Sunday, 21st April 2024

ಡಿಕೆಶಿ ಪವರ್‌ ಸ್ಟ್ರೋಕ್‌ಗೆ ಬೊಮ್ಮಾಯಿ ಕವರ್‌ ಸ್ಟ್ರೋಕ್‌

ಮೂರ್ತಿ ಪೂಜೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ‘ಪವರ್’ ಸ್ಟ್ರೋಕ್ ಕೈ ಪಾಳೆಯದ ಹರ್ಷಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೆ ಇನ್ನೂರು ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎಂಬುದು ಡಿಕೆಶಿ ಪವರ್ ಸ್ಟ್ರೋಕ್. ಅವರು ಈ ಸ್ಟ್ರೋಕ್ ಬಾರಿಸಿದ ಕೂಡಲೇ ಮೊದಲು ತಳಮಳ ಕ್ಕೀಡಾಗಿದ್ದು ಕಮಲ ಪಾಳೆಯ.

ಹೀಗಾಗಿ, ಇವೆಲ್ಲ ಆಗುವ ಹೋಗುವ ಮಾತಲ್ಲ ಎಂಬುದರಿಂದ ಹಿಡಿದು ಹಲ ಬಗೆಯಲ್ಲಿ ಬಿಜೆಪಿ ನಾಯಕರು ಟೀಕೆ ಮಾಡಿದರೂ ಅವರ ಟೀಕೆಯಲ್ಲಿ ಆತ್ಮವಿಶ್ವಾಸ ಇರಲಿಲ್ಲ. ಕಾರಣ? ಇಂತಹ ಘೋಷಣೆಗೆ ಪ್ರತಿಯಾಗಿ ಎಷ್ಟೇ ಟೀಕಿಸಿದರೂ ಅದು ತಲುಪ ಬೇಕಾದ ಗುರಿಯನ್ನು ತಲುಪಿರುತ್ತದೆ ಎಂಬುದು ಅವರಿಗೆ ಗೊತ್ತು. ಬಿಜೆಪಿ ಸರಕಾರ ಜನರ ಜೀವನ ದುಬಾರಿ ಯಾಗು ವಂತೆ ಮಾಡಿದೆ.

ಹೀಗಾಗಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆಮ್ಮದಿ ನೀಡಲು ಉಚಿತ ವಿದ್ಯುತ್ ನೀಡಲು ತೀರ್ಮಾನಿಸಿದ್ದೇವೆ ಎಂಬ ಡಿಕೆಶಿ ಮಾತು ಬಡ, ಮಧ್ಯಮ ವರ್ಗದ ಜನರ ಕಿವಿಗೆ ಅಪ್ಯಾಯಮಾನವಾಗಿ ಕೇಳಿಸಿದೆ. ಅರ್ಥಾತ್, ಅವರ ಪವರ್ ಸ್ಟ್ರೋಕ್ ನಿಗದಿತ ಗುರಿ ತಲುಪಿದೆ. ಹಾಗೆ ನೋಡಿದರೆ ಇದು ದೆಹಲಿಯ ಆಪ್ ಸರಕಾರದ ಮಾಡೆಲ್ಲು. ಆದರೆ ದೆಹಲಿಯಲ್ಲಿ ಜನರಿಗೆ ಉಚಿತ ವಿದ್ಯುತ್ ನೀಡುವುದಕ್ಕೂ, ಕರ್ನಾಟಕದಲ್ಲಿ ಉಚಿತ ವಿದ್ಯುತ್ ನೀಡುವುದಕ್ಕೂ ಅಗಾಧ ವ್ಯತ್ಯಾಸವಿದೆ.

