ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ದಲಿತರನ್ನು ಮೇಲೆತ್ತುವ ನಿಟ್ಟಿನಲ್ಲಿ ನಾನೂ ಸಾಕಷ್ಟು ತಲೆಕೆಡಿಸಿಕೊಂಡಿದ್ದೇನೆ. ನಾನು ವಾಸಿಸುವ ಮೈಸೂರಿನ ಶತಮಾನ ಪೂರೈಸಿರುವ ಮೈಸೂರು
ವಿಶ್ವವಿದ್ಯಾಲಯದ ದಲಿತೋದ್ಧಾರ ಹೇಗೆ ಸಾಧ್ಯವೆಂದು ಪ್ರೊಫೆಸರ್‌ಗಳ ಗಮನ ಸೆಳೆದಿರುವುದರ ಬಗ್ಗೆ ಇತ್ತೀಚಿಗೆ ಬರೆದಿದ್ದೇನೆ. ನನ್ನ ಹಂಬಲವಾದರೂ ಕಿರಿದು. ನನ್ನ ಜೀವಿತಾವಧಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಒಬ್ಬಳಾ(ನಾ)ದರೂ ವಿದ್ಯಾರ್ಥಿನಿ(ವಿದ್ಯಾರ್ಥಿ) ನೊಬೆಲ್ ಗಿಟ್ಟಿಸಬೇಕು.
ಅಂಥ ಪ್ರತಿಭೆ ದಲಿತ ಸಮುದಾಯದಿಂದ ಬಂದರಂತೂ ಅದಕ್ಕಿಂತ ಹೆಮ್ಮೆ ಬೇಕೇ? ಆ ಮಟ್ಟಕ್ಕೆ ವಿಶ್ವವಿದ್ಯಾಲಯ ಅಭಿವೃದ್ಧಿ ಹೊಂದಬೇಕು. ಆದರೆ, ಜಾತಿಗಳ
ನಡುವಿನ ಬಿರುಕುಗಳನ್ನು ಕಂದಕಗಳನ್ನಾಗಿಸುತ್ತಿರುವ ಬ್ರಾಹ್ಮಣ್ಯ ಕುರಿತಾದ ವಿಷಪೂರಿತ, ಪೂರ್ವಗ್ರಹ ಪೀಡಿತ, ಅವಾಸ್ತವಿಕ ಸಂವಾದಗಳು ಅಂಥ ಸಮಾಜ ಪರ ಕನಸುಗಳನ್ನು ಟಿಸಿಲೊಡೆಯುವುದಕ್ಕೂ ಆಸ್ಪದನೀಡುವುದಿಲ್ಲ. ನಿಮ್ಮ ಪೊಳ್ಳುವಾದ ಬ್ರಾಹ್ಮಣರನ್ನು ದೂರ ಮಾಡುತ್ತದೆ. ಅಂಬೇಡ್ಕರರಂತಹ ಅದ್ಭುತ ಪ್ರತಿಭೆಯ ಬೆಳಕು ಮೇಲ್ವರ್ಗದ ಅರಿವಿಲ್ಲದ ಕೆಲವರ ಕಣ್ತೆರೆಸುವಲ್ಲಿ ಸಾಧ್ಯವಾಗಿಸುವುದಿಲ್ಲ.
ರಾಷ್ಟ್ರಕವಿ ಕುವೆಂಪು ರಾಜ್ಯದಲ್ಲಿಯೇ ಕೇವಲ ಗೌಡರ ಪಿತ್ರಾರ್ಜಿತ ಸ್ವತ್ತಂತೆ ಪರಿಗಣಿಸಲ್ಪಡುತ್ತಾರೆ. ಆಧುನಿಕ ಭಾರತದ ನಿರ್ಮಾತೃ ಗಳಬ್ಬರಾದ ವಿಶ್ವೇಶ್ವರಯ್ಯ ನವರ ಪುತ್ಥಳಿ ನಿರ್ಮಿಸುವುದಕ್ಕೆ ನಿಕೃಷ್ಟರಿಂದ ಪ್ರತಿರೋಧ ವ್ಯಕ್ತಪಡಿಸುವಂಥ ದುರಂತಮಯ ಪರಿಸ್ಥಿತಿಗೆ ಸಮಾಜವನ್ನು ದೂಡಿಬಿಟ್ಟಿದ್ದೀರಿ, ಮಾನ್ಯ ಚಿನ್ನಸ್ವಾಮಿ ಅವರೇ, ಜಾತಿದ್ವೇಷ ತುಂಬಿಕೊಂಡಿರುವ ನೀವು ನಡೆಸಿದ ಸಂವಾದದಿಂದ ಅದೇನು ಸಾಧಿಸಿದಿರೋ ಕಾಣೆ.
