Thursday, 12th December 2024

ಶ್ವಾನ ಸಂಸ್ಕೃತಿ

ಅಭಿಮತ

ಪ್ರಕಾಶ ಹೆಗಡೆ

ಇದೆಂತಹ ವಿಷಯದ ಆಯ್ಕೆಯೆಂದು ಮೂಗಿನ ಮೇಲೆ ಬೆರಳಿಡಬೇಕೆನಿಸಬಹುದು. ಆದರೆ ಗೌರವಾನ್ವಿತ ಸಮಾಜದಲ್ಲಿ ಇದೆಷ್ಟು ಗಂಭೀರವಾದುದೆಂದು ಬಹಳಷ್ಟು ಸಜ್ಜನರು ಒಕ್ಕೊರಲಿನಿಂದ ಒಪ್ಪುವಂತಹ ಗಹನ ವಿಷಯವಿದೆಯೆಂದು ನೀವು ಒಪ್ಪುವಿರಿ. ಈಗೆರಡು ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ಬೀದಿನಾಯಿಗಳ ಕಡಿತಕ್ಕೆ
ಒಳಗಾದ ಅಮಾಯಕ ನಾಗರಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದರ ಬಗ್ಗೆ ವರದಿಯಾಗಿದೆ. ನಮ್ಮ ರಾಜ್ಯವೊಂದರ ಈ ವರ್ಷ ೨.೩೫ ಲಕ್ಷ ಜನರಿಗೆ ನಾಯಿಕಡಿತವಾಗಿದೆ. ಇದು ಕಳೆದ ವರ್ಷಕ್ಕಿಂತ ೨೮% ಹೆಚ್ಚು. ಇವು ಬಹಿರಂಗಗೊಂಡ ಪ್ರಕರಣಗಳಷ್ಟೇ.

ಇದೊಂದು ಬರ್ಫಿನ ಶಿಖರಮಾತ್ರ. ಹಿಂದಿನ ಕೆಲವು ವರ್ಷಗಳಲ್ಲಿ ಕಡಿತದ ಸಂಖ್ಯೆಯಲ್ಲಿ ಹೆಚ್ಚುವರಿ ಕಾಣಸಿಗುತ್ತಿರುವುದು ನಮ್ಮಲ್ಲಿರುವ ವ್ಯವಸ್ಥೆಯ ವೈಫಲ್ಯಕ್ಕೆ
ದರ್ಪಣವಾಗಿದೆ. ಬೀದಿನಾಯಿಗಳ ಉಪಟಳ ಇಷ್ಟಕ್ಕೆ ಸೀಮಿತವಾಗಿಲ್ಲ. ಎಂದರಲ್ಲಿ ಹೊಲಸು ಮಾಡುವುದು, ನಾಯಿಗಳ ಗುಂಪು ಘರ್ಷಣೆಗಳಿಂದ ಉಂಟಾಗುವ ಭಯಂಕರ ಗಲಭೆಯ ಪರಿಣಾಮದಿಂದ ರಾತ್ತಿಯ ವಿಶ್ರಾಂತಿಗೆ ಭಂಗ, ದಾರಿ ಹೋಕರಿಗೆ ಬೀದಿನಾಯಿಗಳಿಂದಾಗುವ ಭಯ ಹಾಗೂ ಆತಂಕದಿಂದಾಗುವ
ಮನೋಭಾವ ಮತ್ತು ಅಪಘಾತಗಳು, ನಾಯಿಗಳಿಂದಾಗುವ ನೈರ್ಮಲ್ಯದ ವೈಪರೀತ್ಯಗಳು, ಹರಡುವ ರೋಗಗಳು ಇತ್ಯಾದಿ.

