ ಬಂದಳು. ಅವಳು ಆಸಕ್ತಿ ಬೆಳೆಸಿಕೊಂಡಿದ್ದ ಹುಡುಗನ ಹೆಸರಿನಲ್ಲಿ ಆಕೆಯ ಮನೆ ಗೊಂದು ಪತ್ರ ಬಂದಿತ್ತು. ಕೆಟ್ಟ ಭಾಷೆಯಲ್ಲಿದ್ದರಿಂದ ಅವನು ಬರೆದದ್ದಲ್ಲ ಎಂದು ಯಾರೇ ಊಹಿಸಬಹುದಾಗಿತ್ತು.
ನಮಗೆ ಒಂದು ವರ್ಷ ಜೂನಿಯರ್ ಆದ ಅವಳಿಗೆ ಸಾಂತ್ವನ ಹೇಳಿ ಪತ್ರವನ್ನು ಪಡೆದು ಕಳಿಸಿದೆವು. ಯಾರು ಆ ಕಾಗದವನ್ನು ಬರೆದಿರಬಹುದೆಂಬುದನ್ನು ಪತ್ತೆ ಮಾಡಲು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿರಲಿಲ್ಲ. ಅವಳಲ್ಲಿ ಆಸಕ್ತಿ ಇರುವ ಮತ್ತೊಬ್ಬನಾರೊ ಅವಳಿಗೆ ಆಸಕ್ತಿ ಇರುವ ಹುಡುಗನ ಹೆಸರನ್ನು ಕೆಡಿಸಲು ಕಾಗದ ಬರೆದಿದ್ದಾನೆ ಎಂಬುದು ನಿರ್ವಿವಾದ. ಆದರೆ ಅವಳ ಹಿಂದೆ ಬಿದ್ದ ಇನ್ನಾವ ಹುಡುಗನೂ ಕಣ್ಣಿಗೆ ಬಿದ್ದಿರಲಿಲ್ಲ. ಅವನು ಕಾಲೇಜಿನಿಂದಾಚೆ ಅವಳ ಚಲನವಲನವನ್ನು ಗಮನಿಸಿರಬೇಕು. ಅವಳನ್ನೇನಾದರೂ ಫಾಲೋ ಮಾಡುತ್ತಿದ್ದರೆ ಅದು ಅವಳ ಗಮನಕ್ಕೇ ಬಂದು ಆ ಬಗ್ಗೆ ನಮಗೆ ಮಾಹಿತಿ ನೀಡುತ್ತಿದ್ದಳು. ಅವಳ ವಿಳಾಸ ವಾದರೂ ಹೇಗೆ ಸಿಕ್ಕಿರಬೇಕು ಎಂದು ಯೋಚಿಸುವಾಗ ಕ್ಲೂ ಸಿಕ್ಕಿತು.
ಕ್ಯಾಂಪ್ನಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವವರ ವಿಳಾಸವನ್ನು ಕಲೆ ಹಾಕುವಾಗ ಒಬ್ಬ ಹುಡುಗ ಬಂದು ತಾನು ಸಹಾಯ ಮಾಡುವುದಾಗಿ ಹೇಳಿದ್ದ. ಆಯಿತೆಂದು ಅವನಿಗೆ ಕೆಲಸ ಒಪ್ಪಿಸಿದ್ದೆ. ಆ ಹುಡುಗಿಯ ವಿಳಾಸವನ್ನು ಬರೆದುಕೊಂಡಿದ್ದ. ಅನುಮಾನ ಬರದಿರಲೆಂದು ಒಂದಿಬ್ಬರು ಹುಡುಗರ ವಿಳಾಸಗಳನ್ನೂ ಬರೆದು ಕೊಂಡಿದ್ದ. ಒಪ್ಪಿಕೊಂಡ ಕೆಲಸವನ್ನು ಪೂರೈಸದೆಯೇ ಬೇರೆ ಕೆಲಸವಿದೆಂದು ಹೇಳಿ ಅಪೂರ್ಣ ಪಟ್ಟಿಯನ್ನು ಕೊಟ್ಟಿದ್ದ. ಆ ಪಟ್ಟಿಯಲ್ಲಿನ ಕೈಬರಹಕ್ಕೂ,
ಹುಡುಗಿಗೆ ಬರೆದ ಪತ್ರದಲ್ಲಿನ ಕೈಬರಹಕ್ಕೂ ಮೇಲ್ನೋಟಕ್ಕೆ ಸಾಮ್ಯತೆ ಇರಲಿಲ್ಲ. ಪತ್ರದಲ್ಲಿ ತನ್ನ ನೈಜ ಕೈಬರಹವನ್ನು ಮರೆಮಾಚಲು ಅಕ್ಷರಗಳನ್ನು ಕೊಂಚ ಓರೆ ಮಾಡಿದ್ದ. ಆದರೆ, ಅಕ್ಷರಗಳ ವಿನ್ಯಾಸವನ್ನು ಮರೆಮಾಚಲಾಗಿರಲಿಲ್ಲ.