ಕರ್ನಾಟಕ ಈಗ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆಯಾದರೂ ರೈತರ ಕೃಷಿ ಪಂಪುಸೆಟ್ಟುಗಳಿಗೆ ಉಚಿತ
ವಿದ್ಯುತ್ ನೀಡಲು ಪರಿತಪಿಸುತ್ತಿದೆ. ಯಾಕೆಂದರೆ ಈ ಬಾಬ್ತಿನ ಹಣವನ್ನು ರಾಜ್ಯ ಸರಕಾರ ಭರಿಸಬೇಕಲ್ಲ? ಅದನ್ನು
ಭರಿಸುವುದೇ ಸರಕಾರಕ್ಕೀಗ ಹೊರೆಯಾಗಿದೆ. ವಸ್ತುಸ್ಥಿತಿ ಎಂದರೆ, ರೈತರ ಕೃಷಿ ಪಂಪುಸೆಟ್ಟುಗಳಿಗೆ ಉಚಿತವಾಗಿ ವಿದ್ಯುತ್ ನೀಡಬಾರದು ಮತ್ತು ನೀಡುವ ವಿದ್ಯುತ್ತಿನ ಲೆಕ್ಕ ಪಡೆಯಲು ಮೀಟರ್ ಅಳವಡಿಸಬೇಕು ಎಂಬ ಒತ್ತಡ ಸರಕಾರದ ಮೇಲೆ ಹೆಚ್ಚಾಗುತ್ತಿದೆ. ಬಿಜೆಪಿ ಸರಕಾರಕ್ಕೂ ಇದು ಅನಿವಾರ್ಯ ಅನ್ನಿಸಿದೆ.

ಆದರೆ ವಿಧಾನಸಭಾ ಚುನಾವಣೆ ಹತ್ತಿರ ಇರುವಾಗ ಕೃಷಿ ಪಂಪು ಸೆಟ್ಟುಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಕೊಡುಗೆಯನ್ನು ಸ್ಥಗಿತಗೊಳಿಸಿದರೆ ಬಿಜೆಪಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅರಿವೂ ಇದೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಗೆದ್ದು ಅಧಿಕಾರ ಹಿಡಿದರೆ ರೈತರಿಗೆ ನೀಡುತ್ತಿರುವ ಫ್ರೀ ಕರೆಂಟ್ ಕಟ್ ಮಾಡಲು ಅದು ಯೋಚಿಸಿದೆ. ಪರಿಸ್ಥಿತಿ
ಹೀಗಿರುವಾಗ ಡಿಕೆಶಿ ಬಾರಿಸಿದ ಪವರ್ ಸ್ಟ್ರೋಕ್ ಬಿಜೆಪಿ ಪಾಳೆಯವನ್ನು ಕಕ್ಕಾಬಿಕ್ಕಿಗೊಳಿಸಿರುವುದು ನಿಜ.

ಹೀಗಾಗಿ, ಇದು ಸಾಧ್ಯವಿಲ್ಲದ ಕೆಲಸ ಅಂತ ಕಮಲ ಪಾಳೆಯದ ಕೆಲವರು ಕೂಗು ಹಾಕುತ್ತಿದ್ದರೂ, ಬಿಜೆಪಿಯಲ್ಲಿರುವ ಹಲವರು ಕಾಂಗ್ರೆಸ್ ಪಕ್ಷಕ್ಕೆ ಅದು ಸಾಧ್ಯವಾದರೂ ಆಗಬಹುದು ಅನ್ನತೊಡಗಿದ್ದಾರೆ. ಅವರ ಪ್ರಕಾರ ೨೦೧೩ ರ ಚುನಾವಣೆಗೂ ಮುನ್ನ
ಕಾಂಗ್ರೆಸ್ ಪಕ್ಷ ಜನರಿಗೆ ಉಚಿತ ಅಕ್ಕಿ ನೀಡುವುದಾಗಿ ಹೇಳಿತು. ಅದೇ ಕಾಲಕ್ಕೆ ಇದು ಅಸಾಧ್ಯದ ಕೆಲಸ ಅಂತ ನಾವು
ಹೇಳಿದೆವು.

ಆದರೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅನ್ನಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿತು. ಯಾವಾಗ ಇದು ಜಾರಿಯಾಯಿತೋ? ಆಗ ನಾವು, ಇದು ಮೋದಿ ಸರಕಾರದ ಕೊಡುಗೆ ಅನ್ನತೊಡಗಿದೆವು. ಈಗ ಪ್ರತಿ ಮನೆಗೆ ಇನ್ನೂರು ಯೂನಿಟ್ ಉಚಿತ ವಿದ್ಯುತ್ ನೀಡುವ ವಿಷಯವೂ ಅದೇ ಹಾದಿ ಹಿಡಿಯಬಹುದು ಎಂಬುದು ಹಲ ಬಿಜೆಪಿ ನಾಯಕರ ಗುಸು ಗುಸು. ಪರಿಣಾಮ, ಡಿಕೆಶಿಯ ಪವರ್ ಸ್ಟ್ರೋಕ್ ಬಿಜೆಪಿಯಲ್ಲಿ ಕಲಮಲವೆಬ್ಬಿಸಿದರೆ, ಕಾಂಗ್ರೆಸ್ ಪಾಳೆಯದ ರಣೋತ್ಸಾಹ ಹೆಚ್ಚುವಂತೆ ಮಾಡಿದೆ.

