ಮೂರ್ತಿಪೂಜೆ
ಎರಡು ವಾರಗಳ ಹಿಂದೆ ಕೆಲ ಆಪ್ತ ಪತ್ರಕರ್ತರಿಗೆ ಫೋನು ಮಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖುಷಿ ಖುಷಿಯಾಗಿ
ವಿಜಯ ದಶಮಿಯ ಶುಭಾಶಯ ಕೋರಿದರು. ಆ ವೇಳೆ ಅವರು, ‘ಈ ವರ್ಷ ಉಪಮುಖ್ಯಮಂತ್ರಿಯಾಗಿ ನಿಮಗೆ ಶುಭಾಶಯ ಕೋರುತ್ತಿದ್ದೇನೆ. ಮುಂದಿನ ವರ್ಷ ಮುಖ್ಯಮಂತ್ರಿಯಾಗಿ ಶುಭಾಶಯ ಕೋರುತ್ತೇನೆ’ ಎಂದರಂತೆ.
ಅವರು ಹೇಳಿದ ಈ ಶುಭಸುದ್ದಿ ನಿಂತಲ್ಲೇ ನಿಲ್ಲಲು ಸಾಧ್ಯವೇ? ಹೀಗಾಗಿ ಅದು ಸುನಾಮಿಯಂತೆ ಮೇಲೆದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾಂಪಿನ ಪ್ರಮುಖರ ಕಿವಿಗೆ ತಲುಪಿದೆ. ತಮಗೆ ತಲುಪಿದ ಸುದ್ದಿಯನ್ನು ಅವರು ಕೌಂಟರ್‌ಚೆಕ್ ಮಾಡಿಕೊಂಡರೆ, ‘ಹೌದು, ಅವರು ನಮ್ಮ ಬಳಿ ಹಾಗೆ ಹೇಳಿದ್ದು ನಿಜ’ ಎಂಬ ಮೆಸೇಜು ಸಿಕ್ಕಿತಂತೆ. ಈ ಮೆಸೇಜು ಸಿದ್ದರಾಮಯ್ಯ ಅವರ ಆಪ್ತರ ಕಿವಿ ತಲುಪುವುದಕ್ಕೂ, ನಂತರ ಕರ್ನಾಟಕದ ರಾಜಕಾರಣದಲ್ಲಿ ಗಲಿಬಿಲಿ ಶುರುವಾಗುವುದಕ್ಕೂ ಸಂಬಂಧವಿದೆಯೇ? ಗೊತ್ತಿಲ್ಲ. ಆದರೆ ಡಿಕೆಶಿ ಇಂಥ ಮಾತನಾಡಿದರು ಎಂಬ ಸುದ್ದಿ ಹರಡಿದ ನಂತರ ಸಿಎಂ ಹುದ್ದೆಗೆ ಹೊಸ ರೇಸು ಶುರುವಾದಂತೆ ಭಾಸವಾಗಿದ್ದು ಮಾತ್ರ ನಿಜ.
ಅಂದ ಹಾಗೆ, ಡಿಕೆಶಿ ಇಂಥ ಮಾತನಾಡಿದ್ದಾರೆ ಎಂಬ ವರ್ತಮಾನ ಹರಿದಾಡಿದ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಏರ್ಪಾಡಾಗಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಲೋಕೋಪ ಯೋಗಿ ಸಚಿವ ಸತೀಶ್ ಜಾರಕಿಹೊಳಿ ಪಾಲ್ಗೊಂಡಿದ್ದಾರೆ. ಇದಾದ ನಂತರ ರಾಜಕೀಯ ವಲಯಗಳಲ್ಲಿ ಡಿನ್ನರ್ ಮೀಟಿಂಗಿನ ರಿಸಲ್ಟಿನ ಬಗ್ಗೆ ಒಂದು ಕುತೂಹಲಕಾರಿ ಮಾಹಿತಿ ಹರಿದಾಡಿದೆ.