ಎರಡೂ ಪ್ರತಿಗಳನ್ನು ಬರೆಯುವಾಗ, ಕೈ ಒಂದೇ ರೀತಿಯಲ್ಲಿ ಓಡಿದ್ದು ಗೋಚರವಾಗುತ್ತಿತ್ತು. ವಿಭಿನ್ನ ಹಿನ್ನೆಲೆಯ, ವಿವಿಧ ಕ್ಷೇತ್ರಗಳ ತಜ್ಞರನ್ನು ಮಾತನಾಡಿ ಸುವುದು ನನಗೆ ಇಷ್ಟ. ನನ್ನ ಉದ್ಯೋಗವೂ ಅದೇ ತಾನೇ? ಮೊನ್ನೆ, ಆನ್ಲೈನಲ್ಲಿ ಸಿಕ್ಕ ಮೊಬೈಲ್ ಸಂಖ್ಯೆಗೆ ಫೋನ್ ಮಾಡಿ ನಾಟೀ ವೈದ್ಯರೊಬ್ಬರ ಬಳಿ
ಮಾತನಾ ಡುತ್ತಿದ್ದೆ. ನನಗೆ ಬಲಮಂಡಿಯಲ್ಲಿ ನೋವಿದೆಯಾ ಕೇಳಿದರು. ಜಾಗ್ ಮಾಡುವುದರಿಂದ ಒಮ್ಮೊಮ್ಮೆ ಲಘುವಾಗಿ ನೋವು ಬರುತ್ತೆ, ಹೌದೆಂದೆ. ನಾನು
ಮಾತನಾಡುವ ರೀತಿಯಿಂದ ನನ್ನ ದೇಹದ ಸಮಸ್ಯೆಯನ್ನು ಪತ್ತೆ ಹಚ್ಚಿದ್ದರು. ನಮ್ಮ ದೇಶೀ ವೈದ್ಯ ಪರಂಪರೆಯ ಮಹತ್ವವೇ ಅದು.
‘ಅ’ ಎಂಬ ಒಂದು ಅಲ್ಪ ಶಬ್ದವನ್ನು ಯಾವುದೇ ವ್ಯಕ್ತಿಗೆ ಉಚ್ಚರಿಸಲು ಹೇಳಿ ಉಚ್ಚಾರಣೆಯ ಮೂಲಕ ಅವರ ಸಂಪೂರ್ಣ ಆರೋಗ್ಯದ ವಿವರಗಳನ್ನು ಬಿಚ್ಚಿಡಬಲ್ಲ ತಾಕತ್ತು ಉದ್ದುದ್ದ ಡಿಗ್ರಿಗಳ ಬೋರ್ಡನ್ನು ನೇತುಹಾಕಿಕೊಂಡವರಿಗಿಂತ ಹೆಚ್ಚು ನಮ್ಮ ನಾಟೀ ವೈದ್ಯರಿಗಿದೆ. ಅವರಲ್ಲಿ, ಏನೂ ತಿಳಿಯದವರೆಂದು ತಿರಸ್ಕರಿಸ ಲ್ಪಟ್ಟ ಬುಡಕಟ್ಟು ಜನಾಂಗದವರೂ ಇದ್ದಾರೆ, ಹಳ್ಳಿಮುಕ್ಕರೂ ಇದ್ದಾರೆ. ಬ್ರಾಹ್ಮಣರು ಇದ್ದೇ ಇದ್ದಾರೆ! ಆಯುರ್ವೇದ ಪದ್ಧತಿಯಲ್ಲಿ ಜ್ಯೋತಿಶ್ಶಾಸವೂ ಮಿಳಿತ ವಾಗಿದೆ. ಖೊಟ್ಟಿ ಜ್ಯೋತಿಷಿಗಳಿಂದ ಆಯುರ್ವೇದಕ್ಕೆ ಸಿಗಬೇಕಾದಷ್ಟು ಮಹತ್ವ ಸಿಕ್ಕಿಲ್ಲ. ನಾಲಗೆ ಕುಲ ಹೇಳಿತು ಅನ್ನುವ ಮಾತನ್ನು ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ಹೇಳುವುದಾದರೆ, ಮಾತನಾಡುವವರ ನಾಲಗೆ ಅವರ ಆರೋಗ್ಯದ ವಿವರಗಳಷ್ಟನ್ನೂ ಬಿಚ್ಚಿಡಬಲ್ಲದು.
