ಮೂರ್ತಿ ಪೂಜೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದಿಲ್ಲಿಯ ಕನಸು ಬೀಳುತ್ತಿದೆಯಂತೆ. ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಅವರಿಗೆ ತಕ್ಷಣವೇ ಮುಖ್ಯಮಂತ್ರಿಯಾಗುವ ಆಸೆಯಿತ್ತು. ಈ ಕಾರಣದಿಂದ ಅವರು ದಿಲ್ಲಿಯಲ್ಲಿ ಕುಳಿತು ೫ ದಿನ ಕಸರತ್ತು ನಡೆಸಿದರೂ ಅದು ಫಲ ನೀಡಲಿಲ್ಲ.
ಹೀಗಾಗಿ ಸೋನಿಯಾ ಗಾಂಧಿ ಅವರ ಮಾತಿಗೆ ಬಗ್ಗಿದ ಡಿಕೆಶಿ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿ ಕರ್ನಾಟಕಕ್ಕೆ ಮರಳಿದರು. ಅವರೀಗ ಸಿದ್ದರಾಮಯ್ಯ ಸಂಪುಟದಲ್ಲಿ ಡಿಸಿಎಂ ಆಗಿ ಕುಳಿತಿದ್ದಾರಾದರೂ ಸಿಎಂ ಹುದ್ದೆಯ ಕನಸು ದಷ್ಟಪುಷ್ಟವಾಗಿಯೇ ಉಳಿದಿದೆ. ಆದರೆ ಅದು ಮುಂದಿನ ದಿನಗಳಲ್ಲಿ ಈಡೇರಬೇಕಿರುವ ಮಾತು. ಹೀಗಾಗಿ ರಾಜ್ಯದಲ್ಲಿ ಯಾರೇನೇ ಮಾತ ನಾಡಿದರೂ ಡಿಕೆಶಿ ಮೌನ ವಹಿಸುತ್ತಾರೆ. ಹಿಂದೆಲ್ಲ ಒಂದು ಮಾತು ಬಂದರೆ ಸಟ್ಟಂತ ಪ್ರತಿಕ್ರಿ ಯಿಸುತ್ತಿದ್ದ ಅವರೀಗ ಪ್ರತಿಕ್ರಿಯಿಸಲು ಸಮಯ ತೆಗೆದುಕೊಳ್ಳುತ್ತಾರೆ. ಅವರು ಪಕ್ವ ನಾಯಕ ರಾಗುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ಇತ್ತೀಚೆಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು, ಕರ್ನಾಟಕದಲ್ಲಿ ಮುಂದಿನ ೫ ವರ್ಷಗಳ ಕಾಲ ನಾಯಕತ್ವ ಬದಲಾವಣೆಯಿಲ್ಲ ಎಂಬರ್ಥ ದಲ್ಲಿ ಮಾತನಾಡಿದರು. ಈ ಮಾತಿನಿಂದ ಡಿಕೆಶಿ ಸೋದರ ಡಿ.ಕೆ. ಸುರೇಶ್ ಕೆರಳಿದ್ದರು. ಆದರೆ ಡಿಕೆಶಿ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯಿಸಲು ಹೋಗ ಲಿಲ್ಲ. ಯಾಕೆ ಅಂತ ಎಲ್ಲರೂ ಅಚ್ಚರಿಪಡುತ್ತಿರುವಾಗಲೇ ಬೆಂಗಳೂರಿನ ಸದಾ ಶಿವನಗರದಲ್ಲಿ ನೆಲೆಯಾಗಿರುವ ಮಾಜಿ ಮುಖ್ಯಮಂತ್ರಿಯೊಬ್ಬರ ಮಧ್ಯಸ್ಥಿಕೆಯಲ್ಲಿ ಡಿಕೆಶಿ ಮತ್ತು ಪಾಟೀಲರ ಡಿನ್ನರಿಗೆ ಡೇಟು ಫಿಕ್ಸಾಗಿದೆ ಎಂಬ ವರ್ತಮಾನ ಹರಿದಾಡುತ್ತಿದೆ.