ಅದೆಂದರೆ, ‘ಮುಂದಿನ ಸಿಎಂ ಹುದ್ದೆಯ ರೇಸಿನಲ್ಲಿ ನೀವಿರಬೇಕು ಡಾಕ್ಟ್ರೇ, ನಿಮಗೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ’ ಅಂತ ಜಿ.ಪರಮೇಶ್ವರ್
ಅವರಿಗೆ ಭರವಸೆ ನೀಡಲಾಗಿದೆ ಎಂಬುದು ಈ ಮಾಹಿತಿ. ಇದನ್ನು ಡಿನ್ನರ್ ಮೀಟಿಂಗಿನಲ್ಲಿದ್ದ ಯಾರೊಬ್ಬರೂ ಖಚಿತಪಡಿಸಲಿಲ್ಲವಾದರೂ ಕಳೆದ ಶುಕ್ರವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಾಡಿದ ಮಾತು ಪರಮೇಶ್ವರ್ ಮನೆಯ ಡಿನ್ನರ್ ಮೀಟಿಂಗಿನಲ್ಲಿ ನಡೆದಿದ್ದೇನು ಎಂಬುದಕ್ಕೆ
ಸಾಕ್ಷಿ ಒದಗಿಸುವಂತಿತ್ತು.
‘ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ದರಾಮಯ್ಯ ಇರುವವರೆಗೆ ಪರಮೇಶ್ವರ್ ಮತ್ತು ನಾನು ಅವರ ಜತೆಗಿರುತ್ತೇವೆ. ಒಂದು ವೇಳೆ ಅವರು ಬದಲಾಗುವುದು ನಿಶ್ಚಿತವಾದರೆ ಪರಮೇಶ್ವರ್ ಮುಖ್ಯಮಂತ್ರಿ ಯಾಗಬೇಕು ಎಂಬುದು ನನ್ನಾಸೆ. ನನ್ನ ಅಭಿಪ್ರಾಯ ಯಾವತ್ತೂ ಸುಳ್ಳಾಗಿಲ್ಲ. ಪರಮೇಶ್ವರ್ ವಿಷಯದಲ್ಲೂ ಇದು ಸುಳ್ಳಾಗುವುದಿಲ್ಲ’ ಅಂತ ರಾಜಣ್ಣ ಹೇಳಿದ ಮಾತೇನಿದೆ ಅದು ಡಿನ್ನರ್ ಮೀಟಿಂಗಿನ ಔಟ್‌ಕಮ್‌ನಂತೆಯೇ ಇತ್ತು.
ಇದು ಒಂದೆಡೆಯಾದರೆ ಮತ್ತೊಂದೆಡೆ ಕಾಂಗ್ರೆಸ್‌ನ ಹಲವು ನಾಯಕರು ಸಿಎಂ ಆಗಲು ತಾವೂ ರೆಡಿ ಎಂಬರ್ಥ ದಲ್ಲಿ ಮಾತಾಡತೊಡಗಿದರು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಹೈಕಮಾಂಡ್ ಬಯಸಿದರೆ ನಾನು ಸಿಎಂ ಆಗಲು ಸಿದ್ಧ’ ಎಂದರೆ, ‘ಮುಖ್ಯಮಂತ್ರಿ
ಯಾಗಲು ನಾನೂ ಅರ್ಹನಿದ್ದೇನೆ. ಯೋಗ ಬಂದರೆ ಆಗುತ್ತೇನೆ’ ಅಂತ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಕೂಡಾ ಸಿಕ್ಸರ್ ಬಾರಿಸಿದರು.