ನಾನು ಮೈಸೂರಿಗೆ ಬಂದ ಹೊಸತರಲ್ಲಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳು ನಿರ್ಮಿಸಿದ್ದ ಭಯದ ವಾತಾವರಣದ ಬಗ್ಗೆ ಡೆಕ್ಕನ್ ಹೆರಾಲ್ಡ್ ನಲ್ಲಿ ವರದಿ ಮಾಡಿದ್ದೆ. ಪುಂಡುತನವನ್ನು ಪುಂಡುತನವೆಂದೇ ಕರೆದಿದ್ದೆ. ಭಯದಿಂದ ನಲುಗಿದ್ದ ಪ್ರೊಫೆಸರ್‌ಗಳನ್ನು ಭೇಟಿ ಮಾಡಿ ಬರೆದ ವರದಿ. ಅದು ಹೇಗೋ ಆ ವರದಿ ಯಥಾವತ್ತಾಗಿ ಪ್ರಕಟವಾಗಿತ್ತು. ಅದಾದ ಎರಡು ದಿನದ ನನ್ನ ಸಹೋದ್ಯೋಗಿ ನನ್ನ ವರದಿಗೆ ವ್ಯತಿರಿಕ್ತವಾಗಿ ಮತ್ತೊಂದು ವರದಿ ಬರೆದು ನನ್ನಿಂದಾದ ಅಚಾತುರ್ಯವನ್ನು ಸರಿಪಡಿಸಿದರು.
ಇಂಥ ವೈಪರೀತ್ಯಗಳು ದಿನನಿತ್ಯ ನಡೆಯುತ್ತಿದ್ದವು. ಕಡುಭ್ರಷ್ಟ ದಲಿತ ಅಧಿಕಾರಿಯೊಬ್ಬನ ಬಗ್ಗೆ ವರದಿ ಮಾಡಿದೆ. ಆತನ ಪರಮಾಪ್ತನಾದ ನನ್ನ ಪ್ರಜಾವಾಣಿ ಸಹೋದ್ಯೋಗಿಯೊಬ್ಬರು ಯಾವುದೋ ಸಮಾರಂಭದಲ್ಲಿ ಆತನ ಪಕ್ಕದ ಕುಳಿತು ನನ್ನ ಕಡೆ ಬೊಟ್ಟುಮಾಡಿ ತೋರಿಸುವಾಗ ನನ್ನ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಅದನ್ನೇನು ಪ್ರಶ್ನಿಸಲಿಕ್ಕೆ ಹೋಗಲಿಲ್ಲ. ಆ ಅಧಿಕಾರಿಯ ವಿರುದ್ಧ ಬರೆಯುವ ದಾರ್ಷ್ಟ್ಯ ತೋರಿದವನು ನಾನೇ ಎಂದು ಬಹುಶಃ ಗೋಪ್ಯ ಮಾಹಿತಿ
ಒದಗಿಸುತ್ತಿದ್ದರೇನೋ. ನನ್ನ ಹೆಂಡತಿಯ ಮಾಂಗಲ್ಯ ಗಟ್ಟಿ ಇತ್ತು. ನನ್ನ ಮೇಲೆ ಹಯೇನೂ ಆಗಲಿಲ್ಲ. ದಲಿತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿದ್ದರೆ ಆಶ್ಚರ್ಯವಿಲ್ಲ. (ಆ ಅಧಿಕಾರಿ ವಿರುದ್ಧ ಲಂಕೇಶ್ ಪತ್ರಿಕೆಯೂ ಲಂಕೇಶ್ ಪತ್ರಿಕೆಯ ಭಾಷೆಯ ವರದಿ ಮಾಡಿತ್ತು. ಹಾಗಾಗಿ, ನಾನು ಆ ಅಧಿಕಾರಿಯ ಭ್ರಷ್ಟತೆಯನ್ನು ಬಯಲಿ ಗೆಳೆದದ್ದು, ಆತ ದಲಿತನೆಂಬ ಕಾರಣಕ್ಕಲ್ಲ ಎಂಬುದು ನಿಮ್ಮಂಥವರಿಗೆ ಮನವರಿಕೆಯಾದರೆ ಈ ಲೇಖನದ ಆಶಯಕ್ಕೆ ಭಂಗವಾಗಲಾರದು.)
