Wednesday, 11th December 2024

ಡಿಕೆಶಿ ಶೇಕ್ ಆದ್ರೆ ಇವರಿಗೆ ಮಿಲ್ಕ್ ಶೇಕ್

ಮೂರ್ತಿಪೂಜೆ

ದೇವರಾಜ ಅರಸರು ೪೫ ವರ್ಷಗಳ ಹಿಂದೆ ಎದುರಿಸಿದ ಸನ್ನಿವೇಶವನ್ನು ಈಗ ಸಿದ್ದರಾಮಯ್ಯ ಎದುರಿಸಲಿದ್ದಾರೆಯೇ? ಹಾಗೆಂಬ ಪ್ರಶ್ನೆ ಕರ್ನಾಟಕದ ರಾಜಕೀಯ ವಲಯಗಳಲ್ಲಿ ಗಿರಕಿಯಾಡುತ್ತಿದೆ. ಅಂದ ಹಾಗೆ ೧೯೭೮ರಲ್ಲಿ ಮೊದಲ ಬಾರಿ ಪ್ರಬಲ ಒಕ್ಕಲಿಗ-ಲಿಂಗಾಯತ ಶಕ್ತಿ ಜನತಾ ಪಕ್ಷದ ನೆಲೆಯಲ್ಲಿ ನಿಂತು ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಎದುರಿಸಿತ್ತು. ಹೀಗೆ ಒಕ್ಕಲಿಗರು, ಲಿಂಗಾಯತರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ದ ತಿರುಗಿ ಬೀಳಲು ೧೯೭೨ರಲ್ಲಿ ಅಽಕಾರಕ್ಕೆ ಬಂದ ದೇವರಾಜ ಅರಸು ಮುಖ್ಯ ಕಾರಣ. ಈ ಅವಧಿಯಲ್ಲಿ ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ ‘ಉಳುವವನೇ ಹೊಲದೊಡೆಯ’ ಎಂಬ ಮಂತ್ರವನ್ನು ಜಪಿಸಿದ ಪರಿಣಾಮವಾಗಿ ಒಕ್ಕಲಿಗರು ಮತ್ತು ಲಿಂಗಾಯತರು ತಿರುಗಿಬಿದ್ದರು.

ಯಾಕೆಂದರೆ ಅರಸರ ಸರಕಾರ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮುನ್ನ ಕರ್ನಾಟಕದ ನೆಲೆ ಯಲ್ಲಿ ಬಹುತೇಕ ಭೂಮಿಯನ್ನು ಹೊಂದಿದ್ದವರು ಒಕ್ಕಲಿಗರು ಮತ್ತು ಲಿಂಗಾಯತರು. ಈ ಪೈಕಿ ಲಿಂಗಾಯತ ರಿಗೆ ಹಳೆಯ ಸಿಟ್ಟೂ ಸೇರಿಕೊಂಡಿತ್ತು. ಅರ್ಥಾ ತ್, ೧೯೬೯ರಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ವಿಭಜನೆ ಯಾದಾಗ ಇಲ್ಲಿ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಯಾಗಿದ್ದರು. ಅವರು ಹೇಳಿ ಕೇಳಿ ನಿಜಲಿಂಗಪ್ಪ ಅವರ ಶಿಷ್ಯ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಒಂದು ಕಡೆ ಇಂದಿರಾ ಗಾಂಧಿ ನಿಂತಿದ್ದರೆ, ಮತ್ತೊಂದು ಕಡೆ ನಿಜಲಿಂಗಪ್ಪ ನಿಂತಿದ್ದರು. ಹೀಗೆ ತಮ್ಮ ಎದುರಾಳಿ ನಿಜಲಿಂಗಪ್ಪನವರ ಶಿಷ್ಯ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿರುವುದನ್ನು ಇಂದಿರಾ ಗಾಂಧಿ ಸಹಿಸಿಕೊಳ್ಳಲು ಸಾಧ್ಯವೇ? ಹಾಗಂತಲೇ ರಾಜ್ಯದಲ್ಲಿ ವಿಭಜನೆಯಾದ ಕಾಂಗ್ರೆಸ್ಸಿನ ಒಂದು ಗುಂಪು ಇಂದಿರಾ ಜತೆ ನಿಂತು ೧೯೭೧ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಸರಕಾರ ವನ್ನು ಉರುಳಿಸಿತು.