ಇಂಥ ಎಲ್ಲ ಬೆಳವಣಿಗೆಗಳಿಗೆ ಪವರ್ ನೀಡಿದ್ದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಡಿದ ಮಾತು. ಹೊಸಪೇಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಂದಿನ ೫ ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುತ್ತದೆ. ನಾನೇ ಮುಖ್ಯಮಂತ್ರಿ ಯಾಗಿರುತ್ತೇನೆ’ ಅಂತ ಹೇಳಿದ್ದು, ಡಿಸಿಎಂ ಡಿಕೆಶಿ ಕ್ಯಾಂಪಿನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದು ನಿಜ. ಇದಾದ ನಂತರ ಹೈಕಮಾಂಡ್ ವರಿಷ್ಠರಾದ ಕೆ.ಸಿ.ವೇಣು ಗೋಪಾಲ್ ಮತ್ತು ರಣದೀಪ್‌ಸಿಂಗ್ ಸುರ್ಜೇವಾಲ ಅವರ ಜತೆ ಮಾತನಾಡಿದ ಶಿವಕುಮಾರ್, ‘ಅಧಿಕಾರ ಹಂಚಿಕೆಯ ಬಗ್ಗೆ ದಿಲ್ಲಿಯಲ್ಲಿ ಕೈಗೊಂಡ ತೀರ್ಮಾನದ ವಿರುದ್ಧ ಮಾತು ಶುರುವಾಗಿದೆ. ಆದರೆ ಚಕಾರವೆತ್ತದಂತೆ ನೀವು ಕಟ್ಟುನಿಟ್ಟಾಗಿ ಹೇಳುತ್ತಿಲ್ಲ’ ಎಂದು ದೂರಿದರಂತೆ.
ಇದಾದ ನಂತರ ವೇಣುಗೋಪಾಲ್ ಮತ್ತು ಸುರ್ಜೇವಾಲ ಅವರು, ಅಽಕಾರ ಹಂಚಿಕೆಯ ಬಗ್ಗೆ ಯಾರೂ ಮಾತನಾಡದಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯನವರಿಗೇ ಹೇಳಿದ್ದಾರೆ. ಹಾಗೆ ಹೇಳಿದ ನಂತರ ಬ್ರೇಕ್ ಫಾಸ್ಟ್ ಮೀಟಿಂಗು ನಡೆದು, ಮುಂದಿನ ಸಿಎಂ ಯಾರು ಎಂಬ ವಿಷಯದ ಬಗ್ಗೆ
ಕೈ ಪಾಳಯದಲ್ಲಿ ಸೌಂಡು ಕೇಳುತ್ತಿಲ್ಲ. ಆದರೆ ಈಗಾಗಲೇ ಮೇಲೆದ್ದ ಗಂಧಕದ ವಾಸನೆ ಮಾತ್ರ ನಿಲ್ಲುತ್ತಿಲ್ಲ.
ಮಂತ್ರಿಗಳಿಗೆ ಪಾರ್ಲಿಮೆಂಟು ಇಷ್ಟವಿಲ್ಲ
ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಹಿರಿಹಿರಿ ಹಿಗ್ಗಿದ್ದ ಕಾಂಗ್ರೆಸ್ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ. ಕಾರಣ?ಮುಂಬರುವ ಪಾರ್ಲಿಮೆಂಟ್ ಚುನಾವಣೆ ಯಲ್ಲಿ ಕರ್ನಾಟಕದಿಂದ ಮಿನಿಮಮ್ ೨೦ ಸೀಟು ಗೆಲ್ಲಬೇಕು. ಇದಕ್ಕೆ ಪೂರಕವಾಗಿ ರಣತಂತ್ರ ಹೆಣೆಯಬೇಕು,
ಅದರ ಭಾಗವಾಗಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಸಚಿವರಾಗಿರುವ ೬ ಮಂದಿಯನ್ನು ಚುನಾವಣಾ ಕಣಕ್ಕಿಳಿಸಬೇಕು ಅಂತ ವರಿಷ್ಠರು ಯೋಚಿಸಿದ್ದರು.
