Tuesday, 10th December 2024

ರಾಕ್ಷಸಕೃತ್ಯ ಎಸಗುತ್ತಿದ್ದರೆ ಮಹಿಳೆ ಬದುಕುವುದೆಂತು ?

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಸಮುದ್ರದಲ್ಲಿ ಹಡಗು ಸಂಚರಿಸುವಾಗ ಬಿರುಗಾಳಿಗೆ ಹೊಯ್ದಾಡುತ್ತದೆ. ಆಗ ಮಾನವಸ್ನೇಹಿ ತಿಮಿಂಗಿಲವು ಬಿರುಗಾಳಿಗೆ ಹಡಗು ವಾಲದಂತೆ ತನ್ನ ಬೆನ್ನನ್ನೇ ಹಡಗಿಗೆ ಆನಿಸಿ, ಹಡಗನ್ನೂ ಅದರೊಳಗಿನ ಮಾನವರನ್ನೂ ರಕ್ಷಿಸುತ್ತದೆ. ಆದರೆ ಅದೇ ಮಾನವ, ಉಪಕಾರದ ಆಶಯದೊಂದಿಗೆ ತಿಮಿಂಗಿ ಲವು ಹಡಗಿನ ಬಳಿ ಬಂದು ಬೆನ್ನೊಡ್ಡಿ ನಿಂತಾಗ, ಮತ್ಸ್ಯಬೇಟೆಯ ನೆಪದಲ್ಲಿ ಹಡಗನ್ನು ಅಲುಗಾಡಿಸಿ ಅದನ್ನೇ ಬೇಟೆಯಾಡಿ ಬಲಿಪಡೆಯು ತ್ತಾನೆ ಎಂಬ ವಿಚಾರವನ್ನು ಹಿಂದೆ ಎಲ್ಲೋ ಓದಿದ್ದು ಮನದಂಚಿಗೆ ಬಂದುಹೋಯಿತು. ನಿಸ್ವಾರ್ಥ ಸೇವೆ ಸಲ್ಲಿಸುವ, ಜನರ ಪ್ರಾಣ ಉಳಿಸುವ ವೈದ್ಯರ ಪಾಡೂ ಇದಕ್ಕೆ ಹೊರತಲ್ಲ!

‘ಒಬ್ಬ ವೈದ್ಯೆಯಾಗಿ, ಆರೋಗ್ಯ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ಎದುರಿಸುತ್ತಿರುವ ಭಯಾನಕ ವಾಸ್ತವದ ವಿರುದ್ಧ ನಾನು ಮಾತನಾಡುತ್ತಿದ್ದೇನೆ. ನಾವು ದಣಿವರಿಯದೆ ಅಧ್ಯಯನ ಮಾಡುತ್ತೇವೆ, ಇತರರಿಗೆ ಸೇವೆ ಸಲ್ಲಿಸಲು ನಮ್ಮ ಜೀವನವನ್ನು ಪಣಕ್ಕಿಡುತ್ತೇವೆ. ಆದರೆ ನಮ್ಮ ಸುರಕ್ಷತೆಗೆ ಧಕ್ಕೆಯಾಗಿದೆ. ಮಹಿಳಾ ವೈದ್ಯರ ವಿರುದ್ಧದ ಇತ್ತೀಚಿನ ಹಿಂಸಾಚಾರ ಮತ್ತು ಅತ್ಯಾಚಾರದ ಘಟನೆಗಳು ನಮಗೆ ಹಾನಿ ಯನ್ನುಂಟುಮಾಡುವ ವ್ಯವಸ್ಥಿತ ವೈ-ಲ್ಯಗಳಿಗೆ ಹಿಡಿದ ಕೈಗನ್ನಡಿ’ ಎಂದು ಮಹಿಳಾ ವೈದ್ಯರೊಬ್ಬರು ತಮ್ಮ ನೋವು ಹೇಳಿಕೊಂಡರು.