ರಾಜ್ಯದ ‘ಮನೆ ಒಡತಿಯರಿಗೆ ಧನ’ ಸಹಾಯ ಮಾಡುವ ಸಿಎಂ ಬೊಮ್ಮಾಯಿಯವರ ’ಕವರ್’ ಸ್ಟ್ರೋಕ್’ಗೆ ಕಾಂಗ್ರೆಸ್ ನ ಈ ರಣೋತ್ಸಾಹವೇ ಕಾರಣ.

ಕಾಲಜ್ಞಾನಿ ‘ಕಟೀಲ’
ಅಂದ ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಾವು ಕಾಲಜ್ಞಾನಿ ಅನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಪಕ್ಷದ ಸಭೆಯೊಂದರಲ್ಲಿ ಮಾತನಾಡುವಾಗ, ನಾನಾಗಲೀ ಯಡಿಯೂರಪ್ಪ ಅವರಾಗಲೀ ಪಕ್ಷಕ್ಕೆ ಅನಿವಾರ್ಯ ರಲ್ಲ ಅಂತ ಅವರಾಡಿದ ಮಾತು ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಕಟೀಲ್ ಈ ರೀತಿ ಮಾತನಾಡಬಾರದಿತ್ತು. ಅವರ ಈ ಮಾತು ಪಕ್ಷಕ್ಕೆ ಹಾನಿ ಮಾಡುವುದು ನಿಶ್ಚಿತ ಎಂಬುದು ಹಲವರ ಆತಂಕ. ಆದರೆ ನಳಿನ್ ಕುಮಾರ್ ಕಟೀಲರ ಮಾತನ್ನು ಒಬ್ಬ ಕಾಲಜ್ಞಾನಿಯ ಮಾತು ಅಂತಷ್ಟೇ ಸ್ವೀಕರಿಸಬೇಕು.

ಯಾಕೆಂದರೆ ಅವರು ಮೋದಿ-ಅಮಿತ್ ಷಾ ಮನಸ್ಸನ್ನು ಓದಿ ಇಂತಹ ಮಾತು ಹೇಳಿದ್ದಾರೆ ಎಂಬುದು ಬಿಜೆಪಿಯ ಹಿರಿಯ ನಾಯಕರೊಬ್ಬರ ಮಾತು. ೨೦೨೧ ರ ಜುಲೈ ತಿಂಗಳಲ್ಲಿ ಇದೇ ಕಟೀಲ್ ತಮ್ಮ ಆಪ್ತರೊಬ್ಬರ ಜತೆ ಮಾತನಾಡುವಾಗ, ಇನ್ನೇನು ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿಯುತ್ತಾರೆ. ಜಗದೀಶ್ ಶೆಟ್ಟರ್ ಅವರಂತಹ ನಾಯಕರು ಮರಳಿ ಮಂತ್ರಿಗಳಾಗುವುದಿಲ್ಲ. ಇನ್ನೇನಿದ್ದರೂ ಸರಕಾರ ನಮ್ಮದೇ ಅಂತ ಹೇಳಿದ್ದರು.

ಹೀಗೆ ತಾವಾಡಿದ ಮಾತಿನ ಆಡಿಯೋ ಬಹಿರಂಗವಾದಾಗ ನಳಿನ್ ಕುಮಾರ್ ಕಟೀಲ್ ಗಾಬರಿಗೊಂಡು ಅದು ತಮ್ಮದಲ್ಲ
ಎಂದರು. ಆದರೆ ಅಂತಿಮವಾಗಿ ಆ ಆಡಿಯೋದಲ್ಲಿದ್ದ ಮಾತು ನಿಜವಾಯಿತು. ಯಡಿಯೂರಪ್ಪ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡರು. ಈಗಲೂ ಅಷ್ಟೇ, ಯಡಿಯೂರಪ್ಪ ಅವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲು ಮೋದಿ-ಅಮಿತ್ ಷಾ ನಿರ್ಧರಿಸಿದ್ದಾರೆ. ಈಗ ಕಟೀಲರ ಬಾಯಿಂದ ಈ ಸತ್ಯ ಹೊರಬಿದ್ದಿದೆ.