ಅರ್ಥಾತ್, ತಮಗೆ ಯಾವ ಮೂಲಗಳಿಂದ ವಿರೋಧ ವ್ಯಕ್ತವಾಗಬಹುದು ಎಂಬುದನ್ನು ಗಮನಿಸುತ್ತಿರುವ ಡಿಕೆಶಿ ಸೈಲೆಂಟಾಗಿ ಅವನ್ನು ಸರಿಮಾಡಿ ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುವ ತಮ್ಮ ಕನಸಿಗೆ ಯಾವ ಅಡ್ಡಿಯೂ ಎದುರಾಗಬಾರದು ಎಂಬುದು ಡಿಕೆಶಿ ಯೋಚನೆ. ಅದೇ ಕಾಲಕ್ಕೆ ಅವರಿಗೆ, ಒಂದಿಲ್ಲೊಂದು ದಿನ ರಾಷ್ಟ್ರ ರಾಜಕಾರಣಕ್ಕೆ ಏಕೆ ಹೋಗಬಾರದು ಎಂಬ ಯೋಚನೆ ಮೊಳೆತಿದೆಯಂತೆ. ಅಂದ ಹಾಗೆ ಮುಖ್ಯಮಂತ್ರಿಯಾಗುವುದು ಒಂದು ಗುರಿ.
ಆದರೆ ಗುರಿ ಇಷ್ಟಕ್ಕೇ ಸೀಮಿತವಾಗಬಾರದಲ್ಲ? ಹೀಗಾಗಿ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟೇ ದಿಲ್ಲಿಯ ಮೇಲೂ ಅವರು ಕಣ್ಣು ಹಾಯಿಸುತ್ತಿದ್ದಾರೆ. ಆದರೆ ಅದಕ್ಕೊಂದು ಶಕ್ತಿಯಾದರೂ ಇರಬೇಕಲ್ಲ? ಹೀಗಾಗಿ ಅವರು ತಮ್ಮ ಕನಸಿನ ಬೆಂಗಳೂರು ಬ್ರ್ಯಾಂಡ್ ಅನ್ನು ದೊಡ್ಡ ಮಟ್ಟದಲ್ಲಿ ಎಮರ್ಜ್ ಮಾಡಿ ಅರ್ಥ ವ್ಯವಸ್ಥೆಯ ಹೀರೋ ಅನ್ನಿಸಿಕೊಳ್ಳಲು, ಆ ಮೂಲಕ ದೇಶದ ಗಮನ ಸೆಳೆಯಲು ಬಯಸಿದ್ದಾರೆ. ಆ ದೃಷ್ಟಿಯಿಂದ ಈಗವರ ಗಮನ ತೆಲಂಗಾ ಣದ ಮಂತ್ರಿ ಕೆಟಿಆರ್ ಮೇಲೆ ಬಿದ್ದಿದೆ.
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರ ಪುತ್ರ ಕಲ್ವಕುಂಟ್ಲ ತಾರಕ ರಾಮರಾವ್ ಅವರೇ ಈ ಕೆಟಿಆರ್. ಇವತ್ತು ಭಾರತದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿರುವ ಉದ್ಯಮಿಗಳಿಗೆ ತಾರಕ ರಾಮರಾವ್ ಅಚ್ಚು ಮೆಚ್ಚಿನ ವ್ಯಕ್ತಿ. ಅವರು ರೂಪಿಸುತ್ತಿರುವ ನೀತಿಗಳು ಅಮೆ
ಜಾನ್ ಸೇರಿದಂತೆ ಜಾಗತಿಕ ಮಟ್ಟದ ದೊಡ್ಡ ಕಂಪನಿಗಳಿಗೆ ಪ್ರಿಯವಾಗಿವೆಯಷ್ಟೇ ಅಲ್ಲ, ದೊಡ್ಡ ಪ್ರಮಾಣದ ಬಂಡವಾಳ ತೆಲಂಗಾಣದತ್ತ ಹರಿದು ಬರುವಂತೆ ಮಾಡುತ್ತಿವೆ.