ಮೊನ್ನೆ ಮೊನ್ನೆ ನಡೆದ, ವಿಶ್ವದ ಅದ್ದೂರಿ ವಿವಾಹವೆಂದು ಬಣ್ಣಿಸಲ್ಪಟ್ಟ ಅಂಬಾನಿ ಮನೆ ಮದುವೆಯಲ್ಲಿ ನೀತಾ ಅಂಬಾನಿಯವರು ಮಗಳು/ಸ್ತ್ರೀ ಕುರಿತು ಆಡಿದ ಮಾತುಗಳು ಅದೆಷ್ಟು ಉತ್ಕೃಷ್ಟವಾಗಿದ್ದವು ಎಂದು ನಾವೆಲ್ಲಾ ಕೊಂಡಾಡಿ ತಲೆದೂಗಿ ಚಪ್ಪಾಳೆ ತಟ್ಟಿದೆವು. ಆದರೆ ಇದರ ಬೆನ್ನಿಗೇ ನಡೆದ ಕೋಲ್ಕೊತ್ತಾದ ಘಟನೆ, ಬೆಂಗಳೂರಿನಲ್ಲಿ ನಡೆದ ಘಟನೆ ನಮ್ಮ ನಿದ್ರೆಗೆಡಿಸಿ ಆಘಾತವನ್ನುಂಟುಮಾಡಿದವು.

‘ತುರ್ತುಕರೆ ಬಂದಾಗ, ಕರೆ ಮಾಡಿದಾತನ ಜಾತಿ- ಮತ-ಧರ್ಮ ಕೇಳುವುದಿಲ್ಲ. ಆತ ರೌಡಿಯೇ, ಉಗ್ರವಾದಿಯೇ, ಆತನಿಗೆ ಕ್ರಿಮಿನಲ್ ಹಿನ್ನೆಲೆಯಿದೆಯೇ ಎಂದು ಯೋಚಿಸುತ್ತ ಕೂರದೆ ನಮ್ಮ ಪ್ರಾಣ ಪಣಕ್ಕಿಟ್ಟು ಮತ್ತೊಬ್ಬರ ಉಳಿವಿಗಾಗಿ ನಾವು ಹೋರಾಡುವುದೇ ತಪ್ಪಾ? ಸ್ವಂತ ಕೆಲಸದ ಸ್ಥಳವಾದ, ಇನ್ನೊಬ್ಬರನ್ನು ಬದುಕಿಸುವ ಜಾಗವಾದ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗುವುದೆಂದರೆ ಮಹಿಳೆಯರು ಸುರಕ್ಷಿತವಾಗಿ ಎಲ್ಲಿ ಬದುಕಬೇಕು? ನಾವು ಕಷ್ಟಪಟ್ಟು ಓದುತ್ತಿರುವುದು ನಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಿಂಸೆ ಮತ್ತು ಅತ್ಯಾಚಾರವನ್ನು ಎದುರಿಸುವುದಕ್ಕಾ?‘ ಎಂದು ನೊಂದು ನುಡಿದ, ಸಮಸ್ತ ವೈದ್ಯರ ಪ್ರತಿನಿಧಿಯಂತೆ ತಮ್ಮ ಆತಂಕ ವ್ಯಕ್ತಪಡಿಸಿದ ಯುವವೈದ್ಯೆಯ ಮಾತು ನಿಜವಲ್ಲವೇ? ಸ್ತ್ರೀಯರ ವಿಚಾರದಲ್ಲಿ ವ್ಯಕ್ತಿಯನ್ನು, ಊರುಗಳನ್ನೇ ದಹಿಸಿದ ಉದಾಹರಣೆಗಳು ನಮ್ಮ ರಾಮಾಯಣ, ಮಹಾಭಾರತದಂಥ ಕೃತಿಗಳಲ್ಲಿ ದಾಖಲಾಗಿವೆ. ಹೀಗಿರುವಾಗ, ಮೇಣದಬತ್ತಿ ಉರಿಸಿ ಮೆರವಣಿಗೆ ಮಾಡುವ ಸಂಸ್ಕೃತಿಯಿಂದ ನಾವು ಏನು ಬದಲಾವಣೆ ತರಲು ಸಾಧ್ಯ? ಇಂಥ ಅಮಾನವೀಯ ಘಟನೆಗಳಿಗೆ ‘ಕಣ್ಣಿಗೆ ಕಣ್ಣು’ ಎಂಬಂಥ, ಹಮ್ಮುರಬಿ ಶಾಸನದಷ್ಟೇ ಕಠೋರವಾಗಿರುವ ಕ್ರಮಗಳು
ಜಾರಿಯಾಗಬೇಕು. ಆಗ ಮಾತ್ರವೇ ಸಮಾಜದಲ್ಲಿನ ರಾಕ್ಷಸ ಮನಸ್ಥಿತಿ ಬದಲಾದೀತು!