ಅಂದ ಹಾಗೆ ಯಡಿಯೂರಪ್ಪ ಪಕ್ಷಕ್ಕೆ ಅನಿವಾರ್ಯರಲ್ಲ ಅಂತ ಕಟೀಲ್ ಆಡಿದ ಮಾತಿನಿಂದ ದೊಡ್ಡ ಪರಿಣಾಮವಾಗುವುದಿಲ್ಲ.
ಯಾಕೆಂದರೆ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಯಾವಾಗ ಪದಚ್ಯುತಗೊಳಿಸಲಾಯಿತೋ? ಅಲ್ಲಿಂದಲೇ ಬಿಜೆಪಿ ಕೋಟೆಯ ಒಂದು ಭಾಗದ ಗೋಡೆ ಕುಸಿಯಲು ಪ್ರಾರಂಭವಾಯಿತು. ಆ ಕುಸಿತ ಮುಂದುವರಿಯುತ್ತಲೇ ಇದೆ. ಆದರೆ ಪಕ್ಷ ಅದಕ್ಕೆ ಅಂಜುವ ಸ್ಥಿತಿಯಲ್ಲಿಲ್ಲ ಎಂಬುದೇ ಕಟೀಲರ ಕಾಲ ಜ್ಞಾನದ ಅರ್ಥ.

ಹೈವೋಲ್ಟೇಜ್ ಕ್ಷೇತ್ರವಾಗಲಿದೆ ಹಾಸನ ಅಂದ ಹಾಗೆ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರವಾಗುವ ಲಕ್ಷಣ ತೋರುತ್ತಿರುವ ಹಾಸನ ಕ್ಷೇತ್ರದಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತಾಗಲಿದೆಯೇ? ಯಾಕೆಂದರೆ, ಹಾಸನ ಕ್ಷೇತ್ರದ ಶಾಸಕ ಬಿಜೆಪಿಯ ಪ್ರೀತಂಗೌಡ ಅವರು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರಿಗೆ ಪದೇ ಪದೇ ಸವಾಲು ಒಡ್ಡಿ ಕೆರಳಿಸಿ ಬಿಟ್ಟಿದ್ದಾರೆ. ಹೀಗೆ ಕೆರಳಿರುವ ರೇವಣ್ಣ ಅವರೀಗ ಹಾಸನ ಕ್ಷೇತ್ರದಲ್ಲಿ ತಮ್ಮ ಪುತ್ರ ಸೂರಜ್ ಇಲ್ಲವೇ ಪತ್ನಿ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.

ಅವರ ಈ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸದ ಅವರ ಸಹೋದರ ಎಚ್.ಡಿ. ಕುಮಾರಸ್ವಾಮಿ, ಇಲ್ಲಿಂದ ಮಾಜಿ
ಶಾಸಕ, ದಿವಂಗತ ಪ್ರಕಾಶ್ ಅವರ ಮಗ ಸ್ವರೂಪ್ ಅವರಿಗೆ ಟಿಕೆಟ್ ಕೊಡೋಣ. ಇಲ್ಲದಿದ್ದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದಿದ್ದಾರೆ. ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಅನಿವಾರ್ಯವಾದರೆ ಕೆಲ ತ್ಯಾಗಕ್ಕೆ ನಾವು ಸಿದ್ಧರಾಗಿರಬೇಕು ಎಂಬುದು
ಕುಮಾರಸ್ವಾಮಿಯವರ ಸಲಹೆ. ಕುಮಾರಸ್ವಾಮಿ ಹೀಗೆ ಹೇಳಿದರೂ ರೇವಣ್ಣ ಮಾತ್ರ ಪಟ್ಟಾಗಿದ್ದಾರಂತೆ.