ಅಖಿ ಸ್ಕ್ಯಾನ್ ತಿಳಿಸದ ವಿವರಗಳನ್ನು ತೆರೆದಿಡಬಲ್ಲದು. ಅವರ ಪ್ರಕೃತಿಯನ್ನು ಕ್ಷಣಾರ್ಧದಲ್ಲಿ ತಿಳಿಸಬಲ್ಲದು. ಗುಣಸ್ವಭಾವಗಳನ್ನು ಬಹಿರಂಗಗೊಳಿಸಬಲ್ಲದು. ಸಂಕ್ಷಿಪ್ತವಾಗಿ ಹೇಳುವುದಾದರೆ, ವ್ಯಕ್ತಿಯ ಜಾತಕವನ್ನೇ ಬಯಲು ಮಾಡಬಲ್ಲದು. ಒಂದು ಮಟ್ಟದವರೆಗೂ ಅಂತಹ ರೋಗ ನಿರ್ಣಯ ಸಾಮರ್ಥ್ಯ ಜನಸಾಮಾನ್ಯ ರಾದ ನಮ್ಮೆಲ್ಲರಲ್ಲೂ ಇದೆ. ನೋಡಿದ್ರೆ ಗೊತ್ತಾಗೋಲ್ವ ಅವನು ಎಂಥಾವೋನು ಅಂತ ಎಂಬ ಮಾತಿನಲ್ಲಿ ಆ ಸಾಮರ್ಥ್ಯ ಪ್ರಕಟವಾಗುತ್ತದೆ. ಬರವಣಿಗೆಯನ್ನು ನೋಡಿ ಕೂಡ ಬರವಣಿಗೆಯಲ್ಲಿ ಪ್ರಾಮಾಣಿಕತೆ ಇಲ್ಲವೋ ಇದೆಯೋ ಎಂದು ನಿರ್ಣಯಿಸುತ್ತೇವಲ್ಲವೇ? ಹಾಗೆಯೇ, ನಾವು ಓದುವ ಲೇಖಕರನ್ನು ನಾವು ಒಪ್ಪುವುದೂ, ತಿರಸ್ಕರಿಸುವುದೂ ನಡೆಯುತ್ತದೆ. ನಮ್ಮ ನೆಚ್ಚಿನ ಲೇಖಕರ ಶೈಲಿಯನ್ನು ಅವರ ಹೆಸರು ನೋಡದೆಯೂ ಗುರುತಿಸಿಬಿಡುತ್ತೇವೆ.