ಒಟ್ಟಾರೆ ಈ ಬೆಳವಣಿಗೆಯ ನಂತರ ಲಿಂಗಾಯತ ಶಕ್ತಿ ಕಾಂಗ್ರೆಸ್ಸಿನಿಂದ ದೂರವಾಗತೊಡಗಿತು. ಈ ಮಧ್ಯೆ ಒಕ್ಕಲಿಗ ಶಕ್ತಿ ೧೯೭೨ರಲ್ಲಿ ಕಾಂಗ್ರೆಸ್ ಜತೆ
ನಿಂತಿತ್ತಾದರೂ ೧೯೭೮ರ ವೇಳೆಗೆ ಅದು ಅರಸರ ವಿರುದ್ದ ತಿರುಗಿಬಿತ್ತು. ಹೀಗೆ ಕಾಂಗ್ರೆಸ್ ವಿರುದ್ದ ನಿಂತ ಒಕ್ಕಲಿಗ-ಲಿಂಗಾಯತ ಶಕ್ತಿಗಳಿಗೆ ಜನತಾ ಪಕ್ಷ ವೇದಿಕೆಯಾಯಿತು. ಪರಿಣಾಮ? ೧೯೭೮ರಲ್ಲಿ ದೇವರಾಜ ಅರಸು ನೇತೃತ್ವದ ಕಾಂಗ್ರೆಸ್, ಜನತಾ ಪಕ್ಷದಿಂದ ಪ್ರಬಲ ಪೈಪೋಟಿ ಎದುರಿಸಬೇಕಾಯಿತು. ಆದರೆ ಅಷ್ಟೊತ್ತಿಗಾಗಲೇ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳ ಮತಗಳನ್ನು ಕನ್ ಸಾಲಿಡೇಟ್ ಮಾಡಿದ್ದ ಅರಸರು ಜನತಾ ಪಕ್ಷವನ್ನು ಸಮರ್ಥವಾಗಿ ಎದುರಿಸಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವಂತೆ ಮಾಡಿದರು.

ಇಷ್ಟಾದರೂ ಆ ಸಂದರ್ಭದಲ್ಲಿ ೫೯ ಕ್ಷೇತ್ರಗಳಲ್ಲಿ ಗೆಲುವು ಗಳಿಸಿದ ಜನತಾಪಕ್ಷ ಪ್ರಬಲ ವಿಪಕ್ಷವಾಗಿ ನೆಲೆಯಾಯಿತು. ಅಷ್ಟೇ ಅಲ್ಲ, ಮುಂದಿನ ಚುನಾವಣೆಯಲ್ಲಿ
ತನ್ನೆಲ್ಲ ಬಲವನ್ನು ಕ್ರೋಡೀಕರಿಸಿಕೊಂಡು ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಸೋಲಿಸಿತು. ಹೀಗೆ ೧೯೮೩ರಲ್ಲಿ ಅಧಿಕಾರಕ್ಕೆ ಬಂದ ಮೊಟ್ಟಮೊದಲ
ಕಾಂಗ್ರೆಸ್ಸೇತರ ಸರಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅದು, ಒಕ್ಕಲಿಗರು ಮತ್ತು ಲಿಂಗಾಯತರನ್ನು ಮೂಲಶಕ್ತಿಯಾಗಿಸಿಕೊಂಡು ೧೯೮೫ ಮತ್ತು ೧೯೯೪ ರಲ್ಲಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಿತು. ಆದರೆ ಯಾವಾಗ ತಮ್ಮ ಪಾಲಿನ ಮೆಚ್ಚಿನ ನಾಯಕ ರಾಮಕೃಷ್ಣ ಹೆಗಡೆ ಅವರನ್ನು ಜನತಾದಳದಿಂದ ಉಚ್ಚಾಟಿಸಲಾಯಿತೋ, ಪ್ರಬಲ ಲಿಂಗಾಯತ ವರ್ಗ ದಳದಿಂದ ದೂರ ಸರಿಯತೊಡಗಿದ್ದಲ್ಲದೆ ಕ್ರಮೇಣ ಬಿಜೆಪಿಯಲ್ಲಿ ಸೆಟ್ಲಾಯಿತು.