ಇಂಥ ಯೋಚನೆಗಿದ್ದ ಮುಖ್ಯ ಕಾರಣವೆಂದರೆ, ಸಚಿವರಾದರೆ ಇಡೀ ಜಿಲ್ಲೆಯ ಮೇಲೆ ಪ್ರಭಾವ ಇಟ್ಟುಕೊಂಡಿರುತ್ತಾರೆ. ಅಧಿಕಾರ ಇರುವುದರಿಂದ ಆಯಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪಕ್ಷದ ಶಾಸಕರು ಅವರು ಹೇಳಿದಂತೆ ಕೇಳುತ್ತಾರೆ. ಹೀಗಾಗಿ ಪ್ರಮುಖ ಸಚಿವರು ಚುನಾವಣೆಯಲ್ಲಿ
ಸ್ಪಽಸಿದರೆ ನಿರಾಯಾಸವಾಗಿ ಗೆಲುವು ಸಾಧಿಸಬಹುದು. ಆಪರೇಷನ್ ಟ್ವೆಂಟಿ ಕಾರ್ಯಾಚರಣೆಯನ್ನು ಸಕ್ಸಸ್ ಮಾಡಬಹುದು ಎಂಬುದು ವರಿಷ್ಠರ ಲೆಕ್ಕಾಚಾರವಾಗಿತ್ತು. ಆದರೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರವಿತ್ತೋ ಆ ಸಚಿವರು ದಿನಗಳೆದಂತೆ
ಸ್ಪರ್ಧೆ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಕಾರಣ? ಚುನಾವಣೆಯಲ್ಲಿ ಸ್ಪರ್ಧಿಸಿ ತಾವು ಗೆಲ್ಲಬಹುದು. ಆದರೆ ದಿಲ್ಲಿ ಗದ್ದುಗೆಯ ಮೇಲೆ ಕಾಂಗ್ರೆಸ್ ನೇತೃತ್ವದ ‘ಇಂಡಿಯ’ ಮೈತ್ರಿಕೂಟ ಬಂದು ಕೂರುತ್ತದೆ ಎಂಬ ವಿಷಯದಲ್ಲಿ ಅವರಿಗೆ ನಂಬಿಕೆ ಬರುತ್ತಿಲ್ಲ.
ಶುರುವಿನಲ್ಲಿ ದೊಡ್ಡ ಸೌಂಡು ಮಾಡಿದ ‘ಇಂಡಿಯ’ ಗರ್ನಲ್ಲು ದಿನಗಳೆದಂತೆ ಮೈಮೇಲೆ ನೀರು ಚಿಮುಕಿಸಿಕೊಂಡಂತೆ ಮೆತ್ತಗಾಗುತ್ತಿದೆ. ಹೀಗಾಗಿ
ಇಂಡಿಯ ಮೈತ್ರಿಕೂಟದ ಬದಲು ಬಿಜೆಪಿ ನೇತೃತ್ವದ ಎನ್ ಡಿಎ ಮರಳಿ ಅಧಿಕಾರಕ್ಕೆ ಬಂದರೆ ತಾವು ಪಡ್ಚಾ ಎಂಬುದು ಈ ಸಚಿವರ ಆತಂಕ. ಉದಾಹರಣೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನೇ ತೆಗೆದುಕೊಳ್ಳಿ. ಮೈತ್ರಿಕೂಟ ರಚಿಸುವಾಗ ಅತ್ಯುತ್ಸಾಹದಲ್ಲಿದ್ದ ನಿತೀಶ್ ಈಗ ಕೈ ಪಾಳಯದ ಮೇಲೆ ಆರೋಪಗಳ ಮಳೆ ಸುರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ೫ ರಾಜ್ಯಗಳ ಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸಿ
ಇಂಡಿಯ ಮೈತ್ರಿಕೂಟವನ್ನು ನಿರ್ಲಕ್ಷಿಸಿದೆ ಎನ್ನುತ್ತಿದ್ದಾರೆ.