ಭಾವಕೋಶದ ಬಾಣಲೆಯ ಎಣ್ಣೆಯಿಂದ ಹೊರತೆಗೆದ ಕೋಡು ಬಳೆಗಳಂತೆ ಲೇಖಕನ ಪದಗಳು ಹೊರಬರುವುದರಿಂದ ಅವುಗಳಿಗೆ ಒಂದು ನಿರ್ದಿಷ್ಟ ಗುಣ ಅಂಟಿಕೊಂಡಿರುತ್ತವೆ. ಕನ್ನಡ ಸಾರಸ್ವತ ಲೋಕದಲ್ಲಿ ಹೀಗೊಂದು ಪ್ರಯೋಗ ನಡೆಯಬೇಕು. ಒಂದು ಕಾದಂಬರಿ ಹೊರತರಬೇಕು. ಅದರ ಮೇಲೆ ಲೇಖಕರ ನೈಜ ಹೆಸರಿರದೇ ಕಾಲ್ಪನಿಕ ಹೆಸರೊಂದಿರಲಿ. ಸೀನಾಮವಾದರೂ ನಡೆದೀತು. ಕಾದಂಬರಿಕಾರನಾರೆಂಬ ಸುಳಿವೇ ದೊರಕಬಾರದು. ಕಾದಂಬರಿಯನ್ನು ಕನ್ನಡದ ಹತ್ತು ಪ್ರಮುಖ ವಿಮರ್ಶಕರಿಗೆ ಕೊಟ್ಟು ವಿಮರ್ಶೆ ಬರೆಸಬೇಕು. ಅವರಲ್ಲಿ ಎಂಟು ಜನ ಎಡಪಂಥೀಯರಿದ್ದು ಇಬ್ಬರು ವಸ್ತುನಿಷ್ಠ ವಿಮರ್ಶಕರಿರಲಿ.
ಓದುಗರ ವಿಮರ್ಶೆಯನ್ನೂ ಪಡೆಯಬೇಕು.
ಎಡಪಂಥೀಯರ ವಿಮರ್ಶೆಗಳನ್ನು ತಹಸೀಲ್ದಾರರ ಸಮ್ಮುಖದಲ್ಲಿ ಲಕೋಟೆಯಲ್ಲಿರಿಸಿ, ಮೊಹರು ಮಾಡಿ ಪಡೆಯಬೇಕು. ನಂತರ ಕಾದಂಬರಿಯ ಕರ್ತೃ ಎಸ್ ಎಲ್ ಭೈರಪ್ಪನವರೆಂದು ಬಹಿರಂಗಗೊಳಿ ಸಬೇಕು. ಎಡಪಂಥೀಯ ವಿಮರ್ಶೆಗಳನ್ನೂ ಮುದ್ರಿಸಿ ರಾಜ್ಯವ್ಯಾಪೀ ವಿತರಿಸಬೇಕು. ಭೈರಪ್ಪನವರು ಇಂತಹ ಪ್ರಯೋಗವನ್ನು ಒಪ್ಪಲಾರರು. ಕ್ರಿಕೆಟ್ ಪಿಚ್ಚು ಉತ್ತರ-ದಕ್ಷಿಣ ದಿಕ್ಕುಗಳಿಗೆ ಮುಖ ಮಾಡಿರಬೇಕು. ಬ್ಯಾಟ್ಸ್ಮನ್ನಿನ ಕಣ್ಣಿಗೆ ಪೂರ್ವ- ಪಶ್ಚಿಮದ ಸೂರ್ಯ ಹೊಡೆಯ ಬಾರದೆಂಬುದು ಮುಖ್ಯ ಉದ್ದೇಶ.
ಸ್ಟೇಡಿಯಂನ ಯಾವ ಭಾಗದಲ್ಲಿ ಸೂರ್ಯನ ಪ್ರಕೋಪ ಹೆಚ್ಚೋ ಅಲ್ಲಿ ಗ್ಯಾಲರಿ ನಿರ್ಮಿಸಲಾಗುತ್ತದೆ. ಕಡಿಮೆ ದುಡ್ಡು ತೆತ್ತು ಮ್ಯಾಚ್ ವೀಕ್ಷಿಸುವ ಗ್ಯಾಲರಿ ಪ್ರೇಕ್ಷಕನ ಬಗ್ಗೆ ತಾತ್ಸಾರ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾನೂ ಬಿಸಿಲಲ್ಲಿ ಬೆಂದದ್ದಿದೆ. ಆದರೆ ಆ ಸುಡುಬಿಸಿಲಿನ ಬೇಗೆ ಬೇಗೆಯೇ ಅಲ್ಲವೆಂದು ಅನ್ನಿಸುತ್ತಿದ್ದುದು ಜಿಆರ್ ವಿಶ್ವನಾಥರ ಬ್ಯಾಟಿಂಗ್ ನೋಡುವಾಗ. ಕಲಾತ್ಮಕ ಬಾಟ್ಸ್ಮನ್ ವಿಶಿಯ ಸ್ಕ್ವೇರ್-ಕಟ್ ಅತ್ಯಂತ ಮನಮೋಹಕವಾಗಿ ಕಾಣುತ್ತಿದ್ದುದೇ ಅಗ್ಗದ ಗ್ಯಾಲರಿಯಿಂದ. (ಮತ್ತೊಂದು ತುದಿಯಿಂದ ಬ್ಯಾಟ್ ಮಾಡುವಾಗ ನಮ್ಮ ವಿರುದ್ಧ ದಿಕ್ಕಿನಲ್ಲಿ ಕುಳಿತವರಿಗೆ ಆ ಭಾಗ್ಯ ವರ್ಗಾಯಿಸಲ್ಪಡುತ್ತಿತ್ತು.) ಅಂದಿನ ಕೀಪರ್ ಸೈಯದ್ ಕಿರ್ಮಾನಿಯದ್ದೂ ಪುಟ್ಟಹುಟ್ಟೇ. ವಿಶಿ ಮತ್ತು ಕಿರಿ ಕಡು ನೀಲಿ ಕ್ಯಾಪ್ ಧರಿಸಿ ಒಟ್ಟಿಗೆ ಬ್ಯಾಟ್ ಮಾಡುವಾಗ ಪಕ್ಕದಲ್ಲಿದ್ದ ಕೆಲವು ಪ್ರೇಕ್ಷಕರಿಗೆ ಯಾರು ವಿಶಿ, ಯಾರು ಕಿರಿ ಗೊತ್ತಾಗುತ್ತಿರಲಿಲ್ಲ.
ಆದರೆ ಆ ಗೊಂದಲ ಕ್ಷಣಿಕ. ವಿಶಿಯ ಸ್ಕ್ವೇರ್ ಕಟ್ ಮತ್ತು ಲೇಟ್ ಕಟ್ಗಳ ಮೋಹಕ ಗುಣ ಕಿರಿಯ ಅದೇ ಸ್ಟ್ರೋಕ್ಗಳಿಗಿರಲಿಲ್ಲ. ವಿಶಿಯ ಕಲಾತ್ಮಕತೆಯ ಉಗಮ ಸ್ಥಾನವಿದ್ದುದು ಆತನ ಮಣಿಕಟ್ಟಿ ನಲ್ಲಲ್ಲ, ಆತನ ಮುಂಗೈನಲ್ಲಲ್ಲ, ಆತನ ಪಾದಗಳಲ್ಲಲ್ಲ, ಅವ ರ ಒಟ್ಟಾರೆ ವ್ಯಕ್ತಿತ್ವದ ಒಳಪದರಗಳಲ್ಲಿ, ಆತನ ಆತ್ಮದಲ್ಲಿ.
ಅಂಥದೇ ನಿರ್ದಿಷ್ಠ ಶೈಲಿ, ನಿರ್ದಿಷ್ಠ ಧಾಟಿ ಸಂಗೀತಗಾರರ ಕಲಾ ಅಭಿವ್ಯಕ್ತಿಯಲ್ಲೂ ಕಾಣಬಹುದು.
ನನಗೆ ಅಪರಿಮಿತ ಮುದ ಕೊಡುವ ಆರ್ ಡಿ ಬರ್ಮನ್ರ ಸಂಗೀತದ ಸೊಗಸೇ ಸೊಗಸು. ಚಿಕ್ಕಂದಿನಲ್ಲಿ, ಬಹುಪಾಲು ರೇಡಿಯೋ ಕೇಳುವುದಕ್ಕೆ ಮಾತ್ರ ನಮ್ಮ ಮನರಂಜನೆ ಸೀಮಿತವಾಗಿತ್ತು. ಅವು ಬರ್ಮನ್ಅವರ ಉಛ್ಛ್ರಾಯ ದಿನಗಳು. ತಂದೆ ಎಸ್ ಡಿ ಬರ್ಮನ್ ಕೂಡ ಜನಪ್ರಿಯತೆ ಪಡೆದಿದ್ದರು. ಅವರ ಸಂಗೀತಕ್ಕೂ ಅವರದ್ದೇ ಬೆರಗು. ಕೆಲವೊಂದು ಹಿರಿಯ ಬರ್ಮನ್ರ ಹಾಡುಗಳಿಗೆ ಕಿರಿಯ ಬರ್ಮನ್ ಸಾಥ್ ನೀಡಿದ್ದರೆಂಬ ವಿಷಯ ನಂತರದ ವರ್ಷಗಳಲ್ಲಿ ತಿಳಿದುಬಂದಿತು. ಆದರೆ, ಜಂಟೀ ಸಂಯೋಜನೆಯ ಆ ಹಾಡುಗಳಲ್ಲಿ ಪಂಚಮ್ ದಾ ಛಾಯೆ ದಟ್ಟವಾಗಿದ್ದುದು ಸೂಕ್ಷ್ಮ ಶ್ರೋತೃಗಳಿಗೆ ಅಂದೇ ಅನುಭವಕ್ಕೆ ಬಂದಿತ್ತು.