ಈ ಶಕ್ತಿಯನ್ನು ಎನ್‌ಕ್ಯಾಶ್ ಮಾಡಿ ಕೊಂಡ ಕಾರಣದಿಂದಾಗಿಯೇ ಬಿ.ಎಸ್. ಯಡಿಯೂರಪ್ಪ ಅವರು ಲಿಂಗಾಯತ ನಾಯಕರಾಗಿ ಎಮರ್ಜ್ ಆಗಿದ್ದು ಮತ್ತು ಕರ್ನಾಟಕದ ನೆಲೆಯಲ್ಲಿ ಬಿಜೆಪಿ ಪದೇ ಪದೆ ಅಧಿಕಾರಕ್ಕೆ ಬರುವಂತೆ ಮಾಡಿದ್ದು. ಆದರೆ ಇವತ್ತು ಯಡಿಯೂರಪ್ಪ ಕ್ರಮೇಣ ಸೈಡ್‌ವಿಂಗಿಗೆ ಹೋಗಿದ್ದಾರೆ.
ಇದು ಲಿಂಗಾಯತರನ್ನು ಕೆರಳಿಸಿದೆಯಾದರೂ ಅವರು ಸಂಪೂರ್ಣವಾಗಿ ಬಿಜೆಪಿಯಿಂದ ದೂರ ಸರಿದಿದ್ದಾರೆ ಅಂತಲ್ಲ. ಅವರಿಗಿರುವ ಅಸಹನೆ ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭ ತಂದುಕೊಟ್ಟಿದೆಯಾದರೂ, ಲೋಕಸಭಾ ಚುನಾವಣೆಯಲ್ಲಿ ಅದು ಕಾಂಗ್ರೆಸ್ ಜತೆ ದೊಡ್ಡ ಮಟ್ಟದಲ್ಲಿ ನಿಲ್ಲುವುದು ಕಷ್ಟ.
ಯಾಕೆಂದರೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಲಾಗಿದೆಯಾದರೂ ಅವರ ಪುತ್ರ ವಿಜಯೇಂದ್ರ ಅಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮುವ ಲಕ್ಷಣಗಳಿವೆ.