ವಾರ್ಷಿಕವಾಗಿ ನಮ್ಮ ದೇಶದಲ್ಲಿ ಸುಮಾರು ೨೦೦೦೦ ಜನರು ನಾಯಿ ಕಡಿತ ಅಥವಾ ಸಂಬಂಧಿಸಿದ ಅಪಘಾತಗಳಿಂದ ಸಾವಿಗೀಡಾಗುತ್ತಾರೆ. ೨,೦೦೦ ಕೋಟಿ ರು.ಗಳ ಕಂಪನಿಯಾದ ವಾಘ್ ಬಕ್ರಿ ಟೀ ಸಂಸ್ಥಾಪಕ ಪರಾಗ್ ದೇ ಸಾಯಿ ಅವರದ್ದು ಇತ್ತೀಚಿನ ಎಲ್ಲರ ಗಮನಸೆಳೆದಿರುವ ಪ್ರಕರಣ. ದೇಸಾಯಿ, (೪೯ ವರ್ಷ) ಬೀದಿ ನಾಯಿಗಳಿಂದ ಓಡಿಹೋಗುವಾಗ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಜಗತ್ತಿನ ಅತಿ ಹೆಚ್ಚು ನಾಯಿಗಳ ಸಂಖ್ಯೆಯಿರುವ ದೇಶದಲ್ಲಿದ್ದುದೇ
ದೇಸಾಯಿಯವರ ದೌರ್ಭಾಗ್ಯ. ನಾಚಿಗೆಗೀಡಿನ ಸಂಗತಿಯೆಂದರೆ ಪ್ರಪಂಚದ ಯಾವುದೇ ದೇಶದಲ್ಲೂ, (ಹಿಂದುಳಿದ ದೇಶಗಳನ್ನೂ ಒಳಗೊಂಡಂತೆ) ಈ ರೀತಿಯ ನಾಯಿಗಳಿಂದಾಗುವ ಪ್ರಕರಣಗಳು ಈ ಮಟ್ಟಿಗಿಲ್ಲ.

ನಮ್ಮ ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಬೆಳಗಿನ ವಾತಾವರಣನ್ನು ಸ್ವಲ್ಪ ಅವಲೋಕಿಸೋಣ. ಅಸಂಖ್ಯಾತ ಬೀದಿನಾಯಿಗಳ ಉಪಟಳ ಒಂದೆಡೆಯಾದರೆ, ಶ್ವಾನಗಳೊಡೆಯರ ಜತೆಗಿರುವ ನಾಯಿಗಳ ಸ್ವಾತಂತ್ರ ಸಿಕ್ಕಿತೆಂಬ ಮಸ್ಕರಿ ಇನ್ನೊಂದೆಡೆ. ಮಗದೆಡೆ ಬೀದಿನಾಯಿಗಳಿಗೆ ತಿನಿಸು ನೀಡುತ್ತಿರುವ ಬೇಜವಾಬ್ದಾರಿ ಸಾರ್ವಜನಿಕ ಹುಸಿ ನಾಯಿ ಪ್ರೇಮಿಗಳು. ನನ್ನ ಪ್ರಕಾರ ಕಬ್ಬನ್ ಉದ್ಯಾನವನದಲ್ಲಿ ವಿಹರಿಸಲು ನೀವು ಬೇಜವಾಬ್ದಾರಿ ಶ್ವಾನಪ್ರಿಯರಾಗಿರಬೇಕು.