ಯಾವುದೇ ಕ್ಷೇತ್ರದ ಸಾಧಕರ ಕೃತಿ ಮಾತ್ರದಿಂದಲೇ ಅವರನ್ನು ಗುರುತಿಸಲು ಆಯಾ ಕ್ಷೇತ್ರಗಳಲ್ಲಿ ಅವರ ಸಾಧನೆಗಳನ್ನು ಗುರುತಿಸಲು ಮಾನದಂಡಗಳಿರು ತ್ತವೆ. ಸಾಮಾನ್ಯರಿಗೆ ಆ ಮಾನದಂಡಗಳು ಲಭ್ಯವಿಲ್ಲದಿದ್ದರೂ, ಆ ಅಳತೆಗೋಲಿನ ಅರಿವೇ ಇಲ್ಲದಿದ್ದರೂ ಅವರು ‘ಇದು ಇವರೇ’, ‘ಇದು ಇವರದ್ದೇ’ ಎಂದು ಥಟ್ಟನೆ ಹೇಳಲು ಸಾಧ್ಯವಾಗುವುದು ಆತ್ಮದ ಭಾಷೆಯ ಸಂವಹನೆ. ಕಲಾರಾಧನೆಯಲ್ಲಿ ಕಲೆಗಾರನಿಗೂ, ಕಲಾರಸಿಕನಿಗೂ ಒಮ್ಮೆಗೇ ಪರಮಾತ್ಮ ಸಾಕ್ಷಾತ್ಕಾರ ವಾಗುವುದಕ್ಕೆ ಕಾರಣ ಅವರಿಬ್ಬರ ಆತ್ಮದ ಏಕಕಾಲದ ಮಿಡಿತ. ಕಲಾಸರಸ್ವತಿಯ ಆವಾಹನೆಗೆ ಸಮಾನಮನಸ್ಸಿನ ತುಡಿತ.
ಸಮಾರಾಧನೆಯೆಂದರೆ, ಕಲೆಗಾರ, ಕಲಾಪ್ರೇಮಿ ಗಳಿಬ್ಬರೂ ತಲ್ಲೀನತೆಯಿಂದ ಸಮವಾಗಿ ಕಲಾರಾಧನೆ ಮಾಡುತ್ತಾ ಒಟ್ಟಿಗೆ ಉತ್ತುಂಗಕ್ಕೇರುವುದು. ಸಂಗೀತ-
ನೃತ್ಯಗಳಲ್ಲಿ ಇದು ಹೆಚ್ಚಿಗೆ ಅನುಭವಕ್ಕೆ ಬರುತ್ತದೆ. ಸಮಪ್ರಮಾಣದ ಆರಾಧನೆಗೆ ಮತ್ತೊಂದು ಉದಾಹರಣೆ ಸತಿಪತಿಯರ ಸಮ್ಮಿಲನದಲ್ಲಿ ಆತ್ಮಗಳ ಬೆಸುಗೆ.