ಆದರೆ, ನನ್ನ ರಾವ್ ಸರ್ನೇಮ್ ನೋಡಿಕೊಂಡು ಲೇಬಲ್ ಹಚ್ಚುವುದರಲ್ಲಿ ನೀವು ಹೇಗೊ ಹಾಗೆ ಸಂವಾದದ ನಿರೂಪಕ ಬಿ.ಎಂ.ಹನೀಫ್ ನಿಸ್ಸೀಮ. ನನ್ನನ್ನು ವರ್ಷಗಳ ಹಿಂದೆ ಆತನಿಗೆ ಪರಿಚಯ ಮಾಡಿಕೊಟ್ಟವರಿಗೆ ತಕ್ಷಣವೇ ಇವರು ಆರ್‌ಎಸ್ ಎಸ್ ಎಂದು ನಿರ್ಣಾಯಕವಾಗಿ ತೀರ್ಪುನೀಡಿದರು. ಕೆಲವು
ಉತ್ತಮರನ್ನು ಹೊಂದಿದ್ದು ನಗರದ ಬಗ್ಗೆ ಅಪಾರ ಕಾಳಜಿಯಿಂದ ಸೇವೆ ಸಲ್ಲಿಸುತ್ತಿರುವ ಮೈಸೂರು ಗ್ರಾಹಕ ಪರಿಷತ್ ಎಂಬ ಸಂಸ್ಥೆಯ ಸದಸ್ಯತ್ವವನ್ನು ಇತ್ತೀಚಿಗೆ (ಡೆಕ್ಕನ್ ಹೆರಾಲ್ಡ್ ಬಿಟ್ಟ ವರ್ಷಗಳ ನಂತರ) ಪಡೆದದ್ದು ಬಿಟ್ಟರೆ ನಾನು ಆರ್‌ಎಸ್‌ಎಸ್/ಡಿಎಸ್‌ಎಸ್ ಅಥವಾ ಯಾವುದೇ ಸಂಸ್ಥೆಯಿಂದ ಅಂತರವನ್ನು ಕಾಪಾಡಿಕೊಂಡಿದ್ದೇನೆ. ನಾನು ಕಂಡ ಪ್ರಜಾವಾಣಿಯ ಬಹಳಷ್ಟು ವರದಿಗಾರರು ತಮ್ಮ ಬೇಳೆ ಬೇಯಿಸಿಕೊಂಡು ಗೂಡನ್ನು ಭದ್ರಪಡಿಸಿಕೊಳ್ಳಲು ಒಂದಲ್ಲ ಒಂದು ಸಂಸ್ಥೆಯ ಜತೆ, ಗುಂಪಿನ ಜತೆ, ವರ್ಗದ ಜತೆ ಗುರುತಿಸಿಕೊಂಡು ಅದರಿಂದ ಲಾಭ ಪಡೆದಿರುವುದಕ್ಕೆ ಸಾಕ್ಷಿ ಒದಗಿಸಬ.
ಅವರ ದಂಧೆಗಳಿಂದ ಬಡವಾಗಿರುವುದು ಪ್ರಜಾವಾಣಿ, ಇದರಲ್ಲಿ ಆಡಳಿತ ವರ್ಗದ ತಪ್ಪಿದ್ದಂತೆ ಕಾಣುವುದಿಲ್ಲ. ಹನೀಫ್ ಹೆಸರು ಕೇಳಿದೊಡನೆ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಮೊಹಮ್ಮದ್, ದ ಈಡಿಯಟ್ ಕತೆಯ ಶೀರ್ಷಿಕೆಯಿಂದ ಪ್ರಚೋದಿತರಾದ ಮುಸ್ಲಿಮರು ನಡೆಸಿದ ಹಿಂಸಾಚಾರದಲ್ಲಿ ನಿಮ್ಮ ಪಾತ್ರವೂ ಇತ್ತಾ ಅಂತ ನಾನು ಕೇಳಿದ್ದರೆ, ಹನೀಫ್ಗೂ, ನನಗೂ ವ್ಯತ್ಯಾಸವಿರುತ್ತಿರಲಿಲ್ಲ. ಹನೀಫ್ಗೆ ತಿಳಿದಿರಲಿ, ಇದನ್ನು ಪ್ರಸ್ತಾಪಿಸುತ್ತಿರುವುದಕ್ಕೆ ಕಾರಣ, ವಿಶೇಷವಾಗಿ ಪತ್ರಕರ್ತನಿಗೆ ಮತ್ತು ಚಿಂತಕರೆಂದು ಘೋಷಿಸಿಕೊಳ್ಳುವವರಿಗೆ ಪೂರ್ವಗ್ರಹವಿರಬಾರದು. ಇದ್ದರೆ ನಂಬಿಕೆ ಕಳೆದುಕೊಳ್ಳುತ್ತಾರೆ.
ನಂಬಿಕೆ ಕಳೆದುಕೊಂಡ ಪತ್ರಕರ್ತ ತಮ್ಮ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಹಾನಿಮಾಡುತ್ತನೆ. ಅಂತಹವರು ನಡೆಸುವ ಸಂವಾದ ಬೆಲೆ ಕಳೆದುಕೊಳ್ಳುತ್ತದೆ.
ನಾನು ನಿಮ್ಮ ಸಂವಾದದ ಚಿತ್ರೀಕೃತ ವಿಡಿಯೋವನ್ನು ಸಂಪೂರ್ಣವಾಗಿ ನೋಡದಿದ್ದುದು ನಿಮ್ಮ ವರ್ಷಾಂತರಗಳಿಂದ ನಡೆಸಿಕೊಂಡುಬಂದ ಅತಾರ್ಕಿಕ ವಾದ ಚರ್ವಿತ ಚರ್ವಣವಾಗಿರುತ್ತದೆಂಬ ಒಂದೇ ಕಾರಣದಿಂದಲ್ಲ. ಚಾಮರಾಜನಗರದಂಥ ಹಿಂದುಳಿದ ಜಿಯಲ್ಲಿ, ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದ್ದ ಸಂಸದರ ನಿಽಯನ್ನು ತಮ್ಮ ಪುಸ್ತಕ ಪ್ರಕಟಣೆಗೆ ಹರಿಸಿಕೊಂಡಿದ್ದ ನಿಮ್ಮ ಸಹಸಂವಾದಿ ನಾಗಮೋಹನ್ ದಾಸ್ ಅವರ ದನಿಯಲ್ಲಿ ಅದಾವ ನೈತಿಕತೆ ಕಾಣ ಸಿಗಬಹುದೆಂಬ ತಿರಸ್ಕಾರ ಮತ್ತೊಂದು ಕಾರಣ.