ಈ ಹಿಂದೆ ನಡೆದ ದಿಲ್ಲಿಯ ‘ನಿರ್ಭಯಾ’ ಅತ್ಯಾಚಾರ ಪ್ರಕರಣ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ್ದಲ್ಲದೆ, ಭಾರತೀಯ ಜನಸಾಮಾನ್ಯರು ಈ ಪ್ರಕರಣವನ್ನು ಖಂಡಿಸಿ, ಆಕ್ರೋಶದಿಂದ ಕೆರಳಿ ಬೀದಿಗಿಳಿದು ಪ್ರತಿಭಟಿಸುವಂತೆ ಮಾಡಿತ್ತು. ಡಿಸೆಂಬರ್ ೧೬ಕ್ಕೆ ನಿರ್ಭಯಾ ಘಟನೆ ನಡೆದು ೧೧ ವರ್ಷವಾದ ಹಿನ್ನೆಲೆ ಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಡಿಸಿಡಬ್ಲ್ಯೂ ಮುಖ್ಯಸ್ಥೆ ಭಾಗವಹಿಸಿ, ‘ದಿಲ್ಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು
ಹೆಚ್ಚುತ್ತಲೇ ಇವೆ. ಕ್ರೂರ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ’ ಎಂದರು.

೨೦೧೨ರ ಡಿಸೆಂಬರ್ ೧೬ರಂದು ದಕ್ಷಿಣ ದಿಲ್ಲಿಯ ಬಸ್ಸಿನೊಳಗೆ, ‘ನಿರ್ಭಯಾ’ ಎಂದು ಕರೆಯಲ್ಪಡುವ ೨೩ ವರ್ಷದ ಫಿಸಿಯೋಥೆರಪಿ ಇಂಟರ್ನ್ ಯುವತಿಯ ಮೇಲೆ ಆರು ಜನರು ಸೇರಿ ಕ್ರೂರ ಅತ್ಯಾಚಾರ ಮತ್ತು ಹಲ್ಲೆ ನಡೆಸಿದರಲ್ಲದೇ, ಚಲಿಸುವ ಬಸ್‌ನಿಂದ ಹೊರಗೆ ಆಕೆಯನ್ನು ಎಸೆದು ಹೋದರು. ತನಗಾದ ತೀವ್ರ ಗಾಯಗಳಿಂದಾಗಿ ಡಿಸೆಂಬರ್ ೨೯ರಂದು ಆಕೆ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು.
ಈ ಘಟನೆಯ ತರುವಾಯ, ದೇಶದ ಕಾನೂನಿನಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಆಗ್ರಹಿಸಿ ಜನರು ಬೀದಿಗೆ ಬಂದರು. ಆದರೆ ಆ ದುರಂತ ನಡೆದು ವರ್ಷಗಳ ನಂತರವೂ ನಾವು ಅದೇ ಸ್ಥಳದಲ್ಲಿ ನಿಂತಿದ್ದೇವೆ. ಮಹಿಳೆಯರ ಮೇಲಿನ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ಅಪರಾಽಗಳು ಭಯಪಡುವಂತೆ ಆಗುವವರೆಗೆ ಏನೂ ಬದಲಾಗುವುದಿಲ್ಲ. ಆದರೆ ಅಂಥ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದನ್ನು ಈ ವ್ಯವಸ್ಥೆ
ತಡೆಹಿಡಿಯುತ್ತದೆ, ಹಾಗಾಗಿ ಅತ್ಯಾಚಾರಿಗಳು ನಿರ್ದಾಕ್ಷಿಣ್ಯವಾಗಿ ಇಂಥ ಕೃತ್ಯಗಳನ್ನು ಮತ್ತೆ ಮತ್ತೆ ಎಸಗುತ್ತಾರೆ ಎಂಬುದಕ್ಕೆ ಕೋಲ್ಕೊತ್ತಾದ ಕರ್ತವ್ಯ ನಿರತ ಯುವವೈದ್ಯೆಯ ಮೇಲಾದ ಅತ್ಯಾಚಾರ ಪ್ರಕರಣವೇ ಸಾಕ್ಷಿ. ಇಂಥ ಅಮಾನವೀಯ ಘಟನೆಗಳು ನಡೆದಾಗ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ವಿಷಯದಲ್ಲಿ ಖಚಿತತೆ, ತ್ವರಿತತೆ ಬೇಕು ಮತ್ತು ಅಂಥ ವಿಷಯಗಳನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು.