ಅದೇ ರೀತಿ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ಬಲವಂತವಾಗಿ ಕೆಳಗಿಳಿಸಿದರೂ, ಅವರ ಜಾಗಕ್ಕೆ ಮತ್ತೋರ್ವ ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ತಂದು ಕೂರಿಸಿದ್ದರು. ಆದರೆ ಇವತ್ತು ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಸಿಎಂ ಹುದ್ದೆ ಹೋಗಲಿ, ಡಿಸಿಎಂ ಹುದ್ದೆಯ ಮೇಲೂ
ಲಿಂಗಾಯತರನ್ನು ಕೂರಿಸಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಲಿಂಗಾಯತರಿಗೆ ಅಲ್ಲಿ ದೊಡ್ಡ ಮಟ್ಟದ ಪ್ರಾಮಿನೆನ್ಸು ಸಿಗುವ ಸಾಧ್ಯತೆಗಳೂ ಇಲ್ಲ. ಹೀಗಾಗಿ ಲೋಕಸಭಾ ಚುನಾವಣೆಯ ಹೊತ್ತಿಗೆ ಲಿಂಗಾಯತ ಮತದಾರರು ಗಣನೀಯ ಪ್ರಮಾಣದಲ್ಲಿ ಬಿಜೆಪಿಯ ಜತೆಗೇ ನಿಲ್ಲಬಹುದು ಎಂಬುದು ಒಂದು ಅಂದಾಜು. ಹಾಗೇನಾದರೂ ಆದರೆ ಸುಮಾರು ೨ ದಶಕಗಳ ನಂತರ ಒಕ್ಕಲಿಗ-ಲಿಂಗಾಯತ ಶಕ್ತಿ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಎದುರಿಸಲಿವೆ. ಇವತ್ತು
ಬಿಜೆಪಿ- ಜೆಡಿಎಸ್ ಮೈತ್ರಿಯ ನಂತರ ಕಣ್ಣಿಗೆ ಕಾಣುತ್ತಿರುವ ಸ್ಥೂಲಚಿತ್ರ ಇದು. ಇಂಥ ಚಿತ್ರವನ್ನು ಸಿದ್ದರಾಮಯ್ಯ ಕದಡಿಹಾಕಲು ಸಾಧ್ಯವೇ ಎಂಬುದು ಈಗಿರುವ ಕುತೂಹಲ.

ಮೈತಿಕೂಟಕ್ಕೆ ಡಿಕೆಶಿ ಮೇಲೆ ಕಣ್ಣು

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಬಿಜೆಪಿ ವರಿಷ್ಠರಾದ ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಅವರನ್ನು ಮೊನ್ನೆ ಭೇಟಿ ಮಾಡಿ ಬಂದರಲ್ಲ, ನಂತರ ಬಿಜೆಪಿ ನಾಯಕರ ಜತೆ ಸೇರಿ ಅವರು ಬೀದಿಗಿಳಿದಿದ್ದಾರೆ. ಅಂದ ಹಾಗೆ ಕಾಂಗ್ರೆಸ್ಸಿನಲ್ಲಿನ ಕೆಲ ಬೆಳವಣಿಗೆಗಳು ತಮಗೆ ಅನುಕೂಲ ಮಾಡಿಕೊಡಲಿವೆ ಎಂಬುದು ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ನಾಯಕರ ನಂಬಿಕೆ. ಈ ಪೈಕಿ ಕಾಂಗ್ರೆಸ್‌ನಲ್ಲಿ ಡಿಸಿಎಂ ಡಿಕೆಶಿಗೆ ಆಗುತ್ತಿರುವ ಹಿನ್ನಡೆ ಹಳೆ ಮೈಸೂರು ಪಾಕೆಟ್ಟಿನಲ್ಲಿ ತಮಗೆ ಪ್ಲಸ್ ಆಗಲಿದೆ ಎಂಬುದು ಅವರ ಲೆಕ್ಕಾಚಾರ. ಯಾರೇನೇ ಹೇಳಲಿ, ಡಿಕೆಶಿ ಸಿಎಂ ಆಗುತ್ತಾರೆ ಎಂಬ ಒಕ್ಕಲಿಗರ ವಿಶ್ವಾಸ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ಸಿಗೆ ಶೇ.೬ರಿಂದ ೭ರಷ್ಟು ಹೆಚ್ಚುವರಿ ಮತಗಳು ದಕ್ಕುವಂತೆ ಮಾಡಿದ್ದವು. ಆದರೆ ಡಿಕೆಶಿ ಮುಖ್ಯಮಂತ್ರಿಯಾಗಲಿಲ್ಲ. ಉಪಮುಖ್ಯ ಮಂತ್ರಿ ಅಗಿ ದ್ದರೂ ಈಗ ಅವರ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ಕಾಂಗ್ರೆಸ್ ನಾಯಕರಿಂದ ನಡೆದಿದೆ.