ಮೂರನೆಯ ಕಾರಣ, ಹನೀಫ್ ಬಗ್ಗೆ ವರ್ಷಗಳ ಹಿಂದೆ ನಾನು ಕಳೆದುಕೊಂಡ ಭರವಸೆ. ಭರವಸೆ ನಾಶವಾಗಲು ಇನ್ನೊಂದು ಕೇಳಿ. ಒಮ್ಮೆ, ಬೆಂಗಳೂರು ಅರಮನೆಯಲ್ಲಿ ನಡೆದ ಶ್ರೀಕಂಠ ದತ್ತ ಒಡೆಯರ್ ಅವರ ಹುಟ್ಟುಹಬ್ಬದ ಆಚರಣೆಗೆ ಮೈಸೂರಿನಿಂದ ಹೋಗಿದ್ದವರಲ್ಲಿ ಹನೀಫ್ ಮತ್ತು ನಾನೂ ಇದ್ದೆವು. ಹನೀಫ್
ಪ್ರಜಾವಾಣಿ ವರದಿಗಾರ, ನಾನು ಜತೆಗಿದ್ದ ಪ್ರಜಾವಾಣಿ ಸಹೋದ್ಯೋಗಿಗಳ ಜಾತಿ ರಾಜಕಾರಣದಿಂದ ರೋಸಿ ಹೋಗಿ ಡೆಕ್ಕನ್ ಹೆರಾಲ್ಡ್ ಬಿಟ್ಟಿದ್ದೆ. (ಅದನ್ನು ಅವರು ಹೊಟ್ಟೆ ತುಂಬಾ ಹಾಲನ್ನೋ, ಬಹುಶಃ ಬೇರೇನನ್ನೋ ಕುಡಿದು ಸಂಭ್ರಮಿಸುವುದರ ಬಗ್ಗೆ ನಾನು ತಲೆಕೆಡಿಸಿಕೊಂಡಿರಲಿಲ್ಲ.)
ತಮ್ಮ ವಂಶದ ಹಿಂದಿನ ರಾಜರು ನೆರವೇರಿಸಿದಂಥ ಸಮಾಜಪರ ಕೆಲಸಗಳನ್ನು ಅವರು ಮುಂದುವರಿಸಲಿ ಎಂಬುದು ನನ್ನ ಆಸೆಯಾಗಿತ್ತು. ಅದಕ್ಕೆ ತಕ್ಕ ಯೋಜನೆಯನ್ನು ಸಿದ್ಧಪಡಿಸಿ ಕಾರ್ಯಾರಂಭವಾಗಿತ್ತು. ಆ ಸುದೀರ್ಘ ಯೋಜನೆಯ ಒಂದು ಅಂಶ ಆಗಲೇ ಯಶ ಕಂಡಿದ್ದು ಒಡೆಯರ್ ತಮ್ಮ ಜನ್ಮದಿನದ ಸಮಾರಂಭದಲ್ಲಿ ನನ್ನನ್ನು ಆಲಂಗಿಸಿಕೊಂಡಿದ್ದರು. ಮೈಸೂರಿಗೆ ವಾಪಸ್ ಆದ ನಂತರ ಹನೀಫ್ ಮನೆಗೆ ಡ್ರಾಪ್ ಕೇಳಿದ್ದರು. ಡ್ರಾಪ್ ಕೊಟ್ಟಿದ್ದೆ. ಅದೇನು, ಅಲ್ಪಸಂಖ್ಯಾತ ತುಷ್ಟೀಕರಣಕ್ಕಲ್ಲ, ಅವೇಳೆಯಾದ್ದರಿಂದ ಡ್ರಾಪ್ ನೀಡಿದ್ದೆ. ಅದು ಬಿಟ್ಟರೆ ಆತನಿಗೂ, ನನಗೂ ಇಮಾಮ್ ಸಾಬರಿಗೂ ಗೋಕುಲಾಷ್ಟಮಿಗೂ ಇರಬಹುದಾದ ಸಂಬಂಧ ಅಷ್ಟೆ.