ಆತ್ಮೀಯತೆಯ ಉತ್ಕಟತೆಯಲ್ಲಿ ಆತ್ಮಗಳು ಬೆರೆಯದಿರುವ ಸಂದರ್ಭದಲ್ಲಿ – ಅರ್ಥಾತ್ ಗಂಡ ಅನ್ಯಮನಸ್ಕನಾದಾಗ – ಅನ್ಯಮನಸ್ಕತೆಗೆ ಕಾರಣವನ್ನು ಕರಾರು ವಕ್ಕಾಗಿ ಕ್ಷಣಾರ್ಧದಲ್ಲಿ ಊಹಿಸಬಲ್ಲ ಸಾಮರ್ಥ್ಯ ಬಹಳಷ್ಟು ಪತ್ನಿಯರಿಗಿರುತ್ತದೆ. ತನಿಖೆ ನಡೆಸುವ ಪೊಲೀಸರನ್ನಾದರೂ ಯಾಮಾರಿಸಬಹುದು, ಹೆಂಡತಿಯ ಆಂಟೆನಾದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.
ನಾಟಕಕಾರ ಷೇಕ್ಸ್ಪೀಯರ್ ೧೪ ಸಾಲುಗಳುಳ್ಳ ೧೫೪ ಸಾನೆಟ್ಗಳನ್ನು ಬರೆದ. (ಚತುಷ್ಪದಿ ಎಂದು ಕರೆಯಬಹುದೇನೊ.) ಲಭ್ಯವಿರುವ ಎಲ್ಲಾ ಸಾನೆಟ್ಗಳನ್ನೂ ಅವನೇ ಬರೆದದ್ದೋ ಅಲ್ಲವೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಅವನ ನಾಟಕಗಳಿಗಿಂತ ಅವನ ಸಾನೆಟ್ಗಳೇ ಅವನ ವೈಯಕ್ತಿಕ ಜೀವನಕ್ಕೆ ಕನ್ನಡಿ ಹಿಡಿಯುತ್ತವೆ. ಅವನಿಗೆ ತನ್ನ ಸಾನೆಟ್ಗಳನ್ನು ಪ್ರಕಟಿಸುವ ಇರಾದೆ ಇರಲಿಲ್ಲ. ಅದನ್ನು ಗೋಪ್ಯವಾಗಿಡಲು ಮುಖ್ಯ ಕಾರಣ ಅವುಗಳ ಮುಖ್ಯ ವಿಷಯವಾದ, ಅವನ ಕಾಲದಲ್ಲಿ ಸಾಮಾಜಿಕ ಪರವಾನಗಿ ದೊರಕದಿದ್ದ, ಸಲಿಂಗ ಕಾಮ. ಷೇಕ್ಸ್ಪೀಯರ್ ಸಲಿಂಗ ಕಾಮಿಯಾಗಿದುದಕ್ಕೆ ಪುರಾವೆ ಏನೂ ಇಲ್ಲ ಎನ್ನಲಾಗುತ್ತದೆ. ಆದರೆ, ಅದನ್ನು ಸಂಪೂರ್ಣವಾಗಿ ಅಲ್ಲಗಳೆದಿಲ್ಲ. ಅಲ್ಲಗಳೆಯದಿರುವುದಕ್ಕೆ ಅವನ ಸಾನೆಟ್ಗಳು ಪುಷ್ಠಿ ನೀಡುತ್ತವೆ. ಆ ನನ್ನ ಸಮಕಾಲೀನ ವಿದ್ಯಾರ್ಥಿಯಂತೆ
ಕವಿಗೂ ತನ್ನ ವಾಸನೆಯನ್ನು ಹುದುಗಿಸಲಾಗಲಿಲ್ಲ.
ಸರ್ವೇ ಜನಾಹಾ ಸುಖಿನೋ ಭವಂತು – ಇದು ಭರತ ವರ್ಷದ ಋಷಿವರ್ಯರಿಂದ ಹೊಮ್ಮಿದ ಅತ್ಯುತ್ಕೃಷ್ಠ ಪರಿಕಲ್ಪನೆ. ಹಾಗೆಯೇ, ವಸುದೇವ ಕುಟುಂಬಕಂ.