ಸಹಜವಾಗಿಯೇ ಇದು ಡಿಕೆಶಿ ಅವರ ಕಣ್ಣರಳುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಕೆಟಿಆರ್ ಥರ ಕರ್ನಾಟಕಕ್ಕೆ ಬಂಡವಾಳ ಹರಿದುಬರುವಂತೆ ಮಾಡಿದರೆ ತಮ್ಮ ಇಮೇಜೇ ಚೇಂಜ್ ಆಗಿಬಿಡುತ್ತದೆ ಎಂಬುದು ಡಿಕೆಶಿ ಲೆಕ್ಕಾಚಾರ. ಇವತ್ತು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ
ಇದೇ ಕೆಲಸ ಮಾಡಿ ಗುಜರಾತ್ ಮಾಡೆಲ್ ಅನ್ನು ಸೃಷ್ಟಿಸಿದರು. ಮತ್ತಿದರ ಪರಿಣಾಮವಾಗಿಯೇ ಅಹಮದಾಬಾದ್ -ಟು-ದಿಲ್ಲಿ ವಿಮಾನ ಹತ್ತಿದರು. ಎಷ್ಟೆಂದರೂ ಮೋದಿ- ಅಮಿತ್ ಶಾ ಜೋಡಿ ತಮಗೆ ತಿಹಾರ್ ಜೈಲು ತೋರಿಸಿತ್ತಲ್ಲವೇ? ನಾಳೆ ಈ ಜೋಡಿಯ ಕಣ್ಣ ಮುಂದೆಯೇ ರಾಷ್ಟ್ರ ರಾಜಕಾರಣದಲ್ಲಿ ತಲೆಯೆತ್ತಿ ನಿಲ್ಲಬೇಕು ಎಂಬುದು ಡಿಕೆಶಿ ಕನಸು.
ಇಂಥ ಕನಸು ಕಾಣುತ್ತಿರುವ ಅವರಿಗೆ ಬೆಂಗಳೂರು ಬ್ರ್ಯಾಂಡ್‌ನ ಕನಸು ಮಾತ್ರವಲ್ಲ, ರಾಷ್ಟ್ರದಲ್ಲಿ ಕಾಂಗ್ರೆಸ್ ತೊರೆದಿರುವ ನಾಯಕರನ್ನು ಮರಳಿ ಕೈಪಾಳಯಕ್ಕೆ ಸೆಳೆಯುವ ಕನಸೂ ಬಿದ್ದಿದೆ. ಹೀಗಾಗಿ ಸೀಮಾಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತೆಲಂಗಾಣದಲ್ಲಿ ಬೀದಿಕಾಳಗ ನಡೆಸುತ್ತಿರುವ ಶರ್ಮಿಳಾ ರೆಡ್ಡಿ ಸೇರಿದಂತೆ ಹಲವರ ಜತೆ ಸಂಪರ್ಕದಲ್ಲಿರುವ ಡಿಕೆಶಿ, ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿತ್ರ ಬದಲಾಗ ಲಿದೆ. ಇಂಥ ಟೈಮಿನಲ್ಲಿ ನೀವು ಕಾಂಗ್ರೆಸ್‌ನಲ್ಲಿರುವುದು ಒಳ್ಳೆಯದು’ ಅಂತ ಹೇಳಿದ್ದಾರೆ.
ಅವರ ಈ ಪ್ರಯತ್ನಗಳು ಎಷ್ಟರ ಮಟ್ಟಿಗೆ ಈಡೇರುತ್ತವೆ ಎಂಬುದು ಬೇರೆ ವಿಷಯ. ಆದರೆ ಇಂಥ ಪ್ರಯತ್ನಗಳು ನಿಶ್ಚಿತವಾಗಿ ಅವರ ಇಮೇಜ್ ಅನ್ನು ಹೆಚ್ಚಿಸಲಿವೆ. ಇವರಿಗೀಗ ಡಿಕೆಶಿ ರೋಲ್‌ಮಾಡೆಲ್ ಹೀಗೆ ಕರ್ನಾಟಕದಿಂದ ಹಿಡಿದು ದಿಲ್ಲಿಯವರೆಗೆ ತಮ್ಮ ಪವರ್ ಹೆಚ್ಚಬೇಕು ಅಂತ ಡಿಕೆಶಿ ಬಯಸು ತ್ತಿದ್ದರೆ, ಅವರನ್ನು ರೋಲ್‌ಮಾಡೆಲ್ ಅಂತ ಭಾವಿಸುತ್ತಿರುವ ಒಂದು ಟೀಮು ದೇಶದಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಅಮ್ ಆದ್ಮಿ ಪಕ್ಷದ ಮನೀಶ್ ಸಿಸೋಡಿಯಾ ಅವರಿಂದ ಹಿಡಿದು ತಮಿಳುನಾಡಿನ ಸಚಿವರಾಗಿದ್ದ ಸೆಂಥಿಲ್ ತನಕ ನಾಯಕರ ಒಂದು ದಂಡೇ ಇದೆ.