ಈ ಮಧ್ಯೆ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷಕ್ಕೆ ನಿರೀಕ್ಷಿತ ಪ್ರಮಾಣದ ಸೀಟು ಬಿಟ್ಟು ಕೊಡಲು ಕಾಂಗ್ರೆಸ್ ಒಪ್ಪದ ಕ್ರಮ ನಿತೀಶ್ ಕುಮಾರ್ ಅವರಿಗೆ ಸಿಟ್ಟು ತರಿಸಿದೆ. ಹೀಗೆ ನಿತೀಶ್ ಒಂದು ಕಡೆ ಸಿಟ್ಟಿಗೆದ್ದಿದ್ದರೆ, ಮತ್ತೊಂದು ಕಡೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡಾ ಕಾಂಗ್ರೆಸ್ ವಿಷಯದಲ್ಲಿ ಚುಚ್ಚುಮಾತುಗಳನ್ನಾಡತೊಡಗಿದ್ದಾರೆ. ‘ಉತ್ತರ ಪ್ರದೇಶದಲ್ಲಿ ಇಂಡಿಯ ಮೈತ್ರಿಕೂಟದ ಜತೆ ಹೊಂದಾಣಿಕೆ ಆದರೆ ಕಾಂಗ್ರೆಸ್ ಸೇರಿದಂತೆ ಮೈತ್ರಿಕೂಟದ ಪಕ್ಷಗಳಿಗೆ ೧೫ ಪಾರ್ಲಿಮೆಂಟ್ ಸೀಟು ಬಿಟ್ಟುಕೊಡುತ್ತೇವೆ.ನಾವು ೬೫ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ’ ಎಂಬುದು ಅಖಿಲೇಶ್ ಯಾದವ್ ಮೆಸೇಜು.
ಇನ್ನು ಮಹಾರಾಷ್ಟ್ರದ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಒಕ್ಕೂಟಕ್ಕೆ ಬೇಕಾದ ಆಟವಾಡುತ್ತಾರೋ? ಬಿಜೆಪಿಗೆ ಅನುಕೂಲ ಮಾಡಿಕೊಡುವ ಆಟವಾಡುತ್ತಾರೋ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಇಂಡಿಯ ಮೈತ್ರಿಕೂಟ ಒಗ್ಗಟ್ಟಾಗಿ ನಿಂತು ಪಾರ್ಲಿಮೆಂಟ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಎದುರಿಸುತ್ತದೆ. ದಿಲ್ಲಿ ಗದ್ದುಗೆಯನ್ನು ವಶಪಡಿಸಿಕೊಳ್ಳುತ್ತದೆ ಎಂಬ ವಿಷಯದಲ್ಲಿ ರಾಜ್ಯ ಸಚಿವ ಸಂಪುಟದ ಬಹುತೇಕ ಸಚಿವರಿಗೆ ನಂಬಿಕೆ ಇಲ್ಲ. ಇವತ್ತು ಪಾರ್ಲಿಮೆಂಟಿನಲ್ಲಿ ರಾಜ್ಯದ ೨೫ ಸಂಸದರಿದ್ದರೂ ಪ್ರಧಾನಿ ನರೇಂದ್ರ ಮೋದಿ ಎದುರು
ನಿಂತು, ನಮ್ಮ ರಾಜ್ಯದ ಬೇಡಿಕೆಗಳನ್ನುಮಂಡಿಸುವ ಶಕ್ತಿಯಿಲ್ಲ. ಹೀಗಿರುವಾಗ ನಾವು ಸಂಸದರಾಗಿ, ಇಂಡಿಯ ಮೈತ್ರಿಕೂಟ ಅಽಕಾರಕ್ಕೆ ಬರದೆ ಇದ್ದರೆ ದಿಲ್ಲಿಗೆ ಹೋಗಿ ಏನು ಮಾಡುವುದು? ಎಂಬುದು ಈ ಸಚಿವರ ಚಿಂತೆ.
ಪರಿಣಾಮ? ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿಯಾಗಿ ಅಂತ ಮೆಸೇಜು ಬಂದರೆ, ತಪ್ಪಿಸಿಕೊಳ್ಳುವುದು ಹೇಗೆ? ಅಂತ ಈ ಸಚಿವರು ದಾರಿ ಹುಡುಕುತ್ತಿದ್ದಾರಂತೆ. ೫ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂಪರ್ ಗೆಲುವು ಸಾಽಸಿದರೆ ಸಚಿವರ ಈ ನಿಲುವು ಬದಲಾಗುತ್ತದೇನೋ ಕಾದು ನೋಡಬೇಕು.