ತದನಂತರದಲ್ಲಿ, ಹನೀಫ್ ಸುಧಾ ಪತ್ರಿಕೆಯಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸದೆ (ಆದರೆ, ಓದಿದವರಿಗೆ ಅದರಲ್ಲಿ ಉಲ್ಲೇಖಿಸಿದ ಇಂಗ್ಲಿಷ್ ಪತ್ರಕರ್ತ ನಾನೇ ಎಂದು ಸ್ಪಷ್ಟವಾಗಿ ತಿಳಿಯುವಂತೆ) ಲೇಖನ ಬರೆದರೆಂದು ಅದನ್ನು ಓದಿದ ಇಬ್ಬರಿಂದ ಕೇಳ್ಪಟ್ಟೆ. ಯಾವ ಕಾರಣಕ್ಕಾಗಿ ಸಂವಾದವನ್ನು ಸಂಪೂರ್ಣವಾಗಿ ವೀಕ್ಷಿಸಲಿಲ್ಲವೋ ಅದೇ ಕಾರಣಕ್ಕೆ ಆ ಲೇಖನವನ್ನು ಓದಲಿಕ್ಕೆ ಹೋಗಲಿಲ್ಲ. ನನ್ನ ಬೃಹತ್ ಯೋಜನೆ ಕೈಗೂಡಲಿಲ್ಲ. ಡೆಕ್ಕನ್ ಹೆರಾಲ್ಡ ಬಿಟ್ಟ ಮೇಲೂ ಪರಿಚಯವಿಲ್ಲದ ನನ್ನ ಬಗ್ಗೆ ಎಷ್ಟು ಅಸೈರಣೆ ಇದ್ದಿರಬಹುದು, ಚಿನ್ನಸ್ವಾಮಿಯವರೇ. ಯಾವ ಬ್ರಾಹ್ಮಣ್ಯದ ಬಗ್ಗೆ ಮಾತನಾಡುತ್ತೀರಿ ನೀವು? ನನಗೆ ಬೇಸರವಾಗಿದ್ದು ಅದಕ್ಕಲ್ಲ, ಯೋಜನೆ ಮುಂದುವರಿದಿದ್ದರೆ ದಲಿತರಿಗೂ ಲಾಭವಾಗುತ್ತಿತ್ತು.
ನಾಗಮೋಹನ್ ದಾಸ್, ಹನೀಫ್, ನೀವು ಅಥವಾ ಬೇರಾರೇ ಈ ಕುರಿತು ಬೇಕಾದರೂ ಪ್ರತಿಕ್ರಿಯೆ ನೀಡಬಹುದು. ನಿಮ್ಮ ಸಂವಾದದ ಉದ್ದೇಶವನ್ನೇ ಪ್ರಶ್ನಿಸಿ ವಾಚಕರ ವಾಣಿಗೆ ಪತ್ರ ಬರೆದು ಅದು ಪ್ರಕಟವಾಗದಿದ್ದುದಕ್ಕೆ ಪ್ರಜಾವಾಣಿಯ ಓದುಗರೊಬ್ಬರು (ನನ್ನ ಅಂದಾಜಿನಲ್ಲಿ ಅವರು ಬ್ರಾಹ್ಮಣರೇ) ಅದನ್ನು ನನ್ನೊಡನೆ ಹಂಚಿಕೊಂಡಿzರೆ. ಅದರಲ್ಲಿ ಆಕ್ಷೇಪಣಾರ್ಹ ವಿಷಯವೇನೂ ಇಲ್ಲ. ನಿಮ್ಮನ್ನ್ಯಾರನ್ನೂ ನಿಂದಿಸಿಲ್ಲ. ಭಾಷೆ ಸಭ್ಯವಾಗಿದೆ. ಇದೇನು ಹೊಸತಲ್ಲ. ಎಡಪಂಥೀಯ ಕವಿಯಾದ ಶಿವತೀರ್ಥನ್ ಪ್ರಜಾವಾಣಿ ವರದಿಗಾರ ಬಸವರಾಜು ಅವರನ್ನು ಭೇಟಿ ಮಾಡಲು ಬರುತ್ತಿದ್ದರು.
ಒಮ್ಮೆ, ನನ್ನ ಕವನ ಪ್ರಜಾವಾಣಿಯಿಂದ ತಿರಸ್ಕೃತವಾಗಿದ್ದರ ಬಗ್ಗೆ ಅವರಿಗೆ ಹೇಳಿದೆ. ಹೆಂಗಸಿನ ಹೆಸರಿನಲ್ಲಿ ಕಳಿಸಿ ನೋಡಿ ಎಂದು ನಗುತ್ತಾ ಸಲಹೆ ನೀಡಿದರು. ನಾನು ಹಾಗೇನು ಮಾಡಲಿಲ್ಲ, ಪ್ರಜಾವಾಣಿಗೆ ಮತ್ತೆ ಬರೆಯಲಿಲ್ಲ. ಆದರೆ, ಸಂಸ್ಥೆಯಿಂದ ಹೊರಬಂದ ನಂತರ, ಡೆಕ್ಕನ್ ಹೆರಾಲ್ಡ್‌ಗೆ ಬರೆದ ಲೇಖನಗಳು
ತಿರಸ್ಕೃತವಾದವು. ಪರೀಕ್ಷಿಸಲೆಂದು ನಮ್ಮೊಡನಿದ್ದ ನನ್ನ ಅತ್ತೆಯ ಹೆಸರಲ್ಲಿ ಒಂದೆರಡು ಕಳಿಸಿದೆ. ಅಕ್ಷರಶಃ ಪ್ರಕಟವಾದವು.