ಇಂಥ ಬಹುತೇಕ ನಾಯಕರಿಗೀಗ ಡಿಕೆಶಿ ಅವರೇ ಆದರ್ಶ ನಾಯಕ. ಆಂಧ್ರದ ಖ್ಯಾತ ರಾಜಕೀಯ ವಿಶ್ಲೇಷಕ ಪ್ರೊ. ನಾಗೇಶ್ವರ್ ಪ್ರಕಾರ, ಇಂಥ ಬೆಳವಣಿಗೆಗೆ ಡಿ.ಕೆ.ಶಿವಕುಮಾರ್ ಅವರು ಐಟಿ, ಇ.ಡಿ, ಸಿಬಿಐ ಅನ್ನು ಎದುರಿಸಿದ ರೀತಿಯೇ ಕಾರಣ. ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ತಮ್ಮ ಪುಸ್ತಕದಲ್ಲಿ, ‘ದೇಶದಲ್ಲಿ ಇವತ್ತು ಪ್ರತಿಪಕ್ಷಗಳಲ್ಲಿರುವ ನಾಯಕರಿಗೆ ದಪ್ಪ ಚರ್ಮ ಮತ್ತು ತಾಳ್ಮೆ ಇರಬೇಕು’ ಎಂದು ಬರೆದಿದ್ದಾರೆ. ಈ ಮಾತನ್ನು ಉದಾಹರಿಸುವ ಪ್ರೊ.ನಾಗೇಶ್ವರ್, ದೇಶದಲ್ಲಿ ಇದಕ್ಕೆ ಸೂಕ್ತ ಉದಾಹರಣೆ ಅಂತಿದ್ದರೆ ಅದು ಡಿ.ಕೆ.ಶಿವಕುಮಾರ್ ಎನ್ನುತ್ತಾರೆ.
ಇವತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರ ತನ್ನ ಹಿಡಿತದಲ್ಲಿರುವ ತನಿಖಾ ಸಂಸ್ಥೆಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಳ್ಳುತ್ತಿದೆ ಮತ್ತು ಇದೇ ಕಾರಣಕ್ಕಾಗಿ ಈ ತನಿಖಾ ಸಂಸ್ಥೆಗಳ ಶಕ್ತಿ ಕಡಿಮೆಯಾಗುತ್ತಿದೆ. ಕಾರಣ? ಇಂಥ ತನಿಖಾ ಸಂಸ್ಥೆಗಳ ಹೊಡೆತ ಅತಿಯಾದರೆ ಅದನ್ನು ಎದುರಿಸುವ ಶಕ್ತಿಯೂ ನಾಯಕರಲ್ಲಿ ಹೆಚ್ಚುತ್ತದೆ. ಹೀಗೆ ದಿನ ಕಳೆದಂತೆ ಕೇಂದ್ರದ ತನಿಖಾ ಸಂಸ್ಥೆ ಗಳನ್ನು ಡಿಕೆಶಿ ಹೆಚ್ಚೆಚ್ಚು ಪರಿಣಾಮಕಾರಿಯಾಗಿ ಎದುರಿ
ಸುತ್ತಾ ಬಂದಿದ್ದಾರೆ. ಹಾಗೆ ನೋಡಿದರೆ ಈ ತನಿಖಾ ಸಂಸ್ಥೆಗಳನ್ನು ಎದುರಿಸುವ ವಿಷಯದಲ್ಲಿ ಅವರ ಕಾಂಗ್ರೆಸ್ ಪಕ್ಷ ಹೆಚ್ಚಿನ ನೆರವು ನೀಡುವ ಸ್ಥಿತಿಯಲ್ಲಿಲ್ಲ.