ಸಹಸ್ರಾರು ವರ್ಷಗಳ ಪುರಾಣ, ಇತಿಹಾಸಗಳಿರುವ ನಮ್ಮ ನಾಗರಿಕತೆ ಯ ಪರಮೋಛ್ರಾಯ ಮಟ್ಟವನ್ನು ಸೂಚಿಸುವ ಅಳತೆ ಗೋಲು. ಯಾವ ಆಧುನಿಕ ಸಮಾಜವಾದಿಯ ಕಲ್ಪನೆಗೂ ಸಿಗದ ಅತ್ಯಮೂಲ್ಯ ತತ್ವ. ಅದೊಂದು ಅಮೋಘ ಜೀವನಕ್ರಮ. ಧರ್ಮದ ತಳಹದಿ ಇರುವ ರಾಜಕೀಯ ಆದರ್ಶ. ಪರಿಷ್ಕೃತ ಮನಸ್ಸಿನ ದ್ಯೋತಕ. ಅಂತಹ ಮನಸ್ಸನ್ನು ಪ್ರತಿಯೊಂದು ಪೌರಾಣಿಕ ಗ್ರಂಥವೂ ಬಿಂಬಿಸುತ್ತದೆ. ಸಂಸ್ಕೃತ ಹುಟ್ಟಿದ್ದೇ ಸುಸಂಸ್ಕೃತಿಯ ಕೂಸಾಗಿ. ಸಂಸ್ಕೃತಿಯ ಪಾಲನೆ, ಪೋಷಣೆಗಾಗಿ. ಜೀವನವನ್ನು ಪಾವನಗೊಳಿಸುವುದಕ್ಕಾಗಿ. ಇದು ಸಾರ್ವಕಾಲಿಕ ಸತ್ಯ. ಇದಕ್ಕೆ ಭಾಷಾತಜ್ಞರ ಅಥವಾ ಸಾಮಾಜಿಕ ಮನೋವಿಜ್ಞಾನಿ ಗಳ ಸಾಕ್ಷಿಯೇನೂ ಬೇಕಿಲ್ಲ. ಅಂತಹ ಉನ್ನತ ಮನಃಸ್ಥಿತಿಯಿಂದ ಸಮಾಜದ ಶೋಷಣೆಯಾಯಿತು ಎಂಬ ವಿಷಬೀಜಗಳನ್ನು ಯುರೋಪಿಯನ್ಮಿಷನರಿಗಳು ಭರತಖಂಡದ ಉದ್ದಗಲಕ್ಕೂ ಬಿತ್ತಿದರು.
ಅದಕ್ಕೆ ಕಾಂಗ್ರೆಸಿಗರೂ, ಕಮ್ಯುನಿಸ್ಟರೂ ನೀರೆರೆಯುತ್ತಲೇ ಬಂದಿದ್ದಾರೆ. ಅವರ ಪಾಪದ ಫಲವನ್ನು ಇಂದಿಗೂ ಅನುಭವಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಹೆಸರನ್ನು ಕಾಂಗ್ರೆಸ್ ಕಳೆಗೆ ದಯಪಾಲಿಸಿರುವುದು ಕಾಕತಾಳೀಯವಲ್ಲ. ಅದನ್ನು ತತ್ವವೆಂದೇ ಕರೆಯುವುದಾದರೆ, ಆ ಪಕ್ಷದ ತತ್ವವನ್ನು ಮೈಗೂಡಿಸಿಕೊಂಡವರನ್ನು ದೂರದಿಂದಲೇ ಕಂಡುಹಿಡಿಯಬಹುದು. ಪಕ್ಷಾಂತರ ಮಾಡಿದ ಮಾತ್ರಕ್ಕೆ ಅವರ ಮೂಲಗುಣ ಹೋಗುವುದಿಲ್ಲ. ಅದು ಜನ್ಮಕ್ಕಂಟಿದ್ದು. ಮೋದಿ ನಿರ್ಮೂಲನೆ ಮಾಡಲು ಪಣತೊಟ್ಟಿರುವುದು ಆ ಪಕ್ಷವನ್ನಲ್ಲ. ಅದರ ಮೂಲಗುಣವನ್ನು. ಅದರ ದುಷ್ಟ ಪರಂಪರೆಯನ್ನು. ಕಾಂಗ್ರೆಸ್ಸಿಗರನ್ನು ಮತ್ತು ಕಾಂಗ್ರೆಸ್ ಸಂಸ್ಕಾರವನ್ನು ಪಡೆದವರನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುವುದರಿಂದ ಅದು ಸಾಧ್ಯವೇ?