ಈ ಸಮಸ್ಯೆಯನ್ನು ನೈತಿಕವಾಗಿ ಮತ್ತು ಮಾನವೀಯವಾಗಿ ಹೇಗೆ ನಿಭಾಯಿಸುವುದೆನ್ನುವುದು ದೊಡ್ಡ ಪ್ರಶ್ನೆ. ಅಮಾನವೀಯ ನಿರ್ಮೂಲನೆ ಅಥವಾ ಭೂಮಿಯ ಮೇಲಿನ ಅತ್ಯಂತ ಪ್ರೀತಿಯ ಪ್ರಾಣಿಯನ್ನು ಕೊಲ್ಲದೆ ಬೀದಿನಾಯಿಗಳ ಜನಸಂಖ್ಯೆಯನ್ನು ನಾವು ಹೇಗೆ ಕಡಿಮೆಮಾಡಬಹುದು ಮತ್ತು ನಿರ್ಮೂಲನೆ ಮಾಡಬಹುದು? ಹಲವು ಸರಿಯಾದ ವಿಧಾನಗಳೆಂದರೆ – ವ್ಯಾಕ್ಸಿನೇಷನ್‌ಗಳು, ಕ್ರಿಮಿನಾಶಕಗಳು, ದತ್ತು ಪಡೆಯುವ ಕಾರ್ಯವಿಧಾನಗಳು, ಕಟ್ಟುನಿಟ್ಟಾದ
ಸಾಕುಪ್ರಾಣಿಗಳ ಮಾಲೀಕತ್ವ ಮತ್ತು ಸಾರ್ವಜನಿಕರಿಂದ ಬೀದಿನಾಯಿಗಳ ಅನೌಪಚಾರಿಕ ಪ್ರೀತಿಗೆ ಕಡಿವಾಣ ಇತ್ಯಾದಿ. ನಾಯಿಗಳು ಕಚ್ಚುವುದರಿಂದ ಜನರು ತಮ್ಮನ್ನು ಹೇಗೆ ತಡೆಯಬಹುದು ಎಂಬ ಶಿಕ್ಷಣ ಅಭಿಯಾನವೂ ನಮಗೆ ಬೇಕು.

ಬೀದಿನಾಯಿಗಳನ್ನು ಪ್ರೀತಿಸುವ ಜನರಿಗೆ ನಾವು ಅವು ಸಮಾಜದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳ ಬಗ್ಗೆ ಹೇಳಬೇಕಾಗಿದೆ. ಪ್ರಾಣಿಗಳು ಹೇಗಾದರೂ ಆಹಾರವನ್ನು ಪಡೆಯಲು ಸಮರ್ಥವಾಗಿರುತ್ತವೆ. ಯಾರೂ ಒಲುಮೆಯಿಂದ ಆಹಾರ ನೀಡುವ ಅವಶ್ಯಕತೆಯಿಲ್ಲ. ಬೀದಿ ನಾಯಿಗಳು ರೋಗಗಳು, ಗಾಯಗಳು, ರಸ್ತೆ ಅಪಘಾತಗಳು, ಸೋಂಕುಗಳು, ಮತ್ತು ಬೀದಿಯಲ್ಲಿ ವಾಸಿಸುವುದರಿಂದ ಬರುವ ಎಲ್ಲ ರೀತಿಯ ತೊಂದರೆಗಳಿಗೆ ಮೂಲ ಕಾರಣೀಕೃತಗಳಾಗಿರುತ್ತವೆ. ಲಕ್ಷಾಂತರ ಬೀದಿನಾಯಿಗಳನ್ನು ಅಲೆದಾಡಲು ಬಿಡುವುದು ಪ್ರಾಣಿ ಕಲ್ಯಾಣವಲ್ಲ. ಆಹಾರ ನೀಡುವುದರಿಂದ ನಿಮ್ಮ ಗಿಲ್ಟನ್ನು ಶಮನಗೊಳಿಸಬಹುದು, ಆದರೆ ಈ ಪ್ರಾಣಿಗಳು ಯಾವ ರೀತಿಯ ಜೀವನವನ್ನು ಹೊಂದಿವೆ ಎಂಬುದರ ಬಗ್ಗೆಯೂ ಅಂತಹವರು ಕಾಳಜಿ ವಹಿಸಬೇಕಲ್ಲವೇ? ಈ ಮಧ್ಯೆ, ನಮ್ಮ ಸಾರ್ವಜನಿಕ ಸ್ಥಳಗಳಲ್ಲಿ ನಾವು ಹೇಗೆ ಗಂಭೀರ ಅಪಾಯಗಳನ್ನು ಸೃಷ್ಟಿಸಿದ್ದೇವೆ ಎಂಬುದರ ಬಗೆಗೆ ಚಿಂತನೆಯಿರಬೇಕು.

೦೦