ಪೊಲೀಸ್ ಬಲದ ಜತೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಂತ್ರಸ್ತರು ನ್ಯಾಯವನ್ನು ತ್ವರಿತವಾಗಿ ಮತ್ತು ವ್ಯವಸ್ಥಿತವಾಗಿ ಪಡೆಯುವಂತಾಗುವ ಭರವಸೆ ಯನ್ನು ಅವರಿಗೆ ನೀಡುವ ವ್ಯವಸ್ಥೆಯ ಅಗತ್ಯವಿದೆ. ದಿಲ್ಲಿಯ ‘ನಿರ್ಭಯಾ’ ಪ್ರಕರಣದ ವಿಚಾರಣೆ ಆರಂಭವಾದ ಕೆಲವೇ ದಿನಗಳಲ್ಲಿ, ಆರು ಮಂದಿ ಆರೋಪಿಗಳ ಪೈಕಿ ರಾಮ್ ಸಿಂಗ್ ಎಂಬಾತ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಅಪ್ರಾಪ್ತ ಆರೋಪಿಯೊಬ್ಬ ಸುಧಾರಣಾ ಗೃಹದಲ್ಲಿ ೩ ವರ್ಷ ಕಳೆದ ನಂತರ ೨೦೧೫ರಲ್ಲಿ ಬಿಡುಗಡೆಗೊಂಡ. ಉಳಿದ ನಾಲ್ವರಾದ ಮುಖೇಶ್ ಸಿಂಗ್ (೩೨), ಪವನ್ ಗುಪ್ತಾ (೨೫), ವಿನಯ್ ಶರ್ಮಾ (೨೬) ಮತ್ತು ಅಕ್ಷಯ್ ಕುಮಾರ್ ಸಿಂಗ್ (೩೧) ಶಿಕ್ಷೆಗೊಳಗಾದರು. ೨೦೨೦ರ ಮಾರ್ಚ್ ೨೦ರಂದು ಅವರನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸ ಲಾಯಿತು.

‘ನಿರ್ಭಯಾ ಘಟನೆಯ ನಂತರ, ಕೆಲವು ಬದಲಾವಣೆಗಳನ್ನು ಮಾಡಿ ಕಠಿಣ ಕಾನೂನನ್ನು ಪರಿಚಯಿಸಲಾಯಿತು. ಅತ್ಯಾಚಾರದ ಸಂತ್ರಸ್ತೆಯ ದೂರನ್ನು ಪೊಲೀಸರು ಸ್ವೀಕರಿಸದಿದ್ದರೆ, ಅವರ ವಿರುದ್ಧವೂ ಎಫ್ ಐಆರ್ ಅನ್ನು ದಾಖಲಿಸಬಹುದು. ಇಷ್ಟಾಗಿಯೂ ೨೦೨೨ರಲ್ಲಿ ದಿಲ್ಲಿಯಲ್ಲಿಯೇ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಾಗಿವೆ; ೨೦೨೧ರಲ್ಲಿ ೧೩,೯೮೨ರಷ್ಟಿದ್ದುದು ೧೪,೧೫೮ ಪ್ರಕರಣಗಳಿಗೆ (ಅಂದರೆ ೧.೨೫ ಪ್ರತಿಶತದಷ್ಟು) ಹೆಚಾಗಿದೆ’ ಎಂದು ಎನ್‌ಸಿಆರ್‌ಬಿ ಡೇಟಾ ತಿಳಿಸಿದೆ.