ಸಂಭಾವನೆಯೂ ಬಂತು. ಅಂದರೆ, ನನಗೆ (ನೀವು ಹೇಳುವಂತೆ, ಬ್ರಾಹ್ಮಣನಾಗಿ ನಾನೇ ಬುದ್ಧಿವಂತ ಅನ್ನಿಸದಿದ್ದರೂ, ನಾನೂ ಬುದ್ಧಿವಂತನಿರಬಹುದೇನೋ
ಎಂಬ ಆಶಾಭಾವನೆ ಮೂಡಿತು. ಮತ್ತೊಂದು ಲೇಖನ ಕಳಿಸಿದೆ. ನನ್ನ ಹೆಸರಿನ ಪ್ರಕಟವಾಯಿತು. ನನಗಾಗಲಿ, ನನ್ನ ಲೇಖನಕ್ಕೆ ಹೊಂದುವಂತೆ ಅತ್ಯುತ್ತಮ ಚಿತ್ರ ಒದಗಿಸಿದ್ದ ಫೇಸ್ಬುಕ್‌ನಲ್ಲಷ್ಟೇ ಭೇಟಿ ಮಾಡಿದ್ದ ಛಾಯಾಗ್ರಾಹಕ ಮಿತ್ರನಿಗಾಗಲಿ ಸಂಭಾವನೆ ಬರಲಿಲ್ಲ. ಬ್ರಹ್ಮನಿಗೆ, ತಟ್ಟೆಕಾಸು ಬೇಡ ಸ್ವಾಮಿ, ಬರೆದದ್ದ ಕ್ಕಾದರೂ ಹಣ ಬರಬೇಕಲ್ಲವೇ? ನನಗಾದರೋ ರಾವ್ ಎಂಬ ಹೊರೆ ಇದೆ. ಆ ಛಾಯಾಗ್ರಾಹಕನ ತಪ್ಪಾದರೂ ಏನು? ಬ್ರಾಹ್ಮಣರು ತಾವೇ ಬುದ್ಧಿವಂತ ರೆಂದುಕೊಂಡಿದ್ದಾರೆ ಎಂಬ ತಮ್ಮ ಆರೋಪದಲ್ಲಿ ಹುರುಳಿಲ್ಲವೆಂದು ನನ್ನ ವಾದ.
ಅಷ್ಟೊಂದು ಬುದ್ಧಿವಂತರಾಗಿದ್ದರೆ, ತಮ್ಮ ಸಮುದಾಯದ ವಿರುದ್ಧವಿರುವ ಪ್ರಜಾವಾಣಿಯನ್ನು ಇನ್ನೂ ಯಾಕೆ ಅಷ್ಟೊಂದು ಮಂದಿ ಬ್ರಾಹ್ಮಣ ಓದುಗರು ಕೊಂಡು
ಓದುತ್ತಿದ್ದರು, ನೀವೇ ಹೇಳಿ. ಅದೂ ಈ ದುರ್ಭಿಕ್ಷದ ದಿನಗಳಲ್ಲಿ? ಹಲವು ವರ್ಷಗಳ ಹಿಂದೆ, ಯೋಧನಾದ ನನ್ನ ಅಣ್ಣ ಲಡಾಖ್‌ನಲ್ಲಿದ್ದ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅಭಿಮಾನದಿಂದ ಡೆಕ್ಕನ್ ಹೆರಾಲ್ಡಿಗೆ ಚಂದಾದಾರನಾಗಿದ್ದ. ಜಗತ್ತಿನ ಅತ್ಯುನ್ನತ ಮೋಟಾರ್ ರೋಡ್ ಎಂಬ ಫಲಕದ ಹಿನ್ನೆಲೆಯಲ್ಲಿ ತಾನು ಡೆಕ್ಕನ್ ಹೆರಾಲ್ಡ ಓದುತ್ತಿರುವ ಫೋಟೊವೊಂದನ್ನು ತೆಗೆಸಿಕೊಂಡಿದ್ದ. ಪತ್ರಿಕೋದ್ಯಮ ಮೌಲ್ಯದ ಅವನತಿಗೆ ಅಡಿಪಾಯ ಹಾಕಿದ ಆರೋಪಕ್ಕೆ ನೇರ ಹೊಣೆ ಹೊರ ಬೇಕಾದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ನಾನು ಸೇವೆ ಸಲ್ಲಿಸಿದ್ದ ಡೆಕ್ಕನ್ ಹೆರಾಲ್ಡನ್ನು ಹಿಮ್ಮೆಟ್ಟಿಸಿಯಾಗಿತ್ತು.