ಇಂಥ ವೇಳೆ ತಮಗೆ ಬಂದ ಆಮಿಷಗಳನ್ನು ಡಿಕೆಶಿ ಒಪ್ಪಿಕೊಂಡಿದ್ದರೆ ಅವರು ತುಂಬ ದಿನಗಳ ಹಿಂದೆಯೇ ದೊಡ್ಡ ಲಾಭ ಪಡೆಯಬಹುದಿತ್ತು. ಆದರೆ ಅದ್ಯಾವುದನ್ನೂ ಲೆಕ್ಕಿಸದೆ ಅವರು ತನಿಖಾ ಸಂಸ್ಥೆಗಳನ್ನು ಎದುರಿಸಿದರು, ಜೈಲಿಗೂ ಹೋಗಿಬಂದರು. ನಂತರ ಕರ್ನಾಟಕದ ರಾಜಕೀಯ ನಕಾಶೆ ಬದಲಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದರು. ಹೀಗಾಗಿ, ‘ಡಿಕೆಶಿ ಇದನ್ನು ಹೇಗೆ ಸಾಧಿಸಿದರು? ತನಿಖಾ ಸಂಸ್ಥೆಗಳನ್ನು ಅವರು ಎದುರಿಸಿದ್ದು ಹೇಗೆ? ದೊಡ್ಡ ಉದ್ಯಮಿಯಾಗಿರುವ ಅವರನ್ನು ಒಂದಿಲ್ಲೊಂದು ಕಾರಣಕ್ಕೆ ಖೆಡ್ಡಾಗೆ ಕೆಡವಬಹುದಾಗಿದ್ದರೂ ಕೇಂದ್ರ ಸರಕಾರವೇ ಯಾಕೆ ತಣ್ಣಗೆ ಕುಳಿತಿದೆ?’ ಎಂಬುದೆಲ್ಲ ಐಟಿ, ಇ.ಡಿ ರೈಡಿಗೊಳಗಾದವರಿಗೆ ಪಾಠದಂತೆ ಕಾಣಿಸತೊಡಗಿದೆ ಎಂಬುದು ಪ್ರೊ.ನಾಗೇಶ್ವರ್ ಮಾತು.
ಅಷ್ಟೇ ಅಲ್ಲ, ಮಳೆ-ಗಾಳಿ ಬಂದರೆ ಧೈರ್ಯಕ್ಕಾಗಿ ‘ಅರ್ಜುನ, ಅರ್ಜುನ, ಅರ್ಜುನ’ ಅಂತ ನಾಮಸ್ಮರಣೆ ಮಾಡುವ ಒಂದು ರೂಢಿ ಇದೆ. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಇವತ್ತು ಐಟಿ, ಇ.ಡಿ ರೈಡಿಗೊಳಗಾದವರು ತಮಗೆ ಪ್ರೇರಣೆ, ಧೈರ್ಯ ಸಿಗಬೇಕು ಎಂದರೆ ‘ಶಿವಕುಮಾರ, ಶಿವಕುಮಾರ, ಶಿವಕುಮಾರ’ ಎಂದು ನಾಮಸ್ಮರಣೆ ಮಾಡುವ ಪರಿಸ್ಥಿತಿ ಇದೆ ಅಂತ ಅವರು ಹೇಳುತ್ತಾರೆ. ಅರ್ಥಾತ್, ದಿನಗಳೆದಂತೆ ಡಿಕೆಶಿ ಇಮೇಜ್ ದೇಶದ ಇತರ ಭಾಗಗಳಲ್ಲೂ ಬೆಳೆಯತೊಡಗಿದೆ. ಆದರೆ ಅಧಿಕಾರ ರಾಜಕಾರಣದಲ್ಲಿ ಇದು ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೋ ಕಾದುನೋಡಬೇಕು.
ಡಿಕೆ ಸಾಮ್ರಾಜ್ಯದ ವಿರುದ್ಧ ಎಚ್‌ಡಿಕೆ? ಈ ಮಧ್ಯೆ ಬೆಳೆದು ನಿಂತಿರುವ ಡಿಕೆಶಿ ಸಾಮ್ರಾಜ್ಯದ ವಿರುದ್ಧ ಹೊಸ ಮೈತ್ರಿಯೊಂದು ಎದ್ದು ನಿಲ್ಲಲಿದೆ. ಮಾಜಿ
ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಮತ್ತು ಈಗ ಬಿಜೆಪಿಯಲ್ಲಿರುವ ಸಿ.ಪಿ. ಯೋಗೀಶ್ವರ್ ಅವರ ಜೋಡಿಯದೇ ಈ ಮೈತ್ರಿ. ಅಂದ ಹಾಗೆ ತಾವು ಪರಸ್ಪರ ವಿರೋಽಗಳಾಗಿದ್ದರೆ ಡಿಕೆಶಿಗೆ ಲಾಭ ಎಂಬುದು ಕುಮಾರಸ್ವಾಮಿ, ಯೋಗೀಶ್ವರ್ ಅವರಿಬ್ಬರಿಗೂ ಅರ್ಥ
ವಾಗಿದೆ. ಈ ಮಧ್ಯೆ ರಾಜಕಾರಣದ ಅನಿವಾರ್ಯತೆಗಳು ಹೇಗೆ ಎಮರ್ಜ್ ಆಗುತ್ತಿವೆ ಎಂದರೆ ಕುಮಾರಸ್ವಾಮಿ ಅವರೀಗ ಬಿಜೆಪಿ ನೇತೃತ್ವದ ಎನ್‌ಡಿಎ ಜತೆ ಕೈಜೋಡಿಸುವ ಮನಸ್ಥಿತಿಯಲ್ಲಿದ್ದಾರೆ.