ಶಾಲೆಗಳ ಪಠ್ಯಕ್ರಮದಲ್ಲಿ ಅಂಥ ವಿಷಯಗಳನ್ನು ಪರಿಚಯಿಸಬೇಕು. ಹುಡುಗರು ಮಹಿಳೆಯರಲ್ಲಿ ಹೇಗೆ ಸುರಕ್ಷಿತ ಭಾವನೆ ಮೂಡಿಸಬೇಕು ಮತ್ತು ಅವರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಈ ಪಠ್ಯಕ್ರಮದಲ್ಲಿ ಕಲಿಸುವುದರಿಂದ ಇಂದಿನ ಯುವಕರಲ್ಲಿ, ಸಮಾಜದ ವಿಚಾರಧಾರೆಯಲ್ಲಿ ಸ್ವಲ್ಪವಾದರೂ ಬದಲಾವಣೆ ತರಬಹುದು. ಇವೆಲ್ಲದರ ನಡುವೆ, ಇದೇ ಆಗಸ್ಟ್ ೯ರಂದು, ಕೋಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ
ವೈದ್ಯೆಯೊಬ್ಬರು ಗಾಯಗೊಂಡವರಿಗೆ ಚಿಕಿತ್ಸೆ ನೀಡುವಾಗ ಭೀಕರ ಅತ್ಯಾಚಾರಕ್ಕೊಳಗಾದ ಘಟನೆ ನಡೆದಿದೆ. ೩೬ ಗಂಟೆಗಳ ಪಾಳಿಯಲ್ಲಿದ್ದ ಆ ವೈದ್ಯೆ ನಿಗದಿತ ಡ್ಯೂಟಿ ರೂಮ್ ಇಲ್ಲದ ಕಾರಣ ವಿಶ್ರಾಂತಿ ಪಡೆಯಲು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಸೆಮಿನಾರ್ ಕೊಠಡಿಗೆ ತೆರಳಿದ್ದರು.

ಆಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ನಂತರ ಆಕೆ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ. ಈ ಪ್ರಕರಣದಲ್ಲಿ ಪ್ರಮುಖ ಶಂಕಿತ ಸಂಜೋಯ್ ರಾಯ್ ಎಂಬಾತನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆತ ಕೋಲ್ಕತ್ತಾ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವಿಚಾರ, ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ನೆಲೆಸಿದ್ದು ಎಲ್ಲಾ ಕಡೆಗೂ ಓಡಾಡಿಕೊಂಡಿದ್ದ ಎಂಬ ಮಾಹಿತಿ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ವೈದ್ಯೆಯನ್ನು ಕೊಲೆ ಮಾಡಿರುವ ಕೋಣೆಯೊಳಗೆ ಸಂಜೋಯ್ ರಾಯ್ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಆತನನ್ನು ಬಂಧಿಸ ಲಾಗಿದೆ. ಆಕೆಯ ಶವದ ಪಕ್ಕದಲ್ಲಿ ಬ್ಲೂಟೂತ್ ಹೆಡ್‌ಸೆಟ್ ಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಅದು ಆತನ ಕುತ್ತಿಗೆಯಲ್ಲಿರುವುದು ಕಂಡುಬಂದಿದೆ. ಇದು ಆತನ ಫೋನ್‌ನೊಂದಿಗೆ ಕನೆಕ್ಟ್ ಆಗಿರುವುದು ಕೂಡ ಗೊತ್ತಾಗಿದೆ. ಈ ಪ್ರಕರಣದಲ್ಲಿ ಅಪರಾಧಿಗಳನ್ನು ರಕ್ಷಿಸಲು ಪೊಲೀಸರು
ಯತ್ನಿಸುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಆರೋಪಿಸಿದೆ. ಪುಂಡರ ಗುಂಪೊಂದು ಆಗಸ್ಟ್ ೧೫ರಂದು ಆಸ್ಪತ್ರೆಯ ಮೇಲೆ ದಾಳಿ ಮಾಡಿ, ತುರ್ತುಚಿಕಿತ್ಸಾ ವಿಭಾಗವನ್ನು ಧ್ವಂಸಗೊಳಿಸಿ, ಸಾಕ್ಷ್ಯವನ್ನು ನಾಶಪಡಿಸುವ ಮತ್ತೊಂದು ಪ್ರಯತ್ನ ಮಾಡಿದ್ದು, ಇದು ರಾಜ್ಯದ ಆಡಳಿತದ ಸ್ಪಷ್ಟ  ವೈಫಲ್ಯ ಎಂದು ಅಲ್ಲಿನ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ಮಧ್ಯೆ, ೨೦೧೨ರ ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ‘ನಿರ್ಭಯಾ’ಳ ತಾಯಿ ಆಶಾದೇವಿ ಅವರು ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಆಗ್ರಹಿಸಿ, ‘ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಟ್ರೇನಿ ವೈದ್ಯೆಯ ಮೇಲಿನ ಕ್ರೂರ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಾಗ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ದೀದಿ ವಿಫಲರಾಗಿದ್ದಾರೆ. ದಿಲ್ಲಿ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಮಮತಾ ಬ್ಯಾನರ್ಜಿ ಹಿಂದೆ ರ‍್ಯಾಲಿ ನಡೆಸಿದ್ದರು. ಈಗ, ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಗ್ಯ ಮತ್ತು ಗೃಹಖಾತೆಗಳೆರಡನ್ನೂ ಮಮತಾ ತಮ್ಮ ಅಧೀನದಲ್ಲೇ ಇಟ್ಟುಕೊಂಡು, ತಮ್ಮ ವಿರುದ್ಧವೇ ಪ್ರತಿಭಟನೆ ನಡೆಸುತ್ತಿರುವುದು ಮಾತ್ರ ಪ್ರಸ್ತುತ ವ್ಯವಸ್ಥೆಯ ವಿಡಂಬನೆ. ಮೇಲಾಗಿ ಮಮತಾಗೆ
ನಾಚಿಕೆಯಾಗಬೇಕು’ ಎಂದಿದ್ದಾರೆ.