ಅದರೊಂದಿಗೆ ನನ್ನ ಕಹಿ ಅನುಭವಗಳೇನೇ ಇದ್ದರೂ ಅವುಗಳನ್ನು ಬದಿಗೊತ್ತಿ, ಡೆಕ್ಕನ್ ಹೆರಾಲ್ಡ್ ಆ ಛಾಯಾಚಿತ್ರವನ್ನು ತನ್ನ ಸ್ಪರ್ಧಿಯ ವಿರುದ್ಧ ಮಾರ್ಕೆಟಿಂಗ್
ತಂತ್ರದ ಭಾಗವಾಗಿ ಬಳಸಲೆಂದು ನನ್ನ ಇಚ್ಛೆ ಇತ್ತು. ಸಂಸ್ಥೆಯ ಮಾಲೀಕರಿಗೆ ಅದು ರುಚಿಸಲಿಲ್ಲ. ಕಾರಣ ತಿಳಿಯಲಿಲ್ಲ. ಹಣದ ವಹಿವಾಟೇ ಇಲ್ಲದ, ಸ್ವಂತ ಹಿತಾಸಕ್ತಿಯ ಕುರುಹೇ ಇಲ್ಲದ ಇಂಥ ಸಣ್ಣಪುಟ್ಟ ವಿಚಾರಗಳನ್ನು ಅನುಷ್ಠಾನಕ್ಕೆ ತರುವ ಸಾಮರ್ಥ್ಯವೂ ಎಲ್ಲ ಬ್ರಾಹ್ಮಣರಿಗಿಲ್ಲವಾಗಿದೆ, ಚಿನ್ನಸ್ವಾಮಿಗಳೇ.
ಇಷ್ಟೆ ಹಿನ್ನಡೆಯ ನಂತರ ನನಗೂ ನಾನು ಪತ್ರಿಕೋದ್ಯಮಕ್ಕೆ ಬಂದು ತಪ್ಪು ಮಾಡಿದೆ ಅನ್ನಿಸತೊಡಗಿತು.
ಭಾರತೀಯ ಸೈನ್ಯಕ್ಕೆ ಪ್ರವೇಶ ಬಯಸಿ ಬರೆದ ಪರೀಕ್ಷೆಯಲ್ಲಿ ಉತ್ತೀರ್ಣನಾದರೂ, ಪತ್ರಿಕೋದ್ಯಮವೇ ಬೇಕು ಎಂದು ಬಯಸಿ ಬಂದೆ. ಸೈನ್ಯ ಸೇರಿದ್ದರೆ 1. ಸಹಯೋಧರಾರೂ ನನ್ನನ್ನು ಜಾತಿ-ಕಾಮಾಲೆ ಕಣ್ಣುಗಳಿಂದ ನನ್ನನ್ನು ನಿತ್ಯ ನೋಡುತ್ತಿರಲಿಲ್ಲ 2) ಪಾಕಿಸ್ತಾನದಿಂದ ಉಡಾಯಿಸಿದ ಸಿಡಿಮದ್ದುಗಳಿಗಿಂತಲೂ ಹೆಚ್ಚು ಅಪಾಯಕಾರಿಯಾದ ನಿಮ್ಮಂಥವರ ಹಗೆಯ ಹೊಗೆಯನ್ನು ನಿತ್ಯ ಕುಡಿಯಬೇಕಿರಲಿಲ್ಲ. 3. ಒಂದು ವೇಳೆ ಸತ್ತಿದ್ದರೆ, ಮಾಡದ ತಪ್ಪಿಗೆ ಅನಾಗರಿಕ ನಿಂದನೆಯಿಂದ ನಿತ್ಯ ಇರಿಸಿಕೊಳ್ಳಬೇಕಾದ ದುರಂತಮಯ ಬದುಕು ಸವೆಸಬೇಕಿರಲಿಲ್ಲ. 4. ನಿಮ್ಮಂಥವರ ಅಸಹನೆ ಎಂಬ ಅಗ್ನಿಪರ್ವತದಿಂದ ಭುಗಿಲೆದ್ದ ಲಾಲಾರಸದ ನಿತ್ಯಸಿಂಚನವಾಗುತ್ತಿರಲಿಲ್ಲ. 5. ನಿರಂಕುಶ ಅಧಿಕಾರದ ವಿಡಂಬನಾತ್ಮಕ ನ್ಯಾಯಾಲಯದಲ್ಲಿ ಹಿಂಸಿಸುವರನ್ನೇ ನ್ಯಾಯ ಕೇಳುವುದನ್ನು
ನೆನಪಿಸುವಂಥ ಇಂಥ ಲೇಖನವನ್ನು ಬರೆಯುವ ಪರಿಪಾಟಲಿನಿಂದ ತಪ್ಪಿಸಿಕೊಳ್ಳಬಹುದಿತ್ತು. 6. ಬ್ರಾಹ್ಮಣರೂ ಸೈನ್ಯದಲ್ಲಿ ಗಣನೀಯ ಪ್ರಮಾಣದಲ್ಲಿರುವುದನ್ನು ಹುರುಳಿಲ್ಲದೆ ನಿರಾಕರಿಸುವ ನಿಮ್ಮ ಓರಗೆಯ ಜನದ ವಾದವನ್ನು ಹುಸಿಗೊಳಿಸುವಲ್ಲಿ ನನ್ನ ಅತ್ಯಲ್ಪ ಕಾಣಿಕೆಯೂ ಇರುತ್ತಿತ್ತು.