ಅಲ್ಪಸಂಖ್ಯಾತ, ದಲಿತ ಮತ್ತು ಲಿಂಗಾಯತ ಸಮುದಾಯಗಳಿಗೆ ಡಿಸಿಎಂ ಹುದ್ದೆ ಕೊಡಬೇಕು ಎಂಬ ಸಚಿವ ರಾಜಣ್ಣನವರ ಹೇಳಿಕೆಯಿಂದ ಹಿಡಿದು, ಮಹಿಳೆಯೂ ಸೇರಿದಂತೆ ೫ ಮಂದಿಯನ್ನು ಡಿಸಿಎಂ ಹುದ್ದೆಗೆ ತರಬೇಕು ಎಂಬ ರಾಯರೆಡ್ಡಿ ಹೇಳಿಕೆಯ ತನಕ ಅಲ್ಲೆದ್ದಿರುವ ಕೂಗೇನಿದೆ, ಅದು ಡಿಕೆಶಿಯನ್ನು ದುರ್ಬಲಗೊಳಿಸುವ ಪ್ರಯತ್ನ ಅಷ್ಟೇ. ಈ ಕೂಗು ಹೀಗೇ ಮುಂದುವರಿದರೆ, ಡಿಕೆಶಿ ಜತೆ ಇನ್ನೂ ಕೆಲವರು ಡಿಸಿಎಂ ಗಳಾದರೆ ಅನುಮಾನವೇ ಬೇಡ, ಒಕ್ಕಲಿಗ ಮತಬ್ಯಾಂಕು
ಸಿಟ್ಟಿಗೇಳುತ್ತದೆ ಮತ್ತು ಈ ಸಿಟ್ಟು ತಮಗೆ ಲಾಭ ತಂದು ಕೊಡಲಿದೆ ಎಂಬುದು ಮೈತ್ರಿಕೂಟದ ನಾಯಕರ ಯೋಚನೆ. ಅಂದ ಹಾಗೆ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಕಾಂಗ್ರೆಸ್-ವಿರೋಧಿ ಮತಗಳು ಹೆಚ್ಚು. ಅಂದರೆ ಕಾಂಗ್ರೆಸ್ ವಿರುದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಗಳಿಸಿದ ಒಟ್ಟಾರೆ ಮತಗಳ ಪ್ರಮಾಣ ಜಾಸ್ತಿ. ಈಗ ಉಭಯ ಪಕ್ಷಗಳ ನಡುವೆ ಮೈತ್ರಿ ಸಾಧಿತವಾಗಿರುವುದರಿಂದ ಕಾಂಗ್ರೆಸ್-ವಿರೋಧಿ ಮತಗಳು ಕನ್‌ಸಾ ಲಿಡೇಟ್ ಆದರೆ ಮೈತ್ರಿಕೂಟ ಮಿನಿಮಮ್ ೨೨ ಸೀಟು ಗೆದ್ದೇ ಗೆಲ್ಲುತ್ತದೆ. ಕಾಂಗ್ರೆಸ್ ಪಾಳಯದಲ್ಲಿ ಡಿಕೆಶಿಗೆ ಡಿಚ್ಚಿ ಬಿದ್ದರೆ ಇದು ಮತ್ತಷ್ಟು ಸುಲಭ ಎಂಬುದು ಅವರ ಯೋಚನೆ.