ಕೋಲ್ಕತ್ತಾದ ಘೋರಕೃತ್ಯವು ದೇಶಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿ, ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿರುವುದರ ನಡುವೆಯೇ, ಬೆಂಗಳೂರಿನಲ್ಲೂ ಮೊನ್ನೆ ರಾತ್ರಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ; ಇದು ಕಾನೂನು-ಸುವ್ಯವಸ್ಥೆ ಹದಗೆಟ್ಟಿರುವುದರ ಮತ್ತು ರೌಡಿ-ಗೂಂಡಾಗಳಿಗೆ, ಅತ್ಯಾಚಾರಿಗಳಿಗೆ ಆಡಳಿತದ ಭಯವಿಲ್ಲದಿರುವುದರ, ಕಾನೂನಿನ ಬಿಸಿ ತಾಗದಿರುವುದರ ದ್ಯೋತಕ. ಸರಕಾರವು ಇದಕ್ಕೆ ತಲೆ ತಗ್ಗಿಸ ಬೇಕಿದೆ. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ಯರಾಜ್ಯದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿ ರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅತ್ಯಾಚಾರ ಪ್ರಕರಣದ ಸಂಬಂಧ ಸ್ಥಳೀಯ
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯ ಸುಳಿವು ಪತ್ತೆಯಾಗಿದೆ ಮತ್ತು ಆತನ ಬಂಧನಕ್ಕೆ ೫ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಥ ದುರ್ಘಟನೆಗಳು ನಡೆಯುವ ಮೊದಲೇ ಸಾರ್ವಜನಿಕರ ಸುರಕ್ಷತೆಯ ವಿಚಾರದಲ್ಲಿ ಎಚ್ಚರಿಕೆ ವಹಿಸಿದರೆ, ಜನರಿಗೆ ಕಾನೂನು ವ್ಯವಸ್ಥೆ ಮತ್ತು ಸರಕಾರದ ಮೇಲೆ ವಿಶ್ವಾಸ ಬಂದೀತು. ಆದರೆ, ಜನರ ಸೇವೆಗೆ ಬದ್ಧವಾಗಿರಬೇಕಾದ ಸರಕಾರವು ತನ್ನನ್ನೇ ಕಾಪಾಡಿಕೊಳ್ಳಲು ಹೆಣಗುತ್ತಿರುವಾಗ, ಜನರನ್ನು ಹೇಗೆ ಕಾಪಾಡಬಲ್ಲದು ಎಂದು ರಾಜ್ಯದ ಜನರು ಕುಹಕವಾಡುತ್ತಿದ್ದಾರೆ.