ತೆಲಂಗಾಣ: ಕೈಗೆ ಖರ್ಗೆ ಬಲ
ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೆಲಂಗಾಣದಲ್ಲಿ ರೂಪಿಸುತ್ತಿರುವ ತಂತ್ರಗಳನ್ನು ಕಂಡು ರಾಹುಲ್ ಗಾಂಧಿ ಫಿದಾ ಆಗಿದ್ದಾರಂತೆ. ಅಂದ ಹಾಗೆ, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದು ಅಧಿಕಾರ ಹಿಡಿಯುವ ಲೆಕ್ಕಾಚಾರ ಕಾಂಗ್ರೆಸ್ ಪಾಳಯದಲ್ಲಿತ್ತು. ಆದರೆ ಕೆಸಿಆರ್ ನೇತೃತ್ವದ ಬಿಆರ್‌ಎಸ್ ಪಾರ್ಟಿ ಬಿಜೆಪಿಯ ಕೇಂದ್ರ ನಾಯಕರ ಬಲದೊಂದಿಗೆ ಪವರ್ ಫುಲ್ಲಾಗಿ ಮೇಲೆದ್ದಿದೆ. ಈ ಅಂಶವನ್ನು ಗಮನಿಸಿದ ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿ- ಬಿಅರ್‌ಎಸ್ ವಿರೋಧಿ ಮತಗಳನ್ನು ಕನ್ ಸಾಲಿಡೇಟ್ ಮಾಡುತ್ತಿದ್ದಾರೆ. ಅರ್ಥಾತ್, ಜಗನ್ ಸಹೋದರಿ ಶರ್ಮಿಳಾ, ಕಮ್ಯುನಿಸ್ಟರು, ತೆಲಂಗಾಣ ಜನಸಮಿತಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ‘ನಿಮಗೆ ಪ್ರತಿ ಕ್ಷೇತ್ರದಲ್ಲೂ ಗಣನೀಯ ಪ್ರಮಾಣದ ಮತ ಗಳಿಸುವ ಶಕ್ತಿ ಇದೆ. ಆದರೆ ನಾವೆಲ್ಲರೂ ಸ್ಪರ್ಧಿಸಿದರೆ ಬಿಜೆಪಿ-ಬಿಆರ್‌ಎಸ್ ವಿರೋಧಿ ಮತಗಳು
ವಿಭಜನೆಯಾಗುತ್ತವೆ. ಹಾಗೇನಾದರೂ ಆದರೆ ನಾವು ಅಧಿಕಾರ ಹಿಡಿಯುವುದು ಕಷ್ಟವಾಗಿ ಅತಂತ್ರ ವಿಧಾನಸಭೆ ರೂಪುಗೊಳ್ಳಬಹುದು. ಹೀಗಾಗಿ ನೀವು ನಮಗೆ ಸಹಕಾರ ನೀಡಿ.
ಎಲ್ಲ ಕಡೆ ಇಂಡಿಪೆಂಡೆಂಟಾಗಿ ಸ್ಪರ್ಧೆ ಮಾಡಬೇಡಿ. ನಾಳೆ ನಾವು ಅಽಕಾರಕ್ಕೆ ಬಂದರೆ ಮಂತ್ರಿಗಿರಿಯಿಂದ ಹಿಡಿದು ಎಲ್ಲ ಹಂತಗಳಲ್ಲಿ ನಿಮಗೆ ಪಾಲು ಕೊಡುತ್ತೇವೆ’ ಅಂತ ಮನವೊಲಿಸುತ್ತಿದ್ದಾರೆ. ಅವರ ಈ ತಂತ್ರ ಬಹುತೇಕ ಯಶಸ್ವಿಯೂ ಆಗಿದೆ. ಇದನ್ನೆಲ್ಲ ನೋಡುತ್ತಿರುವ ರಾಹುಲ್ ಗಾಂಧಿ ಎಷ್ಟು ಫಿದಾ ಆಗಿದ್ದಾರೆಂದರೆ, ‘ತೆಲಂಗಾಣದಲ್ಲಿ ನಾವೇನಾದರೂ ಅಽಕಾರ ಹಿಡಿದರೆ ಅದರ ಕ್ರೆಡಿಟ್ಟು ಖರ್ಗೇಜಿಗೇ ಸಲ್ಲಬೇಕು’ ಅನ್ನುತ್ತಿದ್ದಾರಂತೆ.