ಬಿಜೆಪಿಯಲ್ಲಿ ಹಲವು ಲೆಕ್ಕಾಚಾರ

ಈ ಮಧ್ಯೆ ಕರ್ನಾಟಕದ ನೆಲೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಸಾಽಸುವುದು ಪಕ್ಕಾ ಆಗುತ್ತಿದ್ದಂತೆಯೇ ಬಿಜೆಪಿಯ ಲೆಕ್ಕಾಚಾರಗಳು ಬದಲಾಗುತ್ತಿವೆ. ಯಾಕೆಂದರೆ ಒಕ್ಕಲಿಗ ನಾಯಕ ಕುಮಾರ ಸ್ವಾಮಿ ಇರುವಾಗ ಅದೇ ಸಮುದಾಯದ ಮತ್ತೊಬ್ಬರನ್ನು ಬಿಜೆಪಿಯ ಶಾಸಕಾಂಗ ನಾಯಕರನ್ನಾಗಿ ಪ್ರತಿಷ್ಠಾಪಿಸಲು ಸಾಧ್ಯವಿಲ್ಲ. ಹೀಗಾಗಿ ಈ ಜಾಗಕ್ಕೆ ಲಿಂಗಾಯತ ಸಮುದಾಯದ ನಾಯಕರನ್ನೇ ತರಬೇಕು ಮತ್ತು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಒಕ್ಕಲಿಗರೊಬ್ಬರನ್ನು ತರಬೇಕು ಎಂಬುದು ಒಂದು ಬಣದ ವಾದ. ಈ ವಾದಕ್ಕೆ ವರಿಷ್ಠರು ಪುಷ್ಟಿ ನೀಡಿದರೆ, ಈ ಜಾಗಗಳಿಗೆ ಅನುಕ್ರಮವಾಗಿ ಬೊಮ್ಮಾಯಿ ಮತ್ತು ಡಾ.ಅಶ್ವಥ್ಥ ನಾರಾಯಣ್ ಇಲ್ಲವೇ ಸಿ.ಟಿ.ರವಿ ಬಂದು ಕೂರಬಹುದು.

ಆದರೆ ಈ ವಿಷಯ ಬಂದಾಗ ಯಡಿಯೂರಪ್ಪ ಅವರ ಲೆಕ್ಕಾಚಾರ ಬೇರೆ ಇದೆ. ಅವರ ಪ್ರಕಾರ ಜೆಡಿಎಸ್ ಪಕ್ಷದಲ್ಲಿ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡುವ ಹಾಗೆ ಬಿಜೆಪಿಯಲ್ಲಿ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಬೇಕು. ಅರ್ಥಾತ್, ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷಾಧ್ಯಕ್ಷ ಸ್ಥಾನ ಕೊಡಬೇಕು. ಅದೇ ರೀತಿ ಶಾಸಕಾಂಗ ನಾಯಕನ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಅಶ್ವಥ್ಥನಾರಾಯಣ್ ಅವರನ್ನು ತರಬಹುದು ಎಂಬುದು ಅವರ ವಾದ. ಈ ಮಧ್ಯೆ ಬಿಜೆಪಿ ಪಾಳಯದಲ್ಲಿ ಮತ್ತೊಂದು ವಾದವೂ ಕೇಳುತ್ತಿದೆ. ಅದೆಂದರೆ ವಿಧಾನಸಭೆಯಲ್ಲಿ ಲಿಂಗಾಯತರನ್ನು ತಂದು ಕೂರಿಸಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಹಾಲಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನೇ ಮುಂದುವರಿಸಬೇಕು ಎಂಬುದು.

ಅಂದ ಹಾಗೆ ಕಟೀಲ್ ಅವರು ಹಿಂದುತ್ವದ ಬ್ರ್ಯಾಂಡ್. ಹೀಗಾಗಿ ಅವರನ್ನು ಮುಂದುವರಿಸಿದರೆ ಒಕ್ಕಲಿಗ- ಲಿಂಗಾಯತ ಮತಗಳ ಜತೆ ಹಿಂದೂ ಮತಬ್ಯಾಂಕಿನ ಮೇಲೂ ಪ್ರಭಾವ ಬೀರಬಹುದು ಎಂಬುದು ಈ ವಾದ. ಮುಂದೇ ನಾಗುತ್ತದೋ ಗೊತ್ತಿಲ್ಲ. ಅದರೆ ದಸರೆಯ ಒಳಗೆ ಈ ಇಶ್ಯೂ ಸೆಟ್ಲಾಗುತ್ತದೆ ಅನ್ನುವುದು ಬಿಜೆಪಿ ನಾಯಕರ ನಂಬಿಕೆ.