ಹೀಗೆ ಕೈಜೋಡಿಸಿದರೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹೊಸ ರಾಜಕೀಯ ಸಮೀಕರಣವೊಂದು ರೂಪುಗೊಳ್ಳುತ್ತದೆ. ಹಾಗಾದಾಗ ಕುಮಾರ
ಸ್ವಾಮಿ ಅವರು ರಾಜ್ಯಸಭೆಗೆ ಇಲ್ಲವೇ ಲೋಕಸಭೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಸಭೆಗಿಂತ ಲೋಕಸಭೆಗೆ ಸ್ಪಽಸುವುದು, ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಸೂಕ್ತ ಎಂಬುದು ಯೋಗೀಶ್ವರ್ ಲೆಕ್ಕಾಚಾರ.
ಅಂದ ಹಾಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಡಿಕೆಶಿ ಸೋದರ ಡಿ.ಕೆ.ಸುರೇಶ್ ಈಗ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕುಮಾರಸ್ವಾಮಿ ಸ್ಪರ್ಧಿಸಿದರೆ ನಿಶ್ಚಿತವಾಗಿಯೂ ಆಟ ಹಾಕಬಹುದು ಎಂಬುದು ಯೋಗಿ ಲೆಕ್ಕಾಚಾರ.
ಗಮನಿಸಬೇಕಾದ ಸಂಗತಿ ಎಂದರೆ, ಕುಮಾರಸ್ವಾಮಿ ಅವರಿಗೆ ಇನ್ನೂ ಅರಗಿಸಿಕೊಳ್ಳಲಾಗದ ವಿಷಯವೆಂದರೆ ರಾಮನಗರ ವಿಧಾನಸಭಾ ಕ್ಷೇತ್ರ ದಲ್ಲಿ ತಮ್ಮ ಪುತ್ರ ನಿಖಿಲ್ ಅನುಭವಿಸಿದ ಸೋಲು. ಇದರ ಹಿಂದೆ ಡಿ.ಕೆ.ಸುರೇಶ್ ಕರಾಮತ್ತು ಇದೆ ಎಂಬುದು ಕುಮಾರಸ್ವಾಮಿ ಅವರ ಅನುಮಾನ. ಹೀಗಾಗಿ ಮಗನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಡಿ.ಕೆ.ಸುರೇಶ್ ವಿರುದ್ದ ಕಣಕ್ಕಿಳಿಯುವ ಯೋಚನೆ ಅವರಲ್ಲೂ ಇದೆ. ಒಂದು ವೇಳೆ ಇದು ಸಾಧ್ಯವಾದರೆ ಡಿಕೆಶಿ ಸಾಮ್ರಾಜ್ಯ ಅಲುಗಾಡುವುದು ನಿಶ್ಚಿತ. ಅದೇ ರೀತಿ ಕುಮಾರಸ್ವಾಮಿ ದಿಲ್ಲಿಗೆ ಹೋದರೆ ಚನ್ನಪಟ್ಟಣದಿಂದ ತಾವು ವಿಧಾನ ಸಭೆಗೆ ಆರಿಸಿ ಬರಬಹುದು ಎಂಬುದು ಯೋಗಿ ಲೆಕ್ಕಾಚಾರ.
ಕುತೂಹಲದ ಸಂಗತಿ ಎಂದರೆ ಯೋಗೀಶ್ವರ್ ಇಂಥ ಲೆಕ್ಕಾಚಾರ ಹಾಕುತ್ತಿರುವ ಕಾಲದಲ್ಲೇ ಡಿ.ಕೆ.ಸುರೇಶ್ ,‘ನಂಗಿನ್ನು ಚುನಾವಣೆ ಬೇಡ’ ಅಂತ ವೈರಾಗ್ಯದ ಮಾತನಾಡುತ್ತಿದ್ದಾರೆ. ಅವರ ವೈರಾಗ್ಯಕ್ಕೂ, ಯೋಗಿ ಲೆಕ್ಕಾಚಾರ ಹರಳುಗಟ್ಟುತ್ತಿರುವುದಕ್ಕೂ ಸಂಬಂಧ ಇದೆಯೇ? ಎಂಬುದು ಸದ್ಯದ ಕುತೂಹಲ.