ಲಾಕ್‌ಡೌನ್ ಅವಧಿಯಲ್ಲಿ, ನಾನು ಭೇಟಿ ಮಾಡಿರದಿದ್ದರೂ ಅಪಾರವಾಗಿ ಗೌರವಿಸುವ, ಶಿಕ್ಷಕ ವೃತ್ತಿಯಲ್ಲಿರುವ ದೂರದೂರಿನ ಒಬ್ಬ ಫೇಸ್ಬುಕ್ ಮಿತ್ರ ತಮ್ಮ ಆರ್ಥಿಕ ಮುಗ್ಗಟ್ಟಿನ ಬಗ್ಗೆ ಸೂಚ್ಯವಾಗಿ ನಿವೇದಿಸಿಕೊಂಡಿದ್ದರು. ಸಂಸಾರೊಂದಿಗ ರಾದ ಅವರಿಗೆ ವೇತನ ಕಡಿತವಾಗಿದ್ದರ ಅರಿವು ನನಗಿತ್ತು. ನನಗೆ ಹೆಚ್ಚಿನ ನೆರವು ನೀಡುವ ಸಾಮರ್ಥ್ಯವಿಲ್ಲ ದಿದ್ದರೂ ಅವರನ್ನು ಸಾಂತ್ವನಗೊಳಿಸ ಬಹುದೆಂದು ಫೋನ್ ಮಾಡಿದೆ.
ತಮ್ಮ ಊರಿನ ಬಡ ದಲಿತ ಕುಟುಂಬವೊಂದಕ್ಕೆ ಸೂರು ಕಟ್ಟಿಕೊಡಲು ಹಣದ ಮುಗ್ಗಟ್ಟಿದೆ, ಪರ್ಯಾಯ ವ್ಯವಸ್ಥೆಯಾಗದಿದ್ದರೆ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂದರು. ಹಲವು ತಿಂಗಳಾದವು, ಇನ್ನೂ ಅವರಿಂದ ಕರೆ ಬಂದಿಲ್ಲ. ಆ ದಲಿತ ಕುಟುಂಬವನ್ನು ಮಳೆಗಾಲಕ್ಕೆ ಮೊದಲು ಬೆಚ್ಚಗಿಡಲು ಅವರು ಮಾಡಿದ ಪ್ರಯತ್ನ ಸಫಲವಾಗಿದೆಯೆಂದು ನಂಬಿದ್ದೇನೆ. ನನ್ನ ಆ ಗೌರವಾನ್ವಿತ ಮಿತ್ರ ಹುಟ್ಟಿನಿಂದಲೂ ಬ್ರಾಹ್ಮಣನೇ. ಅವರ ಈ ಕೆಲಸಕ್ಕೆ ಪ್ರಚಾರ ಬಯಸಿದವರಲ್ಲ. ನಿಮಗಿದರ ಪುರಾವೆ ಬೇಕೇ, ಚಿನ್ನಸ್ವಾಮಿಗಳೇ? ಇವರೊಬ್ಬರು ಬ್ರಾಹ್ಮಣ ಸಮುದಾಯಕ್ಕೆ ಅಪವಾದ ಎಂಬ ಕುಹಕ ತೆಗೆದೀರಿ.
ಇಂಥ ಎಲೆಮರೆಯ ಪಕ್ವ ಹಣ್ಣುಗಳು ಇನ್ನೂ ಇವೆ. ಬ್ರಾಹ್ಮಣ್ಯದ ಬಗ್ಗೆ ನಡೆಸಿದ ಸಂವಾದದಿಂದ ಅದೆಷ್ಟು ಅಮೃತವನ್ನು ಕಡೆದು ಉಕ್ಕಿಸಿದಿರೋ ಕಾಣೆ. (ಈಗಾಗಲೇ ಹೇಳಿದಂತೆ ನಾನು ವಿಡಿಯೋ ಪೂರ್ಣ ನೋಡಲಿಲ್ಲ). ನಾಗಮೋಹನ್ ದಾಸರು ತಮ್ಮ ಶಿಫಾರಸು ಬಳಸಿ ಇನ್ನೊಂದು ನಾಲ್ಕು ಜನ ದಲಿತರಿಗೆ ಸೂರು ಒದಗಿಸುವಂತೆ ಅನುಕೂಲ ಮಾಡಿಕೊಡಲಿ. ಯಾರಿಗೂ ಮನೆ ಕಟ್ಟಿಕೊಡಿಸದಿದ್ದರೂ ಪರವಾಗಿಲ್ಲ, ಹನೀಫ್ ಇಂಥ ಸಂವಾದಗಳನ್ನು ಏರ್ಪಡಿಸಿ ಮನಗಳನ್ನು ಮುರಿಯುವ ಕೆಲಸ ಮಾಡದಿರಲಿ.
ಕಡೆಯದಾಗಿ, ನಾನು, ನೀವುಗಳಿಗಿಂತ ದೇಶ ದೊಡ್ಡದು, ಬಲು ದೊಡ್ಡದು. ಉತ್ತರದ ನಿರೀಕ್ಷೆಯಲ್ಲಿದ್ದೇನೆ. ಆತ್ಮೀಯ ವಂದನೆಗಳು.