ಹೀಗೆ ಅವರು ಹಿಡಿದ ಪಟ್ಟು ಬಿಡದಿದ್ದರೆ ರೇವಣ್ಣ ಪುತ್ರ ಸೂರಜ್ ರೇವಣ್ಣ ಇಲ್ಲವೇ ಪತ್ನಿ ಭವಾನಿ ರೇವಣ್ಣ ಹಾಸನದ ಕಣಕ್ಕಿಳಿಯಲಿದ್ದಾರೆ. ಹೀಗೆ ಬಿಜೆಪಿಯ ಪ್ರೀತಂಗೌಡ ಮತ್ತು ಜೆಡಿಎಸ್ ನ ಸೂರಜ್ ರೇವಣ್ಣ ಅಥವಾ ಭವಾನಿ ರೇವಣ್ಣ ಕಣಕ್ಕಿಳಿದರೆ ಹಾಸನ ಹೈ ವೋಲ್ಟೇಜ್ ಕ್ಷೇತ್ರವಾಗಲಿದೆ. ಹಾಗೇನಾದರೂ ಆದರೆ ಇಬ್ಬರ ಜಗಳ ಮೂರನೆಯವರಿಗೆ ಲಾಭವೆಂಬಂತೆ ತಮ್ಮ ಗೆಲುವು ಸಾಧ್ಯವಾಗಬಹುದು ಎಂಬುದು ಕಾಂಗ್ರೆಸ್ ಅಭ್ಯರ್ಥಿಯಾಗಲು ಬಯಸಿರುವ ಬಿ.ಪಿ. ಮಂಜೇಗೌಡರ ಲೆಕ್ಕಾಚಾರ.

ಹಾಸನ ಕ್ಷೇತ್ರದಲ್ಲಿ ಒಕ್ಕಲಿಗರದು ಮೇಜರ್ ಷೇರು. ೯೦,೦೦೦ ಒಕ್ಕಲಿಗರ ಪೈಕಿ ೬೦,೦೦೦ ಅರವತ್ತು ಸಾವಿರ ದಾಸ
ಒಕ್ಕಲಿಗ ಮತಗಳಿವೆ. ಲಿಂಗಾಯತ ಮತಗಳೂ ಗಣನೀಯ ಪ್ರಮಾಣದಲ್ಲಿವೆ. ಉಳಿದಂತೆ ದಲಿತ, ಮುಸ್ಲಿಂ, ಕುರುಬ,
ಕ್ರಿಶ್ಚಿಯನ್ ಸೇರಿದಂತೆ ಅಹಿಂದ ವರ್ಗಗಳ ೧,೩೦,೦೦೦ ಮತಗಳಿವೆ. ಹೀಗಾಗಿ ಬಿಜೆಪಿ-ಜೆಡಿಎಸ್ ಮಧ್ಯೆ ಜಿದ್ದಾಜಿದ್ದಿನ ಫೈಟು ನಡೆದರೆ ಅಹಿಂದ ಮತಗಳು ತಮ್ಮನ್ನು ಗೆಲ್ಲಿಸಲಿವೆ ಎಂಬುದು ಮಂಜೇಗೌಡರ ಲೆಕ್ಕಾಚಾರ.

ಒಂದು ವೇಳೆ ರೇವಣ್ಣ ಅವರ ಕುಟುಂಬದಿಂದ ಯಾರು ಸ್ಪರ್ಧಿಸದಿದ್ದರೂ ಈ ಕ್ಷೇತ್ರವನ್ನು ಅವರು ಪ್ರತಿಷ್ಟೆಯನ್ನಾಗಿ
ಪರಿಗಣಿಸಿರುವುದರಿಂದ ಬಿಜೆಪಿ-ಜೆಡಿಎಸ್ ಮಧ್ಯೆ ಘನಘೋರ ಕಾಳಗ ನಡೆಯುವುದು ನಿಶ್ಚಿತ. ಇದು ಸಹಜವಾಗಿ ಮಂಜೇಗೌಡರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಭಾಸ್ಕರರಾವ್ ನೆತ್ತಿಗೆ ಕಿರೀಟ
ಇನ್ನು ಕರ್ನಾಟಕದಲ್ಲಿ ತಲೆ ಎತ್ತಲು ಹವಣಿಸುತ್ತಿರುವ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಮಾಜಿ ಪೊಲೀಸ್ ಕಮೀಷನರ್ ಭಾಸ್ಕರರಾವ್ ಅಧ್ಯಕ್ಷರಾಗಲಿದ್ದಾರೆ. ದಶಕಗಳ ಕಾಲದ ತಮ್ಮ ಅನುಭವವನ್ನು ಬಳಸಿಕೊಳ್ಳುತ್ತಿರುವ ಭಾಸ್ಕರರಾವ್ ಪಕ್ಷಕ್ಕೆ ತಾಖತ್ ಕೀ ದವಾ ಕೊಡುತ್ತಿದ್ದಾರೆ. ಕರ್ನಾಟಕದ ಪ್ರಚಲಿತ ಸಮಸ್ಯೆಗಳ ಬಗ್ಗೆ ಅರಿತಿರುವ ಭಾಸ್ಕರರಾವ್ ತಮ್ಮ ಮಾತುಗಳ ಮೂಲಕ ರಾಜ್ಯದ ಜನರ ಗಮನ ಸೆಳೆಯುತ್ತಿರುವುದು ನಿಜ.

ಅಂದ ಹಾಗೆ ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳ ಬಗ್ಗೆ ಬೇಸತ್ತ ಜನ ಎಲ್ಲ ಕ್ಷೇತ್ರಗಳಲ್ಲೂ ಇದ್ದಾರೆ. ಈ ಅಂಶವೇ ಅಮ್ ಆದ್ಮಿ ಪಕ್ಷಕ್ಕೆ ವರಪ್ರಾಯ. ಯಾಕೆಂದರೆ ಈಗಾಗಲೇ ಅಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿಯಲು ಎಲ್ಲ ಕ್ಷೇತ್ರಗಳಿಂದಲೂ
ಜನ ಸಿಗುತ್ತಿದ್ದಾರೆ. ಹೀಗೆ ಎಲ್ಲ ಕ್ಷೇತ್ರಗಳಿಂದ ಸ್ಪರ್ಧಿಸಲು ಕ್ಯಾಂಡಿಡೇಟುಗಳು ಸಿಗುವುದು ಕಷ್ಟ. ಆದರೆ ಅಮ್ ಆದ್ಮಿಗೆ
ಆ ಸಮಸ್ಯೆ ಇಲ್ಲ. ಈ ಮಧ್ಯೆ ಅಮ್ ಆದ್ಮಿ ರಾಷ್ಟ್ರೀಯ ಪಕ್ಷವಾಗಿ ತಲೆ ಎತ್ತಿದ್ದು,ಅದೇ ಕಾಲಕ್ಕೆ ದೆಹಲಿ, ಪಂಜಾಬ, ಗುಜರಾತ್ ನಂತರ ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ಮೇಲೆ ಕೇಜ್ರಿವಾಲ್ ಕಣ್ಣು ಹಾಕಿದ್ದಾರೆ.

ಇಲ್ಲ ಪಕ್ಷ ತಲೆ ಎತ್ತಬೇಕು ಎಂದು ಬಯಸಿರುವ ಕೇಜ್ರಿವಾಲ್ ಅವರಿಗೆ ದೇಶದ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿದೆ. ಅವರ ಈ ಮಹತ್ವಾಕಾಂಕ್ಷೆ ಕರ್ನಾಟಕದಲ್ಲಿ ಪಕ್ಷ ಬೆಳೆಯಲು ಟಾನಿಕ್ ಆಗಬಹುದು ಎಂಬುದು ಸದ್ಯದ ಲೆಕ್ಕಾಚಾರ. ಪಕ್ಷದ ಅಧ್ಯಕ್ಷರಾಗ ಲಿರುವ ಭಾಸ್ಕರರಾವ್ ಅವರಿಗೆ ಕರ್ನಾಟಕದ ಜಾತಿಸೂತ್ರವೂ ಗೊತ್ತು. ಮೂರು ಪಕ್ಷಗಳ ಬಗ್ಗೆ ಬೇಸತ್ತ ಮತದಾರರಿದ್ದಾರೆ ಎಂಬುದೂ ಗೊತ್ತು. ಈ ಅಂಶವನ್ನೇ ಅವರು ಅಸವನ್ನಾಗಿ ಬಳಸಿಕೊಂಡರೆ ಕರ್ನಾಟಕದಲ್ಲಿ ಅಮ್ ಆದ್ಮಿ ಪಕ್ಷ ತಲೆ ಎತ್ತುವುದು ಕಷ್ಟವಲ್ಲ.

error: Content is protected !!